ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಪ್ಪ' ಎಂಬ ನಿರ್ಲಕ್ಷಿತ ದೇವರು

ಗೊರೂರು ಶಿವೇಶ್

ಮಾತೃದೇವೋಭವ, ಪಿತೃದೇವೋಭವ
ಆಚಾರ್ಯ ದೇವೋಭವ, ಅತಿಥಿ ದೇವೋಭವ
ಎನ್ನುತ್ತದೆ ಸಂಸ್ಕೃತ ಶ್ಲೋಕ. ತಾಯಿ ತಂದೆಯಿಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುತ್ತದೆ ಚಿತ್ರಗೀತೆ. ಆದರೆ ತಾಯಿಗೆ ದೊರೆತ ಮಾನ್ಯತೆ ತಂದೆಗೆ ಸಮನಾಗಿ ದೊರಕಿದೆಯೆ ಎಂದರೆ ಉತ್ತರ ಶೂನ್ಯ. ತಾಯಿಯನ್ನು ಹಾಡಿ ಹೊಗಳದವರೇ ಇಲ್ಲ. ಜನಪದ ಗೀತಕಾತರ್ಿಯವರಿಂದ ಹಿಡಿದು ಬಹುತೇಕ ಎಲ್ಲಾ ಕವಿಗಳು ತಾಯಿಯನ್ನು ನೆನೆದು ಹನಿಗಣ್ಣಾದವರೇ. ಹೆಣ್ಣು ಮಕ್ಕಳನ್ನು ಕಳುಹಿಸುವಾಗ ತಾಯಿಯ ನೋವನ್ನು ಕುರಿತು ಹಾಡುವ ಅನೇಕ ಜನಪದ ಗೀತೆಗಳಿವೆ. ಆದರೆ ತಂದೆಯ ನೋವನ್ನು ಹೊರಚೆಲ್ಲುವ ಗೀತೆಯೊಂದು, ಅಲ್ಲಿ ಕಾಣಸಿಗುತ್ತದೆ.
ಹೆಣ್ಣು ಮಕ್ಕಳ ಕಳುಹಿ, ಕಣ್ಣೀಗಿ ನೀರು ತಂದು
ಸಣ್ಣ ಶಲ್ಯದಲೆ ಮಸುಗ್ಹಾಕಿ | ಹಡೆದಪ್ಪ
ಹೆಣ್ಣು ಸಾಕೇಂದ ಜನಮಕಾ
ಇನ್ನೂ ನಮ್ಮ ಕವಿ-ಲೇಖಕರಿಗೆ ‘ಅಪ್ಪ’ ನೆನಪಾಗುವ ಬಗೆಯನ್ನು ನೆನೆದರೆ ಭೈರಪ್ಪನವರ ಗೃಹಭಂಗದಲ್ಲಿ ಬೇಜವಾಬ್ದಾರಿ ತಂದೆಯಿಂದ ಪಡುವ ಪಡಿಪಾಟಲು ಕಣ್ಣೆದುರಿಗೆ ಬರುತ್ತದೆ. ಮಲ್ಲಿಕಾರ್ಜುನ ಗಂಡ ತೂಲಹಳ್ಳಿ ತಮ್ಮ ಅಪ್ಪನನ್ನು ನೆನೆಯುವುದು ಹೀಗೆ ….
ಬೆಳ್ಳಂಬೆಳ್ಳಗೆ ಚಳೀಲಿ
ಕೌದೀಲಿ ಹೊರಳಾಡುತ್ತಾ ಹೊರಳಾಡುತ್ತಾ
ಕಣ್ಣಾಗಿನ ಶಿಳ್ಳು ಒರೆಸಿಕೊಳ್ಳುವ ಮೊದಲೇ
ನನ್ನ ಕುಂಡಿಗೆ ಚಟಾರನೆ ಬಿಟ್ಟು
ಈರಣ್ಣನ ಅಂಗಡಿಗೆ
ಗಣೇಶ ಬೀಡಿ ತರಲು ಓಡಿಸಿದವನೇ

ಪುರಾಣ-ಇತಿಹಾಸಗಳನ್ನು ಕೆದಕಿದರೂ ಮಾದರಿಯಾಗಿ ನಿಲ್ಲಬಲ್ಲ ಪಾತ್ರಗಳು ಅಷ್ಟಿಲ್ಲ. ಪಿತೃವಾಕ್ಯ ಪರಿಪಾಲಕರಾದ ರಾಮಪರಶುರಾಮರು ತನ್ಮೂಲಕ ತಂದೆಯರನ್ನು ನಮ್ಮ ಕಣ್ಣೆದುರು ವಿಲನ್ ಆಗಿ ನಿಲ್ಲಿಸಿದರು. ಚಲನಚಿತ್ರಗಳಲ್ಲಿ ಕುಲಗೌರವವನ್ನು ಕಾಪಾಡಲು ಮಕ್ಕಳಿಗೆ ಆದೇಶವನ್ನು ನೀಡಿದವರೆ ಹೆಚ್ಚು (ಮತ್ತೊಮ್ಮೆ ರಾಮಾಯಣದ ಪ್ರಭಾವ). ಮಕ್ಕಳೆದುರು ಪಿತೂರಿ ಹೂಡುವ ಚಂದ್ರಹಾಸ ಕಥೆಯ ದುಷ್ಟಬುದ್ಧಿ ‘ನ್ಯಾಯವೇ ದೇವರು’ ಚಿತ್ರದ ಅಶ್ವತ್ರ ಪಾತ್ರಗಳು ಕಣ್ಣ ಮುಂದೆ ಬರುತ್ತವೆ. ಇನ್ನೂ ಆ ಕಾಲದ ‘ಮೇಜರ್ ಚಂದ್ರಕಾಂತ್’ (ಕನ್ನಡದಲ್ಲಿ ಕರುಣೆ ಇಲ್ಲದ ಕಾನೂನು), ತಂಗಪದಕಂ (ಕನ್ನಡದಲ್ಲಿ ನಾನೊಬ್ಬ ಕಳ್ಳ) ಮುಂತಾದ ಚಿತ್ರದಲ್ಲಿ ತಂದೆಯೆ ಮಕ್ಕಳನ್ನು ಕೊಲ್ಲುವ ದಾರುಣ ಸನ್ನಿವೇಶವಿದೆ. ಅಪಾರ ಯಶ ಕಂಡ ಈ ಚಿತ್ರಗಳಲ್ಲಿ ತಂದೆಯಿಂದ ದೇಶಾಭಿಮಾನದ ಬಗ್ಗೆ ಅಭಿಮಾನ ಮೂಡುವುದಾದರೂ ಮಕ್ಕಳ ಬಗ್ಗೆ ಕನಿಕರವು ಮೂಡದೇ ಇರದು. ಲಾಲಿ ಸಿನಿಮಾದಲ್ಲಿನ ಪೊಸೆಸಿವ್ ಅಪ್ಪ, ತಂದೆ ಮಕ್ಕಳು ಚಿತ್ರದ ಅಶ್ವಥ್ ಪಾತ್ರ… ಇಂತಹ ಒಂದೆರಡು ಪಾತ್ರಗಳು ನೆನಪಿನಲ್ಲಿ ಉಳಿದಿವೆ ಅಷ್ಟೇ.
ಮಕ್ಕಳ ಆಸಕ್ತಿ ಅಭಿರುಚಿ ತಿಳಿಯದೆ ತಮ್ಮ ನಿಧರ್ಾರವನ್ನು ಮಕ್ಕಳ ಮೇಲೆ ಚಲಾಯಿಸ ಹೊರಟ ತಂದೆಯಂದಿರನ್ನು ಕಂಡಾಗ ಮೋಲರ್ಿಕ್ಯಾಲಹನ್ ಬರೆದ ‘ಸ್ಟೀವ್ಗೊಂದು ಕ್ಯಾಪ್’ ನೆನಪಿಗೆ ಬರುತ್ತದೆ. ಡೇವ್ ಡೈಮಂಡ್ ಒಬ್ಬ ಬಡಗಿಯ ಸಹಾಯಕ. ರೋಗಿಷ್ಠೆ ಹೆಂಡತಿ ಆನಾ. ಹನ್ನೆರಡು ವರ್ಷದ ಮಗ ಸ್ಟ್ಟೀವ್ಗೆ ಬೇಸ್ಬಾಲ್ (ನಮ್ಮ ಕ್ರಿಕೆಟ್ ನಂಥದೆ ಆಟ) ಹುಚ್ಚು. ಮಗ ಪೇಪರ್ ಹಾಕಿಯೋ ಇಲ್ಲವೇ ಅಂಗಡಿಯಲ್ಲಿ ಸಹಾಯಕನಾಗಿ ನಾಲ್ಕು ಕಾಸು ಸಂಪಾದಿಸಿ ಸಂಸಾರದ ನಿರ್ವಹಣಾ ಮಟ್ಟ ಹೆಚ್ಚಿಸಲೆಂದು ತಂದೆಗೆ ಆಸೆ. ಮಗ ತರಗತಿಯಿಂದ ಬಂದೊಡನೆ ಮೈದಾನಕ್ಕೆ ಓಡುತ್ತಿದ್ದುದು ಜಿಗುಪ್ಸೆ ತರುತ್ತಿತ್ತು. ಗಂಡಹೆಂಡತಿಯರ ನಡುವೆ ಈ ವಿಷಯಕ್ಕಾಗಿ ಜಗಳ. ಒಮ್ಮೆ ಪ್ರಸಿದ್ಧ ಫಿಲಿಡೆಲ್ಪಿಯಾದ ತಂಡ ಸ್ಥಳೀಯ ತಂಡದೊಡನೆ ಪ್ರದರ್ಶನ ಪಂದ್ಯವಾಡಲು ಬರುತ್ತದೆ. ಸ್ಟೇವ್ ಗೆ ಹೋಗಲು ಆಸೆ. ತಂದೆಗೆ ಬೇಸರ. ಕೊನೆಗೆ ಕೆಲವು ಕಿಚನ್ ಶೆಲ್ಟ್ ಗಳನ್ನು ತಯಾರಿಸಲು ತಂದೆಗೆ ನೆರವಾಗುವುದರಿಂದ ಅವನನ್ನು ಆಟ ನೋಡಲು ಕರೆದೊಯ್ಯುತ್ತಾನೆ. ಅಲ್ಲಿ ಪ್ರತಿ ಆಟಗಾರರ ಹೆಸರು, ಅವರ ದಾಖಲೆಗಳನ್ನು ಪಟಪಟನೆ ಹೇಳುವಾಗ ತಂದೆ ಆಶ್ಚರ್ಯ ಚಕಿತನಾಗುತ್ತಾನೆ.
ಪಂದ್ಯದ ನಂತರ ಫಿಲಿಡೆಲ್ಫಿಯ ತಂಡದ ಆಟಗಾರರ ಆಟೋಗ್ರಾಫ್ ಪಡೆಯಲು ಮಕ್ಕಳು ಮುಗಿಬೀಳುತ್ತಾರೆ. ಸ್ಟೀವ್ಗೆ ಹತ್ತಿರ ಹೋಗಬೇಕೆನಿಸಿದರೂ ಸಾಧ್ಯವಾಗುವುದಿಲ್ಲ. ಫಿಲಿಡೆಲ್ಪಿಯ ತಂಡದ ಪ್ರಸಿದ್ಧ ಆಟಗಾರ ಎಡ್ಡಿ ಕಾಂಡನ್. ಗುಂಪಿನಿಂದ ತಪ್ಪಿಸಿಕೊಂಡು ಹೊರಹೋಗುವ ಯತ್ನದಲ್ಲಿ ಆತನ ಕ್ಯಾಪ್ ಸ್ಟೀವ್ನ ಪಕ್ಕ ಬಂದು ಬೀಳುತ್ತದೆ. ತಕ್ಷಣ ಸ್ಟೀವ್ ಅದನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಇತರ ಹುಡುಗರು ವಾಪಸ್ ನೀಡೆಂದು ತಿಳಿಸಿದರೂ ಕೊಡುವುದಿಲ್ಲ. ತನ್ನನೇ ಆರಾಧನಾ ಭಾವದಿಂದ ನೋಡುತ್ತಿದ್ದ ಸ್ಟೀವ್ನ ಬಗ್ಗೆ ಮಮತೆ ಉಕ್ಕಿ ಟೋಪಿಯನ್ನು ಅವನಿಗೆ ಇಟ್ಟುಕೊಳ್ಳಲು ಬಿಡುತ್ತಾನೆ, ಎಡ್ಡಿಕಾಂಡನ್.
ಮನೆಗೆ ಬಂದ ಸ್ಟೀವ್ಗೆ ಆ ಕ್ಯಾಪ್ ನದೇ ಧ್ಯಾನ. ಅವನ ತಲೆಗೆ ಕೊಂಚ ದೊಡ್ಡದಾಗುವ ಆ ಟೋಪಿಯನ್ನು ತಾಯಿ ಟಕ್ ಹಾಕಿ ಸರಿಪಡಿಸಿದರೂ ಅವನ ತಲೆಗೆ ಕೊಂಚ ದೊಡ್ಡದೇ ಆಗಿರುತ್ತದೆ. ಸದಾ ಟೋಪಿಯದೇ ಧ್ಯಾನ ಮಾಡುತ್ತಿದ್ದ ಮಗನನ್ನು ಕಂಡು ತಂದೆಗೆ ಜಿಗುಪ್ಸೆ ಹೆಚ್ಚಾಗುತ್ತದೆ.
ಒಮ್ಮೆ ಬಾಲ್ಪಾಕರ್್ಗೆ ಆಟವಾಡಲು ಹೋದ ಸ್ಟೀವ್ ಸಮರಾತ್ರಿಯಾದರೂ ಹಿಂತಿರುಗುವುದಿಲ್ಲ. ಗಾಬರಿಯಿಂದ ತಾಯಿ ಅವನನ್ನು ಹುಡುಕುತ್ತಾ ಹೋಗುತ್ತಾಳೆ. ತಳಮಳವಾದರೂ ಡೇವ್ ಮಗನ ಬರುವಿಕೆಗಾಗಿ ಕಿಟಕಿಯ ಮೂಲಕ ನೋಡುತ್ತಿರುತ್ತಾನೆ. ಆತಂಕ ಅವನಲ್ಲಿ ಮನೆ ಮಾಡುತ್ತದೆ. ಎಷ್ಟೋ ಹೊತ್ತಿನ ನಂತರ ತಾಯಿ-ಮಗ ಮಾತಾಡಿಕೊಂಡು ಬರುವುದು ಕೇಳಿಸುತ್ತದೆ. ಆಕ್ರೋಶಗೊಂಡ ಡೇವ್ ಮಗನನ್ನು ಹೊಡೆಯಲು ಧಾವಿಸುತ್ತಾನೆ. ಆಗ ಅಡ್ಡ ಬಂದ ತಾಯಿ, ಮಗ ತನ್ನ ಕ್ಯಾಪನ್ನು ಕಳೆದುಕೊಂಡಿರುವುದನ್ನು ತಿಳಿಸುತ್ತಾಳೆ. ಆಟವಾಡುವಾಗ ಅವನ ತಲೆಗೆ ಲೂಸಾಗಿದ್ದ ಆ ಟೋಪಿಯನ್ನು ತನ್ನ ಹಿಂದಿನ ಜೋಬಿಗೆ ಸಿಕ್ಕಿಸಿಕೊಂಡಿರುತ್ತಾನೆ. ಆಟದ ಭರದಲ್ಲಿ ಅದು ಕಳೆದುಹೋಗಿರುತ್ತದೆ. ಕಳೆದು ಹೋದ ಕ್ಯಾಪ್ ಗಾಗಿ ಅವನು ಆಟದ ಬಯಲು, ಪಾಕರ್್ ಜೊತೆಯಲ್ಲಿ ಆಡಿದ್ದ ಆಟಗಾರರ ಮನೆಗೆ ಸುತ್ತಿ ನಿರಾಶನಾಗಿ ಬಂದಿದ್ದನ್ನು ಅವಳು ವಿವರಿಸುತ್ತಾಳೆ. ಮಗನ ಸ್ಥಿತಿ ಕಂಡು ತಂದೆಗೆ ಮರುಕ ಉಂಟಾಗುತ್ತದೆ.
ಇದಾದ ಕೆಲವು ದಿನಗಳ ನಂತರ ತಂದೆ-ಮಗ ಒಂದು ರಾತ್ರಿ ನಡೆದು ಬರುತ್ತಿದ್ದಾಗ ಸ್ಟೀವ್ಗೆ ಅವನ ಕ್ಯಾಪ್ನಂಥದೇ ನೀಲಿ ಕ್ಯಾಪ್ನ್ನು ಧರಿಸಿ ಬರುತ್ತಿದ್ದ ಹುಡುಗನನ್ನು ನೋಡಿ ಅವನೆಡೆಗೆ ಧಾವಿಸುತ್ತಾನೆ. ಅವನ ತಲೆಯಿಂದ ಟೋಪಿಯನ್ನು ಕಿತ್ತುಕೊಳ್ಳಲು ಹೋಗುತ್ತಾನೆ. ಆ ಹುಡುಗ ಇವನಿಗೆ ನೀಡದೆ ಇಬ್ಬರು ಪರಸ್ಪರ ಹೊಡೆದಾಡುವ ಹಂತ ತಲುಪಿ ಡೇವ್ ಮಧ್ಯ ಪ್ರವೇಶಿಸುತ್ತಾನೆ. ಸ್ಟೆಟ್ಬ್ಯಾಂಡ್ನೊಳಗೆ ಎಡ್ಡಿ ಕಾಂಡನ್ ಹೆಸರನ್ನು ತೋರಿಸಿ ಇದು ತನ್ನ ಕ್ಯಾಪ್ ಎಂದು ವಾದಿಸುವ ಮಗನ ಪರ ತಂದೆ ನಿಲ್ಲುತ್ತಾನೆ. ಆಗ ನಾನು ಬೇರೊಬ್ಬ ಹುಡುಗನಿಂದ ಕೊಂಡಿದ್ದಾಗಿ ತಿಳಿಸುವ ಹುಡುಗ ಹಡ್ಸನ್, ವಿವಾದ ಬಗೆಹರಿಸಲು ತನ್ನ ತಂದೆಯ ಬಳಿ ಕರೆದೊಯ್ಯುತ್ತಾನೆ. ಶ್ರೀಮಂತ ಬಡಾವಣೆಯಲ್ಲಿ ವಾಸಿಸುವ ಹಡ್ಸನ್ ಮನೆಗೆ ಕರೆದೊಯ್ಯುವಾಗ ಅಪ್ಪ ಅಲ್ಲಿನ ವೈಭವಕ್ಕೆ ಪ್ರಭಾವಿತನಾಗಬಹುದೆಂಬ ಹೆದರಿಕೆ ಮಗನಿಗೆ. ಆದರೆ ತಂದೆ ಮಗನಿಗೆ ಧೈರ್ಯ ತುಂಬುತ್ತಾನೆ. ಹಡ್ಸನ್ ತಂದೆ ಒಬ್ಬ ಲಾಯರ್. ತನ್ನ ವಾದದಿಂದ ಡೇವ್ನನ್ನು ಪ್ರಭಾವಿಸಲು ಯತ್ನಿಸಿ ವಿಫಲನಾಗುತ್ತಾನೆ. ಕೊನೆಗೆ ಡೈಮಂಡ್ 2 ಡಾಲರ್ ಕೊಟ್ಟು ಅದನ್ನು ಬೇರೊಬ್ಬರಿಂದ ಖರೀದಿಸಿರುವುದಾಗಿ ತಿಳಿಸಿ ಅದನ್ನು ಕೊಟ್ಟು ಕ್ಯಾಪ್ ಪಡೆಯಲು ತಿಳಿಸುತ್ತಾನೆ. ಸ್ಟೀವ್ ಆಶ್ಚರ್ಯಚಕಿತನಾಗುವಂತೆ ಡೇವ್ ಹಣ ನೀಡಲು ಒಪ್ಪುತ್ತಾನೆ. ಇದನ್ನು ನಿರೀಕ್ಷಿಸದೇ ಇದ್ದ ಡೈಮಂಡ್ ಮತ್ತೆ ವ್ಯವಹಾರಕ್ಕೆ ಮುಂದಾಗಿ ತಾನೇ 5 ಡಾಲರ್ ನೀಡುವುದಾಗಿ ತಿಳಿಸುತ್ತಾನೆ. ಮಗನ ಟೋಪಿಯ ಪ್ರೀತಿಯ ಬಗ್ಗೆ ಅರಿತಿದ್ದ ಸ್ಟೀವ್ ಅದನ್ನು ನಿರಾಕರಿಸುತ್ತಾನೆ. ಆದರೆ ಹಡ್ಸನ್ಗೂ ಅದರ ಬಗ್ಗೆ ಪ್ರೀತಿ. ಶ್ರೀಮಂತ ಲಾಯರ್ ಕೊನೆಗೆ ಇಪ್ಪತ್ತು ಡಾಲರ್ ನೀಡುವುದಾಗಿ ತಿಳಿಸಿದಾಗ ಏನು ಮಾಡಬೇಕೆಂದು ತಿಳಿಯದ ಡೇವ್ ಮಗನನ್ನು ನೋಡುತ್ತಾನೆ. ಮಗನಿಗೂ ಏನೂ ಹೇಳಲಾರದ ಸ್ಥಿತಿ.
ಬಡತನವೇ ಮೈವೆತ್ತಂತಿದ್ದ ಡೇವ್ ಹಣವನ್ನು ಪಡೆಯುತ್ತಾನೆ. ನಿರಾಶೆಯಿಂದ ನೊಂದ ಸ್ಟೀವ್ ಮನೆಯಿಂದ ಹೊರಬಂದೊಡನೆ ಅಪ್ಪನ ಕೈ ತಪ್ಪಿಸಿ ಓಡಿಬಂದು ತನ್ನ ತಾಯಿಗೆ ಅಪ್ಪ ಮಾಡಿದ ಕೃತ್ಯ ಒಪ್ಪಿಸಿ ಮಂಚದ ಮೇಲೆ ಕುಸಿಯುತ್ತಾನೆ. ತಾಯಿಗೂ ಏನೂ ಹೇಳಲಾರದ ಸ್ಥಿತಿ, ಇಪ್ಪತ್ತು ಡಾಲರ್ ಅವರ ಪಾಲಿಗೆ ದೊಡ್ಡ ಹಣ. ಡೇವ್ ತನ್ನ ಮಗನ ಬಳಿ ಕುಳಿತು ತಲೆ ಸವರುತ್ತಾ ನುಡಿಯುತ್ತಾನೆ. ‘ಮಗನೇ ಆ ದಿನ ಸ್ಟೇಡಿಯಂ ನಲ್ಲಿ ನೀನು ಎಷ್ಟೊಂದು ಖುಷಿಪಟ್ಟಿದ್ದೆ ಎಂಬುದನ್ನು ಅರ್ಥಮಾಡಿಕೊಳ್ಳದಿದ್ದುದೇ ಸಮಸ್ಯೆಯ ಮೂಲ. ಇಲ್ಲಿನ ಮಕ್ಕಳು ನಿನ್ನನ್ನು ಒಳ್ಳೆಯ ಬೌಲರ್ ಎಂದು ಹೇಳುತ್ತಿದ್ದಾರೆ. ಈ ಹಣದಿಂದ ನಿನಗೆ ಗ್ಲೌವ್ಸ್, ಚಂಡು ಹಿಡಿಯುವ ಮೀಟ್ಸ್ನ್ನು ಕೊಳ್ಳುವ. ಇನ್ನು ಮುಂದೆ ನಾನು ನಿನಗೆ ಕೋಚ್ ಆಗುತ್ತೇನೆ. ನಿನ್ನನ್ನು ಮುಂದೆ ದೊಡ್ಡ ಬೌಲರ್ ಆಗಿ ನೋಡುವುದೇ ನನ್ನಾಸೆ’ ಅನ್ನುತ್ತಾನೆ. ತನ್ನ ಸಾಹಸಗಳಲ್ಲಿ ಪಾಲ್ಗೊಂಡು ಜೊತೆಗಿರಲು ಬಯಸುತ್ತಿದ್ದಾರೆ ತನ್ನಪ್ಪ ಎಂದು ತಿಳಿದು ಸ್ಟೀವ್ನ ಆನಂದದಿಂದ ಮನ ಅರಳುತ್ತದೆ.
ಬದಲಾದ ಸಾಮಾಜಿಕ ಸಂದರ್ಭದಲ್ಲಿ ಅಪ್ಪಂದಿರು ಮಕ್ಕಳಿಗೆ ಸ್ನಾನ ಮಾಡಿಸುವ ಶಾಲೆಗೆ ಕರೆದೊಯ್ಯುವ ಹಾಗೂ ಇತರೆ ಲಾಲನೆ ಪಾಲನೆಯನ್ನು ಮಾಡುತ್ತಿದ್ದು ಇದು ತಂದೆ ಮಕ್ಕಳ ಭಾಂಧವ್ಯವನ್ನು ಬೆಸೆಯಲು ಸಹಾಯವಾಗುತ್ತದೆ. ತಾಯಿಯೇ ಸರ್ವಸ್ವವಾಗಿದ್ದ ಮಕ್ಕಳು ಈಗ ತಂದೆಯಿಂದಲೂ ಸಮನಾದ ಪ್ರೀತಿ ಪಡೆಯುತ್ತಿದ್ದಾರೆ.
ಆದರೆ ಇಬ್ಬರನ್ನು ಸಮನಾಗಿ ವೃದ್ಧಾಶ್ರಮಕ್ಕೆ ಅಟ್ಟುತ್ತಿರುವುದು ವರ್ತಮಾನದ ವ್ಯಂಗ್ಯ.
 
 

‍ಲೇಖಕರು G

22 June, 2015

2 Comments

  1. Anantha Ramesh

    ಆಪ್ಯಾಯತೆ ಮೂಡಿಸುವ ಸುಂದರ ಬರಹ.

  2. Shashikala M

    ಆದರೆ ಇಬ್ಬರನ್ನು ಸಮನಾಗಿ ವೃದ್ಧಾಶ್ರಮಕ್ಕೆ ಅಟ್ಟುತ್ತಿರುವುದು ವರ್ತಮಾನದ ವ್ಯಂಗ್ಯ.
    – This is ultimate truth

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading