ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪೂರ್ವ ಭಾವಲೋಕಕ್ಕೆ ನಮ್ಮನ್ನೊಯ್ಯುವ ‘ಮುಖಮುದ್ರೆ’

ಎ ಎನ್ ಮುಕುಂದ್

ಛಾಯಾಗ್ರಹಣಕ್ಕೆ ವಿಶಿಷ್ಟ ವ್ಯಾಖ್ಯಾನ ನೀಡುವ

ಎ.ಎನ್.ಮುಕುಂದ ಅವರ ‘ಮುಖ ಮುದ್ರೆ’

ಡಾ.ಪಾರ್ವತಿ ಜಿ.ಐತಾಳ್ / ಕುಂದಾಪುರ  

ಛಾಯಾಗ್ರಹಣ ಅನ್ನುವುದನ್ನು ಒಂದು ಅಪ್ಪಟ ಸೃಜನಶೀಲ ಕಲೆಯನ್ನಾಗಿಸಬಹುದು ಎಂದು ನನಗನ್ನಿಸಿದ್ದು ಎ.ಎನ್.ಮುಕುಂದರ ವಿಶಿಷ್ಟ ಕೃತಿ ‘ಮುಖಮುದ್ರೆ’ಯನ್ನು ಓದಿದಾಗಲೇ. 106 ಪುಟಗಳ ದಪ್ಪ ರಟ್ಟಿನ ರಕ್ಷಾಕವಚವಿರುವ ಇದು ಇತರ ಪುಸ್ತಕಗಳಿಗಿಂತ ಆಕಾರ, ಗಾತ್ರ, ಬಳಸಿದ ಕಾಗದಗಳ ಗುಣಮಟ್ಟ ಮತ್ತು ಒಟ್ಟು ಶರೀರ ರಚನೆಯಿಂದಲೇ ಪೂರ್ತಿಯಾಗಿ ಭಿನ್ನ ಸ್ವರೂಪದ್ದು.

ಕನ್ನಡ ಸಾಹಿತ್ಯ ಲೋಕದ 50 ಮಂದಿ ಅಗ್ರಮಾನ್ಯ ಲೇಖಕರ ಸುಂದರ ಭಾವಚಿತ್ರಗಳು ಎಡ ಬದಿಗಾದರೆ ಬಲ ಬದಿಯಲ್ಲಿ ಅವರ ಕುರಿತಾದ ಕೆಲವು ಸ್ಥೂಲ ಮಾಹಿತಿಗಳೂ ಅವರನ್ನು ಭೆಟ್ಟಿಯಾಗಲು ಹೋದಾಗ ಲೇಖಕರಿಗಾದ ಅನುಭವಗಳ ಸಂಕ್ಷಿಪ್ತ ವಿವರಣಗಳೂ ಇವೆ. ಎಸ್. ದಿವಾಕರ್ ಅವರಂಥ ಹಿರಿಯ ವಿಮರ್ಶಕರ ಮುನ್ನುಡಿ ಮತ್ತು ಚಿತ್ರರಂಗದ ಒಳ-ಹೊರಗುಗಳನ್ನು ಚೆನ್ನಾಗಿ ಬಲ್ಲ ಹಿರಿಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಹಿನ್ನುಡಿಗಳಿವೆ.

ಬಹಳ ಎಳೆಯ ವಯಸ್ಸಿನಲಿಯೇ ಛಾಯಾಗ್ರಹಣದ ಬಗ್ಗೆ ಅಪಾರ ಕುತೂಹಲವನ್ನು ಬೆಳೆಸಿಕೊಂಡು ಬಂದ ಮುಕುಂದ್ ಹವ್ಯಾಸಕ್ಕೋಸ್ಕರ ಖರ್ಚು ಮಾಡಲು ಕೈಯಲ್ಲಿ ದುಡ್ಡಿಲ್ಲದ ವಿದ್ಯಾರ್ಥಿ ಜೀವನ ಕಾಲದಲ್ಲಿ (1970ರ ದಶಕ) ಅವರಿವರ ಕೃಪೆಯಿಂದ ಆಗಿನ ಕಾಲಕ್ಕೆ ವಿಶೇಷವೆನಿಸಿದ ತಂತ್ರಗಳಿದ್ದ ಕೆಮರಾಗಳನ್ನು ಬಳಸಿ ತಜ್ಞ ಛಾಯಾಗ್ರಾಹಕರ ಸಖ್ಯ ಬೆಳೆಸಿಕೊಂಡು ಫೋಟೋಗ್ರಫಿಯ ಬಗ್ಗೆ ಜಿಜ್ಞಾಸೆ ಬೆಳೆಸಿಕೊಂಡದ್ದು ಮುಂದೆ ಅವರನ್ನು ಇತರ ಸಾಮಾನ್ಯ ಫೋಟೋಗ್ರಾಫರ್‍ಗಳಿಗಿಂತ ಭಿನ್ನ ದಾರಿಯನ್ನು ಹಿಡಿಯುವಂತೆ ಮಾಡಿತು ಎಂದು ಮುಕುಂದ್ ತಮ್ಮ ಪ್ರಸ್ತಾವನೆಯಲ್ಲಿ ಹೇಳಿಕೊಳ್ಳುತ್ತಾರೆ.

ವೃತ್ತಿನಿರತ ಛಾಯಾಗ್ರಾಹಕರ ಮುಂದೆ ಫೋಟೋ ತೆಗೆಸಿಕೊಳ್ಳಬಯಸುವವರು ನಿರ್ದಿಷ್ಟ ಪೋಸುಗಳನ್ನು ಕೊಡುತ್ತಾರೆ.  ಫೋಟೋ ತಾವು ನಿಜವಾಗಿ ಇರುವುದಕ್ಕಿಂತಲೂ ಚೆನ್ನಾಗಿರಬೇಕೆಂದು ಬಯಸುತ್ತ ಒಳಗಿನಿಂದ ನಿಜವಾಗಿ ಏನು ಅಲ್ಲವೋ ಅಂತಹ ಮುಖವಾಡಗಳನ್ನು ಧರಿಸುತ್ತಾರೆ. ವ್ಯಾಪಾರಿ ದೃಷ್ಟಿಯಿಂದ ಫೋಟೋ ತೆಗೆಯುವ ವೃತ್ತಿನಿರತ ಫೋಟೋಗ್ರಾಫರುಗಳ ಅಂಥ ಕೆಲಸಕ್ಕೆ  ಹೆಚ್ಚು ಸೃಜನಶೀಲತೆ ಬೇಕಿಲ್ಲ. ತಾಂತ್ರಿಕ ಪರಿಣತಿ ಇದ್ದರೆ ವಸ್ತುವಿನ ಬಗ್ಗೆ ಗಮನವಿಲ್ಲದಿದ್ದರೂ ಕ್ಲಿಕ್ ಮಾಡಬಹುದು.

ಆದರೆ ಒಬ್ಬ ಸೃಜನಶೀಲ ಹವ್ಯಾಸಿ ಛಾಯಾಗ್ರಾಹಕನ ಉದ್ದೇಶಗಳೇ ಬೇರೆ. ಈ ಕುರಿತು ಸಾಕಷ್ಟು ಪಾಶ್ಚಾತ್ಯ ಕೃತಿಗಳನ್ನೂ ಓದಿ ತಮ್ಮ ಸಿದ್ಧಾಂತಗಳನ್ನು ರೂಪಿಸಿಕೊಂಡ ಮುಕುಂದ್ ಅವರಿಗೆ ಒಬ್ಬ ವ್ಯಕ್ತಿಯ ಭಾವಚಿತ್ರಗಳನ್ನು (ಪೋರ್ಟೈಟ್ ಫೋಟೋಗ್ರಫಿ) ತೆಗೆಯುವುದರಲ್ಲಿ ಆಸಕ್ತಿ. ನಿಜವಾದ ಭಾವಚಿತ್ರವು ಆ ವ್ಯಕ್ತಿಯ ವ್ಯಕ್ತಿತ್ವವನ್ನೂ ಬಿಂಬಿಸಬೇಕು, ನೋಡುಗರಿಗೆ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಹೇಳಬೇಕು ಎಂಬುದು ಅವರ ನೀತಿ. ಒಂದು ರೀತಿಯಿಂದ ಅದು ‘ವ್ಯಕ್ತಿತ್ವ ಚಿತ್ರ’ವೂ ಹೌದು, ಎಂದು ಅವರೇ ಹೇಳುತ್ತಾರೆ.

ಮುಕುಂದ್ ಅವರೇ ಹೇಳುವಂತೆ ಫೋಟೋ ತೆಗೆಯುವುದೆಂದರೆ ಅದು ವಸ್ತು ಮತ್ತು ಕಲಾವಿದನ ನಡುವಣ ಒಂದು ರೀತಿಯ ಸಂಘರ್ಷ. ಸಾಮಾನ್ಯವಾಗಿ ಮನುಷ್ಯ ಇತರರ ಮುಂದೆ ತನ್ನ ನಿಜ ವ್ಯಕ್ತಿತ್ವವನ್ನು ಪ್ರಕಟ ಪಡಿಸಲಿಚ್ಛಿಸುವುದಿಲ್ಲ. ಆದರೆ ಕೆಲವು ಲಹರಿಗಳಲ್ಲಿ ಅಥವಾ ಕೆಲವು ಕ್ಷಣಗಳಲ್ಲಿ ಅವರ ಅಡಗಿಸ ಬಯಸುವ ಪ್ರಯತ್ನವನ್ನೂ ಮೀರಿ ಅವರ ಮುಖಭಾವದಲ್ಲಿ ಅವರ ನಿಜ ವ್ಯಕ್ತಿತ್ವ ಕಾಣಿಸಿಕೊಳ್ಳುತ್ತದೆ.

ಅದು ಒಂದು ಮಿಂಚಿನ ಕ್ಷಣವೇ ಆಗಿರಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಛಾಯಾಗ್ರಾಹಕನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ.

ಈ ಕೃತಿಯಲ್ಲಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಬಗ್ಗೆ ಮುಕುಂದ್ ಅವರು ಸಾಕಷ್ಟು ಪೂರ್ವ ಅಧ್ಯಯನ ಮಾಡಿಕೊಂಡೇ ಹೋಗುತ್ತಾರೆ. ಅವರ ಒಡನಾಟದ ಮೂಲಕವೂ ಅವರ ಬಗ್ಗೆ ಅನುಭವ ಪಡೆದಿದ್ದಾರೆ. ಶತಾಯುಷಿ ಎ.ಎನ್. ಮೂರ್ತಿ ರಾವ್, ಪರಿಸರ ಪರಿಶ್ರಮಿ ಕೋ.ಲ.ಕಾರಂತ, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಜಿ.ಬಿ. ಜೋಷಿ, ಪು.ತಿ.ನ., ಜಿ. ವೆಂಕಟಸುಬ್ಬಯ್ಯ, ಎಸ್.ವಿ.ಪಿ. ಚದುರಂಗ, ಎಂ.ಕೆ. ಇಂದಿರಾ, ಸು.ರಂ. ಎಕ್ಕುಂಡಿ, ಜಿ.ಎಸ್. ಅಮೂರ, ಕೀರ್ತಿನಾಥ ಕುರ್ತಕೋಟಿ, ಹೀಗೆ ಹಲವರ ಮುಖಗಳನ್ನು ತಾವು ನಿರೀಕ್ಷಿಸಿದ ಯಾವುದೋ ಭಾವಪ್ರಕಟಣೆಗಾಗಿ ಕಾದು ಅವರ ಮುಖದ ಜೀವಂತಿಕೆಯನ್ನು ಸೆರೆಹಿಡಿದು ನಮ್ಮ ಮುಂದೆ ಇಟ್ಟಿದ್ದಾರೆ.

ಮುಕುಂದ್ ಅವರ ಫೋಟೋ ತೆಗೆಯುವ ಜಾಣ್ಮೆ ಎಷ್ಟಿದೆಯೆಂದರೆ ಕಪ್ಪ ಬಿಳುಪು ಹಿನ್ನೆಲೆ ವರ್ಣದ ಬಳಕೆಗಿಂತ ಹೆಚ್ಚು ಪರಿಣಾಮಕಾರಿ ಎಂದು ಕಂಡುಕೊಂಡ ಅವರು ಹಾಯಿಸುವ ಬೆಳಕಿನಲ್ಲಿ ವ್ಯಕ್ತಿಯ ಕಣ್ಣುಗಳ ಕಾಂತಿ, ಚರ್ಮರಂಧ್ರಗಳು ಮತ್ತು ಮುಖದ ಮೇಲಿನ ಪ್ರತಿಯೊಂದು ಸುಕ್ಕುಗಳು ಮತ್ತು ನಿರಿಗೆಗಳು ಕೂಡಾ ಎದ್ದು ಕಾಣುತ್ತವೆ. ಕೆಲವರ ಸಂದರ್ಭದಲ್ಲಿ – ಉದಾಹರಣೆಗೆ ಪ್ರತಿಭಾ ನಂದಕುಮಾರ್ ಅವರ ಕಣ್ಣುಗಳು, ಹಲ್ಲುಗಳು, ಕಿವಿಯ ಓಲೆಗಳು, – ಪ್ರಖರ ಬೆಳಕನ್ನು ಪ್ರತಿಫಲಿಸಿ ವ್ಯಕ್ತಿಯ ಒಳಗಣ ಲವಲವಿಕೆಯನ್ನು ಪ್ರತಿನಿಧಿಸುತ್ತವೆ. ಇದೇ ಪರಿಣಾಮವನ್ನು ಇನ್ನೂ ಕೆಲವು ಫೋಟೋಗಳಲ್ಲಿ ಕಾಣಬಹುದಾಗಿದೆ.

ಬಿಳಿಯ ಹಿನ್ನೆಲೆಯಲ್ಲಿ ಕೆಲವು ಫೋಟೋಗಳನ್ನು ನೋಡಿದಾಗ ಕನ್ನಡಿಯನ್ನು ಕಂಡ ವಿಶಿಷ್ಟ ಅನುಭವವಾಗಿ ಫಕ್ಕನೆ ‘ಅರೆ! ಈ ಕನ್ನಡಿಯೊಳಗೆ ಇರುವುದು ಇದು ಯಾರು , ನಾನೇ? ನಾನು ಹೀಗಿರುವೆನೆ?’ ಎಂದು ದಿಗಿಲುಗೊಂಡು ಕೇಳುವಾತಾಗುತ್ತದೆ. ಅಷ್ಟೊಂದು ಸ್ಫಟಿಕ ಶುದ್ಧ ಇಲ್ಲಿಯ  ಕೆಲವು ಫೋಟೋಗಳು. ಅಥವಾ ‘ನಾನೂ ನೀನೂ ಎಲ್ಲರೂ ಒಂದೇ’ ಎಂಬ ಅದ್ವೈತ ತತ್ವದ ಪ್ರತಿಪಾದನೆಯೇ ಇದು? ಗೊತ್ತಿಲ್ಲ.

ಫೋಟೋ ತೆಗೆಯಲು ಹೋಗುವುದಕ್ಕೆ ಮೊದಲು ಆ ವ್ಯಕ್ತಿಗೆ ಅದು ಇಷ್ಟವಿದೆಯೇ ಇಲ್ಲವೇ ಎಂದು ಖಾತ್ರಿ ಪಡಿಸಿಕೊಳ್ಳುವುದು ಮುಕುಂದರು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯೂ ಹೌದು. ಯಾಕೆಂದರೆ ಅವರಿಗೆ ವ್ಯಕ್ತಿಯ ಸಹಜ ಭಾವ ಸಿಗುವುದು ಮುಖ್ಯ. ಅವರು ಯಾವ ಗಡಿಬಿಡಿಯಲ್ಲೂ ಅಥವಾ ಅಸಹಜ ಲಹರಿಯಲ್ಲಿರಬಾರದು.

ಇನ್ನೊಂದು ವಿಶೇಷವೆಂದರೆ ಅವರು ಹೀಗೆ ಹೋಗುವಾಗ ತಮ್ಮ ಪತ್ನಿ (ಕವಯತ್ರಿ) ಉಮಾ ಅವರನ್ನೂ ಕರೆದುಕೊಂಡು ಹೋಗುತ್ತಾರೆ. ಗಂಡ-ಹೆಂಡತಿ ಹೋಗುವುದಕ್ಕೆ ಮೊದಲೇ ಸಾಕಷ್ಟು ಪೂರ್ವ ತಯಾರಿ ನಡೆಸುತ್ತಾರೆ. ಗಂಡನ ಮನದ ಇಂಗಿತ ಹೆಂಡತಿಗೆ ಚೆನ್ನಾಗಿ ತಿಳಿದಿರುತ್ತದೆ. ತಮ್ಮ ಮಾತಿನ ಜಾಣ್ಮೆಯ ಮೂಲಕ ವ್ಯಕ್ತಿಯಲ್ಲಿ ಮುಕುಂದ್ ಉದ್ದೇಶಿಸುವಂತಹ ಭಾವ ಪ್ರಕಟವಾಗುವಂತೆ ಪರೋಕ್ಷವಾಗಿ ಮಾಡುವುದು ಉಮಾ ಅವರ ಕೆಲಸ. ಅಕಸ್ಮಾತ್ ಅನಿವಾರ್ಯ ಕಾರಣಗಳಿಂದ ಉಮಾ ತಮ್ಮ ಜತೆಗೆ ಬಂದಿಲ್ಲವೆಂದರೆ ಮುಕುಂದ್ ಅವರಿಗೆ ಬಲಗೈ ಮುರಿದ ಅನುಭವ.

ಕೃತಿಯನ್ನು ಓದುತ್ತ-ನೋಡುತ್ತ ಹೋದಂತೆ ನನಗೆ ಆಪ್ಯಾಯಮಾನವೆನ್ನಿಸಿದ್ದು ಉಮಾ-ಮುಕುಂದ್ ಜೋಡಿಯಲ್ಲಿ ಕಾಣುವ ಅರ್ಧನಾರೀಶ್ವರತ್ವದ ಅನುಭವ. ಒಂದೇ ರೀತಿ ಆಲೋಚನೆ ಮಾಡುವ ಮತ್ತು ಪರಸ್ಪರ ಪೂರಕವಾಗಿ ಕೆಲಸ ಮಾಡುವ ಅವರಲ್ಲಿ ಕಾಣುವ ಅದ್ಭುತ ಹೊಂದಾಣಿಕೆಯನ್ನು ನೋಡುವಾಗ ನನಗೆ ನೆನಪಾಗಿದ್ದು ‘ಮುದ್ದಣ ಮನೋರಮೆಯರ ಸರಸ ಸಲ್ಲಾಪ’ ಇಲ್ಲಿ ಸಲ್ಲಾಪವಿಲ್ಲ, ಬದಲಾಗಿ ಬಿಡಲಾರದ ಸಾಂಗತ್ಯವಿದೆ.  ಆದ್ದರಿಂದ ಈ ಕೃತಿಗೆ ‘ಉಮಾ-ಮುಕುಂದರ ಚಿತ್ರ ಪಯಣ’ಅಂತಲೋ ಏನಾದರೂ ಉಪಶೀರ್ಷಿಕೆ ಕೊಡಬಹುದೇನೋ?

ಒಟ್ಟಿನಲ್ಲಿ ಒಂದು ಅತ್ಯಪೂರ್ವ ಭಾವಲೋಕಕ್ಕೆ ನಮ್ಮನ್ನೊಯ್ಯುವ ‘ಮುಖಮುದ್ರೆ’ಯನ್ನು ನೀಡಿದ್ದಕ್ಕಾಗಿ ಮಣಿಪಾಲ ಯೂನಿವರ್ಸಿಟಿ ಪ್ರೆಸ್ (ಎಂಯುಪಿ)ಗೆ ನಾವು ಆಭಾರಿಗಳಾಗಬೇಕಿದೆ.

 

‍ಲೇಖಕರು avadhi

8 July, 2019

2 Comments

  1. Prskash

    Barahada jote onderadu photogalu bekittu. Aga lekhana poortiyaguttittu.

  2. T S SHRAVANA KUMARI

    ಒಳ್ಳೆಯ ಲೇಖನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading