ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಗಿರಿಜಾ ಅವರಿಗೆ ಪ್ರವಾಸ ಒಂದು ಹವ್ಯಾಸ ಅಷ್ಟೇ ಅಲ್ಲ, ಅಧ್ಯಯನ ಸಹ. ಬದುಕಿನ ಅಧ್ಯಯನ, ನಮ್ಮತನದ ಹುಡುಕಾಟ ಎಲ್ಲಾ.
ಒಬ್ಬೊಬ್ಬರೇ ಪ್ರವಾಸ ಹೋಗುವ ಗಮ್ಮತ್ತೇ ಬೇರೆ ಅನ್ನುವ ಗಿರಿಜಾ ಅವರು ತಮ್ಮ ಈ ಲೇಖನದಲ್ಲಿ
ಹಾಗೆ ಒಬ್ಬರೇ ಪ್ರವಾಸ ಹೋಗುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಮಾಡಿಕೊಳ್ಳಬೇಕಾದ ಯೋಜನೆ,
ತಯಾರಿಗಳ ಬಗ್ಗೆ ಬರೆದಿದ್ದಾರೆ. ಇನ್ನು ತಡ ಯಾಕೆ ’ಚಕ್ ದೇ’!
***
’ಸೋಲೋ’ ಪ್ರವಾಸ: ಆನಂದ, ನವನವೀನ ಅನುಭವ ಮತ್ತು ಅಸ್ತಿತ್ವದ ಹೊಸ ‘ಹುಡುಗಾಟ’
ಎಂ ಆರ್ ಗಿರಿಜ

It’s better to see something once, than to hear about it a thousand times.. ತೀರ್ಥಯಾತ್ರೆಗಳಲ್ಲದ, ಸುಮ್ಮನೆ ಸಂತೋಷಕ್ಕಾಗಿ ಪ್ರವಾಸ ಅನ್ನುವ ಪರಿಪಾಠ ನಮ್ಮ ದೇಶದಲ್ಲಿ ಇತ್ತೀಚೆಗೆ ಶುರು ಅಗುತ್ತಿರುವ ಟ್ರೆಂಡ್. ಒಳ್ಳೆಯ ಬೆಳವಣಿಗೆ. ಹಾಗೇ ಹೆಣ್ಣುಮಕ್ಕಳು ಅವರವರೇ ಹೋಗುವ group travels ಕೂಡ ಹೆಚ್ಚಾಗುತ್ತಿವೆ. ಸುಮಿತ್ರ ಸೇನಾಪತಿ Women on Wanderlust ಶುರು ಮಾಡಿದ ಒಂಭತ್ತು ವರ್ಷಗಳಲ್ಲಿ ಹೆಣ್ಣುಮಕ್ಕಳೇ ಹೋಗುವ ಇಂತಹ ಹತ್ತಾರು ಗುಂಪುಗಳು ಹುಟ್ಟಿಕೊಂಡಿವೆ. ಬೆಂಗಳೂರಿನಲ್ಲೇ ಇಂತಹ 3-4 ಗುಂಪುಗಳಿವೆ. ಇದರೊಂದಿಗೇ ಯಾರ ಹಂಗಿಲ್ಲದೇ ತಮ್ಮಷ್ಟಕ್ಕೆ ತಾವೇ ಹೋಗುವ solo travelers ಗಳು ಕೂಡ ಹುಟ್ಟಿಕೊಂಡಿದ್ದಾರೆ. ಇವರ ಸಂಖ್ಯೆ ಹೆಚ್ಚಲ್ಲದಿದ್ದರೂ ಅಲ್ಲೊಬ್ಬರು, ಇಲ್ಲೊಬ್ಬರು ಕಾಣಸಿಗುತ್ತಾರೆ.
ಮೊದಮೊದಲು ನಮ್ಮನ್ನು ಕಳೆದುಕೊಳ್ಳಲು ಪ್ರವಾಸ ಹೊರಡುವ ನಾವು ಕೊನೆಗೆ ನಮ್ಮನ್ನು ಕಂಡುಕೊಳ್ಳಲು ಹೊರಡುತ್ತೇವೆ ಎಂಬ ಮಾತಿದೆ. ಇಲ್ಲಿ ನಾನು ಬರೆಯುತ್ತಿರುವುದು ಮನೆಯಿಂದ ಒಬ್ಬರೇ ಹೋಗಿ ಯಾವುದಾದರೂ ಗುಂಪಿನ ಜೊತೆ ಹೋಗುವ ಪ್ರವಾಸದ ಬಗ್ಗೆ ಅಲ್ಲ. ಪೂರ್ತಿ ಪ್ರವಾಸ ಒಬ್ಬರೇ ಹೋಗಿ ಬರುವ ಸೋಲೋ ಪ್ರವಾಸದ ಬಗ್ಗೆ. ಇದನ್ನು ಕನ್ನಡದಲ್ಲಿ ಹೇಳಲು ಹೊರಟರೆ ಸರಿಯಾಗುವುದಿಲ್ಲ. ಏಕೆಂದರೆ ಒಂಟಿ ಪ್ರಯಾಣ, ಏಕಾಂಗಿ ಪ್ರಯಾಣ ತುಂಬಾ ಆಧ್ಯಾತ್ಮಿಕ ಅಥವಾ ಭಾರ ಮತ್ತು ನೋವಿನದು ಎನಿಸಿಬಿಡಬಹುದು. ಹೀಗಾಗಿ ಸೋಲೋ ಪ್ರವಾಸ ಎಂದೆ ಹೇಳುವುದು ಸುಲಭ ಮತ್ತು ಸರಿ ಕೂಡ.
ಹೆಣ್ಣುಮಕ್ಕಳು ಸೋಲೋ ಪ್ರವಾಸ ಹೋಗೋವುದರ ಅವಶ್ಯಕತೆ ಏನಿದೆ? ಯಾಕಾದರೂ ಒಬ್ಬೊಬ್ಬರೆ ಹೋಗಬೇಕು ಅಂತ ಕೆಲವರು ಕೇಳ್ತಾರೆ. ಆದರೆ ಬಹುಪಾಲು ಜನರಿಗೆ ಒಂದಲ್ಲ ಒಂದು ಸಲವಾದರೂ ಒಬ್ಬರೇ ಎಲ್ಲಿಗಾದರೂ ಹೋಗಬೇಕು ಅಂತ ಅನ್ನಿಸೇ ಅನ್ನಿಸಿರುತ್ತದೆ. ಅದು ಏಕಾಂತಾನಂದದ ಹುಡುಕಾಟ. ಅದು ಬಿಡುಗಡೆಯ ದಾರಿ. ಜೀವನದ ಒತ್ತಡದ ಪ್ರೆಷರ್ ಕುಕ್ಕರ್ ಅನ್ನು ಬಿಚ್ಚಿಡುವ ಅನುಭವ. ಅದು ಹೊಸ ಹೊಸ ಹೊಳಹುಗಳ ಮಾರ್ಗ. Empowerment ನ ಕಿಕ್. ಒಂದು ತರಹ ಲೌಕಿಕಕ್ಕೆ ಲೌಕಿಕ. ಆಧ್ಯಾತ್ಮಿಕಕ್ಕೆ ಆಧ್ಯಾತ್ಮಿಕ. ಅದು ಹಾರ್ಡ್ ಬೌಂಡ್ ಜೀವನದ ಪೇಪರ್ಬ್ಯಾಕ್ ಎಡಿಷನ್ ತರಹ. ಹಾಗಾದರೆ ತಡೆಯೋದು ಏನು ?
ನಾನು ಎಲ್ಲಿಗಾದರೂ ಒಬ್ಬಳೇ ಹೋಗುತ್ತೀನಿ ಅಂತ ಹೇಳಿದಾಗ, ಅನೇಕ ತರಹದ ಪ್ರತಿಕ್ರಿಯೆಗಳು ಬರುತ್ತವೆ. ಕೆಲವರು ‘ ಯಾಕೇ, ಏನಾಯ್ತು???’ ಅಂತ ನನ್ನನ್ನೇ ತಬ್ಬಿಬ್ಬು ಮಾಡುವಂತೆ ಪ್ರಶ್ನೆ ಕೇಳಿ, ನನ್ನ ಸಾಂಸಾರಿಕ ಸಂಬಂಧದಲ್ಲಿ ಏನೋ ಎಡವಟ್ಟು ಆಗಿದೆ ಅನ್ನೋ ನಿರ್ಧಾರಕ್ಕೂ ಬಂದವರಿದ್ದಾರೆ. ಕೆಲವರು, ಅದು ಹೇಗೆ ಮಗು ಬಿಟ್ಟು ಹೋಗಲು ಮನಸ್ಸು ಬರುತ್ತದೆ ? ನಿನಗೆ ಏನೂ ಅನ್ನಿಸುವುದಿಲ್ಲವಾ ಅಂತ ಇಲ್ಲದ ಅಪರಾಧೀ ಭಾವನೆಯನ್ನು ಬಿತ್ತಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ನಾನೂ ಹೋಗೋ ಆಗಿದ್ದರೆ ಆದರೆ….ಎಂದು ದನಿ ಎಳೆದು ಮಾತನ್ನು ನುಂಗಿಕೊಳ್ಳುತ್ತಾರೆ. ಸೋಲೋ ಪ್ರವಾಸಕ್ಕೆ ಇರುವ ಸಾಮಾಜಿಕ ನಿರ್ಬಂಧಗಳನ್ನು ಮೌನವಾಗೇ ಬಿಚ್ಚಿಡುತ್ತಾರೆ.
ಒಂದು ಅಂಕಿಅಂಶದ ಪ್ರಕಾರ, ವಿಶ್ವದಲ್ಲಿ ಸೋಲೋ ಪ್ರವಾಸ ಮಾಡುವ ಮಹಿಳೆಯರ ಸರಾಸರಿ ವಯಸ್ಸು 47 ಅಂತೆ. ಅರ್ಧ ಆಯಸ್ಸು ಕಳೆದ ನಂತರ!!! ಕಾರಣ ಏನೇ ಇರಲಿ ಜೀವನದಲ್ಲಿ ಅರ್ಧ ವಯಸ್ಸು ಆಗುವ ತನಕ ಸುತ್ತಾಡೋಕ್ಕೂ ಕಾಯಬೇಕೆ ? ಹುಡುಗಿಯರಿಗೆ 21-22 ರ ಸುಮಾರಿಗೆ ಆರ್ಥಿಕ ಸ್ವಾವಲಂಬನೆ ಬಂದರೂ ತಡೆಯೋದು ಏನು ? ಈ ಗೂಗಲ್ ಯುಗದಲ್ಲಿ ಇಡೀ ಜಗತ್ತನ್ನು ಅಂಗೈಯ ಮೇಲೆ ನೋಡಿಬಿಡಬಹುದು. ಆದರೆ ಅನುಭವಿಸಲಾದೀತಾ ? ಪ್ರವಾಸಗಳು ಕಟ್ಟಿಕೊಡುವ ಅನುಭವ ಹಾಗು ಅದರ ಹರವನ್ನು ಯಾವ ಪುಸ್ತಕವೂ, ಯಾವ ಗೂಗಲ್ಲೂ ಕೊಡಲು ಸಾಧ್ಯವಿಲ್ಲ. ಸೋಲೋ ಪ್ರವಾಸ ಮಾಡಲು ಹಂಬಲಿಸುವವರಿಗಾಗಿ ನನ್ನ ಅನುಭವದ ಆಧಾರದ ಮೇಲೆ ಕೆಲವು ಟಿಪ್ಸ್ಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಎಲ್ಲವನ್ನೂ ಒಂದೇ ಗುಕ್ಕಿಗೆ ಹೇಳಿಬಿಟ್ಟಿದ್ದೇನೆ ಅಂತಿಲ್ಲ. ಇದರಲ್ಲಿ ಯಾವುದು ನಿಮಗೆ ಹೊಂದತ್ತೊ ತೆಗೆದುಕೊಳ್ಳಿ, ಮಿಕ್ಕಿದ್ದು ಬಿಟ್ಟುಬಿಡಿ! ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳಿ.
ಮನಸ್ಸು ಮಾಡಬೇಕು
ಮೊದಲು, ಒಬ್ಬರೇ ಹೋಗಿಬರಬೇಕೆನ್ನುವ, ತನಗೆ ತಾನೇ ಬೋರ್ ಆಗಲ್ಲ ಅನ್ನುವ ಮನಸ್ಸು ಬೇಕು. ಮೊದಮೊದಲು ಹೇಗೆ ಹೋಗುವುದು, ಏನಾದರೂ ಆದರೆ…? ಯಾರಾದರೂ ಏನಾದರೂ ಅಂದರೆ… ಎನ್ನುವ ಆತಂಕ ಇರುವುದು ಸಹಜ. ಅದು ಕೇವಲ ನಮ್ಮದೇ ಕಂಫರ್ಟ್, ನಮಗೆ ಕವಿಸುವ ಮಾಯೆ ಅಷ್ಟೇ. ಒಂದು ದಿನ ಆ ಮಾಯೆ ಹರಿಯಿರಿ ಆಗ ತಿಳಿಯುತ್ತೆ ಅದು ಎಷ್ಟು ತೆಳು ಪರದೆ ಅಂತ. ಹಾಗೆ ಒಬ್ಬರೇ ಹೋದಾಗ ಅದು ಕೊಡುವ ಆತ್ಮವಿಶ್ವಾಸ ಹಾಗು liberated ಭಾವನೆ, ಅದು ಮಾತಿಗೆ ನಿಲುಕದ್ದು.
ಕುಟುಂಬದವರ ಸಹಕಾರ
ಮೊನ್ನೆ ಪ್ರವಾಸಕ್ಕೆ ಸಂಬಂಧಪಟ್ಟ panel discussion ಒಂದಕ್ಕೆ ಹೋಗಿದ್ದೆ. ಅಲ್ಲೊಬ್ಬಾಕೆ 71 ವರ್ಷದವರು ತಮ್ಮ ಅಳಲು ಹೇಳಿಕೊಳ್ಳುತ್ತಿದ್ದರು. ಆಕೆ ಎಲ್ಲಿಗೆ ಹೊರಟರೂ ಗಂಡ ಜೊತೆಗೇ ಬರಬೇಕಂತೆ. ಇಬ್ಬರ ಆಸಕ್ತಿಗಳೂ ಬೇರೆ ಬೇರೆ. ನಾನು ಒಬ್ಬಳೇ ಹೋಗುವುದು ಹೇಗೆ ಅಂತ ಆಕೆಯ ಪ್ರಶ್ನೆ. ಇದು ನೋಡೋದಕ್ಕೆ ತಮಾಷೆಯಾಗಿ ಕಂಡರೂ, ಪ್ರೀತಿಯ ಬಂಧನಗಳೇ ಹಾಗೆ. ಮದುವೆಗೆ ಮೊದಲು ಅಪ್ಪ, ಅಮ್ಮ ಒಪ್ಪೋದಿಲ್ಲ. ಆಮೇಲೆ, ಮಗು ಮನೆ ಮಕ್ಕಳು.. ಇನ್ನು ನಾವು ನಾವೇ ಹೋಗೋಣ ಅನ್ನೋದಕ್ಕೆ 45-50 ವಯಸ್ಸು ಆಗೆ ಬಿಡುತ್ತದೆ. ಆಗ ಸೊಂಟ ನೋವು, ಕಾಲು ನೋವು,ಬೊಜ್ಜು ಇವೆಲ್ಲಾ ಇದ್ದದ್ದೇ.
ಅದಕ್ಕೇ ಹೇಳಿದ್ದು, ಆ ಕಾಲ ಬರಲಿ , ಈ ಕಾಲ ಹೋಗಲಿ ಅಂತ ಕಾಯದೆ, ನಮಗೆ ಮೊದಲು convince ಮಾಡಿಕೊಳ್ಳಬೇಕು. ನಾವು ನಂಬಿದ ಮೇಲೆ ಮನೆಯವರನ್ನು ನಂಬಿಸುವುದು ಕಷ್ಟವಲ್ಲ. ದಿನಕ್ಕೆ ಹತ್ತು ‘ನಿರ್ಭಯ’ ತರಹದ ವರದಿಯನ್ನು ಓದುವ ಯಾವ ತಂದೆತಾಯಿಯಂದಿರಿಗೂ ಆತಂಕ ಇದ್ದದ್ದೇ. ಜಗತ್ತು ನಿಜವಾಗಲೂ ನಾವು ಈ ವರದಿಗಳನ್ನು ಓದಿ ಊಹಿಸಿಕೊಂಡಷ್ಟು ಕೆಟ್ಟದ್ದಿಲ್ಲ. ಒಳ್ಳೆಯ ಉದಾಹರಣೆಗಳೂ ಬೇಕಾದಷ್ಟಿರುತ್ತವೆ. ಅದನ್ನು ಹೇಳಿ ಮನೆಯವರಿಗೆ ಧೈರ್ಯ ಹೇಳಬಹುದು. ಒಳ್ಳೆಯ ಪ್ಲಾನು ಕೂಡ ಮನೆಯವರನ್ನು convince ಮಾಡಲು ಸಹಾಯ ಮಾಡುತ್ತೆ. ಮೊದಲ ಸೋಲೋ ಪ್ರವಾಸಕ್ಕೆ, ನಿಮಗೆ ತಿಳಿದಿರುವ ಜಾಗಕ್ಕೇ ಹೋಗಿಬರುವುದು, ಒಳ್ಳೆಯದು. ಗೊತ್ತಿರುವ ಜಾಗ, ನಂಬಬಹುದಾದ ತಂಗುವ ವ್ಯವಸ್ಥೆ ಇವು ಧೈರ್ಯ ತಂದುಕೊಡೋದಲ್ಲದೆ, ಮನೆಯವರಿಗೂ ಇವಳು ಸೇಫ್ ಆಗಿ ಹೋಗಿಬರಬಲ್ಲಳು ಎಂಬ ಭರವಸೆ ಕೊಡುತ್ತದೆ.

ಸಿದ್ಧತೆ
ಎಲ್ಲಿಗೇ ಹೋಗುವ ಮೊದಲು, ಅಲ್ಲಿನ accommodation, ಆ ಜಾಗದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಕಲೆ ಹಾಕುವುದು ಮುಖ್ಯ. ಜೊತೆಗೆ ಎಲ್ಲಿಂದ ಎಲ್ಲಿಗೆ ಹೇಗೆ ಹೋಗುತ್ತೀರಾ ಎಂದು ಸ್ಥೂಲ ವಾಗಿಯಾದರೂ ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯದು. ಅಲ್ಲಿಯ ಟ್ಯಾಕ್ಸಿ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಮೆಟ್ರೋ ವ್ಯವಸ್ಥೆ ಇವುಗಳ ಬಗ್ಗೆ ಮಾಹಿತಿ ಉಪಯುಕ್ತ. ಇಡೀ ದಿನ ಹೊರಗೇ ಇರಬೇಕಾದ ದಿನಗಳಲ್ಲಿ, ದಾರಿಯಲ್ಲಿ ಎಲ್ಲಿ ಟಾಯ್ಲೆಟ್ ವ್ಯವಸ್ಥೆ ಇದೆ ಅಂತ ತಿಳಿದುಕೊಂಡರೆ ಸ್ವಲ್ಪ ಟೆನ್ಷನ್ ಕಡಿಮೆ. ನಮ್ಮ ದೇಶದ ಅನೇಕ ಭಾಗಗಳು ಈ ವಿಷಯವಾಗಿ ತಲೆನೋವೇ. Tripadvisor ನಂಥಾ ವೆಬ್ಸೈಟ್ ಗಳು, blog ಗಳು ಇಲ್ಲಿ ಉಪಯೋಗಕ್ಕೆ ಬರುತ್ತವೆ. ಹೋಗಿ ಬಂದವರ ಅನುಭವ ಅನೇಕ ಗೈಡ್ ಪುಸ್ತಕಗಳಿಗಂತಾ ಉತ್ತಮ. ಹಾಗಾಗಿ, ನಾನು ಆ ಜಾಗಕ್ಕೆ ಸಂಬಂಧಿಸಿದ ಬ್ಲಾಗ್ ಗಳನ್ನು ತಡಕಾಡುತ್ತೇನೆ. ಜೊತೆಗೆ ಅನುಮಾನಗಳಿದ್ದರೆ, ಲೇಖಕರ ಜೊತೆ ಕೇಳಿ ತಿಳಿದುಕೊಳ್ಳಬಹುದು.
ಅಪರಾಧ ಮತ್ತು ಕಾನೂನು
ನಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗುವಾಗ ಆ ದೇಶದ ಪ್ರವಾಸಿಗರಿಗೆ ಸಂಬಂಧ ಪಟ್ಟ ಕಾನೂನನ್ನು ಸ್ಥೂಲವಾಗಿಯಾದರೂ ತಿಳಿದುಕೊಳ್ಳುವುದು ಒಳ್ಳೆಯದು. ಜೊತೆಗೆ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವವರಿಗೆ ಏನು ಶಿಕ್ಷೆ ಅಂತ ತಿಳಿದುಕೊಳ್ಳಬೇಕು. ಇದರಿಂದ ಅಹಿತಕರ ಸಂದರ್ಭಗಳಲ್ಲಿ ಏನು ಮಾಡಬೇಕು ಅನ್ನುವ ಒಂದು idea ಆದರೂ ಇರುತ್ತದೆ. ಹಾಗೂ ಆ ದೇಶದ ಕಾನೂನಿನ ಮೇಲೆ ವಿಶ್ವಾಸವೂ ಇರುತ್ತದೆ. ಹಾಗೇನಾದರೂ ಆ ದೇಶದ ಕಾನೂನು ಮಹಿಳೆಯರ ರಕ್ಷಣೆಗೆ ಸಶಕ್ತವಾಗಿಲ್ಲವೆಂದರೆ ಅಲ್ಲಿಗೆ ಒಬ್ಬರೇ ಹೋಗದಿರುವುದೇ ವಾಸಿ.
ಬ್ಯಾಗ್ ಯಾವುದು?
ಇನ್ನು, ಬ್ಯಾಗ್ ಯಾವುದಿರಬೇಕು ಎಂಬ ಸಮಸ್ಯೆ ಬರುತ್ತೆ.. ಬ್ಯಾಕ್ಪ್ಯಾಕ್ ಯಾವತ್ತೂ ಉತ್ತಮ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪ್ಯಾಕ್ ಮಾಡುವುದು ಜಾಣತನ. ಎಲ್ಲೋ ಓದಿದ್ದು… ನಮಗೆ ಬೇಕು ಅನಿಸಿದ್ದನ್ನೆಲ್ಲಾ ಪ್ಯಾಕ್ ಮಾಡಬೇಕಂತೆ. ಆಮೇಲೆ ಹೋಗುವ ಮೊದಲು, ಅದರಲ್ಲಿನ 1/3 ಮಾತ್ರ ತೆಗೆದುಕೊಂಡು ಹೋಗಬೇಕಂತೆ. ಜೊತೆಗೆ ಶಾಪಿಂಗ್ ಜಾಸ್ತಿ ಮಾಡೋ ಜಾಗಕ್ಕೆ ಹೋಗೋದಾದರೆ ಒಂದಷ್ಟು ಜಾಗ ಉಳಿಸಿಕೊಂಡು ಹೋಗೋದು ಒಳ್ಳೆಯದು. ಮೊದಲೇ ನಾವು ಹೆಣ್ಮಕ್ಕಳು ಶಾಪಿಂಗ್ ಅಂದರೆ ತುದಿಗಾಲಲ್ಲಿ ಇರ್ತೀವಿ. ಇದರ ಜೊತೆಗೆ ಸುತ್ತಮುತ್ತ ಓಡಾಡಲು ಒಂದು ಚಿಕ್ಕ ಬ್ಯಾಕ್ಪ್ಯಾಕ್. ನಾನು ಯಾವತ್ತೂ ಮಾಡಿಲ್ಲವಾದರೂ ನನ್ನ ಕೆಲವರು ಗೆಳತಿಯರು pepper spray ಅನ್ನು ತಪ್ಪದೇ ತೆಗೆದುಕೊಂಡು ಹೋಗುತ್ತಾರೆ.
ಹೋಗಬಹುದಾದ ಜಾಗಗಳು

ಹೆಣ್ಣು ಮಕ್ಕಳು ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ನನ್ನನ್ನು ಕೇಳಿದರೆ,Journey is more important than destination. ಪ್ರಪಂಚದ ಕುಖ್ಯಾತ ಜಾಗಗಳನ್ನು ಹೊರತುಪಡಿಸಿದರೆ, ಲೋಕದಲ್ಲಿ ಎಲ್ಲೆಲ್ಲಿ ಹೆಣ್ಣುಮಕ್ಕಳಿದ್ದಾರೋ ಅಲ್ಲಿಗೆಲ್ಲಾ ಹೋಗಬಹುದು.ಮನೆಯಿಂದ ಹೊರಟು ಮನೆಗೆ ಸೇರುವ ತನಕದ್ದೆಲ್ಲಾ ಒಂದು ಅನುಭವವೇ. ಶುರುವಿಗೆ ಒಂದು ವಾರಾಂತ್ಯ ಹೋಗಿಬರುವ ಜಾಗವಾದರೆ ಒಳ್ಳಯದು. ದಕ್ಷಿಣ ಭಾರತದ ಬಹುಪಾಲು ಸುರಕ್ಷಿತವಾಗಿಯೇ ಇದೆ. ವಾರಾಂತ್ಯಕ್ಕಾದರೆ ಪಾಂಡಿಚೆರಿ ನನ್ನ ನೆಚ್ಚಿನ ಸ್ಥಳ. ಅರ್ಧ ಫ್ರೆಂಚ್ ಇನ್ನರ್ಧ ತಮಿಳು ಜನಪದ ಇರುವ ಜಾಗ ಅದು. ದೇಸಿ – ವಿದೇಶಿ ಎರಡರ ಅನುಭವವೂ ಅಲ್ಲಿ ಸಿಗುತ್ತದೆ. ನಮ್ಮ ಬೆಂಗಳೂರಿನ ಸುತ್ತಮುತ್ತ ಒಂದು ದಿನ ಎರಡು ದಿನದ ಬೇಕಾದಷ್ಟು ಸ್ಥಳಗಳಿವೆ. ಈ ಹಿಂದೆ ಹೋಗಿದ್ದ ಜಾಗಕ್ಕೆ ಒಬ್ಬರೇ ಹೋದಾಗ ಸಿಗುವ ಅನುಭವವೇ ಬೇರೆ. ಜೊತೆಯಲ್ಲಿ ಜನ ಇದ್ದರೆ ಸುತ್ತಮುತ್ತ ಸರಿಯಾಗಿ ಗಮನಿಸಿರುವುದಿಲ್ಲ. ಒಬ್ಬರೇ ಹೋದಾಗ ಎಲ್ಲವೂ ಹೊಸದಾಗಿ ಕಾಣುತ್ತದೆ.
India is incredible. ನಮ್ಮ ದೇಶವನ್ನು ಸರಿಯಾಗಿ ನೋಡೋಕೇ ಈ ಜನ್ಮ ಸಾಕಾಗೋಲ್ಲ. ಹಿಮಾಲಯದ ಭಾಗದ ಜನರಿಂದ ನಾನು ನೋಡಿದ್ದೆಲ್ಲಾ ಒಳ್ಳೆಯತನವನ್ನಷ್ಟೇ. ಇಲ್ಲೆಲ್ಲಾ ಸುರಕ್ಷಿತವಾಗಿ ಪ್ರಯಾಣಿಸಬಹುದು. ನೇಪಾಳ, ಭೂತಾನ್, ಆಗ್ನೇಯ ಏಷ್ಯಾದ ದೇಶಗಳಾದ ಸಿಂಗಪೂರ್, ಮಲೇಷಿಯಾ, ಇಂಡೋನೇಷಿಯಾ, ಚೈನಾ ಎಲ್ಲವೂ ಸೋಲೋ ಪ್ರಯಾಣಕ್ಕೆ ಒಳ್ಳೆಯ ದೇಶಗಳೇ. ನನ್ನ ಕೆಲವು ಸ್ನೇಹಿತರ ಅನುಭವದ ಪ್ರಕಾರ, ಯುರೋಪ್ ಕೂಡ ಸೋಲೋ ಪ್ರಯಾಣಕ್ಕೆ recommended..
ಸುರಕ್ಷತೆ
ಹೊರಡುವಾಗ ಮನೆಯವರಿಗೆ, ಹತ್ತಿರದ ಸ್ನೇಹಿತರಿಗೆ ತಿಳಿದಿರಲಿ, ಅಲ್ಲಿಗೆ ಹೋದ ಮೇಲೆ ಬೇರೆ ಸಿಮ್ ತೆಗೆದುಕೊಂಡರೆ ಅದನ್ನು ಖಂಡಿತಾ ಇವರುಗಳ ಜೊತೆ ಹಂಚಿಕೊಳ್ಳಬೇಕು. ಹೋಗುವ ಮೊದಲೇ ಹೋಟೆಲ್ ರಿಸರ್ವ್ ಮಾಡೋದು ತುಂಬಾ ಒಳ್ಳೆಯದು.ಹೋಟೆಲ್ ಬುಕ್ ಮಾಡುವಾಗ ಸಾಧ್ಯವಾದಷ್ಟೂ ನೋಡಿ ಮಾಡಿ ಬುಕ್ ಮಾಡಬೇಕು.ಕೆಲವೊಮ್ಮೆ ನಾನು ಅಲ್ಲಿಗೆ ಹೋದ ಮೇಲೆಯೇ ಹೋಟೆಲ್ ಹುಡುಕಿಕೊಂಡಿದ್ದೂ ಇದೆ. ಇದು ಮೊದಮೊದಲು ಟ್ರಾವಲ್ ಮಾಡುವವರಿಗೆ ಖಂಡಿತ ಸೂಕ್ತ ಅಲ್ಲ. Home stay ವ್ಯವಸ್ಥೆ ಎಷ್ಟೋ ಕಡೆ ಇರುತ್ತೆ. ಇದರಿಂದ ಸ್ಥಳೀಯ ಜನ, ಅಲ್ಲಿನ ಜೀವನವನ್ನು ಹತ್ತಿರದಿಂದ ನೋಡಿದಂತೆ ಆಗುತ್ತೆ.
ಮೊದಲ ದಿನದ ಓಡಾಟದ ಟ್ಯಾಕ್ಸಿ ಹೋಟೆಲ್ನ ಮುಖಾಂತರವೇ ಮಾಡುವುದು ಸೇಫ್. ಬಸ್, ಟ್ರೈನ್,ವಿಮಾನ ಬುಕ್ ಮಾಡುವಾಗ ಸಂಜೆಗೆ ಮೊದಲು ಹೋಗಬೇಕಾದ ಜಾಗ ತಲುಪುವಂತೆ ಪ್ಲ್ಯಾನ್ ಮಾಡುತ್ತೇನೆ. ಮೊದಲ ದಿನ ಅಪರಿಚಿತ ಜಾಗದಲ್ಲಿ ರಾತ್ರಿ risk ಯಾಕೆ ? ಉಳಿದ ದಿನಗಳೂ ಬೇಗ ಕತ್ತಲಿಗೆ ಮೊದಲು ಹೋಟೆಲ್ ತಲಪಬೇಕು. ಅನೇಕರಿಗೆ geography sense ಅಷ್ಟು ಚೆನ್ನಾಗಿ ಇರದಿರಬಹುದು. ಬೆಳಿಗ್ಗೆ ನೋಡಿದ ಜಾಗಗಳೆ ರಾತ್ರಿ ತುಸು ಅಪರಿಚಿತವೆನಿಸಿಬಿಡಬಹುದು. ನನ್ನ ಒಬ್ಬಳು ಗೆಳತಿ ಸಾಧ್ಯವಾದಷ್ಟೂ ಹೋದ ಜಾಗಗಳಲ್ಲಿ ಗುಂಪಿನ ಜೊತೆ ಅವರಿಗೆ ಗೊತ್ತಾಗದಂತೆ identify ಮಾಡಿಕೊಳ್ಳುತ್ತೀನಿ ಅಂತ ಹೇಳುತ್ತಾಳೆ. ಅಂದರೆ, ಅವಳು ಒಂದು ಪಾರ್ಕ್ ಗೆ ಹೋದಳು ಅನ್ನಿ. ಅಲ್ಲಿ ಒಬ್ಬಳೇ ಕುಳಿತರೂ, ಜನವಿರದ ಜಾಗದ ಬದಲು ಜನ ಗುಂಪಾಗಿ ಇರುವ, ಮಹಿಳೆಯರು ಇರುವ ಸೀಟುಗಳ ಅಕ್ಕಪಕ್ಕದ ಸೀಟನ್ನು ಆರಿಸಿಕೊಳ್ಳುತ್ತಾಳೆ.
ಪ್ರವಾಸದ ಮಜ ಇರುವುದೇ ಹೊಸ ಜನ, ಹೊಸ ನೆಲವನ್ನು ತಿಳಿದುಕೊಳ್ಳುವುದರಲ್ಲಿ. ಹಾಗೆ ಜನರ ಜೊತೆ ಬೆರೆಯುವಾಗ ಒಂದು ಎಚ್ಚರ ಯಾವಾಗಲೂ ಇರುವುದು ಒಳ್ಳೆಯದು.ಹಾಗಂತ ಆ ಹೊತ್ತನ್ನು ಅನುಭವಿಸಲಾಗದಷ್ಟು ಸೀರಿಯಸ್ ಆಗಿ ಓಡಾಡಿ ಅಂತಲ್ಲ. ಎಷ್ಟೋ ಸಲ ನಮ್ಮ instinct ಇಂತಹ ಸೂಚನೆಗಳನ್ನು ಕೊಡುತ್ತಾ ಇರುತ್ತದೆ. ಅದನ್ನು ಓದುವ ಎಚ್ಚರ ಬೇಕು.ಎಲ್ಲಿಯಾದರೂ ಒಂದು ಸ್ವಲ್ಪ ‘ಸರಿಯಿಲ್ಲ’ ಅನ್ನುವ ವಾಸನೆ ಸಿಕ್ಕರೂ ಅಲ್ಲಿಂದ ಆದಷ್ಟೂ ಬೇಗ ಜಾಗ ಖಾಲಿ ಮಾಡಿಬಿಡಬೇಕು. ನಮ್ಮ ಊರಿನಲ್ಲಿ ಒಬ್ಬರೇ ಮಾಡದೇ ಇರುವ ಏನನ್ನೂ ಹೊಸ ಜಾಗದಲ್ಲಿ ಮಾಡಬಾರದು ಅಂತ ಎಲ್ಲೋ ಕೇಳಿದ್ದೆ. ಖಂಡಿತಾ ನಿಜ.
ಭಾಷೆ
ಸಿನಿಮಾ ಹೇಗೆ ವಿಶ್ವಭಾಷೆಯೋ ಹಾಗೆ ಪ್ರವಾಸಕ್ಕೆ ಹೊರಟರೆ ಭಾಷೆ ತಾನಾಗೆ ಪಳಗುತ್ತೆ. ಭಾರತದಲ್ಲಿ ಹಿಂದಿ, ಸ್ವಲ್ಪ ಇಂಗ್ಲಿಷ್ ಬಂದರೆ ಸಾಕು. ಚೈನಾ ಮುಂತಾದ ಕಡೆ ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ತಕ್ಕ ಮಟ್ಟಿಗೆ ನಡೆಯುತ್ತದೆ, ಇನ್ನು ಭೂತಾನ್ ಅಂಥ ಕಡೆ ನಾವು ಇಂಗ್ಲಿಷ್ ಮಾತನಾಡಿದರೆ ಅಲ್ಲಿ ಜನ ಹಿಂದಿಯಲ್ಲಿ ಉತ್ತರಕೊಡುತ್ತಾರೆ. ನಾವು ಇರುವ ಹೋಟೆಲ್ ನ ಅಡ್ರೆಸ್ ಸದಾ ಜೊತೆಯಿದ್ದರೆ ಅದನ್ನು ತೋರಿಸಿ ಟ್ಯಾಕ್ಸಿ ಡ್ರೈವರ್ ಜೊತೆ ಮಾತನಾಡಬಹುದು. ಇಂಗ್ಲೀಷ್ ಮಾತನಾಡದೇ ಇರುವ ಜಾಗಗಳಲ್ಲಿ ಇಂಗ್ಲೀಷ್ ಮಾತನಾಡುವ ಗೈಡ್ ಅನ್ನು ಬುಕ್ ಮಾಡಿಕೊಳ್ಳಬೇಕಾಗುತ್ತದೆ.
ಕೆಲವೊಮ್ಮೆ ಮನುಷ್ಯ ಭಾಷೆಯನ್ನು ಮೀರಿದ ಭಾಷೆಯೊಂದಿದೆ ಅಂತ ಅನ್ನಿಸುವುದುಂಟು. ಒಂದು ಸಲ ಚೈನಾದ ಒಂದು ಇಂಗ್ಲೀಷ್ ಬಾರದ ಊರಿನಲ್ಲಿ ಒಂದು ಫಿಲಿಫೀನ್ಸ್ ಕುಟುಂಬ ತುಂಬಾ ಸಹಾಯ ಮಾಡಿದ್ದಲ್ಲದೆ ಇಡೀ ದಿನ ನನ್ನ ಜೊತೆ ಇದ್ದರು. ಇಂಗ್ಲೀಷ್ ಬಾರದ ಆಕೆ, ಫಿಲಿಫೀನ್ ಬಾರದ ನಾನು ಇಡೀ ದಿನ ಮಾತನಾಡಿದ್ದೇವೆ. ಅವಳು ಫಿಲಿಫೀನ್ನಲ್ಲಿ ಮಾತನಾಡಿದರೆ, ನಾನು ಇಂಗ್ಲೀಷ್ ನಲ್ಲಿ ಉತ್ತರಕೊಡುತ್ತಾ ಇದ್ದೆ!!!
ಬಜೆಟ್
ಯಾವುದೇ ಟ್ರ್ಯಾವಲ್, ಅದೂ ದೂರದ ಊರಾದರೆ ಅದು ಖರ್ಚಿನ ಬಾಬ್ತು. ಒಬ್ಬರೇ ಹೋಗುವುದಾದರೆ ಅದು ತುಸು ಹೆಚ್ಚೇ. ಅನೇಕ ಹೋಟೆಲ್ಗಳಲ್ಲಿ, ಒಂದು ರೂಮಿಗೆ ಒಬ್ಬರಾದರೂ ಅಷ್ಟೇ, ಇಬ್ಬರಾದರೂ ಅಷ್ಟೇ. ಹಾಗಾದರೆ ತುಂಬಾ ಹಣ ಇದ್ದರೆ ಮಾತ್ರ ಇದು ಸಾಧ್ಯವಾ ?
ಕೆಲವರು ಪ್ರವಾಸಕ್ಕೋಸ್ಕರವೇ ಒಂದು ಅಕೌಂಟ್ ತೆರೆದು, ಅದರಲ್ಲಿ ಹಣ ಕೂಡಿಡುತ್ತಾ ಹೋಗುತ್ತಾರೆ. ನಾನು ಏನೇ ಉಳಿಸಿದರೂ, ಅದನ್ನು ಪ್ರವಾಸಕ್ಕೇ ಬಳಸುತ್ತೇನೆ ಅಂತ ಮೆಂಟಲ್ ನೋಟ್ ಮಾಡಿಕೊಳ್ಳುತ್ತೇನೆ. ಸುತ್ತಾಟ ಕೂಡ ನಮ್ಮ ಆದ್ಯತೆಗಳ ಆಧಾರದ ಮೇಲೆ ನಿಂತಿರುತ್ತದೆ. ನನ್ನನ್ನೂ ಸೇರಿದಂತೆ, ನನ್ನ ಅನೇಕ ಗೆಳತಿಯರು ಯಾವುದೇ ಅನವಶ್ಯಕ ಖರ್ಚು ಗಳನ್ನು ಮಾಡದೆ ಉಳಿಸುತ್ತಾ ಹೋಗುತ್ತೇವೆ. ಸೀರೆ, ಒಡವೆ, ವಾಹನ ಬದಲಾವಣೆಯಂತಹ ಖರ್ಚುಗಳಿಗೆ ಟ್ರ್ಯಾವಲ್ ನಂತರದ ಆದ್ಯತೆ.
ಇತ್ತೀಚೆಗಿನ ನನ್ನ ಒಂದು ಪ್ರವಾಸದಲ್ಲಿ, ಲಂಡನ್ನ ಹುಡುಗಿಯೊಬ್ಬಳ ಪರಿಚಯವಾಯ್ತು.ಅವಳು 3 ತಿಂಗಳಿನಿಂದ ಬ್ಯಾಕ್ಪ್ಯಾಕ್ ಮಾಡುತ್ತಿದ್ದಾಳಂತೆ. ಇನ್ನೂ ಒಂದು ತಿಂಗಳ ಓಡಾಟದ ನಂತರ ಊರಿಗೆ ವಾಪಸ್ ಎಂದಳು. 26-27 ರ ವಯಸ್ಸಿನ ಅವಳು ಹಣ ಹೇಗೆ ನಿಭಾಯಿಸ್ತಾಳೆ ಅಂತ ನನಗೆ ಕುತೂಹಲ. ಅವಳು ಕೆಲಸ ಮಾಡಿದ್ದರೂ ಹೆಚ್ಚು ಉಳಿತಾಯ ಸಾಧ್ಯವಿಲ್ಲ. ಅವಳನ್ನು ಕೇಳಿದಾಗ ಅವಳು ತಾನು ಎಲ್ಲಾ ಕಡೆ ಬಜೆಟ್ ಹೋಟೆಲ್ ಗಳಲ್ಲೇ ಇರುವುದಾಗಿಯೂ ಇಡೀ ಓಡಾಟದಲ್ಲಿ ಎಲ್ಲಿಯೂ ಲಕ್ಷುರಿಗೆ ಆಸ್ಪದ ಕೊಡುವುದಿಲ್ಲವೆಂದು ಹೇಳಿದಳು.
ಬಸವಣ್ಣನವರ ಕ್ಷಮೆ ಕೇಳಿ ಹೇಳುವುದಾದರೆ, ಉಳ್ಳವರು ಪ್ರವಾಸವ ಮಾಡುವರಯ್ಯಾ…ಮೊದಲು ಅವರು ಹಣ ಉಳಿಸುವರಯ್ಯಾ…
ಇನ್ನು ಊಟ ತಿಂಡಿ ವಿಷಯಕ್ಕೆ ಬಂದರೆ, ಆಯಾ ಜಾಗದ ವಿಶೇಷಗಳನ್ನು ಪ್ರಯತ್ನಿಸಬಹುದು. ಅದರದ್ದೇ ಒಂದು ದೊಡ್ಡ ಪ್ರಪಂಚ. ಸಸ್ಯಾಹಾರಿಗಳಿಗೆ ಸ್ವಲ್ಪ ಕಷ್ಟವೇ.ಆದರೆ ಎಲ್ಲಾ ಕಡೆ ಒಳ್ಳೆಯ ತರಕಾರಿ, ಹಣ್ಣುಗಳು ಸಿಗುವುದರಿಂದ ಆರಾಮವಾಗಿ ನಿಭಾಯಿಸಬಹುದು. ನಾನು ಊಟ ತಿಂಡಿ ವಿಷಯದಲ್ಲಿ ಅಷ್ಟು ಸಾಹಸಿ ಅಲ್ಲ. ಎಲ್ಲೇ ಹೋದರೂ ಅಲ್ಲಿಯ ಸೂಪರ್ ಮಾರ್ಕೆಟ್ಗೆ ಹೋಗಿ ಹಣ್ಣು,ಜ್ಯೂಸ್ ಮುಂತಾದ ವಸ್ತುಗಳನ್ನು ತಂದು ಇಟ್ಟುಕೊಳ್ತೀನಿ. ಹೊರಗೆ ಏನೂ ರುಚಿಸದಿದ್ದರೆ ಇದು back up ಪ್ಲ್ಯಾನ್ ಆಗಿ ಸಹಾಯಕ್ಕೆ ಬರುತ್ತೆ. ಆದರೆ ಸಾಧ್ಯವಾದಷ್ಟೂ ಅಲ್ಲಿಯ ಸ್ಥಳೀಯ ಆಹಾರವನ್ನು try ಮಾಡಿ ಅನ್ನುವುದು ನನ್ನ ಸಲಹೆ.
ಕೊನೆಯದಾಗಿ, ಎಲ್ಲಕ್ಕೂ ಮುಖ್ಯವಾಗಿ, ಬಂದದ್ದು ಬರಲಿ ಅನ್ನುವ ಧಾಷ್ಟ್ರ್ಯ, ಸಮಯಪ್ರಜ್ಞೆ, ಹಾಗೂ ವಿವೇಚನೆ ಅತ್ಯಗತ್ಯ. ಆರಾಮವಾಗಿ ಹೋಗಿ ಬನ್ನಿ, have a safe journey. . ಚಕ್ ದೇ!!!!.



Very useful tips!!
Very good giri….5 stars 🙂
hey super girija..neevu olle writer agbittidhiraa..
ಪ್ರಪಂಚದ ಕುಖ್ಯಾತ ಜಾಗಗಳನ್ನು ಹೊರತುಪಡಿಸಿದರೆ, ಲೋಕದಲ್ಲಿ ಎಲ್ಲೆಲ್ಲಿ ಹೆಣ್ಣುಮಕ್ಕಳಿದ್ದಾರೋ ಅಲ್ಲಿಗೆಲ್ಲಾ ಹೋಗಬಹುದು.ಮನೆಯಿಂದ ಹೊರಟು ಮನೆಗೆ ಸೇರುವ ತನಕದ್ದೆಲ್ಲಾ ಒಂದು ಅನುಭವವೇ – Liked these lines very much 🙂 It’s very true. I agree to all that you have mentioned as i too do lot of Solo Pravasa.
ಭಾರತ ಬಹುಭಾಷೆಗಳ ದೇಶ. ನಿಜವಾದ ಭಾರತ ನೋಡಲು ಆಯಾ ಪ್ರಾಂತ್ಯದ ಭಾಷೆಯ ಸ್ವಲ್ಪವಾದರೂ ತಿಳಿದಿದ್ದರೆ ಒಳ್ಳೆಯದು. ಹಿಂದಿ ಇಂಗ್ಲೀಷು ಮಾತ್ರ ತಿಳಿದಿದ್ದರೆ ನಗರಗಳಲ್ಲಿ ಲಕ್ಶುರಿ ಪ್ರವಾಸ ಮಾಡಲು ಮಾತ್ರ ಸಾಧ್ಯ.
Nice article.