ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಗತ್ಯ..

ಪ್ರಕಾಶ್ ಹೆಗ್ಡೆ

ಇಟ್ಟಿಗೆ ಸಿಮೆಂಟು

ಬಹಳ ಸಾರಿ ನನಗೆ ಅನ್ನಿಸಿದ್ದುಂಟು..

ನಾನೇಕೆ ಹೀಗೆ..?

ಹೀಗಿರಬಾರದು ಅಂತ ಬಹಳ ಪ್ರಯತ್ನ ಪಟ್ಟೆ.. ಆಗಲಿಲ್ಲ..

ಸ್ವಭಾವ…ನಮ್ಮೊಳಗಿನ ಬಣ್ಣ ಅದು.. ಬದಲಾಗುವದು ಅಸಾಧ್ಯ…

ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ.. ವಾಸ್ತವವಾದಿ..

ನನ್ನಮ್ಮ.. ಅಪ್ಪ.. ಅಣ್ಣ.. ತಂಗಿ ಎಲ್ಲರೂ ಭಾವಜೀವಿಗಳು..

ನಾನೊಬ್ಬ ಮಾತ್ರ ಹೀಗೆ..

ಹಾಗಂತ ನನಗೇನೂ ಬೇಸರವಿಲ್ಲ…

ಯಾರೋ ನೆಂಟರು ಮನೆಗೆ ಬಂದರು ಅಂತ ಸಂಭ್ರಮ ಪಡಲು ನನ್ನಿಂದ ಸಾಧ್ಯವಾಗುವದಿಲ್ಲ..

ಕಾರಣವಿಲ್ಲದೆ ಯಾರ ಬಳಿಯೂ ಯಾರೂ ನಗುವದಿಲ್ಲ..

ಏನೋ ಕೆಲಸ ಆಗಬೇಕಿರುತ್ತದೆ ಹಾಗಾಗಿ ಹತ್ತಿರ ಬರುತ್ತಾರೆ..ನಗುತ್ತಾರೆ…

ನಾನು ಸಣ್ಣವನಿರುವಾಗ ಗಣೇಶ ಹಬ್ಬ ಬಂದಿತೆಂದು …

ನನ್ನಮ್ಮ ಒಂದು ತಿಂಗಳಿರುವಾಗಲೇ ಸಂಭ್ರಮ ಪಡುತ್ತಿದ್ದಳು..!

“ಅಮ್ಮಾ..

ದೇವರನ್ನು ತನ್ನ ಅವಶ್ಯಕತೆಗೆ ಅಂತ ಮನುಷ್ಯನೇ ಹುಟ್ಟಿಸಿದ್ದಾನೆ..

ಗಣಪತಿಯ ಮೂರ್ತಿಯನ್ನು ಮಾಡಿದ ಕಲಾವಿದನನ್ನು ಹೋಗಿ ಕೇಳಮ್ಮ..

ಅದರಲ್ಲಿ ದೇವರಿದ್ದಾನೇಯೇ ಅಂತ..

ಅದು ಕಲಾವಿದನ ಹೊಟ್ಟೆಪಾಡು.. ಮೂರ್ತಿ ಮಾಡಿರುತ್ತಾನೆ..

ಮಣ್ಣನ್ನು ಕಾಲಿನಿಂದ ತುಳಿದು.. ಹದ ಮಾಡಿ..

ತನಗೆ “ಹಣ” ಬರುತ್ತದೆಂದು ಮಾಡಿರುತ್ತಾನೆ..

ಅದರಲ್ಲಿ ದೇವರಿದೆ ಎಂದಿದ್ದರೆ.. ಆತ ಮಾರುತ್ತಿದ್ದನೆ?

ಅಮ್ಮಾ..

ಈ ಬದುಕಿನಲ್ಲಿ ಎಲ್ಲವೂ.. ಅಗತ್ಯ.. ಅವಶ್ಯಕತೆಗಳೊಡನೆಯ ನಂಟು..

ಮತ್ತೇನಿಲ್ಲ..”

ನನ್ನಮ್ಮ ಗಾಭರಿಯಾದಳು..

ಅಪ್ಪನನ್ನು ಕರೆದು “ಇವನ ವಿಚಾರ ಧಾರೆಗಳೇ ಅರ್ಥವಾಗುತ್ತಿಲ್ಲ..

ವಿಚಿತ್ರ ಮಾತುಗಳನ್ನು ಆಡುತ್ತಾನೆ” ಅಂದಿದ್ದಳು..

ನಾನು ವಿಚಿತ್ರವಾಗಿಯೇ ಬೆಳೆದೆ..

ಒಂದು ದಿನ ನನ್ನಮ್ಮ ತೀರಿಕೊಂಡಳು..

ಅಪ್ಪ.. ಅಣ್ಣ.. ತಂಗಿ.. ಎಲ್ಲರೂ ಗೋಳೋ ಅಂತ ಅತ್ತರು…

ನನಗೆ ಅಳು ಬರಲಿಲ್ಲ..

“ದುಃಖವನ್ನು ಹಿಡಿದಿಟ್ಟುಕೊಳ್ಳಬಾರದು.. ಅತ್ತುಬಿಡಬೇಕು..

ನೀನೂ ಅತ್ತು ಬಿಡು..

ಈ ಅಳು.. ಕಣ್ಣೀರು.. ಮನುಷ್ಯನಿಗೆ ದೇವರು ಕೊಟ್ಟ ವರ..

ಅತ್ತರೆ ನಮಗೆ ಗೊತ್ತಾಗದೆ ಸಮಾಧಾನವಾಗುತ್ತದೆ..”

ಅಂತ ಹಿರಿಯರು ನನಗೆ ಬುದ್ಧಿವಾದ ಹೇಳಿದರು..

“ಅಮ್ಮನ ಹಾರ್ಟಿನಲ್ಲಿ ಬ್ಲಾಕೇಜ್ ಇತ್ತು…

ರಕ್ತವನ್ನು ಪಂಪ್ ಮಾಡಲು ಅಮ್ಮನ ಹೃದಯಕ್ಕೆ ಆಗಲಿಲ್ಲ..

ಉಸಿರಾಟ ನಿಂತಿತು..

ಇದು ಪ್ರಕೃತಿಯ ಸಹಜ ಕ್ರಿಯೆ.. ಅಷ್ಟೇ… ”

ನನ್ನ ಮಾತು ಕೇಳಿ ಅವರೆಲ್ಲ ದಂಗಾದರು..

ನನಗೆ ಅಳು ಬರಲಿಲ್ಲ… ಅಳಲಿಲ್ಲ..

ಕೆಲವು ದಿನಗಳ ನಂತರ ಅಪ್ಪನೂ ತೀರಿಕೊಂಡ…

ನನ್ನಣ್ಣನಿಗೆ ದುಃಖ ತಡೆಯಲಾಗಲಿಲ್ಲ..

“ನಮ್ಮನ್ನು ಹೆತ್ತು.. ಹೊತ್ತು..

ತುತ್ತು ಅನ್ನ ನೀಡಿ..

ಮಮತೆಯಿಂದ ಬೆಳೆಸಿದ ಅಪ್ಪ..ಅಮ್ಮ ಇಬ್ಬರೂ ಹೋಗಿಬಿಟ್ಟರಲ್ಲೋ..!

ನಾವು ಅನಾಥರಾಗಿಬಿಟ್ಟೆವು..”

ನಾನು ನನ್ನಣ್ಣನನ್ನು ದಿಟ್ಟಿಸಿದೆ…

“ಅಣ್ಣಾ…

ರಾತ್ರಿಯಲ್ಲಿ..

ಯೌವ್ವನದ ಹುಮ್ಮಸ್ಸಿನಲ್ಲಿ…

ದೇಹದ ತೆವಲಿಗೆ ನಡೆದ..

ಹೆಣ್ಣುಗಂಡಿನ ಸಹಜ ಕ್ರಿಯೆಗೆ ಸಾಕ್ಷಿಯಾಗಿ ನಾವು ಹುಟ್ಟಿದ್ದು..

ಇನ್ನು …

ಮಮತೆ ವಾತ್ಸ್ಯಲ್ಲವೆಲ್ಲ ಬಣ್ಣದ ಮಾತುಗಳು…

ಹುಟ್ಟಿದ ಪುಟ್ಟ ಮರಿಗಳಿಗೆ…

ಏನೂ ತಿಳಿಯದ ಪ್ರಾಣಿ ಪಕ್ಷಿಗಳೇ ಆಹಾರ ತಂದು ನೀಡುತ್ತವೆ..

ಇದು ಸಹಜ ಪ್ರಕೃತಿಯಲ್ಲಿ ನಡೆಯುವಂಥದ್ದು..

ನಮ್ಮ ಅಪ್ಪ ಅಮ್ಮ..

ನಮ್ಮ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡರು.. ಹಾಗಾಗಿ ಪ್ರೀತಿ.. ಮಮತೆ..”

ನಾನು ಸತ್ಯ ಹೇಳುವ ಸಮಯ ಅದಾಗಿರಲಿಲ್ಲ..

ಅಣ್ಣ ನನ್ನನ್ನು ದೂಡಿದ…

“ನೀನೊಬ್ಬ ಮನುಷ್ಯನಾ..?

ಥೂ.. ಮನುಷತ್ವವೇ ಇಲ್ಲದ ಕ್ರೂರಿ ನೀನು..

ದೂರ ಹೋಗು..”

ನಾನು ನಮ್ಮವರೊಂದಿಗೆ ಬೆರೆಯಲೇ ಇಲ್ಲ…

ಒಂಟಿತನವೇ ನನಗೆ ಇಷ್ಟವಾಯಿತು…

ನಾನೂ ದೊಡ್ಡವನಾದೆ..

” ಮದುವೆಯಾಗು ..

ಯಾವ ವಯಸ್ಸಿನಲ್ಲಿ ಏನೇನು ಆಗಬೇಕೋ ಅದು ಆಗಬೇಕು…”

ನನ್ನಣ್ಣ ಒತ್ತಾಯ ಮಾಡಿದ..

ನನಗೂ ಯೌವ್ವನವಲ್ಲವೇ.. ದೈಹಿಕ ಆಸೆಗಳಿದ್ದವು..

ಹೊರಗಡೆ ಹೋಗಿ ರೋಗ ತಂದುಕೊಳ್ಳುವದು ಬುದ್ಧಿವಂತಿಕೆಯಲ್ಲ…

ಇನ್ನು ನನ್ನ ಊಟ.. ತಿಂಡಿ..

ಈ ಅಣ್ಣ .. ಅತ್ತಿಗೆ ಎಷ್ಟು ದಿನ ಅಂತ ನನ್ನನ್ನು ನೋಡಿಕೊಂಡಾರು?

” ಸರಿ.. ಆಯ್ತಣ್ಣ..”

“ಹುಡುಗಿ ಹೇಗಿರಬೇಕು…?

ನಿನ್ನಿಂದ ಏನಾದರೂ ಬೇಡಿಕೆಗಳಿವೆಯಾ?”

“ಅಣ್ಣಾ..

ಹುಡುಗಿ.. ಹುಡುಗಿಯಂತಿದ್ದರೆ ಸಾಕು..

ಅಡಿಗೆ ಮಾಡಿಕೊಂಡು…

ನನ್ನ ಬಟ್ಟೆ..ಬರೆ .. ಮನೆಯನ್ನು ನೋಡಿಕೊಂಡರೆ ಸಾಕು..

ಅಂಥಹ ಹುಡುಗಿ ಬಯಸುತ್ತೇನೆ..”

ಅಣ್ಣನ ಮುಖದಲ್ಲಿ ಹುಸಿನಗು ಇತ್ತು…

ಅಣ್ಣ ಬಹಳ ಹುಡುಕಿ.. ಒಂದು ಹುಡುಗಿಯನ್ನು ನಿಶ್ಚಯಿಸಿದ..

ಹುಡುಗಿ ನೋಡಲಿಕ್ಕೆ ಚಂದವಾಗಿದ್ದಳು..

ಬೆಡ್ ರೂಮಿನ ಏಕಾಂತದಲ್ಲಿ …

ಸಿನೇಮಾ ನಟಿಯರನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ ಎನಿಸಿತು….

ಮದುವೆಯೂ ಆಯಿತು..

ಮೊದಲ ರಾತ್ರಿಯ ಮೊದಲು ನಾನೇ ಮಾತನಾಡಿದೆ..

“ನೋಡು..ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ…

ಈಗ ನಾನು ನೀನು ಒಂದಾಗೋದು.. ಸಹಜವಾಗಿ ಗಂಡು ಹೆಣ್ಣಿನ ನಡುವೆ ನಡೆಯುವಂಥಾದ್ದು..

ಯಾವುದೇ ಗಂಡು ಅನ್ನುವ ಪ್ರಾಣಿ ನಿನ್ನನ್ನು ಸ್ವಲ್ಪ ಹೊತ್ತು ಆಲಂಗಿಸಿಕೊಂಡರೆ ನೀನು ಕ್ರಿಯೆಗೆ ಸಹಜವಾಗಿ ರೆಡಿ ಆಗಿರುತ್ತೀಯಾ..

ನನ್ನ.. ನಿನ್ನ ಸಂಬಂಧ…

ದಾಂಪತ್ಯವೆಂದರೆ ಜನ್ಮ ಜನ್ಮಾಂತರದ್ದು.. ಅದೆಲ್ಲ ನಾನು ನಂಬೋದಿಲ್ಲ..”

ನಾನು ಇನ್ನೂ ಮಾತನಾಡಬೇಕೆಂದಿದ್ದೆ..

ಆದರೆ ಅವಳೇ ಮೌನ ಮುರಿದಳು..

“ನನಗೆ ನೀವೆನ್ನುವದು ಯಾವುದೂ ಅರ್ಥವಾಗುವದಿಲ್ಲ..

ನಿಮ್ಮಣ್ಣ ಹೇಳಿದ್ದಾರೆ.. ನೀವು ಬಹಳ ಬುದ್ಧಿವಂತರು..

ನೀವು ಹೇಳಿದ್ದಕ್ಕೆಲ್ಲ ಹೂಂ ಅಂತ ಸುಮ್ಮನಿದ್ದುಬಿಡಬೇಕೆಂದು..

ನಾನೆಂದೂ ನಿಮ್ಮ ಮಾತಿಗೆ ಎದುರಾಡೋದಿಲ್ಲ..

ಗಂಡನಿಗೆ ಎದುರಾಗಿ ಮಾತಾಡಬಾರದೆಂದು ನನ್ನಮ್ಮನೂ ಹೇಳಿದ್ದಾರೆ…

ನಿಮಗೆ ಹೇಗೆ ಬೇಕೋ ಹಾಗಿರಬೇಕೇಂದು ಅಪ್ಪನೂ ನನಗೆ ಹೇಳಿದ್ದಾನೆ…”

ನನ್ನಣ್ಣ ನನಗೆ ಯೋಗ್ಯವಾದ ಹುಡುಗಿಯನ್ನೇ ಹುಡುಕಿದ್ದ…!

ಈ ಭಾವುಕರೊಡನೆ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಿಲ್ಲ..

ಅವರ ಅನಗತ್ಯವಾದ ಕಣ್ಣೀರು..

ಉದ್ವೇಗದ ಮಾತುಗಳನ್ನು ಸಹಿಸಿಕೊಳ್ಳಬೇಕು ಅಷ್ಟೆ…

ನಮಗೆ ಸಭ್ಯವಾಗಿ ಹೊಂದಿಕೊಂಡಿರುತ್ತಾರೆ..

ನನ್ನನ್ನು ನನ್ನ ಮಡದಿಗೆ ಅರ್ಥ ಮಾಡಿಸುವ ಪ್ರಮೆಯವೇ ನನಗೆ ಬರಲಿಲ್ಲ…

ನನಗೆಂದೂ ಎದುರು ಮಾತನಾಡಲೇ ಇಲ್ಲ..

ನನ್ನ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ಸೇವೆ ಮಾಡುತ್ತಿದ್ದಳು..

ನನ್ನ ಬಟ್ಟೆಯನ್ನು ಒಗೆಯುವದು..

ನನಗೆ ಬೇಕಾದ ಊಟ ತಿಂಡಿಯನ್ನು ಮಾಡುವದು…

ಹಣವನ್ನು ಕೊಡದೆ ಕೆಲಸ ಮಾಡಿಸಿಕೊಳ್ಳುವದು ಅಂದರೆ …

ಮದುವೆ.. ದಾಂಪತ್ಯ …

ಅಂತ ನನಗೆ ಗೊತ್ತಿರಲಿಲ್ಲ..

ಸಮಯ ಕಳೆಯ ತೊಡಗಿತು..

ಸಮಯಕ್ಕೇನು…?

ಕ್ಷಣ ಕ್ಷಣಕ್ಕೂ ನಡೆಯುತ್ತಲೇ ಇರುತ್ತದೆ..!

ನಾವು ಮಾತ್ರ ಪ್ರತಿಕ್ಷಣಕ್ಕೂ ಹಿಂದಕ್ಕೆ ಹೋಗುತ್ತಿರುತ್ತೇವೆ….!

ವಯಸ್ಸಾಗುತ್ತಿರುತ್ತದೆ…!

ನನ್ನ ಕಪ್ಪು ಕೂದಲು ಅಲ್ಲಲ್ಲಿ ಬಿಳಿಯಾಗತೊಡಗಿತು…

ನನ್ನ ಮಡದಿ ಒಂದು ಆಸೆ ನನ್ನೆದುರಿಗೆ ಇಟ್ಟಳು…

“ನೋಡಿ..

ನಿಮಗೆ ಎದುರಾಡುತ್ತಿಲ್ಲ..

ನಾನು ತಾಯಿಯಾಗಬೇಕು..

ಇಲ್ಲಿಯವರೆಗೆ ನಿಮ್ಮ ಬಳಿ ನಾನು ಏನೊಂದನ್ನೂ ಕೇಳಿಲ್ಲ..

ನಮಗೆ ವಯಸ್ಸಾಯಿತು ಎಂದೆಲ್ಲ ನೆಪಗಳು ಬೇಡ…

ನನಗೊಂದು ಮಗು ಬೇಕು…”

ನಾನು ಬಹಳ ವಿಚಾರ ಮಾಡಿದೆ..

ಮಕ್ಕಳು.. ಮರಿಗಳ ಜಂಜಾಟ ಬೇಡ ಅಂತಲೇ… ನಾನಿದ್ದೆ..

ಇಷ್ಟು ದಿನದ ದಾಂಪತ್ಯದಲ್ಲಿ ನನ್ನ ಬೇಕು ಬೇಡಗಳೇ ಆದವು..

ಅವಳದೊಂದು ಆಸೆ ಈಡೇರಿಸಿ ಬೀಡೋಣ..

ಮಗುವಿನ ಜವಾಬ್ದಾರಿ ನನಗೇನೂ ಇಲ್ಲವಲ್ಲ.. ಅವಳೇ ನೋಡಿಕೊಳ್ಳುತ್ತಾಳೆ..

ಸರಿ..

ಒಂದು ಮಗು ಮಾಡಿಕೊಂಡರಾಯಿತು.. ಅಂದುಕೊಂಡೆ…

ಕೆಲವು ತಿಂಗಳು ಕಳೆಯಿತು..

ನನ್ನಾಕೆ ಬಸುರಿಯಾದಳು..

ಅವಳ ನಡತೆಯೇ ಸ್ವಲ್ಪ ಬದಲಾಗತೊಡಗಿತು..

ನನಗೂ ಸ್ವಲ್ಪ ಕೆಲಸ ಹೇಳಲು ಶುರು ಮಾಡಿದಳು..

ತಾಯ್ತನವೆಂದರೆ ಹಿರಿತನವೆ..? ಯಜಮಾನಿಕೆಯೆ..?

ಆತ್ಮವಿಶ್ವಾಸ ಕೊಟ್ಟುಬಿಡುತ್ತದೆಯಾ..?

ನಾನು ದೊಡ್ಡ ತಪ್ಪು ಮಾಡಿದೆ ಅನ್ನಿಸತೊಡಗಿತು…

ಕಾಲ ಮಿಂಚಿ ಹೋಗಿತ್ತು..

ನನ್ನ ಮಡದಿಗೆ ದಿನ ತುಂಬಿತ್ತು..

ಒಂದು ದಿನ ಹೆರಿಗೆ ನೋವೂ ಕೂಡ ಶುರುವಾಯಿತು…

ಅವಳ ಅಪ್ಪ.. ಅಮ್ಮ ಇಬ್ಬರೂ ಬಂದಿದ್ದರು…

ಲಗು ಬಗೆಯಿಂದ.. ಆಸ್ಪತ್ರೆಗೆ ಸೇರಿಸಿದೆವು..

ನನ್ನಣ್ಣ.. ಅತ್ತಿಗೆಯರೂ ಬಂದರು..

” ಗಾಭರಿ ಆಗಬೇಡಯ್ಯಾ…

ಬಸುರಿ.. ಸಹಜ.. ಕ್ರಿಯೆ ಅಂತೆಲ್ಲ ಕೊರಿಬೇಡ..

ಪಾಪು ಬರಲಿ ನೋಡು.. !

ನೀನೂ ನಿನ್ನ ಸ್ವಭಾವವೂ ರಿಪೇರಿ ಆಗಿ ಹೋಗ್ತದೆ..!

ಸಂಸಾರದೊಳಗೆ ಬಿದ್ದವರು ಯಾರೂ ಎದ್ದಿಲ್ಲ ಕಣಯ್ಯಾ..!..”

ನನ್ನ ಮಡದಿಯನ್ನು ಜನರಲ್ ವಾರ್ಡಿನಿಂದ ಐ.ಸಿ.ಯೂ.ಗೆ ಬದಲಾಯಿಸಿದರು…

ಸ್ವಲ್ಪ ಹೊತ್ತು ಕಳೆಯಿತು…

ನಮಗೆಲ್ಲ ಆತಂಕ ಶುರುವಾಯಿತು…!

ಡಾಕ್ಟರ್ ಬೆವರು ಒರೆಸಿಕೊಳ್ಳುತ್ತ ಬಂದರು…

ಅಣ್ಣ.. ಅತ್ತಿಗೆ.. ಅತ್ತೆ ಮಾವ ಡಾಕ್ಟರ್ ಬಳಿ ಓಡಿದರು…

“ನೋಡಿ..

ತುಂಬಾ ಕಷ್ಟಕರವಾದ ಹೆರಿಗೆ…

ಬಸುರಿಯಾಗಿದ್ದಾಗ ಸರಿಯಾಗಿ ನೋಡಿಕೊಂಡಿಲ್ಲ ಅನ್ಸುತ್ತೆ…

ಹೆಣ್ಣು ಮಗು.. ತುಂಬಾ.. ತುಂಬಾ ಮುದ್ದಾಗಿದೆ..

ಆದರೆ ತಾಯಿಯನ್ನು ಉಳಿಸಲಾಗಲಿಲ್ಲ…”

ಮರುಕ್ಷಣ ಆಸ್ಪತ್ರೆಯಲ್ಲಿ ಬರಿ ರೋಧನವೇ ಶುರುವಾಯಿತು..

ಅತ್ತೆ ಮಾವ.. ಬಹಳ ದುಃಖಪಟ್ಟರು.. ಗೋಳೋ ಅಂತ ಅತ್ತರು…

ಸಂಕಟದಿಂದ ಹೊರಳಾಡ ತೊಡಗಿದರು…

ನರ್ಸ್ ಮಗುವನ್ನು ಕರೆ ತಂದಳು..

ನನ್ನತ್ತೆ ಮಗುವನ್ನು ಎತ್ತಿಕೊಂಡಳು…

“ಅಯ್ಯೋ .. ದುರ್ವಿಧಿಯೇ..!

ಚಿನ್ನ ದಂಥಹ ಅಮ್ಮ ಹೋಗಿಬಿಟ್ಟಳಮ್ಮಾ…!!

ಒಬ್ಬರಿಗೂ ಒಂದು ಕೆಟ್ಟ ಮಾತು ಹೇಳಿದವಳಲ್ಲ ನನ್ನ ಮಗಳು..!!

ಆ ದೇವರು ಬಹಳ ಕೆಟ್ಟವನು..!

ಈ ಮಗುವನ್ನು ಕೊಟ್ಟು ತಾನು ಹೊರಟು ಹೋದಳು..!

ಅಯೋ ದೇವರೆ …

ಎಷ್ಟು ಕ್ರೂರಿಯಪ್ಪಾ ನೀನು..!!”

ನನ್ನತ್ತೆಯನ್ನು ಸಮಾಧಾನ ಪಡಿಸುವವರು ಯಾರೂ ಇರಲಿಲ್ಲ..

ಎಲ್ಲರೂ ಅಳುತ್ತಿದ್ದರು..

ನನ್ನತ್ತೆ ಮಗುವನ್ನು ನನ್ನ ಕೈಗೆ ಕೊಟ್ಟಳು..

ಮಗುವನ್ನು ಕೈಗೆ ತೆಗೆದು ಕೊಂಡೆ..

ದುಃಖ ತಡೆಯಲಾಗಲಿಲ್ಲ…

ಮಗುವಿನ ಮುಗ್ಧ ಮುಖ ನೋಡಿದೆ…

ಎಂದೂ ಅಳದ ನನಗೂ ಅಳು ಬಂದಿತು…!

ಧಾರಕಾರವಾಗಿ ಕಣ್ಣೀರಿಳಿಯತೊಡಗಿತು…!

ನನ್ನಣ್ಣ ನನ್ನನ್ನು ಸಮಾಧಾನ ಪಡಿಸಿದ..

“ಎಲ್ಲವೂ ದೇವರಾಟ ಕಣಪ್ಪಾ..

ನಮ್ಮ ಕೈಯಲ್ಲಿ ಏನೂ ಇಲ್ಲ..

ಅಪ್ಪ.. ಅಮ್ಮ ಸತ್ತಾಗಲೂ ನಿನ್ನ ಕಣ್ಣಲ್ಲಿ ನೀರುಬರಲಿಲ್ಲ…!

ಕರುಳಿನ ಪಾಶ ನೋಡು ಹೇಗಿರುತ್ತದೆ..!

ಮಗುವನ್ನು ನೋಡಿ ನಿನಗೂ ದುಃಖವಾಯಿತಲ್ಲ..!

ಸಮಾಧಾನ ಮಾಡ್ಕೋ.. ”

ಅಣ್ಣ ಇನ್ನೂ ಏನೇನೋ ಹೇಳುತ್ತಿದ್ದ..

ಮಗು ಅಳತೊಡಗಿತು….

ಸಮಾಧಾನ ಪಡಿಸಲು ನನಗಾಗಲಿಲ್ಲ….

ಎದೆ ಹಾಲು ಬೇಕಿತ್ತೇನೋ…!

ಅಯ್ಯೋ…. !!

ನನಗೆ ಮತ್ತೂ ದುಃಖ ಉಕ್ಕಿತು..

ಏನು ಮಾಡಲಿ… ?

ದುಃಖ ತಡೆಯಲಾಗಲಿಲ್ಲ….

” ಅಯ್ಯೋ..

ಈ ಮಗುವನ್ನು ಹೇಗೆ ನೋಡಿಕೊಳ್ಳಲಿ…?

ಇದರ ಪಾಲನೆ.. ಪೋಷಣೆ..

ಇದರ ಸ್ನಾನ.. ಊಟ ತಿಂಡಿ.. ಹೇಗೆ ಮಾಡಲಿ…?

ಮಗುವೇ ಬೇಡವಾಗಿತ್ತು…

ಛೇ.. ಎಂಥಾ ಅನರ್ಥ ಆಗಿಹೋಯಿತು…!!!

ಈ ಮಗುವನ್ನು ಹೇಗೆ ನೋಡಿಕೊಳ್ಳುವದು..?

ಇನ್ನು ನನ್ನ ಊಟ.. ತಿಂಡಿ.. ಬಟ್ಟೆ ಬರೆ.. ನನ್ನ ಬೇಕು ಬೇಡಗಳು..

ಹೆಂಡತಿಯಂಥಹ ಹೆಣ್ಣನ್ನು ಎಲ್ಲಿಂದ ತರಲಿ…?.. ”

ಅಣ್ಣ.. ಅತ್ತಿಗೆ..

ಅತ್ತೆ.. ಮಾವ…

ಅಳು ಮರೆತು ನನ್ನನ್ನೇ ನೋಡ ತೊಡಗಿದರು…..

 

 

‍ಲೇಖಕರು avadhi

17 August, 2011

8 Comments

  1. Anitha Naresh Manchi

    heegoo unte 🙂

  2. Sukhesh M.G.

    ಅಳೋದಕ್ಕೂ, ದುಖ: ಪಡೋಕು ಪುಣ್ಯ ಮಾಡಿರ್ಬೇಕು ಅನ್ಸುತ್ತೆ ಒಂದೊಂದ್ಸಲ

  3. veena bhat

    ಇಟ್ಟಿಗೆ ಸಿಮೆಂಟಿನಂತಹ ನಿರ್ಜೀವ ವಸ್ತುವಿನಲ್ಲಿ ಸೆಂಟಿಮೆಂಟು ತುಂಬುವ ನಿಮ್ಮ ವ್ಯಕ್ತಿತ್ವಕ್ಕೆ ಭಿನ್ನವಾದ ಬರಹ ….

  4. prakash hegde

    ನಾನು ಬರೆದ ಕಥೆಯನ್ನು ಪ್ರಕಟಿಸಿದ ಅವಧಿಗೆ ಕ್ರತಜ್ಞತೆಗಳು..

    ಅವಧಿಯಲ್ಲಿ ನಾನು ಬರೆದ ಕಥೆ ಬನ್ದಿದೆ ಎಂದರೆ ನನಗದು ಹೆಮ್ಮೆ…

    ಇದನ್ನು ಇಷ್ಟಪಟ್ಟ..
    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು….

    ಅವಧಿ ಜೈ ಹೋ !!

  5. nagendra bhardwaj

    Bhala chenagi idhe….

  6. Badarinath Palavalli

    ಮನಸು ವಿಹ್ವಲವಾಯಿತು. ಅಂತ್ಯದಲ್ಲಿ ನಾಯಕ ಕರಗುವಂತೆ, ನಾನೂ ಕರಗಿ ಹೋದೆ.
    ಭಾವ ಜೀವಿಯಾದರೂ, ತೀರಾ ಪ್ರಾಕ್ಟಿಕಲ್ ಎನಿಸುವವರೂ ಆಂತರ್ಯದಲ್ಲಿ ಮಾನವರಾಗಿದ್ದಾಗ ಮಾತ್ರ ನಾಯಕ ಕಥಾಂತ್ಯದಲ್ಲಿ ಮಗುವಿನ ಭವಿತವ್ಯ ನೆನೆದು ಮಮ್ಮಲ ಮರಗುತ್ತಾನೆ.
    ಇತ್ತೀಚಿನ ನಿಮ್ಮ ಬರಹಗಳಲ್ಲಿ ಈ ಕಥೆ ಮುಕುಟಪ್ರಾಯ.

  7. bharathi

    ishtavaythuree …

  8. armanikanth

    ಪ್ರಕಾಶಣ್ಣ,
    ಕಥೆ ಚೆನ್ನಾಗಿದೆ.ಅಭಿನಂದನೆಗಳು…
    ಮಣಿಕಾಂತ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading