ನಿಶಾ ಗೋಪಿನಾಥ್
ಬದುಕು ಬದಲಾಗಿದೆ. ಇಡೀ ಸಮಾಜ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಹೆಣ್ಣಿಗೆ ಎಲ್ಲ ಸ್ಥಾನಮಾನಗಳು ಸಿಕ್ಕಿವೆ. ಮೀಸಲಿನಿಂದಾಗಿ ಎಲ್ಲ ಕ್ಷೇತ್ರಗಳಲ್ಲೂ ಅವಳು ಸಾಧನೆ ಮಾಡುತ್ತಿದ್ದಾಳೆ ಎಂದೆಲ್ಲ ಹೇಳುತ್ತಿದ್ದರೂ ನಮ್ಮ ನಡುವಿನ ಸಾಕಷ್ಟು ಜನ ಇನ್ನೂ ಬದಲಾಗಿಲ್ಲ! ಗೊಡ್ಡು ಸಂಪ್ರದಾಯಗಳು, ಕಂದಾಚಾರಗಳು ನಮ್ಮನ್ನ ಕಾಡುತ್ತಲೇ ಇವೆ. ಅವು ಅನೇಕ ಮಹಿಳೆಯರ ಬದುಕನ್ನು ಛಿದ್ರಗೊಳಿಸುತ್ತಲೇ ಇವೆ. ಮತ್ತೆ ಕೆಲವೊಮ್ಮೆ ಹೊಸ ಬದಲಾವಣೆಗೆ ನಾಂದಿಯನ್ನೂ ಹಾಡಿವೆ.
ಇಂಥದ್ದೊಂದು ಘಟನೆ ನನ್ನ ಬದಕನ್ನೂ ಬದಲಾಯಿಸಿದೆ. ಒಬ್ಬರ ಮನೆಗೆ ಅಪರೂಪಕ್ಕೆ ಅತಿಥಿಯಾಗಿ ಹೋದಾಗ ನಡೆದ ಘಟನೆಯಿಂದ ನನ್ನ ಬದುಕಿನ ದಿಕ್ಕೇ ಬದಲಾಗಿದೆ. ಅದು ಸುಮಾರು ಐದು ವರ್ಷಗಳ ಹಿಂದಿನ ಮಾತು. ನನಗೆ ಮದುವೆಯಾಗಿ ಆರು ವರ್ಷ ತುಂಬಿತ್ತು. ನಮ್ಮ ದಾಂಪತ್ಯ ಅಂತ್ಯಂತ ಸುಖವಾಗಿತ್ತು. ನಾನು ಆಗ ಮನೆಯಲ್ಲೇ ಇರುತ್ತಿದ್ದೆ. ಹೊರ ಪ್ರಪಂಚದ ಅರಿವೇ ಇರುತ್ತಿರಲಿಲ್ಲ. ಮಕ್ಕಳಿರಲಿಲ್ಲ ಎನ್ನುವ ಕಾರಣಕ್ಕೆ ನಾವೆಂದೂ ಕೊರಗಿದವರಲ್ಲ.

ಆದರೆ ಒಂದು ದಿನ ನನ್ನ ಪತಿ ಗೋಪಿನಾಥ್ ಅವರ ಗೆಳೆಯ ಹಾಗೂ ಅವರ ಪತ್ನಿ ನಮ್ಮ ಮನೆಗೆ ಬಂದಿದ್ದರು. ಅಂದು ಗೋಪಿನಾಥ್ ಮನೆಯಲ್ಲಿ ಇರಲಿಲ್ಲ. ಕೆಲಸಕ್ಕೆ ಹೋಗಿದ್ದರು. ನಾನು ನನ್ನ ಅತ್ತೆ ಮಾತ್ರ ಮನೆಯಲ್ಲಿ ಇದ್ದಿದ್ದು. ಬಂದ ಅತಿಥಿಗಳಿಗೆ ಟೀ ಕೊಟ್ಟು, ಕುಶಲೋಪರಿ ವಿಚಾರಿಸಿದೆವು. ಅವರು ಮುಂದಿನ ಭಾನುವಾರ ನಮ್ಮ ಮಗಳ ನಾಮಕರಣ ಇದೆ. ತಾವು ದಯಮಾಡಿ ಗೋಪಿ ಹಾಗೂ ನಿಮ್ಮ ಸೊಸೆಯನ್ನು ಕರೆದುಕೊಂಡು ಎಲ್ಲರೂ ಬರಬೇಕು, ತಪ್ಪಿಸ್ಬೇಡಿ ಎಂದು ಹೇಳಿ ಕಾರ್ಡ್ ಕೊಟ್ಟರು. ಅತ್ತೆ ಕಂಡಿತವಾಗಿ ಬರುತ್ತೇವೆ ಎಂದು ಅವರನ್ನು ಬೀಳ್ಕೊಟ್ಟರು.
ಆ ಭಾನುವಾರ ಬಂದೇಬಿಟ್ಟಿತು. ಅತ್ತೆ ನನ್ನನ್ನು ಕರೆದುಕೊಂಡು ಅವರ ಮಗಳ ನಾಮಕರಣಕ್ಕೆ ಹೋಗಿ ಬಾ ಎಂದು ಗೋಪಿನಾಥ್‌ಗೆ ಹೇಳಿದರು. ಮೊದಲಿಗೆ ನಾನು ಬರುವುದಿಲ್ಲ ಎಂದೇ ಹೇಳಿದೆ. ಆದರೆ ಪತಿಯ ಒತ್ತಾಯಕ್ಕೆ ಹೋಗಲೇಬೇಕಾಯಿತು. ಅತ್ತೆ ಬರುವ ಹಾಗಿರಲಿಲ್ಲ, ಬರಲಿಲ್ಲ. ನಾವು ಅವರ ಮನೆಗೆ ಹೋದಾಗ ತುಂಬಾ ಸಂತೋಷದಿಂದಲೇ ಆಹ್ವಾನಿಸಿದರು. ನಾಮಕರಣದಿಂದಾಗಿ ಅವರಿಗೆ ಬಿಡುವಿರಲಿಲ್ಲ. ನಾವು ಬಂದವರನ್ನು ಮಾತನಾಡಿಸುತ್ತ ಸಮಯ ಕಳೆದೆವು, ಕೊನೆಗೆ ಎಲ್ಲ ಕಾರ್ಯಕ್ರಮ ಮುಗಿಯಿತು. ಮಗುವನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಕಾರ್ಯ ಮಾಡಿದ ನಂತರ ಮಗು ಮುದ್ದಾಗಿದ್ದರಿಂದ ಎಲ್ಲರೂ ಎತ್ತಿಕೊಂಡು ಮುದ್ದು ಮಾಡುತ್ತಿದ್ದರು. ನಾನೂ ಕೂಡ ಮಗುವನ್ನು ಎತ್ತಿಕೊಳ್ಳಲು ಮುಂದಾದೆ. ಆದರೆ ತಕ್ಷಣ ಮಗುವಿನ ತಾಯಿ ನನ್ನ ಕೈಯಿಂದ ಮಗುವನ್ನು ಕಸಿದುಕೊಂಡರು.
ಇದರಿಂದ ನನಗೆ ತುಂಬಾ ಆಘಾತವಾಯಿತು. ಏನೂ ಅರಿಯದೆ ನನ್ನ ಪತಿಯ ಮುಖ ನೋಡಿದೆ. ಅವರು ಸುಮ್ಮನಿದ್ದರು. ಅವರಿಗೂ ಕಾರಣ ತಕ್ಷಣಕ್ಕೆ ತಿಳಿಯಲಿಲ್ಲ. ಮಗುವಿನ ತಾಯಿಗೆ ನನ್ನ ಪತಿ ಯಾಕೆ ಮಗುವನ್ನು ಮುಟ್ಟಲು ಬಿಡಲಿಲ್ಲ, ಏನಾಯಿತು? ಎಂದು ಕೇಳಿದರು. ಅದಕ್ಕೆ ಅವರು ನೀಡಿದ ಉತ್ತರ. ನಿಮ್ಮ ಹೆಂಡ್ತಿಗೆ ಆರು ವರ್ಷಗಳಾದರೂ ಮಕ್ಕಳಾಗಿಲ್ಲ. ಆದ್ದರಿಂದ ಅಂಥವರು ಮಕ್ಕಳನ್ನು ಮುಟ್ಟಬಾರದು… ಮುಟ್ಟಿದರೆ ಅಪಶಕುನ…’’ ಎಂದರು. ಅದನ್ನು ಕೇಳಿ ನನ್ನ ಕಣ್ಣಾಲಿಗಳು ತುಂಬಿಕೊಂಡವು. ನನ್ನ ಗಂಡನಿಗೂ ಬೇಸರವಾಯಿತು. ಇದರಿಂದ ಅಲ್ಲಿ ಸೇರಿದ್ದವರೆಲ್ಲರಿಗೂ ನನಗೆ ಮಕ್ಕಳಾಗಿಲ್ಲ ಎನ್ನುವುದು ಜಗಜ್ಜಾಹೀರಾಯಿತು. ಅಲ್ಲಿವರೆಗೆ ನಮಗೆ ಮಕ್ಕಳಿರಲಿಲ್ಲ ಎನ್ನುವ ಕೊರಗು ಕಾಡಿರಲಿಲ್ಲ. ಆದರೆ ಅವರ ಮಾತಿನಿಂದ ನಮಗೆ ತುಂಬಾ ಬೇಸರವಾಗಿ ಅಲ್ಲಿಂದ ಹೊರನಡೆದವು.
ಮನೆಗೆ ಬಂದ ಕೂಡಲೇ ಅತ್ತೆ ಕೇಳಿದರು. ಹೇಗಿತ್ತು ನಾಮಕರಣ ಕಾರ್ಯಕ್ರಮ? ನನಗೆ ತಡೆಯಲಾಗಲಿಲ್ಲ. ಅಳು ಒತ್ತರಿಸಿಕೊಂಡು ಬಂತು. ಅಳುತ್ತಲೇ ಮನೆಗೆ ಕರೆದು ಮಂಗಳಾರತಿ ಮಾಡಿ ಕಳಿಸಿದರು ಎಂದು ಬೇಸರದಿಂದ ಹೇಳಿ ಒಳ ಹೋದೆ. ಗೋಪಿ ಎಲ್ಲ ವಿಷಯ ಹೇಳಿದರು. ಇದರಿಂದ ಅತ್ತೆಗೂ ಬೇಸರವಾಯಿತು. ಆದರೆ ಅದನ್ನು ತೋರಿಸಿಕೊಳ್ಳದೆ ನನ್ನನ್ನು ಸಮಾಧಾನ ಮಾಡಿ ನಮ್ಮ ಸಮಾಜ ಬದಲಾಗುವುದಿಲ್ಲ. ಬದಲಾಗಲು ನಮ್ಮಂಥ ಮೂರ್ಖ ಜನ ಬಿಡುವುದಿಲ್ಲ. ಕಾಲ ಬದಲಾದರು ಜನ ಇನ್ನೂ ಬದಲಾಗಿಲ್ಲ. ಅದಕ್ಕೆಲ್ಲ ಬೇಸರ ಮಾಡಿಕೊಳ್ಬೇಡ. ನಿನಗೂ ಮಗುವಾಗುತ್ತೆ… ಎಂದು ಸಮಾಧಾನ ಮಾಡಿದರು.
ಅಲ್ಲಿಂದ ಮುಂದೆ ನನಗೆ ಈ ಬೇಸರ ತುಂಬಾ ದಿನಗಳ ಕಾಲ ಕಾಡುತ್ತಿತ್ತು. ಹೀಗಾಗಿ ನಾನು ಸಾಕಷ್ಟು ತಿಂಗಳ ಕಾಲ ಕುಗ್ಗಿ ಹೋಗಿ ಯಾವ ಶುಭ ಕಾರ್ಯಕ್ಕೂ ಕಾಲಿಡಲಿಲ್ಲ. ಇದು ನಮ್ಮಲ್ಲಿ ಹೊಸ ಬದಲಾವಣೆಯನ್ನು ತಂದಿತು. ಈ ಸಮಾಜ ಎಷ್ಟೇ ಮುಂದುವರಿದರೂ ಹೆಣ್ಣಿಗೆ ಮಕ್ಕಳಾಗದೆ ಹೋದರೆ ಬೆಲೆಯಿಲ್ಲ. ಹಳೆಯ ಸಂಪ್ರದಾಯ ಸಾಯುವುದಿಲ್ಲ. ಇಲ್ಲಿನ ಗೊಡ್ಡು ಆಚರಣೆಗಳು, ಗೊಡ್ಡು ನಂಬಿಕೆಗಳು ನಾಶವಾಗುವುದಿಲ್ಲ ಎನಿಸಿತು. ಈ ಆಲೋಚನೆಯಿಂದಲೋ ಏನೋ ಮಗುವಿಗಾಗಿ ಹಂಬಲ ಹೆಚ್ಚತೊಡಗಿತು. ನಾನು ನನ್ನ ಪತಿ ಇಬ್ಬರೂ ಮಗುವಿನ ಹಂಬಲಕ್ಕಾಗಿ ಕಂಡ ಕಂಡ ದೇವರ ಮೊರೆ ಹೋಗತೊಡಗಿದೆವು. ಹಳ್ಳಿಯಲ್ಲಿದ್ದ ಅರಳಿಮರವನ್ನು ಸುತ್ತದೇ ಇರುವ ದಿನಗಳಿಲ್ಲ. ಜತೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದೆವು. ಕೊನೆಗೂ ನನಗೆ ಮಗಳು ಹುಟ್ಟಿದಳು. ಅಲ್ಲಿಂದ ನಮ್ಮ ಮನಸ್ಸು ನಿರಾಳವಾಯಿತು. ಆ ಘಟನೆ ಮರೆಯಲೇ ಇಲ್ಲ. ಅದರಿಂದಾಗಿ ಮುಂದೆ ಏನನ್ನಾದರೂ ಸಾಧಿಸಬೇಕೆಂದು ಉದ್ಯಮಕ್ಕೆ ಕಾಲಿಟ್ಟೆ, ಯಶಸ್ಸು ಕಂಡೆ. ಬದುಕು ಸಂಪೂರ್ಣ ಬದಲಾಯಿತು.






chendada baraha..magaLu muddaagiddaaLe..!!!
Chalanachitradalli inta ghatane noduvaaga novaaguttittu..nijada badukallu nadeyuttade endu gottage sankatavaaguttide
ಹ್ಯಾಟ್ಸಾಫ್….
kala badaladaru manushyaru badalagalla. nimma atteya matu nija. tumba sundara baraha.
ಮನಮುಟ್ಟಿದ ಬರಹ
ಮನ ತಟ್ಟಿತು