ವೈಶಾಲಿ ಹೆಗಡೆ
ಬಾಸ್ಟನ್, ಅಮೇರಿಕ
ಅಡಿಕೆ, ಒಂದು ಹೋಳು ಅಡಿಕೆಯಲ್ಲಿ ಒಂದಿಡೀ ಮದುವೆಯ ವಾಗ್ದಾನ ಮುಗಿಸಿದ್ದ ಕಾಲವೊಂದಿತ್ತು ನಮ್ಮಲ್ಲಿ. ಒಂದು ಅಡಿಕೆಯ ಮೌಲ್ಯ ಅದರ ಭಾರದಲ್ಲಾಗಲೀ, ಬಣ್ಣದಲ್ಲಾಗಲೀ, ಬೆಲೆಯಲ್ಲಾಗಲೀ ಇಂದಿಗೂ ಅಳೆಯಲು ಸಾಧ್ಯವಿಲ್ಲ. ಎಲೆಪಟ್ಟಿಯ ಮೇಲೆ ಒಂದು ಆಡಕೆ ಚೂರಿಟ್ಟು ಕೈಮುಗಿದರೆ ಆ ಗೌರವಕ್ಕಿರುವ ಬೆಲೆ ತಲತಲಾಂತರಗಳಿಂದಲೂ, ಇಂದಿಗೂ ಅದೇ! ಇರಲಿ ಬಿಡಿ ಇನ್ನು ಮುಂದೆ ಎಲೆಪಟ್ಟಿಯ ಮೇಲೆ ಸಿಗರೇಟು, ಬೀಡಿನೋ ಇಟ್ಟು ಕೊಟ್ಟರಾಯಿತು, ಎಂತ ಅಸಂಬದ್ಧ ಮಾತು ಅಲ್ಲವೇ? ಈ ಅಡಕೆ ಬ್ಯಾನ್ ಎಂಬ ಪ್ರಹಸನದ ಕಾಯಿದೆ ಕೂಡ ಅಷ್ಟೇ ಅಸಂಬದ್ಧ.
ಅಡಕೆ ಭಾರತದ ಸಾಂಸ್ಕೃತಿಕ, ವಾಣಿಜ್ಯ ಬೆಳೆಯಾಗಿ ಅನಾದಿ ಕಾಲದಿಂದ ಬೆಳೆದುಕೊಂಡು ಬರುತ್ತಿದೆ. ಎಲೆ-ಅಡಿಕೆ ಸಂಪ್ರದಾಯ ಇಂದಿನದ್ದಲ್ಲ, ಹರಪ್ಪ ನಾಗರೀಕತೆಯ ಅವಶೇಷಗಳಲ್ಲಿ ಎಲೆ-ಅಡಿಕೆಯ ಚಿತ್ರಗಳಿವೆ, ಉಲ್ಲೇಖಗಳಿವೆ. ಮಾನವ ನಾಗರೀಕನಾಗುವ ಪಥದೊಂದಿಗೆ ಉಗಮವಾದ ಎಲೆ ಅಡಿಕೆ ಸಾಂಸ್ಕೃತಿಕವಾಗಿ ಹಾಸುಹೊಕ್ಕಾಗಿ ಹೆಣೆದುಕೊಂಡು ಬಂದಿದೆ. ಭಾರತವಷ್ಟೇ ಅಲ್ಲದೆ, ಏಷ್ಯಾದ ಭೂತಾನ್, ಚೀನಾ, ಬಾಂಗ್ಲಾದೇಶ, ಮಲಯ ಇತ್ಯಾದಿ ಸಮಶೀತೋಷ್ಣ ರಾಷ್ಟ್ರಗಳು ಮತ್ತು ಆಫ್ರಿಕಾದ ಕೆಲವೆಡೆಗಳಷ್ಟೇ ಇದು ಬೆಳೆಯುತ್ತದೆ. ಗಮನಿಸುವ ಅಂಶವೆಂದರೆ, ಇದು ಬೆಳೆವ ಎಲ್ಲ ರಾಷ್ಟ್ರಗಳಲ್ಲೂ ಎಲೆ-ಅಡಿಕೆಯನ್ನು ಗೌರವದ ಸಂಕೇತವಾಗಿ ಬಳಸಲಾಗುತ್ತೆ, ವಿಯೆಟ್ನಾಂ, ಭುತಾನ್, ಮಲಯಾದ ಮದುವೆಗಳಲ್ಲಿ ನಮ್ಮಲ್ಲಿಯಂತೆಯೇ, ಎಲೆ ಅಡಿಕೆಯ ಮುಂದಿಡದೆ ಮಾತುಕತೆ ಆಗುವುದೇ ಇಲ್ಲ. ಚೀನಾದ ಪುರಾತನ ಆರೋಗ್ಯ ಮತ್ತು ಔಷಧ ಸಂಹಿತೆಗಳಲ್ಲಿ, ಭಾರತದ ಆಯುರ್ವೇದದಲ್ಲಿ ಅಡಕೆಯ ಬಳಕೆಯಿದೆ. ಇನ್ನೂ ಒಂದು ಆಸಕ್ತಿದಾಯಕ ವಿಚಾರವೆಂದರೆ, ಇವೆಲ್ಲವೂ ಮೂಲದಲ್ಲಿ ಹಿಂದೂ ರಾಷ್ಟ್ರಗಳು ಇಲ್ಲ ಬೌದ್ಧ ಧರ್ಮೀಯವು. ಹಾಗಾಗಿ ಆ ನೆಲದ ಮೂಲ ಸಂಸ್ಕೃತಿಗೆ ಮಾತ್ರ ಅಡಕೆಯ ಬಳಕೆ ಸೀಮಿತವಾಗಿದೆ.
ಹಾಗಿದ್ದರೆ ಈಗ ಕೊಂಡಿ ತಪ್ಪಿದ್ದೆಲ್ಲಿ? ಆಗಿನಿಂದಲೂ ಲಘು ಮಾದಕ ವಸ್ತುವಾಗಿ, ಜೀರ್ಣಕಾರಿಯಾಗಿ ಬಳಕೆಯಲ್ಲಿದ್ದ ಅಡಕೆ, ಎಂದಿಗೂ ಮುಖ್ಯಬೆಳೆಯಾಗಿರಲಿಲ್ಲ. ಅಲ್ಲಲ್ಲಿ ಪಾನ್ ಅಂಗಡಿಗಳಲ್ಲಿ ಸಣ್ಣಗೆ ಬಿದ್ದುಕೊಂಡು ಅಗಿದು ನುಜ್ಜಾಗಿ ಚರಂಡಿಗಳ ಚಾದರವಾಗುತ್ತಿದ್ದ ಕೆಂಪುರಸ ಇಂದು ಹಲವರ ಕಣ್ಣು ಕೆಂಪಾಗಿಸಿರುವುದೇಕೆ? ಅಂತರಾಷ್ಟ್ರೀಯ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಅಡಕೆಯಲಿ ಯಾವುದೇ ಜೀವಸತ್ವವಿಲ್ಲ, ಕ್ಯಾನ್ಸರ್ ಕಾರಿ. ಸರಿ. ಒಪ್ಪಿಕೊಳ್ಳೋಣ. ತಂಬಾಕಿಗಿಂತ ಕೆಟ್ಟದ್ದೇ ಹಾಗಾದರೆ? ಖಂಡಿತ ಅಲ್ಲ. ಒಂದು ಸಾಧ್ಯತೆ ಅಷ್ಟೇ. ತಮ್ಬಾಕಿನಂತೆ ಮಾರಕವಲ್ಲ. ಆಹಾ.. ಇಲ್ಲೇ ಇದೆ ಸ್ವಾರಸ್ಯ. ನಮ್ಮಲ್ಲೆಷ್ಟು ಜನರಿಗೆ ಗೊತ್ತು, ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ತಂಬಾಕು ಉತ್ಪಾದಿಸುವ ದೇಶ ಎಂದು! ತಂಬಾಕು ಒಂದರಿಂದಲೇ ಭಾರತ ಸರ್ಕಾರದ ಆದಾಯ ೭೦ ಬಿಲಿಯನ್ ರೂಪಾಯಿಗಳು! ಎಷ್ಟು ಸೊನ್ನೆಯಾಯಿತು ನೀವೇ ಜೋಡಿಸಿಕೊಳ್ಳಿ. ಹಾಗಿದ್ದರೆ ತಂಬಾಕಿಗಿಲ್ಲದ ಬ್ಯಾನ್ ಅಡಕೆಗೇಕೆ? ಸ್ವಲ್ಪ ಬುದ್ಧಿ ಖರ್ಚು ಮಾಡಿದರೂ ಸಾಕು ಇದೇನು ಮೊನ್ನೆ ಮಂಗಳಯಾನಕ್ಕೆ ನೌಕೆ ಬಿಟ್ಟಷ್ಟು ಕಷ್ಟವಲ್ಲ, ಲೆಕ್ಕಾಚಾರ.
ಇಡೀ ಜಗತ್ತಿನ ತಂಬಾಕಿನ ಚಟದ ಮಹಾಪಾಲು ಉತ್ಪಾದಿಸುವ ಭಾರತದಲ್ಲಿ ಸಣ್ಣ ಪುಟ್ಟ ಚಟ ಮಾಡಿಕೊಂಡಿದ್ದವರು ಸಿಗರೇಟು, ಬೀಡಿ ಬಿಟ್ಟು ಗುಟ್ಕಾ ದಾಸರಾದರು. ಗುಟ್ಕಾ ಕಂಪನಿಗಳು ನಾಯಿಕೊಡೆಗಳಂತೆ ಬೆಳೆದವು. ಅಡಕೆಯ ಹೆಸರಿನಲ್ಲಿ ಗುಟ್ಕಾ ಕಂಪನಿಗಳು ಪಾಪದ ಅಡಕೆಯ ಬಡಿವಾರವನ್ನು ಬಣ್ಣ ಬಣ್ಣದ ಕಾಗದಗಳಲ್ಲಿ ಮಣ್ಣು ಮಸಿಯೊಂದಿಗೆ ಮಾರಿದರು. ನಮ್ಮ ಜನರೂ ಇದ್ದಕ್ಕಿದ್ದಂತೆ ಏರಿದ ಅಡಕೆಯ ಬೆಲೆಯಿಂದ ಏರಿದ ಬೇಡಿಕೆಯ ಬಗ್ಗೆ ಸ್ವಲ್ಪವೂ ವಿವೇಚನೆ ಮಾಡದೆ ಇದ್ದ ಭತ್ತದ ಗದ್ದೆಗಳ ಮುಚ್ಚಿ, ಬೇಣದ ಏರಿ ಕಡಿದು, ದರಕಿನ ಕಾಡು ಸವರಿ ಅಡಕೆ ನೆಟ್ಟರು. ತಮ್ಮಷ್ಟಕ್ಕೆ ತಿಂದುಂಡು ಸುಖವಾಗಿದ್ದವರ ಕೈತುಂಬಾ ನೋಟುಗಳ ಹಸಿರು. ಈಗ ವಿಷದ ನೆತ್ತರಿಗೆ ಅಡಕೆಯ ಹೆಸರು! ಆದರಿದು ಇಂತ ಸರಳ ಆರೋಗ್ಯಕಾರೀ ಉದ್ದೇಶದ ಕಾಯ್ದೆಯಲ್ಲ.

ಸಿಗರೇಟಿಗೆ ಹೋಲಿಸಿದರೆ ಗುಟ್ಕಾದಲ್ಲಿ ತಗಲುವ ತಂಬಾಕು ತುಂಬಾ ಕಡಿಮೆ. ಅದೂ ಅಲ್ಲದೆ ಅದು ಉತ್ತಮ ಗುಣಮಟ್ಟದ್ದೆ ಆಗಿರಬೇಕು, ಸರಿಯಾದ ರೀತಿಯಲ್ಲಿ ಸಂಸ್ಕರಿಸಿದ್ದೆ ಆಗಿರಬೇಕು ಎಂದೇನೂ ಇಲ್ಲ. ಉತ್ಪಾದನಾ ವೆಚ್ಚ ಸಿಗರೇಟಿಗೆ ಹೋಲಿಸಿದರೆ ಅತಿ ಕಡಿಮೆ ಹಾಗಾಗಿ ಒಂದಿ ಸಿಗರೇಟಿನ ಬದಲು ಹತ್ತು ಪಾಕೀಟು ಗುಟ್ಕಾದಲ್ಲಿ ಇಡೀ ದಿನ ಚಟ ಮಾಡಬಹುದು! ಯಾರಿಗೆ ಬೇಡ? ಅದೂ ಭಾರತದಂತ ಬಡ ದೇಶದಲ್ಲಿ? ಹಾಗಾಗಿ ಇದು ಗುಟ್ಕಾ ಕಂಪನಿಗಳಿಗೆ ಲಾಭವಾದರೂ, ತಮ್ಬಾಕಿನವರಿಗೆ ಜೋರಿನ ಹೊಡ್ತವೇ. ಸಿಗರೇಟಿನ ರೂಪದಲ್ಲಿ ಸಿಗುತ್ತಿದ್ದದ್ದು, ಸ್ಮೋಕಿಂಗ್ ಇಸ್ ಇನ್ಜುರಿಯಸ್ ಟು ಹೆಲ್ತ್ ಪ್ರಚಾರ ಕಾರ್ಯದಿಂದಾಗಿ ಬಹಳಷ್ಟು ಚಟಗಾರರ ಬಾಯಿಗಳು ತಂಬಾಕಿನ ಈ ಹೊಸ ಅವತಾರದತ್ತ ಹೊರಳಿದವು. ಅದೂ ಅಲ್ಲದೆ ಅಗ್ಗದ ಸುಗ್ಗಿ. ಈಗ ಗುಟ್ಕಾ ತಿಂದು ಕಂಡಕಂಡಲ್ಲಿ ಹಾರಿದ ಪಿಚಕಾರಿಯ ಕೆಂಪುರಸ ಸಿಗರೇಟಿನವರ ಕಣ್ಣಲ್ಲಿ ಬಿದ್ದಿದೆ. ಅಡಕೆಯನ್ನೇ ನಿರ್ನಾಮ ಮಾಡಿದರೆ, ಗುಟ್ಕಾ ಎಲ್ಲಿಂದ ತಯಾರಿಸಿಯಾರು? ಸಿಗರೇಟಿನ ಮೇಲೆ ಈಗಾಗಲೇ ಇರುವ ದರ ಏರಿಕೆ, ತೆರಿಗೆ ಏರಿಕೆ, ಆದರೆ ಇದೇನು ಸಿಗರೇಟಿನ ಮಾರಾಟವನ್ನು ತಡೆಯಲಾರದು. ಯಾಕೆಂದರೆ ಗೊತ್ತು ಈ ತಂಬಾಕಿನವರಿಗೆ, ಚಟಕ್ಕೆ ಬಿದ್ದ ಬಾಯಿ, ಹರಿಯಲು ಪ್ಯಾಕೆಟ್ ಸಿಗದಿದ್ದರೆ, ಸುಡಲೊಂದು ತುರುಕಿಕೊಳ್ಳುತ್ತದೆ. ಅಗ್ಗದ ಗುಟಕಕ್ಕೆ ಹೋಲಿಸಿದರೆ ಈಗ ಹತ್ತರಷ್ಟು ಲಾಭ! ಆದರೆ ಅಡಕೆಗೆ ಇದು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಪರಿಸ್ಥಿತಿ.
ಇಂದು ಯಾವದ ದೇಶವೂ ಸರ್ಕಾರವೂ ಮುಂಚಿನಂತೆ ದೇಶ ದೇಶಗಳ ಇತಿಮಿತಿಯ ಗಡಿಯೊಳಗೆ ಆಡಳಿತ ನಡೆಸುತ್ತಿಲ್ಲ. ಜಗತ್ತಿನ ಆಡಳಿತ ನಡೆಯುವುದೇ ಬೇರೆ ಬಗೆಯಲ್ಲಿ. ಕಾರ್ಪೋರೆಟ್ ಘಟಾನುಘಟಿಗಳು ತಮ್ಮಲ್ಲೇ ವಿಂಗಡಿಸಿಕೊಂಡ ಮಾರ್ಕೆಟಿಂಗ ಗಡಿರೇಖೆಗಳ ನಡುವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಂಬಾಕು ಹಾನಿಕಾರಕ ಎಂದು ಪ್ರಚಾರ ಪ್ರಾಮುಖ್ಯತೆ ಪಡೆದು, ಮುಂಚಿನಂತೆ ಸಾರ್ವಜನಿಕ ಸ್ಥಳಗಳಲ್ಲೆಲ್ಲೂ ಸಿಗರೇಟು ಸೇದಲು ಅವಕಾಶವಿಲ್ಲದೆ, ಜನರಲ್ಲಿಯೂ ಒಂದು ಕಾಳಜಿ, ಆರೋಗ್ಯಪ್ರಜ್ಞೆ ಹೆಚ್ಚಿ ಸಿಗರೇಟಿನ ದಾಸರು ಕಡಿಮೆಯಾಗುತ್ತಿರುವುದರಿಂದ ಸಹಜವಾಗಿಯೇ ಈ ಉದ್ದಿಮೆ ಮುಂಚಿನಿಂದ ತಂಬಾಕಿನ ಚಟ ಹತ್ತಿಸಿಕೊಂಡ, ಸುಲಭ ಸಾಧ್ಯ ಹರಕೆಯ ಕುರಿಗಳನ್ನ ಹುಡುಕುತ್ತಿದೆ. ಬಡ ದೇಶಗಳ ಬೆನ್ನೆಲುಬಿಲ್ಲದ ಜನಪ್ರತಿನಿಧಿಗಳ ಬಾಯಿ ಮುಚ್ಚಿಸುವುದು ಇಂತ ಜಾಗತಿಕ ದೈತ್ಯರಿಗೆ ರಸಗವಳ ತಿಂದಷ್ಟೇ ಸುಲಭ. ಇದು ಉಳಿವೋ ಅಳಿವೋ, ಈ ಆಟವನ್ನು ಅದರದ್ದೇ ರೀತಿಯಲ್ಲಿ ಆಡಬೇಕಾದ ಕಾಲ. ಯಾಕೆಂದರೆ ಇಲ್ಲಿ ಮೂಲಧನ ಒಂದೇ, ಚಟದ ಮೇಲಿನ ನಂಬಿಕೆ. “A faith in addiction.”
ಅಡಕೆ ಉಳಿಯಬೇಕೆಂದರೆ ಅಡಕೆಯ ಬಳಕೆ ಜಾಗತಿಕವಾಗಬೇಕು. ಅಡಕೆಯ ಉಪಯೋಗವನ್ನು ಶಕ್ತಿಯುತ ಲಾಬಿಯಾಗಿಸಬೇಕು. ಸಾಂಸ್ಕೃತಿಕ ರಾಯಭಾರಿತ್ವದ ಜೊತೆಗೆ ಅಡಕೆಯ ಇತರ ಉಪಯೋಗಗಳನ್ನು ವಾಣಿಜ್ಯವಾಗಿಸಬೇಕು. ಅಡಕೆಯ ಬಳಕೆ ಚಟವಾನರ ನಂಬಿಕೆಯ ಮೆಲೊಂದೆ ಬದುಕು ನಡೆಸುವ ಭ್ರಮೆ ಬಿಟ್ಟು ಇತರ ಬೆಳೆಗಳನ್ನು ಮುಂಚಿನಂತೆ ಬೆಳೆಯಬೇಕು. ಜಾಗತಿಕವಾಗಿ ದೇಶ ದೇಶಗಳ ಅಡಕೆ ಬೆಳೆಗಾರರು ಒಂದಾಗಬೇಕು. ಯಾಕೆಂದರೆ ಸದ್ಯ ಅಡಕೆ ಬೆಳೆಯುತ್ತಿರುವ ದೇಶಗಳೆಲ್ಲ ಬಡ ಇಲ್ಲವೇ ಸದಾ ಮುಂದುವರಿಯುತ್ತಿರುವ ಪಟ್ಟಿಯಲ್ಲಿರುವ ರಾಷ್ಟ್ರಗಳು. ಇಂದು ಭಾರತದಲ್ಲಿನ ಪರಿಸ್ಥಿತಿ ಇತರ ದೇಶಗಳಿಗೂ ಖಂಡಿತ ಬರಬಹುದು. ಯಾಕೆಂದರೆ, ಇದು ತಂಬಾಕಿನ ಜಾಗತಿಕ ಉದ್ದಿಮೆಯ ಅಸ್ತಿತ್ವದ ಪ್ರಶ್ನೆ. ಅಡಕೆಯೂ ಜಾಗತಿಕವಾಗಿ ತನ್ನ ಪರವಾಗಿ ವಕೀಲಿಕೆ ನಡೆಸದ ಹೊರತು ಈ ತೂಗುಕತ್ತಿ ಇಂದು ತಪ್ಪಿದರೂ ಮುಂದೊಂದು ದಿನ ಮತ್ತೆ ಕುಯ್ಯಲು ಬರುವಂಥದ್ದೇ. ಅಡಕೆ ಅಷ್ಟು ಸಶಕ್ತವಾಗಬೇಕು. ಅದು ವಖಾರಿಗೆ ಎರಡು ಗಾಡಿ ಅಡಕೆ ಹೊಡೆಸಿ, ಎಣಿಸಿದ ದುಡ್ಡಲ್ಲಿ ೪ ರೆಮ್ಮಿ ಆಡಿ ಸಂಜೆ ಮನೆಗೆ ಹೋಗಿ ಬಿದ್ದುಕೊಂಡರೆ ದಕ್ಕುವುದಿಲ್ಲ. ಇವೆಲ್ಲಕ್ಕೆ ನಮ್ಮ ಬೆಳೆಗಾರರಲ್ಲಿ ಜಾಗತಿಕ ವಾಣಿಜ್ಯದ, ವ್ಯಾಪಾರದ ಕಲ್ಪನೆ, ಜ್ಞಾನ ಬರಬೇಕು. ಮುಂದಾಳತ್ವ ಇರಬೇಕು. ಇವನ್ನೆಲ್ಲ ಸಾಧಿಸಬೇಕೆಂದರೆ, ಇಷ್ಟು ದಿನ ನಡೆಸಿದ ಗುಟ್ಕ ಕಂಪನಿಗಳಿಗೆ ಅಡಕೆ ಮಾರುವ ಒಂದೇ ಉದ್ದೇಶವಲ್ಲದೆ ಅದರಾಚಿನ ಸಾಧ್ಯತೆಗಳ ಬಗ್ಗೆ ಇಂದಿನ ಬೆಳೆಗಾರರು ಯೋಚಿಸಬೇಕು. ನಮ್ಮ ಬೆಳೆಯ ಬಗ್ಗೆ ನಮಗೆ ಪ್ರೀತಿ ಇದ್ದರಷ್ಟೇ ಸಾಲದು, ಅದನ್ನು ಉಳಿಸಿಕೊಳ್ಳುವ ಚಾಲಾಕಿತನವೂ ಬೇಕು.






Good one.
Even in the underworld to kill people they use supaari giving, adike! quite interesting! dont misunderstand my words, just to mention how it is!
The carcinogenic additives in Gutkha should be banned, not the supari. If the Govt. is really serious of avoiding carcinogen usage, why does it not ban tobacco? Further, there are many allopathic medicines which have been proved to be dangerous to human/animal health. Why doesn’t the Govt. ban all these? It succumbs to the greed of MNCs.
ತುಂಬಾ ಆಸಕ್ತಿದಾಯಕ ಲೇಖನ -‘ಇಲ್ಲಿ ಮೂಲಧನ ಒಂದೇ, ಚಟದ ಮೇಲಿನ ನಂಬಿಕೆ’ ಮತ್ತು ಲಾಭ – ಸರಿಯಾದ ಮಾತು
-ಅನಿಲ ತಾಳಿಕೋಟಿ
ಜಾಗತೀಕರಣ ಹುಟ್ಟು ಹಾಕಿದ ನೂರೆಂಟು ಸವಾಲುಗಳಲ್ಲಿ ಇದು ಒಂದು.
“ಜಗತ್ತಿನ ಆಡಳಿತ ನಡೆಯುವುದೇ ಬೇರೆ ಬಗೆಯಲ್ಲಿ. ಕಾರ್ಪೋರೆಟ್ ಘಟಾನುಘಟಿಗಳು ತಮ್ಮಲ್ಲೇ ವಿಂಗಡಿಸಿಕೊಂಡ ಮಾರ್ಕೆಟಿಂಗ ಗಡಿರೇಖೆಗಳ ನಡುವೆ.” ಈ ನಿಮ್ಮ ಮಾತು ನಿಜಕ್ಕೂ ಸತ್ಯ. ಕಾರ್ಪೋರೆಟ್ ಘಟಾನುಘಟಿಗಳೇ ಇವತ್ತಿನ ನಮ್ಮ ಕೆಲವು ಪಕ್ಷಗಳ ಚುನಾವಣೆ ಖರ್ಚು ವೆಚ್ಚ ನೋಡಿಕೊಳ್ಳುತ್ತಿರುವಾಗ, ಅಂತಹ ಪಕ್ಷಗಳಿಂದ ಆಯ್ಕೆಯಾದ ಮುಖಂಡರಿಂದ ಅದ್ಯಾವ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲಾದೀತು.? ಅಡಕೆ, ಅದರ ಅಸ್ತಿತ್ವ ಈ ಬಗ್ಗೆ ಒಂದು ಗಂಭೀರ ಚರ್ಚೆ ಹುಟ್ಟು ಹಾಕಿ, ಅಡಕೆ ಬೆಳೆಗಾರರನ್ನು ಒಗ್ಗೂಡಿಸಿದಾಗ ನ್ಯಾಯ ಸಿಗಬಹುದೇನೋ. ಮತ್ತು ಅಡಕೆಯನ್ನು ಒಳ್ಳೆಯದಕ್ಕೆ ಬಳಸುವಂತಾಗಬೇಕು.
-ಗವಿಸಿದ್ಧ ಹೊಸಮನಿ