ಬಿ ಕೆ ಸುಮತಿ
ಮೊದಲಿಗೆ ಇಂತಹ ಒಂದು ಚಿತ್ರ ನಿರ್ಮಾಣ ಮಾಡಲು ಧೈರ್ಯ ಬೇಕು. ಜನ ಚಿತ್ರಮಂದಿರಗಳಿಗೆ ಬರುವುದಿಲ್ಲ, ಹೊಸಬರ ಚಿತ್ರ ಓಡುವುದಿಲ್ಲ, ಈಗ್ಯಾರು ಭಕ್ತಿ ಪ್ರಧಾನ ಚಿತ್ರ ಮಾಡುತ್ತಾರೆ, ಎನ್ನುವವರಿಗೆ ಆಶ್ಚರ್ಯ ತಂದಿದೆ ಈ ಚಿತ್ರ ಎನ್ನುವುದು ಸತ್ಯ.
Fight, rape, gangwar, ರೌಡಿಗಳ ಜೀವನ ಚರಿತ್ರೆ ಹೇಳುತ್ತಾ ಸಮರ್ಥನೆ ಮಾಡುತ್ತಾ, ಕಾಲ ಹೀಗೇ , ಏನು ಮಾಡಲು ಸಾಧ್ಯ ಅನ್ನುವ ಮಂದಿಗೆ ಜಗನ್ನಾಥದಾಸರು ಉತ್ತರ ಕೊಟ್ಟಿದ್ದಾರೆ. 3ನೇ ವಾರವೂ housefull, fast filling, ನಲ್ಲಿ ಸಾಗುತ್ತಿದ್ದಾರೆ, ದಾಸರು.
ಮಾಲ್, multiplex ಅಂದರೆ ಏನೆಂದು ತಿಳಿದಿರದ 85, 90, ರ ಹಿರಿಯರನ್ನು ಮಕ್ಕಳು ಮೊಮ್ಮಕ್ಕಳು, ಕರೆದುಕೊಂಡು ಬಂದು ಅವರ ಪಕ್ಕ ಕುಳಿತು, ಚಿತ್ರ ನೋಡುತ್ತಾ, ದಿವ್ಯ ಅನುಭೂತಿ ಪಡೆಯುತ್ತಿದ್ದಾರೆ.
ಭಜನಾ ಮಂಡಳಿಗಳು, ಭಕ್ತಿ ಗುಂಪುಗಳು, ಆಧ್ಯಾತ್ಮ ಆಸಕ್ತರು, ಸಂಗೀತ ಪ್ರೇಮಿಗಳು, ಸದಭಿರುಚಿ ಬೇಕೆನ್ನುವ ಸಿನಿ ಪ್ರೇಮಿಗಳು, ಜಗನ್ನಾಥದಾಸರಿಗೆ ನಮಸ್ಕಾರ ಮಾಡುತ್ತಿದ್ದಾರೆ. ಇಷ್ಟರ ಮಟ್ಟಿಗೆ ಮಾತ್ರ ಚಿತ್ರಕ್ಕೆ 100 ಕ್ಕೆ 100 ಅಂಕ ಕೊಡಬಹುದು. ಚಿತ್ರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆದರೆ, ಚಿತ್ರ ನಿರ್ದೇಶನ, ಅಭಿನಯ, ಸಂಗೀತ ಮುಂತಾದ ಕಲಾ ನೈಪುಣ್ಯ ದೃಷ್ಟಿಯಿಂದ ನೋಡಿದಾಗ ಚಿತ್ರ ಸೋಲುತ್ತದೆ.

ಸಂಭಾಷಣೆಯಲ್ಲಿ ಗಟ್ಟಿತನ ಇಲ್ಲ. ಕೆಲವು ಕಡೆ ವ್ಯಾಕರಣ ಸಹ ಇಲ್ಲ. ಸಂಭಾಷಣೆ ಹೇಳುವ ರೀತಿ ಪುಸ್ತಕ ಹಿಡಿದು ಅಕ್ಷರ ಅಕ್ಷರ ಓದಿದ ಹಾಗೆ. ಎಲ್ಲೂ ಭಾವ ಕಾಣಿಸದು. ವಿಜಯದಾಸರಾಗಿ ಜೋಶಿ ಉತ್ತಮ ಅಭಿನಯ ನೀಡಿದ್ದಾರೆ. ಪ್ರಭಂಜನ ದೇಶಪಾಂಡೆ ಅವರಿಗೆ 65 ರಿಂದ 70 ಅಂಕ ಕೊಡಬಹುದು. ಜಗನ್ನಾಥದಾಸರು ಪಾತ್ರ ಇನ್ನೂ ಮನತುಂಬಿ ಅನುಭವಿಸಿ ಬರಬೇಕಿತ್ತು ಶರತ್ ಅವರೇ. ಪಾತ್ರಗಳು ಓಡಾಡುತ್ತವೆ, ನಮ್ಮ ಜೊತೆ ಬರುವುದಿಲ್ಲ. ಇನ್ನು ಸಂಗೀತ ಪರವಾಗಿಲ್ಲ. ಸಾಂಪ್ರದಾಯಿಕ ರಾಗಗಳನ್ನೇ ಉಳಿಸಿಕೊಂಡು, ತಾಳ ಲಯ ಜೋಡಿಸಿದ್ದಾರೆ. ಆದರೆ ಏಕತಾನತೆ ಕಾಣುತ್ತದೆ.
ಒಂದು ಮಾತ್ರಾ ಗತಿ ಲಯ ಹೆಚ್ಚು ಇರಬೇಕಿತ್ತೇನೋ ಎನಿಸುತ್ತದೆ. ನಿರ್ದೇಶಕರು ಮತ್ತಷ್ಟು ಚೆನ್ನಾಗಿ ಚಿತ್ರಕಥೆ ಮಾಡಬೇಕಿತ್ತು. ವಿದ್ಯಾಭ್ಯಾಸ ಮುಗಿಸಿ ಬಂದ ಆಚಾರ್ಯರಿಗೆ ವಿವಾಹ ಮಾಡಿಕೊಳ್ಳಲು ಸೂಚಿಸುವ ಘಟನೆ, ಗುರುಕುಲದಲ್ಲಿ ನಡೆಯುವ ಪಾಠ ಪ್ರವಚನ, ಇವೆಲ್ಲ paragraph to paragraph ಬಂದಿದೆ. ಎಲ್ಲೂ ಸಹ ಕಥೆ ಪೋಣಿಸಿಕೊಂಡು ಹೋಗುವುದಿಲ್ಲ. ಧಾರಾವಾಹಿ ನಿರ್ದೇಶನದ ರೀತಿ ತುಂಡು ತುಂಡಾಗಿ ಬರುತ್ತದೆ ಹೊರತು ಸಮಗ್ರತೆ ಕಾಣಿಸುವುದಿಲ್ಲ. ಹೊಟ್ಟೆನೋವಿನ ವಿಚಾರವನ್ನು ಬಹಳ ಲಂಬಿಸಲಾಗಿದೆ. ಕೊನೆಯ ದೃಶ್ಯ ಮನದಲ್ಲಿ ನಿಲ್ಲುವ ಮೊದಲೇ ಮುಗಿದು ಹೋಗುತ್ತದೆ. ಸಾಕ್ಷ್ಯಚಿತ್ರ ವೂ ಅಲ್ಲ, ಕಲಾತ್ಮಕವೂ ಅಲ್ಲ, ಸಾಮಾನ್ಯ ಚಲನಚಿತ್ರ ವೂ ಅಲ್ಲದ ರೀತಿ ತನ್ನದೇ ಧಾಟಿ ಹೊಂದಿ ರೂಪಿತವಾಗಿದೆ.

ಹೀಗೇ.. ಹೇಳುತ್ತಾ ಹೋಗಬಹುದು. Real ಜಗನ್ನಾಥದಾಸರ ಮೇಲೆ ಭಕ್ತ ವೃಂದ ಇಟ್ಟಿರುವ ಅಪಾರ ನಂಬಿಕೆ ಭಕ್ತಿ ಆದರಗಳ ಆತಿಥ್ಯದಲ್ಲಿ reel ದಾಸರು ಸಾಗಿಬಿಟ್ಟಿದ್ದಾರೆ. ಚಿತ್ರ ತಂಡ ಮತ್ತಷ್ಟು ಎಚ್ಚರಿಕೆ, ಸೂಕ್ಷ್ಮತೆ ಪ್ರದರ್ಶಿಸಿದ್ದರೆ, ಇದೊಂದು ಮೌಲಿಕ, ಸಾರ್ವಕಾಲಿಕ ಮಹತ್ವದ ಮೈಲಿಗಲ್ಲಿನ ಚಿತ್ರ ಆಗುತ್ತಿತ್ತು. ಎರಡನೇ ಭಾಗ ಬೇಕಿತ್ತೇ.. ತಿಳಿಯದು. ಆದರೆ ಎರಡನೇ ಭಾಗ ಮತ್ತಷ್ಟು ಸಹಜವಾಗಿ, ಸುಂದರವಾದ ಹಂದರ ಹೊತ್ತು ಬರಲಿ, ಎಂದು ಸಹೃದಯ ಪ್ರೇಕ್ಷಕರು ಆಶಿಸುತ್ತಾರೆ.
ನಿರ್ಮಾಣ ತಂಡಕ್ಕೆ, ಕಲಾವಿದರಿಗೆ ಅಭಿನಂದನೆಗಳು. ಎರಡನೇ ಭಾಗಕ್ಕೆ ಶುಭವಾಗಲಿ.






0 Comments