ಎಲ್ಲ ಕೊಟ್ಟ ಮರ
ಸೂರಿ
ಮಕ್ಕಳಿಗೆ ಕತೆ ಹೇಳುವುದು ಬಹಳ ಕಷ್ಟ ಕಣ್ರೀ. ಮಕ್ಕಳಿಗೆ ಕತೆ ಹೇಳಿದವರಿಗಷ್ಟೇ ಗೊತ್ತು ಈ ಜವಾಬ್ದಾರಿ ಅಥವಾ ಈ ಕರ್ತವ್ಯ ಎಂಥಾ ಗುರುತರವಾದದ್ದು ಅಂತ. ಕತೆ ಹೇಳಬಹುದು ಆದರೆ ನಡುನಡುವೆ ಮಕ್ಕಳು ಕೇಳುವ ಪ್ರಶ್ನೆಗಳಿದ್ದಾವಲ್ಲಾ ಅವಕ್ಕೆ ಉತ್ತರ ಕೊಟ್ಟು ನೋಡಿ, ಆಗ ಗೊತ್ತಾಗತ್ತೆ ನಾವು ಎಂತಹ ಕಷ್ಟಗಳ ಸರಮಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಅಂತ. ಉದಾಹರಣೆಗೆ ಹೀಗೊಂದು ಕತೆಯಿದೇ ಅಂತ ಹೇಳಿ: ಒಂದೂರಲ್ಲಿ ಒಬ್ಬ ಇದ್ದ. ಅವನಿಗೆ ಒಂದಿನ ಭಾಳಾ ಹಸಿವಾಯ್ತು. ಯಾಕೇ. ಯಾಕೆ ಅಂದ್ರೆ ಅವನು ಊಟಾನೇ ಮಾಡಿರಲಿಲ್ಲ ಅದಕ್ಕೆ. ಯಾಕೇ. ಯಾಕೇಂದ್ರೆ ಅವನಿಗೆ ಅವನಮ್ಮ ಊಟ ಹಾಕಲಿಲ್ಲ ಅದಕ್ಕೆ. ಅಮ್ಮಂಗೆ ಅವನ ಮೇಲೆ ಸಿಟ್ಟು ಬಂದಿತ್ತಾ. ಹೂಂ, ಸಿಟ್ಟು ಬಂದಿತ್ತು. ತುಂಬಾ ಗಲಾಟೆ ಮಾಡಿದ್ನಾ ಅವನೂ. ಮಾಡಿದ್ದ, ಅದಕ್ಕೇ ಅವನಿಗೆ ಅವನಮ್ಮ ಊಟಾ ಹಾಕಲಿಲ್ಲ. ಗಲಾಟೆ ಮಾಡಿದ್ದಿಕ್ಕೆ ಟೀಚರ್ ಹತ್ರ ಹೇಳಿಲ್ವಾ ಅಮ್ಮ? ಅವತ್ತು ಸ್ಕೂಲ್ ರಜ, ಟೀಚರ್ ಇರಲಿಲ್ಲ. ಅವತ್ತು ಹಬ್ಬಾನಾ ಹೂಂ, ಹಬ್ಬಾ ಅದಕ್ಕೇ ಸ್ಕೂಲ್ ರಜಾ. ಅದಕ್ಕೇ ಟೀಚರ್ ಇರಲಿಲ್ಲ. ಅವನು ಹೊಟ್ಟೇ ಹಸಿವಿಂದ ರಸ್ತೇಲಿ ಹೋಗ್ತಾಯಿದ್ದ. ಯಾವ ಹಬ್ಬ ಅವತ್ತು? ಯಾವುದೋ ಒಂದು. ನೀನು ಹಿಂಗೆ ನಡುನಡುವೆ ಬಾಯಿ ಹಾಕಿದ್ರೆ ನಾನು ಮಲಕ್ಕೊಂಡು ಬಿಡ್ತೀನಿ ಅಷ್ಟೇ. ಉತ್ತರ ಹೇಳಲಾರದೇ ನಿದ್ದೆ ಬಂತೂ ಅಂತ ನಾಟಕ ಮಾಡಿ ಮಲಗಲು ಪ್ರಯತ್ನಿಸಿ, ಅಂತಹ ಹೊತ್ತಿನಲ್ಲೇ ಅವಕ್ಕೆ ನಿದ್ದೆ ಬರುವುದಿಲ್ಲ. ಅದೇನೋ ಅಂತಹ ಹೊತ್ತಿನಲ್ಲೇ ಅವುಗಳ ಸಕಲ ಇಂದ್ರಿಯಗಳು ಜಾಗ್ರತವಾಗಿ ಬಿಟ್ಟಿರುತ್ತವೆ.
ಮಕ್ಕಳಿಗೆ ಕತೆ ಹೇಳುವಷ್ಟೇ ಗುರುತರವಾದ ಕೆಲಸವೆಂದರೆ ಮಕ್ಕಳಿಗೆ ನಾಟಕ ಮಾಡುವುದು. ನಿಮ್ಮ ಕತೆ ಅಥವಾ ನಾಟಕ ಮಕ್ಕಳಿಗೆ ಇಷ್ಟವಾಗಲಿಲ್ಲವೋ ಮುಂದಿನ ಎರಡೇ ಸೆಕೆಂಡುಗಳಲ್ಲಿ ಅದು ಜಗಜ್ಜಾಹೀರಾಗಿಬಿಡುತ್ತದೆ. ವಯಸ್ಸಾದವರ ಹಾಗೆ ಅಥವಾ ದೊಡ್ಡವರ ಹಾಗೆ ಸಭ್ಯತೆಯ ಸೋಗಿನಲ್ಲಿ ತಮ್ಮ ಅಸಮಾಧಾನವನ್ನು, ತಮಗೆ ಇಷ್ಟವಾಗದೇ ಹೋದುದನ್ನು ಮುಚ್ಚಿಡುವುದಿಲ್ಲ. ಇದಕ್ಕೆ ಕಾರಣವೂ ಇದೆ. ಇತ್ತೀಚಿನ ದಾಖಲೆಗಳ ಪ್ರಕಾರ ಮಕ್ಕಳ ಅಟೆಂಷನ್ ಸ್ಪ್ಯಾನ್ ಕೇವಲ ಕೆಲವು ಸೆಕೆಂಡುಗಳು. ಅಷ್ಟರಮಟ್ಟಿಗೆ ಅವುಗಳ ಕುತೂಹಲವನ್ನು ಹಿಡಿದಿಟ್ಟಿರಬೇಕು. ಒಂದೆರಡು ಸೆಕೆಂಡು ಅವುಗಳ ಕುತೂಹಲ ಅತ್ತಿತ್ತಲಾಯಿತೋ ಆಕಾಶ ಕಳಚಿ ಬೀಳುತ್ತದೆ.

ನಮ್ಮ ಅಜ್ಜನಿಗೆ ನಾವು ದಿನಾ ರಾತ್ರಿ ಕಾಡುತ್ತಿದ್ದೆವು, ಕತೆ ಹೇಳೀ ಅಂತ. ಹುಮ್ಮಸ್ಸಿನಲ್ಲಿ ಅವರೂ ಕತೆ ಹೇಳುತ್ತಿದ್ದರು. ಅದೆಷ್ಟೋ ಕತೆಗಳನ್ನು ಹೇಳಿದ್ದಾರೆ ನಮಗೆ. ಈ ಕತೆಗಳು ನಮಗೆ ಎಷ್ಟರಮಟ್ಟಿಗೆ ಬಾಯಿಪಾಠವಾಗಿದ್ದವೆಂದರೆ ಅಜ್ಜ ಒಂದೆರಡು ಘಟನೆಗಳನ್ನು ಮರೆತಲ್ಲಿ, ಅಥವಾ ಸುಸ್ತಾಗಿ ಕತೆಯನ್ನು ಬೇಗ ಮುಗಿಸುವ ಹುನ್ನಾರದಲ್ಲಿ ಕತೆಯನ್ನು ಒಂದಿಷ್ಟು ಹಾರಿಸಿ ಹೇಳಿದಲ್ಲಿ ನಾವು ಕತೆಯನ್ನು ಮತ್ತೆ ಹಿಂದಕ್ಕೆ ಎಳೆದು ತಂದು ನಿಲ್ಲಿಸುತ್ತಿದ್ದೆವು. ಸುಮಾರು ತಿಂಗಳು ಎರಡು ತಿಂಗಳುಗಳಲ್ಲಿ ಅವರ ಬತ್ತಳಿಕೆ ಬರಿದಾಗುತ್ತಾ ಬಂತು. ನಿವರ್ಾಹವಿಲ್ಲದೇ ಅವರು ಈ ಮೊದಲು ಹೇಳಿದ ಕತೆಯನ್ನೇ ಹೇಳಲು ಶುರುಮಾಡುತ್ತಿದ್ದಂತೇ ನಮ್ಮಿಂದ ಅಸಹಕಾರ ಚಳುವಳಿ. ಇದು ಹಳೇ ಕತೆ, ಹೊಸಾ ಕತೆ ಹೇಳಿ ಅಂತ. ಅವರಾದರೂ ಎಷ್ಟು ಕತೆ ಹೇಳಿಯಾರು. ಸರಿ, ಕತೆ ಹುಟ್ಟಿಸಿ ಹೇಳಲು ಶುರುಮಾಡಿದರು. ಎಲ್ಲಾ ಕತೆಗಳನ್ನು ಹುಟ್ಟಿಸಿ ಹೇಳುವುದೇ. ಆದರೆ ಈ ಸಂದರ್ಭದಲ್ಲಿ ಹುಟ್ಟಿಸಿ ಕತೆ ಹೇಳುವುದು ಅಂದರೆ ಆ ಕ್ಷಣಕ್ಕೆ ತಲೆಗೆ ಏನು ತೋಚುತ್ತದೋ ಅದನ್ನು ಹೇಳುವುದು. ಆ ಕತೆಗೆ ಒಂದು ಆದಿಯಂತೂ ಇರುತ್ತದೆ. ಒಂದಾನೊಂದು ಊರಲ್ಲಿ ಅಂತಾನೋ ಒನ್ಸಾರಿ ಯೇನಾಯ್ತಪಾ ಅಂದ್ರೆ ಅಂತಾನೋ. ಆದರೆ ಕತೆಗೆ ಸರಿಯಾದ ಓಟ ಇರುವುದಿಲ್ಲ. ಕತೆಗೆ ಒಂದು ಕೊನೆಯಂತೂ ಖಂಡಿತಾ ಇರುವುದಿಲ್ಲ. ನಿದ್ದೆ ಬರುತ್ತಿದೆ ಎಂದಾಗ, ಕೇಳುವವರಿಗೋ ಹೇಳುವವರಿಗೋ ಬೋರಾಗುತ್ತಿದೆ ಎಂದಾಗ ಮಾತ್ರ ಆ ಕತೆಗೆ ಒಂದು ಅಂತ್ಯ. ಅಲ್ಲಿಗೆ ಅವತ್ತಿನ ಶಿಕ್ಷೆ ಮುಗಿಯಿತು. (ಹಲವಾರು ಬಾರಿ ನಾನು ಈ ಸಿನೆಮಾದ ಕತೆಗಾರರು ಅಥವಾ ಟೆಲಿವಿಷನ್ ಧಾರಾವಾಹಿಗೆ ಕತೆ ಮಾಡುವವರು ಕತೆ ಹೇಳುವುದನ್ನು ಕೇಳಿದ್ದೇನೆ. ಯಾವುದೇ ತಯಾರಿಯಿಲ್ಲದ ಕತೆಯಾದರಂತೂ ಕ್ಷಣಕ್ಷಣಕ್ಕೂ ಯಡವಟ್ಟುಗಳು. ಕತೆ ಜೋಡಿಸಲು ತೆಗೆದು ಕೊಳ್ಳುವ ಅನಗತ್ಯ ಬ್ರೇಕುಗಳು. ಅಂತಹ ಹೊತ್ತಿನಲ್ಲಿ ನೀವು ಏನಾದರೂ ಒಂದು ಪ್ರಶ್ನೆ ಕೇಳಿಬಿಟ್ಟರಂತೂ ಮುಗಿಯಿತು, ಕತೆ ಮುಗ್ಗರಿಸಿಬೀಳುತ್ತದೆ. ಅಂತಹ ಕತೆ ಕೇಳುವುದಂತೂ ಜಗತ್ತಿನ ಅತಿ ಕಠಿಣ ಶಿಕ್ಷೆಗಳಲ್ಲಿ ಒಂದು ಅಂತಲೇ ನಾನು ಭಾವಿಸಿದ್ದೇನೆ. ಮತ್ತೆ ನಮ್ಮ ಅಜ್ಜನ ಕತೆಗೆ ಬರುತ್ತೇನೆ.) ಕತೆ ಕೇಳುವ ನಮ್ಮ ಹಟ, ದಿನಕ್ಕೊಂದು ಹೊಸ ಕತೆ ಹೇಳಲಾಗದ ನಮ್ಮ ಅಜ್ಜನ ಕಷ್ಟ, ನಿದ್ದೆ ಬಂದರೂ ನಿದ್ದೆ ಮಾಡುವ ಹಾಗಿಲ್ಲದ ಸ್ಥಿತಿ. ಇವೆಲ್ಲಕ್ಕೂ ನಮ್ಮ ಅಜ್ಜ ಒಂದು ಉಪಾಯ ಕಂಡುಹಿಡಿದು ಕೊಂಡರು. ಆ ಕತೆ ಹೀಗಿದೆ.
ಒಂದು ದೊಡ್ಡ ರೂಮಿತ್ತು. ಆ ರೂಮು ತುಂಬಾ ನೂರಾರು ಅಕ್ಕಿ ಮೂಟೆಗಳು ಇದ್ವು. ರೂಮಿಗೆ ಒಂದೇ ಒಂದು ಕಿಟಿಕಿ ಇತ್ತು. ಆ ಕಿಟಿಕಿಯಿಂದ ಒಂದು ಸಾರಿ ಒಂದು ಗುಬ್ಬಚ್ಚಿ ಬಂತು. ಒಂದು ಕಾಳು ತೊಗೊಂಡು ಹೋಯ್ತು. ಇನ್ನೊಂದು ಗುಬ್ಬಿ ಬಂತು, ಇನ್ನೊಂದು ಕಾಳು ತೊಗೊಂಡು ಹೋಯ್ತು. ಮತ್ತೊಂದು ಗುಬ್ಬಿ ಬಂತು ಮತ್ತೊಂದು ಕಾಳು ತೊಗೊಂಡು ಹೋಯ್ತು. ಇನ್ನೊಂದು ಗುಬ್ಬಿ ಬಂತು…ಅಷ್ಟರಲ್ಲಿ ನಮಗೆ ಅಸಹನೆ. ಮುಂದೇನಾಯ್ತು ಹೇಳಿ ಅಂದರೆ ಅಜ್ಜನ ಉತ್ತರ ರೆಡಿಯಿತ್ತು. ಅಕ್ಕಿ ಎಲ್ಲಾ ಖಾಲಿ ಆದ ಮೇಲೆ ತಾನೇ ಕತೆ ಮುಂದೆ ಹೋಗಬೇಕು. ಕತೆ ಮುಂದೆ ಹೋಗಬೇಕಾದರೆ ರೂಮು ಖಾಲಿಯಾಗಬೇಕು. ಆಮೇಲೆ ಮುಂದಿನ ಕತೆ ಅಂತ ಹೇಳಿ ಮತ್ತೆ ಗುಬ್ಬಿ ಕತೆ ಶುರುಮಾಡುತ್ತಿದ್ದರು. ಮತ್ತೊಂದು ಗುಬ್ಬಿ ಬಂತು, ಮತ್ತೊಂದು ಕಾಳು ತೊಗೊಂಡು ಹೋಯ್ತು. ಸಿಟ್ಟಿನಲ್ಲಿ ನಾವು ತಿರುಗಿ ಮಲಗಿಬಿಡುತ್ತಿದ್ದೆವು. ಅಥವಾ ಹೂಂ ಹೂಂ ಅನ್ನುತ್ತಾ ಅನ್ನುತ್ತಾ ನಾವು ನಿದ್ದೆ ಮಾಡಿಬಿಡುತ್ತಿದ್ದೆವು. ಮಾರನೇ ದಿನ ಕತೆ ಹೇಳಿ ಅಂದರೆ ಅವೇ ಗುಬ್ಬಿಗಳು, ಅವೇ ಅಕ್ಕಿ ಮೂಟೆಗಳು. ಪ್ರಶ್ನೆ ಕೇಳಿದರೆ ಇನ್ನೂ ಅಕ್ಕಿಯಿದೆಯಲ್ಲಾ, ಅದು ಖಾಲಿ ಆಗಬೇಕಲ್ಲಾ ಆಮೇಲೆ ಕತೆ ಅಂದು ಗುಬ್ಬಿ ಕತೆ ಶುರುಮಾಡುತ್ತಿದ್ದರು, ನಮಗೆ ನಿದ್ದೆ ಬರುವ ತನಕ. ನನಗೆ ಈಗ ಅನಿಸುತ್ತಿದೆ ನಾವು ಮಲಗಿದ ಮೇಲೆ ಅಜ್ಜನ ತುಟಿಗಳ ಮೇಲೆ ತುಂಟ ನಗೆಯಿದ್ದಿರಲಿಕ್ಕೂ ಸಾಕು ಅಂತ.
ಮಕ್ಕಳ ಕತೆಗಳನ್ನು ಹುಡುಕುತ್ತಾ ಹೋದಂತೆ ಒಂದು ಪುಸ್ತಕ ಕಣ್ಣಿಗೆ ಬಿತ್ತು. ಶೆಲ್ ಸಿಲ್ವರ್ಸ್ಟೈನ್ ಅಂತ ಒಬ್ಬ ಅಸಾಮಾನ್ಯ ಕತೆಗಾರ. (ಇತ್ತೀಚೆಗೆ ನಾನು ಓದಿರುವ ಮತ್ತೊಬ್ಬ ಮಕ್ಕಳ ಕತೆಗಾರ ಟೂನ್ ಟೆಲಿಗನ್ ಅಂತ, ನೆದರ್ಲ್ಯಾಂಡ್ ದೇಶದವನು. ಇವನ ಕತೆಯ ಬಗ್ಗೆ ಮುಂದೆಂದಾದರೂ ಬರೆಯುತ್ತೇನೆ.) ಈ ಸಿಲ್ವರ್ಸ್ಟೈನ್ ಬರೆದ ಒಂದು ಕತೆಯಿದೆ. ಗಿವಿಂಗ್ ಟ್ರೀ ಅಂತ.
ಒಂದು ಮರ. ಆ ಮರ ಒಂದು ಪುಟ್ಟ ಮಗೂನ್ನ ಭಾಳಾ ಇಷ್ಟ ಪಡ್ತಾಯಿದ್ಲು. ಪ್ರತಿ ದಿನ ಆ ಮಗು ಆ ಮರದ ಹತ್ತಿರ ಬಂದು, ಆ ಮರದ ಎಲೆಗಳನ್ನ ಆರಿಸಿಕೊಂಡು ಒಂದು ಕಿರೀಟ ಮಾಡಿಕೊಂಡು ತಾನೇ ಕಾಡಿನ ರಾಜ ಅಂತ ಆಟ ಆಡ್ತಾಯಿತ್ತು. ಆಟ ಆಡಿದ ಮೇಲೆ ಆ ಮರಾನ್ನ ಹತ್ತಿ ಅವಳ ಕೊಂಬೆಗಳನ್ನ ಹಿಡಕೊಂಡು ಜೋಕಾಲಿ ಆಡ್ತಾಯಿತ್ತು. ಆ ಮರ ಆ ಮಗೂಗೆ ತಿನ್ನೋಕೆ ಬೇಕಾದಷ್ಟು ಹಣ್ಣು ಕೊಡ್ತಾಯಿದ್ಲು. ಹಣ್ಣು ತಿಂದಾದ ಮೇಲೆ ಇಬ್ರೂ ಸೇರಿ ಕಣ್ಣಾಮುಚ್ಚಾಲೆ ಆಡ್ತಾಯಿದ್ರು. ಆಡಿ ಸುಸ್ತಾಯಿತೂ ಅಂದರೆ ಆ ಮರದ ನೆರಳಲ್ಲಿ ಆ ಮಗು ನಿದ್ದೆ ಮಾಡ್ತಾಯಿತ್ತು. ಆ ಮಗೂಗೂ ಆ ಮರಾ ಅಂದ್ರೆ ಭಾಳಾ ಅಂದ್ರೆ ಭಾಳಾ ಇಷ್ಟ. ಮರ ಕೂಡಾ ತುಂಬಾ ಖುಷಿಯಾಗಿದ್ಲು. ಕಾಲ ಕಳೀತು. ಮಗು ಬೆಳೆದು ದೊಡ್ಡದಾಯಿತು. ಒಂದು ಹುಡುಗಿ ಅದರ ಜೊತೆ ಬರೋಕೆ ಶುರು ಮಾಡಿದ್ಲು. ಆದ್ರೆ ಮುಂಚಿನ ಹಾಗೆ ಆ ಮಗು ದಿನಾ ಬರ್ತಾಯಿರಲಿಲ್ಲ. ಎಷ್ಟೋ ದಿನ ಮರ ಒಂಟಿಯಾಗೇ ಕಾಲ ಕಳೀತಾಯಿತ್ತು. ಭಾಳಾ ದಿನ ಆದ ಮೇಲೆ ಒಂದಿನ ಆ ಮಗು ಮರದ
ಹತ್ತಿರ ಬಂತು. ಆಗ ಆ ಮರ ಹೇಳಿದ್ಲು, ಬಾ ಮಗೂ, ನನ್ನ ಸೊಂಟಾ ಹಿಡಿದು ಮೇಲೆ ಹತ್ತು. ನನ್ನ ಕೊಂಬೆ ಹಿಡಕೊಂಡು ಜೋಕಾಲಿ ಆಡು. ಬೇಕಾದಷ್ಟು ಹಣ್ಣು ತಿನ್ನು. ನನ್ನ ನೆರಳಲ್ಲಿ ಮಲಕ್ಕೋ ಅಂತ. ಅದಕ್ಕೆ ಆ ಮಗು ಹೇಳಿತು, ಮರ ಹತ್ತಿ ಆಡೋಕೆ ನಾನೇನು ಇನ್ನೂ ಸಣ್ಣ ಮಗೂ ಅಲ್ಲ. ನಂಗೆ ದುಡ್ಡು ಬೇಕು. ನಾನು ಏನೇನೆಲ್ಲಾ ತೊಗೋಬೇಕು. ನಂಗೆ ದುಡ್ಡು ಕೊಡ್ತೀಯಾ. ಅಯ್ಯೋ ಮಗೂ, ನನ್ನ ಹತ್ರ ದುಡ್ಡೆಲ್ಲಿ ಬರಬೇಕು. ಬೇಕಾದ್ರೆ ನನ್ನ ಹಣ್ಣು ಕಿತ್ಕೋ. ಸಂತೆಗೆ ಹೋಗಿ ಮಾರು. ದುಡ್ಡು ಸಿಗತ್ತೆ. ಏನೇನು ಬೇಕೋ ಅದನ್ನು ತೊಗೊಂಡು ಖುಷಿಯಾಗಿರು ಅಂತ ಮರ ಹೇಳಿದ್ಲು. ಮಗು ಮರ ಹತ್ತಿ ಬೇಕಾದಷ್ಟು ಹಣ್ಣು ಕಿತ್ಕೊಂಡು ಹೋಯಿತು. ಮರಕ್ಕೆ ಭಾಳಾ ಖುಷಿಯಾಯಿತು. ಮತ್ತೆ ಭಾಳಾ ದಿನ ಮಗು ಬರಲೇಯಿಲ್ಲ. ಮರಕ್ಕೆ ಭಾಳಾ ಬೇಜಾರಾಯಿತು. ಒಂದಿನ ಮಗು ಮತ್ತೆ ಬಂತು. ಇನ್ನೂ ಸ್ವಲ್ಪ ದೊಡ್ಡೋನಾಗಿತ್ತು. ಮರಕ್ಕೆ ಭಾಳಾ ಖುಶಿಯಾಗಿ ಹೇಳಿದ್ಲು, ಬಾ ಮಗೂ, ನನ್ನ ಸೊಂಟ ಹಿಡ್ಕೊಂಡು ಹತ್ತು. ಹಣ್ಣು ಕಿತ್ಕೋ. ಜೋಕಾಲಿ ಆಡು. ಖುಷಿಯಾಗಿರು ಅಂತ. ಅದಕ್ಕೆ ಮಗು ಹೇಳಿತು, ಮರ ಹತ್ತಿ ಆಡೋದಕ್ಕೆ ನಂಗೆ ಪುರುಸೊತ್ತಿಲ್ಲ. ನಾನೊಂದು ಮನೆ ಕಟ್ಕೋಬೇಕು. ನನ್ನ ಹೆಂಡತಿ ಮಕ್ಕಳ ಜೊತೆ ಇರೋಕೆ ನಂಗೆ ಒಂದು ಮನೆ ಬೇಕು. ನಂಗೊಂದು ಮನೆ ಕೊಡುಸ್ತೀಯಾ ಅಂತ. ಅದಕ್ಕೆ ಮರ ಹೇಳಿದ್ಲು, ನಂಗೆಲ್ಲಿದೆ ಮನೆ. ಇಡೀ ಕಾಡೇ ನನ್ನ ಮನೆ. ನೀನು ಬೇಕಾದ್ರೆ ನನ್ನ ಕೊಂಬೆ ಕತ್ತರಿಸಿ ತೊಗೊಂಡು ಹೋಗು. ಮನೆ ಕಟ್ಕೊಂಡು ಖುಷಿಯಾಗಿರು. ಸರಿ ಮಗು ತನ್ನ ಮನೆ ಕಟ್ಟೋಕೆ ಆ ಮರದ ಕೊಂಬೆಗಳನ್ನು ಕತ್ತರಿಸಿ ತೊಗೊಂಡು ಹೋಯ್ತು. ಮರಕ್ಕೆ ಭಾಳಾ ಸಂತೋಷ ಆಯಿತು. ಮತ್ತೆ ಭಾಳಾ ದಿನ ಮಗು ಬರಲೇಯಿಲ್ಲ. ಮರಕ್ಕೆ ಬೇಜಾರಾಯಿತು.
ಯಾವತ್ತೋ ಒಂದಿನ ಮಗು ಮತ್ತೆ ಮರದ ಕೆಳಗೆ ಬಂತು. ತುಂಬಾ ದೊಡ್ಡೋನಾಗಿತ್ತು ಅದು. ಮರ ಮತ್ತೆ ಕರೆದ್ಲು, ಬಾ ಮಗೂ ಆಟ ಆಡು ಅಂತ. ಅದಕ್ಕೆ ಮಗು ಹೇಳ್ತು, ಆಟ ಆಡೋ ವಯಸ್ಸಲ್ಲ ನಂದೀಗ. ಅಷ್ಟು ಶಕ್ತಿಯಿಲ್ಲ ನಂಗೀಗ. ನಂಗೆ ಒಂದು ದೋಣಿ ಬೇಕು. ಅದರಲ್ಲಿ ನದಿ ದಾಟಿ ಭಾಳಾ ದೂರ ಹೋಗ ಬೇಕು ನಾನು. ನಂಗೆ ದೋಣಿ ಕೊಡ್ತೀಯಾ ಅಂತ. ನನ್ನ ಸೊಂಟಾ ಕತ್ತರಿಸಿ ತೊಗೊಂಡು ಹೋಗು. ಅದ್ರಿಂದ ಒಂದು ದೋಣಿ ಮಾಡ್ಕೋ. ನೀನು ಬೇಕಾದಲ್ಲಿ ಹೋಗಿ ಖುಷಿಯಾಗಿರು ಅಂತ ಮರ ಹೇಳಿದ್ಲು. ಮಗು ಮರದ ಕಾಂಡ ಕತ್ತರಿಸಿ ತೊಗೊಂಡು ಹೋಯ್ತು. ಅದ್ರಿಂದ ಒಂದು ದೋಣಿ ಮಾಡ್ಕೊಂಡು ನದಿ ದಾಟಿ ಹೋಯಿತು. ಮರಕ್ಕೆ ಸಂತೋಷವಾಯಿತು. ಆದರೆ ನಿಜವಾಗ್ಲೂ ಭಾಳಾ ಸಂತೋಷ ಏನು ಆಗಿರಲಿಲ್ಲ. ಭಾಳಾ ಭಾಳಾ ದಿನ ಆದ ಮೇಲೆ ಮಗು ಮತ್ತೆ ಮರದ ಹತ್ತಿರ ಬಂತು. ಈಗ ಮರದ ಬೊಡ್ಡೆ ಮಾತ್ರ ಉಳಿದಿತ್ತು. ಮಗು ಹತ್ತಿರ ಬರತಿದ್ದ ಹಾಗೇ ಮರ ಹೇಳಿದ್ಲು, ಏನು ಮಾಡಲಿ ಮಗೂ, ನಿಂಗೆ ಕೊಡೊಕೆ ನನ್ನ ಹತ್ರ ಹಣ್ಣಿಲ್ಲ. ಹಣ್ಣು ತಿನ್ನೋಕೆ ನಂಗೆ ಹಲ್ಲೇ ಇಲ್ಲ ಅಂತ ಮಗು ಹೇಳಿತು. ಜೋಕಾಲಿ ಆಡೋಕೆ ನನ್ನ ಕೊಂಬೆ ಇಲ್ಲ. ಜೋಕಾಲಿ ಆಡೋಕೆ ಆಗಲ್ಲ ನನ್ನ ಕೈಲಿ ಈಗ. ವಯಸ್ಸಾಗಿದೆ ನಂಗೀಗ. ನನ್ನ ಸೊಂಟ ಇಲ್ಲ ನೀನು ಹತ್ತೋಕೆ. ನಿನ್ನ ಹತ್ತೋಕೆ ನನ್ನ ಕೈಲಾಗಲ್ಲ. ಆ ಶಕ್ತಿಯಿಲ್ಲ. ನಿಂಗೇನು ಕೊಡಲಿ ನಾನು. ಏನಿಲ್ಲ ನನ್ನ ಹತ್ರ. ನಾನೀಗ ಬರೀ ಬೊಡ್ಡೆ ಅಷ್ಟೇ. ಯಾವ ಉಪಯೋಗಾನೂ ಇಲ್ಲ ನನ್ನಿಂದ. ನಂಗೇನು ಬೇಡ. ಒಂದು ಸದ್ದಿಲ್ಲದ ಜಾಗದಲ್ಲಿ ಆರಾಮಾಗಿ ಕೂಡಬೇಕು ಅನಿಸಿದೆ. ತುಂಬಾ ಸುಸ್ತಾಗಿದೆ. ಅದಕ್ಕೆ ಮರ ಇದ್ದಬದ್ದ ತನ್ನ ಬೊಡ್ಡೇನ ನೆಟ್ಟಗೆ ಮಾಡಿಕೊಂಡು ಹುರುಪಿನಿಂದ ಹೇಳಿದ್ಲು, ಅಬ್ಬಾ, ಬೊಡ್ಡೆ ಆದರೇನಂತೆ, ಕೂಡೋಕೆ ನನಗಿಂತಾ ಒಳ್ಳೇ ಜಾಗ ಎಲ್ಲಿದೆ ಬೇರೆ. ಬಾ ನನ್ನ ಮೇಲೆ ಆರಾಮಾಗಿ ಕೂಡು. ಮಗು ಆ ಬೊಡ್ಡೆಯ ಮೇಲೆ ಕುಳಿತು ಕೊಂಡಿತು. ಮರಕ್ಕೆ ಸಂತೋಷದಿಂದ ನಕ್ಕಳು.
ಇಷ್ಟೆಲ್ಲಾ ಯಾಕೆ ಹೇಳಿದೆ ಅಂದರೆ ನನ್ನ ಮಗಳಿಗೆ ಕತೆ ಹೇಳುವ ಸಂದರ್ಭ ನನಗೆ ಅಷ್ಟು ಬರಲಿಲ್ಲ. ಆ ಜವಾಬ್ದಾರಿ ಹೊತ್ತಿದ್ದು ನನ್ನ ಅಮ್ಮ ಮತ್ತೆ ನನ್ನ ಅಣ್ಣ (ಅಂದರೆ ನನ್ನ ತಂದೆ). ಈಗ ನನ್ನ ಮೊಮ್ಮೊಗಳಿಗೆ ಕತೆ ಹೇಳುವ ಸರದಿ ನನ್ನದಾಗಿದೆ. ಅಜ್ಜ ಕತೆ ಹೇಳು ಅಂದರೆ ದಿನಕ್ಕೊಂದು ಕತೆ ಹೆಣೆಯುವುದು ಹೇಗೆ ಅನ್ನುವ ಯೋಚನೆಯಲ್ಲಿದ್ದೇನೆ.






Nice story about stories Sir. Please do share the new stories in avadhi 🙂