ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ..

ಅಮಿತಾ ರವಿಕಿರಣ್ 

ಬೆಲ್ಫಾಸ್ಟ್  / ಯು ಕೆ 

 

ಮುಟ್ಟಿನ ಕಥೆ

ಮುಟ್ಟನ್ನು ಹೀಗೆ ಜಗಜ್ಜಾಹೀರಾಗಿ ಮಾತನಾಡುವ ಸಮಯವಲ್ಲದ ಸಮಯದಲ್ಲಿ  ಗ್ರಾಮೀಣ ಪರಿಸರದ ಸಾಂಪ್ರದಾಯಿಕ ಕುಟುಂಬದ ನನಗೂ ಮುಟ್ಟಿಗೂ  ಮೊದಲ ಮುಖಾಮುಖಿಯಾಗಿತ್ತು.

ಅಮ್ಮ ಮೊದಲೇ ಎಲ್ಲ ಹೇಳಿದ್ದರಿಂದ ಅಂಥ ದಿಗಿಲೇನು ಇರಲಿಲ್ಲ. ಅದು ಬರುತ್ತೆ ಹೋಗುತ್ತೆ ಅಷ್ಟೇ ಅನ್ನುವಂತೆ ಸ್ವೀಕರಿಸಿದ್ದೆ . ತಿಂಗಳ ರಜೆಯನ್ನ  ಸಜೆ ಎಂದು ಭಾವಿಸಿದ ಸಂದರ್ಭಗಳು ತೀರ ಅಪರೂಪ ಬದಲಿಗೆ ಅದು ನನಗೆ ಹೆಣ್ತನಕ್ಕೆ ಸಿಕ್ಕ ಉಡುಗೊರೆ ಎಂದೇ ಭಾವಿಸಿದ್ದೇನೆ ಹೀಗೆಲ್ಲ ತಂಗಿಗೆ ಹೇಳಿದರೆ ಆಕೆ ಆಗಲೂ ಬಯ್ಯುತ್ತಿದ್ದಳು ಈಗಲೂ ಬಯ್ಯುತಾಳೆ ನಿನ್ನದು ಅತಿರೇಕದ ವಿಚಾರ ಅಂದು ಮೂಗು ಮುರಿಯುತ್ತಾಳೆ.

ಮುಟ್ಟು ಬಂದರಾಯಿತೇ? ಅದು ತರುವ ಬದಲಾವಣೆಗಳೆಷ್ಟು? ಅದು ಬರುವ ಮುಂಚಿನ ದಿನಗಳಲ್ಲಿ ಪ್ರವಾಸ, ಪೂಜೆ ,ಹಬ್ಬ ಹರಿದಿನ ಬಾರದಿರಲಿ ಏನು ಇರದ ದಿನಗಳಲ್ಲಿ ಬರಲಿ , ಈ ತಿಂಗಳು ಎರಡು ದಿನ ಮುಂದೆ ಹೋಗಲಿ.. ಬರುವತಿಂಗಳು ಮೂರುದಿನ ಮೊದಲೇ ಬಂದರೆ ಚನ್ನಿತ್ತು , ಅದು ನನ್ನ ಮಾತ್ಯಾಕೆ  ಕೇಳಿತು? ತನಗೆ ಮನಸು ಬಂದಾಗಲೇ ಬರುತ್ತಿತ್ತು.

ಅಮ್ಮ ತನ್ನ ಹಳೆ ಸೀರೆ ಹರಿದು ಹದವಾದ ಚೌಕ ಮಾಡಿ ಕೊಟ್ಟಿದ್ದಳು. ಬಚ್ಚಲಿನ ಮೂಲೆಗೆ ಕಟ್ಟಿದ ಬೀಣಿ ಚೀಲದಲ್ಲಿ ಕಟ್ಟು ಕಟ್ಟಿ  ಇಡಲಾಗುತ್ತಿದ್ದ ಆ ಬಟ್ಟೆಗಳಿಗೆ ಮಡಿ ಬಟ್ಟೆ ಅನ್ನೋ ಕೋಡ್ ನೇಮ್. ಆ ಬಚ್ಚಲ ಹಂಡೆಗೆ ಹಾಕುತ್ತಿದ್ದ ಉರಿಯ ಹೊಗೆಗೆ ಕಪ್ಪಾದ ಆ ಚೀಲವನ್ನು ನೋಡಿದರೆ ಮುಟ್ಟಲೂ ಬೇಜಾರಾಗುತ್ತಿತ್ತು . ಅಮ್ಮನೊಂದಿಗೆ , ಅಜ್ಜಿಯೊಂದಿಗೆ ವಾದ ವಿವಾದದ ನಂತರ ನಮ್ಮ  ಕಾಲದಲ್ಲಿ ಅವಕೆ ಬಿಸಿಲು ಕಾಣೋ ಯೋಗ ಬಂತು.

ಕೂಡು ಕುಟುಂಬದಲ್ಲಿ ಇದ್ದ ನಾವುಗಳು ಆ ಬಟ್ಟೆಗಳನ್ನು ಒಣಗಿಸಲು ಹೆಣಗುವ ಪರಿ ಯಾರೋ ಕಳುವಿನ ಮಾಲನ್ನು ಅಡಗಿಸುವ ಪಾಡಿಗಿಂತ  ಭಿನ್ನವೇನಲ್ಲ, ಯಾರಿಗೂ ತಿಳಿಯದ ವಿಷಯವೇನಲ್ಲ ಆದರೂ ಯಾರಿಗೂ ತಿಳಿಯಬಾರದು ಅನ್ನೋ ವ್ಯರ್ಥ ಆಸೆ.

ಈ ಪುಟ್ಟ ಪುಟ್ಟ ಪರದೆಗಳನ್ನು ಒಣಗಿಸಿದ್ದನ್ನು ನೋಡಿಯೇ ಪಕ್ಕದ  ಮನೆ ಆಂಟಿ ನಮ್ಮ ತಿಂಗಳ ರಜೆಯ  ಗಣಿತ ಹಾಕುತ್ತಿದ್ದಿದು. ಅದು ಇನ್ನೊಂದು ಕಿರಿಕಿರಿ. ಶಾಲೆಗೆ ಹೋಗುವಾಗ  ಆಗುವ ಸಂಕಟ ಅಷ್ಟಿಷ್ಟಲ್ಲ ಅದು ಮೊದಲ ಬೆಂಚ್ ನಲ್ಲಿ ಕುಳಿತರೆ ಮುಗಿದೇ ಹೋಯಿತು. ಆಗೇಲ್ಲ ಸ್ನೇಹಿತೆಯರಲ್ಲೂ ಈ ವಿಷಯಗಳನ್ನು ಹೇಳಿಕೊಳ್ಳಲಾಗದ ಮುಜುಗರ.

ನಾ ಪಿಯುಸಿಯಲ್ಲಿದ್ದೆ ಆಗ ಸಂಗೀತ ಕಾರ್ಯಕ್ರಮಕ್ಕೆ ಬಿಜಾಪುರಕ್ಕೆ ಹೋಗಬೇಕಿತ್ತು. ಯಾರದೋ ಮನೆಯಲ್ಲಿ ವಸತಿ ವ್ಯವಸ್ತೆ ಮಾಡಿದ್ದು, ಅಲ್ಲೆಲ್ಲಿ ಬಟ್ಟೆ ಒಗೆದು ಹಾಕಿ ಅಸಹ್ಯ ಮಾಡಿಕೊಳ್ಳೋದು. ತಿಂಗಳು ನಿಲ್ಲಬೇಕಲ್ಲ ..ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ ,

ಅಂತದೊಂದು ವಸ್ತುವಿದೆ ಅಂತ ಗೊತ್ತಿತ್ತು ಅದರ ಜಾಹಿರಾತು ಬಂದಾಗ ಎಲ್ಲರು ಅಸಹ್ಯಿಸಿ ಕೊಳ್ಳುತ್ತಿದ್ದನ್ನ ನೋಡಿಯೇ ಬೆಳೆದಿದ್ದೇನೆ ತೀರ ಚಿಕ್ಕವರಿದ್ದಾಗ ಪಪ್ಪನ ಹತ್ತಿರ ಅದೇನು ಅಂತ ಎಲ್ಲರ ಮುಂದೆಯೇ  ಕೇಳಿ ‘’ ಬ್ರೆಡ್ ‘’ ಎಂದು ಉತ್ತರ ಪಡೆದು ಸಮಾಧಾನ ಆಗದೆ ‘’ಬ್ರೆಡ್ ಮ್ಯಾಗ ಯಾಕ್ ಶಾಯಿ ಹಾಕ್ತಾಳ ಆಕಿ ಹುಚ್ಚಿ ‘’ ಅಂದು ನಮ್ಮ ಮೂರ್ಖ (ಮುಗ್ಧ)ತೆಯ ಪರಮಾವಧಿ ಪ್ರದರ್ಶಿಸಿದ್ದು ಇತಿಹಾಸ. ಆಮೇಲೆ ಹೇಗೋ ಅದರ ನಿಜ ಉಪಯೋಗ ತಿಳಿದಿತ್ತು , ಜೊತೆಗೆ ಅದನ್ನು ಬಳಸಿದರೆ ಕಾನ್ಸರ್ ಬರುತ್ತದೆ ಎಂಬ ಭಯದ ಮಂತ್ರವನ್ನು ಕಿವಿಯಲ್ಲಿ ಬಿತ್ತಲಾಗಿತ್ತು.

ಈಗ ಅದೊಂದೇ ದಾರೀ , ಪ್ರಯಾಣ ಮತ್ತು ವಸತಿ ಎರಡಕ್ಕೂ ಈ ತಿಂಗಳ ಪಾಳಿ ತೊಂದರೆ ಮಾಡದಂತೆ ಬೇರೆಯವರಿಗೆ ಗೊತ್ತು ಆಗದಂತೆ ಮಾಡಲು ಅದೊಂದೇ ಉಪಾಯ ,  ನ್ಯಾಪ್ಕಿನ್/ ಸ್ಯಾನಿಟರಿ ಪ್ಯಾಡ್ / ಸ್ಟೇ ಫ್ರೀ /ವಿಸ್ಪರ್  ಎನಾದ್ರೂ ಕರೆದುಕೊಳ್ಳಿ .

ಅಂದಿನ ಕಾಲಕ್ಕೆ ನನ್ನ ಗೆಳತಿಯರಲ್ಲಿ ಪ್ಯಾಡ್ ಬಳಸುತ್ತಿದ್ದಿದ್ದು ಆಕೆಯೋಬ್ಬಳೆ,  ಬೆಲೆ ಕೇಳಿದರೆ ಜೀವ ಕೈಗೆ ಬಂತು ೬೦ ರುಪಾಯಿ , ಅರವತ್ತು ರೂಪಾಯಿಯಲ್ಲಿ ಶಿರಸಿಗೆ ಹೋಗಿ ಬರಬಹುದು , ಛೆ ಇಲ್ಲಪ್ಪ ಬ್ಯಾಡ ಅನಿಸಿತ್ತು  ಆಗ ನನ್ನ ಗೆಳತಿ ಹೇಳಿದ್ದು ಕೇಳಿ ಇನ್ನು ಆಶ್ಚರ್ಯ ನಮ್ಮ ಊರಿನ ಮೆಡಿಕಲ್ ಶಾಪ್ ಒಂದರಲ್ಲಿ ಪ್ಯಾಡ್ ಗಳನ್ನೂ ಖುಲ್ಲಾ (ಸಿಂಗಲ್ ಪೀಸ್) ಮಾರಲಾಗುತ್ತಿತ್ತು , ೧೦/೧೨ ರ ಪ್ಯಾಕ್ ಅಷ್ಟು ಬೆಲೆ ಒಟ್ಟು ಖರೀದಿಸುವ ಅಗತ್ಯ ಇರಲಿಲ್ಲ. ಒಂದೋ ಎರಡೋ ಅನುಕೂಲಕ್ಕೆ ತಕ್ಕಂತೆ ಖರಿದಿಸಬಹುದಿತ್ತು . ಅದೆಲ್ಲ ಸರಿ ಹೋಗಿ ಕೇಳೋದು ಹೇಗೆ , ? ನನ್ನ ಕಷ್ಟ ನೋಡಾಕಾಗದೆ ನನ್ನ ಗೆಳತಿ ತನ್ನಲ್ಲಿದ್ದ ಸ್ಯಾನಿಟರಿ ಪ್ಯಾಡ್ ಗಳಲ್ಲಿ ಎರಡು ತೆಗೆದು ಕೊಟ್ಟಿದ್ದಳು.ಆಕೆ ಚಿನ್ನದ ಸರ ಕೊಟ್ಟಿದ್ದರೂ ನನಗೆ ಅಷ್ಟು ಧನ್ಯತಾ ಭಾವ ಬರುತ್ತಿತ್ತೋ ಇಲ್ವೋ , ಈಗ ಮಾತ್ರ ಆಕೆ ನಿಜಕ್ಕೂ ಅಪಾತ್ಬಂಧವಿ ಎನಿಸಿದ್ದಳು.  ಹಾಗೆ ನನಗೆ ಈ ಸ್ಯಾನಿಟರಿಪ್ಯಾಡ್ಗಳ ಪರಿಚಯ ಆಗಿತ್ತು.

ಆ ಓವರ್ ನೈಟ್ ಜರ್ನಿ ಮಾಡಿದ ಮೇಲೆಯೂ ಒಂದೇ ಒಂದು ಚಿಕ್ಕ ಕಲೆ ಬಟ್ಟೆಯ ಮೇಲೆ ಬಾರದಿದ್ದಾಗ ಅದೊಂದು ವರಾದಾನ ಅನಿಸಿದ್ದು ಅದೆಷ್ಟು ಸರಿಯೋ, ಕಾಲೇಜ್ ಹೋಗುವಷ್ಟರಲ್ಲಿ ಅದರ ಬೆಲೆ ಚೂರು ಕಡಿಮೆ ಆಗಿತ್ತು ಬೇರೆ ಬೇರೆ ಬ್ರಾಂಡಿನ ಪ್ಯಾಡ್ ದೊರಯತೊಡಗಿದ್ದವು ಕೈಗೆಟಕುವ ದರದಲ್ಲಿ ಅದು ಲಬ್ಯಾವಾಗತೊಡಗಿದ್ದೇ ತಡ ಮತ್ತೆಂದು ಬಟ್ಟೆಯ ಕಡೆಗೆ ಕಣ್ಣು ಹಾಯಲಿಲ್ಲ. ಮಾಡುವೆ ನಂತರ ಅತ್ತೆಯದೂ ಕೂಡ ಅದೇ ಉವಾಚ ಕ್ಯಾನ್ಸರ್ ಬರುತ್ತದಂತೆ ಬಳಸಬೇಡ”

ತಿಂಗಳ ರಜೆಗೆ ಬಟ್ಟೆಬಳಸುವುದನ್ನು ನಾವು ಬಿಟ್ಟೇವೆಂದರೂ ನಮ್ಮನದು ಬಿಟ್ಟೀತೆ ? ನನ್ನ ಬಾಣಂತನ  ಆದಕೂಡಲೇ ಮತ್ತೆ ಕಾಣಿಸಿಕೊಂಡಿತ್ತು ಆಗ ಆಗುವ ಸ್ರಾವಕ್ಕೆ ನಿಮ್ಮ ಪ್ಯಾಡ್ಗಳು ತಡೆಯಲ್ಲ ಅನ್ನುವ ಅನುಭವದ ಮಾತಿಗೆ ನಮ್ಮ ಬಾಯಿ ಬಂದ .

ಆಗ ಅನುಭವಿಸಿದಷ್ಟು ಬೇಸರ ಹತಾಶೆ ಸಿಟ್ಟು ನಾ ಎಂದು ಅನುಭವಿಸಿಲ್ಲ , ಕೆಲಸದವಳು ಮೊದಲೇ ಹೇಳಿದ್ದಳು ‘’ ಕೆಂಪ್ ಅರಬಿ ನಾ ಒಗ್ಯಾಂಗಿಲ್ರಿ ಅಕ್ಕಾರ ‘’ ನನ್ನ ಎಣ್ಣೆ ನೀರು ಆದ ನಂತರ ಅಮ್ಮ ಅದನ್ನಲ್ಲ ತೊಳೆಯುತ್ತಿದ್ದಳು, ನನಗೆ ಅಳು ಬರುತ್ತಿತ್ತು , ಅಮ್ಮನಿಗೆ ಹೇಳಿದರೆ ‘’ ಅಯ್ಯೋ ನನ್ನ ಅಮ್ಮ ನನ್ನ ಬಾಣಂತನ ಆದಾಗ ನನಗು ಇದೆಲ್ಲ ಮಾಡಿದಾಳೆ ಇದೇನು ಹೊಸ ವಿಷಯ ಅಲ್ಲ ನಿನ್ನಂದೊಂದು ಊರಲ್ಲಿ ಇಲ್ಲದ್ದು ಎಲ್ಲದ್ದಕ್ಕೂ ತಕರಾರು ’’ ಅದು ಅಮ್ಮನ ತಾದ್ಯಾತ್ಮ ನನಗೆ  ನಿಲ್ಲದ ಬಿಕ್ಕಳಿಕೆ,

ಎರಡನೇ ಬಾಣಂತನ ನಾ ಇಲ್ಲೇ ಮಾಡಿಕೊಂಡೆ ದೇಶ ಬಿಟ್ಟು ಪರದೇಶದಲ್ಲಿ !! ಅಮ್ಮ ಜತೆಯಿದ್ದಿದ್ದಕ್ಕೆ ಅದೆಷ್ಟೋ ಆರಂ , ಆದರೆ ಈ ಸಾರಿ ಅಮ್ಮನ ಕೈಯ್ಯಲ್ಲಿ ಆ ಬಟ್ಟೆ ತೊಳೆಸುವ ಕಾರ್ಯಕ್ರಮ ಮಾಡಿಸುವ ಪ್ರಮೇಯ ಇರಲಿಲ್ಲ , ಹೆಚ್ಚಿಗೆ ಸ್ರಾವ ಇರುವ ಮೊದಲ ಹದಿನೈದು ದಿನಕ್ಕೆ ಮೆಟರ್ನಿಟಿ ಪ್ಯಾಡ್ ಗಳು ಲಭ್ಯವಿವೆ. ಆಸ್ಪತ್ರೆಯಲ್ಲಿ ವಿಶೇಷವಾದ ಚೌಕಾಕಾರದ ಪ್ಯಾಡ್ ಕೂಡ ಕೊಟ್ಟಿದ್ದರು,  ಅಮ್ಮ ಈ ಸಾರಿ ಯಾವುದೇ ಗಿಲ್ಟ್ ಇಲ್ಲದೆ ಬಾಣಂತನ ಆಗ್ತಿದೆ ಅಮ್ಮ  ಅಂತಿದ್ದೆ , ಅಮ್ಮನಿಗೆ ಪ್ರತಿದಿನ ನನ್ನ ಖುಷಿ ಹೇಳಿಕೊಳ್ಳುತ್ತಿದ್ದೆ, ಆಕೆ ಸುಮ್ಮನೆ ನಗುತ್ತಿದ್ದಳು.

ಪ್ಯಾಡ್ ಬಳಸುವುದು ಒಂದು ಆಯ್ಕೆ ಅಷ್ಟೇ , ಕೆಲವರಿಗೆ ಇನ್ನು ಬಟ್ಟೆಯೇ ಹಿತ , ಕೆಲವರು ಟ್ಯಾಂಪ್ಯೂನ್ಸ್ ಬೆಸ್ಟ್ ಅನ್ನುತ್ತಾರೆ ಪ್ಯಾಡ್ ಬಳಸುವ ನಮ್ಮಂತವರಿಗೆ ಅದೇ ಹಿತ ಅನಿಸುತ್ತದೆ. ತಿಂಗಳ ನಾಲ್ಕು ದಿನ ಅಗತ್ಯವಿದೆ ಅನಿಸಿದಾಗಷ್ಟೇ ಬಳಸುವ ಈ ವಸ್ತುವಿಗೆ ಹೆಣ್ಣುಮಕ್ಕಳು ಬಳಸುವ ಇತರ ಪ್ರಸಾಧನ ಗಳಷ್ಟೇ ಮಹತ್ವ ನೀಡಬೇಕಾದ ಅನಿವಾರ್ಯತೆಯಿದೆ.

ಈ ದೇಶದ ಪ್ರತಿಯೊಂದು ಪಬ್ಲಿಕ್ ಶೌಚಾಲಯದಲ್ಲಿ ನಾಣ್ಯಗಳನ್ನು ಹಾಕಿ ಪ್ಯಾಡ್ ಗಳನ್ನ ತುರ್ತಾಗಿ ಬೇಕೆಂದಾಗ ಪಡೆಯುವ ಸೌಲಭ್ಯಗಳಿವೆ. ಪ್ರಾಥಮಿಕ , ಮಾಧ್ಯಮಿಕ ಶಾಲೆಯಲ್ಲಿ ಅಗತ್ಯದ  ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ಒದಗಿಸುತ್ತಾರೆ. ಪಿರಿಯಡ್ಸ್ ಬರುವ ಸೂಚನೆಯಿದ್ದಾಗ ಲೈನರ್ಸ್ ಗಳನ್ನೂ ಕೂಡ ಬಳಸಬಹುದು.

ಅದೆಲ್ಲೋ ಮೂಲೆಯಲ್ಲಿ ಹೊಗೆಉಣ್ಣುತ್ತ  ಉಸಿರುಗಟ್ಟಿ ಕುಳಿತ ಹಳೆಸೀರೆಯ ತುಂಡುಗಳಿಂದ ತರಹೇವಾರಿ ಬ್ರಾಂಡಿನ ಪ್ಯಾಡಗಳನ್ನು ಬಳಸುವಲ್ಲಿಗಿನ ಈ ಪ್ರಸ್ತುತ ಸಮಯದವರೆಗೆ ಕಲಿತದ್ದು ಅದೆಷ್ಟು. !!  ನನಗೆ GST ಬಗೆಗೆ ಹೆಚ್ಚಿನ ಅರಿವಿಲ್ಲ ಆದರೆ ಸ್ಯಾನಿಟರಿ ಪ್ಯಾಡ್ ಒದಗಿಸುವ ಆರಂ ಗೊತ್ತಿದೆ. ಯಾವ ವಿಷಯವೇ ಆಗಲಿ ಎಲ್ಲದ್ದಕ್ಕೂ ನಮ್ಮದೂ ಒಂದಿರಲಿ ಅನ್ನುವ ಮನೋಭಾವದಲ್ಲಿ  ಪ್ರತಿಕಿಯಿಸುವ ಮೊದಲು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯೋಚಿಸುವ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ.

‍ಲೇಖಕರು avadhi

July 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: