ಜೋಗಿಯ ತೇಜಸ್ವಿ

ಜೋಗಿ

ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ,  ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ ಅಲ್ಲ. ಅವರು ಕೂಡ ಕಾಡಿನಂತೆ, ಚಿಟ್ಟೆಯಂತೆ, ಫ‌ಳಕ್ಕನೆ ಮಿಂಚಿ ಮಾಯವಾಗುವ ಮಿಂಚುಳ್ಳಿಯಂತೆ, ಚಾರ್ಮಾಡಿಯ ಅನೂಹ್ಯ ತಿರುವಿನಂತೆ,ಕಣಿವೆಯಂತೆ, ಮಂಜಿನಂತೆ ಮತ್ತು ನಮ್ಮ ವಿಲಕ್ಷಣ ಲಹರಿಯಂತೆ.

tejasvi201. ಭಾಷಣ ಮಾಡೋಲ್ಲ ಅನ್ನುತ್ತಿದ್ದರು.

2. ತುಂಬ ಓದುತ್ತಿರಲಿಲ್ಲ.

3. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು.

4. ವಿಮರ್ಶೆಗಳನ್ನು ನೆಚ್ಚಿಕೊಳ್ಳಲಿಲ್ಲ.

5. ಸಂದರ್ಶನ ಕೊಡುತ್ತಿರಲಿಲ್ಲ.

6. ಬರಹಕ್ಕಿಂತ ಬದುಕುವುದು ಮುಖ್ಯ ಎಂದು ನಂಬಿಕೊಂಡಿದ್ದರು.

7. ತನಗಿಷ್ಟವಾಗದೇ ಹೋದರೆ ತನ್ನ ಪುಸ್ತಕಗಳನ್ನೂ ಪ್ರಕಟಿಸುತ್ತಿರಲಿಲ್ಲ.

8. ಮುನ್ನುಡಿ ಎಲ್ಲಾ ಬರೆಯೋಲ್ಲ ಹೋಗ್ರೋ ಅಂತ ರೇಗುತ್ತಿದ್ದರು.

9. ಸಾಹಿತ್ಯಕ್ಕಿಂತ ಹೆಚ್ಚು ಪರಿಸರ, ತೋಟ, ಆರೋಗ್ಯ, ಅಡುಗೆ ಕುರಿತು ಮಾತಾಡುತ್ತಿದ್ದರು.

10. ಪುಸ್ತಕಗಳ ಜೊತೆ ಬಂದಿಯಾಗುವ ಬದಲು, ಕಾಡಿನಲ್ಲಿ ಲೀನವಾಗಲು ಇಷ್ಟಪಡುತ್ತಿದ್ದರು.

ಪೂರ್ಣಚಂದ್ರ ತೇಜಸ್ವಿ ಅವರಿಗೆ ಅರವತ್ತು ವರ್ಷ ಆದಾಗ ಅವರದೊಂದು ಅಭಿನಂದನಾ ಗ್ರಂಥ ತರಬೇಕೆಂದು ಕೆಲವರು ಅವರ ಬಳಿ ಅನುಮತಿ ಕೇಳಿದ್ದರಂತೆ. ಸನ್ಮಾನ ಮಾಡುವುದಾಗಿ ಹೆದರಿಸಿದ್ದರಂತೆ. ತೇಜಸ್ವಿ ಅವರನ್ನೆಲ್ಲ ಬೈದು ಝಾಡಿಸಿದ್ದರು. ಮಾಡಕ್‌ ಕೆಲ್ಸ ಇಲ್ಲ ಕಣಯ್ಯ ನಿಮಗೆಲ್ಲ, ಅರವತ್ತಾಗೋದೇ ಕಾಯ್ತಿರ್ತೀರಿ ಅಂತ ಛೇಡಿಸಿದ್ದರು. ಈಗ ಅವರಿಲ್ಲದ ಹೊತ್ತಲ್ಲಿ, ಅವರಿಗೆ ಎಪ್ಪತ್ತೈದು ತುಂಬಿದ ಸಮಾರಂಭ ಅದ್ದೂರಿಯಾಗಿ ನಡೆದೇ ಹೋಗಿದೆ.

tejasvi21ಒಬ್ಬ ಲೇಖಕ ಕೇವಲ ಲೇಖಕನಾಗಿ ಉಳಿಯುವುದು ಎಷ್ಟು ಕಷ್ಟ ಅನ್ನುವುದನ್ನು ತೇಜಸ್ವಿ ಅರಿತುಕೊಂಡಿದ್ದರು. ಅವರು ಮೂಡಿಗೆರೆಯನ್ನು ಪ್ರಜ್ಞಾಪೂರ್ವಕವಾಗಿಯೇ ಆರಿಸಿಕೊಂಡಿದ್ದರು ಅನ್ನುವುದು ಅವರ ಮಾತು ಕೇಳಿದವರಿಗೆಲ್ಲ ಗೊತ್ತು. ಬೆಂಗಳೂರಿನಂಥ ಮಹಾನಗರ, ಬದಲಾವಣೆ ಇಲ್ಲದ ಊರು. ಎಂದೂ ಅರಳದ ಊರು ಎನ್ನುತ್ತಿದ್ದ ಅವರು, ಅದೇ ದಾರಿ, ಅದೇ ರಸ್ತೆ, ಅದೇ ಟ್ರಾಫಿಕ್ಕಲ್ಲಿ ಕೂತು ಯಾರಾದರೂ ಏನಾದರೂ ಬರೆಯೋದಕ್ಕೆ ಸಾಧ್ಯವಾ? ಮನಸ್ಸು ಮುದುಡಿ ಹೋಗೋದಕ್ಕೆ ಒಂದು ಗಂಟೆ ಅಲ್ಲಿದ್ರೆ ಸಾಕು ಎನ್ನುತ್ತಿದ್ದರು.

ತೇಜಸ್ವಿ ಹೇಗಿದ್ದರು ಅನ್ನುವುದನ್ನು ಹತ್ತಿರದಿಂದ ನೋಡಿದವರಿಗೆ ಅಚ್ಚರಿಯಾಗುತ್ತದೆ. ಒಬ್ಬ ಲೇಖಕ ಹೀಗೇ ಇರುತ್ತಾನೆ ಎಂದು ನಂಬಿಕೊಂಡು ಹೋದವರ ಅನಿಸಿಕೆಗಳು ಸುಳ್ಳಾಗುವಂತೆ ಬದುಕಿದವರು ಅವರು. ತಮಗೆ ಏನು ಬೇಕು ಮತ್ತು ಏನು ಬೇಡ ಅನ್ನುವುದು ಅವರಿಗೆ ಗೊತ್ತಿತ್ತು. ತಾನು ಯಾರನ್ನು ಓದಬೇಕು ಅನ್ನುವುದು ಅವರಿಗೆ ಸ್ಪಷ್ಟವಿತ್ತು. ಫೋನ್‌ ಮಾಡಿದಾಗೆಲ್ಲ, ನಾನು ಇಂಥ ಲೇಖಕನ ಇಂಥಾ ಪುಸ್ತಕವನ್ನು ಓದಿದೆ ಅಂತ ಹೇಳುವ ಚಟವಂತೂ ಅವರಿಗೆ ಇರಲೇ ಇಲ್ಲ. ಹಾಗೆ ನೋಡಿದರೆ ಅವರು ಅಷ್ಟಾಗಿ ಓದುತ್ತಲೂ ಇರಲಿಲ್ಲ. ಕೂತು ಓದುವುದಕ್ಕಿಂತ ಬೇರೆಯವರ ಜೊತೆ ಸುತ್ತಾಡುವುದರಲ್ಲಿ, ಹರಟುವುದರಲ್ಲಿ ಅವರಿಗೆ ಆಸಕ್ತಿ. ಮೂಡಿಗೆರೆಯ ಪೇಟೆಯಲ್ಲಿ ಅಡ್ಡಾಡುತ್ತಾ, ಯಾರ್ಯಾರದೋ ತರಲೆ ತಾಪತ್ರಯದ ಮೂಲ ತಿಳಿದುಕೊಳ್ಳುತ್ತಾ, ತೋಟಕ್ಕೆ ಬರುವ ಹೊಸ ಹಕ್ಕಿಗಳಿಗಾಗಿ ಕಾಯುತ್ತಾ, ಯಾವ ಹೊಂಡಕ್ಕೆ ಯಾವ ಕಾಲಕ್ಕೆ ಯಾವ ಮೀನು ಬರುತ್ತದೆ ಎಂದು ಊಹಿಸುತ್ತಾ ಇದ್ದವರು ಅವರು.

 

ತೇಜಸ್ವಿ ಅವರ ಥರ ಬದುಕುವುದು ಒಬ್ಬ ಲೇಖಕನ ಅನಿವಾರ್ಯತೆಯೂ ಹೌದೇನೋ? ಒಂದು ರಾಶಿ ಪುಸ್ತಕವನ್ನು ಮನೆಯಲ್ಲಿ ತಂದು ಒಟ್ಟಿಕೊಂಡು, ಯಾವುದನ್ನೂ ಓದಲಾಗದೇ, ಓದಿದ ಪುಸ್ತಕಗಳು ಕೊಡುವ ಸಿಟ್ಟನ್ನು ತಾಳಿಕೊಂಡು, ತನ್ನ ಸಹನೆಯನ್ನು ಕಳಕೊಳ್ಳುವುದು ಯಾರಿಗೆ ಬೇಕೋ ಮಾರಾಯಾ ಎಂದು ಹೇಳುತ್ತಿದ್ದ ತೇಜಸ್ವಿ, ಬಹುಶಃ ಒಂದೇ ಒಂದು ಪುಸ್ತಕಕ್ಕೂ ಮುನ್ನುಡಿ ಬರೆದು ಕೊಟ್ಟಂತಿಲ್ಲ.

ಪುಸ್ತಕ ಕಳಿಸೋದು ಕಳಿಸಿ, ಓದು ಅಂತ ಮಾತ್ರ ಹೇಳಬೇಡ ಅಂತ ನೇರವಾಗಿಯೇ ಹೇಳುತ್ತಿದ್ದ ಅವರು, ಲೇಖಕ ನಿಜಕ್ಕೂ ಪಡಕೊಳ್ಳುವುದೇನಾದರೂ ಇದ್ದರೆ, ಅದು ತನ್ನ ಪರಿಸರದಿಂದ ಎಂಬುದನ್ನು ಅರ್ಥಮಾಡಿಕೊಂಡಂತೆ ಬರೆದವರು. ಕೊಟ್ಟಿಗೆಹಾರಕ್ಕೆ ಬಂದೊಡನೆ ಅಲ್ಲೊಂದು ಜುಗಾರಿ ಕ್ರಾಸ್‌ ಅವರಿಗೆ ಕಾಣಿಸಿಬಿಡುತ್ತಿತ್ತು. ಆ ನಿರ್ಜನ ಏಕಾಂತದ ಊರಿಗೆ ಯಾರಾದರೂ ಯಾಕೆ ಬಂದು ನೆಲೆಸುತ್ತಾರೆ ಎಂಬ ಪ್ರಶ್ನೆ ಮೂಡುತ್ತಿತ್ತು. ಪ್ಲಾಸ್ಟಿಕ್ಕು ಬಂದದ್ದೇ ತಡ ಮೇದರಹಳ್ಳಿಯಂಥ ಒಂದು ಹಳ್ಳಿಯೂ ಅಲ್ಲಿದ್ದ ಸಮುದಾಯವೂ ನಾಶವಾದ ಚಿತ್ರ ಅವರ ಕಣ್ಮುಂದೆ ಸುಳಿಯುತ್ತಿತ್ತು.

ತೇಜಸ್ವಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡವರಲ್ಲ. ತೀರಾ ಒತ್ತಾಯ ಮಾಡಿದರೆ, ತಮಗೆ ಆಪ್ತರಾದವರ ಕಾರ್ಯಕ್ರಮಗಳಿಗೆ ಹೋಗಿ, ಹಿಂದೆ ಕೂತು ಬರುತ್ತಿದ್ದರು. ವೇದಿಕೆಯ ಮೇಲಿಂದ ಮಾತಾಡುತ್ತಿದ್ದುದಂತೂ ತೀರಾ ಕಡಿಮೆ. ಸಂದರ್ಶನ ಕೊಡಿ ಅಂತ ಕೇಳಿದಾಗೆಲ್ಲ, ಹಾಳಾಗಿ ಹೋಗೋ.. ಎಂದು ತಮಾಷೆಯಾಗಿ ಬೈಯುತ್ತಿದ್ದ ತೇಜಸ್ವಿ, ಅಂಥ ಖ್ಯಾತಿಯನ್ನು ಬಯಸಿದವರೂ ಅಲ್ಲ. ಹಾಗೆ ನೋಡಿದರೆ ಅವರ ಪುಸ್ತಕಗಳ ಬಗ್ಗೆ ವಿಮರ್ಶೆ ಕೂಡ ಬರುತ್ತಿರಲಿಲ್ಲ. ಒಂದಿಬ್ಬರು ವಿಮರ್ಶಕರನ್ನು ಬಿಟ್ಟರೆ, ಯಾರೂ ಕೂಡ ಅವರ ಬಗ್ಗೆ ಬರೆಯುವ ಪ್ರಯತ್ನ ಕೂಡ ಮಾಡಲಿಲ್ಲ.

ತರುಣ ಓದುಗರನ್ನು ಅವರಂತೆ ಸೆಳೆದವರು, ಓದಿಗೆ ಹಚ್ಚಿದವರು ಮತ್ತೂಬ್ಬರಿಲ್ಲ ಎಂದೇ ಹೇಳಬೇಕು. ಪರಿಸರದ ಕತೆ, ಕರ್ವಾಲೋ ಮತ್ತಿತರ ಕೃತಿಗಳನ್ನು ಅವರು ಬರೆದದ್ದು ಕಂತು ಕಂತಾಗಿಯೇ. ವಾರ ವಾರ ಎಷ್ಟು ಬೇಕೋ ಬರೆದು ಕಳುಹಿಸುತ್ತಿದ್ದರು. ಬರೆದದ್ದನ್ನು ಮತ್ತೂಮ್ಮೆ ತಿದ್ದುವ ಗೋಜಿಗೆ ಹೋಗುತ್ತಿರಲಿಲ್ಲ. ಒಂದೇ ಒಂದು ಅಚ್ಚಿನ ದೋಷ ಇಲ್ಲದಂತೆ ಎಚ್ಚರ ವಹಿಸುತ್ತಿದ್ದರು. ಅವರೊಳಗೆ ಕತೆ ಹುಟ್ಟುತ್ತಲೇ ಹೋಗುತ್ತಿತ್ತು, ನದಿಯಂತೆ ಹರಿಯುತ್ತಿತ್ತು.

ಕಾಫಿ ಬೆಲೆ, ಸೆಪ್ಟೆಂಬರ್‌ ಮಳೆ, ಹಾರುವ ಓತಿ, ಮನೆ ಹಿಂದಿನ ಕೆರೆ, ಕಿವಿ ಎಂಬ ನಾಯಿ, ಪ್ಯಾರ ಎಂಬ ಹುಡುಗ, ಸಾಬಿ ಅಂಗಡಿಯ ಬಿರಿಯಾನಿ, ಪೋಸ್ಟ್‌ ಮ್ಯಾನ್‌ನ ಸೈಕಲ್ಲು, ಹಾವುಗೊಲ್ಲರ ತರಲೆಗಳನ್ನೆಲ್ಲ ನೋಡುತ್ತಾ, ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ, ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ ಅಲ್ಲ. ಅವರು ಕೂಡ ಕಾಡಿನಂತೆ, ಚಿಟ್ಟೆಯಂತೆ, ಫ‌ಳಕ್ಕನೆ ಮಿಂಚಿ ಮಾಯವಾಗುವ ಮಿಂಚುಳ್ಳಿಯಂತೆ, ಚಾರ್ಮಾಡಿಯ ಅನೂಹ್ಯ ತಿರುವಿನಂತೆ,ಕಣಿವೆಯಂತೆ, ಮಂಜಿನಂತೆ ಮತ್ತು ನಮ್ಮ ವಿಲಕ್ಷಣ ಲಹರಿಯಂತೆ.

 

‍ಲೇಖಕರು admin

April 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. malini guruprasanna

    Howdu Sir, hagende Tejaswi AJATA SHATRU. Hagiddiddarindale avaru ellarigu priya. Avaru helabekaddannella barahagala moolakaheli hodaru. Naanu sannavaliddaga nanna Tandeya jote avarannu bhetiyagidde. sannavalallava avara hirime aga arivaagade hoitu.

    ಪ್ರತಿಕ್ರಿಯೆ
  2. ಸುಭಾಷಿಣಿ  

    ಫೊಟೋಗ್ರಾಫಿ ಹಾಗೂ ಬರವಣಿಗೆಯಲ್ಲಿ ತಾಂತ್ರಿಕ ಮುನ್ನಡೆ ಬಂದಿರುವ ಈ ಹೊತ್ತಿನಲ್ಲಿ ತೇಜಸ್ವಿ ನಮ್ಮೊಂದಿಗೆ ಇರಬೇಕಿತ್ತು.

    ಪ್ರತಿಕ್ರಿಯೆ
  3. ಕುಸುಮಬಾಲೆ

    ಇಷ್ಟರಲ್ಲಿ ಏನೆಲ್ಲಾ ಹೇಳಿಬಿಟ್ಟಿರಿ!!

    ಪ್ರತಿಕ್ರಿಯೆ
  4. basava chandragiri

    sir avra barahagalannanthu odilla but avra stanadalli nimmanna nodtidini…bcz tumba yuva manassugalanna tatto hage nivu bareethidira…

    ಪ್ರತಿಕ್ರಿಯೆ
  5. ಎಸ್.ಪಿ.ವಿಜಯಲಕ್ಶ್ಮಿ

    ತೇಜಸ್ವಿಯವರ ಬಗ್ಗೆ ಎಷ್ಟೊಂದು ಸಂಗತಿಗಳು…! ಎಲ್ಲವೂ ಎಷ್ಟು ವಿಭಿನ್ನ….! ಕಣ್ಣೆದುರು ಅವರನ್ನೇ ಕಂಡಂತಾಯ್ತು….ಅವರು ನಿಜಕ್ಕೂ ಗ್ರೇಟ್…ನಮ್ಮೆದುರು ಅವರನ್ನು ಮೂಡಿಸಿದ ನಿಮಗೆ ಧನ್ಯವಾದಗಳು…

    ಪ್ರತಿಕ್ರಿಯೆ
  6. Arun kote

    Tejaswi avaru hoda mele avarella pustakagalannu kondu odiddene.avarante badukalu hogi omme sothu mattomme geddu MSC environmental science odiddene.trupti ide innashtu odalu avara pustakavannu bittilla .ade bejaaru

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: