ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಚ್ಚರಿಯಾಗುತ್ತದೆ, ಜೊತೆಗೆ ಸಮಾಧಾನ ಕೂಡ..

ಅಭಿಸಾರಿಕೆಯೊಂದಿಗೆ ಪರಿಪ್ರೇಕ್ಷಣೆಯ ಪಯಣ..

sudha chidananda gowda

ಸುಧಾ ಚಿದಾನಂದಗೌಡ

ಮನಸು ಅಭಿಸಾರಿಕೆ..
ಚಪ್ಪರಿಸಿಕೊಂಡು ಉಚ್ಛರಿಸಬಹುದಾದ ಶೀರ್ಷಿಕೆ ಇದು.

ಅಭಿಸಾರಿಕೆ ಎಂದರೆ ದೇವಲೋಕದ ಅಪ್ಸರೆಯೆಂದು ಜ್ಞಾನಕೋಶವೂ, ಚಂಚಲೆಯೆಂದು ಸಾಮಾನ್ಯ ಪದಕೋಶವೂ, ನಲ್ಲನನ್ನು ಕಾಣಲು ಹೊರಟ ಹೆಣ್ಣೆಂದು ಅಂತರ್ಜಾಲವೂ ಅರ್ಥ ಹೇಳುತ್ತದೆ. ಈ ಕಥೆಯ ನಾಯಕಿ ಇದೆಲ್ಲವೂ ಹೌದು.

manasu abhisarikeಪದಬಳಕೆಯ ಸೊಗಸುಗಾರಿಕೆಯಷ್ಟೇ ಅಲ್ಲ, ಆಂತರಿಕವಾಗಿಯೂ ಗಾಢವಾದ ಸತ್ಯವೊಂದನ್ನು ಗಟ್ಟಿತನದಿಂದ, ಪ್ರಾಮಾಣಿಕತೆಯಿಂದ ನಿರೂಪಿಸುವ ಅಂತಃಸತ್ವ ಈ ಒಂದು ಕಥೆಗಿದೆ. ‘ಮಯೂರ’ದಲ್ಲಿ ಪ್ರಥಮ ಪ್ರಕಟಣೆ ಕಂಡಿರುವ ಈ ಕಥೆ ಸತ್ಯಗಳನ್ನು ಒಪ್ಪಿಕೊಳ್ಳುವ, ಹುಸಿ ಭಾವುಕತೆ, ಪೊಳ್ಳು ಆದರ್ಶ, ತೋರಿಕೆಯ ಸೋಗಲಾಡಿತನ ಇದಾವುದೂ ಇಲ್ಲದೆ ಹೆಣ್ಣುಗಂಡಿನ ಸಂಬಂಧಗಳನ್ನು ದೌರ್ಬಲ್ಯದ ಸಮೇತ ತೆರೆದಿಡುವ ದಿಟ್ಟ ಕಥೆ. ಸಮಾಜ ಹೆಣ್ಣಿಗೆ ಯಾವ್ಯಾವ ಗುಣಸ್ವಭಾವಗಳನ್ನು ಆರೋಪಿಸಿದೆಯೋ ಅವುಗಳನ್ನು ಮೀರಿದ್ದೊಂದು ವಾಸ್ತವದ ಪರಿಪ್ರೇಕ್ಷಣೆ ಆಕೆಗಿದೆ ಮತ್ತು ಅದನ್ನು ಮೊದಲು ತಾನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯ ಭಾರವನ್ನು ಈ ಹೊತ್ತಿನ ಸ್ತ್ರೀಸಮುದಾಯ ಹೊರಬೇಕಿದೆ.

ಇದನ್ನು ಎಷ್ಟು ಚೆನ್ನಾಗಿ ಶಾಂತಿಯವರು ಮಂಡಿಸುತ್ತಾರೆಂದರೆ ಈ ಭಾರ ಹೊರುವುದು ಕಷ್ಟವೇನಲ್ಲ, ಭರಿಸಬಹುದು ಎಂಬುದೊಂದು ಆತ್ಮವಿಶ್ವಾಸವನ್ನು ಹೆಣ್ಣುಮಕ್ಕಳಲ್ಲೂ, ಹೀಗಿರುವ ವಾಸ್ತವವನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ ಬಿಡು ಎಂಬ ಭಾವನೆಯನ್ನು ಗಂಡಸರಲ್ಲೂ ಏಕಕಾಲದಲ್ಲಿ ಈ ಕಥೆ ಉಂಟುಮಾಡುತ್ತದೆ ಮತ್ತು ಆ ಮೂಲಕ ಸೂಕ್ಷ್ಮವಾದ, ಮಹತ್ವವಾದ ಬದಲಾವಣೆಯನ್ನು ಯಾವ ಘೋಷಣೆಯಿಲ್ಲದೆ, ಸ್ಲೋಗನ್ ಇಲ್ಲದೆ, ಅಬ್ಬರದ ಹಾವಳಿಯಿಲ್ಲದೆ, ಇಸಂಗಳ ಹಂಗಿಲ್ಲದೆ ಸಹಜವೆಂಬಂತೆ ಮಾಡುತ್ತದೆ. ಖಾಸಗಿತನವು ಸಮುದಾಯಿಕವೂ ಆಗುವ ರೀತಿ ಹೀಗೆ ಎಂದು ತೋರುತ್ತದೆ.

ಪಯಣ ಎಂಬುದು ಶಾಂತಿಯವರ ಮತ್ತೊಂದು ಗಾಢಕಥೆ. ಇದಕ್ಕೆ ವರ್ತಮಾನ ಕಥಾಸ್ಫರ್ಧೆಯ ಪ್ರಥಮ ಬಹುಮಾನವೂ ಬಂದಿದೆ. ರೈಲೊಂದರಲ್ಲಿ ಕುಳಿತು ಪಯಣ ಹೊರಟಿರುವ ಕಥಾನಾಯಕಿಯ ಒಳತೋಟಿ ನವಿರುಭಾವುಕತೆಯ ಪ್ರೀತಿಯಲ್ಲಿ, ಆದರೆ ಆ ಪ್ರೀತಿಗಿರುವ ಮಿತಿಯನ್ನು ಕೂಡಾ ಸ್ವೀಕರಿಸುವುದರೊಂದಿಗೆ ಒಂದುಬಗೆಯ ಯಾತನಾಮಯ ಸುಖದಲ್ಲಿ ಕೊನೆಗೊಳ್ಳುತ್ತದೆ. ಸಾಮಾಜಿಕ ಚೌಕಟ್ಟಿನ ಮಿತಿ ನಿಜಕ್ಕೂ ಮಿತಿಯೇ ಅಲ್ಲ. ಪ್ರೀತಿಯ ತಾದಾತ್ಮ್ಯತೆ ಎಲ್ಲ ಮಿತಿಗಳನ್ನೂ ಮೀರಿದ್ದು ಮತ್ತು ಅದು ಹೆಣ್ಣಿಗೆ ಕೊಡುವ ಮಾನಸಿಕ ಸಂತೃಪ್ತಿ, ದಾಂಪತ್ಯದ ಚೌಕಟ್ಟಿನೊಳಗಿನ ದುಗುಡಕ್ಕೊಂದು ಸುಂದರ ಹೊರದಾರಿಯಂತೆ ತೆರೆದುಕೊಳ್ಳುತ್ತದೆ. ಹೊಸಶಕ್ತಿಯನ್ನೂ ಅವಳಲ್ಲಿ ತುಂಬುತ್ತದೆ. ಮುರಿದು ಹೋಗಬಹುದಾದೊಂದು ದಾಂಪತ್ಯಕ್ಕೆ ಹೊಸಭಾಷ್ಯೆಯೊಂದರ ಸಾಧ್ಯತೆಯಿದೆಯೆಂದು ನಿರೂಪಿಸುತ್ತದೆ. ತುಂಬದಿನ ನೆನಪಿನಲ್ಲುಳಿಯುವ ಕಥೆ ಇದು.

ಶಾಂತಿಯವರಿಗೆ ಲೋಕದ ಕಾಳಜಿಯೂ ಇದೆ ಮತ್ತು ಈ ಕಾಳಜಿ ವೈಯಕ್ತಿಕ ತುರ್ತನ್ನು ಅವಲಂಬಿಸಿದೆ ಎಂದವರು ನಂಬಿದ್ದಾರೆ. ಅದಕ್ಕೆ ಸಾಕ್ಷಿ ‘ಬಾಹುಗಳು’. ಈ ಕಥೆ ಕನ್ನಡದ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ಕಥಾಸ್ಫರ್ಧೆಯ ಪ್ರಥಮವೂ ಆಗಿದೆ. ಆಫೀಸ್ ಎಂಬ ನೆರಳುಬೆಳಕಿನಾಟದ ಅಂಗಳದಲ್ಲಿ ಗಂಡಸೆಂದರೆ ದುಡ್ಡು, ಹೆಂಗಸೆಂದರೆ ಹಾಸಿಗೆ ಎಂಬ ಅಸಹ್ಯದ ಸತ್ಯವನ್ನೂ ಒಪ್ಪಿಕೊಳ್ಳುವ, ಹೇಗೋ ಒಟ್ಟಾರೆ ಬದುಕಬೇಕೆನ್ನುವ ಕಥಾನಾಯಕಿ ಆದರ್ಶದ ಭವ್ಯಕನಸಿನ ದಾರಿಯಲ್ಲಿರುವ ನಾಯಕನಿಗೆ ಲಾಯಕ್ಕಾದವಳೋ ಅಲ್ಲವೋ ಎಂಬುದು ಎಷ್ಟು ಮುಖ್ಯವೋ, ಇಂಥಾ ವ್ಯಕ್ತಿಗಳು ಅವರ ಲಿಂಗಕ್ಕೆ ಹೊರತಾಗಿಯೂ ಸಮಾಜದಲ್ಲಿರಲು ಲಾಯಕ್ಕಾದವರು ಹೌದೋ ಅಲ್ಲವೋ ಎಂಬುದೂ ಅಷ್ಟೇ ಮುಖ್ಯವಾದ, ದುಃಖದಾಯಕವಾದ ಪ್ರಶ್ನೆ.

abhisarikeಈ ಹೊತ್ತಿನ ಬದುಕಿನಲ್ಲಿ ಸಮಾಜದ ನೈತಿಕತೆಯು ಆಧುನಿಕತೆಯ ಹೊಡೆತಕ್ಕೆ ಸಿಕ್ಕಿ, ವ್ಯವಸ್ಥೆಯು ಜೀವದಾಯಿನಿಯಾದ ಗಂಗಾಜಲವಾಗದೆ ಕೊಳೆತ ಶವಗಳು ತೇಲುವ ಕಲುಷಿತ ಪ್ರವಾಹವಾಗುತ್ತಿರುವ ದುರಂತವನ್ನು ಸೊಗಸಾದ ನಿರೂಪಣೆ, ಬಣ್ಣನೆಯೊಡನೆ ಹೆಣೆದಿರುವ ತುಂಬ ಮೌಲ್ಯಯುತ ಕಥೆ…ಇಂಥಹಾ 14 ಸೊಗಸಾದ ಕಥೆಗಳನ್ನು ಶಾಂತಿ ಓದಲು ಕೊಟ್ಟಿದ್ದಾರೆ ನಮಗೆ.

ಅಚ್ಚರಿಯಾಗುತ್ತದೆ, ಜೊತೆಗೆ ಸಮಾಧಾನ ಕೂಡ. ಅನೈತಿಕತೆಯ ಧಾಳಿ, ಧಾವಂತದ ಸುಳ್ಳುತನ ಯಾವ ಕ್ಷೇತ್ರದನ್ನೂ ಬಿಡದಿರುವ, ಸೂಕ್ಷ್ಮಜ್ಞತೆಯನ್ನು ನುಂಗಿ ನೊಣೆಯುತ್ತಿರುವ ಈ ದಿನಗಳಲ್ಲಿ ಮೌಲ್ಯಗಳ ಕುರಿತು ಚಿಂತಿಸುತ್ತಾ, ಸ್ವಚ್ಛ ಕನ್ನಡದಲ್ಲಿ ದೀರ್ಘವಾದ, ಹೊಸತನದ ನಿರೂಪಣೆ ನೀಡಬಲ್ಲ ಗಟ್ಟಿ ಕಥೆಗಾರ್ತಿಯರು ಬೆಳಕಿಗೆ ಬರುತ್ತಿದ್ದಾರೆ ಎಂದು.

ಛಂದ ಪುಸ್ತಕ ಬಹುಮಾನ ನೀಡುವ ಮೂಲಕ ವಿನಯಾ ಒಕ್ಕುಂದ, ಸುನಂದಾ ಕಡಮೆಯವರಂಥಾ ಕಥೆಗಾರ್ತಿಯರನ್ನು ಗುರುತಿಸಿದವರು ವಸುಧೇಂದ್ರ. ಇದೀಗ ‘ಮನಸು ಅಭಿಸಾರಿಕೆ’ ಸಹಾ ಅಂಥದ್ದೊಂದು ಅರ್ಹವಾದ ಆಯ್ಕೆ. ಕನ್ನಡ ಕಥಾಲೋಕದ ನಾಳೆಗಳಲ್ಲಿ ತುಂಬ ನಿರೀಕ್ಷೆ ಹುಟ್ಟಿಸಿರುವ ಕಥಾಸಂಕಲನ ಇದು.

‍ಲೇಖಕರು Admin

13 February, 2016

8 Comments

  1. ವಸುಧೇಂದ್ರ

    ಧನ್ಯವಾದಗಳು ಸುಧಾ. ಓದಿ ಖುಷಿಯಾಯ್ತ

    • Kaligananath Gudadur

      ಸುಧಾ ಮೇಡಂ, ಅಭಿಸಾರಿಕೆಯ ಮನಸಿನೊಳಗೆ ಇಳಿದು ಕಥೆ, ಕಥೆಗಾರ್ತಿಯನ್ನು ಕಾಣಿಸಿದ್ದೀರಿ. ಆಪ್ತ ಒಳನೋಟ!

  2. sangeetha raviraj

    ಶಾಂತಿಯವರ ಕಥೆಗಳು ಸ್ತ್ರೀ ಮನಸ್ಸನ್ನು ಮೀರಿ ಚಿತ್ರಿಸುತ್ತವೆ. ಅದುವೆ ಅವರ ವಿಶೇಷ ತೆ. ಚೆನ್ನಾಗಿದೆ ಬರಹ ಸುಧಾ ರವರೆ…….

  3. ಶಾಂತಿ ಕೆ ಅಪ್ಪಣ್ಣ

    ಸುಧಾ ಮ್ಯಾಮ್…..
    ನಿಮ್ಮ ಪ್ರೀತಿಗೆ ಶರಣು

  4. Chandrashekhar Hadapad

    ತುಂಬಾ ಸೊಗಸಾದ ವಸ್ತುನಿಷ್ಟವಾದ ವಿಮರ್ಶೆ ಓದಬೇಕು ಎನ್ನುವ ಹಂಬಲ ಹೆಚ್ಚಿಸಿದೆ ಅಭಿನಂದನೆ

  5. ಕಲಿಗಣನಾಥ ಗುಡದೂರು

    ಸುಧಾ ಮೇಡಂ, ಅಭಿಸಾರಿಕೆಯ ಮನಸಿನೊಳಗೆ ಇಳಿದು ಕಥೆ, ಕಥೆಗಾರ್ತಿಯನ್ನು ಕಾಣಿಸಿದ್ದೀರಿ. ಆಪ್ತ ಒಳನೋಟ!

  6. mehaboob

    pustak yelli sigutte tilisi plz

  7. ಚಲಂ

    ಪಯಣ ನನಗೆ ಯಾವತ್ತಿಗೂ ಕಾಡುವ ಕತೆ…ಶಾಂತಿಯವರಿಂದ ಹೆಚ್ಚಿನ ನಿರೀಕ್ಷೆ ಇದ್ದರೆ ಅದಕ್ಕೆ ಶಾಂತಿಯವರೇ ಹೊಣೆ…ಸುದಾ ಮೇಡಂ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading