ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"Oh my! those are lovely earrings"

1990-91-
ಭಾರತದಲ್ಲಿ ಟೆಲಿವಿಷನ್ ಕ್ರಾಂತಿ ಆರಂಭ ಆಗಿದ್ದ ದಿನಗಳವು. ಪಡ್ಡೆಗಳಿಗೆ ಅಂದೆಲ್ಲ ಕಿಕ್ಕು ಕೊಡುವ ಕಾರ್ಯಕ್ರಮ ಎಂದರೆ ಚಿತ್ರಹಾರ್ ಮಾತ್ರ .
ಜನತೆ ಕ್ರಿಕೆಟ್ಟನ್ನು ಸರ್ಕಾರಿ ಚಾನೆಲ್ಲಿನಲ್ಲೇ ನೋಡಬೇಕಿತ್ತು. ಆ ಸಮಯದಲ್ಲೆ ಕ್ರಿಕೆಟ್ಟಿಗೂ “ಟೆಸ್ಟ್ ಕ್ರಿಕೆಟ್ಟನ್ನು” ಉಳಿಸಿಕೊಳ್ಳುವ ದರ್ದು ಕಾಡುತ್ತಿತ್ತು. ಅಲ್ಲಿಯತನಕ ರೇಡಿಯೋ ಕಾಮೆಂಟರಿ ಕೇಳಿ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಿದ್ದ ಜನರಿಗೆ ಕಾಮೆಂಟೇಟರ್ ಗಳು ಕ್ರಿಕೆಟ್ಟನ್ನು ಟೆಲಿವಿಷನ್ ಮೂಲಕ ಅರೆದುಣ್ಣಿಸಲಾರಂಭಿಸಿದ್ದರು.
rajaram-tallur-columnದಿನಪೂರ್ತಿ ಕ್ರಿಕೆಟ್ ನಡೆಯುತ್ತಿದ್ದಾಗ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕಾಮೆಂಟೇಟರ್ ಗಳಿಗೆ “ಎಕ್ಸ್ ಫ್ಯಾಕ್ಟರ್” ಬೇಕಿತ್ತು. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ನಂತಹ ದೇಶಗಳಲ್ಲಿ ಅಯಾಚಿತವಾಗಿ ಸಿಕ್ಕಿದ ಇಂತಹದೊಂದು ಎಕ್ಸ್ ಫ್ಯಾಕ್ಟರ್ ಎಂದರೆ ಅಲ್ಲಿನ ಹವಾಮಾನದ ಕಾರಣದಿಂದಾಗಿ ಬೇಸಿಗೆಯುಡುಗೆಗಳಲ್ಲಿ ಬರುತ್ತಿದ್ದ ವೀಕ್ಷಕರು. ಕ್ಯಾಮರಾಮನ್  ಓವರ್ ಗಳ ನಡುವೆ ಖಾಲಿ ಜಾಗದಲ್ಲಿ ಚೆಂದದ ಯುವತಿಯರ ಮುಖಕ್ಕೆ ಕ್ಯಾಮರಾ ಜೂಮ್ ಮಾಡಿದಾಗ ಹೆನ್ರಿ ಬ್ಲೋಫೆಲ್ಡ್, “oh my! those lovely earrings” ಎಂದು ಉದ್ಘರಿಸಿದರೆ ಇಡೀ ದೇಶ ರೋಮಾಂಚನಗೊಳ್ಳುತ್ತಿತ್ತು. ಆ ಕ್ಷಣದಲ್ಲೇ ಕ್ಯಾಮರಾ ಆ ಕಮ್ಮಿಯುಡುಗೆಯ ಯುವತಿಯರ ಮೈಮೇಲೆಲ್ಲ ಹರಿದಾಡಿ ಕ್ರಿಕೆಟಿನ ಕಾವನ್ನು ಇನ್ನಷ್ಟು ಏರಿಸುತ್ತಿತ್ತು.
ನಾನು ಕಂಡಂತೆ, ಇದು ಈ ದೇಶವನ್ನು ಟೆಲಿವಿಷನ್ನಿಗೆ ಅಂಟಿಸಿದ ಮೊದಲ ಅಂಟು. ಆ ದಿನಗಳಲ್ಲಿ ಆರಂಭಗೊಂಡ ನಮ್ಮ ಟೆಲಿವಿಷನ್ ಚಾನೆಲ್ಲುಗಳ ಪೀಪಿಂಗ್ ಟಾಮ್ ಸಿಂಡ್ರೋಮ್ (ಹಣಕಿಕ್ಕುವ ಕಾಯಿಲೆ) ಮುಂದೆ 1995ರ ವೇಳೆಗೆ ಖಾಸಗಿ ಚಾನೆಲ್ಲುಗಳ ಪ್ರವೇಶದೊಂದಿಗೆ ಉಲ್ಭಣಗೊಳ್ಳತೊಡಗಿ, ಈವತ್ತು ಪೂರ್ಣಪ್ರಮಾಣದ ರೋಗವಾಗಿ ಪರಿವರ್ತಿತವಾಗಿದೆ.
ಈಗೀಗ ಖಾಸಗಿ ಟೆಲಿವಿಷನ್ ಚಾನೆಲ್ಲುಗಳು, ಅದರಲ್ಲೂ ಸುದ್ದಿ ಚಾನೆಲ್ಲುಗಳಂತೂ ತಮ್ಮ ಹೊಟ್ಟೆಗೆ TRP ಬೇಕಾದಾಗಲೆಲ್ಲ ಇಂತಹ ಹಣಕಿಕ್ಕುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಲೇ ಬರುತ್ತಿವೆ.
ಪ್ರಿಂಟೂ ಹಿಂದಿಲ್ಲ
ಭಾರತದಲ್ಲಿ ಬೆಡ್ ರೂಮ್ ಸುದ್ದಿ ಪ್ರಕಟವಾದ ಮೊದಲ ಸಂದರ್ಭ ಎಂದರೆ, ಇಂದು ಕೇಂದ್ರದಲ್ಲಿ ಸಚಿವೆ ಆಗಿರುವ ಮನೇಕಾ ಗಾಂಧಿ ಅವರು 1978ರಲ್ಲಿ ತಮ್ಮ ಸಂಪಾದಕತ್ವದ ಪತ್ರಿಕೆ “ಸೂರ್ಯ” ದಲ್ಲಿ ಅಂದಿನ ಪ್ರಮುಖ ದಲಿತ ನಾಯಕರಲ್ಲೊಬ್ಬರಾಗಿದ್ದ ದಿ| ಬಾಬೂ ಜಗಜೀವನ್ ರಾಮ್ ಅವರ ಪುತ್ರನ ಬೆಡ್ ರೂಂ ಒಳಗಿನ ಚಟುವಟಿಕೆಗಳನ್ನು ಚಿತ್ರ ಸಹಿತ ದೇಶಕ್ಕೆ ಬಿತ್ತರಿಸಿದ್ದು. ಆ ಕಾಲದಲ್ಲೆ ಬಿಸಿಬಿಸಿ ದೋಸೆಯಂತೆ ಮೂರು ಬಾರಿ ಮರುಮುದ್ರಣಗೊಂಡು ಖರ್ಚಾಗಿ ಹೋದ ಚರಿತ್ರೆ ಈ ಬೆಡ್ ರೂಂ ಕಥೆಗಿದೆ.
ಅದಾಗಿ ಈಗ 38 ವರ್ಷಗಳು ಕಳೆದಿವೆ. ಈವತ್ತು ದೇಶದಾದ್ಯಂತ ಇರುವ ಸಾವಿರಕ್ಕೂ ಮಿಕ್ಕಿ ಚಾನೆಲ್ಲುಗಳು, ಖಾಸಗಿ ಕೇಬಲ್ಲುಗಳು ಪ್ರತಿದಿನ “ಕ್ರೈಂ ಸುದ್ದಿ” ಹೆಸರಲ್ಲಿ ಗಲ್ಲಿ ಗಲ್ಲಿಗಳ ಬೆಡ್ ರೂಂ ಗಳನ್ನು ತೋರಿಸತೊಡಗಿವೆ. ಮುದ್ರಣ ಮಾಧ್ಯಮಗಳಂತೂ ಚಾನೆಲ್ಲುಗಳ ಜೊತೆ ತಮ್ಮ ಸಾವು-ಬದುಕಿನ ಹೋರಾಟದಲ್ಲಿ ತಮ್ಮ ದೊಂಡೆಯನ್ನು ಇನ್ನಷ್ಟು ಎತ್ತರಿಸಿಕೊಂಡಿವೆ. ಜೊತೆಗೆ ಇಂಟರ್ ನೆಟ್ ಆಧರಿತ ಸುದ್ದಿ ಪೋರ್ಟಲ್ ಗಳು, ಸೋಷಿಯಲ್ ಮೀಡಿಯಾ ಕೂಡ ಈ ಡೋಬಿಘಾಟ್ ನಲ್ಲಿ ತಮ್ಮ ಪಾಲಿನ ಒಗೆತದ ಕೊಡುಗೆ ಕೊಡುತ್ತಿವೆ.
ಯಾಕೆ ಹೀಗೆ?
ದೇಶ ಸ್ವಾತಂತ್ರ್ಯ ಹೋರಾಟಕ್ಕೆ ಕರಪತ್ರವಾಗಿ ಜನಿಸಿದ ಭಾರತೀಯ ಪತ್ರಿಕೋದ್ಯಮಕ್ಕೆ, ಆಗ ಮುಂದೊಂದು ಗುರಿ ಇತ್ತು. 1947ರಲ್ಲಿ ಆ ಗುರಿ ಸಾಧನೆ ಆದ ಬಳಿಕ ಭಾರತೀಯ ಪತ್ರಿಕೋದ್ಯಮ ಸಂಪೂರ್ಣವಾಗಿ ದಿಕ್ಕುತಪ್ಪಿದೆ. ಈ ದಿಕ್ಕುತಪ್ಪುವಿಕೆಯ ಮೂಲ ಇರುವುದೂ ಅದರ “ಕರಪತ್ರ” ಹುಟ್ಟಿನಲ್ಲಿಯೇ.
whatsapp-image-2016-12-15-at-8-13-54-pmಕರಪತ್ರವೊಂದಕ್ಕೆ ಬೇಕಾದ ಸಿನಿಕತೆ, ರೋಚಕತೆ ಮತ್ತು ಅರಾಜಕತೆಗಳನ್ನು ರಕ್ತದಲ್ಲೇ ಹೊಂದಿರುವ ಭಾರತೀಯ ಪತ್ರಿಕೋದ್ಯಮ ದಿನ ಕಳೆದಂತೆ ಹೆಚ್ಚು ಹೆಚ್ಚು “ಉದ್ಯಮ” ಆಗುತ್ತಾ ಬಂತು; ಒಂದು ಉತ್ಪನ್ನವಾಗಿ ತನ್ನನ್ನು ತಾನು ಮಾರಿಕೊಳ್ಳುವುದಕ್ಕೆ, ಅದು ತನ್ನ ರಕ್ತಗುಣಗಳಲ್ಲಿ ಇನ್ನಷ್ಟು ಅನುರಕ್ತವಾಯಿತು.
ಈಗಿನ ಟೆಲಿವಿಷನ್ ಚಾನೆಲ್ಲುಗಳಲ್ಲಿನ ಸಿಬ್ಬಂದಿಗಳನ್ನು ಗಮನಿಸಿ. ಅವರಲ್ಲಿ ಕ್ಯಾಮರಾ ಹೊಂದಿರುವ ಕಾರಣಕ್ಕಾಗಿ ವರದಿಗಾರರಾಗಿ ಬೆಳೆದವರು, ಬಾಯಿ ಚಾಲಾಕಿ ಎಂಬ ಕಾರಣಕ್ಕಾಗಿ ಆಂಕರ್ ಆದವರೇ ಹೆಚ್ಚು ಹೊರತು ಸುದ್ದಿನಿಷ್ಟರು, ಭಾಷೆಯ ಮೇಲೆ ಹಿಡಿತ ಇರುವವರು ಎಂಬ ಕಾರಣಕ್ಕಾಗಿ ಚಾನೆಲ್ಲುಗಳಲ್ಲಿರುವವರ ಸಂಖ್ಯೆ ಇಲ್ಲವೆಂಬಷ್ಟು ಕಡಿಮೆ ಇದೆ.
ಕ್ಯಾಮರಾ ಎಲ್ಲೆಲ್ಲಿ ಓಡಾಡಿದರೆ, ಆಂಕರ್ ಏನೆಲ್ಲ ಉದ್ಘರಿಸಿದರೆ ನೋಡುಗರು ಇಷ್ಟಪಡುತ್ತಾರೆಂಬ 90ರ ದಶಕದ ಕ್ರಿಕೆಟ್ಟಿನ ಪಾಠವನ್ನು ಚೆನ್ನಾಗಿ ಅರೆದುಕುಡಿದಿರುವ ಭಾರತೀಯ ಟೆಲಿಪತ್ರಿಕೋದ್ಯಮ ಈವತ್ತು ಆ ಪಾಠದ ಕೊಳೆತು ಹುಳ ಹಿಡಿದ ಫೋಟೋಕಾಪಿಯಂತೆ ಕಾಣಿಸಲಾರಂಭಿಸಿದೆ.
ಯಾವುದು ಸುದ್ದಿ?
ಚಾನೆಲ್ಲುಗಳ ದೃಶ್ಯದಬ್ಬರ, ಪತ್ರಿಕೆಗಳ ಹೆಡಿಂಗುಗಳಬ್ಬರದ ನಡುವೆ ಯಾವುದು ಸುದ್ದಿ ಎಂಬುದನ್ನು ದೇಶ ಮರೆತೇ ಬಿಟ್ಟಿದೆ. ಇಲ್ಲಿನ ಬಹುಸಂಖ್ಯಾಕ ಬಡ ಜನರ ದೈನಂದಿನ ಗೋಳು, ಕೃಷಿಕನ ಮತ್ತು ಮಹಿಳೆಯರ ಬದುಕುವ ಹೋರಾಟ, ಅಲ್ಪಸಂಖ್ಯೆಯಲ್ಲಿರುವ ಬಲವಾನರ ಅಗಾಧ ಜೀರ್ಣಸಾಮರ್ಥ್ಯ, ಸಿರಿತನ-ಬಡತನಗಳ ನಡುವೆ ಹೆಚ್ಚುತ್ತಿರುವ ಅಂತರ, ಸಾರ್ವಜನಿಕ ಬದುಕಿನಲ್ಲಿ ಅಪ್ರಾಮಾಣಿಕತೆ, ತಾನು ಮಾತ್ರ ಬದುಕಿದರೆ ಸಾಕೆಂಬ ಸ್ವಾರ್ಥ, ಖಾಲಿಯಾಗುತ್ತಿರುವ ನೀರು, ಮಣ್ಣು, ಶ್ವಾಸ… ಈ ಪಟ್ಟಿ ಬಲುದೊಡ್ಡದು. ಆದರೆ ಇದ್ಯಾವುದೂ ಈವತ್ತಿಗೆ ಸುದ್ದಿ ಅಲ್ಲ.
ನನಗೆ ತೋರುತ್ತಿರುವ ಈವತ್ತಿನ ಪತ್ರಿಕೋದ್ಯಮಕ್ಕೆ  ಇರುವ ಏಕೈಕ ತಾರ್ಕಿಕ ತುದಿ ಎಂದರೆ, ಆ ಪತ್ರಿಕೆಯ/ಚಾನೆಲ್ಲಿನ ಸಂಪಾದಕರ ಮನೆಯ ಬೆಡ್ ರೂಮಿಗೆ ಈ ಪತ್ರಿಕೆಯವರ ಕ್ಯಾಮರಾ ಮತ್ತು ಈ ಪತ್ರಿಕೆಯ/ಚಾನೆಲ್ಲಿನ ಸಂಪಾದಕರ ಮನೆಯ ಬೆಡ್ ರೂಮಿಗೆ ಆ ಪತ್ರಿಕೆಯವರ ಕ್ಯಾಮರಾ!

‍ಲೇಖಕರು Admin

16 December, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading