pk ಒಡ್ಡಿದ ಮುಗ್ದ ಪ್ರಶ್ನೆ

ರವಿ ಕುಮಾರ್

ನನ್ನಪ್ಪ ಸಣ್ಣವರಿದ್ದ ನಮ್ಮನೆಲ್ಲಾ ಕೂರಿಸಿಕೊಂಡು ಒಂದು ಕತೆ ಹೇಳಿದ್ದರು. ಹಿರಿಯರು ಯಾರೋ ತೀರಿಕೊಂಡ ಮನೆಯಲ್ಲಿ ಶ್ರಾದ್ಧಾ ಕಾರ್ಯ ನಡೆಯುತ್ತಿತ್ತಂತೆ. ಶ್ರದ್ದೆ ಇಲ್ಲದೆ ಶ್ರಾದ್ಧಾದಿಂದ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲವಾದ್ದರಿಂದ ಯಾವ ಕಾರಣಕ್ಕೂ ಸ್ವರ್ಗ ಕಳೆದುಕೊಳ್ಳಲು ಮನಸ್ಸಿಲ್ಲದ ಅಪ್ಪ ತನ್ನ ಮಕ್ಕಳಿಗೆ ತಾನು ಮಾಡುವ ಆಚರಣೆಗಳನ್ನೆಲ್ಲಾ ಗಮನವಿಟ್ಟು ಕಲಿತುಕೊಳ್ಳಲು ಹೇಳಿ ಕಾರ್ಯದಲ್ಲಿ ತೊಡಗಿದ. ಮನೆಯಲ್ಲಿದ್ದ ಒಂದು ಕರಿ ಮತ್ತೊಂದು ಬಿಳಿ ಬೆಕ್ಕುಗಳು ಪೂಜಾ ಕೈಂಕರ್ಯದ ಮಧ್ಯದಲ್ಲೆಲ್ಲಾ ಸುತ್ತಾಡಿ ಅಡ್ಡಿ ಪಡಿಸುತ್ತಿದ್ದರಿಂದ ಅವೆರಡನ್ನೂ ಕುತ್ತಿಗೆ ಬಿಗಿದು ಅಪ್ಪ ಒಂದು ಮೇಜಿಗೆ ಕಟ್ಟಿಹಾಕಿದ. ಒಂದಕ್ಕೂ ವಿವರಣೆಯಿಲ್ಲದೇ ಅದಾಗಿ ಅರ್ಥವೂ ಆಗದಂತೆ ನಡೆಯುತ್ತಿದ್ದ ಆಚರೆಣೆಗಳಿಗೂ, ನಿರ್ದಿಷ್ಟ ಉದ್ಧಿಶ್ಯವಿದ್ದ ಬೆಕ್ಕು ಕಟ್ಟಿದ ಕ್ರಿಯೆಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಮಕ್ಕಳ ಮನದಲ್ಲಿ ಎಲ್ಲ ಆಚರಣೆಗಳೂ ಶ್ರದ್ದೆಯಿಂದ ದಾಖಲಾದವು. ಮುಂದೆ ಈ ಅಪ್ಪ ಸತ್ತಾಗ ಮಕ್ಕಳು ಅಪ್ಪನಿಗೆ ಮಾಡಿದ ಶ್ರಾದ್ಧಾ ಕಾರ್ಯದಲ್ಲೂ ಒಂದು ಕರಿ ಒಂದು ಬಿಳಿ ಬೆಕ್ಕನ್ನು ಮೇಜಿಗೆ ಕಟ್ಟಲಾಯ್ತು. ಹೀಗೇ ಮುಂದುವರೆಯುತ್ತಾ ಬೆಕ್ಕು ಮೇಜಿಗೆ ಕಟ್ಟುವುದು ಈ ಮನೆತನದ ಶ್ರಾದ್ಧಾ ಆಚರಣೆಗಳಲ್ಲೊಂದಾಯ್ತು. ಮುಂದೆ ಮನೆಯಲ್ಲಿ ಬೆಕ್ಕು ಸಾಕುವುದೇ ನಿಂತರೂ ಮನೆಯಲ್ಲಿ ಶ್ರಾದ್ಧಾ ನಡೆವಾಗ ಮಾತ್ರ ಎಲ್ಲಿಂದಾದರೂ ಬೆಕ್ಕು ತಂದು ಮೇಜಿಗೆ ಕಟ್ಟದೇ ಕಾರ್ಯ ಮುಂದುವರೆಯುತ್ತಿರಲಿಲ್ಲ. ಶ್ರಾದ್ದಾದಲ್ಲಿ ನೆರೆದಿದ್ದ ಮಂದಿಯೂ ಅದನ್ನೇ ಕಲಿತು ರೂಡಿಸಿಕೊಂಡಿದ್ದರಿಂದ ಅದು ಒಂದು ಸಮುದಾಯದ ಆಚರೆಣೆಯೇ ಆಗಿಬಿಟ್ಟಿತ್ತು. ಶ್ರಾದ್ದಾ ಶ್ರದ್ದೆ ಮೌನದಿಂದ ಮಾಡುವ ಕ್ರಿಯೆಯಾದ್ದರಿಂದ “ಏಕೆ ಹೀಗೆ?”, “ಇದರ ಅರ್ಥವೇನು?” ಎಂಬಂತಹ ಪ್ರಶ್ನೆಗಳಿಗೆ ಅಲ್ಲಿ ಅವಕಾಶವಿರಲಿಲ್ಲ. ಶ್ರಾದ್ಧಾ ಕಾರ್ಯದಿಂದ ಕರಿ ಮತ್ತು ಬಿಳಿ ಬೆಕ್ಕಿನ ಜೋಡಿಗೆ ಬಹು ಬೇಡಿಕೆಯಿರುತ್ತಿದ್ದರಿಂದ ಬೆಕ್ಕು ಪೂರೈಸಲೆಂದೇ ಅಂಗಡಿಯೊಂದು ಹುಟ್ಟಿಕೊಂಡು ವ್ಯವಹಾರವಾಗಿ ಬೆಳೆಯತೊಡಗಿತು. ವ್ಯವಹಾರ ಎಂದಿಗೂ ಬೀಳದಿರಲೆಂದು “ಸತ್ತ ಆತ್ಮ ಬೆಕ್ಕಾಗಿ ಬಂದು ಕಾರ್ಯ ನೋಡುತ್ತದೆ ” ಎನ್ನುವಂತಾ ಕತೆ ಹಬ್ಬಿಸಿ ಜನರೆಂದೂ ಈ ಆಚರೆಣೆ ಅಲಕ್ಷಿಸದಂತೆ ರೂಪುಗೊಂಡಿತು.
ಹೀಗೆ ಉದ್ದಿಷ್ಯಗಳನ್ನೇ ಮರೆತು, ಮೂಲ ಸಮಸ್ಯೆಗಳನ್ನೇ ಮರೆತು ಅವುಗಳ ಪರಿಹಾರಕ್ಕೆಂದು ಹುಟ್ಟಿಕೊಂಡ ಆಚರಣೆಗಳನ್ನಷ್ಟೇ ಪಾಲಿಸುತ್ತಾ ಅದನ್ನೇ ಧರ್ಮವೆಂದು ಕರೆಯುವ ಹಂತ ತಲುಪಿರುವಾಗ ಕುತೂಹಲಕ್ಕಾದರೂ “ಏಕೆ ” ಎಂದು ನಾವು ಕೇಳಿಕೊಳ್ಳುವುದು ಒಳಿತೆನಿಸುತ್ತದೆ.
ಲಕ್ಷ ಲಕ್ಷ ವರ್ಷ ಇತಿಹಾಸವುಳ್ಳ ಮಾನವ ವಿಕಾಸದ ಹಾದಿಯಲ್ಲಿ ಬೇಟೆ ಕಲಿತು ಸಂಘ ಜೀವಿಯಾಗಿ ಬದುಕಲು ಕಲಿತು ಯೋಚಿಸಿವ ಹಂತಕ್ಕೆ ಮೆದುಳು ಬೆಳೆಸಿಕೊಂಡದ್ದು ವಿಕಾಸದ ಕಾಲಮಾನದಲ್ಲಿ ಪರಿಗಣಿಸುವುದಾದರೆ ಇತ್ತೀಚೆಗಷ್ಟೇ. ತನ್ನ ನಿಯಂತ್ರಣಕ್ಕೆ ಬಾರದ ತನ್ನನ್ನು ಅಸಹಾಯಕತೆಗೆ ತಳ್ಳುವ ಸುತ್ತ ಮುತ್ತಲಿನ ಭೂಕಂಪ, ಜ್ವಾಲಾಮುಖಿ, ಅತಿವೃಷ್ಟಿ ಅನಾವೃಷ್ಟಿಗಳಂತವುಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ತಿಳಿಯದಿದ್ದಾಗ ಅವನಿಗೆ ದೊರೆತ ಉತ್ತರ ಯಾವುದೋ ಅಗೋಚರ ಶಕ್ತಿಯೊಂದು ಹೀಗೆಲ್ಲಾ ಮಾಡುತ್ತಿರಬೇಕು ಎಂದು.
“ಏಕೆ?”
“ತನ್ನ ಯಾವುದೋ ತಪ್ಪಿಗೆ ವ್ಯಗ್ರಗೊಂಡು.”
“ಪರಿಹಾರ?”
“ಆ ಶಕ್ತಿಯನ್ನು ಸಂತುಷ್ಟಿಗೊಳಿಸುವುದು.”
“ಅದು ಹೇಗೆ?”
“ತಪ್ಪಿಗೆ ಕ್ಷಮಾಪಣೆ ಕೇಳುವುದು? ತನ್ನ ಬೇಟೆಯಲ್ಲಿ ಅವನಿಗಿಷ್ಟು ಕೊಡುವುದು? ತನೆಗೆ ತೊಂದರೆ ಕೊಡಬಲ್ಲವನು ತನಗೆ ಒಳಿತೂ ಮಾಡಲು ಶಕ್ತಿವಂತನಲ್ಲವೇ?”
ಹೀಗೆ ಬೆಳೆದಿರಬಹುದು ಮೊದಲ ಮಾನವನ ಆಲೋಚನೆ.
ಆ ಶಕ್ತಿ ಕ್ರಮೇಣ ದೇವರಾಗಿಯೂ, ಸಂತುಷ್ಟಿಗೊಳಿಸುವ ಕ್ರಿಯೆ ಪೂಜೆ ಪುನಸ್ಕಾರ ಇತರೆ ಆಚರಣೆಗಳಾಗಿಯೂ ರೂಪುಗೊಂಡಿರಬೇಕು. ಈ ಕೂಗು, ಪೂಜೆ ಆ ಶಕ್ತಿಗೆ ತಲುಪಿತೋ ಏನೂ, ಅದರಿಂದಲೇ ಅವನ ಕಷ್ಟ ಪರಿಹಾರವಾಯಿತೋ ಎನೋ ಅಂತೂ ಈ ಆಲೋಚನೆಯಿಂದ ಅವನ ಮನಸ್ಸಿಗೆ ಸಮಾಧಾನವಂತೂ ಆಗಿತ್ತು.
ತನ್ನ ಅಸಹಾಯಕತೆಗೆ, ಭಯಕ್ಕೆ ಪ್ರಾರ್ಥನೆಯೊಂದು, ದೈವದ ಕಲ್ಪನೆಯೊಂದು ಉತ್ತರ ಒದಗಿಸಿ (ಹುಸಿ) ನಬಿಕೆಯನ್ನೂ, ಸ್ಥೈರ್ಯವನ್ನೂ, ಬದುಕಲು, ಸಮಸ್ಯೆ ಎದುರಿಸಲು ಧೈರ್ಯವನ್ನೂ ಕೊಡುವುದಾದರೆ ಅದರಲ್ಲಿ ಯಾವ ತಪ್ಪೂ ಇಲ್ಲ ಇದನ್ನು ವಿರೋಧಿಸುವುದರಲ್ಲ್ಲಿ ಯಾವ ಅರ್ಥವೂ ಇಲ್ಲ. ನನಗೆ ತಿಳಿದಿರುವಂತೆ ಇಂದಿಗೂ ಬಹುಮಟ್ಟಿಗೆ ಆಸ್ತಿಕರು ಕೇವಲ ಈ ಕಾರಣದಿಂದಾಗಿಯೇ ಆಸ್ತಿಕರಾಗಿದ್ದಾರೆ.
ಆದರೆ ದೈವದ ಕಲ್ಪನೆ, ಧರ್ಮದ ಆಚರೆನೆಗಳ ಉಪಯೋಗ ಇಷ್ಟಕ್ಕೆ ನಿಲ್ಲಲಿಲ್ಲ. ಸಮಾಜ ನಿರ್ಮಾಣದಲ್ಲಿ ಒಂದು ಶಿಸ್ತಿಗಾಗಿ ಸಮಾಜದ ಸುಸ್ಥಿತಿಗಾಗ ಆಗಷ್ಟೇ ರೂಪುಗೊಳ್ಳುತಿದ್ದ ಕಾನೂನು ಚೌಕಟ್ಟುಗಳನ್ನು, ರಾಜಕೀಯ, ಸಾಮಾಜಿಕ ರೀತಿನೀತಿಗಳನ್ನು ಜನರ ಮೇಲೆ ವಿಧಿಸಲು ಆಡಳಿತ ವರ್ಗಕ್ಕೆ ಸಿಕ್ಕ ಸುಲುಭ ಮಾರ್ಗ ಇದು ದೈವ ಸಂದೇಶವೆಂದೂ ಅವನ ಕಾನೂನೆಂದೂ ಪ್ರಚುರ ಪಡಿಸಿದ್ದು. ಉದ್ದಿಶ್ಯ ಅಂದಿಗೆ ಒಳ್ಳೆಯದೇ ಇತ್ತಾದರೂ ಸಮಾಜದ ರೀತಿ ನೀತಿ, ಅವಶ್ಯಕತೆ ರೂಪುರೇಷಗಳೇ ಬದಲಾದರೂ ಅಂದು ಮಾಡಿಕೊಂಡ ಕಾನೂನು ಚೌಕಟ್ಟುಗಳು ಎಂದಿಗೂ ಬದಲಾಗದೇ ಉಳಿದದ್ದು ಮುಂದೆ ಸಮಸ್ಯಗೆ ಎಡೆ ಮಾಡಿತೆನಿಸುತ್ತದೆ. ಆದ್ದರಿಂದಲೇ ಅವು ವ್ಯತಿರಿಕ್ತವಾಗಿ ಪರಿಗಣಿಸಿ ಸಮಾಜ ವಿರೋಧಿಯಾಗಿ ಬೆಳೆದಿರಬಹುದು. ಇಂದು ಧರ್ಮಗಳೆಂದು ಕರೆಸಿಕೊಳ್ಳುವ ಎಲ್ಲಾ ಚೌಕಟ್ಟನೊಳಗೂ ಇಂತ ಉದಾಹರಣೆ ಕಾಣಬಹುದು.
ಮಹಿಳೆಯರ ರಕ್ಷಣೆಗಾಗಿ ಮನೆಯ ಒಳಗಡೆ ಸೀಮಿತಗೊಳಿಸಿ ಅವಳಿಗೆ ತೊಡಿಸಿದ ಬುರ್ಕಾ ಇಂದು ಅವಳೆಲ್ಲ ಹಕ್ಕುಗಳನ್ನೂ ಕಿತ್ತುಕ್ಕೊಂಡು ಪರಾವಲಂಬಿಯಾಗಿ ಮಾಡಿ ಅರ್ಧ ಮನುಷ್ಯ ಶಕ್ತಿ ಕುಸಿಯುವಂತೆ ಮಾಡಲು ಕಾರಣವಾಯ್ತೆಂದೆನಿಸುತ್ತದೆ. ವೃತ್ತಿ ಆದಾರದಲ್ಲಿ ಸಮಮಾಜ ವಿಂಗಡಿಸಿ ಮಾಡಿಕೊಂಡಿರಬಹುದಾದ ವರ್ಣ ವ್ಯವಸ್ಥೆಯಂತಾ ಒಂದು ಸಾಮಾಜಿಕ ರಚನೆ ಅಂದಿಗೆ ಸಂಘಟಿತ ದುಡಿಮೆಯಲ್ಲಿ ಎಷ್ಟು ಉಪಯೋಗವಾಗಿರಬಹುದೋ ಇಂದು ಅಷ್ಟೇ ಮಾರಕ ಜಾತಿಪದ್ದತಿಯಾಗಿ ಬೆಳೆದಿದೆಯೆನಿಸುತ್ತದೆ.
‘ಭಕ್ತ ಹೆದರಿದಷ್ಟೂ ಆರತಿ ತಟ್ಟೆಯ ಮೇಲೆ ಕಾಣಿಕೆ ಹೆಚ್ಚು’ ಎಂದು ಅರಿತ ಧರ್ಮ ಪ್ರಚಾರಕರು ,ದೈವಮಾನವರೆಂದು ಕರೆದು ಕೊಳ್ಳುವವರು, ಮನುಸ್ಯನ ಸಹಜ ಭಯ, ಅಸಹಾಯಕತೆ, ಯೋಚನಾ ಶಕ್ತಿಯ ಅಪೂರ್ಣತೆಯನ್ನೇ ಬಂಡವಾಳವಾಗಿಸಿಕೊಂಡು ಒಂದೆಡೆ ಹೊಸ ಹೊಸ ಧಾರ್ಮಿಕ ಕೇಂದ್ರಗಳ ಹೆಸರಲ್ಲಿ ಬ್ಯುಸಿನೆಸ್ ಪಾಯಿಂಟ್ ಗಳನ್ನು ರಚಿಸುತ್ತಿದ್ದರೆ ಮತ್ತೊಂದೆಡೆ ಧರ್ಮದ ಸಂಪೂರ್ಣ ಅಪಾರ್ಥದ ಅಮಲೇರಿಸಿಕೊಂಡು ವಿನಾಶಕಾರಿ ಭಯೋತ್ಪಾದಕ ಶಕ್ತಿ ರಚಿಸುತ್ತಿದ್ದಾರೆನಿಸುತ್ತದೆ. ಮತ್ತೊಂದಷ್ಟು ಕಡೆ ಜ್ಯೋತಿಷ್ಯ, ಭವಿಷ್ಯ, ಪರಿಹಾರ, ಮಂತ್ರ, ತಂತ್ರ ದಂತಹ ಹಲವನ್ನು ದಿನವೂ ತಲೆಗೆ ತುಂಬಿ ಮೌಡ್ಯ ಬಿತ್ತಿ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಉದ್ಯೋಗಳು ರೂಪುಗೊಂಡಿವೆ. ಇವು ಇಷ್ಟೆಲ್ಲಾ ಬಗೆಯಾಗಿ ಬೆಳೆದಿದ್ದರೂ ಇವುಗಳನ್ನು ಪ್ರಶ್ನಿಸಲು, ವೈಜ್ಞಾನಿಕ ತರ್ಕಕ್ಕೊಳಪಡಿಸಲು ಬೇಕಾದ್ದು ಅನಂತ ಬುದ್ದಿ ಶಕ್ತಿಯಾಗಲೀ ಘನ ಪಾಂಡಿತ್ಯವಾಗಲಿ ಅಲ್ಲ. ಪೂರ್ವಾಗ್ರಹ ಪೀಡಿತವಲ್ಲದ ಮುಗ್ದ ಮನಸ್ಸು. ಅಂತ ಮನಸ್ಸಿನ ಪ್ರತಿರೂಪ pk . ಹುಟ್ಟಿದಾಗಿನಿಂದ ನಮ್ಮ ಮೇಲೆ ಸರಿ ಎಂದು ಹೇರಲಾಗುವ ನಂಬಿಕೆಗಳಿಂದ ಪ್ರಶ್ನೆ ಕೇಳದೇ ಒಪ್ಪಿಕೊಂಡ ವಿಷಯಗಳನ್ನು ಸ್ವಚ್ಛ ಮನಸ್ಸಿನಿಂದ ಪ್ರಶ್ನಿಸಲು ರಾಜ್ ಕುಮಾರ್ ಹಿರಾನಿ ಕೊಂಡುಕೊಂಡ ಮುಗ್ದ ಅನ್ಯ ಗ್ರಹದ pk ಪಾತ್ರ ಮತ್ತು ಸಿನಾಮಾದ ಹಾಸ್ಯ ಪ್ರದಾನ ಮಾರ್ಗ ವಿವಾದರಹಿತ ಮತ್ತು ಯೋಚನೆಗೆ ಹಚ್ಚಿಸಲು ಶಕ್ತವಾಗಿದೆ. ಆದರೆ ಚಿತ್ರ ಒಪ್ಪಿರುವಂತೆ ಭಕ್ತಿ ಧರ್ಮಗಳು ಕೇವಲ ಬೂಟಾಟಿಕೆಯಾಗಿದ್ದರೆ, ಮೌಡ್ಯ ಪ್ರಸಾರಕವಾಗಿದ್ದರೆ, ಬದಲಾವಣೆಗೊಳ್ಳದ ಜಿಡ್ಡಾಗಿದ್ದರೆ; ಡಾರ್ವಿನ್ – ‘ಮಾನವನ ಉಗಮ ಕೆಲ ದಿನಗಳಲ್ಲಿ ಆದದ್ದಲ್ಲ ಬದಲಿಗೆ ಲಕ್ಷ ಲಕ್ಷ ವರ್ಷಗಳ ವಿಕಾಸದಿಂದ ಆದದ್ದು’ ಎಂದ ದಿನವೇ ಹಾಗಲ್ಲವೆಂದು ನಂಬಿದ್ದ ಇಡೀ ಕ್ರೈಸ್ತ ಧರ್ಮ ನೆಲೆ ಕಳೆದುಕೊಳ್ಳ ಬೇಕಿತ್ತು . ಅಥವಾ ಕೊಪರ್ನಿಕಸ್ಸನು – ‘ನಮ್ಮದು ಭೂ ಕೇಂದ್ರಿತ ವ್ಯವಸ್ಥೆಯಲ್ಲ ಸೂರ್ಯ ಕೇಂದ್ರಿತ ವ್ಯವಸ್ಥೆ’ ಎಂದ ದಿನವೇ ಅಳಿಸಿಹೋಗಬೇಕಿತ್ತು. ಇಂತ ಒಂದಷ್ಟು ಮೌಡ್ಯಗಳನ್ನು ಧರ್ಮ ಹೇರುತ್ತವೆಯಾದರೂ, ಅದನ್ನೇ ಬಳಸಿ ಅಧಿಕಾರವರ್ಗ ಆಳುತ್ತದೆಯಾದರೂ, ರಾಜಕೀಯವರ್ಗ ಮನುಷ್ಯ ವಿರೂಧಿ ಭಯೋತ್ಪಾದನೆ ರೂಪಿಸುತ್ತವೆಯಾದರೂ ಸಾಮಾನ್ಯ ಜನ ಧರ್ಮದ ಮೊರೆ ಹೋಗುವುದು ಒಂದು ನಂಬಿಕೆಗೆ. ಸೋಲಿನಲ್ಲೂ ನೋವಿನಲ್ಲೂ ತನ್ನ ದನಿಯನ್ನು ಕೇಳುವವನೊಬ್ಬ ಇದ್ದಾನೆ ಎಂಬ ನಬಿಕೆಗಾಗಿ. ನೋವನ್ನೂ ಸಹಿಸುವ ಮನಸ್ಸನ್ನೂ ,ಸೋಲನ್ನು ಗೆಲ್ಲುವ ಶಕ್ತಿಯನ್ನೂ ಆ ನಂಬಿಕೆ ಕೊಡುತ್ತದೆಯಾದ್ದರಿಂದ. ಇಂತ ನಂಬಿಕೆಗೆ ಹಾನಿಯಾಗದಂತೆ ಮೌಢ್ಯವನ್ನು ಪ್ರಶಿಸುವುದು pk ಮುಗ್ದತೆಗೆ ಸಾಧ್ಯವಾಗದಿರಬಹುದು. ಇಂತ ಗಟ್ಟಿ ಪ್ರಯತ್ನಕ್ಕೆ OMG ಸಿನಿಮಾ ಒಂದಷ್ಟು ಪ್ರಯತ್ನಿಸಿದ್ದು ಕಾಣಬಹುದು. ಅದೇನೆ ಇರಲಿ ಪ್ರಶ್ನೆ ಕೇಳುವ ಮನೋಭಾವ ಬೆಳೆಸುವ ಎಲ್ಲ ಪ್ರಯತ್ನಗಳು ಯಶಸ್ವಿಯಾಗಲೆಂದು ಹಾರೈಸೋಣ.
 

‍ಲೇಖಕರು G

January 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. narendra

    I like the movie how he criticize the blind beliefs of Hinduism. I am a Hindu. At the same time, PK should have courage to question the blind beliefs of Islam and Christianity, Buddhism and other religions. Then PK will be more appreciated……

    ಪ್ರತಿಕ್ರಿಯೆ
  2. H G Malagi

    ನಂಬಿಕೆಗೂ ಮೂಢನಂಬಿಕೆಗೂ ಗೆರೆ ಎಳೆಯುವುದು ಈಗಿನ ಸನ್ನಿವೇಶದಲ್ಲಿ ಬಲು ಕಠಿಣ.ನನ್ನ ನಂಬಿಕೆ ಇನ್ನೊಬ್ಬರಿಗೆ ಮೂಢನಂಬಿಕೆಯಾಗಿ ಕಾಣಬಹುದು. ಮಾರಿಜಾತ್ರೆಯಲ್ಲಿ ಕೋಣಬಲಿ ಮೂಢನಂಬಿಕೆ ಕೆಲವರಿಗೆ.ಆದರೆ ಬಕ್ರೀದ್ ಹಬ್ಬದ ಕುರಿ ಬಲಿ ಶ್ರದ್ಧೆ ಕೆಲವರಿಗೆ. ಕೋಣಬಲಿ ಸಮರ್ಥನೀಯವಲ್ಲ.ನಿಜ.ಅದನ್ನು ತೊಡೆದುಹಾಕಬೇಕು.ಅದಕ್ಕಾಗಿಇ ನಡೆಯುವ ಜನಜಾಗರಣ ಸ್ತುತ್ಯ ಹಾಗೆಯೇ ಕುರಿಬಲಿಯನ್ನು ಇದೇ ಕಾರಣಕ್ಕಾಗಿ ನಿಲ್ಲಿಸಲು ಯಾಕೆ ಸುಧಾರಣವಾದಿಗಳು ಪ್ರಯತ್ನಿಸುತ್ತಿಲ್ಲ.ಮೌನಂ ಸಮ್ಮತಿ ಲಕ್ಷಣಂ? ಅಥವಾ ಭಯ? ಪಿಕೆಯಲ್ಲಿ ಇದಕ್ಕೆ ಉತ್ತರವಿದ್ದಂತಿಲ್ಲ. ಹಾಗಾಗಿ ಜನಾಕ್ರೋಶ. ನಿಜ ಧರ್ಮಗಳು ಜನಾಂಗವನ್ನು ಚಿಂತನಶೀಲರನ್ನಾಗಿಸಬೇಕು.ಚಿಂತಿಸುವಂತಾಗಬಾರದು. ಇದು ಎಲ್ಲರಿಗೂ ಅನ್ವಯಿಸುವ ಮಾತು. ಕೆಲವರಿಗೆ ಅಪಥ್ಯ ಕೆಲವರಿಗೆ ಕ್ರೋಧ. ಹಂ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: