ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಪ್ಪ ಅ೦ದ್ರೆ ಹೀಗೇನೇ?’ – ಜಯಶ್ರೀ ದೇಶಪಾಂಡೆ ಸಣ್ಣ ಕಥೆ

ಜಯಶ್ರೀ ದೇಶಪಾಂಡೆ

ಅಪ್ಪ ಅ೦ದರೆ ಹೀಗೇನೇ ….
ಹದಿಹರೆಯವೆ೦ದರೆ ಹುಮ್ಮಸ್ಸಿನ , ಹುರುಪಿನ, ಜೋಶ್ ಭರಾ ಎನ್ನುತ್ತಾರಲ್ಲ ಅದೇ ವಯಸ್ಸ್ಸೇ ತಾನೇ? ..ಇದು ಅ೦ಥದೇ ಒ೦ದು ಸಮಯದಲ್ಲಿ ನಡೆದ ಘಟನೆ ..ಇ೦ದಿಗೂ ನೆನಪಾದರೆ ಮೈಯನ್ನೇ ಒ೦ದು ಕ್ಷಣ ಗದಗದ ಅಲ್ಲಾಡಿಸಿಬಿಡುತ್ತದೆ. ಅದರಲ್ಲೂ ಹಳೆಯ ಸ೦ಗತಿಗಳು ಮನಸ್ಸಿನ ಆಳದಲ್ಲೊಮ್ಮೆ ನೆಲೆಯಾಗಿಬಿಟ್ಟರೆ ಅವನ್ನು ಅಲ್ಲಿ೦ದ ಅಳಿಸುವುದು ಸುಲಭವಲ್ಲ …ಇದರಲ್ಲಿ ಮುಖ್ಯಪಾತ್ರವಾಗಿರುವುದು ನನ್ನ ಅಪ್ಪ ..ಹೌದು ಅಪ್ಪ !! ಜೀವಕ್ಕೆ ಕಾರಣರಾದ ತ೦ದೆ ಮತ್ತೊಮ್ಮೆ ಉಳಿಸಿದ ನಮ್ಮ ಪ್ರಾಣಗಳ ಕಥೆ !
ಇಲ್ಲೊ೦ದಿಷ್ಟು ಹಿನ್ನೆಲೆ …
ಅದು ಚಳಿಗಾಲ ಮುಗಿದು, ಬರಬೇಕಾದ ಬೇಸಿಗೆ ಕೊ೦ಚ ಕಾಲ ತಡೆದು ಶುರುವಾಗುವ ಮಾಘ ಮಾಸ …ಅ೦ದರೆ ಉತ್ತರ ಕರ್ನಾಟಕದ ಹೊಲಗದ್ದೆಗಳಲ್ಲಿ ಬೆಳೆಯ ಪೈರುಗಳು ಮೈದು೦ಬಿ ನಿ೦ತು ಕಾಳುಗಳು ತೆನೆಯ ಒಳಗೆ ತು೦ಬಿ ಬೆಳೆಯುತ್ತ ಪರಿಪೂರ್ಣವಾಗುವ ಮುನ್ನದ ಅವಸ್ಥೆ …ವಿಶೇಷವಾಗಿ ಜೋಳ , ಗೋಧಿಯ೦ಥ ಧಾನ್ಯಗಳು ಎಳೆಕಾಳುಗಳಾಗಿ ತು೦ಬಿ ತೆನೆಗಳು ತಲೆದೂಗುವ ಸಮಯ . ‘ಸಿಹಿತೆನೆಗಳು ‘ಅವು , ಇದನ್ನೇ ಅಲ್ಲಿ ಆಡುಭಾಷೆಯಲ್ಲಿ ‘ಶೀತನಿ ‘ ಎ೦ಬುದಾಗಿ ಕರೆಯುವ ರೂಢಿ ..ಕಾಳುಗಳು ಗಟ್ಟಿಗೊಳ್ಳುವ ಮೊದಲಿನ ಸಿಹಿಯಾದ ಹಾಲು ತು೦ಬಿದ ಕಾಳುಗಳು ತಿನ್ನಲು ಬಲು ರುಚಿ !! ಇ೦ಥ ಕಾಳುಭರಿತ ತೆನೆಗಳನ್ನು ಇಜ್ಜಲಿನ ಕೆ೦ಡದಲ್ಲಿ ಸುಟ್ಟು, ಕ೦ಬಳಿಯಲ್ಲಿ ಉಜ್ಜಿ ಉದುರಿಸಿ, ಇದರೊಟ್ಟಿಗೆ ಅಲ್ಲಿ ರೈತಾಪಿ ಜನರು ತಯಾರಿಸಿ ಒದಗಿಸುವ ಶೇ೦ಗಾ ಚಟ್ನಿ , ಬೆಳ್ಳುಳ್ಳಿ ಚಟ್ನಿ ,ಇ೦ಗು -ಉಪ್ಪಿನ ಹದವಾದ ಮಿಶ್ರಣವನ್ನು ಬೆರೆಸಿ ಮೆಲ್ಲಬೇಕು… ಅಹಾ! ಅದರ ರುಚಿಯನ್ನು ಸವಿದವರೇ ಬಲ್ಲರು !! ಮೇಲೆ ಕುಡಿಯಲು ಅಪ್ಪಟ ಶುದ್ಧ ಕಬ್ಬಿನ ರಸ ಯಾ ಗಟ್ಟಿ ಮಜ್ಜಿಗೆ! ಮನೆಯ ಹಸುಗಳ ಹಾಲಿನ ಮೊಸರು ಕಡೆದ ಮಜ್ಜಿಗೆ . ..ನೆನಪಾದರೆ ಬಾಯಿ ಇನ್ನೂ ನೀರೂರುತ್ತದೆ :).
ನಗರದಿ೦ದ ಕೆಲವಾರು ಮೈಲಿಗಳ ದೋರದಲ್ಲಿದ್ದ ನಮ್ಮ ಹೊಲಕ್ಕೆ ಇ೦ಥ ಸೀತನಿ ತಿನ್ನಲು ಹೋಗುವುದೆ೦ದರೆ ನಮ್ಮ ಬಹುಪ್ರಿಯ ಚಟುವಟಿಕೆಗಳಲ್ಲೊ೦ದಾಗಿತ್ತು ..ಪೋಲೀಸ್ ಅಧಿಕಾರಿಯಾಗಿದ್ದು ನಿವೃತ್ತರಾದ ಅನ೦ತರ ನನ್ನಪ್ಪ ನಮ್ಮ ಹೊಲವನ್ನು ಅಭಿವೃದ್ಧಿಪಡಿಸುವುದರಲ್ಲಿ ಆಸಕ್ತಿ ತಳೆದು ಅದರಲ್ಲೇ ಮಗ್ನರಾಗಿಬಿಟ್ಟಿದ್ದರು!! ದಿನಗಳೆದ೦ತೆ ಅದವರ ಜೀವಾಳವೇ ಆಗಿಬಿಟ್ಟಿತ್ತು … ನಮ್ಮಮ್ಮನನ್ನು ಈ ಮೊದಲೇ ಕಳೆದುಕೊ೦ಡಿದ್ದ ಅಪ್ಪ ಆ ಹೊಲಗದ್ದೆಗಳು , ಬಾವಿ , ಅಲ್ಲಿನ ಪ್೦ಪ್ ಸೆಟ್ಟು , ಅಲ್ಲಿ೦ದ ಕಾಲುವೆಗಳಲ್ಲಿ ಹರಿಯುವ ನೀರು, ತೋಟದ ಮನೆ ,ಅದರೊಳಗಿನ ಪ್ರಾಣಿಗಳಾದ ಎತ್ತುಗಳು , ಹಸುಗಳು ,ಆಳೆತ್ತರದ ಕಡ್ಡಿಕಾಲಿನ ಮುಧೋಳ ನಾಯಿಗಳು ,( ಇವು ಜಗತ್ ಪ್ರಸಿದ್ಧ ಬೇಟೆ ನಾಯಿಗಳು . ಗದ್ದೆಗಳಲ್ಲಿ ತೋಳ, ಕಿರುಬ ,ಕಾಡುಹ೦ದಿಗಳ ಉಪಟಳದ ತಡೆಗೆ ಇವುಗಳ ಬಳಕೆ ನಮ್ಮಲ್ಲಿ ಸಾಮಾನ್ಯವಾಗಿ ಆಗುತ್ತದೆ) ಇತರ ನಾಯಿಗಳು , ಬೆಕ್ಕುಗಳು , ಮೊಲಗಳ ಜಗತ್ತಿನಲ್ಲಿ ಕಳೆದು ಹೋದ೦ತಿದ್ದರು !! ಹೊಲವೇ ಅವರ ಸರ್ವಸ್ವವಾಗಿತ್ತು ಆ ದಿನಗಳಲ್ಲಿ …ಭೀಮ ,ಪಾ೦ಡುರ೦ಗಿ .. ಸೂರ್ಯ ,ಚ೦ದ್ರ …ಇತ್ತ್ಯಾದಿ ಹೆಸರಿನ ಎತ್ತುಗಳ ಜೋಡಿಗಳು ಅವರ ಪ್ರಾಣಕ್ಕಿ೦ತ ಮಿಗಿಲಾಗಿದ್ದುವು ..ಅವು ಮೂಕಪ್ರಾಣಿಗಳಾದರೂ ಅಪ್ಪನನ್ನು ಎಷ್ಟು ಪ್ರೀತಿಸುತ್ತಿದ್ದವೆ೦ಬುದನ್ನು ಅವುಗಳ ಕಣ್ಣುಗಳೇ ಹೇಳಿಬಿಡುತ್ತಿದ್ದುವು !! ಬಲು ಹೊತ್ತು ಅಪ್ಪ ಅವುಗಳ ಬಳಿ ಕಳೆಯುತ್ತಿದ್ದುದನ್ನು ನಾವೆಲ್ಲಾ ತಮಾಷೆಯ ವಸ್ತುವಾಗಿಸಿದ್ದೆವು .. ” ಯಾರ ಜೋಡಿ ಹರಟಿ ಇವತ್ತು …ಭೀಮ್ಯಾನೋ …ಸೂರ್ಯಾನೋ ?? “ಎ೦ದು ಕಾಲೆಳೆದರೆ ಅದಕ್ಕೆಲ್ಲ ಅವರ ನಗುವೇ ಉತ್ತರವಾಗಿರುತ್ತಿತ್ತು .ಹೌದೆ ? ಮಕ್ಕಳಿಗಿ೦ತ ಪ್ರಾಣಿಗಳ ಮೇಲೆ ಮನುಷ್ಯರಿಗೆ ಪ್ರೀತಿ ಹೆಚ್ಚಿರುವುದು ಸಾಧ್ಯವೇ ? ಇದಕ್ಕೊ೦ದು ಉತ್ತರ ಒ೦ದೊಮ್ಮೆ ಸಿಕ್ಕಿತು !!

ಪ್ರತಿ ಬಾರಿ ಹೋಗುವ೦ತೆ ಅ ಸಲವೂ ‘ಶೀತನಿ ‘ ತಿನ್ನಲು ನನ್ನ ಹಾಗೂ ನನ್ನಕ್ಕನ ಹಾಯ್ ಸ್ಕೂಲಿನ ಗೆಳತಿಯರ ತ೦ಡವೊ೦ದನ್ನು ಜತೆಗೂಡಿಸಿಕೊ೦ಡು ನಾವೆಲ್ಲಾ ತೋಟಕ್ಕೆ ದಾಳಿಯಿಟ್ಟೆವು. ಸೋಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಿ೦ದ ಕೆಲವು ಮೈಲಿಗಳು ಕಚ್ಚಾ ರಸ್ತೆ ಕ್ರಮಿಸಿದರೆ ಸಿಗುವ ನಮ್ಮ ಹೊಲಕ್ಕೆ ಎತ್ತುಗಳ ಬ೦ಡಿಯಲ್ಲಿ ಹೋಗುವುದು ನಮಗೆಲ್ಲ ತು೦ಬಾ ಇಷ್ಟದ ಸ೦ಗತಿಯಾದ್ದರಿ೦ದ ಅಪ್ಪ ನಮ್ಮ ಗಾಡಿಯ ತು೦ಬ ಮೆತ್ತನೆಯ ಹಾಸುಗಳನ್ನು ಹಾಸಿಸಿ ಚ೦ದಗೊಳಿಸಿ ಹೆದ್ದಾರಿಯತ್ತ ಕಲಿಸುತ್ತಿದ್ದರು. ( ಊರ ಕಡೆಗೆ ಇದಕ್ಕೆ ಸವಾರಿ ಕಟ್ಟಿಸುವುದು ಎನ್ನುವ ರೂಢಿ) .ನಾವೆಲ್ಲಾ ಏರಿ ಕುಳಿತು ಟೆಲಿವಿಜನ್ ಬ೦ದಿಲ್ಲದಿದ್ದ ಆ ಕಾಲದಲ್ಲಿ ಥೇಟು ಹಿ೦ದೀ ಸಿನಿಮಾ ಹೀರೋಯಿನಗಳ೦ತೆ ಅ೦ದ೦ದಿನ ಪಾಪ್ಯುಲರ್ ಹಾಡುಗಳನ್ನು ಹಾಡಿದ್ದೇ ಹಾಡಿದ್ದು ..ಅದರಲ್ಲೂ ಒಬ್ಬಳು ತನಗೆ ಬರುತ್ತಿದ್ದ ಒ೦ದು ಹಾಡನ್ನು ಮರಮರಳಿ ಹಾಡುತ್ತಿದ್ದುದಕ್ಕೆ ಅವಳಿಗೆ ಟೂಟಾ ಗ್ರಾಮಾಫೋನ್ ರೆಕಾರ್ಡ್ ಎ೦ದು ಅನ್ವರ್ಥಕ ಹೆಸರನ್ನಿಟ್ಟಿದ್ದೆವು ! ಗಾಡಿಗೆ ಸಾಮಾನ್ಯವಾಗಿ ಸೂರ್ಯ ಚ೦ದ್ರರನ್ನು ಕಟ್ಟಿ ಕಳ- ಸುತ್ತಿದ್ದರು , ಹೆದ್ದಾರಿಯಲ್ಲಿ ಓಡಾಡುವ ಭಾರೀ ಲಾರಿಗಳ ಕ೦ಡು ಅವು ಅಷ್ಟಾಗಿ ಬೆದರದೆ ಇರುವುದನ್ನು ಅಭ್ಯಾಸ ಮಾಡಿಕೊ೦ಡಿದ್ದುವು .ಅದರಲ್ಲೂ ಸೂರ್ಯ ಕೊ೦ಚ ದಪ್ಪ , ಗು೦ಡಗಿನವನು ,ಚಂದ್ರ ತುಸು ಸೊಣಕಲು ಆದರೂ ಸದಾ ಜತೆಯಾಗಿರುವ ಅವೆರಡೂ ತಮ್ಮದೇ ಮೌನಸ೦ವಾದದಲ್ಲಿ ಹರಟೆ ಹೊಡೆಯುತ್ತಿದ್ದವು ಎ೦ದು ನನ್ನ ಗುಮಾನಿ !
ಹೀಗೆ ನಮಗಾಗಿ ಬ೦ದಿದ್ದ ಸೂರ್ಯ ಚ೦ದ್ರರ ರಥವೇರಿ ನಾವೆಲ್ಲಾ ಸವಾರಿ ಹೊರಟೆವು . ಇನ್ನೊ೦ದು ತಿ೦ಗಳಿನಲ್ಲಿ ಬರಲಿದ್ದ ವಾರ್ಷಿಕ ಪರೀಕ್ಸೆಯ ನೆನಪು ಸಹ ಮರೆತು ಶೀತನಿಯ ಗಮ್ಮತ್ತಿಗಾಗಿ ಗು೦ಪುಗೂಡಿ ಧಾವಿಸಿದ್ದರ ಸಿಹಿ ಸ್ಮೃತಿ ಇನ್ನೂ ಮನಸ್ಸಿನಲ್ಲಿ ನಿಚ್ಚಳವಾಗಿ ಕುಳಿತಿದ್ದರೂ ಅ೦ದು ನಡೆದ ಅಥವಾ ನಡೆಯಲಿದ್ದು ಕೂದಲೆಳೆಯಲ್ಲಿ ತಪ್ಪಿದ ದುರ್ಘಟನೆಯ ಕ೦ಪನವೂ ಸುಲಭದಲ್ಲಿ ಮರೆಯಾಗದು ! ಅದು ಹಾಗೆಯೇ ತಾನೇ ? ಹಾಡುತ್ತ ,ಕಿರುಚಾಡುತ್ತ ನಮ್ಮದೇ ಪ್ರಪ೦ಚದಲ್ಲಿ ಮುಳುಗಿದ್ದ ನಮ್ಮ ಗು೦ಪಿನಲ್ಲಿ ಅವನೊಬ್ಬನಿದ್ದ …ನನ್ನ ಗೆಳತಿಯ ತಮ್ಮ . ಅವನಿಗೆ ಶೀತನಿ ಬಹಳ ಇಷ್ಟ ಎ೦ದು ಕರೆತ೦ದಿದ್ದಳು . ಅವನಿಗೋ ಸೂರ್ಯನ ಕುದುರೆಯೊ೦ದನ್ನು ಬಿಟ್ಟು ಪ್ರಪ೦ಚದ ಎಲ್ಲಾ ವಾಹನಗಳನ್ನು ಚಲಾಯಿಸಬೇಕೆ೦ಬ ಹುಚ್ಚು ! ಹದಿನಾಲ್ಕರ ಅವನನ್ನು ಗದರಿ ಸುಮ್ಮನಿರಿಸುವುದೇ
ದೊಡ್ಡವರ ಕೆಲಸ … ಸರಿ ಸೂರ್ಯ ಚ೦ದ್ರರ ಮೇಲೆ ಪ್ರೀತಿ ಉಕ್ಕಿ ಬ೦ದು ಅವನು ಬ೦ಡಿ ಹೊಡೆಯುವವನ ಬಳಿಯೇ ಕೂತು ಲಗಾಮಿಗೆ ಕೈ ಹಚ್ಚಿ ಕಿರುಚಾಡುತ್ತ ತ್ರಪ್ತಿಪಟ್ಟುಕೊ೦ಡಿದ್ದ !
ತೋಟ ತಲುಪಿ ಇಳಿದು ಕೈ ಕಾಲು ತೊಳೆದಾದ ನ೦ತರ ಮನಸೋ ಇಚ್ಛೆ ಆಟಗಳಾಡಿ ಬಾವಿಯಲ್ಲಿಳಿದು ಮಜಾ ಪಡೆದಾಯಿತು …ತಮ್ಮ ಮೋಟರ್ ಬೈಕಿಗೆ ಎಣ್ಣೆ ಬಿಟ್ಟು ಪರೀಕ್ಷಿಸುತ್ತಿದ್ದ ಅಪ್ಪ ನಮ್ಮೆಲ್ಲರ ಗಲಾಟೆಯನ್ನು ಆನ೦ದಿಸುತ್ತಿದ್ದರು !! ಅರವತ್ತು ದಾಟಿದ ಅಪ್ಪ ಚಿಕ್ಕವರಿದ್ದಾಗ ಗರಡಿ ಸಾಮು ಮಾಡಿದ ಗಟ್ಟಿ ಜೀವ …
ಪೊಲೀಸ್ ಅಧಿಕಾರಿಯಾಗಿ ಅನೇಕ ಸಾಹಸಗಳನ್ನು ಮಾಡಿದವರು ! ಆದರೂ ವಯಸ್ಸಿನ ಪ್ರಭಾವ ಶರೀರದ ಮೇಲೆ ಆಗುವುದು ಸಹಜ ..
ಶೀತನಿಯೊ೦ದಿಗೆ ,ಉಬ್ಬೆಗೆ ಹಾಕಿದ ಸಿಹಿ ಗೆಣಸಿನ ಸ೦ಭ್ರಮವೂ ನಮಗಾಗಿ ಕಾದಿತ್ತು . ಬಿಸಿಬಿಸಿಯಾದ ಹಾಲುಗಾಳಿನ ಜೋಳ , ಅದರೊ೦ದಿಗೆ ಶೇ೦ಗಾ ಬೆಳ್ಳುಳ್ಳಿ ಕಾರದ ಚಟ್ನಿ , ಇ೦ಗುಪ್ಪು , ಹದವಾಗಿ ಬೆ೦ದ ಸಿಹಿ ಗೆಣಸಿಗೆ ಜೊತೆಯಾಗಿ ಹೆತ್ತುಪ್ಪ !! ಸ್ವರ್ಗಕ್ಕೆ ಕಿಚ್ಚು ಹಚ್ಚಲು ತಯಾರಾಗಿಬಿಟ್ಟೆವು ! ಮತ್ತೆ ಬೇಕಿದ್ದವರು ಮಜ್ಜಿಗೆ ಇನ್ನುಳಿದವರು ಕಬ್ಬಿನ ರಸ ಕುಡಿದೇ ತೂರಾಡುವ ಸ್ಥಿತಿಗೆ ಬ೦ದುಬಿಟ್ಟರು !ಎಗ್ಗಿಲ್ಲದ ನಗೆಯ ಬುಗ್ಗೆಗಳನ್ನು ಚಿಮ್ಮಿಸುತ್ತಾ ಕಂಠ ಮಟ್ಟ ತಿ೦ದಾದ ಮೇಲೆ ಕೆಲವು ಗೆಳತಿಯರಿಗೆ ಮನೆಯ ನೆನಪಾಗಿ ಹೋ೦ ಸಿಕ್ ಆಗತೊಡಗಿದರು ! ಇನ್ನು ಹೊರದಬೇಕು ಎನ್ನುವ ಗಡಿಬಿಡಿ ಎದ್ದಿತು .
ಅಪ್ಪನೊಡನೆ ಒ೦ದಿಷ್ಟು ಹರಟೆ ಮುಗಿಸಿ ನಮ್ಮ ಪಟಾಲ೦ ಬ೦ಡಿಯೇರಲು ಅಣಿಯಾಯಿತು. ಯಾಕೋ ಚಂದ್ರ ಕೊ೦ಚ ಇಳಿಮುಖ ಮಾಡಿಕೊ೦ಡಿತ್ತ೦ತೆ . ಅದಕ್ಕೇ ಇರಬೇಕು ಗಾಡಿ ಎಳೆಯಲು ಈಗ ಭೀಮ್ಯಾ ಪಾ೦ಡುರ೦ಗಿಯರ ಕೊರಳುಗಳು ಬ೦ಡಿಯ ನೊಗ ಹೊತ್ತವು . ನಮ್ಮ ಪಟಾಲ್೦ ಎಲ್ಲಾ ಗಾಡಿಯಲ್ಲಿ ಸೇರಿಕೊ೦ಡ ಅನ೦ತರ ಅಪ್ಪ ಹೇಳಿದರು “ನೀವೆಲ್ಲ ಹೊರಡಿ , ನಾನು ಹಿ೦ದೆಯೇ ಬರ್ತೀನಿ ” ಹಾಗೆ ಎತ್ತುಗಳ ಕೊರಳ ಗ೦ಟೆಯ ಗಣಗಣದೊಟ್ಟಿಗೆ ನಮ್ಮ ಗಾಡಿಮು0ದೊರೆದರೆ ಅಪ್ಪನ ಬೈಕು ನಿಧಾನವಾಗಿ ದೂರದಲ್ಲಿ ಹಿ೦ಬಾಲಿಸುತ್ತಿತ್ತು ..ಬೆಳಗಿನ ಹಾಡುಗಳಿಗೀಗ ಜೋರು ಕಡಿಮೆಯಾಗಿತ್ತು , ಒಬ್ಬಿಬ್ಬರಿಗೆ ಪರೀಕ್ಷೆಯ ನೆನಪೂ ಬ೦ದೇಬಿಟ್ಟು ನಾಳೆಯಿ೦ದ ಸರಿಯಾಗಿ ಓದಬೇಕು ಅ೦ತ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿರುವಾಗ ಯಾವ ಮಾಯದಲ್ಲೋ ನನ್ನ ಗೆಳತಿಯ ತಮ್ಮ ಬ೦ಡಿಗಾರನನ್ನು ಮೆಲ್ಲಗೆ ಪುಸಲಾಯಿಸಿ ಲಗಾಮನ್ನು ತನ್ನ ಕೈಯೊಳಗೆ ಇಸಿದುಕೊ೦ಡು ಎತ್ತುಗಳ ಮೇಲೆ ತನ್ನ ಚಾಲಕ ಚಾತುರ್ಯವನ್ನು ಬಳಸತೊಡಗಿದ್ದ ! …ನಮಗೂ ಹುಡುಗುಬುದ್ಧಿ …ಅದರಲ್ಲೇನೂ ವಿಶೇಷವೆನಿಸಲೇ ಇಲ್ಲ ..ಅದೂ ಅಲ್ಲದೇ ಗಾಡಿಕಾರ ಕೆಳಗಿಳಿದು ಎತ್ತುಗಳ ಜತೆಯಲ್ಲೇ ನಿಧಾನವಾಗಿ ನಡೆದು ಬರುತ್ತಿದ್ದುದನ್ನು ನೋಡಿ ಮತ್ತೆ ಹರಟೆಯಲ್ಲಿ ಮುಳುಗಿದೆವು . ಕೊ೦ಚ ದೂರ ದಿ೦ದ ಅಪ್ಪನ ಬೈಕು ಹಿ೦ಬಾಲಿಸುತ್ತಿತ್ತು .ಆಗ ಮಧ್ಯದಲ್ಲಿ ಎತ್ತುಗಳು ಇದ್ದಕ್ಕಿದ್ದ೦ತೆ ಬಲಗಡೆಗೆ ಹೊರಳುವುದನ್ನು ಶುರುಮಾಡಿದುವು , ಅವೇನೋ ಹಿ೦ದಿನ ವಾರವಿಡೀ ಬಲಗಡೆಯ ಹೊಲಕ್ಕೆ ಹೊರೆ ಹೊತ್ತು ಹೋಗಿದ್ದುವ೦ತೆ ..ಇ೦ದೂ ಅಷ್ಟೇ ಎ೦ದುಕೊ೦ಡವೋ ಏನೋ ಬಲ ಬಲಕ್ಕೆ ಜರುಗತೊಡಗಿದಾಗ ನಮ್ಮ ಪೋರನಿಗೆ ಲಗಾಮು ನಿಯ೦ತ್ರಣ ಮಾಡುವುದಾಗದೆ ಬಾರುಗೋಲಿನಿ೦ದ ಎತ್ತುಗಳನ್ನು ಬೀಸಿ ಬಡಿದ …ಅಷ್ಟೇ …ಅವೆರಡೂ ಅವನ ಹೊಡೆತಕ್ಕೆ ಬೆಚ್ಚಿ , ದಿಕ್ಕೆಟ್ಟು ಅಡ್ಡಾದಿಡ್ಡಿ ವೇಗವಾಗಿ ನಾಗಾಲೋಟಕ್ಕೆ ತೊಡಗಿದುವು … ಎಡಬಲಕ್ಕೆ ದಿಬ್ಬಗಳ೦ಥ ಕಲ್ಲು ಫಡಿಗಳ ದಾರಿ ….ಒ೦ದೇ ಕ್ಷಣದಲ್ಲಿ ಆ ಪರಿಸ್ಥಿತಿಯ ಭೀಕರತೆ ನಮ್ಮ ಅರಿವಿಗೆ ಬ೦ತು …ಗಾಡಿ ಯಾವುದೇ ಕ್ಷಣದಲ್ಲಿ ಆಯ ತಪ್ಪಿ ಕೆಳಗಿನ ತಗ್ಗಿಗೆ ಉರುಳಬಹುದಿತ್ತು …ಹಿ೦ದೆ ಓಡಿ ಬರುತ್ತಿದ್ದ ಶ೦ಕ್ರನ ದನಿಯನ್ನು ಎತ್ತುಗಳು ಕೇಳಿಸಿಕೊಳ್ಳಲೇ ಇಲ್ಲದ೦ತೆ ಓಟದಲ್ಲಿದ್ದುವು .ಮುಗಿಲು ಮುಟ್ಟಿತ್ತು ನಮ್ಮೆಲ್ಲರ ಕಿರುಚಾಟ -ಅಳು !!
ಆಗ ..ನಮ್ಮ ಅಪ್ಪ , ಅರವತ್ತು ದಾಟಿದ ಅಪ್ಪನ ಗಾಡಿ ಬ೦ತು …ಎಷ್ಟು ವೇಗವಾಗಿ ಬ೦ತೆ೦ದರೆ ಅಕ್ಕಪಕ್ಕದಲ್ಲಿದ್ದ ಕಲ್ಲು ಗು೦ಡಿ , ಚಪ್ಪಡಿಗಲ್ಲುಗಳ ಕೆಟ್ಟ ಏರಿಳಿವಿನಲ್ಲಿ ಎ೦ಬತ್ತು ಮೈಲಿಗಳ ವೇಗದಲ್ಲಿ ಸುಯ್ಯನೆ ತೂರಿ ಬ೦ತು !! ನಮ್ಮ ಬ೦ಡಿಯ ಬದಿಯಲ್ಲೇ ಓಡಿಸುತ್ತ, ಹೊಯ್ದಾಡುತ್ತಿದ್ದ ಅ ವಾಹನದ ಸಮತೋಲ ಕಾಯ್ದುಕೊಳ್ಳಲು ಯತ್ನಿಸುತ್ತಲೇ , ಹೆದರಿ ಚೀರುತ್ತಿದ್ದ ಹುಡುಗಿಯರಿಗೆ ಜೋಪಾನ ಹೇಳುತ್ತಲೇ ಧಾವಿಸಿ ಮು೦ದೆ ಹೋಗಿ ನಾಗಾಲೋಟದಲ್ಲಿದ್ದ ಎತ್ತುಗಳ ಮು೦ದಿನಿ೦ದ ಅಷ್ಟು ದೂರ ಸಾಗಿ ಹೊಯ್ದಾಡುತ್ತ ಸಮತೋಲನ ಕಾಯ್ದುಕೊ೦ಡು ನಿ೦ತಿತು.. ಬೆದರಿ ಕಕ್ಕಾಬಿಕ್ಕಿ ಅಗಿದ್ದ ಎತ್ತುಗಳಲ್ಲಿ ಒ೦ದು ಆ ಓಟದ ಆಯಾಸಕ್ಕೆ ಬಳಲಿ ಕುಸಿಯುವ ಹಾಗಾದಾಗ …ನಮಗೆಲ್ಲ ಮುಗ್ಗರಿಸಿದ೦ತೆ ಭಾಸವಾಯಿತು , ಅಷ್ಟರಲ್ಲಿ ಕೆಳಗಿಳಿದ ಅಪ್ಪ ತಮ್ಮೆರಡು ಕೈಗಳನ್ನು ಅಗಲಕ್ಕೆ ಚಾಚಿ ದಾರಿಗೆ ಅಡ್ಡವಾಗಿ ನಿ೦ತು ಭೀಮಾ , ಪಾ೦ಡ್ರ೦ಗೀ …ನಿಲ್ರಿ ..ನಿಲ್ರಿ ..ಹಾಪ್ ಹಾಪ್ ಎ೦ದು ಸ೦ಜ್ಞೆ ಗಳನ್ನು ತೋರುತ್ತಿದ್ದ೦ತೆ ಅವರ ಧ್ವನಿ ಕೇಳಿ, ಅವರನ್ನು ಎದುರಲ್ಲಿ ಕ೦ಡಾಗ ಗಕ್ಕನೆ ನಿ೦ತುಬಿಟ್ಟವು …!!
ಆವಾಗಿನ ಒ೦ದೆರಡು ಕ್ಷಣದ ಅನೂಹ್ಯ – ಭಯಭೀತ ನಿಷ್ಯಬ್ದತೆಯಲ್ಲಿಮಗೇನೂ ಆಗಿಲ್ಲವೆ೦ಬುದರ ಅರಿವು ಮೂಡಿ ಬರಲು ನಿಧಾನವಾಯಿತು ….ಬ೦ಡಿ ತಗ್ಗಿನಿ೦ದ ಅಡಿಗಳ ಅ೦ತರದಲ್ಲಿ ವಾಲಿ ನಿ೦ತಿತ್ತು !!
ತಾನು ಮಾಡಿದ ತಪ್ಪಿನ ಅಗಾಧತೆಯನ್ನರಿತೋ ಏನೋ ಥರಥರ ನಡುಗುತ್ತ ಅಳುತ್ತಿದ್ದ ಹುಡುಗನನ್ನು ಕೆಳಗಿಳಿಸಿ ಕ೦ಪಿಸುತ್ತಿದ್ದ ಎದೆಗಳೊ೦ದಿಗೆ ನಮ್ಮ ಗು೦ಪು ಕೆಳಗಿಳಿಯಿತು …
ಉಸಿರುಗಟ್ಟಿ ತೇಕುತ್ತಿದ್ದರೂ ಅಪ್ಪ ತಮ್ಮ ಆಯಾಸವನ್ನು ಬದಿಗಿಟ್ಟು ಭೀಮ ,ಪಾ೦ಡುಗಳ ಕೊರಳು ನೇವರಿಸುತ್ತ ಬೆನ್ನ ಮೇಲೆ ಕೈಯಾಡಿಸಿ ನಾಇದ್ದೀನಿ ….ನಾನಿದ್ದೀನಿ ಅ೦ಜಬೇಡಿ ಎ೦ಬ ಸ೦ದೇಶವನ್ನು ಕೊಡುತ್ತಿದ್ದ೦ತಿತ್ತು .. ಅವುಗಳ ಕಣ್ಣಲ್ಲೂ ನೀರು ಸತತವಾಗಿ ಸುರಿಯುತ್ತಿತ್ತು ,,ತಮಗೇನಾಯಿತು ಎ೦ದು ಹೇಳಲೂ ಬಾರದ ಮೂಕಜೀವಗಳು ! !ದಿಕ್ಕೆಟ್ಟಿದ್ದ ಪಾ೦ಡುರ೦ಗ ಆ ಆಯಾಸಕ್ಕೆ ಕುಸಿದು ಕೆಳಗೆ ಬಿತ್ತು !
ನಾವೆಲ್ಲ ಸುರಕ್ಷಿತರಾಗಿರುವುದನ್ನು ಖಚಿತಪಡಿಸಿಕೊ೦ಡ ಅಪ್ಪ ಎಲ್ಲರ ನ್ನೂ ಮಾತನಾಡಿಸಿ ಧೈರ್ಯ ತು೦ಬಿದರು …
ಆದರೆ..ಅರವತ್ತು ದಾಟಿದ ಅಪ್ಪ ನಮ್ಮೆಲ್ಲರ ಜೀವಗಳು ಅಪಾಯದಲ್ಲಿರುವುದನ್ನು ಕ೦ಡು ತಮ್ಮ ವಯಸ್ಸು , ಶಕ್ತಿಗಳ, ಸಾಮರ್ಥ್ಯಗಳನ್ನು ಗಣಿಸದೆ ಇಪ್ಪತ್ತರ ತರುಣರನ್ನು ನಾಚಿಸುವ ಬಗೆಯ ಸಾಹಸದಲ್ಲಿ ನಾಮ್ಮೆಲ್ಲರನ್ನೂ ರಕ್ಷಿಸಿದ್ದರ ಹಿ೦ದೆ ಇದ್ದದ್ದು ಪ್ರೀತಿಯಲ್ಲದೇ ಇನ್ನೇನು ?? ಆ ಋಣವನ್ನು ತೀರಿಸುವುದೆ೦ತು? ತಮ್ಮ ಬದುಕಿನ ಸ೦ಧ್ಯಾಕಾಲದಲ್ಲಿದ್ದ ಅಪ್ಪ ನಮ್ಮ೦ಥ ಎಳೆಯರಿಗೆ ” ನಾ ಇದ್ದೇನೆ ಅ೦ಜಬೇಡಿರಿ ” ಎನ್ನುತ್ತಲೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟದ್ದರ ಹಿ೦ದಿನ ವಾತ್ಸಲ್ಯದ ಆಳವನ್ನು ಅಳೆಯಬಲ್ಲೆವೇ ?
ಈಗಿಲ್ಲದ ಅಪ್ಪನ ನೆನಪುಗಳ ನಡುವೆನನ್ನ ಮನಸ್ಸು ಕನವರಿಸುತ್ತದೆ …..
“ಅಪ್ಪ ಅ೦ದ್ರೆ ಹೀಗೇನೇ ?”
ಹೌದು “ಅಪ್ಪ ಅ೦ದರೆ ಹೀಗೇ …”
 

‍ಲೇಖಕರು G

21 October, 2014

10 Comments

  1. Anitha

    ಅಪ್ಪ ಅಂದ್ರೆ ಹಾಗೇನೇ.
    ತಮ್ಮ ಮಕ್ಕಳ ರಕ್ಷಣೆಗಾಗೀ ತಮ್ಮ ಜೀವದ ಹಂಗು ತೊರೆದು, ಮಕ್ಕಳ ರಕ್ಷಣೆ ಮಾಡ್ತಾರೆ. ಮಕ್ಕಳನ್ನು ತಮ್ಮ ಕಣ್ಣ-ರಪ್ಪೆಯಲ್ಲಿಟ್ಟು ನೋಡ್ಕೋತಾರೆ.
    ನಿಮ್ಮ ಲೇಖನ ಓದಿದ ಮೇಲೆ ಈಗಿಲ್ಲದ ನನ್ನಪ್ಪನ್ನ ನೆನಪು ನನ್ನ ಕಾಡ್ತಾ ಇದೆ.

    • Jayashree deshpande

      Thank you Anitha.

  2. Anonymous

    very touching 🙂

    • Jayashree deshpande

      Thank you.

  3. Anil Talikoti

    ತುಂಬಾ ಚೆನ್ನಾಗಿದೆ!

    • Jayashree deshpande

      ಧನ್ಯವಾದಗಳು !!
      jayashree Deshpande.

  4. varsha

    beautiful. I remember eating ‘sheetani’ but luckily no such scary incidents! 🙂

  5. kashyap achar

    ನಿಜ ಅಪ್ಪ ಅಂದ್ರೆ ಹೀಗೆ ನೇ ….

  6. Bharathi b v

    ಚೆನ್ನಾಗಿದೆ

  7. ನಗುತಾನಲಿ

    ಉತ್ತಮ ಬರಹ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading