-ಡಿ.ಎಸ್.ರಾಮಸ್ವಾಮಿ
ಅಂಕಣ ಬರಹಗಳನ್ನು ಸಾಹಿತ್ಯದ ಒಂದು ಪ್ರಕಾರವೆಂದು ಭಾವಿಸದ ಕಾಲ ಬದಲಾಗಿ ಇಂದು ಪತ್ರಿಕೆಯೊಂದರ ಅಂಕಣ ಬರಹದ ಮೂಲಕವೇ ತಮ್ಮ ಒಲವು ನಿಲುವುಗಳನ್ನು ಓದುಗರಿಗೆ ವರ್ಗಾಯಿಸುತ್ತ, ಆ ಮೂಲಕ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಳ್ಳುತ್ತಿರುವ ಬರಹಗಾರರಿಗೇನೂ ಕೊರತೆ ಇಲ್ಲ. ಬಹುತೇಕ ಅಂಕಣ ಬರಹಗಾರರು ತಮ್ಮ ಕಾರ್ಯನಿರ್ವಹಣೆಯ ಕ್ಷೇತ್ರಗಳಲ್ಲಿನ ಸ್ವಾರಸ್ಯಕರ ಅನುಭವಗಳನ್ನೂ, ಅಲ್ಲಿನ ಕುಂದು-ಕೊರತೆ, ಸಮಸ್ಯೆ-ಸಂವಹನ ಕುರಿತಂತೆ ಬರೆಯುವುದು ಸಾಮಾನ್ಯದ ಸಂಗತಿ. ಆದರೆ ಬರಹಗಳಲ್ಲೆಲ್ಲೂ ಆತ್ಮಪ್ರಶಂಸೆಯ ಕೋಡು ಏಳದಂತೆ, ಹೇಳಹೊರಟ ಸಂಗತಿ ಪೊಳ್ಳಾಗದಂತೆ, ಜೊತೆಗೇ ಓದುಗನೆಂಬ ಮಹಾವಿಮರ್ಶಕನನ್ನು ತೃಪ್ತಿಪಡಿಸುವುದು ಮತ್ತವನನ್ನು ಮುಂದಿನ ಬರಹಕ್ಕೂ ಕಾಯುವಂತೆ ಮಾಡುವುದು ಕೇವಲ ಕೆಲವೇ ಬರಹಗಾರರಿಗೆ ಸಿದ್ಧಿಸಿದ ಕಲೆ.
ಈಗಾಗಲೇ ‘ಬೆಚ್ಚಿ ಬೀಳಿಸಿದ ಬೆಂಗಳೂರು’ (2002)ಎಂಬ ಅಂಕಣ ಬರಹದ ಸಂಕಲನ ಮತ್ತು ‘ಬಾರಯ್ಯ ಬೆಳದಿಂಗಳೇ’ (2008) ಕಥಾಸಂಕಲನದ ಮೂಲಕ ಸಾರಸ್ವತ ಲೋಕಕ್ಕೆ ಪರಿಚಿತರಾಗಿರುವ ಶ್ರೀ ಸರ್ಜಾ ಶಂಕರ ಹರಳೀಮಠ ತಮ್ಮ ಎರಡನೆಯ ಅಂಕಣ ಬರಹ ಸಂಕಲನ ‘ಜೀವದನಿ’ಯನ್ನು ಪ್ರಕಟಿಸಿದ್ದಾರೆ. ಶಿವಮೊಗ್ಗದ ‘ನಮ್ಮ ನಾಡು’,ಸಾಗರದ ಮಣ್ಣಿನ ವಾಸನೆ’ ಮತ್ತು ಮಂಡ್ಯದ ‘ಜನಾಶಯ’ ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳ ಜೊತೆಗೇ ಉಳಿದಂತೆ ಮೂರು ಬೇರೆ ಬೇರೆ ದೊಡ್ಡ ಪತ್ರಿಕೆಗಳಿಗೆ ಬರೆದ ಒಟ್ಟು 52 ಲೇಖನಗಳು ಈ ಸಂಕಲನದಲ್ಲಿವೆ. ಯಾವ ಲೇಖನದಲ್ಲೂ ಸೈದ್ಧಾಂತಿಕತೆಯನ್ನು ಲೇಖಕರು ಬೇಕೆಂತಲೇ ಹೇರದಿರುವುದು ಮತ್ತು ಮೂಲದ ತಮ್ಮ ಅನುಭವಕ್ಕೇ ನಿಷ್ಠವಾಗಿ ಇಲ್ಲಿನೆಲ್ಲ ಬರಹಗಳನ್ನೂ ಲೀಲಾಜಾಲವಾಗಿ ನಿರ್ವಹಿಸಿರುವುದೂ ಮೊದಲ ಓದಿಗೇ ಶೃತವಾಗುತ್ತದೆ. ಜೊತೆಗೇ ಲೇಖಕರು ತೀರ ಸಾಮಾನ್ಯವಾದ ಸಂಗತಿಗಳ ಮೂಲಕವೇ ಸಾತ್ವಿಕತೆಯನ್ನು ನಿರ್ವಚಿಸಹೊರಟಿರುವುದೂ ಧನಾತ್ಮಕ ಅಂಶವೇ ಆಗಿದೆ. ಸಜರ್ಾ ಶಂಕರರ ಬರಗಳು ನಮ್ಮೆಲ್ಲರನ್ನೂ ಕಾಡುತ್ತಿರುವ ಜಾತಿ-ವರ್ಗ-ಲಿಂಗ-ಪ್ರದೇಶ-ಭಾಷೆ-ಗಡಿ-ಇಂತಹ ಸಮಸ್ಯೆಗಳ ಆಗರದಿಂದಲೇ ಹುಟ್ಟಿಕೊಂಡರೂ ಅವು ಕಡೆಯಲ್ಲಿ ಕಾಣಿಸುವುದು ಒಂದು ಆದರ್ಶದ ಸುಖೀ ಪ್ರಪಂಚವನ್ನು ಮತ್ತು ಎಂತಹ ಸಮಸ್ಯೆಗಳಿಗೂ ಉತ್ತರ ಇದ್ದೇ ಇದೆಯೆಂಬ ದಿವ್ಯ ಸಂದೇಶವನ್ನು. ಜೊತೆಗೇ ಲೇಖಕ ತಾನೊಪ್ಪಿದ ಸಿದ್ಧಾಂತವನ್ನು ಮೈಮೇಲೆ ಹೇರಿಕೊಳ್ಳದೇ ಅಥವ ತಾನು ಎಳೆದು ತಂದ ಪಾತ್ರಗಳಿಗೂ ಹೇರದೇ ಕೇವಲ ನಿರೂಪಕನಾಗಿ ಸಮಸ್ಯೆಗಳನ್ನೂ ಸಂಗತಿಗಳನ್ನೂ ಬಿಡಿಸಿಟ್ಟಿರುವುದೂ ಅಂಕಣ ಬರಹಗಾರನಿಗೆ ಬೇಕಾದ ತಾಲೀಮು ಅವರು ಪಡೆದಿರುವುದಕ್ಕೆ ನಿದರ್ಶನಗಳಾಗಿವೆ.
ತೀರ್ಥಹಳ್ಳಿ, ರಿಪ್ಪನ್ ಪೇಟೆ, ಎಳ್ಳಮವಾಸ್ಯೆ ಜಾತ್ರೆ, ಶಿವಮೊಗ್ಗೆಯ ಪೇಟೆಯ ಸೀಮಿತ ಪರಿಸರದಲ್ಲಿ ನಡೆದ ಹಲವು ಘಟನೆಗಳನ್ನು ಲೇಖಕರು ಇಲ್ಲಿ ನಿರ್ವಹಿಸಿದ್ದಾರಾದರೂ ಈ ಬರಹಗಳು ತಮ್ಮ ವ್ಯಾಪ್ತಿಯ ಪ್ರದೇಶವನ್ನು ಬಿಟ್ಟು ಉಳಿದ ಕಡೆಗೂ ಆಪ್ತವಾಗಿ ಮತ್ತು ಸಹಜವಾಗಿ ಹೊಂದಬಲ್ಲವಾದ ಕಾರಣ ಇಲ್ಲಿನ ಬಹುತೇಕ ಬರಹಗಳು ನಮ್ಮ ಕಣ್ಣಳತೆಯಲ್ಲೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ‘ಗಾಂಧಿ ಬಂದ’ ಎಂಬ ಮೊದಲ ಲೇಖನವಿರುವ ಸಂಕಲನದ ಕಡೆಯ ಲೇಖನವೂ ‘ಗಾಂಧಿಯ ಗಡೀಪಾರು’ ಎಂಬ ಶೀರ್ಷಿಕೆಯದ್ದೇ ಆಗಿರುವುದು ಕಾಕತಾಳೀಯವೂ ಹಾಗೆಯೇ ವ್ಯವಸ್ಥೆಯ ವಿರುದ್ಧ ಲೇಖಕರು ಆಡಿದ ವ್ಯಂಗ್ಯದ ಮಾತಾಗಿಯೂ ತೋರುವುದು ವಿಶೇಷ.
ಆದರೂ ಜಾತಿ ಸಂಘರ್ಷ, ಕೋಮುವಾದ ಮತ್ತು ಮೂಲಭೂತವಾದ ಕುರಿತಂತೆ ಬರೆಯುವಾಗಲೆಲ್ಲ ಲೇಖಕರು ಹೆಚ್ಚು ಎಡಪಂಥದ ನಿಲುವುಗಳಿಗೆ ಬದ್ಧವಾಗುವುದು, ಅಲ್ಪಸಂಖ್ಯಾತರ ಪರವಾಗಿ ವಾಲುವುದು ಮತ್ತು ವೈಚಾರಿಕತೆಯ ಬಲದಲ್ಲಿ ಬಲಪಂಥವನ್ನೂ ಅದರ ಹಿಂಬಾಲಕರನ್ನೂ ಹೀಯಾಳಿಸುವುದನ್ನು ಅವರಿಗರಿವಿಲ್ಲದೇ ಅವರು ಮೆಚ್ಚಿದ, ನೆಚ್ಚಿದ ಸಾಮಾಜಿಕ ಚಳವಳಿಯ ಕಾರಣ ಆಗಿಬಿಟ್ಟಿದೆ. ಅದು ಈ ಕೃತಿಯ ಮಿತಿಯಾಗಲ್ಲದೇ ಲೇಖಕನೊಬ್ಬ ತಾಳಲೇ ಬೇಕಾದ ನಿಲುವುಗಳೂ ಆಗಿರುವುದರಿಂದ ಸಹ್ಯವೂ ಮತ್ತು ಸಹಜವೂ ಆದ ಸಂಗತಿಗಳಾಗಿವೆ. ಅಲ್ಲದೇ ವಿವಿಧ ಪತ್ರಿಕೆಗಳ ವಿವಿಧ ಅಳತೆಗೆ ಬರೆದ ಲೇಖನಗಳನ್ನು ಇಲ್ಲಿ ಕಲೆ ಹಾಕಿರುವ ಕಾರಣ ಕೆಲವು ಲೇಖನಗಳು ಅಗತ್ಯಕ್ಕಿಂತ ಉದ್ದವಾಗಿಯೂ ಮತ್ತೆ ಕೆಲವು ನಿರ್ಧಾರಕ್ಕೆ ಬರುವ ಮೊದಲೇ ಮುಕ್ತಾಯವನ್ನು ಕಂಡಿರುವುದೂ ಆಗಿದೆ.
ಆದರೂ ಸಾಹಿತ್ಯಲೋಕದ ಅಷ್ಟೇನೂ ಹೊಳೆಯದ ತಾರೆಯಾದ ಮತ್ತು ತಮ್ಮ ‘ದೊಡ್ಡ ಕೆಲಸದ- ಆಕರ್ಷಕ ವಿದ್ಯಮಾನ’ವಿರದ ಯುವಕನೊಬ್ಬ ತನ್ನ ಸುತ್ತಮುತ್ತ ನಡೆದ, ನಡೆಯುತ್ತಿರುವ ವಿಚಾರಗಳನ್ನೇ ಆಧರಿಸಿ ಇಷ್ಟೊಂದು ಬಗೆ ಬಗೆಯ ಚಿಂತನ ಶೀಲ ಲೇಖನಗಳನ್ನು ಆಗುಮಾಡಿರುವುದೇ ಅವರ ಶಕ್ತಿಯಾಗಿದೆ, ಲೋಕದ ಸಂಗತಿಗಳಿಗೆ ತೆರೆದಿಟ್ಟ ಅವರ ಅನುಭವವಾಗಿದೆ. ಅಂಕಣ ಬರಹಗಾರ ಘಟನೆಗಳನ್ನು ಸಮಾಜಶಾಸ್ತ್ರಜ್ಞನ ರೀತಿಯಲ್ಲಿ ಸ್ವೀಕರಿಸಿ, ಕವಿಯ ಭಾವುಕತೆಯಿಂದ ಧ್ಯಾನಿಸಿ, ಚಳವಳಿಗಾರನ ಕ್ರಿಯಾಶೀಲತೆಯಿಂದ ಸಂಸ್ಕರಿಸಿ, ಹೆತ್ತಮ್ಮನ ತಾಯಿಕರುಳಿನ ವಾತ್ಸಲ್ಯ ತೋರಿಸಿ, ವಿಮರ್ಶಕನ ನಿಷ್ಠುರತೆಯಿಂದ ಕಂಡಿರಬೇಕಾಗುತ್ತದೆ. ಈ ಎಲ್ಲ ಹದವರಿತ ಲೇಖಕ ಮಾತ್ರ ಅಂಕಣ ಬರಹಗಾರನಾಗಿ ಉಳಿಯುತ್ತಾನೆ, ಇಲ್ಲವಾದರೆ ಕೆಲವೇ ದಿನಗಳಲ್ಲಿ ಅವನ ಬರಹದ ರೀತಿ ಭಾಷೆಯ ಪಾಂಡಿತ್ಯಕ್ಕೆ ಅಥವ ಅವನು ನಂಬಿದ ಸಿದ್ಧಾಂತಗಳ ತೋರುಗಾಣಿಕೆಯ ರಂಗವಾಗಿಬಿಡುತ್ತದೆ.
ಶ್ರೀ ಸರ್ಜಾ ಶಂಕರ ಹರಳೀಮಠ ಮೇಲೆ ಹೇಳಿದ ಅಂಕಣಬರಹಗಾರನ ಎಲ್ಲ ಗುಣ ಲಕ್ಷಣಗಳನ್ನು ಪಡೆದೇ ಬಿಟ್ಟಿದ್ದಾರೆಂದು ಹೇಳಿಬಿಡುವುದು ಅವಸರದ ಮಾತಾಗುತ್ತಾದರೂ ಅವರು ಆ ದಾರಿಯಲ್ಲಿ ನಡೆಯುತ್ತಿದ್ದಾರೆಂಬುದುರ ಪುರಾವೆಯಾಗಿಯಂತೂ ಸದ್ಯಕ್ಕೆ ಸೂಚಿಸಲು ‘ಜೀವದನಿ’ ಸಂಕಲನ ಸಹಾಯ ಮಾಡುತ್ತಿದೆ.
ಕೃತಿ: ಜೀವದನಿ (ಅಂಕಣ ಬರಹಗಳು) ಲೇಖಕ: ಸರ್ಜಾ ಶಂಕರ ಹರಳಿಮಠ ಪುಟಗಳು: 152, ಬೆಲೆ ರೂ. 100/-
ಪ್ರಕಾಶನ: ಅಂತಃಕರಣ, ದೇಸಿ ಸಂಸ್ಕೃತಿ, ಮೈಲಾರೇಶ್ವರ ಸಂಕೀರ್ಣ, ಬಿ.ಎಚ್.ರಸ್ತೆ, ಶಿವಮೊಗ್ಗ







namaste sir,
vimarshe olanotagalinda kudiddu aptavagide