ಸಾಂಸ್ಕೃತಿಕ ಅನನ್ಯತೆಯ ವಾರಸುದಾರರು
-ಡಾ.ಎಸ್.ಬಿ.ಜೋಗುರ
ಮಡಿ-ಮೈಲಿಗೆಯ ಗರ್ಭದಲ್ಲಿ ವಿಷಕೂಸಿನಂತೆ ಹುಟ್ಟಿದ ಜಾತಿ ಎನ್ನುವ ಸಂಸ್ಥೆಯೊಂದು ಸಾಂಸ್ಕೃತಿಕ ಆಚರಣೆಗಳ ಭಾಗವಾಗಿ, ಹಿಂದುಗಳ ಜೀವನವಿಧಾನವನ್ನೇ ನಿರ್ಧರಿಸುವಷ್ಟರ ಮಟ್ಟಿಗೆ ಬೆಳದದ್ದು ಭಾರತೀಯ ಸಮಾಜದ ಬಹುದೊಡ್ಡ ವಿಪರ್ಯಾಸ..! ಸಾಮಾಜಿಕ ಏಣಿ ಶ್ರೇಣಿಗಳನ್ನು ಸೃಷ್ಟಿಸಿ, ಮೇಲು-ಕೀಳುಗಳನ್ನು ಕಾಪಾಡಿಕೊಳ್ಳುವ ಜೊತೆಗೆ, ಸಾಮಾಜಿಕ ಸಂಪರ್ಕ, ವಿವಾಹ, ಉದ್ಯೋಗ, ಆಹಾರ, ವೇಷಭೂಷಣ ಹೀಗೆ ಸಮೂಹವೊಂದರ ಇಡೀ ದೈನಂದಿನ ಬದುಕಿನ ಆಗುಹೋಗುಗಳಿಗೆ ಫರ್ಮಾನನ್ನು ಹೊರಡಿಸುವ ವ್ಯವಸ್ಥೆಯಾಗಿ ಜಾತಿ ಎಂಬ ಸಂಸ್ಥೆ ಭಾರತೀಯ ಸಮಾಜದಲ್ಲಿ ಬೆಳೆದದ್ದು, ಬಲಿತದ್ದು ಚರಿತ್ರೆ. ಗಂಡು-ಹೆಣ್ಣು ಎನ್ನುವ ಲಿಂಗ ಸಂಬಂಧಗಳ ನಡುವೆಯೂ ಒಂದು ಬಗೆಯ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಸಾಂಸ್ಕೃತಿಕ ನಿರ್ಬಂಧಗಳ ಮೂಲಕ ಜಾತಿ ತನ್ನ ಕರಾಮತ್ತನ್ನು ಮೆರೆದಿರುವದಿದೆ. ಮೊದಲೇ ಪಿತೃಪ್ರಧಾನ ವ್ಯವಸ್ಥೆಯಾಗಿರುವ ನಮ್ಮ ಸಮಾಜ, ಮಹಿಳೆಯನ್ನು ಮೊದಲಿನಿಂದಲೂ ಎರಡನೆಯ ದರ್ಜೆಯ ಲಿಂಗ ಎನ್ನುವಂತೆ ಪರಿಗಣಿಸುತ್ತಲೇ ಬಂದಿದೆ. ಜಾತಿ ವ್ಯವಸ್ಥೆ ಆ ಬಗೆಯ ಪರಿಗಣನೆಗೆ ಇನ್ನಷ್ಟು ಪುಷ್ಟಿ ಕೊಡುವ ಹಾಗೆ ಮಹಿಳೆಯ ಜೈವಿಕ ಅಂಶಗಳನ್ನು ಆಧರಿಸಿ ಅವಳು ಸಾಮಾಜಿಕ ಸಂಚಲನೆಯಲ್ಲಿ ಇನ್ನಷ್ಟು ಅವರೋಹಣ ಹೊಂದುವಂತೆ ಈ ಜಾತಿ ಕೆಲಸ ಮಾಡಿರುವದಿದೆ.
ಜಾತಿ ಹುಟ್ಟಿನೊಂದಿಗೆ ಬರುವ ಅಂತಸ್ತಾಗಿದ್ದರೂ ಅದನ್ನು ಬದಲಾಯಿಸುವ ವ್ಯಕ್ತಿಯ ಆಯ್ಕೆಗೆ ಇಲ್ಲಿ ಅವಕಾಶಗಳಿರುವದಿಲ್ಲ. ಹೆಚ್ಚೆಂದರೆ ಸಂಸ್ಕೃತಾನುಕರಣದ ಮೂಲಕ ಸಮಾನಾಂತರ ಸಂಚಲನೆ ಸಾಧ್ಯವಾಗಬಹುದು. ಸಾಮಾಜಿಕ ಏಣಿ ಶ್ರೇಣಿಯನ್ನು ಬಲವಾಗಿ ಪ್ರತಿಪಾದಿಸಿಕೊಂಡು ಬಂದ ಜಾತಿಪದ್ಧತಿ, ಸಾಮಾಜಿಕ ಸಂಪರ್ಕಗಳ ಮೇಲೆಯೂ ತನ್ನ ಪರೋಕ್ಷವಾದ ನಿರ್ಬಂಧವನ್ನು ಹೇರುವದಿದೆ. ಮೂಲದಲ್ಲಿ ವೃತ್ತಿ ಸಮೂಹವಾಗಿದ್ದ ಜಾತಿಪದ್ಧತಿ ಕ್ರಮೇಣವಾಗಿ ಕುಲಕಸುಬುಗಳಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲು ಅವಕಾಶಕೊಟ್ಟಿರುವುದೇ ಬಹು ದೊಡ್ಡ ಬದಲಾವಣೆ. ಕಮ್ಮಾರನ ಮಗ ಕಮ್ಮಾರ, ನೇಕಾರನ ಮಗ ನೇಕಾರ, ಸಿಂಪಿಗನ ಮಗ ಸಿಂಪಿಗ, ಅಗಸನ ಮಗ ಅಗಸ ಹೀಗಿರುವ ಜಾತಿಯಾಧಾರಿತ ಕಸುಬುಗಳು ಈಗ ಗಣನೀಯವಾಗಿ ಬದಲಾಗಿವೆ. ಇನ್ನು ಸಾಂಪ್ರದಾಯಿಕ ಜಾತಿಯಾಧಾರಿತ ಕಸುಬುಗಳನ್ನು ಮುಂದುವರೆಸಿಕೊಂಡು ಬರುವಲ್ಲಿ ಕೆಳ ಜಾತಿಗಳ ಮಹಿಳೆಯರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಒಲೆಗೆ ಸ್ತ್ರೀ ಹೊಲಕ್ಕೆ ಪುರುಷ ಎನ್ನುವ ತೀರಾ ಸರಳ ಶ್ರಮವಿಭಜನೆಯೊಂದಿಗೆ ಈ ಕುಲಕಸುಬುಗಳನ್ನು ಮುಂದುವರೆಸಿಕೊಂಡು ಬರುವಲ್ಲಿ ಕೆಳ ಸ್ತರದ ಮಹಿಳೆಯರು ತೀರಾ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಅದು ಬುಟ್ಟಿ ಹೆಣೆಯುವುದು, ಚಾಪೆ ನೇಯುವದು, ಮೀನು ಮಾರುವುದು, ತರಕಾರಿ ಮಾರುವುದು, ಕಸಪೊರಕೆಯನ್ನು ಮಾರುವುದು, ಊರ ಕಸ ಗುಡಿಸುವುದು, ಬಟ್ಟೆ ಸೆಳೆಯುವುದು, ಸೂಲಗಿತ್ತಿಯಾಗುವುದು ಬೇರೆಯವರ ಮನೆಗೆಲಸ ಮಾಡುವುದು ಇಂಥಾ ಅನೇಕ ಜಾತಿಯಾಧಾರಿತ ಕಸುಬುಗಳನ್ನು ಈ ಕೆಳ ಜಾತಿಯ ಮಹಿಳೆಯರು ಮುಂದುವರೆಸಿಕೊಂಡು ಬಂದಿರುವರು.
ಸಾಂಪ್ರದಾಯಿಕ ಜಜಮಾನಿ ಪದ್ಧತಿಯಲ್ಲಿ ಕೆಳಜಾತಿಯ ಗಂಡಸರು ತಮ್ಮ ಒಡೆಯರ ಸೇವೆಗಾಗಿ ಶ್ರಮಿಸಿದರೆ, ಮಹಿಳೆಯಾದವಳು ಒಡತಿಯ ಸೇವೆಗಾಗಿ ತೊಡಗಬೇಕಿತ್ತು. ಒಡತಿಯ ಶೃಂಗಾರ, ಹೆರಿಗೆಯ ಸಂದರ್ಭದಲ್ಲಿ ತಾಯಿ ಮಗುವಿಗೆ ನೀರೆರೆಯುವುದು, ಅವರ ಮನೆಗೆಲಸ ಮಾಡುವುದನ್ನು ಮಾಡಬೇಕಿತ್ತು ಎನ್ನುವುದನ್ನು ಲೀಲಾ ದುಬೆ ಎನ್ನ್ನುವವರು ‘ಕಾಸ್ಟ್ ಆಂಡ್ ವುಮನ್’ ಎನ್ನುವ ಲೇಖನದಲ್ಲಿ ಚರ್ಚಿಸಿರುವದಿದೆ. ಕೆಳಜಾತಿಯ ಮಹಿಳೆಯರ ಪಾಲಿಗೆ ಶಿಕ್ಷಣವೂ ಮರೀಚಿಕೆಯಾಗಿತ್ತು. ಆಕೆ ಶಿಕ್ಷಣ ಪಡೆದರೆ ಅದು ಕುಲಕಸುಬಿಗೆ ಧಕ್ಕೆ ತರುತ್ತದೆ. ಆ ಮೂಲಕ ಸಾಂಪ್ರದಾಯಿಕ ಜಾತಿಯ ಉದ್ಯೋಗ ಕಣ್ಮರೆಯಾಗುತ್ತದೆ ಎನ್ನುವ ನಂಬುಗೆಯಿಂದ ಹಾಗೆ ಮಾಡಲಾಗುತ್ತಿತ್ತು ಎನ್ನುವದನ್ನು ಲೀಲಾ ದುಬೆ ಯವರು ಆ ಲೇಖನದಲ್ಲಿ ವಿವರಿಸಿದ್ದಾರೆ. ಮಹಾರಾಷ್ಟ್ರದ ಕುಣಬಿ ಜಾತಿಯ ಯುವಕನೊಬ್ಬ ಬ್ರಾಹ್ಮಣ ಕನ್ಯೆಯನ್ನು ಮದುವೆಯಾದಾಗ, ಆ ಹುಡುಗನ ಮನೆಯವರು ತಮ್ಮ ಕೃಷಿ ಕೂಟುಂಬದಲ್ಲಿ ಆ ಕನ್ಯೆಯ ಕೆಲಸವೇನು..? ಎಂದು ವಿರೋಧಿಸಿದ್ದರು ಎನ್ನುವುದನ್ನು ಹೇಳುವ ಮೂಲಕ ಸಾಂಪ್ರದಾಯಿಕ ಜಾತಿ ಪದ್ಧತಿ ತನ್ನ ಕುಲಕಸುಬಿನ ಉದ್ಯೋಗದ ಮುಂದುವರೆಸುವಿಕೆಯನ್ನು ಆಯಾ ಜಾತಿಯ ಸದಸ್ಯರ ಹೊಣೆಗಾರಿಕೆ ಎಂದು ಭಾವಿಸಿರುವುದಿತ್ತು.
ಕಾರ್ಲೇಕರ್ ಎನ್ನುವವರು 1976 ರ ಸಂದರ್ಭದಲ್ಲಿ ದೆಹಲಿಯಲ್ಲಿ ಕಸಗೂಡಿಸುವ ಮಹಿಳೆಯರನ್ನು ಅಧ್ಯಯನ ಮಾಡಿದರು. ಆ ಮಹಿಳೆಯರು ಊರ ಕಸಗುಡಿಸುವ ಸಂದರ್ಭದಲ್ಲಿ ಅವರ ಜಾತಿಯ ಪುರುಷರು ಜಾತಿಯಾಧಾರಿತ ಉದ್ಯೋಗವನ್ನು ತೊರೆದು ಬೇರೆ ಉದ್ಯೋಗಗಳಿಗೆ ಜಿಗಿದಿರುವದಿತ್ತು. ಹಾಗೆಯೇ ತಮಿಳುನಾಡಿನ ಪಡಿಯಾಚ್ಚಿ ಮತ್ತು ನಾಡರ್ ಜಾತಿಯ ಕುಟುಂಬ ದೆಹಲಿಗೆ ವಲಸೆ ಬಂದಾಗ ಆ ಜಾತಿಯ ಮಹಿಳೆಯರು ಶ್ರೀಮಂತರ ಮನೆಗಳಲ್ಲಿ ತಮ್ಮ ಜಾತಿಯ ಸಾಂಪ್ರದಾಯಿಕ ಮನೆಗೆಲಸವನ್ನೇ ಮಾಡುತ್ತಿದ್ದರು. ಅದೇ ಜಾತಿಯ ಪುರುಷರು ಮಾತ್ರ ಅದನ್ನು ಕೀಳೆಂದು ಪರಿಗಣಿಸಿದ್ದರು ಎನ್ನುವ ಬಗ್ಗೆ ಅವರು ವಿವರಿಸಿರುವದಿದೆ. ಹಾಗಾಗಿ ಕೆಳ ಜಾತಿಯ ಮಹಿಳೆಯರು ಜಾತಿಯ ಸಾಂಪ್ರದಾಯಿಕ ವೃತ್ತಿಯನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಇವತ್ತಿಗೂ ಪ್ರಮುಖ ಪಾತ್ರ ವಹಿಸುತ್ತಾರೆ.
ಕೆಳಸ್ತರದ ಮಹಿಳೆಯ ಸಾಮಾಜಿಕ ಅಂತಸ್ತುಗಳಲ್ಲಿ ತೀರಾ ಗಮನಸೆಳೆಯಬಹುದಾದ ಬದಲಾವಣೆಗಳು ಘಟಿಸಿದ್ದು ತೀರಾ ಕಡಿಮೆ. ಅದರಲ್ಲೂ ಅಕ್ಷರ ವಂಚಿತ ಸಮುದಾಯಗಳಲ್ಲಂತೂ ಕರ್ಮಸಿದ್ಧಾಂತದ ಗೊಡವೆಯೇ ದಟ್ಟವಾಗಿದೆ. ಇಟ್ಟ ಹಾಗೆ ಇರಬೇಕು ಕೊಟ್ಟ್ತಿದ್ದು ತಿನಬೇಕು, ಪರಶಿವನು ಕರೆದಾಗ ನಡೀಬೇಕು ಎನ್ನುವ ತೀರಾ ಸರಳ ಸೂತ್ರದ ಎಳೆ ಹಿಡಿದು ಸಾಗುವ ಕೆಳ ಸ್ತರದ ಮಹಿಳೆಯರ ಬದುಕಿನಲ್ಲಿ ಉಂಟಾದದ್ದು ಕೇವಲ ಸಮಾನಾಂತರ ಸಾಮಾಜಿಕ ಸಂಚಲನೆ ಮಾತ್ರ. ಕೆಳಜಾತಿಯ ಮಹಿಳೆ ಬರೀ ಒಂದು ಜಾತಿಯ ವೃತ್ತಿಯನ್ನು ಮಾತ್ರ ಪ್ರತಿನಿಧಿಸದೇ, ತಾನು ಸಂಬಂಧಪಡುವ ಜಾತಿಯ ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಂಡು ಬರುವ ಒಂದು ಪ್ರಮುಖ ವಾಹಕವಾಗಿಯೂ ಆಕೆ ಕಾರ್ಯ ನಿರ್ವಹಿಸುತ್ತಾಳೆ. ಈ ನೆಲದ ಜೀವನವಿಧಾನವನ್ನು ಕಾಯುವ, ರಕ್ಷಿಸುವ, ಸಾಗಿಸುವ ಕೆಲಸವನ್ನು ನಿಧಾನವಾಗಿಯಾದರೂ ನಿರಂತರವಾಗಿ ಈ ಕೆಳಸ್ತರದ ಮಹಿಳೆಯರು ಮಾಡುತ್ತಲೇ ಬಂದಿದ್ದಾರೆ.
ದ್ವಿಜರು ಎಂದು ಕರೆಯಿಸಿಕೊಳ್ಳುವ ಜಾತಿಗಳು ಶೂದ್ರ ಜಾತಿಗಳ ಸೇವೆಯನ್ನು ಪಡೆಯುವ, ಅನುಭವಿಸುವ ಮೂಲಕವೇ ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದರು. ಹೆಚ್ಚೂ ಕಮ್ಮಿ ಈ ದ್ವಿಜರು ಪರಾವಲಂಬಿ ಜಾತಿಗಳೇ.. ಆದರೆ ಶೂದ್ರರು ಮಾತ್ರ ಬಹುತೇಕವಾಗಿ ಸ್ವಾವಲಂಬಿಗಳು. ಅವರು ತಮ್ಮ ಸೇವೆಗಾಗಿ ಇತರೆ ಜಾತಿಗಳನ್ನು ಅವಲಂಬಿಸಿದ್ದು ತೀರಾ ಕಡಿಮೆ. ಆಯಾ ಪದ್ಧತಿಯಲ್ಲಿ ಬರುವ ಜಜಮಾನ್ ಮತ್ತು ಕಮೀನ್ ರನ್ನು ನಾವು ನೋಡಿದಾಗ ನಾನು ಹೇಳುವ ಈ ಮಾತು ಮನದಟ್ಟಾಗುತ್ತದೆ. ಕೆಳಜಾತಿಗಳ ಮಹಿಳೆಯರು ಮೇಲಿನವರ ಆನೇಕ ಅಗತ್ಯತೆಗಳನ್ನು ಪೂರೈಸುವದಿತ್ತು. ಇಂದಿಗೂ ಬೆರಣಿ ತಟ್ಟುವ, ಮಾರುವ, ಮದುವೆ ಮನೆಯಲ್ಲಿ ಪಾತ್ರೆ,ಪಗಡೆ ತೊಳೆಯುವ, ಬುಟ್ಟಿ ಹೊತ್ತು ಊರೂರು ಅಲೆಯುತ್ತಾ ತರಕಾರಿ ಇಲ್ಲವೇ ಮೀನು ಮಾರುವ, ಊರ ಕಸ ಗುಡಿಸುವ, ಬಟ್ಟೆ ತೊಳೆಯುವ, ಕಟ್ಟಿಗೆ ಮಾರುವ, ಹುಲ್ಲ ಹೊರೆ ಹೊತ್ತು ಮಾರುವ, ದನ ಕಾಯುವ,ಬುಟ್ತಿ ಹೆಣೆಯುವ, ಮಾರುವ, ರಸ್ತೆ ಬದಿ ಕುಳಿತು ಹಣ್ಣು, ತರಕಾರಿ ಮಾರುವ ಇಂಥಾ ಇನ್ನೂ ಹತ್ತಾರು ಬಗೆಯ ಕೆಲಸಗಳನ್ನು ಕೆಳಸ್ತರದ ಮಹಿಳೆ ನಿಭಾಯಿಸುವ ಮೂಲಕ ಪರೋಕ್ಷವಾಗಿ ಒಂದು ಬಗೆಯ ಸಾಂಸ್ಕೃತಿಕ ಪರಂಪರೆಯನ್ನು ಇವರು ಸಾಗಿಸುತ್ತಲೇ ನಡೆದಿರುವದಿದೆ.
ದೇವನೂರು ಮಹಾದೇವರು ತಮ್ಮ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ಕೃತಿಯಲ್ಲಿ ‘ ಒಂದ್ಸಲ ನಮ್ಮ ಮನೆಯ ಕಕ್ಕಸ್ಸು ಕಮೋಡ್ ಕಟ್ಟಿ.ಕೊಂಡಿತ್ತು ಕಡ್ಡೀಲಿ ಅಲ್ಲಾಡಿಸಿ ಸರಿ ಮಾಡಲು ನೋಡಿದೆ, ಜಗ್ಗಲಿಲ್ಲ. ಕೊನೆಗೆ ಸೋತು ಅಯ್ಯೋ ನನ್ನ ಮಕ್ಕಳದಲ್ಲವೇ..? ಎಂಬ ಭಾವನೆಯನ್ನು ತಂದುಕೊಂಡು ಕೈಯಲ್ಲಿ ಸರಿ ಮಾಡಿದೆ. ಇಂಥಾ ಇನ್ನೂ ಅನೇಕ ವಿಷಯಗಳಿಗಾಗಿ ಈ ಬಗೆಯ ಮನ:ಸ್ಥಿತಿ ಇದ್ದದ್ದು ಬಹುತೇಕವಾಗಿ ಶೂದ್ರ ಜಾತಿಗಳಲ್ಲಿ ಮಾತ್ರ.







Thanks for the enlightening article. We need to write such things again and again
How long do we keep dwelling in this? Isn’t it time to move forward? It is said that the history is the sum total of human mistakes. If we keep plucking those mistakes, the would can never heal. The generations that committed the mistakes have passed away. In the contemporary world where the definitions are fast changing, one has to keep running to stay in the same place. We should not give a chance to the future generations to complain that we spoiled their present by fighting over what happened in the past. But the vote-banks which never see beyond the next election may not understand what future generation is!
ದೆಹಲಿಯ ಸುಲಭ ಗ್ರಾಮದ ಕಡೆಗೆ ಒಂದಿಷ್ಟು ಕನ್ನಾಡಿಸಿ.
— ಈ ಸಮಾನಾಂತರ ಸಾಮಾಜಿಕ ಸಂಚಲನೆಯ ಮನಸ್ಥಿತಿಗಳ ಮಧ್ಯದಲ್ಲಿ ಒಬ್ಬ ಸುಶಿಕ್ಷಿತ,ಉದ್ಯೋಗಿ ಸೇರಿಕೊಂಡರೆ–?/ಸಿಕ್ಕಿಕೊಂಡರೆ—?
ಜಾತಿಆಧರಿತ. ಲಿಂಗಆಧರಿತ ತರತಮ್ಯಗಳು ಅನಾದಿಕಲದಿಂದಲೂ ನಡೆದುಕೊಂಡು ಬಂದಿವೆ. ಅವುಗಳಿಗೆ ಸರಕಾರ ಮೀಸಲಾತಿ ಎಂಬ ಪೃಹಾರ ನೀಡಿದೆ. ಆದರೆ ಸಮಾಜದ ನಿಲುವು ಮೇಲು, ಕೀಳು ಬಗ್ಗೆ ಬದಲಾದ ಹೊರತೂ ಸುಧಾರಣೆ ಕಷ್ಟಸಾಧ್ಯ. ಆದ್ದರಿಂದ ಪ್ರಗತಿಪರ ಬ್ರಾಹ್ಮಣರೆ ದೊಡ್ಡ ಸ್ವರದಲ್ಲಿ ಸಮಾನತೆಯನ್ನು ಘೋಷಿಸಿದರೆ ಬಹುಶಃ ಎಲ್ಲ ಬದಲಾವಣೆಯಾದೀತು. ಉದಯಕುಮಾರ ಹಬ್ಬು, ಕಿನ್ನಿಗೋಳಿ