ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೇ ದೋಸೆ, ಅದೇ ಮಾಣಿ, ಅದೇ ಪ್ರಕಾಶ್ ರೈ!

551


 
 
 
 

                                                          ಎ ಆರ್ ಮಣಿಕಾಂತ್

ಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು `ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕದ ಬಿಡುಗಡೆ ಸಮಾರಂಭ. `ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್ ಪೋರ್ಟ್ ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ’ ಅಂದಿದ್ದರು ನಟ ಪ್ರಕಾಶ್ ರೈ.

ದಿನಕ್ಕೆ ನಾಲ್ಕು ಶೆಡ್ಯೂಲ್ ಗಳಲ್ಲಿ ದುಡಿಯುವ ಪ್ರಕಾಶ್ ರೈ ಅವರಂಥ ಬಿಜಿ ನಟ ಆಫ್ಟರಾಲ್ ಒಂದು ಪುಸ್ತಕ ಬಿಡುಗಡೆಯ ಕಾರಣಕ್ಕೇ ಬೆಂಗಳೂರಿಗೆ ಬರುತ್ತಾರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಅವರು ಬರುವುದಿಲ್ಲ ಎಂಬ ನಂಬಿಕೆ ಎಲ್ಲರಿಗೂ ಇತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಪ್ರಕಾಶ್ ರೈ ಬೆಳ್ಳಂಬೆಳಗ್ಗೆ 9.40ಕ್ಕೇ ರವೀಂದ್ರ ಕಲಾಕ್ಷೇತ್ರದ ಅಂಗಳಕ್ಕೆ ಬಂದೇ ಬಿಟ್ಟರು! ಕಾರ್ಯಕ್ರಮವಿರುವುದು ಹನ್ನೊಂದು ಗಂಟೆಗೆ ಎಂದು ತಿಳಿದಾಗ ಅಲ್ಲಿನ ಕ್ಯಾಂಟೀನ್ ಕಟ್ಟೆಯ ಮೇಲೆ ಥೇಟ್ ಕಾಲೇಜು ಹುಡುಗನ ಥರಾ ಕೂತುಕೊಂಡರು. `ಹದಿನೈದು ವರ್ಷದ ಹಿಂದೆ, ಇದೇ ಜಾಗದಲ್ಲಿ ಕೂತಿರುತ್ತಿದ್ದೆ. ಆಗ ಜೇಬಲ್ಲಿ ಕಾಸಿರುತ್ತಿರಲಿಲ್ಲ’ ಎಂಬುದನ್ನೆಲ್ಲ ನೆನಪು ಮಾಡಿಕೊಳ್ಳುವ ವೇಳೆಗೇ ಅವರ ಹಳೆಯ ಗೆಳೆಯರ ಹಿಂಡು ಬಂದೇ ಬಂತು. ಹಾಗೆ ಬಂದವರೆಲ್ಲ ಪದೇ ಪದೆ ಕಣ್ಣುಜ್ಜಿಕೊಂಡು ತನ್ನನ್ನೇ ಬೆರಗಿನಿಂದ ನೋಡುವುದನ್ನು ಕಂಡ ಪ್ರಕಾಶ್ ರೈ ತುಂಟತನದಿಂದ ಹೇಳಿದರು: `ತಡವಾಗಿ ಬಂದ್ರೆ ಕಲಾಕ್ಷೇತ್ರದಲ್ಲಿ ಜಾಗ ಸಿಗಲ್ಲ ಅನ್ನಿಸ್ತು. ಅದಕ್ಕೇ ಬೇಗ ಬಂದುಬಿಟ್ಟೆ…’
49-copy1
***
ಹದಿನೈದು ವರ್ಷಗಳ ಹಿಂದೆ ಕಲಾಕ್ಷೇತ್ರಕ್ಕೇ `ಅಪರಿಚಿತ’ರಾಗಿದ್ದರಲ್ಲ ರೈ? ಆಗಲೂ ಇವರ ಸವಾರಿ ಟೌನ್ ಹಾಲ್ ಸಮೀಪದ ಕಾಮತ್ ಹೋಟೆಲ್ ಗೆ ಹೋಗುತ್ತಿತ್ತು. ಜತೆಗೆ ಗೆಳೆಯರಿರುತ್ತಿದ್ದರು. ಹಾಗೆ ಹೋದವರು, ಒಂದು ಮೂಲೆ ಟೇಬಲ್ ನಲ್ಲಿ ಕೂತು ಸಿಗರೇಟು ಹಚ್ಚುತ್ತಿದ್ದರು. ಆ ಟೇಬಲ್ ಗೆ ಸರ್ವ್ ಮಾಡುತ್ತಿದ್ದ ಮಾಣಿಗೆ, ರೈ ಸಾಹೇಬರ ಮೇಲೆ ಅದೇನೋ ಅಕ್ಕರೆ, ಪ್ರೀತಿ, ಮಮಕಾರ. ಇವರ ಪಟ್ಟಾಂಗವೆಲ್ಲ ಮುಗಿದ ನಂತರ ಆತ ಬೈಟು ಕಾಫಿ ತಂದಿಡುತ್ತಿದ್ದ.
 ಮೊನ್ನೆ ಕಲಾಕ್ಷೇತ್ರದ ಎದುರು ಕೂತಾಗ ಕಾಮತ್ ಹೋಟೆಲಿನ ತಿಂಡಿ ನೆನಪಾಯಿತು. ತಕ್ಷಣವೇ ಹಳೆಯ ಗೆಳತಿಯ ಮನೆ ಹುಡುಕುವ ಹುಡುಗನಂತೆ ಪ್ರಕಾಶ್ ರೈ ಸಾಹೇಬರು, ಗೆಳೆಯ ಬಿ. ಸುರೇಶ ರನ್ನೂ ಜತೆಗಿಟ್ಟುಕೊಂಡು ಕಾಮತ್ ಹೋಟೆಲ್ ಗೆ ಹೋಗಿಯೇಬಿಟ್ಟರು. ಅದೇ ಹಳೆಯ ಟೇಬಲ್ ನ ಮೂಲೆಯಲ್ಲಿ ಕೂತು ಮಸಾಲೆ ದೋಸೆಗೆ ಆರ್ಡರ್ ಮಾಡಿದರು. ನಂತರ ಸಹಜ ಕುತೂಹಲದಿಂದ, ತನ್ನ ಗೆಳೆಯನಂತಿದ್ದ ಹಳೆಯ ಮಾಣಿಯ ಬಗ್ಗೆ ವಿಚಾರಿಸಿದರು. `ಆತ ಈಗಲೂ ಇಲ್ಲೇ ಇದ್ದರೆ, ಸ್ವಲ್ಪ ಕರೀತೀರಾ? ನಾನು ನೋಡ್ಬೇಕು’ ಎಂದೂ ಕೇಳಿಕೊಂಡರು.
 ಆ ಮಾಣಿ ಬೆರಗಿನಿಂದ ಬಂದವನೇ- `ಓ ಪ್ರಕಾಶ್ ರೈ ಸಾರ್… ನೀವು ಈಗಲೂ ಹಾಗೇ ಇದೀರ. ಏನೇನೂ ಬದಲಾಗಿಲ್ಲ ನೋಡಿ, ಸ್ವಲ್ಪ ದಪ್ಪ ಆಗಿದೀರ ಅಷ್ಟೆ, ಅಂದ!’
`ಹೌದಪ್ಪಾ ಹೌದು. ನಾನೂ ಹಾಗೇ ಇದೀನಿ. ನೀನೂ ಹಾಗೇ ಇದೀಯ. ನಾನು ಮೊದಲು ಕೂರ್ತಾ ಇದ್ದೆನಲ್ಲ? ಅದೇ ಜಾಗದಲ್ಲಿ ಈಗಲೂ ಕೂತಿದ್ದೀನಿ. ಎಲ್ಲಿ, ಬೇಗ ಮಸಾಲೆ ದೋಸೆ ಕೊಡು. ಹಸಿವಾಗ್ತಿದೆ’ ಅಂದರು ರೈ.
 ತಕ್ಷಣವೇ ಕರೆಕ್ಷನ್ ಹಾಕಿದ ಆತ- `ದೋಸೆ ತಂದುಕೊಡ್ತೇನೆ. ಆದ್ರೆ ನೀವು ಟೇಬಲ್ ಈ ಕಡೆ ಕೂರ್ತಾ ಇರಲಿಲ್ಲ. ಆ ಕಡೆ ಕೂರ್ತಾ ಇದ್ರಿ’ ಅಂದನಂತೆ!
 ತಕ್ಷಣವೇ ಆತ ತೋರಿಸಿದ ಜಾಗಕ್ಕೇ ಹೋಗಿ ಕೂತ ರೈ, ಪಟ್ಟಾಗಿ ಎರಡು ಮಸಾಲೆ ದೋಸೆ ಬಾರಿಸಿದರಂತೆ…
 ***
 ಏಪ್ರಿಲ್ 26ರ ಸಂಜೆ ಇದಿಷ್ಟನ್ನೂ ಖುಷಿಯಿಂದ ಹೇಳಿಕೊಂಡರು ಪ್ರಕಾಶ್ ರೈ. ಅವರ ಕಂಗಳಲ್ಲಿ ಹಸುಳೆಗೆ ಆಗುವಂಥ ಆನಂದವಿತ್ತು.

‍ಲೇಖಕರು avadhi

4 May, 2009

6 Comments

  1. shama

    superb

  2. shivaprakash

    ಲೇಖನ ಓದಿ ತುಂಬಾ ಕುಶಿ ಆಯ್ತು.
    ನೆನಪಿನ ಪುಟಗಳೇ ಹಾಗೆ, ಮನ ಕೆದಕದೆ ಬಿಡವು..

  3. shivu.k

    ನಾನು ಕೆಲಸದ ಒತ್ತಡದಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ..ಅದೇ ನನಗೆ ನಷ್ಟ…

  4. Ramapra

    It was a great function ,For a bok release so much big croud. you are simply great Mani sir.
    -RMP

  5. ಬಾನಾಡಿ

    ಬರೇ ಕನ್ನಡ, ಕರ್ನಾಟಕ ಎಂಬ ಲಕ್ಷ್ಮಣರೇಖೆಯನ್ನು ದಾಟಿ ತನ್ನ ಅದ್ಭುತ ಪ್ರತಿಭೆಯಿಂದಲೇ ಜಗದ್ವಿಖ್ಯಾತನಾದ ಪ್ರಕಾಶ್ ರೈ ಅವರ ಸಜ್ಜನಿಕೆ ಕೊಂಡಾಡುವಂತಹುದು. ಅಭಿನಂದನೆಗಳು.

  6. ಕಂಡಕ್ಟರ್ ಕಟ್ಟಿಮನಿ 45E

    ಪ್ರಕಾಶ್ ರೈ ಬಂದ ಸಮಯಕ್ಕೆ ಕಲಾಕ್ಚೇತ್ರದಲ್ಲಿ ನಾನು, ಗೆಳೆಯ ವಿಜಯ್ ರಾಜ್ ಬಿಟ್ಟರೆ ಬೆರಳೆಣಿಕೆಯಷ್ಟು ಜನರಿದ್ದೆವು. ಬಿ. ಸುರೇಶ್ ಜೊತೆ ಕಲಾಕ್ಚೇತ್ರ ಒಳಒಕ್ಕು ಒಂದು ಸುತ್ತು ನೋಡಿ. ಸ್ವಲ್ಪ ಸಮಯದ ನಂತರ ಪುನಃ ಬಂದು ಸಾಮಾನ್ಯರಂತೆ ಕಟ್ಟೆಯ ಮೇಲೆ ಕುಳಿತು ಹರಟಿದರು, ನಮ್ಮ ಕಂಡಕ್ಟರ್ ಸೋಮು,ಮೆಡಿಕಲ್ ಚಂದ್ರು ಪರಿಚಯಿಸಿಕೊಂಡು ಸರ್ ಹಾಯ್ ಬೆಂಗಳೂರ್ ರೀಡರ್ಸ್ ನಾವು ಅಂದದಕ್ಕೆ ‘ಎಲ್ಲಿ ಬೆಳೆಗೆರೆ ,,ಬರ್ತಾರಾ’ಅಂದಾಗ ಖುಷಿಯೋ ಖುಶಿ.. ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading