ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಟೋಬರ್ 2ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು…

ಪ್ರೊ ಚಂದ್ರಶೇಖರ ಪಾಟೀಲ

ಇವತ್ತಿನ ದಿವಸ, ಗಾಂಧಿ ಮಾರಾಜ,
ನಮ್ಮದೆಂಥಾ ಪುಣ್ಯಾ ಅಂದಿ!
ಭಾಷಣ ಮಾಡಲಿಕ್ಕೆ ಲೇಖನಾ ಗೀಚಲಿಕ್ಕೆ ಕವಿತಾ ಕಿರಚಲಿಕ್ಕೆ
ಪೇಟೆ ಬಾರಸಲಿಕ್ಕೆ ಡ್ಯಾನ್ಸ ಮಾಡಲಿಕ್ಕೆ

ಎಂಥಾ ಚಾನ್ಸ ಅಂದಿ! ಎಷ್ಟೋ ವರ್ಷದ ಹಿಂದ
ನೀ ಹುಟ್ಟಿದ್ದು ಇವತ್ತ ಸಾರ್ಥಕ ಆತು.
ನೀ ಹುಟ್ಟಿದ ಮ್ಯಾಲೆ ನಾವು ಹುಟ್ಟಿದ್ದು ನೀ ಸತ್ತ ಮ್ಯಾಗ ನಾವು ಬದುಕಿದ್ದು ಇವತ್ತ ಸಾರ್ಥಕ ಆತು.

ನೋಡಪ ಗಾಂಧಿ, ನಾವು ಮಾನ್ಯ ಮಂದಿ ಅಲ್ಲ.
ನಾವು ಸಾಮಾನ್ಯ ಮಂದಿ, ನೀ ಏನೋ
ಅಹಿಂಸಾ ಅಹಿಂಸಾ ಅಂತ ಎದೀಗೆ ಗುಂಡು ಹೊಡಿಸಿಗೊಂಡಿ.
ಸತ್ಯಾ ಸತ್ಯಾ ಅಂದಿ. ಸತ್ತೇಬಿಟ್ಟಿ.
ರಾಮ ರಾಮ ರಾಮ ಅಂತ ಕೈ ಮುಕ್ಕೊಂಡಿ. ರಾಜಘಾಟದಾಗ ಬೂದಾಗಿ ಅರಾಮ್ ಮಕ್ಕೊಂಡಿ. ಅಂತೂ ಇಂತೂ ಇತಿಹಾಸದೊಳಗೊಂದು ಜಾಗಾ ಹೊಡಕೊಂಡಿ

ನಾವು? ನಾವೇ? ನಿನ್ನ ಹೆಸರಿನ ಚಾಪ್ಟರಿನ ಪ್ಯಾರಾದ
ವಾಕ್ಯದ ಶಬ್ದದ ಅಕ್ಷರದ ಒತ್ತೋ ಕೊಂಬೋ ಕೊಂಡ್ಯೋ ಕೊಸರೋ!
ಹೇಳಿದ್ದೆಲ್ಲ, ನಾವು ಮಾನ್ಯ ಮಂದಿ ಅಲ್ಲ. ಸಾಮಾನ್ಯ ಮಂದಿ

ನಾವು ನಿನ್ನ ನೆನಸತೇವಿ. ನೆನಸಬೇಕು ನೆನಸತೇವಿ. ಹಂಗ ಖರೇ ಹೇಳಬೇಕಂದ್ರ ನೀನೇ ನಮ್ಮನ್ನ ನೆನಸಬೇಕು! ಅಲ್ಲ, ನಾವು ನಾವಾಗದಿದ್ರ ನೀ ನೀ ಹೆಂಗಾಗತಿದ್ದಿ? ನಾವೇ ಗುಲಾರಾಗಿರದಿದ್ರ ನೀ ಸ್ವಾತಂತ್ರ ಹೆಂಗ ತರತಿದ್ದಿ? ನಾವೇ ಚಿಲ್ಲರ ಆಗಿರದಿದ್ರ ನೀ ಮಹಾತ್ಮ ಹೆಂಗಾಗತಿದ್ದಿ? ನಾವೇ ಗುಂಡ ಹೊಡೀದಿದ್ರ ನೀ ಹುತಾತ್ಮ ಹೆಂಗಾಗತಿದ್ದಿ? ಅದಕೇ ಹೇಳೋದಪ, ನೀ ನಮ್ಮನ್ನ ನೆನಸಬೇಕು.

ನಗೀ ಬಂದ್ರ ನಗು, ಗಾಂಧಿ, ನಿನ್ನ ಹುಟ್ಟಿದ ಹಬ್ಬದ ದಿವಸ
ಎಲ್ಲಾರೂ ನಗಾವ. ಆದರ,
ಎಲ್ಲಾರೂ ನಗಾ ಮುಂದ ಯಾರ್ನ ನೋಡಿ ಯಾರ ನಕ್ರು, – ಮತ್ತ ಯಾಕ ನಕ್ರು ಅನ್ನದ ತಿಳೆಂಗಿಲ್ಲ.

ನಾನೂ ನಗತಿದ್ದೆ. ಮೈಯಾಗ ಪ್ರಾಣ ಇಲ್ಲ.
ಗಾಂಧೀಮಾರಾಜಕೀ ಜೈ ಅಂತ ಒದರತಿದ್ದೆ.
ಗಂಟಲದಾಗ ತ್ರಾಣ ಇಲ್ಲ. ಯಾಕ ಅಂತ ಕೇಳ್ತೀಯಾ?

ಕಾಲ ಕೆಟ್ಟಹೋತು ಗಾಂಧಿ!
ಒಂದ ಮುಂಜಾನೆ ಅಲ್ಲ, ಒಂದ ಮದ್ಯಾಣ ಅಲ್ಲ, ಒಂದ ಸಂಜಿ ಅಲ್ಲ.
ಪುಟ್ಟಾ ಪೂರಾ ಇಡೀ ದಿವಸ – ಹೂಂನಪಾ ಇಡೀ ದಿವಸ-

ಗಾಂಧಿ, ನಿನ್ನ ಹೆಸರು ಮುಂದ ಮಾಡಿ
ಸೇಂದಿ ಅಂಗಡಿ ಬಂದ ಮಾಡಿದರ,
ನಿನ್ನ ಹಿಂದುಸ್ತಾನದೊಳಗ ಚೈತನ್ಯದ ನಾಂದಿ
ಹೆಂಗ ಆಗಬೇಕು? ನೀನಾ ಹೇಳು ಗಾಂಧಿ!

*೧೯೭೪

‍ಲೇಖಕರು Admin

2 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading