ಶ್ರೀದೇವಿ ಉಡುಪ
ಅದೊಂದು ಕಾಲವಿತ್ತು,
ಅಮ್ಮ, ಅಕ್ಕಂದಿರ ಹಳೆಯ ಸೀರೆಗಳ
ಪದರಗಳಲ್ಲಿಯೇ ಹೆಣ್ತನದ ಅರಳುವಿಕೆ ಹೆಣಗುತಿತ್ತು, ಸುರಿದು ಬಿಡುವ ಮಾಸಿಕದ
ಹೂವಿನ ಘಮವಷ್ಟನ್ನು ಹಿಡಿದಿಡಲು ಸೋಲುವ ನೂಲೆಳೆಗಳಿಗೆ ಮನಸು ಶಪಿಸುತ್ತಾ ,ತೇವಕ್ಕೆ ಬೆಂಕಿ ಹಾಯಿಸುವ ಹೆಜ್ಜೆಗಳಿಗೆ ಹೆದರುತ್ತಾ…. ಜೀವ ಪರದಾಡುತ್ತಿರುವಾಗ ನಿನ್ನಾಗಮನ
ಅಮ್ಮನ ಸೀರೆಯ ಆಪ್ತತೆಯನ್ನೂ
ಮರೆಸಿ ಬೆರಗಾಗಿಸಿದ್ದು ಮರೆವೆನೆಂದರೂ ಮರೆಯಲಿ ಹೇಗೆ…?
ಮೊದಮೊದಲ ಗಾಬರಿ , ಕಸಿವಿಸಿಗೆ ಭದ್ರತೆಯ
ಅಭಯ ಹಸ್ತವ ಚಾಚಿ ನಕ್ಕಾಗ ರೇಷ್ಮೆಯಂತೆ
ಜತನಗೊಳ್ಳುತ್ತಿದ್ದ ಹಳೆಯ ಬಟ್ಟೆಗಳನ್ನೆಲ್ಲಾ ಒಂದಿಷ್ಟೂ ಮುಲಾಜಿಲ್ಲದೆ ಗೊಬ್ಬರದ ಗುಂಡಿಗೆ
ಬಿಸುಟು ಪಟ್ಟ ಖುಷಿ ಇದೀಗ ಹಾದಿ ಬೀದಿಗಳಲ್ಲಿ ನಿನ್ನ ನೋಡುವಾಗ ಹೆಣ್ತನ ನಾಚುತ್ತದೆ, ಒಂದಿಷ್ಟು ಕಾಳಜಿ ಅಕ್ಕರಾಸ್ತೆ ನಿನ್ನ ಸೇವೆ ಪಡೆದವರು ತೋರಬೇಕಾದ ಅನಿವಾರ್ಯತೆ ಕಣ್ಣಿಗೆ ರಾಚುತ್ತದೆ.
ಅದೇನೆ ಇರಲಿ ಮಾಸಿಕದ ನೋವಿಗೆ ನೀನಿತ್ತ ಕಿಂಚಿತ್ ನಿರಾಳತೆಗೆ ಹೆಣ್ಣು ಕುಲದ ಧನ್ಯವಾದಗಳು ನಿನಗಿದೆ.






0 Comments