ಜಿ ಎನ್ ನಾಗರಾಜ್
ಗಿರೀಶ್ ಕಾರ್ನಾಡರ ವ್ಯಕ್ತಿತ್ವ, ಭಾರತದ ರಂಗಭೂಮಿಯಲ್ಲಿ ಅವರ ಸ್ಥಾನ, ಅವರ ಸಾಂಸ್ಕೃತಿಕ ಕೊಡುಗೆಯ ಬಾಹುಳ್ಯ ಮತ್ತು ಮಹತ್ವ ಇವುಗಳನ್ನು ಅರ್ಥ ಮಾಡಿಕೊಳ್ಳಲು ಅಗತ್ಯ ಓದು ‘ಬಹುರೂಪಿ ಗಿರೀಶ್ ಕಾರ್ನಾಡ್’
ಗಿರೀಶರ ನಾಟಕಗಳು ರಂಗದ ಮೇಲೆ ಬಂದಾಗಿನಿಂದ ಅವುಗಳನ್ನು ನೋಡುತ್ತಾ , ಅವರ ಕೃತಿಗಳನ್ನು ಓದುತ್ತಾ, ಮೆಚ್ಚುತ್ತಾ ಬೆಳೆದ ನನಗೆ ಅವರು ಬೀರಿದ ಅಖಿಲ ಭಾರತ ಪ್ರಭಾವದ ವ್ಯಾಪ್ತಿ ಅರಿವಾಗಿರಲೇ ಇಲ್ಲ ಈ ಪುಸ್ತಕ ಓದುವವರೆಗೆ. ಅವರ ತುಘಲಕ್ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಸಾವಿರಾರು ಪ್ರದರ್ಶನಗಳನ್ನು ಕಂಡಿದೆ. ಪ್ರತಿ ಭಾಷೆಯಲ್ಲಿಯೂ ಸಿ.ಆರ್.ಸಿಂಹರಂತಹ ಮೇರು ನಟರನ್ನು ರೂಪಿಸಿದೆ, ಅಲ್ಲಲ್ಲಿಯ ನಾಟಕ ರಚನೆ, ರಂಗ ಪ್ರದರ್ಶನಗಳ ಮೇಲೆ ಅಳಿಸಲಾರದ ಪ್ರಭಾವ ಬೀರಿದೆ ಎಂಬ ಅಂಶ ಈ ಕೃತಿಯಿಂದ ತಿಳಿಯುತ್ತದೆ.
ಅಖಿಲ ಭಾರತ ಪ್ರಸಿದ್ಧಿಯ ರಂಗಭೂಮಿ ನಾಯಕರ ಬರಹಗಳು ಅವರ ಬಗ್ಗೆ ಇಟ್ಟಿದ್ದ ಅಪಾರ ಗೌರವವನ್ನು ಕಂಡು ಬೆರಗಾಗುವಂತಿದೆ. ಅವರ ಆತ್ಮೀಯರು, ರಂಗಭೂಮಿಯ ಪ್ರಮುಖರು ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಈ ತಿಳುವಳಿಕೆ ಈಗ ಎಲ್ಲರಿಗೂ ಲಭ್ಯ.
ಅವರ ಎಲ್ಲ ಕೃತಿಗಳನ್ನು ರಂಗದಲ್ಲಿ ನೋಡಿ ಅಥವಾ ಓದಿದರೆ ಕೂಡಾ ಗಿರೀಶರ ಬಗ್ಗೆ ತಿಳಿಯದ ಅವರ ಮಹತ್ವ ಈ ಕೃತಿಯನ್ನು ಓದಿದರೆ ಅರಿವಾಗುತ್ತದೆ. ಅವರ ಬಗ್ಗೆ ಕನ್ನಡದ ಹಲವು ಪ್ರಗತಿಪರರು ಬೆಳೆಸಿಕೊಂಡ ಪೂರ್ವಾಗ್ರಹಗಳು ಕರಗುತ್ತವೆ.
ಹಾಗೆಂದ ಮಾತ್ರಕ್ಕೆ ಅವರ ವ್ಯಕ್ತಿತ್ವ ಮತ್ತು ಕೃತಿಗಳಲ್ಲಿ, ಕಾಣುವ ನಿಲುವು ಮತ್ತು ಅರಿವನ್ನೆಲ್ಲಾ ಒಪ್ಪಿಕೊಳ್ಳಬೇಕೆಂದೇನಿಲ್ಲ.ನಾನಂತೂ ಅವರ ಜೊತೆ ಹಲವು ಭಿನ್ನಾಭಿಪ್ರಾಯ ಹಂಚಿಕೊಂಡವನು, ಜಗಳಾಡಿದವನು ಕೂಡಾ.
ಹಾಗೆಯೇ ಅವರ ಜೊತೆ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದ ಅವಕಾಶವೂ ದೊರೆತಿದೆ.
ಈ ಕೃತಿಯನ್ನು ಅತಿ ಅಲ್ಪ ಸಮಯದಲ್ಲಿ ಸಂಪಾದಿಸಿದ ಜೋಗಿಯವರು ಅಭಿನಂದನಾರ್ಹರು. ಕನ್ನಡ ಪ್ರಭದಲ್ಲಿ ಹಲವರಿಂದ ಗಿರೀಶರ ಬಗ್ಗೆ ಬರೆಸಿದ್ದ ಮತ್ತು ಈ ಸಂದರ್ಭದಲ್ಲಿ ಬರೆದ ಹಲವರ ಬರಹಗಳನ್ನು ಆಯ್ಕೆ ಮಾಡಿ, ಅವರ ಅನುಮತಿಯನ್ನು ಅತ್ಯಲ್ಪ ಕಾಲದಲ್ಲಿ ಪಡೆದು, ಅನುವಾದ ಮಾಡಿಸುವುದು ಒಂದು ಸಾಹಸವೇ ಸರಿ.
ಈ ಕೃತಿಯ ಸ್ವರೂಪದ ಮುಖ್ಯ ಕೊರತೆಯೆಂದರೆ ಅವರ ನಿಧನದ ಸಂದರ್ಭದ ನೆನಕೆಯ ಬರಹಗಳಾಗಿರುವುದರಿಂದ ಮೆಚ್ಚುಗೆ , ಶ್ಲಾಘನೆಗಳ ಹೆಚ್ಚಳ ಮತ್ತು ಅನಿವಾರ್ಯ ಪುನರಾವರ್ತನೆಗಳು.
ಇವೆಲ್ಲದರ ನಡುವೆ ಪ್ರಕಾಶಕರು ಜೋಗಿಯವರಿಗೆ ವಹಿಸಿದ ಹೊಣೆಯನ್ನು ಸಾರ್ಥಕವಾಗಿ ನಿರ್ವಹಿಸಿದ್ದಾರೆ.
ಈ ಪುಸ್ತಕವನ್ನು ತುರ್ತಾಗಿ ಹೊರತರುವ ಯೋಚನೆ ಮಾಡಿದ , ಅವಸರದಲ್ಲಿಯೂ ಗುಣಮಟ್ಟದಲ್ಲಿ ಕೊರತೆಯಾಗದಂತೆ ಪ್ರಕಟಿಸಿದ ಪ್ರಕಾಶಕರಿಗೂ ಅಭಿನಂದನೆಗಳು.
ಗಿರೀಶರ ಹಾಗೂ ಅವರ ಕೃತಿಗಳ ಬಗ್ಗೆ ಅಧ್ಯಯನ ಪೂರ್ಣ ಪ್ರಬಂಧಗಳ ಮತ್ತು ವಿಮರ್ಶೆಗಳ ಒಂದು ಕೃತಿಯ ಅಗತ್ಯವನ್ನು ಕೂಡಾ ಈ ಬರಹಗಳು ಎತ್ತಿ ತೋರುತ್ತದೆ.
ಪುಸ್ತಕ -ಆಕೃತಿ, ನವಕರ್ನಾಟಕ, ಅಂಕಿತ, ಸಪ್ನಾ ಮೊದಲಾದ ಅಂಗಡಿಗಳಲ್ಲಿ
bahuroopi.in ಆನ್‌ಲೈನ್ ಮಳಿಗೆಯಲ್ಲೂ ಲಭ್ಯ.
ಬೆಲೆ 250 ರೂ.
Thank you very much sir. This was much needed an observation for me.