
ಎನ್ ಸಂಧ್ಯಾರಾಣಿ
ಅವಳೊಬ್ಬಳು ಕನಸಿನಲ್ಲಿ ಕಳೆದುಹೋಗುತ್ತಿದ್ದ ಹುಡುಗಿ. ಕಾಲೇಜಿನಲ್ಲಿ ಕಡುಜಾಣೆ, ಗೆಳತಿಯರ ನಡುವೆ ಮಾತಿನ ಮಲ್ಲಿ. ಒಬ್ಬಳೇ ಇರುವಾಗ, ಬಸ್ಸಿನಲ್ಲಿ ಹೋಗುವಾಗ, ಸಾರಿಸಿದ ನೆಲದ ಮೇಲೆ ಚುಕ್ಕೆ ಚುಕ್ಕೆ ಜೋಡಿಸಿ ರಂಗವಲ್ಲಿ ಇಡುವಾಗ, ಕೈ ತುಂಬಾ ಗಾಜಿನ ಬಳೆ ತೊಡುವಾಗ, ದಾವಣಿಯ ನೆರಿಗೆ ಹಿಡಿದು, ಸೆರಗನ್ನು ಒಪ್ಪ ಕೂರಿಸಿ, ಪಿನ್ ಹಾಕುತ್ತಾ, ಕಾಲೇಜಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಮುಟ್ಟಿದರೆ ಮುನಿ ಗಿಡ ಕಂಡರೆ, ಕಾಲ್ಬೆರಳುಗಳಲ್ಲಿ ಮಾತನಾಡಿಸುತ್ತಾ, ಎಲೆಯ ಮೇಲಿನ ಇಬ್ಬನಿ ಅಂಗಾಲಿಗೆ ತಾಕಿದಾಗ ಕಂಪಿಸುತ್ತಾ, ಒಂದೊಂದೇ ಹೆಜ್ಜೆ ಇಡುತ್ತಾ ಕನಸಿಗೆ ಜಾರಿಬಿಡುತ್ತಿದ್ದ ಹುಡುಗಿ. ಹಾಗೇ ಕನಸುಗಣ್ಣಿನಲ್ಲೇ ಅಪ್ಪ ನೋಡಿದ ಸಂಬಂಧಕ್ಕೆ ಹೂ ಅಂದಳು, ಅಪ್ಪ ಹೇಳಿದ ಸಮಯಕ್ಕೆ ತಾಳಿಗೆ ಕೊರಳೊಡ್ಡಿದಳು, ಡಿಗ್ರಿ ಪರೀಕ್ಷೆ ಇನ್ನೂ ಕೆಲವೇ ವಾರ ಇತ್ತು, ಅಪ್ಪ ಹೇಳಿದ್ದಕ್ಕೆಂದೂ ಒಲ್ಲೆ ಎನ್ನದ ಹುಡುಗಿ ಗೆಳತಿಯರ ನಡುವಲ್ಲಿ ಮಾತನಾಡುತ್ತಿದ್ದವಳು ಎದ್ದು ಹೋಗಿ ಮಂಟಪದಲ್ಲಿ ಕೂತಳು. ಅದೇ ಕಡೇ ದಿನ, ಆಮೇಲೆಂದೂ ಅವಳು ಕನಸನ್ನು ಕಾಣಲೇ ಇಲ್ಲ.
ಅವಳಿಗೆ ಯಾರಿಗೂ ಎದಿರುತ್ತರ ನೀಡಿ ಅಭ್ಯಾಸವೇ ಇರಲಿಲ್ಲ, ಅವನಿಗೆ ಅವಳನ್ನು ಮಾತನಾಡಿಸುವ ಅಗತ್ಯವೇ ಕಾಣಲಿಲ್ಲ. ಹದಿನೆಂಟರ ಹುಡುಗಿಗೆ ದಾಂಪತ್ಯ ಏನು ಎಂಬುದರ ಅರಿವೇ ಇರಲಿಲ್ಲ, ಹಾಗಾಗಿ ಅವಳು ಕಳೆದುಕೊಂಡದ್ದೇನು ಅಂತಲೂ ಅವಳಿಗೆ ಆಗ ಗೊತ್ತಾಗಲಿಲ್ಲ. ಅವನು ಅವಳ ನಗುವನ್ನು ದ್ವೇಷಿಸುತ್ತಿದ್ದ, ಅವಳ ಯೌವನವನ್ನು ದ್ವೇಷಿಸುತ್ತಿದ್ದ, ಅವಳ ಜೀವನ ಪ್ರೀತಿಯನ್ನು ದ್ವೇಷಿಸುತ್ತಿದ್ದ. ಮುಂಜಾನೆ ಅವಳು ರಂಗೋಲಿಗೆಂದು ಇಡುತ್ತಿದ್ದ ಚುಕ್ಕಿಗಳಿಂದ ಹಿಡಿದು, ಮನೆಕೆಲಸ ಮಾಡುವಾಗ ಅವಳು ಹಾಡುತ್ತಿದ್ದ ಹಾಡುಗಳು, ಇಷ್ಟ ಪಟ್ಟು ಬರೆದಿಡುತ್ತಿದ್ದ ಕವಿತೆಯ ಸಾಲು, ಏನೇ ಆಗಲಿ ಏರದ ಅವಳ ದನಿ ಎಲ್ಲವನ್ನೂ ದ್ವೇಷಿಸುತ್ತಿದ್ದ. ಎಂದೂ ದನಿ ಎತ್ತಿ ಮಾತನಾಡದ, ಯಾರನ್ನೂ ಪ್ರಶ್ನಿಸದ, ಯಾರೊಂದಿಗೂ ಜಗಳವಾಡದ, ಎಲ್ಲರ ಬಳಿಯೂ ಪ್ರಿಯವಾದುದನ್ನೇ ಮಾತನಾಡುತ್ತಿದ್ದ ಆ ಪ್ರಿಯಂವದೆ ಕಡೆಗೊಂದು ದಿನ ಸದ್ದಿಲ್ಲದೆ ಮದುವೆ ಸೀರೆ, ಒಡವೆ ಕಳಚಿಟ್ಟು ಮನೆಯಿಂದ ಹೊರ ನಡೆದಳು. ಆ ಮೌನಗೌರಿಯ ಮೋಹದ ಕೈ ಖಾಲಿಯಾಗಿಯೇ ಉಳಿಯಿತು.
ಅವಳ ಮುಂದಿದ್ದದ್ದು ಎರಡು ದಾರಿ, ಅವನ ಕುಂದು-ಕೊರತೆ, ಮನಸ್ಸಿನ ಕೀಳರಿಮೆ, ಅನುಮಾನ ಎಲ್ಲವನ್ನೂ ಎಲ್ಲರೆದಿರೂ ಬಿಚ್ಚಿಟ್ಟು, ಅವನನ್ನು ದ್ವೇಷಿಸುವುದು, ಅಥವಾ ಬದುಕನ್ನು ಮತ್ತೊಮ್ಮೆ ಪ್ರೀತಿಸುವುದು. ಅವಳು ಅವನ ಮೇಲಿನ ಕೋಪಕ್ಕಿಂತ ಹೆಚ್ಚಾಗಿ, ಬದುಕನ್ನು ಪ್ರೀತಿಸಿದಳು. ಅವನು ಬದುಕನ್ನು ಮತ್ತಷ್ಟು ಅಸಹನೀಯವಾಗಿಸಲು ಮುಂದಾದ, ಅವಳು ಜೀವನವನ್ನು ಇನ್ನಷ್ಟು ಪ್ರೀತಿಸಿದಳು. ಅವನು ಅವಳ ನಗುವನ್ನು ದ್ವೇಷಿಸುತ್ತಿದ್ದ, ಅವಳು ನಗುವನ್ನು ತನ್ನ ಮೂಗಿನ ನತ್ತಾಗಿ ಧರಿಸಿದಳು. ಆಮೇಲೆಂದೂ ಸುಲಭಕ್ಕೆ ಅಳಲಿಲ್ಲ ಅವಳು. ವರ್ಷಗಳ ಹಿಂದೆ ನೋಡಿದ್ದ ಆ ಅದೇ ಹೆಣ್ಣು ಮೊನ್ನೆ ಮತ್ತೆ ಸಿಕ್ಕಿದ್ದಳು, ಕೆ ಎಚ್ ಕಲಾಸೌಧದಲ್ಲಿ.
ಸುಷ್ಮಾ ಮತ್ತು ಸ್ನೇಹ ಕಪ್ಪಣ್ಣ ತಮ್ಮ ’ಥೇಮಾ’ ತಂಡದಿಂದ ’ಇಲ್ಲಾ……ಅಂದ್ರೆ…. ಇದೆ’ ನಾಟಕವನ್ನು ರಂಗದ ಮೇಲೆ ಬಿಡಿಸಿಡುತ್ತಿದ್ದರು. ನನ್ನ ಕಣ್ಣಲ್ಲಿ ಅದೇ ಕನಸುಕಂಗಳ ಹುಡುಗಿಯ ಚಿತ್ರ ಕದಲುತ್ತಿತ್ತು. ’ಥೇಮಾ’ ತಂಡದ ಮೊದಲ ನಾಟಕದ ಮೊದಲ ಪ್ರದರ್ಶನ ಅದು. ಸುಷ್ಮಾ ಪ್ರೀತಿಯ ಗೆಳತಿ. ಆಕೆಯ ಎನರ್ಜಿ, ರಂಗ ಪ್ರೀತಿ, ಮಾತನಾಡುವಾಗ ಕಣ್ಣಲ್ಲಿ ಹೊಳೆಯುವ ಉತ್ಸಾಹ ಎಲ್ಲಾ ನನಗಿಷ್ಟ. ನಿಜ ಹೇಳುತ್ತೇನೆ, ನಾಟಕದ ಬಗ್ಗೆ ಏನೂ ನಿರೀಕ್ಷೆಗಳಿಲ್ಲದೆ, ಗೆಳತಿಯ ನಾಟಕ ಎನ್ನುವ ಕಾರಣಕ್ಕೆ ಹೋಗಿದ್ದು ನಾನು. ಆದರೆ ನಾಟಕ ಶುರುವಾದ ಕೆಲವೇ ನಿಮಿಷಗಳಲ್ಲಿ ನಾಟಕ ನನ್ನನ್ನು ಕೈವಶ ಮಾಡಿಕೊಂಡಿತ್ತು. ಸುಷ್ಮಾ ಮತ್ತು ಸ್ನೇಹ ಒಂದು ಅದ್ಭುತ ನಾಟಕವನ್ನು ಕಣ್ಣೆದಿರು ಬಿಚ್ಚಿಡುತ್ತಾ ಹೋದರು. ನಾನು ಸಂಪೂರ್ಣವಾಗಿ ನಾಟಕದಲ್ಲಿ ಕಳೆದುಹೋಗಿದ್ದೆ.
ನಾಟಕ ಶುರುವಾಗುವುದು ಏರ್ ಪೋರ್ಟ್ ನ ಲೌಂಜ್ ನಲ್ಲಿ, ಪ್ಲೇನಿಗಾಗಿ ಕಾಯುತ್ತಾ ನಿಂತ ಇಬ್ಬರು ಮಹಿಳೆಯರು. ಒಬ್ಬಳು ವಿಜ್ಞಾನಿ, ರಾಕೆಟ್ ಸೈಂಟಿಸ್ಟ್, ವಿದೇಶದ ಯೂನಿವರ್ಸಿಟಿ ಒಂದರಲ್ಲಿ ಪೇಪರ್ ಪ್ರೆಸೆಂಟ್ ಮಾಡಲು ಹೋಗುತ್ತಿದ್ದಾಳೆ. ಮತ್ತೊಬ್ಬಳು ಚಿತ್ರ ಕಲಾವಿದೆ, ವಿದೇಶದಲ್ಲಿ ತನ್ನ ಚಿತ್ರಗಳ ಪ್ರದರ್ಶನ ಮುಗಿಸಿಕೊಂಡು ಬರುತ್ತಿದ್ದಾಳೆ. ಮೊದಲನೆಯವಳು ಹಣತೆ, ಇನ್ನೊಬ್ಬಳು ಸುರು ಸುರು ಬತ್ತಿ, ಒಮ್ಮೊಮ್ಮೆ ಹೂಕುಂಡ, ಆಗಾಗ ಆಟಂ ಬಾಂಬ್. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು.
ಮಾತನಾಡುತ್ತಾ ಆಡುತ್ತಾ ಇಬ್ಬರ ಲೋಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಂತಹ ಕಡುಜಾಣೆಯಾದ ವಿಜ್ಞಾನಿ ದಾಂಪತ್ಯದಲ್ಲಿ ದುರಾದೃಷ್ಟವಂತೆ. ಗಂಡನ ಅಹಂ, ದಬ್ಬಾಳಿಕೆ, ಎಲ್ಲವನ್ನೂ ಸಹಿಸುವ ಭೂದೇವಿಯಂತಹ ಅವಳು ಕಡೆಗೊಂದು ದಿನ ಗಂಡ ಗರ್ಭದಲ್ಲಿರುವ ಹೆಣ್ಣು ಮಗುವನ್ನು ತೆಗೆಸಿಬಿಡು ಎಂದು ಕಟ್ಟಪ್ಪಣೆ ಮಾಡಿದಾಗ ಮನೆಯಿಂದ ಹೊರನಡೆದಿರುತ್ತಾಳೆ. ಮಗಳನ್ನು ಹೆರುತ್ತಾಳೆ, ಜೀವನವನ್ನು ಕಟ್ಟಿಕೊಳ್ಳುತ್ತಾಳೆ. ಎಲೆಯ ಮರೆಯ ಮಲ್ಲಿಗೆಯಂತಹ ಹೆಣ್ಣು ಈಕೆ, ಈಕೆಯ ’ಇಲ್ಲಾ’ ಎಂದರೆ ಬಹುಮಟ್ಟಿಗೆ ನಾಚಿಕೆಯ, ಸಂಕೋಚದ ’ಇದೆ’.
ಇನ್ನೊಬ್ಬ ಹೆಣ್ಣು ಚಿತ್ರಕಲಾವಿದೆ, ಹಳೆಯ ಗೆಳತಿಯ ಎದುರಿಗೆ ಇವಳು ಚಿತ್ರಿಸುತ್ತಾ ಹೋಗುವ ದಾಂಪತ್ಯದ ಲೋಕ ಆ ಗೆಳತಿಗೆ ಹೊಸತು, ’ಸಾಧ್ಯವೇ?’ ಅನ್ನಿಸುವಂಥದ್ದು. ಅವಳೆದುರಿಗೆ ಈ ಅಂಜುಮಲ್ಲಿಗೆ ಇಷ್ಟಿಷ್ಟೇ ಇಷ್ಟಿಷ್ಟೇ ಅರಳುತ್ತಾ ಹೋಗುತ್ತಾಳೆ. ನಗುತ್ತಾಳೆ, ತನ್ನ ಮದುವೆಯ ಮೊದಲ ದಿನಗಳ ಸಂಭ್ರಮವನ್ನು ನೆನೆಯುತ್ತಾಳೆ, ಮನೆಯಿಂದ ಹೊರಗೆ ಬಂದದ್ದು ನೆನೆಯುತ್ತಾಳೆ, ಇಲ್ಲ ಇಲ್ಲ ಅನ್ನುತ್ತಲೇ ತನ್ನ ಸಹೋದ್ಯೋಗಿಯ ಮೆಚ್ಚುಗೆಯ ನೋಟದ ಬಗ್ಗೆಯೂ ಹೇಳಿಬಿಡುತ್ತಾಳೆ. ಮನದಲ್ಲೇ ಇರುವ ಮತ್ತೊಂದು ಸಂಬಂಧದ ಬಗೆಗಿನ ಹಿಂಜರಿಕೆ, ಹೆದರಿಕೆಯನ್ನು ಸುರಭಿಯ ಮಾತು ಕೇಳಿ ವಾಶ್ ಬೇಸಿನ್ನಿನಲ್ಲಿ ಉಗಿದಂತೆ ಉಗಿದು ನಿವಾರಿಸಿಕೊಳ್ಳುತ್ತಾಳೆ. ನಾಟಕ ಮುಂದುವರಿದಂತೆಲ್ಲಾ ಈ ಮಲ್ಲಿಗೆ ಮೆಲ್ಲನೆ ಅರಳಲಾರಂಭಿಸುತ್ತದೆ.
ಈ ಅಂಜುಮಲ್ಲಿಗೆಯಲ್ಲಿ ಪರಿಮಳ ತುಂಬುವ ಆ ಸುರಭಿಯಾದರೂ ಎಂಥವಳು… ಸುರಭಿಯ ಪಾತ್ರದಲ್ಲಿ ಸುಷ್ಮಾ ಥೇಟ್ ಸುಷ್ಮಾ, ಅಥವಾ ಸುಷ್ಮಾ ಇರುವುದೇ ಥೇಟ್ ಸುರಭಿಯ ರೀತಿ. ಇಡೀ ರಂಗಸ್ಥಳದುದ್ದಕ್ಕೂ ಓಡಾಡುತ್ತಾ, ತನ್ನ ಮತ್ತು ತನ್ನ ಸುರಭನ ಕಥೆ ಹೇಳುತ್ತಾ, ಗೆಳತಿಗೆ ಧೈರ್ಯ ತುಂಬುತ್ತಾ, ನಮ್ಮನ್ನು ನಗಿಸುತ್ತಾ ಮತ್ತು ಅದೇ ಸಮಯದಲ್ಲಿ ಬೆಚ್ಚಿಬೀಳಿಸುವ ಸತ್ಯಗಳನ್ನು ಬಿಂದಾಸ್ ಆಗಿ ಹೇಳುತ್ತಾ ಸುಷ್ಮಾ ನಮ್ಮನ್ನು ಸಮ್ಮೋಹನಕ್ಕೊಳಪಡಿಸಿಬಿಡುತ್ತಾರೆ.
ನಾಟಕದ ಶಕ್ತಿ ಇರುವುದು ನಿಮಿಷಗಳು ಉರುಳಿದಂತೆಲ್ಲಾ ಅದು ಅನಾವರಣಗೊಳಿಸುವ ಅನೇಕ ಪದರಗಳಲ್ಲಿ, ಹೇಳುವ ತಣ್ಣನೆಯ ಸತ್ಯಗಳಲ್ಲಿ, ನೋವನ್ನು ರೋದನೆಯನ್ನಾಗಿಸದೆ. ಮೌನವಾಗಿಸಿ ಅದಕ್ಕಿತ್ತ ಘನತೆಯಲ್ಲಿ. ಮತ್ತು ಅದಕ್ಕೂ ಮೀರಿದುದನ್ನೇನೋ ಈ ನಾಟಕ ನಮ್ಮೆದಿರು ತೆರೆದಿಟ್ಟ ರೀತಿಯಲ್ಲಿ. ಇಲ್ಲಿ ಹೆಣ್ಣು ಅನುಭವಿಸುವ ನೋವು, ಸಂಕಟ, ದಬ್ಬಾಳಿಕೆ, ಮೇಲಿನ ಹುದ್ದೆಯಲ್ಲಿರುವುದನ್ನು ಸಹಿಸದ ಗಂಡಿನ ಅಸಹಕಾರ, ಉದ್ಧಟತನ, ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ ಎಲ್ಲಾ ಇದೆ. ಆದರೆ ಆ ಸಂಕಟ ಇಲ್ಲಿ ಕೇವಲ ಒಂದು ಹಳಹಳಿಕೆಯಾಗಿ, ’ಅಯ್ಯೋ’ ಎನ್ನುವ ಕಂಬನಿಯಾಗಿ, ಎದೆ ಕರಗಿಸುವ ಆಕ್ರಂದನವಾಗಿ ನಿಂತಿಲ್ಲ. ಅದನ್ನೂ ಮೀರಿ ಇದು ಹೆಣ್ಣಿನಲ್ಲಿರುವ ಅಂತಃಸ್ತೈರ್ಯ ಮತ್ತು ಅಂತಃಶಕ್ತಿಯ ಬಗ್ಗೆ ಹೇಳುತ್ತದೆ. ಮಹಿಳಾವಾದ ಇಲ್ಲಿ ಮಾತಿನ ಧಾಟಿ ಆಗಿಲ್ಲ, ಠೇಂಕಾರ ಆಗಿಲ್ಲ, ಬದುಕಿನ ರೀತಿ ಆಗಿದೆ. ನನ್ನದೊಂದು ನಂಬಿಕೆ, ಸ್ತ್ರೀವಾದ ಎಂದರೆ ಪುರುಷ ದ್ವೇಷವಲ್ಲ, ಆಗಬಾರದು. ಸ್ತ್ರೀವಾದ ಎಂದರೆ ಬದುಕಿನ ಪ್ರೀತಿ, ತನ್ನ ಹೆಣ್ತನದ ಬಗೆಗಿನ ಗೌರವವೇ ಹೊರತು, ಗಂಡಿನ ಬಗೆಗಿನ ಸಿಟ್ಟಲ್ಲ. ಇಲ್ಲಿನ ಹೆಣ್ಣುಗಳು ಅದೇ ಜೀವನ ಪ್ರೀತಿಯವರು, ನಗುವನ್ನು ಮೂಗುತಿಯನ್ನಾಗಿಸಿಕೊಂಡು, ಮುಖವೆತ್ತಿ ನಕ್ಕವರು.
ಒಮ್ಮೆ ವಸು ಮಳಲಿ ಮಾತನಾಡುತ್ತಾ, ’ಪ್ರತಿ ದಿನ ನೀರೆರಚಿ ಅಳಿಸಿದರೂ ಅಷ್ಟೇ ಶೃದ್ಧೆಯಿಂದ, ಅಷ್ಟೇ ಪ್ರೀತಿಯಿಂದ, ಅಷ್ಟೇ ಸುಂದರವಾಗಿ ರಂಗೋಲಿ ಬಿಡುವ ಹೆಣ್ಣಿನ ಪಾಸಿಟಿವ್ ಮನೋಭಾವ’ದ ಬಗ್ಗೆ ಮಾತನಾಡಿದ್ದರು. ಇಲ್ಲಿದ್ದದ್ದು ಥೇಟ್ ಅದೇ ಜೀವನಪ್ರೀತಿ ಮತ್ತು ಪಾಸಿಟಿವ್ ಮನೋಭಾವ. ಇಲ್ಲಿರುವ ಇಬ್ಬರ ಮನೋಧರ್ಮ, ಗುಣಧರ್ಮ ಎರಡೂ ಭಿನ್ನ. ಜೀವನ ತಮ್ಮೆಡೆಗೆ ಎಸೆಯುವ ಚೆಂಡಿಗೆ ಅವರು ಬ್ಯಾಟು ಬೀಸುವ ರೀತಿಯೂ ಭಿನ್ನ. ವಿಜ್ಞಾನಿಯದು ರಕ್ಷಣಾತ್ಮಕ ಆಟ, ಕಲಾವಿದೆಯದು ಆಕ್ರಮಣಕಾರಿ ಆಟ. ಆದರೆ ಇಬ್ಬರೂ ಬಂಡೆಯಂತೆ ನಿಂತು ಆಟ ಆಡುವವರು. ಜೋರಾಗಿ ಮಾತನಾಡಲೂ ಹಿಂಜರಿಯುವ ಹುಡುಗಿ ತನ್ನ ಕೈ ಕೆಳಗೆ ಕೆಲಸ ಮಾಡುವ ಕೆಲಸಗಾರ ತಾನು ಹೆಣ್ಣು ಎನ್ನುವ ಒಂದೇ ಕಾರಣಕ್ಕೆ ಅವಿಧೇಯತೆ ತೋರಿಸಿದಾಗ, ಗಂಡ ಗರ್ಭದಲ್ಲಿರುವ ಹೆಣ್ಣುಕೂಸನ್ನು ತೆಗೆಸಿಬಿಡು ಎಂದು ಒತ್ತಡ ಹಾಕಿದಾಗ ಬಂಡೆಯಂತೆ ಕಾಲು ನೆಲಕ್ಕೂರಿ ನಿಂತುಬಿಡುತ್ತಾಳೆ.
ತಮಾಷೆ ಮಾಡುತ್ತಾ, ಗೆಳತಿಯ ಕಾಲೆಳೆಯುತ್ತಾ, ಅವಳನ್ನು ಹುರಿದುಂಬಿಸುತ್ತಾ ಇರುವ ಕಲಾವಿದೆಯ ಬದುಕಿನಲ್ಲಿ ಸಹ ಅವಳು ಹೇಳದೇ ಉಳಿದ ಸತ್ಯ ಇದೆ. ನಾಟಕದ ಶುರುವಿನಿಂದಲೂ ’ಅರೆ ಇಂತಹ ಜೀವನವೂ ಇರಬಹುದಾ’ ಎಂದು ನೋಡುತ್ತಿರುವಾಗ ಕಡೆಯಲ್ಲಿ ಅವಳ ಜೀವನದ ವಾಸ್ತವ ಸಹ ಈಚೆಗೆ ಬರುತ್ತದೆ. ಒಮ್ಮೆ ಬೆಚ್ಚುತ್ತಾಳೆ ಗೆಳತಿ, ಒಮ್ಮೆ ಬೆಚ್ಚುತ್ತೇವೆ ನಾವೂ ಸಹ. ಆದರೆ ’ಇಲ್ಲ, ಇಲ್ಲ ತನಗೇನೂ ನೋವಿಲ್ಲ ಎಂದು ಹೇಳುವ ಆ ಕಡೆಯ ದೃಶ್ಯದಲ್ಲಿ ಸುಷ್ಮ ಅಭಿನಯ ನೋಡಿ ಕಣ್ಣುತುಂಬಿ ಬಂದುಬಿಡುತ್ತದೆ. ಈ ಪಟಾಕಿಯ ಜೀವನದಲ್ಲಿ ಸಹ ದುಖಃ ’ಇಲ್ಲಾ…… ಅಂದ್ರೆ….. ಇದೆ’. ಆದರೆ ಇರುವ ಈ ದುಖಃಕ್ಕೆ ಈ ಹೆಣ್ಣುಗಳು ನಗುವಿನ ಕೂಲಿಂಗ್ ಗ್ಲಾಸ್ ತೊಡಿಸಲು ಕಲಿತಿರುತ್ತಾರೆ. ಪ್ರಪಂಚವನ್ನು ಬದಲಾಯಿಸಲು ಸಾಧ್ಯವಿಲ್ಲ, ಅದಕ್ಕಾಗಿ ಅಳುತ್ತಾ ಕೂರುವ ಬದಲು ನಮ್ಮ ನಮ್ಮ ಕಣ್ಣುಗಳಿಗೆ ಧೈರ್ಯದ, ಆತ್ಮ ವಿಶ್ವಾಸದ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವುದು ಲೇಸು ಎನ್ನಿಸುವಾಗ ನಾಟಕ ಮುಗಿಯುತ್ತದೆ.
ಮೊದಲನೆಯದಾಗಿ ಇಂತಹ ಒಂದು ಸಂವೇದನಾಶೀಲವಾದ ವಿಷಯವನ್ನು ಅಷ್ಟೇ ಸೂಕ್ಷ್ಮವಾಗಿ ನಾಟಕವನ್ನಾಗಿಸಿದ ಶೈಲೇಶ್ ಕುಮಾರ್ ರವರಿಗೆ ಅಭಿನಂದನೆಗಳನ್ನು ಹೇಳಬೇಕು. ಇದನ್ನು ಅಷ್ಟೇ ಪರಿಣಾಮಕಾರಿಯಾಗಿ ನಿರ್ದೇಶಿಸಿದ ನಿರ್ದೇಶಕಿ ಸುಷ್ಮಾ ಮತ್ತು ಕಲಾವಿದೆ ಸುಷ್ಮಾ, ಪಾತ್ರದೊಳಗಿನ ಎಲ್ಲಾ ಪದರಗಳನ್ನೂ ನಮ್ಮೆದೆಗೆ ಮುಟ್ಟಿಸಿದ ಸ್ನೇಹ ಕಪ್ಪಣ್ಣ ಇಬ್ಬರಿಗೂ ಅಭಿನಂದನೆಗಳು.
ರಂಗಭೂಮಿಯ ರಂಗಸಜ್ಜಿಕೆಯ ಬಗ್ಗೆ ವಿಶೇಷ ಮೆಚ್ಚುಗೆ. ರಂಗಭೂಮಿಯ ಮೇಲಿರುವ ನಾಲ್ಕು ಪಟಗಳನ್ನು ಅತ್ತಿತ್ತ ತಿರುಗಿಸುತ್ತಾ, ತಿರುಗಿಸುತ್ತಾ ಅದೆಷ್ಟು ದೃಶ್ಯಗಳು ಪ್ರತ್ಯಕ್ಷವಾಗಿಬಿಡುತ್ತವೆ. ಕಲಾವಿದರು ಮಿಂಚಿನ ವೇಗದಲ್ಲಿ ಬದಲಾಯಿಸುತ್ತಿದ್ದ ವಸ್ತ್ರಗಳು, ಬೆಳಕು, ಸಂಗೀತ ಎಲ್ಲವೂ ಕಥೆಗೆ ಪೂರಕ. ನಾಟಕ ನೋಡುತ್ತಾ, ನೋಡುತ್ತಾ ನಾವು ಅನೇಕ ದೃಶ್ಯಗಳಲ್ಲಿ ನಗುತ್ತಿದ್ದೆವು. ಆದರೆ ನಮ್ಮ ಮನಸ್ಸಿನಲ್ಲೂ ಒಂದು ಶಾಲ್ಮಲೆ ಹರಿಯುತ್ತಿತ್ತು, ನೆನಪಿನ ಶಾಲ್ಮಲೆ, ವಾಸ್ತವದ ಅರಿವಿನ ಶಾಲ್ಮಲೆ. ಮಾತಿಲ್ಲದ, ಮಾತಾಗದ ನೋವಿನ ಶಾಲ್ಮಲೆ. ನಾಟಕ ಮತ್ತು ಕಲಾವಿದರು ಅಲ್ಲಿ ಗೆದ್ದಿದ್ದರು.
ಮೊದಲ ಪ್ರದರ್ಶನದ ಕೆಲವು ತೊದಲುಗಳನ್ನು ಹೊರತುಪಡಿಸಿದರೆ ನಾಟಕ ನೋಡನೋಡುತ್ತಲೇ ನಮ್ಮದಾಯಿತು. ಕೊನೆಯಲ್ಲಿ ಕಾಡಿದ್ದು ಒಂದು ಪ್ರಶ್ನೆ, ಇಲ್ಲಿ ಇಬ್ಬರೂ ನೋವನ್ನು ನಿರಾಕರಿಸುತ್ತಲೇ ನೋವನ್ನು ಎದುರಿಸಿದವರು. ಹಾಗೆ ನಿರಾಕರಿಸುವ ಬದಲು, ಒಪ್ಪಿಕೊಂಡೇ ನೋವನ್ನು ಎದುರಿಸುವುದು ಮುಂದಿನ ಹೆಜ್ಜೆ ಆಗಬೇಕಲ್ಲವೆ. ನಾಟಕದ ಕೊನೆಯಲ್ಲಿ, ಪಾತ್ರಗಳ ನಡುವೆ ಆತ್ಮೀಯತೆ ಬೆಳೆದಾಗ, ಆಗಲಾದರೂ ’ಇಲ್ಲಾ ಅಂದ್ರೆ ಇಲ್ಲ, ಇದೆ ಅಂದ್ರೆ ಇದೆ’ ಅಂತಾದರೆ ಸೊಗಸಲ್ಲವೇ?
ಅದಿರಲಿ, ನಾಟಕವನ್ನು ಮತ್ತಷ್ಟು ನಮ್ಮದಾಗಿಸಿಕೊಳ್ಳಬೇಕಾಗಿದೆ, ’ಸುಷ್ಮಾ, ಮುಂದಿನ ಪ್ರದರ್ಶನ ಯಾವಾಗ?’.





ಸಂಧ್ಯಾ ಜಿ, ನಾಟಕದ ಅಕ್ಷರ ನಿನಾದ ನಿಜಕ್ಕೂ ಸುಮಧುರ ಇಂಪನ್ನು ಸೃಷ್ಟಿಸಿದೆ.
ಇದು ನನ್ನ ಫೇವರಿಟ್ ನಾಟಕವೂ ಹೌದು. ಸಂಧ್ಯಾ ತುಂಬ ಚೆನ್ನಾಗಿ ಬರ್ದಿದ್ದೀ
ನಾಟಕಗಳು ಬೆಂಗಳೂರಲ್ಲಿ ಮಾತ್ರವಾ…? ತುಂಬಾ ಒಳ್ಳೆಯ ಬರಹ…ಥ್ಯಾಂಕ್ಸ್ ಸಂದ್ಯಾ ಮೇಡಂ
ನಾನೂ ಇಂದು ಈ ನಾಟಕ ನೋಡಿದೆ ಮನೋಜ್ಞ ಅಭಿನಯ ಚುರುಕಿನ ನಡೆದ ನುಡಿ ,ಲವಲವಿಕೆ ಎಲ್ಲವೂ ತುಂಬಾ ಇಷ್ಟವಾಯಿತು