-ಕೆ ಎನ್ ಲಾವಣ್ಯ ಪ್ರಭಾ
ನಡೆದುಹೋದವಳು
ಚಳಿಯೋ ಸೆಕೆಯೋ ಹಗಲೋ ಇರುಳೋ
ನಿದ್ದೆಯೋ ಕನಸೋ ಎಚ್ಚರವೋ
ಗೊತ್ತಾಗದಷ್ಟು ಭ್ರಾಮಕ ಸ್ಥಿತಿಯಲ್ಲೇ
ಎದ್ದು ನಡೆದಿದ್ದಾಳೆ ಬುದ್ಧನಂತೆ.
ಹೊರಗೆ
ಅಮಾವಾಸ್ಯೆಯ ಕತ್ತಲೋ
ಹುಣ್ಣಿಮೆಯ ಬೆಳದಿಂಗಳೋ ತಿಳಿಯದೆ
ಹೆಜ್ಜೆ ಹಾಕುವ ದಾರಿ ಸರಿದಂತೆಲ್ಲಾ
ಬೆಳಕಾಯಿತೋ ಬಿಸಿಲಾಯಿತೋ
ಸಂಜೆಯ ನೆರಳುಗಳಾಡಿದವೋ
ಊಹೂಂ....
ಏನೊಂದೂ ಅರಿಯದ ಅರೆಗಣ್ಣಲ್ಲಿ
ಏನೊಂದೂ ಕಾಣದ ನಿರ್ಮಲ
ಖಾಲಿ ಆಕಾಶ ಒಮ್ಮೆ ನೀಲಿಯಾಗಿ
ಮತ್ತೊಮ್ಮೆ ಕಪ್ಪಾಗಿ ಮಗದೊಮ್ಮೆ
ಕೆಂಪಾಗಿ... ಬದಲಾಗುತ್ತಿರುವ
ಬಣ್ಣದಾವರಣದಲ್ಲಿ
ಯಾರೋ ಕಂಡಂತೆ ನಕ್ಕಂತೆ ನಿಂತಂತೆ
ಸೋಕಿಯೂ ಸೋಕದೆ ಸಾಗಿ ಹೋದಂತೆ
ಅಸ್ಪಷ್ಟ ಕಲರವಗಳನ್ನಲ್ಲೇ ಬಿಟ್ಟು
ಯಾರು ಯಾರೋ ಸಾಗಿ ಹೋದ
ದಾರಿಯಲ್ಲಿ ಈಗ ಇವಳೊಬ್ಬಳು
ಸುಮ್ಮನೆ ನಿದ್ದೆಯಲ್ಲಿ ಹೆಜ್ಜೆ
ಹಾಕುವಂತೆ ನಡೆಯುತ್ತಿದ್ದಾಳೆ
ಎಲ್ಲವೂ ನಕಲಿಯಿರುವ
ಅಸಲಿ ಲೋಕದಲ್ಲಿ ,
ಮುಖವಾಡಗಳ ಸಂತೆಯಲ್ಲಿ…
ಖರೇ ಹುಚ್ಚಳು , ಖಾಲಿ ಹೃದಯದವಳು
ಅಧ್ಯಾತ್ಮ ಸಿದ್ಧಿಸಿದವಳು, ಪ್ರೇಮ ವಂಚಿತೆ,
ನಿಜಮುಖಕ್ಕೆ ಕಾತರಿಸುವವಳು,
ಥೇಟ್ ವಿರಾಗಿಣಿಯಂಥವಳು ,
ಛೇ! ಆಕೆಗಿರಲಾರದು ಎಚ್ಚರ
ನಿದ್ದೆಯಲ್ಲೋ ಕನಸಿನಲ್ಲೋ
ಹೀಗೆ ನಡೆಯುತ್ತಿದ್ದಾಳಂತೆ
ತನ್ನವರನ್ನೆಲ್ಲಾ ಬಿಟ್ಟು
ಯಾಕೋ ಏನೋ ಯಾರಿಗೆ ಗೊತ್ತು?
ಯಾರ ಯಾವ ಚಾಟಿಯೇಟಿಗೆ ಈಕೆ
ಗುರಿಯಾದದ್ದೋ ಅಥವಾ ಗುರಿ
ಮಾಡಿಕೊಂಡದ್ದೋ… ?!
ಹೀಗೆಲ್ಲಾ ಅಂತೆಕಂತೆ ಪುರಾಣ ,
ಗುಸುಗುಸು ಗಾಸಿಪ್ ಗೊಣಗನ್ನು
ಕಂಡೂ ಕಾಣದಂತೆ
ಕೇಳಿಸಿಯೂ ಕೇಳಿಸದಂತೆ
ನಸುನಕ್ಕು ನಡೆಯುತ್ತಿದ್ದಾಳೆ
ಅನಂತದೆಡೆಗೆ ಅಸೀಮ ದೃಷ್ಟಿನೆಟ್ಟು.
ಅಲ್ಲಿ ಮಿತಿಗಳಿಲ್ಲ , ಮೋಸವೂ ಇಲ್ಲ,
ಬಂಧನವೂ ಇಲ್ಲ ಬಿಡುಗಡೆಯೂ ಇಲ್ಲ ,
ರಾಗಧ್ವೇಷಗಳಿಲ್ಲ ,
ಯಾವುದೂ ಇಲ್ಲದೆಡೆಗೆ
ಈಕೆಯೊಬ್ಬಳೇ ನಿರಾಳ
ಸಾಗಿಹೋಗುತ್ತಿರುವ ಅಥವಾ
ಇರುವುದೆಲ್ಲವ ಬಿಟ್ಟು ಇರದಿದರೆಡೆಗೆ
ತುಡಿಯುತ್ತಿರುವ ಕಾರ್ಯಕಾರಣ
ಅವಳಿಗಷ್ಟೇ ತಿಳಿದ ಅಗೋಚರ ಸತ್ಯ
ಹಿಂದೊಮ್ಮೆ ಹಾಗೆ ಹೋದ ಸಿದ್ಧಾರ್ಥ
ಮರಳಿ ಬಂದದ್ದಿದೆ ಬುದ್ಧನಾಗಿ
ಈಕೆಯೂ… ?






0 Comments