ಮತ್ತೆ ಬಾಯಿಂದು
-ಮುಕುಂದಾ
ಅತ್ತಾಗ ಎತ್ತಿ ಮೇಲೆತ್ತಿ ಮುದ್ದಾಡಿ
ಪಕ್ಕನೇ ಹಾಡೊಂದ ಹಾಡಿ
ಬೆಳದಿಂಗಳ ಚಂದ್ರಮನತೋರಿ
ಬಿಟ್ಟಬಾಯಿಗೆ ತುತ್ತನಿಟ್ಟವಳೇ
ಮತ್ತೆ ಬಾಯಿಂದು ಮತ್ತೊಮ್ಮೆ ಎತ್ತಾಡು
ನೆತ್ತಿಗನ್ನಹತ್ತಿದಾಗ ಥಟ್ಟನೆ ಬಡಿದು
ನೆತ್ತಿಯಾನೆತ್ತಿ ಜಂತೆಷ್ಟು ಎಣಿಸೆಂದು
ವಾಟಗ ನೀರು ತಡಮಾಡದೆ ಕುಡಿಸಿ
ಸೆರಗಿನಲೇ ಮೂಗನೂರಸಿದವಳೇ
ಮತ್ತೆ ಬಾಯಿಂದು ಮತ್ತೊಮ್ಮೆ ಎತ್ತಾಡು
ಒಪ್ಪ ಓರಣದಿ ಸಿಂಗರಿಸಿ ಸಂಭ್ರಮಿಸಿ
ದೃಷ್ಟಿಬೊಟ್ಟನಿಟ್ಟು ನೆಟ್ಟಿಗೆ ಮುರಿದು
ಅಚ್ಛದಿಂದಾ ಎತ್ತಿ ಮುತ್ತೊಂದನಿತ್ತು
ಹರಸಿ ಹರಕೆಹೊತ್ತು ರಕ್ಷಿಸಿದವಳೇ
ಮತ್ತೆ ಬಾಯಿಂದು ಮತ್ತೊಮ್ಮೆ ಎತ್ತಾಡು
ಅಂಬೆಗಾಲಿಗೆ ಅಂದದಾ ಗೆಜ್ಜೆಕಟ್ಟಿ
ಗೆಜ್ಜೆನಾದಕೆ ಕ್ಷಣಬಿಡದೆ ಕಿವಿಗೊಟ್ಟು
ಎತ್ತ ಹೋದರು ಬಿಡದಂತೆ ಕಣ್ಣಿಟ್ಟು
ಕಟ್ಟೆಚ್ಚರದಿ ಕಾದು ಬೆಳೆಸಿದವಳೇ
ಮತ್ತೆ ಬಾಯಿಂದು ಮತ್ತೊಮ್ಮೆ ಎತ್ತಾಡು
ಹತ್ತಿಕ್ಕಲಾಗದು ಏನನೂ ನಿನ್ನಿಂದ
ವಯಸು ಎನಗೆ ಎಷ್ಟಾದರೇನಂತೆ
ಎಂದೆಂದು ನಿನಗೆ ನಾ ಕೂಸೇ ಅಲ್ಲವೇ
ತಿರುತಿರುಗಿ ಬೆವರಿ ಬಳಲಿರುವೆನು
ಮತ್ತೆ ಬಾಯಿಂದು ಮತ್ತೊಮ್ಮೆ ಎತ್ತಾಡು
ಪರಿತಪಿಸಿ ಹಾತೊರೆಯುತಿದೆ ಮನ
ವಿಲವಿಲನೆ ಒದ್ದಾಡಿ ಹೊಯ್ದಾಡುತಿದೆ
ತಿಳಿಯದಾಗಿದೆ ಕಾಣದಾಗಿದೆ ರಹದಾರಿ
ಬಾ… ಕೈ ಹಿಡಿದು ನಡೆಸೆನ್ನ ಮತ್ತೊಮ್ಮೆ
ಅಮ್ಮಾ, ಮತ್ತೆ ಬಾಯಿಂದು ಮತ್ತೊಮ್ಮೆ ಎತ್ತಾಡು ..






ಅಮ್ಮ ಅಂದರೆ ಅಗೆದಷ್ಟೂ ಪ್ರೀತಿ.ಚಂದ ಕವಿತೆ