ಜಯಶ್ರೀ ಭಟ್
ದೇಶದಾದ್ಯಂತ ಅತ್ಯಾಚಾರ ಎಂಬ ಪದ ಮೈಮೇಲೆ ಸಿಡುಬಿನ ಗುಳ್ಳೆಗಳೆದ್ದಂತೆ ಹಬ್ಬುತ್ತಿರುವ ಈ ದುರ್ಭರ ದಿನಗಳಲ್ಲೇ ನನಗೆ ನಡುರಾತ್ರಿ ಕಾಣದರಿಯದ ಪರರಾಜ್ಯದ ಊರಲ್ಲೊಂದು ಪ್ರಯಾಣ ಮಾಡಬೇಕಾಗಿ ಬಂದುಬಿಟ್ಟಿತು. ರಾತ್ರಿ ಹನ್ನೆರೆಡೂವರೆಗೆ ಸಿಂಗಪುರದಿಂದ ಕೊಚ್ಚಿ ಏರ್ ಪೋರ್ಟ್ ಗೆ ಬಂದಿಳಿದ ನನಗೆ ಅಲ್ಲಿಂದ ಮೂರ್ನಾಲ್ಕು ತಾಸು ಪ್ರಯಾಣದ ದೂರದಲ್ಲಿದ್ದ ಚೆಂಗನ್ನೂರಿಗೆ ಕರೆದೊಯ್ಯಲು ಬಂದ ಮೂರು ಗಂಡಸರಲ್ಲಿ ಒಬ್ಬರನ್ನೂ ಪರಿಚಯವಿರಲಿಲ್ಲ. ಅವರಿಗೋ ನನ್ನ ಹೆಸರೂ ಗೊತ್ತಿರಲಿಲ್ಲ. ನಾನು ಹೋಗಲಿದ್ದ ಸಮಾವೇಶದ ಹೆಸರಿಗೆ ’ಮಿಸ್’ ಎಂಬ ಪ್ರಿಫಿಕ್ಸ್ ಹಚ್ಚಿದ ಬೋರ್ಡು ಹಿಡಿದು ನಿಂತಿದ್ದರು ಅವರು. ನನ್ನನ್ನು ನೋಡಿ ನಗುತ್ತಾ ಕೇಳಿದರು ’ನಿಮ್ಮ ಹೆಸರೇನು? ನೀವ್ಯಾವ ಭಾಷೆಯಲ್ಲಿ ಮಾತಾಡ್ತೀರಿ?” ಎಂದು.

ಅವರಲ್ಲೊಬ್ಬನಿಗೆ ಸುಮಾರಾಗಿ ಹಿಂದಿ ಬರುತ್ತಿತ್ತು. ಇನ್ನೊಬ್ಬನಿಗೆ ಅಲ್ಪಸ್ವಲ್ಪ ಇಂಗ್ಲಿಷ್ ಬರುತ್ತಿದ್ದರೆ ಬಿಳಿ ಪಂಚೆಯುಟ್ಟ ಮೂರನೆಯವನಿಗೆ ಮಲಯಾಳಂ ಬಿಟ್ಟರೆ ಇನ್ಯಾವ ಭಾಷೆಯ ಗಂಧವೂ ಗೊತ್ತಿದ್ದ ಹಾಗಿರಲಿಲ್ಲ. ರಾತ್ರಿ ಒಂದುಗಂಟೆಗೆ ಹೀಗೆ ಅಪರಿಚಿತರೊಡನೆ ಪ್ರಯಾಣಕ್ಕೆ ಹೊರಟುನಿಂತ ನನ್ನ ಕಂಡು ಅವರಿಗಾಶ್ಚರ್ಯವಾಗುತ್ತಿದ್ದರೆ ನನಗೆ ಒಳಗೊಳಗೇ ದಿಗಿಲು. ನನಗೆ ಕಾರ್ಯಕ್ರಮ ಆಯೋಜಿಸಿದ್ದ ’ಕನಕ’ ಎಂಬುವವರ ಹೆಸರು ಬಿಟ್ಟರೆ ಇನ್ನೇನೂ ಗೊತ್ತಿರಲಿಲ್ಲ. ಅಲ್ಲಿದ್ದ ಮೂವರಿಗೆ ಆ ಹೆಸರೇ ಅಪರಿಚಿತವಾಗಿತ್ತು! ಕುಂಟ, ಕುರುಡನಿಗೆ ದಾರಿ ತೋರಿಸುತ್ತಾ ಬೆಟ್ಟ ಹತ್ತುವ ಹಾಗೆ ನಾವು ನಾಲ್ವರೂ ದಾರಿಯಲ್ಲಿ ನಮ್ಮ ನಮ್ಮಲ್ಲೇ ಈ ಗೊಂದಲಗಳಿಗೆಲ್ಲ ಉತ್ತರ ಕಂಡುಕೊಳ್ಳುತ್ತಾ ಪ್ರಯಾಣ ಬೆಳೆಸಿದೆವು. ಮೆಟ್ರೋ ಕೆಲಸ ನಡೆಯುತ್ತಿದ್ದರಿಂದ ಆ ನಡುರಾತ್ರಿಯಲ್ಲೂ ಅಲ್ಲಲ್ಲಿ ಟ್ರಾಫಿಕ್ ಜಾಮ್ ಇತ್ತು. ’ಸಂಶಯಾತ್ಮ ವಿನಶ್ಯತಿ’ ಎಂಬ ಮಾತಿನಲ್ಲಿ ನಂಬಿಕೆಯಿಟ್ಟು ಈ ಮೂವರಲ್ಲಿ ನನ್ನ ಮೂರು ಜನ ಅಣ್ಣಂದಿರನ್ನು ಕಾಣುವ ಪ್ರಯತ್ನ ನಡೆಸುತ್ತ ಹುಂಬ ಧೈರ್ಯ ತಾಳಿ ಅವರೊಂದಿಗೆ ಅರ್ಧಂಬರ್ಧ ಹಿಂದಿ, ಇಂಗ್ಲಿಷ್ ನಲ್ಲಿ ಹರಟತೊಡಗಿದೆ. ದಾರಿಯಲ್ಲಿ ಪುಟ್ಟ ಅಂಗಡಿಯಲ್ಲಿ ಹಣ್ಣುಹಂಪಲು ತರಲು ಅವರಲ್ಲೊಬ್ಬ ಇಳಿದ. ನನಗೆ ಊಟವಾಗಿದೆಯೋ ಇಲ್ಲವೋ ಎಂದು ವಿಚಾರಿಸಿ ಏನಾದರೂ ತರಲೇ ಎಂದು ಕೇಳಿದ. ನೀರು ಬೇಕು ಎಂದು ನಾನು ಕೇಳಿದ್ದರೂ ನೀರಿನ ಬಾಟಲಿಯ ಜೊತೆಗೇ ಒಂದು ಸೇಬು ಹಣ್ಣನ್ನೂ ಒತ್ತಾಯದಿಂದ ಕೊಟ್ಟ ಆ ಹುಡುಗ. ಅವನಿಗೆ ರಂಜಾನ್ ನ ಉಪವಾಸ, ಹಾಗಾಗಿ ಈ ಅಪರಾತ್ರಿಯಲ್ಲಿ ಹೊಟ್ಟೆಗೇನಾದರೂ ತಿನ್ನಬೇಕಾಗಿದೆಯೆಂದು ಹೇಳಿದ.
ಅಷ್ಟೊತ್ತಿಗಾಗಲೇ ರಾತ್ರಿ ಎರಡಾಗುತ್ತಾ ಬಂದಿತ್ತು. ದಾರಿಯಲ್ಲಿ ಅಲ್ಲಲ್ಲಿ ಪೋಲಿಸ್ ಜೀಪ್ ನಿಂತಿರುವುದನ್ನು ನೋಡಿ ನನಗೆ ಸ್ವಲ್ಪವೇ ಸಮಾಧಾನ ಆಗುತ್ತಿತ್ತು. ಆದರೂ ಇಂದು ರಾತ್ರಿ ನನಗೇನಾದರೂ ಆದರೆ ಜನ ಹೇಗೆಲ್ಲ ಪ್ರತಿಕ್ರಿಯಿಸಬಹುದೆಂದು ಆಲೋಚಿಸತೊಡಗಿದರೆ ಭಯವಾಯಿತು. ತಪ್ಪೆಲ್ಲವೂ ಅವಳದೇ, ಅವಳ್ಯಾಕೆ ಅಷ್ಟು ಸರಿರಾತ್ರಿಯಲ್ಲಿ ಹಾಗೆ ಗೊತ್ತು ಗುರಿಯಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ತಿರುಗಲು ಹೋಗಬೇಕಿತ್ತು? ಎಂದು ಜನ ತಲೆಗೊಂದು ಮಾತಾಡುತ್ತಿಂದತೆ ಅನಿಸತೊಡಗಿತು. ಅಷ್ಟೊತ್ತಿಗೆ ನಿದ್ದೆಗೆಟ್ಟು ಕಣ್ಣು ಭುಗ್ಗೆಂದು ಉರಿಯಲು ಶುರುವಾಗಿತ್ತು. ನೀವು ಮಲಗಿ ಮೇಡಂ ಎಂದು ಡ್ರೈವ್ ಮಾಡುತ್ತಿದ್ದ ಹುಡುಗ ಹೇಳಿದ. ಹಾಗೆ ಸುಖವಾಗಿ ಕಣ್ಣುಮುಚ್ಚಿ ಮಲಗಿ ಬಿಟ್ಟರೆ…ಏನಾದರೂ ಆದರೆ…. ಇವರ ಮೇಲೆ ಸಂಶಯ ಇಲ್ಲದಿದ್ದರೂ ’ಕಲಿಗಾಲ’ ದ ಮೇಲಿನ ಭಯದಿಂದ ಕಣ್ಣುಗಳೆರಡನ್ನೂ ಉಜ್ಜುತ್ತಾ ಕುಳಿತೆ. ಅಷ್ಟರಲ್ಲೇ ದಾರಿಯ ಬದಿಗೆ ಕಾರನ್ನು ನಿಲ್ಲಿಸಿ ಕೆಳಗಿಳಿದರು ಈ ಹುಡುಗರು. ಬಿಳಿ ಪಂಚೆಯ ಮಲಯಾಳಿ ಮಾತ್ರ ಅಲ್ಲೆ ಕೂತಿದ್ದ. ನನ್ನ ಮನಸ್ಸಲ್ಲೇನೂ ಕೆಟ್ಟ ಆಲೋಚನೆ ಬರಲಿಲ್ಲವಾದರೂ ರುಯ್ಯೆಂದು ಬಂದು ಪಕ್ಕದಲ್ಲೇ ನಿಂತ ಪೋಲಿಸ್ ಜೀಪ್ ನಲ್ಲಿದ್ದ ಇಬ್ಬರು ಪೋಲೀಸರಿಗೂ ಅನುಮಾನದ ಗಾಢ ವಾಸನೆ ಸಿಕ್ಕಿ ಬಿಟ್ಟಿತ್ತು. ಬಗ್ಗಿ ಬಗ್ಗಿ ನನ್ನನ್ನೇ ನೋಡುತ್ತಾ ಯಾರು, ಏನು, ಏಕೆ ಎಂಬೆಲ್ಲ ಪ್ರಶ್ನೆ ಕೇಳತೊಡಗಿದ್ದರು ಆ ಮಲಯಾಳಿಯನ್ನು. ಅಷ್ಟರಲ್ಲೇ ಅಲ್ಲಿಗೆ ಬಂದ ಡ್ರೈವ್ ಮಾಡುತ್ತಿದ್ದ ಹುಡುಗ ತನ್ನ ಕಾರಿನ ಲೈಸೆನ್ಸ್ ಮುಂತಾದ್ದನ್ನೆಲ್ಲ ತೋರಿಸಿ ಕಾರಿನ ನಂಬರ್ ಅವರ ಬುಕ್ಕಲ್ಲಿ ಬರೆಸಿ ಅಲ್ಲಿಂದ ಹೊರಡಲಪ್ಪಣೆ ಪಡೆದ. ತಮ್ಮನ್ನು ಪೋಲೀಸರ್ಯಾಕೆ ಪ್ರಶ್ನಿಸಿದರೆಂದು ಅವರು ತಮ್ಮ ತಮ್ಮಲ್ಲೇ ಚರ್ಚಿಸುವಾಗ ನನಗೆ ಇನ್ನೇನೂ ತಿಳಿಯದಿದ್ದರೂ ’ಸ್ತ್ರೀಯುಂ’ ಹೇಳಿದ್ದು ಮಾತ್ರ ನನ್ನ ಬಗ್ಗೆಯೇ ಎಂದು ಮನದಟ್ಟಾಯಿತು. ನಂತರ ಹೀಗೆ ಒಂದು ಪೋಲಿಸ್ ಜೀಪೇ ಈ ಕಾರಿನ ಮೇಲೆ ಕಣ್ಣಿಟ್ಟಿರುವಾಗ ನಿದ್ರಿಸದೆ ಕುಳಿತಿರುವಷ್ಟು ಮೂರ್ಖಳೇ ನೀನು ಎಂದು ನನ್ನ ಮನಸ್ಸು ಕಣ್ಣು ರೆಪ್ಪೆಗಳೆರಡನ್ನೂ ಬಾಗಿಲು ಹಾಕುವಂತೆ ಢಬಾರೆಂದು ಮುಚ್ಚಿಬಿಟ್ಟಿತು. ಉಳಿದ ಒಂದೂವರೆ ತಾಸಿನ ಪ್ರಯಾಣವೆಲ್ಲ ನನ್ನ ನಿದ್ರೆಯಲ್ಲೇ ಕಳೆಯಿತು. ಸೇರಬೇಕಾದಲ್ಲಿಗೆ ಸುರಕ್ಷಿತವಾಗಿ ಬಂದು ತಲುಪಿದ್ದೆ.
ನನ್ನನ್ನು ಕಾಡಿದ ಪ್ರಶ್ನೆಗಳೆರಡು. ಯಾಕೆ ರಾತ್ರಿ ಅನಿವಾರ್ಯವಾಗಿ ಪ್ರಯಾಣಿಸ ಬೇಕಾಗಿ ಬರುವ ಹೆಂಗಸರಿಗೆ ಈ ಮಟ್ಟಿಗಿನ ಸುರಕ್ಷತೆಯನ್ನು ಎಲ್ಲಾ ರಾಜ್ಯದ ಪೋಲೀಸರು ಕೊಡುತ್ತಿಲ್ಲ? ಹೀಗೆ ಅನಿವಾರ್ಯವಾಗಿ ಹೆಂಗಸೊಬ್ಬಳನ್ನು ಕರೆದೊಯ್ಯಲು ಬಂದ ಪ್ರಾಮಾಣಿಕ ಗಂಡಸರನ್ನು ಹೆರಾಸ್ ಮಾಡದೆ, ಅವರು ಹೇಳಿದ ಕಾರಣ ತಾಳ್ಮೆಯಿಂದ ಕೇಳಿಸಿಕೊಂಡು, ಸುರಕ್ಷಾ ಕ್ರಮಗಳನ್ನು ಪಾಲಿಸಿ ಅವರನ್ನು ಸೌಜನ್ಯದಿಂದ ನಡೆಸಿಕೊಳ್ಳುವುದನ್ನು ಇತರೆ ರಾಜ್ಯದ ಪೋಲೀಸರು ಕಲಿಯುವುದು ಯಾವಾಗ?






jayashree beautifully expressed very natural and normal emotions, yes people in kerala seem to respect and protect women much more compared to other states,probably because it has the most literate population?
Thank you Sahana. Yes you maybe right that high literacy is one important factor. But the gentle behavior of the police is what surprised me the most.