ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪಾಯದಲ್ಲಿದೆ ‘ಸಹ್ಯಾದ್ರಿ ಕಾಲೇಜು’…

ಥಾಮಸ್ ಪುಷ್ಪರಾಜ್

ಅದೊಂದು ಕೇವಲ ಕಲ್ಲಿನ ಕಟ್ಟಡವಲ್ಲ.. ಭೌತಿಕ ಸ್ವರೂಪವಲ್ಲ,. ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಅತ್ಯದ್ಭುತ ವಾಸ್ತು ಶಿಲ್ಪವಂತೂ ಅಲ್ಲವೇ ಅಲ್ಲ.. ಅದು ಸಂಸ್ಕಾರ ಕಲಿಸುವಂಥ ಸರಸ್ವತಿ ಆಲಯ.. ಋಜುತ್ವ ಕಳೆದು ಸಾತ್ವಿಕತೆ ಮೂಡಿಸುವಂತ ದಿವ್ಯ ಚೈತನ್ಯ… ದಿಕ್ಕೆಟ್ಟ ಬದುಕಿಗೆ ದಿಕ್ಸೂಚಿ.. ಮಲೆನಾಡಿನ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗಕ್ಕೆ ಕಳಶಪ್ರಾಯ.. ಅದರ ವ್ಯಾಪ್ತಿ-ವಿಸ್ತಾರದ ಬಗ್ಗೆ ಏನೇ ಹೇಳಿದ್ರೂ.. ಎಷ್ಟೇ ಹೇಳಿದ್ರೂ ಅದು ಕಡಿಮೆಯೇ.. ಅದೇನೋ ಅಂಥಾರಲ್ಲ ಸಣ್ಣವನ ಬಾಯಲ್ಲಿ ದೊಡ್ಡ ಮಾತೆನ್ನುವ ಭಾವದಂತೆ.. ಇಂಥಾ ಕಾಲೇಜಿನ ಅಸ್ತಿತ್ವವೇ ಇಂದು ಆತಂಕದಲ್ಲಿದೆ.

ಸಹ್ಯಾದ್ರಿ ಕಾಲೇಜೆನ್ನುವ ಆಲದ ಮರದ ಆಸರೆಯಲ್ಲಿ ಬದುಕು ಕಂಡುಕೊಂಡ.. ಕಟ್ಟಿಕೊಂಡ.. ಜ್ಞಾನದ ಸುಧೆ ಸವಿದ ನಾವು ಅಸ್ತಿತ್ವಕ್ಕೆ ಎದುರಾಗಿರುವ ತೊಂದರೆಯನ್ನು ನೋಡಿಕೊಂಡು ಸುಮ್ಮನಿರಬೇಕಾ..ಅದು ಸರಿನಾ..? ಸಾಧುವಾ..? ಮನುಷ್ಯತ್ವನಾ..? ಖಂಡಿತಾ ಇಲ್ಲ.. ಇದು ಅನ್ಯಾಯದ ವಿರುದ್ಧ ಧ್ವನಿ ಎತ್ತಲೇಬೇಕಾದ ಸಂದರ್ಭ ಅಲ್ಲವಾ..? ಸ್ನೇಹಿತರೇ… ಬದುಕಿಗೆ ಒಂದು ಭದ್ರ ಅಡಿಪಾಯ ಕಟ್ಟಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಸಂಗತಿಗಳಲ್ಲಿ ಸಹ್ಯಾದ್ರಿ ಕಾಲೇಜ್ ಪ್ರಮುಖವಾದುದು ಎಂದು ಭಾವಿಸುವವನು ನಾನು..(ನಿಮ್ಮ ಭಾವನೆಯೂ ನನ್ನಂತೆಯೇ ಇದ್ದೀತೆನ್ನುವ ನಂಬಿಕೆ ನನ್ನದು).

ಸಹ್ಯಾದ್ರಿ ಕಾಲೇಜಿನಲ್ಲಿ ಕಳೆದ ಆ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ.. ಅದು ಕಟ್ಟಿಕೊಟ್ಟ ನೆನಪುಗಳನ್ನು ಮೆಲುಕಾಕಿದ್ರೂ ಸಾಕು, ನಮಗೆ.. ನಮ್ಮ ಸಹ್ಯಾದ್ರಿ ನಮ್ಮ ಬದುಕಿನಲ್ಲಿ ವಹಿಸಿರುವ ಮಹತ್ವದ ಪಾತ್ರ ಏನನ್ನೋದು ಅರ್ಥವಾಗಿಬಿಡುತ್ತೆ. ಹಸಿರಿಂದ ನಳನಳಿಸುವ ವಾತಾವರಣದಲ್ಲಿ ನಮ್ಮನ್ನೆಲ್ಲಾ ಜೀವನೋತ್ಸಾಹದ ಚಿಲುಮೆಯಾಗಿಸಿದ್ದು ಇದೇ ಸಹ್ಯಾದ್ರಿ ಕಾಲೇಜಲ್ಲ ವೇ.? ಪ್ರತಿಯೋರ್ವರ ರುಚಿ-ಅಭಿರುಚಿ-ಆಸಕ್ತಿ-ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದು ಇದೇ ಸಹ್ಯಾದ್ರಿ ಕಾಲೇಜಲ್ಲವೇ.? ಒಬ್ಬೊಬ್ಬರ ಜೀವನದಲ್ಲೂ ಅದರದೇ ಆದ ಪಾತ್ರ ನಿರ್ವಹಿಸಿದ ಸಹ್ಯಾದ್ರಿ ಕಾಲೇಜ್ ಗೆ ಈಗಲೂ ಒಮ್ಮೊಮ್ಮೆ ಭೇಟಿ ಕೊಟ್ಟಾಗಲೂ ಎಲ್ಲಾ ನೆನಪುಗಳು ಕಣ್ಮುಂದೆ ಸುಳಿಯಲಾರಂಭಿಸುತ್ತವೆ.

ನಮ್ಮ ಕ್ಲಾಸ್ ರೂಂ,ನಾವು ಕುಳಿತ ಬೆಂಚ್.. ನಮ್ಮೆಲ್ಲಾ ಸಹಪಾಠಿಗಳು.. ನಮ್ಮ ಲೆಕ್ಚರರ್ಸ್… ನಮ್ಮ ತರಲೆಗಳು.. ಹರಟೆಗಳು. ಕೂಗಾಟ.. ಚೀರಾಟ.. ಲೆಕ್ಚರರರ್ಸ್ ಪಾಠ.. ಅವರು ಕ್ಲಾಸ್ ಮಾಡುವಾಗ ಅವರನ್ನು ಗೋಳೋಯ್ದುಕೊಳ್ಳುತ್ತಿದ್ದ ರೀತಿ.. ಅವರು ನೀವ್ ಉದ್ದಾರವಾಗೊಲ್ಲ ಹಾಳಾಗಿ ಹೋಗ್ತೀರಾ ಎಂದು ಬೈಯ್ದ ಸನ್ನಿವೇಶಗಳು.

ನಿಮ್ಮ ಬೈಗುಳವೇ ನಮಗೆ ಆಶೀರ್ವಾದ ಎಂದು ಠಕ್ಕರ್ ಕೊಡ್ತಿದ್ದ ಸಂದರ್ಭಗಳು.. ಪಾಠ ನಡೆಯುವಾಗ್ಲೇ ಹಿಂದಿನ ಬಾಗಿಲಿನಿಂದ ಎಸ್ಕೇಪ್ ಆಗಿದ್ದು.. ಲೆಕ್ಚರರ್. ಪ್ರಿನ್ಸಿಪಾಲ್ ರಿಂದ ಸೀಜ್ ಆಗಿದ್ದು.. ಗೆಟ್ ಔಟ್ ಎಂದು ಬೈಯ್ಯಿಸಿಕೊಂಡಿದ್ದು.. ಆ ನೆನಪುಗಳು ಒಂದಾ ಎರಡಾ..ಇನ್ನು ಸೈನ್ಸ್ ಲ್ಯಾಬ್ಸ್.. ಅಲ್ಲಿನ ಪ್ರಾಕ್ಟಿಕಲ್ ಕ್ಲಾಸಸ್.. ಕಾರ್ಯಕ್ರಮಗಳು ನಡೆಯುತ್ತಿದ್ದ ಸಹ್ಯಾದ್ರಿ ಬಯಲು ಮಂದಿರ.. ಅಲ್ಲಿನ ಕಲ್ಲಿನ ಬೆಂಚುಗಳು… ಅಲ್ಲಿ ಸ್ನೇಹಿತರೊಂದಿಗೆ ಕುಳಿತು ಸಂಭ್ರಮಿಸಿದ ಕ್ಷಣಗಳು.. ಆಡಿಟೋರಿಯಂ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು.. ನಾವು ಕ್ಲಾಸ್ ಬಂಕ್ ಮಾಡಿ ಕುಳಿತುಕೊಳ್ಳುತ್ತಿದ್ದ ಸ್ಪೋರ್ಟ್ಸ್ ರೂಂ… ಟೈಂ ಪಾಸ್ ಗೆಂದು ಹೋಗುತ್ತಿದ್ದ ಲೈಬ್ರರಿ… ಸ್ನೇಹಿತರ ಜತೆ ಕ್ಯಾಂಟೀನ್ ನಲ್ಲಿ ಕಳೆದ ಕಾಲ…ಕ್ರಿಕೆಟ್ ಆಡಿದ ಸಂದರ್ಭಗಳು ಯಾವುದೂ ಮರೆತಿಲ್ಲ.

ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಿಂತು ದೋ ಎಂದು ಸುರಿವ ಮಳೆ ಸಂಭ್ರಮಿಸಿದ ಕ್ಷಣ.. ಚುಮು ಚುಮು ಚಳಿಯನ್ನು ಆನಂದಿಸಿದ ಸಂದರ್ಭ… ಯಾವುದೂ ಮರೆತೋಗುವಂತದ್ದಲ್ಲ.. ಸಹ್ಯಾದ್ರಿ ಅಂಗಳಕ್ಕೆ ಹೋದ್ರೆ ನೆನಪುಗಳ ದಿಬ್ಬಣವೇ ಸಾಗಿ ಹೋಗುತ್ತದೆ. ಇದೆಲ್ಲಾ ನೆನಪುಗಳ ಮಾತಾಯ್ತು ಸ್ನೇಹಿತರೇ.. ಜ್ಞಾನದಾಯಿನಿಯಾಗಿ ಸಹ್ಯಾದ್ರಿ ನಮಗೆ ದೊರಕಿಸಿಕೊಟ್ಟಿರುವುದು ಕಡಿಮೆನಾ.. ಅಲ್ಲಿನ ಪರಿಸರ ಹಾಕಿಕೊಟ್ಟ ತಳಪಾಯದ ಮೇಲೆ ಅಲ್ಲವೇ ನಾವು ಇವತ್ತು ನಮ್ಮ ಬದುಕುಗಳ ಅಸ್ಥಿತ್ವ ಕಂಡುಕೊಂಡಿರುವುದು..

ನಮ್ಮ ಬದುಕಿಗೆ ಇಷ್ಟನ್ನೆಲ್ಲಾ ಕೊಟ್ಟಿರುವ ಸಹ್ಯಾದ್ರಿ ಕಾಲೇಜಿನ ಅಸ್ಥಿತ್ವಕ್ಕೆ ಕೊಡಲಿಪೆಟ್ಟು ನೀಡಲು ಪಟ್ಟಭದ್ರ ಹಿತಾಸಕ್ತಿಗಳು ಖೇಲೋ ಇಂಡಿಯಾ ಪ್ರಾಜೆಕ್ಟ್ ರೂಪದಲ್ಲಿ ವಕ್ರದೃಷ್ಟಿ ಬೀರೊಕ್ಕೆ ಮುಂದಾಗಿದೆ. ಯಾವುದೋ ಗುತ್ತಿಗೆದಾರನಿಂದ ಕೋಟ್ಯಾಂತರ ಕಿಕ್ ಬ್ಯಾಕ್ ಸಿಗುತ್ತದೆ ಎಂದ್ರೆ ನಮ್ಮ ರಾಜಕಾರಣಿ ಹಾಗೂ ಅಧಿಕಾರಿಗಳು ವಿವೇಚನೆಯನ್ನೇ ಕಳ್ಕೊಂಡು ಅವರಪ್ಪನ ಮನೆಯ ಆಸ್ತಿ ಎನ್ನುವಂತೆ ಬರೆದು ಕೊಟ್ಟು ಬಿಡ್ತಾರೆ.. ಖೇಲೋ ಇಂಡಿಯಾದ ಪ್ರಾಜೆಕ್ಟ್ ವಿಷಯದಲ್ಲಿಯೂ ಇಂತದ್ದೇ ಅಪಾಯ ಕಾದಿರುವ ಮುನ್ಸೂಚನೆ ಇದೆ ಸ್ನೇಹಿತರೇ.. ಸಹ್ಯಾದ್ರಿ ಅಂಗಳದೊಳಗೆ ಒಮ್ಮೆ ಯೋಜನೆ ಕಾಲಿಟ್ಟರೆ ಸಹ್ಯಾದ್ರಿ ಕಾಲೇಜ್ ಅಸ್ಥಿತ್ವ ಹಾಗೂ ಅದರ ಭವ್ಯ ಇತಿಹಾಸದ ನಾಮೋನಿಶಾನ್ ಇಲ್ಲದಂತೆ ಆಪೋಷನ ತೆಗೆದುಕೊಳ್ಳುವ ಬಹುದೊಡ್ಡ ಗಂಡಾಂತರವೂ ಸೃಷ್ಟಿಯಾಗಬಹುದು.

ನಾವು ಓದಿದ.. ನಮ್ಮಂತೆಯೇ ಓದಿದ ಅದೆಷ್ಟೋ ವಿದ್ಯಾರ್ಥಿಗಳಿಗು ಕಾಲೇಜ್ ನ ಅಸ್ಥಿತ್ವ ಕಾಯುವ ಹೊಣೆಗಾರಿಕೆ-ಬಾಧ್ಯಸ್ಥಿಕೆ ಇದೆ.. ಇದಕ್ಕಾಗಿ ಒಂದು ಜನಾಂದೋಲನವೇ ಸೃಷ್ಟಿಯಾಗಬೇಕಿದೆ. ಇದಕ್ಕಾಗಿ ಏನ್ ಮಾಡಬಹುದು.. ಏನ್ ಮಾಡಬೇಕು.. ಏನ್ ಮಾಡಿದ್ರೆ ನಮ್ಮೆಲ್ಲರ ಹೆಮ್ಮೆಯ ಸಹ್ಯಾದ್ರಿ ಕಾಲೇಜ್ ನ ಭವ್ಯ ಇತಿಹಾಸ ಹಾಗು ಪರಂಪರೆಯನ್ನು ಉಳಿಸಬಹುದು.. ಮುಂದಿನ ಪೀಳಿಗೆಗೂ ಅದನ್ನು ಬೆಳೆಸಬಹುದು.. ಸ್ನೇಹಿತರೇ ಈ ನಿಟ್ಟಿನಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅಗತ್ಯಷ್ಟೇ ಅನಿವಾರ್ಯ ಕೂಡ..

ಸಹ್ಯಾದ್ರಿ ಕಾಲೇಜ್ ಉಳಿಸಲು ಏನ್ ಮಾಡಬೇಕು.. ಏನ್ ಮಾಡಬಹುದು ಎನ್ನುವುದರ ಕುರಿತು ನಿಮ್ಮ ಅತ್ಯಮೂಲ್ಯ ಸಲಹೆ-ಅಭಿಪ್ರಾಯಗಳ ಅಗತ್ಯವಿದೆ.. ದಯವಿಟ್ಟು ಹಂಚಿಕೊಳ್ಳಿ.. ಸಹ್ಯಾದ್ರಿ ಕಾಲೇಜ್ ಉಳಿದರೆ ಮಾತ್ರ ಒಂದು ಸಂಸ್ಕ್ರತಿ ಉಳಿಯಬಲ್ಲದು.. ಸಹ್ಯಾದ್ರಿ ಕಾಲೇಜ್ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗೋಣ.. ನಮ್ಮ ಮೇಲೆ ಇರುವ ಕಾಲೇಜ್ ನ ಬಹುದೊಡ್ಡ ಋಣವನ್ನು ಈ ಮೂಲಕ ತೀರಿಸೋಣ.. ಅಲ್ಲವೇ..

‍ಲೇಖಕರು Avadhi

9 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading