ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬೇಡ್ಕರ್ ಎನ್ನುವ ಅಪ್ರತಿಮ ವಿಸ್ಮಯ…

ಡಾ ಜ್ಯೋತಿ

ಆಧುನಿಕ ಭಾರತದ ನಿರ್ಮಾತರಲ್ಲಿ ಮುಂಚೂಣಿಯಲ್ಲಿರುವ ಎರಡು ಪ್ರಮುಖ ಹೆಸರುಗಳೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಅವರಿಬ್ಬರ ನಿಸ್ವಾರ್ಥ ಮತ್ತು ಸಮಾಜಮುಖಿ ಕಾರ್ಯದಿಂದಾಗಿ, ನಾವಿಂದು ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ಭಾರತದಲ್ಲಿ, ಎಲ್ಲಾ ನ್ಯೂನ್ಯತೆಗಳ ಹೊರತಾಗಿಯೂ ಸಹನೀಯ ಬದುಕನ್ನು ನಡೆಸುತ್ತಿದ್ದೇವೆ ಎನ್ನಬಹುದು. ಏಪ್ರಿಲ್ 14, ಅಂಬೇಡ್ಕರ್ ಜಯಂತಿಯ ಈ ಸುಸಂದರ್ಭದಲ್ಲಿ, ಅಂಬೇಡ್ಕರ್ ಕುರಿತು ಇನ್ನಷ್ಟು ವಿಭಿನ್ನ ಆಯಾಮಗಳಲ್ಲಿ ಮರುಓದಿಗೆ ಹಚ್ಚಿ, ವರ್ತಮಾನದ ಯುವಜನತೆಗೆ ಅವರ ಹೋರಾಟದ ಹೆಜ್ಜೆಗುರುತುಗಳ ಅರಿವು ಮೂಡಿಸುವ ಅಗತ್ಯವಿದೆ.

ಮೊದಲನೆಯದಾಗಿ, ಅಂಬೇಡ್ಕರ್ ತನ್ನ 65 ವರ್ಷಗಳ ಜೀವನ ಪಯಣದಲ್ಲಿ ಮಾಡಿರುವ ಸಾಧನೆ ಭಾರತದ ಇತಿಹಾಸದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು. ಅವರು ತನ್ನ ಬಾಲ್ಯದಿಂದಲೇ ತಾನು ಹುಟ್ಟಿದ ಜಾತಿಯ ನೆಲೆಯಿಂದ ಸುತ್ತಲಿನ ಸಮಾಜದಲ್ಲಿ ಅನುಭವಿಸುತ್ತಾ ಬಂದ ಅವಮಾನ ಮತ್ತು ತಾರತಮ್ಯ, ಜೊತೆಗೆ, ಅರಿವಿನ ಪ್ರಪಂಚದಿಂದ ದೂರವಿಟ್ಟಲ್ಪಟ್ಟ ತನ್ನ ಸಮುದಾಯ ಈ ಘೋರ ಸಂಪ್ರದಾಯವನ್ನು ಪ್ರತಿಭಟಿಸದೇ ಮೌನವಾಗಿ ಸ್ವೀಕರಿಸುತ್ತಾ ಬಂದ ರೀತಿ, ಅಂಬೇಡ್ಕರ್ ಗೆ ಇದನ್ನು ಸರಿಪಡಿಸಲು ತಾನೇನಾದರೂ ಮಾಡಲೇ ಬೇಕೆನ್ನುವ ಛಲ ಮೂಡಿಸಿತೆನ್ನಬಹುದು.

ತಾನು ಮಾಡಿದ ದೃಢ ನಿಶ್ಚಯ ಕಾರ್ಯರೂಪಕ್ಕೆ ತರುವ ದಾರಿಯಲ್ಲಿ ತನಗೆದುರಾದ ಎಲ್ಲಾ ಅಡೆತಡೆಗಳನ್ನು ಮೀರಿ, ಮಹತ್ತರ ಸಾಧನೆಮಾಡಿ ತನ್ನ ವಿಶಿಷ್ಟ ಹೆಜ್ಜೆಗುರುತುಗಳ ಛಾಪನ್ನು ಮುಂದಿನ ಜನಾಂಗಗಳಿಗೆ ಅಂಬೇಡ್ಕರ್ ಬಿಟ್ಟು ಹೋಗಿರುತ್ತಾರೆ. ಇವರ ಸಾಧನೆಗಳು ಕಾಲಾತೀತ ಮತ್ತು ಎಲ್ಲಾ ಜನಾಂಗಗಳಿಗೆ ಪ್ರೇರಣೆ. ಆದ್ದರಿಂದ, ಅವರ ಸಾಧನೆಗಳನ್ನು ಎಲ್ಲಾ ಚೌಕಟ್ಟುಗಳನ್ನು ಮೀರಿ, ಸಮಗ್ರವಾಗಿ, ಮಾನವ ಬದುಕಿನ ಸಾರ್ಥಕತೆಯ ಪ್ರತಿಮೆಯಾಗಿ ಅರಿಯುವ ಅಗತ್ಯವಿದೆ.

ಅಂಬೇಡ್ಕರ್, ಬರಿ ದಲಿತ ಏಳಿಗೆಯ ನೇತಾರನಾಗಿ ಮಾತ್ರವಲ್ಲ, ಇನ್ನು ಅನೇಕ ವಿನೂತನ ಸಂಭಾವ್ಯಗಳ ಹರಿಕಾರನಾಗಿ ಕಾಣಿಸುತ್ತಾರೆ. ಸಾಮಾನ್ಯವಾಗಿ, ಅಂಬೇಡ್ಕರನ್ನು ದಲಿತ ನಾಯಕ ಮತ್ತು ಸಂವಿಧಾನ ಶಿಲ್ಪಿ ಎಂದೆಷ್ಟೇ ಗುರುತಿಸುತ್ತೇವೆ. ಆದರೆ, ಅಂಬೇಡ್ಕರನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾ ಹೋದಂತೆ, ಅವರು ಎಲ್ಲ ವರ್ಗ, ಜಾತಿ ಮತ್ತು ಧರ್ಮಗಳ  ಜನರಿಗೆ ಅಸಾಮಾನ್ಯ ಪ್ರೇರಕಶಕ್ತಿಯಂತೆ ಕಾಣಿಸುತ್ತಾರೆ.  

ಮೊದಲನೆಯದಾಗಿ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಹೇಗೆ ಪ್ರೇರಣೆಯಾಗುತ್ತಾರೆಂದರೆ, ಒಬ್ಬ ಅತ್ಯಂತ ಬಡಕುಟುಂಬದ ಮಹರ್ ಜಾತಿಯ ಹುಡುಗ, ಆ ಕಾಲದಲ್ಲಿ ಮೇಲ್ಜಾತಿಯವರಷ್ಟೇ ಹೋಗುತ್ತಿದ್ದ ಶಾಲೆಯಲ್ಲಿ ಅಧ್ಯಯನ ಮಾಡಬೇಕೆಂದಿದ್ದರೆ, ಏನೆಲ್ಲಾ ಅವಮಾನ, ನೋವು, ಹಿಂಸೆ ಅನುಭವಿಸಿರಬಹುದು? ಆದರೂ ದೃತಿಗೆಡದೆ ಶಾಲಾ ಕೊಠಡಿಯ ಒಂದು ಮೂಲೆಯಲ್ಲಿ ಗೋಣಿಚೀಲದ ಮೇಲೆ ನಿತ್ಯವೂ ಕುಳಿತು, ಸಾರ್ವಜನಿಕ ಕುಡಿಯುವ ನೀರಿನ ದಾಹತಣಿಸಲು ಅವಕಾಶವಿಲ್ಲದೆ, ಗುರುಗಳಿಂದ ಮತ್ತು ಸಹಪಾಠಿಗಳಿಂದ ಮುಟ್ಟಿಸಿಕೊಳ್ಳದೆ, ಕೇವಲ ತನ್ನ ಇಚ್ಚಾಶಕ್ತಿಯ ಬಲದಿಂದ ವಿದ್ಯಾಭ್ಯಾಸ ಮಾಡುತ್ತಾರೆ.

ಮುಂದುವರಿದು, ಹೆಸರಾಂತ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಎರಡೆರಡು ಪಿಹೆಚ್.ಡಿ ಪಡೆಯುತ್ತಾರೆ. ಅವರು ಹಡಗಿನಲ್ಲಿ ಭಾರತಕ್ಕೆ ವಾಪಸ್ಸಾಗುವಾಗ, ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ತಾನು ಸಲ್ಲಿಸಬೇಕಿದ್ದ ಪಿ.ಹೆಚ್.ಡಿ ಮಹಾಗ್ರಂಥ ಕಳೆದುಕೊಳ್ಳುತ್ತಾರೆ. ಆದರೂ, ವಿಚಲಿತರಾಗದೆ ಪುನಃ ಬರೆದು ಪದವಿ ಗಳಿಸುತ್ತಾರೆ. ವಿಶೇಷವಾಗಿ, ಇಲ್ಲಿ ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶವೆಂದರೆ, ದಲಿತರಿಗೆ ಮೀಸಲಾತಿ ತರಲು ಜೀವನವಿಡೀ ಹೋರಾಡಿದ ಅಂಬೇಡ್ಕರ್, ತಾನು ಅದರ ಫಲಾನುಭವಿಯಾಗದೆ, ತನ್ನ ಕಡು ಬಡತನ ಮತ್ತು ಸಾಮಾಜಿಕ ನಿಷೇಧಗಳನ್ನು ಮೀರಿ, ಶ್ರಮವಹಿಸಿ ಜ್ಞಾನ ಸಂಪಾದಿಸಿದವರು. ಹಾಗಾಗಿ, ತಾವು ಸಾಧಿಸಲಾಗದ್ದಕ್ಕೆ ಸದಾ ಸಬೂಬುಗಳನ್ನು ಅರಸುವ  ನಮ್ಮ ವಿದ್ಯಾರ್ಥಿಗಳಿಗೆ, ಇಚ್ಛಾಶಕ್ತಿ ಹೊಂದಿದ್ದರೆ ಎಲ್ಲಾ ಸಂಕೋಲೆಗಳಿಂದ ಕಳಚಿಕೊಂಡು ತಾವೇ ಒಂದು ಹೊಸದಾರಿಯ ಸೃಷ್ಟಿಸಬಹುದೆನ್ನುವುದಕ್ಕೆ ಅಂಬೇಡ್ಕರ್ ಒಂದು ಉತ್ತಮ ನಿದರ್ಶನ.

ಇನ್ನು ಒಬ್ಬ ಲೇಖಕನಾಗಿ ಅಂಬೇಡ್ಕರ್ ಹೇಗೆ ಸ್ಪೂರ್ತಿ ನೀಡುತ್ತಾರೆಂದರೆ, ಅವರ ಭಾಷೆಯ ಬಳಕೆ, ನಿರೂಪಣೆ, ಹಾಗು ಶೈಲಿ ಅತ್ಯಂತ ಸ್ಪಷ್ಟ ಮತ್ತು ನಿಖರವಾಗಿದೆ. ಅವರ ಶೈಕ್ಷಣಿಕ ಜೀವನ ಪಾಂಡಿತ್ಯಪೂರ್ಣ ಮತ್ತು ಶ್ರೇಷ್ಠಮಟ್ಟದಾಗಿತ್ತು. ಒಂದು ಗ್ರಾಮೀಣ ಶಾಲೆಯಲ್ಲಿ ಓದಿದ ಹುಡುಗ ಮುಂದೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯ ಮತ್ತು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪಿಹೆಚ್ ಡಿ ಪಡೆಯುವಷ್ಟು ಶೈಕ್ಷಣಿಕ ಹಿರಿಮೆಯನ್ನು ಸಾಧಿಸುತ್ತಾರೆಂದರೆ, ಅವರ ನಿರಂತರ ಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಅಂಬೇಡ್ಕರನ್ನು ಸಾಮೀಪ್ಯದಲ್ಲಿ ಗಮನಿಸಿದವರು, ಅವರು ಸದಾಕಾಲ ಪುಸ್ತಕಗಳೊಂದಿಗೆ ಕಾಲಕಳೆಯುತ್ತಿದ್ದುದನ್ನು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. ಗಮನಾರ್ಹ ಅಂಶವೆಂದರೆ, ಅವರ ಸಾವು ಕೂಡ ಅವರ ಸ್ವಂತ ಲೈಬ್ರರಿಯಲ್ಲಿಯೇ, ಅದೂ ಕೂಡ ತೆರೆದ ಹಾಳೆಯ ಪುಸ್ತಕದ ಸಾಂಗತ್ಯದಲ್ಲಿಯೇ ಆಗಿತ್ತು. ಅವರೇ ಹೇಳಿಕೊಂಡಂತೆ, ಅವರು ತಮ್ಮ ಬರವಣಿಗೆಯ ಮೂಲಕ ತಮ್ಮ ಆಲೋಚನೆಗಳ ಗೋಜಲುಗಳನ್ನು ನಿವಾರಿಸಿಕೊಳ್ಳುತ್ತಾ, ತಮ್ಮ ವಿಚಾರಗಳ ಸ್ಪಷ್ಟತೆಯನ್ನು ಕಂಡುಕೊಂಡರು.  

ಅಂಬೇಡ್ಕರ್ ಗೆ, ಜಾತಿವ್ಯವಸ್ಥೆ ಪ್ರಶ್ನಾತೀತವಾಗಿ ಮುಂದುವರಿಯುವಿಕೆಯಲ್ಲಿ, ದಲಿತರಂತೆಯೇ ಶತಮಾನಗಳಿಂದ ಅನಕ್ಷರಸ್ತರಾಗಿಯೇ ಉಳಿದಿರುವ ಮಹಿಳೆಯರ ಪಾತ್ರದ ಅರಿವಿತ್ತು. ಯಾಕೆಂದರೆ, ಒಂದು ಸಂಪ್ರದಾಯ ಪ್ರಶ್ನೆಗೆ ಸಿಲುಕದೆ ಸುವ್ಯವಸ್ಥಿತವಾಗಿ ಮುಂದುವರಿಯಬೇಕಾದರೆ, ಅದರ ನಿರಂತರ ಅಳವಡಿಕೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ, ಜಾತಿವ್ಯವಸ್ಥೆಯನ್ನು ನಿತ್ಯಬದುಕಲ್ಲಿ ತಾವು ಆಚರಿಸಿ ಮುಂದಿನ ಜನಾಂಗಕ್ಕೆ ಚಾಚೂ ತಪ್ಪದೆ ಧಾಟಿಸುವವರು ಹೆಚ್ಚಾಗಿ ಮಹಿಳೆಯರೇ. ಇದಕ್ಕೆ ಮುಖ್ಯ ಕಾರಣ, ಅವರಲ್ಲಿರುವ ಅಜ್ಞಾನ ಮತ್ತು ಅನಕ್ಷರತೆ. ಹಾಗಾಗಿ, ಅಂಬೇಡ್ಕರ್ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವುದರೊಂದಿಗೆ, ಅವರ ಸಬಲೀಕರಣಕ್ಕಾಗಿ, ತಾನು ದೇಶದ ಮೊದಲ ಕಾನೂನು ಸಚಿವರಾದಾಗ, ಹಿಂದೂ ವಿವಾಹ ಕಾಯ್ದೆ, ಉತ್ತರಾಧಿಕಾರ ಕಾಯ್ದೆ, ದತ್ತು ಮತ್ತು ನಿರ್ವಹಣಾ ಕಾಯ್ದೆ, ಸಮಾನ ವೇತನ ಕಾಯ್ದೆ, ಹೆರಿಗೆ ಸೌಲಭ್ಯ ಕಾಯ್ದೆ ಇತ್ಯಾದಿ ಮಹಿಳಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ವಿಶೇಷವಾಗಿ, ಭಾರತೀಯ ಮಹಿಳೆ ಯಾವುದೇ ಹೋರಾಟ ಮಾಡದೆ ಮತದಾನದ ಹಕ್ಕು ಪಡೆದಿರುವುದು ಅಂಬೇಡ್ಕರರಿಂದಾಗಿಯೇ ಎನ್ನಬಹುದು.  ಆದ್ದರಿಂದ, ಯಾವುದೇ ಜಾತಿ ಮತ್ತು ಧರ್ಮಗಳ ಎಲ್ಲೆಯನ್ನು ಮೀರಿ, ಭಾರತೀಯ ಮಹಿಳೆ ನೆನಪಿಡಬೇಕಾದ ಹೆಸರು ಅಂಬೇಡ್ಕರ್.

ಶತಮಾನಗಳಿಂದ ಬೇರೂರಿದ್ದ ಬ್ರಾಹ್ಮಣ್ಯದ ಪ್ರಾಭಲ್ಯಕ್ಕೆ ಸೆಡ್ಡು ಹೊಡೆದು, ಅವರನ್ನೂ ಸ್ವವಿಮರ್ಶೆಗೊಳಪಡಿಸುವಂತೆ ಒತ್ತಾಯಿಸಿದ ನಾಯಕ ಅಂಬೇಡ್ಕರ್. ಈ ಮೂಲಕ, ಬ್ರಾಹ್ಮಣ್ಯದ ಹಿರಿಮೆಯನ್ನು ಪ್ರಶ್ನಿಸಿ ಅವರನ್ನು ಸಾಮಾನ್ಯರನ್ನಾಗಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಹಾಗೆಯೇ, ಜ್ಞಾನವೆನ್ನುವುದು ಒಂದು ಜಾತಿಯ ಸ್ವತ್ತಲ್ಲವೆಂಬ ಸಾಮಾಜಿಕ ಜಾಗೃತಿಯನ್ನು ಬಿತ್ತಿಸಿದ ಸಮಾನತಾವಾದಿ ಅಂಬೇಡ್ಕರ್.  

ಇನ್ನೊಂದು ವಿಶೇಷವೆಂದರೆ, ಭಾರತದ ಇತಿಹಾಸ ಪರಂಪರೆಯಲ್ಲಿ ಸಾರ್ವಜನಿಕ ಕಾನೂನು ರೂಪುರೇಷೆಗಳನ್ನು ರೂಪಿಸುತ್ತ ಬಂದಿರುವವರು ಸಂಸ್ಕೃತ ಕಲಿತ ಮೇಲ್ಜಾತಿಯವರು.  ಈ ರೀತಿ, ಪುರಾತನ ಭಾರತದಲ್ಲಿ ಸಾಮಾಜಿಕ ವ್ಯವಸ್ಥೆಗೆ ಮನು ಒಂದು ಚೌಕಟ್ಟನ್ನು ಒದಗಿಸಿದರೆ, ಆಧುನಿಕ ಭಾರತದಲ್ಲಿ ಅದನ್ನು ಪ್ರಶ್ನಿಸಿ, ಅದಕ್ಕೆ ಬದಲಾಗಿ ಸರ್ವರಿಗೂ ಸಮಬಾಳ್ವೆ ಸಿದ್ದಾಂತದ ಸಂವಿಧಾನವನ್ನು ರೂಪಿಸಿದವರು ಅಂಬೇಡ್ಕರ್.  ಈ ಮೈಲಿಗಲ್ಲು ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ಘಟನೆ. 

ಈ ನಿಟ್ಟಿನಲ್ಲಿ, ಅಂಬೇಡ್ಕರ್ ಸರ್ವರಿಗೂ ಕಾಲಾತೀತವಾಗಿ ಪ್ರೇರಕ ಮತ್ತು ಮಾರ್ಗದರ್ಶಕ. ಇಷ್ಟೆಲ್ಲವನ್ನೂ ಒಂದು ಜೀವಿತಕಾಲದಲ್ಲಿ ಸಾಧಿಸಿದ ಅಂಬೇಡ್ಕರ್ ಪ್ರತಿ ಮನುಷ್ಯನಿಗೂ ಸ್ಪೂರ್ತಿದಾಯಕ. ಅವರ ಸಮಾಜಮುಖಿ ಕೆಲಸ ಮತ್ತು ಆಶಯಗಳನ್ನು ಮುಂದುವರಿಸುವ ಜವಾಬ್ದಾರಿ ಪ್ರತಿ ಭಾರತೀಯನಿಗೂ ಇದೆ. ಇದು, ನಾವು ಅಂಬೇಡ್ಕರ್ ಗೆ ಮಾಡುವ ಅರ್ಥಪೂರ್ಣ ಶ್ರದ್ದಾಂಜಲಿ.

‍ಲೇಖಕರು Admin

14 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading