ಈ ಕಾಲ ಮಳೆಗಾಲ ಬಾಳ
ನನ ಗಂಡ ಕೂತಲ್ಲಿಂದೇಳ
ಎಂದು ಹಾಡುತ್ತಿದ್ದ ಹಲವು ಹೆಣ್ಣು ಸ್ವರಗಳನ್ನು, ಆ ಸ್ವರಗಳನ್ನು ಕೇಳಿಸಿಕೊಳ್ಳುತ್ತಲೇ ಮಳೆಯ ಅಬ್ಬರದಲ್ಲಿ ಅದು ತನ್ನ ಕಿವಿಗೆ ಬೀಳುತ್ತಲೇ ಇಲ್ಲ ಎನ್ನುವಂತೆ ನಟಿಸುತ್ತಾ ಮುರು ಬೇಯಿಸುವ ಒಲೆ ಎದಿರಿಗೋ, ಬಚ್ಚಲ ಒಲೆಯ ಮುಂದೋ, ಕೊನೆಗೆ ಎಲ್ಲಿಯೂ ಬೆಂಕಿ ಕೆಂಡ ಕಾಣದಿದ್ದರೆ ಕೊನೆಗೆ ಅಡುಗೆ ಒಲೆಗೆ ಕೈಯೊಡ್ಡಿ ಮೈ ಕಾಯಿಸುತ್ತಾ ಬೆಚ್ಚಗೆ ಕುಳಿತ ಹಲವು ಗಂಡು ಜೀವಗಳನ್ನು ನೋಡುತ್ತಾ ಬೆಳೆದವಳು ನಾನು. ಮಲೆನಾಡಿನ ಹೆಣ್ಣು. ಮಳೆಗಾಲ ಎಂದರೆ ನನ್ನ ಕಣ್ಮುಂದೆ ಸಾಲು ಸಾಲು ದೃಷ್ಯಾವಳಿಗಳ ಮೆರವಣಿಗೆಯೇ ಸಾಗುತ್ತದೆ.
ಜೂನ್ನಲ್ಲಿ ಶಾಲೆ ಶುರುವಾದರೆ ಅದರ ಜೊತೆಗೆ ಮಳೆಯೂ ಶುರುವಾಗಿರುತ್ತಿತ್ತು. ಮಳೆ ಒಮ್ಮೆ ಶುರುವಾಯಿತೆಂದರೆ ಅದು ವಾರಗಟ್ಟಲೆ ಬಿಡುವ ಪ್ರಶ್ನೆಯೇ ಇಲ್ಲ. ಗೊರಬು, ಪ್ಲಾಸ್ಟಿಕ್, ಕಂಬಳಿ ಹೊದ್ದು ದೂರದೂರದ ‘ಊರೆಂದರೊಂದೆಮನೆಗಳಿಂದ ಬರುತಿದ್ದ ಸಹಪಾಠಿಗಳೆದುರು ಶಾಲೆಯೆದಿರು ಮನೆಯಿರುವ ನಾವು ತರುತಿದ್ದ ಛತ್ರಿಗಳು ಮಂಕಾಗುತಿದ್ದವು. ಅದಕ್ಕೆ ಶಿಸ್ತಾಗಿ ಛತ್ರಿ ಮಡಚಿ ಅವರ ಕಂಬಳಿ ಕುಪ್ಪೆಯಲ್ಲೋ, ಗೊರಬಿನ ಸಂಧಿಯಲ್ಲೋ ಹೊಕ್ಕಿಕೊಂಡರೆ ಅವರು ನಮ್ಮನ್ನು ಮನೆಗೆ ತಲುಪಿಸಿ ತಮ್ಮ ಹಳ್ಳಿಯ ಹಾದಿ ಹಿಡಿಯುವರು.
ಗುಡುಗು, ಸಿಡಿಲು, ಮಿಂಚು ಎಲ್ಲದರ ಜೊತೆಗೆ ಮಳೆ ಸುರಿಯುತ್ತಿದೆ. ಮಳೆಗೆ ಹೆದರದ ಮಕ್ಕಳು ಗುಡುಗು, ಸಿಡಿಲಿಗೆ ಬೆಚ್ಚಿ ಬೀಳುತ್ತಿವೆ. ಅದನ್ನೆಲ್ಲ ಅರಿಯದವಳಲ್ಲ ಅಮ್ಮಮ್ಮ ಅದಕ್ಕೆ ‘ಮಕ್ಕಳೇ ನೋಡಿ ಕತ್ತಿ ಹೊರಗೆ ಹಾಕ್ತೀನಿ ಆಗ ಸಿಡಿಲು ಮಿಂಚು ಎಲ್ಲ ನಿಂತೆ ಹೋಗತ್ತೆ ಎಂದು ಮೆಟ್ಟುಗತ್ತಿಯನ್ನು ಮಣೆಸಹಿತ ಮನೆಯ ಅಂಗಳಕ್ಕೆ ಹಾಕಿದ್ದಾಳೆ. ಅವಳ ಮಾತನ್ನು ಸತ್ಯ ಮಾಡುವಂತೆ ಅದಾಗಿ ಐದೇ ನಿಮಿಷಕ್ಕೆ ಮಿಂಚು, ಗುಡುಗು ಎಲ್ಲ ನಿಂತು ಮಳೆ ಮಾತ್ರ ಬರುತ್ತಿದೆ. ಅಮ್ಮಮ್ಮನ ಮಾತಿಗೆ ಅಷ್ಟು ಶಕ್ತಿಯಲ್ಲವೇ ಮತ್ತೆ.
ಮಳೆ ಸುರಿಯುತ್ತಲೇ ಇದೆ. ನಾಟಿ ಕೆಲಸಕ್ಕೆ ಆಳು ಕರೆಯಲು ಅಪ್ಪ ಹೋಗಿದ್ದವನು. ಮನೆಗೆ ಬಂದು ಹೇಳುತ್ತಾನೆ. ‘ನಾಟಿ ದಿನ ಆಳುಗಳಿಗೆಲ್ಲ ಕೋಳಿ ಪಲಾವ್ ಮಾಡಿಸಬೇಕು. ‘ಇಷ್ಟು ವರುಷ ಇಲ್ಲದ ಸಂಭ್ರಮ ಈಗೇನು? ಅಮ್ಮ ಮೂಗು ಮುರಿಯುವಳು. ಆಳು ಸಿಗುವುದೇ ಕಷ್ಟ. ಎಲ್ಲರ ಮನೆಯಲ್ಲೂ ಮುಯ್ಯಾಳುಗಳಿದ್ದಾರೆ. ನಮ್ಮನೆಯಲ್ಲಿ ಹಾಗೂ ಇಲ್ಲ. ಅಡುಗೆಯಂತೂ ಮಾಡಿಸ್ಲೇಬೇಕು. ನೀನಂತೂ ನಮ್ಮಮ್ಮನ ಹಾಗೆ ಬೆಳಗಿನ ಜಾವ ಎದು ಕಡಬು ಪಲ್ಯ ಮಾಡಲಾರೆ. ಮಾಡೋದೊಂದು ಚಿತ್ರಾನ್ನ ಅದರ ಬದಲು ಕೋಳಿ ಪಲಾವ್ ಕೊಟ್ಟರಾಯಿತು. ಅವರೂ ಉಂಡು ಖುಷಿಯಾಗಿರಲಿ. ಜಿಟಿಜಿಟಿ ಮಳೆ, ನಾಟಿ ಹಚ್ಚುವ ಸಂಭ್ರಮ ಮನೆಯ ಯಜಮಾನನಲ್ಲಿ ಹೊಸ ಸಂಭ್ರಮವನ್ನೇ ತಂದಿದೆ.
ಅಪ್ಪ ಊರ ಕೆರೆಗಳನ್ನು ಪಂಚಾಯ್ತಿ ಹರಾಜಿನಲ್ಲಿ ಹಿಡಿದು ಮೀನು ಸಾಕಿದ್ದಾನೆ. ಮಳೆಗಾಲ ಶುರುವಾಗಿದೆ. ಮೀನು ಹಿಡಿಯಲು ಒಂದು ದಿನ ನಿಗದಿ ಮಾಡಿದ್ದಾನೆ. ಯಾರು ಬೇಕಾರೂ ಬಂದು ಆ ದಿನ ಸಾಮೂಹಿವಾಗಿ. ತಮ್ಮಿಂದ ಸಾಧ್ಯವಾದಷ್ಟು ಮೀನು ಹಿಡಿಬಹುದು ಕೆರೆಯಲ್ಲಿ. ಬಲೆ ಹಾಕುವ ಗಂಡಸರು, ಬುಟ್ಟಿಯಲ್ಲಿ ಮೀನು ಹಿಡಿಯುವ ಹೆಂಗಸರು ಎಲ್ಲರೂ ಸೇರಿ. ಕೆರೆ ಹಿಡಿದ ಅಪ್ಪನ ಜೋಳಿಗೆಗೆ ನಿಗದಿತ ದುಡ್ಡನ್ನು ಪಾವತಿಸಿ ಮೀನು ಹಿಡಿಯುವರು. ಗೌರಿ, ಕುಂಚು, ಅವಿಲು, ಮುರುಗೋಡು, ಮಂಜುಗೊಡವ ಬಾಳೆ, ಕಾಟ್ಲಾ ದೊಡ್ಡ ದೊಡ್ಡ ಮೀನುಗಳು ಗಂಡಸರ ಬಲೆಯ ಪಾಲಾದರೆ ಸಣ್ಣಸಣ್ಣ ಜಬ್ಬು, ಗೊದಮಟ್ಟೆ ಹಂಗಸರ ಬುಟ್ಟಿಗೆ ಸಿಗುವವು. ಕೆರೆಯೊಳಗೆ ಮೀನು ಹಿಡಿಯುವವರ ಸಂಭ್ರಮವಾದರೆ ಕೆರೆ ದಂಡೆಯ ಮೇಲೆ ಮೀನು ಕೊಳ್ಳಲು ಜಾತ್ರೆಯೇ ನೆರೆದಿದೆ. ಮಳೆಯಲ್ಲೇ ಚರ್ಚೆ, ಚೌಕಾಸಿ, ಕೊಳ್ಳುವ ಗಡಿಬಿಡಿ. ಥಂಡಿ ಥಂಢಿ ಮಳೆಗೆ ಸಾಥ್ ನೀಡುವಂತೆ ಬಿಸಿ ಬಿಸಿ ಕಾಳು ಮೆಣಸು ಅರೆದು ಕಟ್ಟಗೆ ಮಾಡಿದ ಮೀನು ಸಾರು. ಉಂಡರೆ ಎಂಥ ಥಂಡಿಯೂ ಗಡಿಪಾರು.
ಮಳೆಗಾಲದಲ್ಲಿ ಮೂರ್ನಾಲ್ಕು ದಿನವಂತೂ ಮಲೆನಾಡಿನ ಶಾಲೆಗೆ ರಜೆ ಬಿಡುವುದು ಮಾಮೂಲು. ಹೊಳೆ-ಹಳ್ಳ ತುಂಬಿ ಹರಿವಲ್ಲಿ ಹುಡುಗರು ದಾಟಿ ಬರುವುದು ಕಷ್ಟ ಎಂಬ ಮುಂಜಾಗ್ರತೆ. ಆದರೆ ಅದನ್ನೇ ಉಪಯೋಗಿಸಿಕೊಂಡು ಗುಡ್ಡ, ಬೆಟ್ಟ,ಕಾನುಗಳಿಗೆ ದಾಳಿಯಿಡಲು ಯಾರ ಪರವಾನಿಗೆಯೂ ಮಕ್ಕಳಿಗೆ ಬೇಡ. ಇದೆ ಸಂದರ್ಭ ನೇರಳೆ, ಸಂಪಗೆ, ಮುಳ್ಳಣ್ಣು, ಹಲಸು, ಕಾಡು ಮಾವು, ಥರಾವರಿ ಹಣ್ಣುಗಳು ತಿನ್ನಲು. ನೀರು ಕುಡಿದ ಹಣ್ಣುಗಳನ್ನು ತಿಂದರೆ ಶೀತ ಆಗತ್ತೆ, ಜ್ವರ ಬರತ್ತೆ ಅಪ್ಪ-ಅಮ್ಮನ ಮಾತು ಮಳೆಯಲ್ಲಿ ಕೇಳಿಸುವುದೇ ಇಲ್ಲ.
ಕೆಸುವಿನ ಸೊಪ್ಪಿನ ಪತ್ರೊಡೆ, ಕಡಲೆ ಜೊತೆಗಿನ ಕಳಲೆ ಪಲ್ಯ, ಥರಾವರಿ ಅಣಬೆಗಳು, ಬೆಂಕಿಗೆ ಹಾಕಿ ಸುಟ್ಟ ಗೇರುಬೀಜ, ಹಲಸಿನ ಬೀಜದ ಸವಿ ಎಲ್ಲದರ ರುಚಿ ಸಿಗುವುದು ಮಳೆಗಾಲದಲ್ಲಿ.
ಗುಡುಗು ಸಹಿತ ಮಳೆಯಾದೊಡನೆ ಯಾರೋ ಸುದ್ದಿ ತರುವರು. ಅಣಬೆ ಬಂದಿದೆ ಅಣಬೆ ಬಂದಿದೆ. ಅಂಗಡಿಗೆ ಅಣಬೆ ಬಂದಿದೆಯೇನೋ ಮಾರಲು ಎಂಬಂತೆ. ಹಾಗಲ್ಲ ಅದು ಭೂಮಿಯಲ್ಲಿ ಅಣಬೆ ಬಂದಿದೆ ಎಂದು. ಅದರ ಆಯಸ್ಸು ಸಹ ಬಹಳ ಕಡಿಮೆ. ಆದ್ದರಿಂದ ಬೇಗನೆ ಮಳೆಯಲ್ಲಿ ಅದನ್ನು ಆರಿಸಲು ಹೋಗಬೇಕು. ಅಣಬೆ ಆರಿಸಲು ಹುಡುಗರ ದಂಡೇ ಹೋಗುವುದು ಕಾನಿಗೆ. ಅಜ್ಜಿಯೇ ಮಾರ್ಗದರ್ಶಿ. ಕಲ್ಲಣಬೆ ಅಂತ ಭೂಮಿಯೊಳಗಡೆ ಇರ್ತದೆ. ಮೇಲೆ ಬಲೆಯ ಹಾಗೆ ಹಾಸಿರುತ್ತದೆ. ಆ ಬಾಗದಲ್ಲಿ ತುಸು ಅಗೆದರೆ ಗುಂಡಾದ ಬಿಳಿ ಬಳಿ ಅಣಬೆಗಳು. ಸಿಡಿಲು, ಗುಡುಗು ಬಂದಷ್ಟೂ ಅಣಬೆ ಜಾಸ್ತಿ ಬಿಡ್ತದೆ. ಅಂತ ಅಮ್ಮಮ್ಮ ಹೇಳಿದಾಗ ಎಲ್ಲ ಮಕ್ಕಳು ಬೇಡುವವು ಆಕಾಶ ರಾಯನಲ್ಲಿ ‘ಸಿಡಿಲು ಗುಡುಗು ಬರಲಿ, ಅಣಬೆ ಆರಿಸಲು ಮಳೆ ಬಿಡುವು ಕೊಡಲಿ. ಛತ್ರಿಯಾಕಾರದ ಹೆಗ್ಗುಲಣಬೆಯದಂತೂ ಇನ್ನೂ ಮೋಜು. ಮನೆಯ ಹಿಂದಿನ ಧರೆಯಲ್ಲಿ ರಾತ್ರಿ ನೋಡುವಾಗ ಏನೂ ಇರುವುದಿಲ್ಲ. ಬೆಳಿಗೆದ್ದು ನೋಡಿದರೆ ನೂರಾರು ಅಣಬೆ ಸಾಲು. ಇದು ಬಾಳಿಕೆ ಬರುವುದು ಒಂದೇ ದಿನ. ಎಂಥ ಜುಗ್ಗಿ ಯಜಮಾನಿಯಾದರೂ ಸುತ್ತ ಮುತ್ತಲಿನವರಿಗೆ, ಆಳು-ಕಾಳುಗಳಿಗೆ ಕೊಟ್ಟೆ ತಿನ್ನಬೇಕು. ಅದಕ್ಕೆ ಈ ವ್ಯವಸ್ಥೆ.
ಮಳೆಗಾಲವೆಂದರೆ ಜಾರಿಕೆಯ ನೆಲ, ಕಾಲ ಸಂಧಿಯಲ್ಲಿ ಕೆಸರು ಸೇರಿಕೊಂಡು ಕೆಸರು ಹುಣ್ಣು .ಜ್ವರ, ಶೀತ, ಕೆಮ್ಮು, ಜಾರಿಕೆಯ ಜೋಪಾನ ನಡೆಯಬೇಕೆಂಬ ಪಾಠ. ಕೆಸರು ಹುಣ್ಣಿಗೆ ಅರಸಿನ-ಕೊಬ್ಬರಿ ಎಣ್ಣೆಯ ಉಪಚಾರ. ಜ್ವರ-ಶೀತಕ್ಕೆ ಕಟ್ಟಗಿನ ಕಾಳುಮೆಣಸಿನ ಕಷಾಯವೇ ಮದ್ದು. ಪ್ರತಿಯೊಬ್ಬರ ಮನೆ ಅಂಗಳದಲ್ಲೂ ಅರಳಿದ ಡೇರೆ ಹೂಗಳು, ಗದ್ದೆಯಲ್ಲಿ ಗೊರಬು ಧರಿಸಿ ಕೆಲಸ ಮಾಡುವವರು, ಬೆಂಕಿ ಆರದ ಮುರುವಿನ ಒಲೆಗಳು, ಖಾಲಿಯಾಗುತ್ತಿರುವ ಕೂಡಿಟ್ಟ ಕಟ್ಟಿಗೆ, ಮದುವೆ ಮನೆಗಳು, ಆಷಾಡಕ್ಕೆ ತೌರಿಗೆ ಬಂದ ಹೆಣ್ಣುಗಳು, ಎಷ್ಟೇ ಜೋಪಾನ ಮಾಡಿದರೂ ಅಲ್ಲಲ್ಲಿ ಸೋರುವ ಮನೆಗಳು. ಅಲ್ಲೆಲ್ಲ ಒಂದೊಂದು ಪಾತ್ರೆ. ದಬ್ಬೆಯಿಂದ ಧೋ ಎಂದು ಸುರಿವ ನೀರು… ಇವು ನಾ ಕಂಡ ಮಲೆನಾಡಿನ ಮಳೆಗಾಲದ ಚಿತ್ರಗಳು. ಆದರೆ ಇದಿಷ್ಟೇ ಅಲ್ಲ. ಸಿಡಿಲು ಬಡಿದು, ತೀವ್ರ ಜ್ವರಕ್ಕೆ ಬಲಿಯಾಗಿ ಸತ್ತವರ ಮನೆಯ ಶೋಕ, ಜಾರಿ ಬಿದ್ದು ಕೈ ಕಾಲು ಮುರಿದುಕೊಂಡವರ ನೋವು, ಗುಡ್ಡೆಗೆ ಮೇಯಲು ಹೋಗಿ ಮಳೆಗೆ ಸಿಕ್ಕಿ ಮರೆಯಾದ ದನಕರುಗಳ ಚಿತ್ರಗಳು ಕಣ್ಮುಂದೆ ಹಾದು ವಿಷಾಧವುಕ್ಕಿಸುತ್ತವೆ.







ಅಣಬೆ, ಮರಕೆಸುವಿನ ಫೋಡಿ,ಹಲಸಿನ ಹಣ್ಣಿನ ಹಪ್ಪಳ,ಹುರುಳಿ ಕಟ್ಟಿನ ಸಾರು, ಬಚ್ಚಲ ಒಲೆಯಲ್ಲಿ ಸುಟ್ಟ ಹಲಸಿನಕಾಯಿ ಬೀಜ,ಕೆಸುವಿನ ಸೊಪ್ಪಿನ ಪತ್ರೊಡೆ, ಕಡಲೆ ಜೊತೆಗಿನ ಕಳಲೆ ಪಲ್ಯ, ಬೆಂಕಿಗೆ ಹಾಕಿ ಸುಟ್ಟ ಗೇರುಬೀಜ,and cups of tea tea tea…………….mmmmmmm loving it!!!!
that too now i am strictly on a diet, reading about eatables make my mouth water 🙁
nice potrayal of the monsoons Akshatha!!!
🙂
wow intha baraha hindedndu ode iralilla. great.
Lovely article! Fact that our life during rains is mostly spent indoors watching ‘Breaking News’ sipping hot coffee, Malenad rains is something one should experience!