ರಮೇಶ್ ಹಿರೇಜಂಬೂರು
ಅದು ಸುಮಾರು 3 ತಿಂಗಳ ಹಿಂದಿನ ಘಟನೆ. ಅವತ್ತು ಮಾರ್ಚ್ ತಿಂಗಳ 2ನೇ ಶನಿವಾರ. ಸರ್ಕಾರಿ ರಜೆ ಜತೆಗೆ ಶನಿವಾರವಾದ್ದರಿಂದ ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳಿಗೂ ರಜೆ. ಅವತ್ತು ರಾತ್ರಿ ಸುಮಾರು 2ಗಂಟೆ ಸಮಯ. ನಾನು ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಹೊತ್ತು. ಬೆಂಗಳೂರಿನ ಬನಶಂಕರಿ 2ನೇಹಂತದಲ್ಲಿ ಖ್ಯಾತ ಸಾಹಿತಿಯೊಬ್ಬರ ಮನೆ ಮುಂದೆ ಕಪ್ಪು ಬಣ್ಣದ ಕಾರೊಂದು ನಿಂತಿತ್ತು. ಅಲ್ಲಿ ಸುತ್ತ ದಟ್ಟ ಮರಗಳ ಸಾಲು. ಅವುಗಳ ಮಧ್ಯದಲ್ಲಿ ಗೌವ್ವನೆಯ ಕಗ್ಗತ್ತಲು. ಆ ಮರದಡಿ ನಿಂತಿದ್ದ ಕಾರು ಅಲುಗಾಡುತ್ತಿತ್ತು.
ನನ್ನ ಬೈಕ್ನ್ನು ದೂರಲ್ಲಿಯೇ ನಿಲ್ಲಿಸಿ ಯಾರೋ ಕಳ್ಳರಿರಬಹುದೆಂದು ಹೆಡ್ಲೈಟ್ ಬೆಳಕನ್ನು ಅತ್ತ ತಿರುಗಿಸಿದೆ. ನಿಜಕ್ಕೂ ಆಶ್ಚರ್ಯ ಹಾಗೂ ಅಸಹ್ಯವಾದ ದೃಶ್ಯ ಪ್ರಕಾಶಮಾನವಾದ ಬೆಳಕಿನಲ್ಲಿ ಕಣ್ಣಿಗೆ ರಾಚುತ್ತಿತ್ತು. ಅಲ್ಲಿ ಇಬ್ಬರು ಹರೆಯದ ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿದ್ದರು! ಅದೂ ಬೆತ್ತಲಾಗಿ!! ಅದನ್ನು ಕಂಡು ನಾನು ಬೆಚ್ಚಿ ಬಿದ್ದಿದ್ದೆ. ತಕ್ಷಣ ನಾನು ಬೆಳಕನ್ನು ಬೇರೆಡೆಗೆ ತಿರುಗಿಸಿ ಬೈಕ್ನಲ್ಲಿಯೇ ಹತ್ತರದಲ್ಲೇ ಮುಂದೆ ಹೋದರೂ ಆ ಇಬ್ಬರೂ ಕೊಂಚವೂ ವಿಚಲಿತರಾಗದೆ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು. ನಾನು ‘ಕಂಡೋರ ವಿಚಾರ ನಂಗ್ಯಾಕೆ’ ಎಂದುಕೊಂಡು ಸುಮ್ಮನೆ ಮನೆ ಸೇರಿದೆ…
ಆದರೆ ನನ್ನ ಮನದಿಂದ ಆ ಅಶ್ಲೀಲ ದೃಶ್ಯ ದೂರಾಗಲೇ ಇಲ್ಲ! ನಾನು ಪ್ರತಿದಿನ ರಾತ್ರಿ ಒಂದೇ ರಸ್ತೆಯಲ್ಲಿ ಮನೆಗೆ ಹೋಗುವುದು ಹಾಗಾಗಿ ಅದೇ ಮಾರ್ಗವಾಗಿ ಮರುದಿನ ಕೂಡ ತೆರಳುತ್ತಿದ್ದೆ. ಸಮಯ ತುಸು ಹೆಚ್ಚುಕಡಿಮೆ ಯಾಗಿತ್ತು. ಆದರೆ ಅದೇ ಸ್ಥಳ, ಅದೇ ಕಾರು, ಅದೇ ಇಬ್ಬರು ಯುವ ಜೋಡಿ. ಮತ್ತದೇ ಕೈಂಕರ್ಯ! ಆ ಕ್ಷಣ ನನ್ನೊಳಗಿನ ಮನುಷ್ಯ ಎಚ್ಚರಾಗಿದ್ದ. ತಕ್ಷಣ ಪಕ್ಕದಲ್ಲಿಯೇ ಬೈಕ್ ನಿಲ್ಲಿಸಿ ಆ ಕಾರಿನ ಬಾಗಿಲು ಬಡಿದೆ. ಆದರೆ ನನ್ನ ಕೂಗಿಗೆ ಅದರಲ್ಲಿದ್ದ ಇಬ್ಬರೂ ಕೊಂಚವು ಕದಲಲಿಲ್ಲ.
ಮತ್ತಷ್ಟು ಸಿಟ್ಟಿಗೆದ್ದ ನಾನು ಕಾರಿನ ಗಾಜು ಒಡೆಯುವ ಶೈಲಿಯಲ್ಲಿ ಕೈ ಎತ್ತಿದಾಗ ಗ್ಲಾಸ್ ಇಳಿಸಿದ ಆ ಯುವಕ ಬಾಯಿಯಿಂದ ಬಂದ ಮೊದಲ ಪದ ‘ಏನ್ ಗುರು ನಿನ್ನ ಸಮಸ್ಯೆ?’ ಒಂದು ಕ್ಷಣ ನಾನೇ ತಬ್ಬಿಬ್ಬಾದೆ. ತಪ್ಪು ನಾನು ಮಾಡುತ್ತಿರುವುದಾ? ಅವನು ಮಾಡುತ್ತಿರುವುದಾ ಗೊಂದಲಕ್ಕೆ ಬಿದ್ದೆ. ಆದರೆ ನನ್ನೊಳಗಿನ ಮನುಷ್ಯ ಸುಮ್ಮನಿರಲಿಲ್ಲ. ಸಿಟ್ಟಿನಿಂದಲೇ ಗದರಿದ. ಆಗ ಅವನಿಗೂ ನನಗೂ ಜೋರಾಗಿಯೇ ವಾಗ್ವಾದ ನಡೆಯಿತು. ‘ನೀನು ಹೇಗೋ ಮನೆ ಸೇರ್ತಿಯಾ ಆದರೆ ಏನಾದರೂ ಹೆಚ್ಚು ಕಡಿಮೆಯಾಗಿ ಪೊಲೀ ಹುಡುಗರ ಕೈಲಿ ನೀವು ಈ ಸ್ಥಿತಿಯಲ್ಲಿ ಸಿಕ್ಕರೆ ಎಂಥವರೂ ಸುಮ್ಮನಿರೋದಿಲ್ಲ. ಹೋಗೋದು ನಿನ್ನ ಮಾನವೂ ಅಲ್ಲ, ಪ್ರಾಣವೂ ಅಲ್ಲ. ಆ ಹುಡುಗಿ ಬಲಿಪಶುವಾಗುತ್ತಾಳೆ ಎಂದೆ. ಆದರೆ ಅದನ್ನು ಆತ ಕೇಳುವ ಸ್ಥಿತಿಯಲ್ಲೇ ಇರಲಿಲ್ಲ! ಇಷ್ಟೆಲ್ಲಾ ವಾದ ವಿವಾದಗಳು ನಡೆಯುವಾಗ ಆತ ಬೆತ್ತಲಾಗೇ ಇದ್ದ; ಆತನ ಪಕ್ಕದಲ್ಲಿದ್ದ ಆಕೆ ಕೂಡ…!
ಕೊನೆಗೆ ಅವನು ನನ್ನನ್ನೇ ಬೆದರಿಸಲು ಮುಂದಾಗ ನನಗೂ ಸಿಟ್ಟು ನೆತ್ತಿಗೇರಿತ್ತು. ಆ ಹುಡುಗಿಗೂ ಕೂಡ ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಪಕ್ಕದಲ್ಲೇ ಪೊಲೀಸರಿದ್ದಾರೆ ಕರೆಯುತ್ತೇನೆ ಇರಿ ಎಂದಾಗ ಹುಡುಗ ಹುಡುಗಿ ಇಬ್ಬರೂ ಟ್ರಾಕ್ಗೆ ಬಂದು, ಬಟ್ಟೆ ತೊಟ್ಟರು. ಆಗ ನಾವಿಬ್ಬರೂ ಪ್ರೇಮಿಗಳು, ಇಲ್ಲೇ ಹತ್ತಿರದಲ್ಲೇ ಮನೆ ಇದೆ ಎಂದು ಹುಡುಗ ಹೊಸ ವರಸೆ ಶುರುಮಾಡಿದ. ಆದರೆ ನನ್ನ ಕಣ್ಣಿಗೆ ಅವರು ಹಾಗೆ ಕಾಣಲೇ ಇಲ್ಲ. ಪ್ರೇಮಿಗಳಾದವರಿಗೆ ನಡು ಬೀದಿಯಲ್ಲಿ ಹಾಗೆ ಬೆತ್ತಲಾಗುವ ತುರ್ತು ಅವಶ್ಯಕತೆ ಇರುತ್ತದೆ ಎಂದು ನನಗಂತೂ ಅನ್ನಿಸುವುದಿಲ್ಲ (ನನ್ನ ಆಲೋಚನೆ ಸುಳ್ಳೂ ಇರಬಹುದು). ಆದರೆ ಹಠಕ್ಕೆ ಬಿದ್ದವನಂತೆ ನಿಂತು ಪೊಲೀಸರನ್ನು ಕರೆಯುವ ಹಾಗೂ ಕಂಪ್ಲೇಂಟ್ ಮಾಡುವ ನೆಪ ಹೇಳಿ ಅವರನ್ನು ಅಲ್ಲಿಂದ ಓಡಿಸಿದೆ.
ಡಿವಿಜಿ ರಸ್ತೆಯ ಅಣತಿ ದೂರದಲ್ಲಿಯೇ ಇರುವ ಪ್ರಮುಖ ರಸ್ತೆ ಬದಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಒಂದು ಕಾರು ನಿಂತಿರುತ್ತಿತ್ತು. ಅದೂ ಕೂಡ ಕಾಕತಾಳೀಯ ಎಂಬಂತೆ ಕಪ್ಪು ಬಣ್ಣದ್ದೆ. ನಡು ರಾತ್ರಿ ಮನೆಗೆ ತೆರಳುವ ನಾನು ಸುತ್ತಲಿನ ಪರಿಸರವನ್ನು ಗಮನಿಸುತ್ತಲೇ ಮನೆ ಸೇರುತ್ತೇನೆ. ಹಾಗಾಗಿ ಆ ಕಾರು ನನ್ನ ಕಣ್ಣಿಗೆ ಬಿದ್ದಿತ್ತು. ಆದರೆ ಅದರೊಳಗೆ ಅಷ್ಟಾಗಿ ಗಮನಿಸಿರಲಿಲ್ಲ. ಅದು ಜುಲೈ 27ರ ರಾತ್ರಿ ಶನಿವಾರ. ರಾತ್ರಿ ಸರಿಯಾಗಿ 1.30. ಆ ಕಾರಿನಲ್ಲಿ ಅವತ್ತು ಯುವಜೋಡಿ ಅರೆಬೆತ್ತಲೆಯಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದು ಕಣ್ಣಿಗೆ ಬಿತ್ತು. ನನಗೇಕೋ ಈ ಬೆಂಗಳೂರು ಹಾಳಾಗುತ್ತಿದೆ ಎನಿಸಿತು. ಆದರೆ ತಕ್ಷಣಕ್ಕೆ ನಾನು ಅವರ ಗೊಡವೆಗೆ ಹೋಗಲಿಲ್ಲ. ಕಾರಣ ಜಗಳ ಗಿಗಳ ಮಾಡ್ಕೊಂಡ್ರೆ ಮಾರನೇ ದಿನ ಸರಿಯಾದ ಮನಸ್ಥಿತಿ ಇರುವುದಿಲ್ಲವೆಂದುಕೊಂಡೆ. ಕಾರಣ 28ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾನು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಬೇಕಿತ್ತು.
ಆದ್ದರಿಂದ ದೂರದಲ್ಲಿದ್ದ ಪೊಲೀಸರಿಗೆ ತಿಳಿಸಿದೆ. ಅಲ್ಲಿದ್ದ ಒಬ್ಬ ಪೇದೆ ‘ಸಾರ್ ಅವ್ರದು ದಿನಾಲು ಅದೇ ಕಥೆ, ನಾನೂ ಮೂರು ಸರಿ ಹೇಳಿದೀನಿ’ ಎಂದರು. ಅಲ್ಲಿ ಹೊಯ್ಸಳ ವಾಹನ ಇತ್ತು. ಹಾಗಾಗಿ ತಕ್ಷಣ ಪ್ರತಿಕ್ರಿಯಿಸಿದ ಇತರೇ ಐದಾರು ಪೊಲೀಸರನ್ನು ಹೋಗಿ ಆ ಯುವ ಜೋಡಿಯನ್ನು ‘ಇಷ್ಟೊತ್ತಲ್ಲಿ ಹೀಗೆ ಇದ್ದೀರಲ್ಲ ಸರಿಯಾ? ಇಳೀರಿ ಕೆಳಗೆ, ಯಾರು ನೀವು?’ ಎಂದು ಪ್ರಶ್ನೆ ಮಾಡಿದರು. ಪೊಲೀಸರೇನೋ ಮಹಾಪರಾಧ ಮಾಡಿದರು ಎಂಬಂತೆ ಹುಡುಗಿ- ಹುಡುಗ ಇಬ್ಬರೂ ಪೊಲೀಸರ ಮೇಲೇ ಹರಿಹಾಯ್ದರು. ಪೇದೆಗಳಿಗೂ ರೇಗಿಹೋಯ್ತು ‘ಇಷ್ಟೊತ್ತಲ್ಲಿ ಅದೂ ಅರೆಬೆತ್ತಲೆಯಾಗಿ ನಡುಬೀದಿಯಲ್ಲಿ ಇದ್ದದ್ದೇ ತಪ್ಪು ಅಂಥದ್ದರಲ್ಲಿ ನಮಗೇ ಜೋರು ಮಾಡುತ್ತೀರಾ…’ ಎಂದು ಅವರೂ ಜೋರಾಗಿಯೇ ಗದರಿಸಿದರು.
ಮಾತಿಗೆ ಮಾತು ಬೆಳೆಯಿತು, ಹುಡುಗಿಯ ಮನೆ ಹತ್ತಿರದಲ್ಲೇ ಇದ್ದರಿದ್ದರಿಂದ ಆಕೆಯ ಸೋದರಿ ಮೊದಲು ಹೊರಗೆ ಬಂದು ಆಕೆಯನ್ನು ಕರೆದೊಯ್ಯುವ ಪ್ರಯತ್ನ ನಡೆಸಿದಳು, ಪ್ರಯೋಜನವಾಗಲಿಲ್ಲ. ಇದರಿಂದ ಅವರ ಅಪ್ಪ ಅಮ್ಮ ಕೂಡ ಹೊರ ಬಂದರು. ಈ ಸಮಯದಲ್ಲಿ ‘ಹೀಗೆ ನಡುಬೀದಿಯಲ್ಲಿ ಇಷ್ಟೊತ್ತಲ್ಲಿ ಇರೋದು ತಪ್ಪು, ಏನಾದರೂ ಹೆಚ್ಚುಕಮ್ಮಿಯಾದ್ರ ಏನು ಕಥೆ?’ ಎಂದು ಪೇದೆಯೊಬ್ಬರು ಸಮಾಧಾನದಿಂದಲೇ ಹೇಳಿದರು. ಅದಕ್ಕೆ ತಕ್ಷಣ ಹುಡುಗಿ ಹೇಳುತ್ತಾಳೆ ‘ಇಟ್ಸ್ ಮೈ ರೆಸ್ಪಾನ್ಸಿಬಲಿಟಿ, ಕೇಳೋಕೆ ನೀನ್ಯಾರು?’. ಮನೆಯಿಂದ ಹೊರಗಡೆ ಬಂದ ಅಪ್ಪ ಕೂಡ ಮಗಳನ್ನೇ ಬೆಂಬಲಿಸಿ ‘ಹೌದ್ರೀ, ಅವ್ರ ಯಂಗ್ಸ್ಟರ್ಸ್ ಏನು ಬೇಕಾದ್ರೂ ಮಾಡ್ಕೋತಾರೆ ಕೇಳೋಕೆ ನೀವ್ಯಾರು? ಆದ್ರೆ ಸೆಕ್ಯೂರಿಟಿ ಕೊಡಿ ಇಲ್ಲ ಅಂದ್ರೆ ಹೊರಟ್ಹೋಗ್ರಿ, ಏನಾದ್ರೂ ಆದ್ರೆ ಅದನ್ನು ಫೇಸ್ ಮಾಡೋ ತಾಕತ್ತು ಅವ್ರಿಗೆ ಇದೆ…’
ಆ ಅಪ್ಪ ಮಾತು ಕೇಳಿ ನಾನೇ ತಬ್ಬಿಬ್ಬಾಗಿ ಇದು ಸರಿ ಹೋಗುವ ವಿಚಾರವಲ್ಲ ಎಂದು ಅಲ್ಲಿಂದ ಹೊರಟೆ. ಮುಂದೇನಾಯಿತು ಮರುದಿನ ಗೊತ್ತಾಗಲಿಲ್ಲ… ಇದಾಗಿ ಸರಿಯಾಗಿ ಒಂದು ವಾರಕ್ಕೆ ಪತ್ರಿಕಾ ಕಚೇರಿಗಳಿಗೆ ನಗರ ಪೊಲೀಸ್ ಆಯುಕ್ತ ಔರಾದ್ಕರ್ ಕಚೇರಿಯಿಂದ ಒಂದು ಸುದ್ದಿ ಬರುತ್ತದೆ. ‘ರಾತ್ರಿ ಹೊತ್ತು ಕಾರಿನಲ್ಲಿದ್ದ ಯುವಜೋಡಿಯನ್ನು ಅನಾವಶ್ಯಕವಾಗಿ ವಿಚಾರಣೆಗೊಳಪಡಿಸಿದ ಪೊಲೀಸರ ವಿರುದ್ಧ ಯುವತಿ ಸೋದರನಿಂದ ದೂರು. ಘಟನೆ ತನಿಖೆಗಾಗಿ ತಂಡ ರಚನೆ’! ಇದನ್ನು ನೋಡಿ ನನಗಂತೂ ಖಂಡಿತಾ ಆಶ್ಚರ್ಯವಾಯಿತು.
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರ ಮೇಲೆಯೂ ಕೆಲವರು ದುಡ್ಡಿನ ದರ್ಪದಿಂದ ಹೀಗೆ ಅನಾವಶ್ಯಕವಾಗಿ ಕಾನೂನುಗಳನ್ನು ಕೈಗೆ ತೆಗೆದುಕೊಂಡು ತಮಗೆ ಹೇಗೆ ಬೇಕೋ ಹಾಗೆ ನಡೆದುಕೊಂಡು ಸ್ವೇಚ್ಚಾಚಾರವನ್ನು ಪ್ರದರ್ಶಿಸಿದರೆ ದಕ್ಷತೆಯಿಂದ ಕೆಲಸ ಮಾಡುವ ಪೊಲೀಸರು ಕೂಡ ಸಿನಿಮಾಗಳಲ್ಲಿ ಬಂದಂತೆ ಎಲ್ಲ ಮುಗಿದ ಮೇಲೆ ಎಂಟ್ರಿ ಕೊಡುತ್ತಾರೆ. ಆಗ ಅವರನ್ನು ದೂಷಿಸಿ ಪ್ರಯೋಜನವೇನು!? ಅತ್ಯಾಚಾರಕ್ಕೆ ಗಂಡಿನ ಮನೋಸ್ಥಿತಿ ಕಾರಣ, ಹೆಣ್ಣು ಮಕ್ಕಳ ಡ್ರೆಸ್ ಕಾರಣ, ಅವರಿಗೆ ಶಿಕ್ಷೆಯಾಗಬೇಕು, ಗಂಡು ಮಾತ್ರ ಕಾರಣವೇ? ಎನ್ನುವುದು ಕೂಡ ಮತ್ತೊಂದು ರೀತಿಯ ಚರ್ಚೆಯ ವಸ್ತು. ದುಡ್ಡಿನ ದರ್ಪ, ಸ್ವೇಚ್ಛಾಚಾರದ ಮನೋಸ್ಥಿತಿಯಿಂದ ಕೆಲವರು ಮಾಡುವ ಅಪಚಾರವೂ ಹಲವು ಹೀನ ಕೃತ್ಯಗಳಿಗೆ ಪ್ರೇರಣೆ ಹಾಗೂ ಅವಕಾಶ ಕಲ್ಪಿಸುತ್ತಿವೆ ಎನ್ನುವುದು ಕೂಡ ಅಷ್ಟೇ ಸತ್ಯ.










28ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ವೀಕರಿದ್ದಕ್ಕೆ ಅಭಿನಂದನೆಗಳು. ಈ ಲೇಖನ ಓದದಿದ್ದರೆ ಅದು ನನಗಂತೂ ಗೊತ್ತಾಗುತ್ತಲೇ ಇರಲಿಲ್ಲ.
🙂
ಕಾಲ ಕೆಟ್ಟಿದೆ.. ಅಣ್ಣ
Edu namma deshakke banda durgati
ಬೆಂಗಳೂರಿನಲ್ಲಿ ಅಂತ ಕೆಲಸಗಳು ತುಂಬಾನೆ ನಡೆಯುತ್ತವೆ. ನೋಡಿಯೂ ನೋಡದಂತೆ ಹೋಗುವುದೇ ಉತ್ತಮ ಎಂಬುದು ನನ್ನ ಭಾವನೆ.
ಮಾಲಾಗತ್ತಿ, ಎಲ್ಲರೂ ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು, ಜತೆಗೆ ತಮಗೆ ಸಂಬಂಧಿಸಿದ ವಿಚಾರವೇ ಅಲ್ಲ ಎಂದುಕೊಂಡು ತಮ್ಮ ಪಾಡಿಗೆ ತಾವು ಹೋದರೆ ಇಂಥ ಹೀನ ವ್ಯವಸ್ಥೆಯನ್ನು ಶುಚಿಗೊಳಿಸುವವರು ಯಾರು? ಅಂಥ ಕೃತ್ಯಗಳ ವಿರುದ್ಧ ಪ್ರತಿಭಟಿಸುವವರು ಯಾರು? ಇಂಥವುಗಳ ಫಲವಾಗಿ ಯಾರೋ ಹೆಣ್ಣು ಜೀವವೊಂದು ಬಲಿಯಾದಾಗ ಮಾತ್ರ ಪ್ರತಿಭಟಿಸಿದರೆ ಪ್ರಯೋಜನವೇನು? ಹೋದ ಜೀವ ಮತ್ತೆ ಬರುತ್ತದಾ? ಅಥವಾ ಸರ್ಕಾರದಿಂದ ಒಂದಷ್ಟು ಹಣವನ್ನು ಆ ಹೆಣ್ಣು ಮಗಳ ಕುಟುಂಬಕ್ಕೆ ಕೊಡಿಸಲು ಹೋರಾಡಬೇಕಾ? ಆ ಹಣದಿಂದ ಮೌಲ್ಯವೇ ಆ ಜೀವದ ಬೆಲೆಯಾ…?
-ರಮೇಶ್ ಹಿರೇಜಂಬೂರು
ಲೇಖನ ಓದುವಾಗ ಗಾಬರಿಯಾಗುತ್ತದೆ .. ಆದರೆ ಇದು ಬೀದಿ ಬೀದಿಯಲ್ಲೂ ಸರ್ವೇಸಾಮಾನ್ಯವಾಗಿ ನಡೆಯುತ್ತಿರುವ ವಿಷಯ ಅನ್ನೋದೂ ಅಷ್ಟೇ ನಿಜ . ಇನ್ನು ಇಂಥವರನ್ನು
ಪ್ರಶ್ನಿಸುವ ಪೊಲೀಸರ ಮೇಲೆ ರೇಗುವ ಇದೇ ಜನರು ನಾಳೆ ಏನಾದರೂ ಹೆಚ್ಚು ಕಡಿಮೆ ಆದಾಗ ಇದಕ್ಕೆಲ್ಲ ಪೋಲಿಸರ ವೈಫಲ್ಯವೇ ಕಾರಣವೇನೋ ಎಂಬಂತೆ ಪೋಲೀಸರ ವಿರುದ್ದವೇ ಪ್ರತಿಭಟನೆಗೆ ಇಳಿಯುತ್ತಾರೆ . ಇನ್ನು ಇಂಥದ್ದನೆಲ್ಲ ನೋಡಿಯೂ ನೋಡದಂತೆ ಹೋಗುವ ಜಾಣ ಕುರುಡರ ಸಂಖ್ಯೆಯೂ ಅಪಾರ. ನಮಗೆಲ್ಲ ಸುರಕ್ಷಿತ ಬದುಕು, ಸಮಾಜ ಎಲ್ಲ ಬೇಕು ಆದರೆ ಅದನ್ನು ರೂಪಿಸಿಕೊಳ್ಳುವಲ್ಲಿ ನಮ್ಮ ವೈಯುಕ್ತಿಕ ಜವಾಬ್ದಾರಿ ಏನು ,ಎಷ್ಟರಮಟ್ಟಿಗೆ ಅನ್ನೋದನ್ನ ಎಲ್ಲೋ ನಾವೆಲ್ಲ ಮರೆತುಬಿಟ್ಟಿದ್ದೇವೇನೋ ಅನಿಸುತ್ತಿದೆ .
sir, congratulations …
ಶಾಂತಿ ಅಪ್ಪಣ್ಣ ಅವರೆ, ನಿಮ್ಮ ಮಾತು ನಿಜ. ಎಲ್ಲಿಯ ವರೆಗೆ ಜನಸಾಮಾನ್ಯರು ಸುಧಾರಿಸುವುದಿಲ್ಲವೋ ಅಥವಾ ತಪ್ಪನ್ನು ತಿದ್ದುವ, ಸತ್ಯ, ನೈತಿಕತೆಯನ್ನು ಬೆಂಬಲಿಸುವ ಚಾಳಿ ಬೆಳೆಯುವುದಿಲ್ಲವೋ ಅಲ್ಲಿಯ ವರೆಗೆ ಈ ವ್ಯವಸ್ಥೆ ಸುಧಾರಣೆ ಅಸಾಧ್ಯದ ಮಾತು ಎನಿಸುತ್ತದೆ…
ಇಂದಿನ ಯುವ ಜನತೆ ಎತ್ತ ಸಾಗುತ್ತಿದ್ದರೆ, ಸಮಾಜದ ದುರ್ಗತಿಗೆ ಕೆಟ್ಟ ಮನಸ್ತಿತಿಯ ಯುವ ಜನತೆ ಇವರನ್ನು ನಿಯಂತ್ರಿಸದ ಹೆತ್ತವರು ಕಾರಣವಾಗುತ್ತಿದ್ದಾರೆ.