ಗೊರೂರು ಶಿವೇಶ್
ಕಲೆಗೆ ಬೇಲಿ ಹಾಕುವ ಕಾರ್ಯವು ನಿರಂತರವಾಗಿ ಮುಂದುವರಿಯುತ್ತಿದ್ದರೂ ಅದಕ್ಕೆ ದೇಶ ಭಾಷೆಗಳ ಹಂಗಿಲ್ಲ ಎನ್ನುವುದನ್ನು ಹತ್ತು ಹಲವಾರು ಕಲಾವಿದರು, ನಿರ್ದೇಶಕರು ಸಾಧಿಸಿ ತೋರಿಸಿದ್ದಾರೆ. ಈಗ ಇತರೆ ಭಾಷೆಗಳಲ್ಲಿ ಪ್ರಖ್ಯಾತರಾಗಿರುವ ಕೆ. ಬಾಲಚಂದರ್, ಮಣಿರತ್ನಂ, ಬಾಲುಮಹೇಂದ್ರ ಮೊದಲಾದವರು ಕೆಲ ಉದಾಹರಣೆ ಮಾತ್ರ. ಇವರಲ್ಲಿ ಮಣಿರತ್ನಂ ಮತ್ತು ಬಾಲುಮಹೇಂದ್ರರು ತಮ್ಮ ನಿರ್ದೇಶನ ಜೀವನವನ್ನು ಕನ್ನಡದಲ್ಲಿ ಪ್ರಾರಂಭಿಸಿದರು ಎಂಬುದು ವಿಶೇಷವೇ ಸರಿ. ಚಲನಚಿತ್ರವೆಂದರೆ ನಿರ್ದೇಶಕನಿಗಿಂತ ಛಾಯಗ್ರಾಹಕನ ಕಣ್ಣುಗಳ ಮೂಲಕವೇ ನೋಡುವ ಸಾಧ್ಯತೆಯನ್ನು ತೆರೆದ ಬಾಲುಮಹೇಂದ್ರನ್ ತಮ್ಮ 74ನೆಯ ವಯಸ್ಸಿನಲ್ಲಿ ವಿದಾಯ ಹೇಳಿದ್ದಾರೆ. ಮೂಲತಃ ಶ್ರೀಲಂಕಾದವರಿಂದ ಬಾಲುಮಹೇಂದ್ರ ತಮ್ಮ 13ನೇ ವಯಸ್ಸಿನಲ್ಲಿ ಶಾಲಾ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಜಗತ್ತಿನ ಶ್ರೇಷ್ಠ ಚಿತ್ರಗಳಲ್ಲೊಂದು ಎಂದು ಈಗ ಗುರುತಿಸಲಾಗಿರುವ ಡೇವಿಡ್ ಲಿನ್ ನಿರ್ದೇಶನದ ‘ದಿ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯ್’ ಚಿತ್ರೀಕರಣವನ್ನು ಕುತೂಹಲದ ಕಣ್ಣುಗಳಿಂದ ನೋಡಿ ಚಲನಚಿತ್ರದೆಡೆಗೆ ಆಕರ್ಷಿತರಾದರು. ನಂತರ ತಮಿಳ್ನಾಡಿಗೆ ಬಂದ ಅವರು 1969ರಲ್ಲಿ ಪುಣೆ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಫೋಟೋಗ್ರಫಿಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದರು. ಆಗಿನ ಖ್ಯಾತ ನಿರ್ದೇಶಕ ‘ಚೆಮ್ಮೀನ್’ ಚಿತ್ರ ಖ್ಯಾತಿಯ ರಾಮುಕಾರಿಯತ್ರವರ ಮಲೆಯಾಳಂ ಚಿತ್ರ ‘ನೆಲ್ಲು’ ಚಿತ್ರದಿಂದ ತಮ್ಮ ವೃತ್ತಿ ಛಾಯಗ್ರಹಣದ ವೃತ್ತಿಯನ್ನು ಆರಂಭಿಸಿ ಅದಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದರು. 1970 ಮತ್ತು 80ರ ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗವೆ ತಿರುಗಿನೋಡುವಂತ ಹವಾ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಯಾಗಿತ್ತು.
ಒಂದೆಡೆ ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್, ಗಿರೀಶ್ ಕಾಸರವಳ್ಳಿ, ನಾಗಾಭರಣರಂಥ ನಿರ್ದೇಶಕರು ಹೊಸ ಅಲೆ ಚಿತ್ರಗಳಲ್ಲಿ ಮಗ್ನರಾಗಿದ್ದರೆ ಸಮಾಂತರವಾಗಿ ಪುಟ್ಟಣ ಕಣಗಾಲ್, ಸಿದ್ದಲಿಂಗಯ್ಯ ಬಿ.ಆರ್. ಪಂತಲುವಿನಂಥ ನಿರ್ದೇಶಕರು ಜನಪ್ರಿಯ ಕೌಟುಂಬಿಕ ಕಾದಂಬರಿಯಾಧಾರಿತ ಚಿತ್ರಗಳ ನಿರ್ಮಾಣಕ್ಕೆ ತೊಡಗಿಸಿಕೊಂಡಿದ್ದರು. ಕಥೆ, ಕಾದಂಬರಿಗಳು ಇಬ್ಬರಿಗೂ ಸಮಾನ ಪ್ರೇರಣೆಯಾಗಿದ್ದವು. ಭಾಷಾ ಚಿತ್ರೋಧ್ಯಮದ ಪ್ರಯೋಗಶಾಲೆಯಾಗಿದ್ದ ಬೆಂಗಳೂರು ಬಾಲುಮಹೇಂದ್ರ ಮತ್ತು ಮಣಿರತ್ನರಂಥವರನ್ನು ಸಹಜವಾಗಿಯೇ ಸೆಳೆಯಿತು. ಬಾಲು ಮಹೇಂದ್ರ ನಿರ್ದೇಶಿಸಿದ ಮೊದಲ ಚಿತ್ರ ‘ಕೋಕಿಲ’. ಈ ಚಿತ್ರದಲ್ಲಿ ಇವತ್ತಿಗೂ ಜನಪ್ರಿಯರಾಗಿರುವ ಕಮಲಹಾಸನ್ ಜೊತೆಗೆ ಬಾಲುಮಹೇಂದ್ರರ ಮೆಚ್ಚಿನ ನಟಿ ಶೋಭ, ರೋಜಾರಮಣಿ ಮತ್ತು ಈ ಚಿತ್ರದ ಮೂಲಕ ಚಲನಚಿತ್ರರಂಗ ಪ್ರವೇಶಿಸಿ (ರಂಗ ನಿರ್ದೇಶಕ ಬಿ.ವಿ. ಕಾರಂತರ ಶಿಫಾರಸ್ಸಿನ ಮೇರೆಗೆ) ಮುಂದೆ ‘ಕೋಕಿಲ ಮೋಹನ್’ ಎಂದೇ ಖ್ಯಾತರಾಗಿ ಸುಮಾರು ಹತ್ತು ವರುಷಗಳಕಾಲ ತಮಿಳು ಚಲನಚಿತ್ರರಂಗದಲ್ಲಿ ಯಶಸ್ವಿ ಮತ್ತು ಬೇಡಿಕೆ ನಟರಾದ ಕನ್ನಡನಟ ಮೋಹನ್ ಈ ಚಿತ್ರದಿಂದ ಚಿತ್ರಜೀವನ ಪ್ರಾರಂಭಿಸಿದರು..
ವೃತ್ತಿಯ ಕಾರಣದಿಂದಾಗಿ ಸದಾ ಪ್ರವಾಸದಲ್ಲಿರುವ ತಂದೆ, ಪದೇ ಪದೆ ಖಾಯಿಲೆ ಬೀಳುವ ತಾಯಿ, ಮೆಡಿಕಲ್ ಓದುವ ಮಗಳು ಮತ್ತು ಕುಟುಂಬದ ಸದಸ್ಯಳೇ ಆಗಿಹೋಗಿರುವ ಕೆಲಸದಾಕೆಯ ಕುಟುಂಬವು ಅಪತ್ಕಾಲಕ್ಕೆ ಇರಲಿ ಎಂದು ಪೇಯಿಂಗ್ ಗೆಸ್ಟ್ಗಾಗಿ ಅರಸುತ್ತಿರುವಾಗ ಬರುವ ನಾಯಕ ಬ್ಯಾಂಕ್ ಉದ್ಯೋಗಿ ವಿಜಯಕುಮಾರ್ (ಕಮಲಹಾಸನ್) ಕುಟುಂಬಕ್ಕೆ ಹತ್ತಿರವಾಗುತ್ತಾನೆ. ಮಗಳಿಗೆ ಆತ್ಮೀಯನಾಗುತ್ತಾನೆ. ಮುಂದೆ ಅನಿರೀಕ್ಷಿತ ಸಂದರ್ಭದಲ್ಲಿ ಮನೆಯ ಕೆಲಸದಾಕೆಯೊಂದಿಗೆ ದೇಹ ಸಂಪರ್ಕ ಉಂಟಾಗಿ ಮನೆಯನ್ನು ತ್ಯಜಿಸುತ್ತಾನೆ. ಇದರ ಅರಿವಿಲ್ಲದ ನಾಯಕಿ ನಾಯಕನನ್ನು ಅರಸುತ್ತಾ ಹೋಗುತ್ತಾಳೆ. ನಾಯಕ ಸಿಗುವನೇ? ಸಿಕ್ಕರೂ ಯಾವ ಸ್ಥಿತಿಯಲ್ಲಿ ? ಎಂಬುದು ಚಿತ್ರದ ಕ್ಲೈಮಾಕ್ಸ್. ತಮಾಷೆ ಪ್ರಾರಂಭ, ಕುತೂಹಲದ ಮಧ್ಯಂತರ ಮತ್ತು ವಿಷಾದದ ಅಂತ್ಯ ಬಾಲುಮಹೇಂದ್ರರಿಂದ ಹಿಡಿದು ಮಣಿರತ್ನಂ, ಬಾಲಚಂದರ್ರಂಥ ನಿರ್ದೇಶಕರ ಚಿತ್ರಗಳ ಸಾಮಾನ್ಯ ಅಂಶ. ಅದು ಈ ಚಿತ್ರದಲ್ಲೂ ಇದೆ. ಮೂಲತಃ ಕನ್ನಡದಲ್ಲಿ ನಿರ್ಮಾಣಗೊಂಡ ಚಿತ್ರ 1977ರಲ್ಲಿ ಬಿಡುಗಡೆಯಾಗಿ ಅವತ್ತಿನ ಮದ್ರಾಸ್ (ಇವತ್ತಿನ ಚೆನೈ)ನಲ್ಲಿ 150 ದಿನಗಳ ಕಾಲ ಪ್ರದರ್ಶಿತವಾಗಿ ಇದುವರವಿಗೂ ತಮಿಳ್ನಾಡಿನಲ್ಲಿ ಅತಿ ಹೆಚ್ಚು ದಿನ ಪ್ರದರ್ಶನಗೊಂಡ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲುಮಹೇಂದ್ರರಿಗೆ ಅಪಾರ ಕೀರ್ತಿ ತಂದುಕೊಟ್ಟ ಚಿತ್ರ ‘ಮೂನ್ರಂ ಪಿರೈ’ (ಬಿದಿಗೆ ಚಂದ್ರ). ಅದುವರೆಗಿನ ಅವರ ಎಲ್ಲಾ ಚಿತ್ರಗಳ ನಾಯಕಿಯಾಗಿದ್ದ, 24 ವರ್ಷಕ್ಕೆ ಅನಿರೀಕ್ಷಿತ ಸಾವಿಗೀಡಾದ ನಟಿ ಶೋಭಾಳ ನೆನಪಿನಿಂದ ಆಚೆ ಬರಲು ನಿರ್ಮಿಸಿದ ಚಿತ್ರವದು.
ಭಾರತೀಯ ಚಿತ್ರರಂಗಕಂಡ ಅತ್ಯುತ್ತಮ ಚಿತ್ರಗಳಲ್ಲೊಂದು ಎಂಬ ಪ್ರಶಂಸೆಗೂ ಪಾತ್ರವಾದದ್ದಲ್ಲದೆ ಕಮಲಹಾಸನ್ ರವರಿಗೆ ‘ಅತ್ಯುತ್ತಮ ನಟ’ ಮತ್ತು ಬಾಲು ಮಹೇಂದ್ರರಿಗೆ ‘ಅತ್ಯುತ್ತಮ ಛಾಯಗ್ರಾಯಕ’ ರೆಂಬ ರಾಷ್ಟ್ರೀಯ ಪ್ರಶಸ್ತಿ ತಂದುಕೊಡುವುದರ ಜೊತೆಗೆ ಕಮರ್ಷಿಯಲ್ ಆಗಿ ಸೂಪರ್ ಹಿಟ್ ಆದ ಚಿತ್ರವೂ ಹೌದು. ಈ ಚಿತ್ರದ ವೈಶಿಷ್ಠ್ಯವೆಂದರೆ ಚಿತ್ರದಲ್ಲಿ ಯಾವುದೇ ಕಮರ್ಷಿಯಲ್ ಎಲಿಮೆಂಟ್ ಇಲ್ಲದಿರುವುದು. ‘ಹ್ಯಾಪಿ ಗೋ ಲಕ್ಕಿ’ ಸ್ವಭಾವದ ನಾಯಕಿಗೆ (ಶ್ರೀದೇವಿ) ಅಪಘಾತಕ್ಕೀಡಾಗಿ ಪ್ರಜ್ಞೆ ಕಳೆದುಕೊಳ್ಳುವುದರ ಜೊತೆಗೆ ಅಮ್ನೀಷಿಯದಿಂದಾಗಿ ಹಳೆಯ ನೆನಪುಗಳು ಮಾಸಿ ಆಸ್ಪತ್ರೆಗೆ ಸೇರುತ್ತಾಳೆ. ಅಲ್ಲಿಂದ ಅಪಹರಣಕ್ಕೊಳಗಾಗಿ ವೇಶ್ಯಾವಟಿಕೆ ಸೇರುತ್ತಾಳೆ. ಅದೇ ಸಂದರ್ಭದಲ್ಲಿ ಕುತೂಹಲ ಮತ್ತು ಸ್ನೇಹಿತನ ಪ್ರಲೋಭನೆಗೆ ಒಳಗಾಗಿ ದೈಹಿಕ ಶಿಕ್ಷಕ ಶ್ರೀನಿವಾಸ್ (ಕಮಲಹಾಸನ್) ಅದೇ ವೇಶ್ಯಾಮಂದಿರಕ್ಕೆ ಬಂದು ನಾಯಕಿಯ ಬಗ್ಗೆ ಅನುಕಂಪ ಮೂಡಿ ಅಪಾರ ಹಣ ನೀಡಿ ಅವಳನ್ನು ಕೊಂಡು ಮನೆಗೆ ಕರೆತರುತ್ತಾನೆ. ಮಗುವಿನಂತೆ ವರ್ತಿಸುವ ನಾಯಕಿಯನ್ನು ತಾಯಿಯಂತೆ ಪೊರೆವ ನಾಯಕ, ಆಕೆಯನ್ನು ಸಂತೋಷದಲ್ಲಿಡಲು ಮಾಡುವ ಮಂಗನಾಟಗಳು, ನೆರೆಹೊರೆಯವರು ನೀಡುವ ಸಹಕಾರ, ದೈನಂದಿನ ಜೀವನದಲ್ಲಿ ಆಕೆಯ ಮುಗ್ದತೆಯಿಂದುಂಟಾಗುವ ತೊಂದರೆಗಳು, ಅವುಗಳನ್ನು ನಿರ್ವಹಿಸುವ ರೀತಿ ಒತ್ತಡ, ನೋವು-ನಲಿವುಗಳ ಸಂಗಮದ ಪ್ರತೀಕದಂತಿದ್ದು ವೀಕ್ಷಕನ ನೆನಪಿನಲ್ಲಿ ಉಳಿಯುತ್ತವೆ. ಆಕೆಯ ಚಿಕಿತ್ಸೆಗಾಗಿ ಆಯುರ್ವೇದ ಪಂಡಿತನ ಬಳಿ ಸೇರಿಸಿದ ಸಂದರ್ಭದಲ್ಲಿಯೆ ಆಕೆಯ ಮಾಹಿತಿ ಪಡೆದ ತಂದೆ-ತಾಯಿ ಪೋಲಿಸರು ಹುಡುಕಿಕೊಂಡು ಬರುತ್ತಾರೆ. ಪೋಲಿಸರಿಗೆ ಹೆದರಿದ ನಾಯಕ ಶ್ರೀನಿವಾಸ್ ಅಲ್ಲಿಂದ ಮರೆಯಾಗುತ್ತಾನೆ.
ಚಿಕಿತ್ಸೆ ಫಲಕಾರಿಯಾಗಿ ನೆನಪನ್ನು ಮರಳಿ ಪಡೆದ ನಾಯಕಿ, (ನಾಯಕ ಆಕೆಗೆ ವಿಜಿ ಎಂದು ಪುನರ್ ನಾಮಕರಣ ಮಾಡಿರುತ್ತಾನೆ). ತಂದೆ ತಾಯಿಯನ್ನು ಗುರುತಿಸಿ ಅವರೊಡನೆ ಹೊರಟು ಊರಿಗೆ ಹೋಗಲು ರೈಲ್ವೆಸ್ಟೇಷನ್ ತಲುಪುತ್ತಾಳೆ. ಅವಳ ಕಾರಿನ ಹಿಂದೆಯೇ ಏಳುತ್ತಾ, ಬೀಳುತ್ತಾ ಬರುವ ನಾಯಕನು ರೈಲ್ವೆ ಸ್ಟೇಷನ್ ತಲುಪುತ್ತಾನೆ. ಅಲ್ಲಿನ ಕ್ಲೈಮಾಕ್ಸ್ ದೃಶ್ಯವು ಚಿತ್ರವನ್ನು ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವನ್ನಾಗಿಸಿದೆ. ಅಲ್ಫರ್ಡ್ ಹಿಚ್ಕಾಕ್ನ ‘ಸೈಕೋ’ ಚಿತ್ರದ ಪ್ರೇರಣೆಯ ‘ಮೂಡುಪನಿ’ ಅವರ ಬಾಲ್ಯ ಯೌವನ ದಿನಗಳನ್ನಾಧರಿಸಿದ ‘ಅಳಿಯಾದ ಕೋಲಂಗಳ್’ ಮತ್ತು ತಾಯಿ ನೆನಪಿನ ‘ವೀಡು’ ಚಿತ್ರಗಳು ಸೇರಿದಂತೆ ಇಪ್ಪತ್ತೆರಡು ಚಿತ್ರಗಳನ್ನು ನಿರ್ದೇಶಿಸಿದ ಬಾಲುಮಹೇಂದ್ರರ ಚಿತ್ರಗಳು ಕ್ಯಾಮರದ ಕಣ್ಣುಗಳಲ್ಲೆ ಮಾತಾಡುತ್ತವೆ. ಸ್ಟುಡಿಯೋದೊಳಗೆ ಡಾಳಾದ ಬಣ್ಣದಲ್ಲಿ ಚಿತ್ರೀಕರಣವಾಗುತ್ತಿದ್ದ ಸಂದರ್ಭದಲ್ಲಿ ಹೊರಾಂಗಣಕ್ಕೆ ಬಂದು ಪ್ರಕೃತಿ, ಮಂಜು, ಮಳೆ, ಬೆಳಕು-ನೆರಳಿನ ಚೆಲ್ಲಾಟದ ಸಹಜ ಸೌಂದರ್ಯವನ್ನು ಕಣ್ಣುಗಳಿಗೆ ಹಬ್ಬದ ರೂಪದಲ್ಲಿ ಉಣಬಡಿಸಿ ಚಲನಚಿತ್ರ ‘ದೃಶ್ಯಕಾವ್ಯದ ಮಾಧ್ಯಮ’ ಎಂದೂ ನಿರೂಪಿಸಿದವರು ಅವರು ಸ್ಥಾಪಿಸಿದ ‘ಫಿಲಂಸ್ಕೂಲ್’ ನಲ್ಲಿ ತರಬೇತಿ ಹೊಂದಿದ ಬಾಲ, ಚಂದ್ರನ್ ಮುಂತಾಗಿ ಅನೇಕ ನಿರ್ದೇಶಕರು ಜನಪ್ರಿಯತೆ ಸಾಧಿಸಿ ಅವರ ಹಾದಿಯಲ್ಲಿ ಮುಂದುವರೆಯುತ್ತಿರುವುದು ಅವರ ಅಗಲಿಕೆಯ ನೋವಿನ ನಡುವೆಯೂ ಸಮಾಧಾನದ ಸಂಗತಿ.







– nija balu mahendru obba drushya mantrik.laxmi mattu mohan abhinayad nellu 1976 ralli nodidde bhashe gottilladiddaroo manranjisittu.ide maatu kama haasan mtftu sfridevi yavar citra moonra pirai goo anvayutte. kannadadalli avaru tayarisida citra kokila sh adhbutavagittu.
mareyalaarada chitra adu..kannanchu tumbi baruva manoogna abhinaya sridevi haagu kamal avaradu..!!!!
real director, ‘moonram pirai’ is enough to show the calibre of ‘balu’ sir,