ಸುರೇಶ್ ಕಂಜರ್ಪಣೆ
ಟಾಲ್ಸ್ಟಾಯ್ ಬರೆದ ‘ವಾರ್ ಅಂಡ್ ಪೀಸ್’ ಪುಸ್ತಕ ಇಟ್ಟುಕೊಂಡದ್ದು ಯಾಕೆ ಎಂದು ಹೈಕೋರ್ಟ್ ನ್ಯಾಯಾಧೀಶರು ಕೇಳಿದ ವರದಿ ಬಂದಿದೆ. ಈ ಪುಣ್ಯಾತ್ಮ ಏಷ್ಯನ್ ಡ್ರಾಮ ನಾಟಕಕ್ಕೆ ಸಂಬಂಧಿಸಿದ್ದು, ಅರ್ಥಶಾಸ್ತ್ರ economics ಗೆ ಸಂಬಂಧಿಸಿದ್ದು ಎಂದು ಭಾವಿಸಿ ಶರಾ ಬರೆಯುವ ಸಾಧ್ಯತೆ ಇದೆ. ಒಂದು ಭಯಾನಕ ಅಸಂಗತ ಪ್ರಪಂಚದಲ್ಲಿ ನಾವಿದ್ದೇವೆ ಎಂಬುದನ್ನು ಹಲವಾರು ಮಂದಿ ಗುರುತಿಸಿದ್ದಾರೆ.

ಪೊಲೀಸರು ಈ ರೀತಿಯ ಅಸಂಬದ್ಧ ಹಾಸ್ಯಾಸ್ಪದ ಎವಿಡೆನ್ಸ್ಗಳನ್ನು ಕೋರ್ಟಿನೆದುರು ಈ ಹಿಂದೆಯೂ ಇಟ್ಟಿದ್ದಿದೆ. ಪೊಲೀಸರ ಮುಠ್ಠಾಳತನ ಜಗಜ್ಜಾಹೀರು ಆಗಿರುವ ಪ್ರಕರಣಗಳು ಹಲವಾರು ಇವೆ. ಆದರೆ ಆತಂಕ ಪಡಬೇಕಾದದ್ದು ನ್ಯಾಯಾಧೀಶರ ಅಜ್ಞಾನದ ಬಗ್ಗೆ.

ಈ ಜಡ್ಜ್ ಸಾಹೇಬ ಮೋದಿ ಬಂದ ಮೇಲೆ ನೇಮಕ ಆದವನಲ್ಲ. ನಾಗಪುರ ವಿವಿಯಲ್ಲಿ ವಕೀಲಿಕೆ ಓದಿದ್ದೂ ಆಗಿರಲಿಕ್ಕಿಲ್ಲ. ಕನಿಷ್ಠ ಕಾಲು ಶತಮಾನದ ಹಿಂದೆ ಡಿಗ್ರಿ, ವಕಾಲತ್ತು ಓದಿದವರಿರಲೇಬೇಕು! ಇಂಥವರ ಅಜ್ಞಾನದ ಬಗ್ಗೆ ನಮ್ಮ ನ್ಯಾಯಾಂಗದ ವರಿಷ್ಠರು ಆತಂಕಪಡಬೇಕು. ಜಗತ್ತಿನ ಸರ್ವ ಶ್ರೇಷ್ಠ ಕಾದಂಬರಿ ಎಂದು ಪರಿಗಣಿತವಾದ ಈ ಕೃತಿ ಸುಮಾರಾಗಿ ಎಲ್ಲಾ “ಜಿಕೆ” ಎಂದು ಕರೆಯಲ್ಪಡುವ ಜನರಲ್ ನಾಲೇಡ್ಜ್ ಪರೀಕ್ಷಾ ಗೈಡುಗಳಲ್ಲಿ ಪ್ರಶ್ನೆಯಾಗಿ ಕಾಣಿಸಿದ್ದಿದೆ. ಐಎಎಸ್ ಬಿಡಿ ಸಾಮಾನ್ಯ ಪಿಡಿಓ ಪರೀಕ್ಷೆಗಳಲ್ಲೂ ಇಂಥಾ ಜಿಕೆಯನ್ನು ಉರುಹಚ್ಚಬೇಕಾಗುತ್ತದೆ.!!
ಹೀಗಿರುವಾಗ ಹೈಕೋರ್ಟ್ ಜಡ್ಜ್ ಸಾಹೇಬನೊಬ್ಬ ಪೊಲೀಸರ ಜತೆ ಅಜ್ಞಾನ ಪ್ರದರ್ಶನದಲ್ಲಿ ಸ್ಪರ್ಧೆಗಿಳಿಯುವುದು ಆತಂಕಕಾರಿ.
ಈ ಹಿಂದೆ ಸಾಹಿತ್ಯಕೃತಿಗಳ ನಿಷೇಧಕ್ಕೆ ಒತ್ತಾಯಿಸಿದ ಪ್ರಕರಣಗಳಲ್ಲಿ ಸಂಬಂಧಿತ ನ್ಯಾಯಾಧೀಶರು ಅದ್ಭುತ ಪಾಂಡಿತ್ಯವನ್ನು ತೋರಿಸಿದ್ದಿದೆ. ಅಷ್ಟೇಕೆ, ಬೇರೆ-ಬೇರೆ ವಿಷಯಗಳ ಪ್ರಕರಣಗಳಲ್ಲೂ ತೀರ್ಪುಗಳಲ್ಲಿ ಅವರುಗಳು ಉಲ್ಲೇಖಿಸುವ ಸಾಹಿತ್ಯಕೃತಿಗಳ ಕೋಟ್ಗಳನ್ನು ನೋಡಿದರೆ ವಿಸ್ಮಯ ಹುಟ್ಟುತ್ತದೆ. ಈ ಪಾಂಡಿತ್ಯ-ನಿಷ್ಕರ್ಷೆಯ ಸಾಮರ್ಥ್ಯಗಳೇ ನ್ಯಾಯಾಧೀಶನನ್ನು ಜನಸಾಮಾನ್ಯರನ್ನಾಗಿ ಮಾಡುವುದು.

ಹೀಗಿರುವಾಗ ಸದರಿ ಜಡ್ಜ್ ಸಾಹೇಬನ ಅಜ್ಞಾನ ಆಪಾದಿತನ ಜೀವಕ್ಕೆ ಎರವಾದಿತು.. ಇಂಥಾ ಮುಠ್ಠಾಳರಿಗೆ ವೃತ್ತಿಯಲ್ಲೇ ಒಂದು ಸಾಮಾನ್ಯ ಜ್ಞಾನದ ಪರೀಕ್ಷೆಯನ್ನು ಸರ್ವೋಚ್ಛ ನ್ಯಾಯಾಲಯ ಮಾಡಬೇಕು. ನಾವು ಗೇಲಿ ಆಘಾತ ತೋರುವುದರೊಂದಿಗೆ ಪ್ರಾಕ್ಟಿಕಲ್ಲಾಗಿ ಯಾರಾದರೂ ವಕೀಲರು ಇದನ್ನು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದು ಇಂಥಾ ಮತಿಭ್ರಂಶರನ್ನು ಹೇಗೆ ಅಷ್ಟು ದೊಡ್ಡ ಸ್ಥಾನಕ್ಕೆ ಏರಿಸಲಾಯಿತು? ಇತ್ಯಾದಿ ಬಗ್ಗೆ ತನಿಖೆ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಬೇಕಿದೆ.
ಮನೆಯ ಕಂಬ-ಕಂಬಕ್ಕೂ ಗೆದ್ದಲು ಹಿಡಿಯತೊಡಗಿದ ಸ್ಥಿತಿಯಲ್ಲಿ ಈ ದೇಶ ಇದೆ. ರಾಜಕಾರಣಿಗಳ ಅಜ್ಞಾನ, ವಿಜ್ಞಾನಿಗಳ , ಅಧಿಕಾರಿಗಳ ಅಜ್ಞಾನ ಪ್ರದರ್ಶನಗಳು ದೇಶ ತಲುಪಿರುವ ಬೌದ್ಧಿಕ/ ವೈಚಾರಿಕ ಅಧಃಪತನದ ಸೂಚಿ. ಇಂಥವರಿಗೆ ಮಾನ್ಯತೆ ದೊರಕುವುದು ನಮ್ಮ ಅನೈತಿಕ ದೃಷ್ಟಿದೋಷದ ಸೂಚಿ. ಇಂಥವರು ನಮ್ಮ ಹಣೆಬರೆಹ ಬರೆಯುವಂಥಾ ಅಧಿಕಾರ ಸ್ಥಾನದಲ್ಲಿರುವುದೂ ನಮ್ಮ ಕಾಲದ ದುರಂತದ ಸೂಚಿ.






0 Comments