ಅಬ್ದುಲ್ ಕಲಾಂರ ಮಲ್ಲಿಗೆ ಕವಿತೆ ಹಾಗೂ ಬಿಸ್ಮಿಲ್ಲಾಖಾನ್ ಕೊನೆಯ ಕಛೇರಿ!!

ಮೂಲ: ಸೋಮಘೋಷ್

ಕನ್ನಡಕ್ಕೆ: ಚಿತ್ರಾ ಸಂತೋಷ್

ಖ್ಯಾತ ಗಾಯಕಿ ಪದ್ಮಶ್ರೀ ಸೋಮ ಘೋಷ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮಾನಸ ಪುತ್ರಿ. ಇವರು ಅಬ್ದುಲ್ ಕಲಾಂ ಅವರ ಸಂಗೀತಪ್ರೀತಿಯ ಬಗ್ಗೆ 2015ರಲ್ಲಿ ‘ಡಿಎನ್ಎ ಇಂಡಿಯಾ’ ಪತ್ರಿಕೆಗೆ ಬರೆದ ಲೇಖನದ ಸಾರವನ್ನು ಅನುವಾದಿಸಿದ್ದೇನೆ.

ಕಲಾಂ ಅವರು ಸಂಗೀತಪ್ರಿಯರು, ಡಿಆರ್ ಡಿಒ ದಲ್ಲಿರುವಾಗ ಅವರು ವೀಣೆ ನುಡಿಸುತ್ತಿದ್ದರು ಎಂಬುದೆಲ್ಲಾ ಕೇಳಿರುವ ವಿಷಯವೇ. ಕಲಾಂ ಅವರ ಸಂಗೀತ, ಕವಿ ಹೃದಯ ಜೊತೆಗೆ ಅವರಿಗೆ ಸಂಗೀತಗಾರರ ಬಗ್ಗೆ ಇದ್ದ ಅಪಾರ ಅಭಿಮಾನಕ್ಕೆ ಈ ಲೇಖನ ಸಾಕ್ಷಿಯಾಗಿದೆ.

ಸೋಮ ಘೋಷ್ ಅವರು ದೇಶದ ಸಂಸತ್ತಿನಲ್ಲಿ ಹಾಡಿದ ಪ್ರಪ್ರಥಮ ಗಾಯಕಿಯೂ ಹೌದಂತೆ. ಘೋಷ್ ಅವರ ಮಾತಿನಲ್ಲೇ ಇದನ್ನು ಓದಿಕೊಳ್ಳಿ;

ಅಂದು ಎಪಿಜೆ ಅಬ್ದುಲ್ ಕಲಾಂ ಅವರ ಪ್ರಮಾಣ ವಚನ. ಸಮಾರಂಭದಲ್ಲಿ ನನ್ನ ಕಛೇರಿ ಇತ್ತು. ಕಛೇರಿ ಬಹಳ ಚೆನ್ನಾಗಿ ನಡೆಯಿತು. ಮರುದಿನ ಬೆಳಗ್ಗೆ ರಾಷ್ಟ್ರಪತಿಗಳ ಜೊತೆಗೆ ನನಗೆ ಮತ್ತು ಬಾಬಾ (ಬಿಸ್ಮಿಲ್ಲಾ ಖಾನ್) ಅವರಿಗೆ ಬೆಳಗ್ಗೆ ತಿಂಡಿಗೆ ಬರಲು ರಾಷ್ಟ್ರಪತಿಗಳ ಆಹ್ವಾನವಿತ್ತು. ಆದರೆ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಬಾಬಾ ಬರಲಿಲ್ಲ. ನಾನೊಬ್ಬಳೇ ಹೋಗಬೇಕಾಯಿತು.

ರಾಷ್ಟ್ರಪತಿ ಭವನದೊಳಗೆ ಅದು ನನ್ನ ಮೊದಲ ಭೇಟಿ. ಒಂದು ದೇಗುಲದೊಳಗೆ ಪ್ರವೇಶ ಮಾಡಿದಂಥ ಅನುಭವವಾಯಿತು. ಹೋಗುತ್ತಿದ್ದಂತೆ ಕಲಾಂ ಅವರು ನನ್ನ ಕೈಕುಲುಕಿ ಪ್ರೀತಿಯಿಂದ ಸ್ವಾಗತಿಸಿದರು, ನಾನವರ ಪಾದ ಮುಟ್ಟಿ ನಮಸ್ಕರಿಸಿದೆ.

ನನ್ನ ಅಮ್ಮ ಜೊತೆಗಿದ್ದರು. ಕಲಾಂ ಅವರು ಅಮ್ಮನ ನೋಡಿ ಹೇಳಿದರು: ನೀವು ಇಂಥ ಮಗಳನ್ನು ಪಡೆಯಲು ಬಹಳ ಅದೃಷ್ಟ ಮಾಡಿದ್ದೀರಿ ಎಂದರು! ನಂತರ ನನ್ನ ಕಡೆ ತಿರುಗಿದ ಕಲಾಂ; ‘ನನಗೆ ಎರಡು ಕನಸುಗಳಿವೆ. ನೀವದನ್ನು ಈಡೇರಿಸಬಲ್ಲೀರಾ?’ ಅದಕ್ಕೆ ನಾನು ‘ನನ್ನಿಂದ ಸಾಧ್ಯವಾಗುವಂಥದ್ದಾರೆ ಈಡೇರಿಸಬಲ್ಲೆ’ ಎಂದೆ! ಕೂಡಲೆ ಕಲಾಂ ಅವರು ನನ್ನ ಕೈಹಿಡಿದು ಮೊಘಲ್ ಉದ್ಯಾನವನಕ್ಕೆ ಕರೆದೊಯ್ದರು. ಸುತ್ತಮುತ್ತ ಇದ್ದ ಕಾವಲುಗಾರರು, ಸಹಾಯಕರು ಎಲ್ಲರಿಗೂ ಯಾರೂ ಜೊತೆಗೆ ಬರುವುದು ಬೇಡವೆಂದು ಹೇಳಿ ಆ ಉದ್ಯಾನವನದಲ್ಲಿ ಹೂವು ಬಿಟ್ಟ ಮಲ್ಲಿಗೆ ಬಳ್ಳಿಗಳತ್ತ ನಮ್ಮನ್ನು ಕರೆದೊಯ್ದರು.

ಅಲ್ಲಿ ಹೋದ ಕಲಾಂ ಹೇಳತೊಡಗಿದರು; ‘ಈ ಮಲ್ಲಿಗೆ ಹೂವುಗಳ ನೋಡಿ ನಾನು Whispers of Jasmine ಎಂಬ ಕವನ ಬರೆದಿದ್ದೇನೆ. ಇದು ನನ್ನ ಮೆಚ್ಚಿನ ಕವಿತೆ. ನೀವಿದನ್ನು ಹಾಡಲೇಬೇಕು. ಅರಳಿನಿಂತಿರುವ ಈ ಮಲ್ಲಿಗೆ ಪುಷ್ಪಗಳನ್ನು ನೋಡಿದಾಗ ನನಗನಿಸುತ್ತದೆ; ಈ ಸುಂದರವಾದ ಮಲ್ಲಿಗೆ ಹೂವುಗಳು ಅವುಗಳ ಅಮ್ಮನ ಬಳಿ (ಬಳ್ಳಿ, ಮಲ್ಲಿಗೆ ಗಿಡ) ಕೇಳಬಹುದು; ಅಮ್ಮಾ ನಾವೇಕೆ ಹುಟ್ಟಿದ್ದೇವೆ ಎಂದು.

ಆಗ ಅಮ್ಮನ ಉತ್ತರ ಹೀಗಿರಬಹುದು; ಮಕ್ಕಳೇ ನೀವು ಹುಟ್ಟಿರುವುದೇ ಈ ಜಗತ್ತನ್ನು ಚಂದ ಕಾಣಿಸಲು, ನಿಮ್ಮ ಘಮ್ಮೆನ್ನುವ ಸುವಾಸನೆಯ ಸವಿ ಈ ಜಗತ್ತಿನಲ್ಲಿರುವ ಹಕ್ಕಿಗಳು ಹಾಡುವಂತೆ ಪ್ರೇರೇಪಿಸಬಹುದು. ಹಕ್ಕಿಗಳ ನಿನಾದಿಂದ ಈ ಜಗತ್ತು ಸುಂದರವಾಗಬಹುದು, ಇಲ್ಲದಿದ್ದರೆ ಈ ಭೂಮಿ ಮಾನವೀಯತೆ ಇಲ್ಲದೆ ಬರಡಾಗಬಹುದು. ನೀವು ಒಂದೇ ದಿನ ಬದುಕಿದರೂ ಇತರಿಗಾಗಿ ಬದುಕಿ’ ಎನ್ನುವ ಸಂದೇಶವನ್ನು ಆ ಬಳ್ಳಿ ಕೊಡುತ್ತಿರಬಹುದೇನೋ…’ ಎಂದು ಹೇಳಿದರು.

ನಾನು ಕಲಾಂ ಕವಿಮಾತುಗಳನ್ನು ಕೇಳುತ್ತಲೇ ಬೆರಗಾಗಿ ನಿಂತಿದ್ದೆ. ಮತ್ತೆ ಮುಂದುವರೆಸಿದರು; ‘ನನ್ನ ಕವಿತೆಯನ್ನು ನೀವು ಹಾಡುವುದು ನನ್ನ ಮೊದಲ ಕನಸು, ಇನ್ನೊಂದು ಕನಸು ಏನು ಗೊತ್ತೇ? ಈ ಸುಂದರವಾದ ಮೊಘಲ್ ಉದ್ಯಾನವನದಲ್ಲಿ ಬೆಳದಿಂಗಳ ರಾತ್ರಿಯಲ್ಲಿ ನೀವು ಮತ್ತು ಬಾಬಾ ಅವರ ಯುಗಳಗೀತೆ ನಾನು ಕೇಳಬೇಕು ಇದು ನನ್ನ ಎರಡನೆಯ ಕನಸು’ ಎಂದು ಹೇಳಿದರು ಕಲಾಂ.

ರಾಷ್ಟ್ರಪತಿಗಳು ಈ ರೀತಿ ಕವಿಯಾಗಿ, ಸಂಗೀತ ಆರಾಧಕನಂತೆ ಮಾತಾಡುವುದನ್ನು ಗಮನಿಸುತ್ತಿದ್ದ ಅವರ ಸೆಕ್ಯೂರಿಟಿ ಕಮಾಂಡೋಗಳು ಹಿಂದೆ-ಮುಂದೆ ಓಡಾಡುತ್ತಿದ್ದರು! ಆದರೆ ಕಲಾಂ ಅವರು ಅವೆಲ್ಲವನ್ನೂ ಲೆಕ್ಕಿಸದೆ ಕವಿಯಾಗಿ, ಸಂಗೀತವನ್ನು ಹೃದಯದಿಂದ ಪ್ರೀತಿಸುವ ಮಹಾನ್ ವ್ಯಕ್ತಿಯಂತೆ ಕಂಡರು! ಅವರು ಹೇಳಿದಂತೆ ಅವರ Whispers of Jasmine ಹಾಡಲು ಒಪ್ಪಿಕೊಂಡೆ. ಈ ಕವನವನ್ನು ರಾಗಮಾಲದಲ್ಲಿ (ಹಿಂದಿ ಮತ್ತು ಇಂಗ್ಲಿಷ್ ) ಸಂಯೋಜಿಸಲು ಮೂರು ತಿಂಗಳು ಹಿಡಿಯಿತು.

ಯಾವ ಸಮಯಕ್ಕೆ ಬಂದರೂ ನಿಮ್ಮನ್ನು ಭೇಟಿಯಾಗಿ ಸಿಡಿಯನ್ನು ಕಲಾಂ ಸಾಹೇಬರು ಸ್ವೀಕರಿಸಲು ಸಿದ್ಧರಿದ್ದಾರೆ ಎನ್ನುವ ಕರೆ ರಾಷ್ಟ್ರಪತಿ ಭವನದಿಂದ ನನಗೆ ಬಂದಿತ್ತು. ದಿಲ್ಲಿಗೆ ಹೋಗಿ ನಾನೇ ಅವರಿಗೆ ಸಿಡಿ ಕೊಟ್ಟೆ. ಆ ಸಮಯದಲ್ಲಿ ನಾನು ಅವರ ಬಳಿ ಒಂದು ಬೇಡಿಕೆ ಇಟ್ಟಿದ್ದೆ. ‘ಅಳಿವಿನಂಚಿನಲ್ಲಿರುವ ಸಂಗೀತ ವಾದ್ಯಗಳ ಬಗ್ಗೆ ಮುಂಬಯಿಯಲ್ಲಿ ಒಂದು ಗೋಷ್ಠಿ ಇದೆ, ಬರಬಹುದೇ?’ ಎಂದು. ತಕ್ಷಣ ಕಲಾಂ ಅವರು ‘ಅರೆ ಖಂಡಿತಾ ನಾನು ಬರುತ್ತೇನೆ, ವೀಣೆ ಕೂಡ ನನಗೆ ತುಂಬಾ ಇಷ್ಟ’ ಎಂದಿದ್ದರು. ಈ ಘಟನೆ ನಡೆದ ವಾರದೊಳಗೆ ಮುಂಬಯಿಯಲ್ಲಿ ಗೋಷ್ಠಿ ಇತ್ತು, ಕಲಾಂ ಬಂದು ಭಾಗವಹಿಸಿದ್ದರು!!

ತಿಂಗಳುಗಳು ಸರಿದವು. ಒಂದು ದಿನ ಇದ್ದಕಿದ್ದಂತೆ ರಾಷ್ಟ್ರಪತಿ ಭವನದಿಂದ ಕರೆಬಂತು. ‘ಸೋಮಾ ಜೀ,.. ನನ್ನ ಎರಡನೇ ಕನಸು ಎಂದು ನೆರವೇರಿಸುವಿರಿ?’ ಎಂದಾಗ ನನಗ ನಂಬಲಾಗಲಿಲ್ಲ. ಆ ಕ್ಷಣ ‘ಕೆಲವೇ ದಿನಗಳಲ್ಲಿ’ ಎಂದು ಭರವಸೆ ನೀಡಿದೆ. ಅದು ಮಾರ್ಚ್ 4, 2006. ಮೊಘಲ್ ಉದ್ಯಾನವನದಲ್ಲಿ ನನ್ನ ಮತ್ತು ಬಾಬಾರ ಯುಗಳ ಗೀತೆಗೆ ವೇದಿಕೆ ಸಿದ್ಧವಾಯಿತು.

ರಾಷ್ಟ್ರಪತಿ ಕಲಾಂ ಅವರಿಗಾಗಿ ನಾವು ಜುಗಲಬಂದಿ ಕಛೇರಿ ನೀಡಿದೆವು. ಅದೂ ಅವರಿಷ್ಟದಂತೆ ಬೆಳದಿಂಗಳ ತಂಪಿನಲಿ! ಆದರೆ ಆ ಕಛೇರಿಯಲ್ಲಿ ಬಾಬಾರ ಷಹನಾಯಿ ಕೈಕೊಟ್ಟಿತ್ತು. ಏನು ಮಾಡಿದರೂ ಷಹನಾಯಿ ಸರಿಯಾಗಿ ನುಡಿಯಲಿಲ್ಲ, ನಾನು ಬಾಬಾ ಮುಖದ ಹತ್ತಿರ ಮೈಕ್ರೋಫೋನ್ ಹಿಡಿದೆ, ಅವರು ಹಾಡಲು ಶುರುಮಾಡಿದರು. ಚೆನ್ನಾಗಿಯೇ ಹಾಡಿದರು, ಅಂದು ಬಾಬಾ ದನಿಯ ಮೂಲಕ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು!! ಅದು ಬಾಬಾ (ಉಸ್ತಾದ್ ಬಿಸ್ಮಿಲ್ಲಾ ಖಾನ್) ಅವರ ಕೊನೆಯ ಸಾರ್ವಜನಿಕ ಪ್ರದರ್ಶನವಾಗಿತ್ತು!!

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: