-ಕೆ ಎಸ್ ಎಸ್ ಕೆ ಕೊಪ್ಪ
ನಾನು ಹಾಗೂ ನೀಲಿ ಚಿಟ್ಟೆ….
ಅಂದು ಅಂಗಾತ ಮಲಗಿ ಉರಿದುರಿದು
ಬೀಳುತ್ತಿದ್ದ ಉಲ್ಕೆಗಳ ನೋಡುತ್ತಿದ್ದೆ….
ಬಹುದಿನಗಳ ಕಾಲ ಮರೆಯಾಗಿದ್ದ
ಅದೇ ಸುಂದರ ನೀಲಿ ಚಿಟ್ಟೆ
ಮತ್ತೊಮ್ಮೆ ಮೆಲ್ಲನೆ ಹಾರಿ ಬಂದು
ಕುಳಿತು, ನನ್ನೆದೆ ಬಡಿತವ ಕೇಳುತ್ತಿತ್ತೇನೋ….
ಬೆರಗಿನಿಂದ ಅದನ್ನೇ ನೋಡುತ್ತಾ
ಕ್ಷಣಗಳು ಉರುಳುತ್ತಿದ್ದರೂ ನಾನು
ಏಳುವ ಪ್ರಯತ್ನ ಮಾಡಲಿಲ್ಲ ಅದೂ
ಹಾರಿಹೋಗುವ ಯತ್ನ ಮಾಡಲಿಲ್ಲ
ಅದರ ಭೇಟಿ ಇದೇ ಮೊದಲಲ್ಲ
ಬಹುಶಃ ಕೊನೆಯದೂ ಅಲ್ಲ….
ಅದಕೆ ಹೇಗೆ ತಿಳಿಯುತ್ತಿತ್ತೋ
ನಾನು ಬೇಸರಗೊಂಡಾಗ ಮಾತ್ರ
ಅಂಗಾತ ಮಲಗಿ ಮುಗಿಲ ದಿಟ್ಟಿಸುತ್ತೇನೆಂದು….
ಪ್ರತಿಬಾರಿಯೂ ನನ್ನೆಲ್ಲಾ ಭಾವಗಳ
ಅರಿತು, ಹಾರಿ ಹೋಗಿ ಅದ್ಯಾರಿಗೆ
ತಲುಪಿಸುತ್ತದೋ, ಒಮ್ಮೆ ಕೇಳಿಬಿಡಬೇಕು….






0 Comments