ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Mr. ಗುರ್ಗುಂಟಿ’ಸ್ ವಿಮಾಲೋಕ

-ಜಯದೇವ ಪ್ರಸಾದ ಮೊಳೆಯಾರ
ಕಾಸು ಕುಡಿಕೆ-28
ಸಾಲವನು ಕೊಂಬಾಗ ಮೇಲೋಗರವುಂಡಂತೆ
ಸಾಲಿಗ ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ !
(ಸಾಲದ ಬಗ್ಗೆ ಬರಹಗಳನ್ನು ಓದಿ ಓದುಗರೊಬ್ಬರು ಕಳುಹಿಸಿದ್ದು. . . )
ಗುರುಗುಂಟಿರಾಯರ ದರ್ಶನವಿಲ್ಲದೆ ಒಂದು ರೀತಿಯ ಉದಾಸೀನದಿಂದ ಬಳಲುತ್ತಿದ್ದೆ. ಈ ಸಾಲದ ತಗಾದೆ ಆರಂಭವಾದಂದಿನಿಂದ ಅವರ ಸುದ್ದಿಯೇ ಇಲ್ಲ. ಬೇರೆ ಕೆಲವರೂ ಅದೇ ಭಾವನೆ ವ್ಯಕ್ತ ಪಡಿಸುತ್ತಿದ್ದರು. ಮೊನ್ನೆ ಮೊನ್ನೆಯಂತೂ ಒಂದು ಪತ್ರವೇ ಬಂದು ಬಿಟ್ಟಿತು- ಫ್ಯಾನ್ ಮೈಲ್! ‘ಉಡುಪಿ-ಮಣಿಪಾಲದ ಜನತೆ ನಾವು; ರಾಯರ ಸುದ್ದಿ ಇಲ್ಲದ ಕಾರಣ ಬೇಸರದಲ್ಲಿದ್ದೇವೆ, ಹೇಗಾದರೂ ಮಾಡಿ ಅವರನ್ನು ಒಮ್ಮೆ ಎಲ್ಲಿದ್ದರೂ ಕರೆದುಕೊಂಡು ಬನ್ನಿ’ ಎಂಬ ಒತ್ತಾಯಪೂರ್ವಕ ಕೇಳಿಕೆ.
ವ್ವಾರೆವ್ವಾ, ರಾಯರು ಇಷ್ಟು ಫೇಮಸ್ ಅಂತ ನನಗೆ ಗೊತ್ತೇ ಇರಲಿಲ್ಲ!


ರಿಸೀವರ್ ಎತ್ತಿ ರಾಯರಿಗೆ ಡಯಾಲಿಸಿಸ್ ಮಾಡಿದೆ. “ಹಲೋ. .” ರಾಯರ ದಪ್ಪ ದನಿ ಫೋನಿನಲ್ಲಿ ಕೇಳಿಸಿತು.
“ನಮಸ್ಕಾರ ರಾಯರೇ, ಕೆಲವು ವಾರ ಆಯ್ತು. ನಿಮ್ಮ ಸುದ್ದಿಯೇ ಇಲ್ಲ. ಎಲ್ರೂ ಕೇಳ್ತಾ ಇದ್ದಾರೆ. ಏನ್ ವಿಶೇಷ?” ವಿಚಾರಿಸಿದೆ.
“ವಿಶೇಷ ಎಲ್ಲ ನಿಮ್ಮದೇ. ಈಗೀಗ, ಜನರಿಗೆ ಸಾಲ ಮಾಡೋದು ಹೇಳ್ಕೊಡ್ತಾ ಇದ್ದೀರಾ, ಸೇವಿಂಗ್ಸ್ ಹೇಳ್ಕೊಡಿ. ಸಾಲದ ವಿಷ್ಯ ಎಲ್ಲ ಯಾಕೆ?”
“ಇಲ್ಲ ಹಾಗೇನೂ ಇಲ್ಲ. ಅದೂ ಕೆಲವೊಮ್ಮೆ ಬೇಕಾಗ್ತದೆ ಅಲ್ವ? ಅದ್ರಲ್ಲೂ ಬಹಳಷ್ಟು ಹೊಂಡಗಳು ಇರ್ತದಲ್ವಾ? ಅದಕ್ಕೇ ಸ್ವಲ್ಪ ವಿವರ ಕೊಟ್ಟಿದ್ದೇನೆ ಅಷ್ಟೆ”
“ಹೊಂಡಕ್ಕೆ ಎನಾಗ್ಬೇಕು ಸ್ವಾಮೀ, ದುಡ್ಡಿದ್ದಲ್ಲಿ ಎಲ್ಲ ಹೊಂಡಗಳೂ ಇರ್ತವೆ. ನಮ್ಮ ಕರಾವಳಿ ಹೈವೇ ನೋಡಿದ್ರೆ ಗೊತ್ತಾಗುದಿಲ್ವಾ? ಅದಿರ್ಲಿ, ಮುಂದಿನ ಕಾಕುನಲ್ಲಿ ಏನ್ ವಿಷಯ?”
“ಇನ್ಶೂರನ್ಸ್ ಬಗ್ಗೆ ಬರ್ಯೋಣಾ ಅಂತ. ಆ ವಿಷಯ ಮುಟ್ಟಿಯೇ ಇಲ್ಲ.” ಅಂದೆ.
“ಎನೂ? ಇನ್ಶೂರನ್ಸ್ ಆ. . . ?? ನಂಗೂ ಆ ವಿಷಯದಲ್ಲಿ ಆಸಕ್ತಿ ಇದೆ. ಸ್ವಲ್ಪ ಡಿಸ್ಕಸ್ ಮಾಡೋಣ. ಈ ಬಾರಿ ಡಯಾನ, ಪರಿವಾರ್ ಎಲ್ಲ ಬೇಡ. ಹಾಂಗ್ಯೋದಲ್ಲಿ ಪಿಟ್ಜಾ ಹೊಡೆದರೆ ಹೇಗೆ?” ರಾಯರ ಉತ್ಸಾಹ ಫೋನಿನಿಂದ ಹೊರಹರಿದು ನನ್ನ ಕಿವಿಯನ್ನು ಒದ್ದೆ ಮಾಡಿತು.
ಭಲೇ Grrrr. . . ಗುಂಟಿ, ಈ ವಯಸ್ಸಿನಲ್ಲೂ ಪಿಟ್ಜಾವಾ??? ಕೂಲ್ ಮಾನ್ !! ಕೂಲ್!!
ಫೋನ್ ಕೆಳಗಿಟ್ಟು ಡ್ರೆಸ್ ಬದಲಿಸಲು ಎದ್ದು ಹೊರಟೆ.
+++++
ಒಂದು ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಅಕಸ್ಮಾತ್ತಾಗಿ ತೀರಿಕೊಂಡರೆ ಮತ್ತು ಬೇರೇನೂ ಸಂಪತ್ತು/ಆದಾಯವಿಲ್ಲದಿದ್ದಲ್ಲಿ ಆತನ ಸಂಸಾರವನ್ನು ಆರ್ಥಿಕವಾಗಿ ರಕ್ಷಿಸುವುದು ಆತನು ತನ್ನ ಜೀವದ ಮೇಲೆ ಮಾಡಿಟ್ಟ ಜೀವವಿಮೆ ಮಾತ್ರ. ವ್ಯಕ್ತಿ ಮೃತಪಟ್ಟಾಗ ಆತನ ಪಾಲಿಸಿಯ ಆಧಾರದ ಮೇಲೆ ವಿಮಾಕಂಪೆನಿಯು ಆತನ ಕುಟುಂಬಕ್ಕೆ ದುಡ್ಡು ನೀಡೀತು. ಹೋದ ಜೀವ ಎಂದಿಗೂ ಬಾರದಾದರೂ ಹೆಂಡತಿ ಮಕ್ಕಳಿಗೆ ಜೀವನಕ್ಕೆ ಅವಶ್ಯವಾದ ದುಡ್ಡನ್ನು ಒದಗಿಸೀತು. ಆ ದೃಷ್ಟಿಯಲ್ಲಿ ಜೀವವಿಮೆ ಅಥವ ಇನ್ಷೂರನ್ಸ್ ಎಂಬುದು ಒಂದು ಅದ್ಭುತವಾದಂತಹ ವಿತ್ತಸೃಷ್ಟಿ ಹಾಗೂ ಇದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ. ಪ್ರತಿಯೊಬ್ಬ ದುಡಿಯುವ ವ್ಯಕ್ತಿಯೂ ತನ್ನಲ್ಲಿ ಒಟ್ಟು ಇರುವ ಸಂಪತ್ತನ್ನು ಪರಿಗಣಿಸಿ ಕುಟುಂಬದ ಭವಿಷ್ಯಕ್ಕೆ ಬೇಕೆನಿಸುವ ಬಾಕಿ ಮೊತ್ತಕ್ಕೆ ಅಗತ್ಯವಿದ್ದಂತೆ ವಿಮೆಯನ್ನು ಮಾಡುವುದು ಅತ್ಯಂತ ಅವಶ್ಯ. ಅಲ್ಲದೆ, ಯಾವತ್ತಿಗೂ ಇಂತಹ ಮೂಲಭೂತ ಆವಶ್ಯಕತೆಯನ್ನು ದುಡಿಯುವ ಜೀವದ ಮೇಲೆಯೇ ಮಾಡಬೇಕು. ಅದರ ಉದ್ಧೇಶವೇ ಅದು. ಆದಾಯವಿರದ ಕುಟುಂಬದ ಸದಸ್ಯರ (ಉದಾ: ಹೆಂಡತಿ, ಮಕ್ಕಳ ಜೀವಗಳ ಮೇಲೆ) ಮೇಲೆ ವಿಮೆ ಮಾಡುವುದು ಅತ್ಯಂತ ಅರ್ಥಹೀನ ಹಾಗೂ ಸಮಸ್ಯಾಜನಕ. ಎಷ್ಟೋ ಏಜೆಂಟರೇ ಈ ರೀತಿ ಮಾಡಿಸುವುದು ಒಂದು ವಿಪರ್ಯಾಸ.
ಈ ಅರ್ಥದಲ್ಲಿ ಮಾಡುವ ವಿಮೆಯ ಸ್ಕೀಂಗಳಿಗೆ ‘ಟರ್ಮ್ ಪ್ಲಾನ್’ ಎಂದು ಹೆಸರು. ಟರ್ಮ್ ಪ್ಲಾನುಗಳು ಅತ್ಯಂತ ಅಗ್ಗ ಹಾಗೂ ಕಟ್ಟಿದ ಪ್ರೀಮಿಯಂ ದುಡ್ಡು ವಾಪಾಸು ಬರಲಾರದು. ಆ ದುಡ್ಡಿಗೆ ವಿಮೆಯ ಸೌಲಭ್ಯ ಮಾತ್ರ. ಬೇರೆ ಯಾವುದೇ ಆರ್ಥಿಕ ರಿಟರ್ನ್ ಇರುವುದಿಲ್ಲ. ವ್ಯಕ್ತಿ ತೀರಿಕೊಂಡರೆ ಮಾತ್ರ ವಿಮಾ ಮೊತ್ತ ಲಭಿಸುತ್ತದೆ. ಬದುಕಿ ಉಳಿದರೆ ಏನೂ ಇಲ್ಲ- ಮೋಟಾರು ವಿಮೆಯಂತೆ. ಇದೇ ನೈಜವಾದ ವಿಮೆ. ತಮ್ಮ ತಮ್ಮ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದು ಅಗತ್ಯವಿದ್ದವರಿಗೆ ಅತ್ಯಂತ ಅಗತ್ಯ; ಎಷ್ಟು ವೆಚ್ಚವಾದರೂ ಕೂಡಾ. ಅಗತ್ಯವಿಲ್ಲದವರಿಗೆ ಅಗತ್ಯವಿಲ್ಲ; ಬೇಡ! ಅದೊಂದು ಕೌಟುಂಬಿಕ-ಸಂದರ್ಭಾಧಾರಿತ ಪ್ರಶ್ನೆ. ಕಂಪ್ಯೂಟರ್ ಲೆಕ್ಕಾಚಾರ ಅಲ್ಲವೇ ಅಲ್ಲ!
ವಿಮೆಯ ಬಗ್ಗೆ ಇಷ್ಟು ಅರ್ಥವಾದರೆ ಸಾಕು. ಮತ್ತು ಇಷ್ಟು ಮಾತ್ರ ಅರ್ಥವಾದರೆ ಸಾಕು. ಇದರಿಂದ ಹೆಚ್ಚು ಅರ್ಥ ಮಾಡಿಕೊಳ್ಳಲು ಹೋಗಬಾರದು, ಯಾಕೆಂದರೆ ಇದರಲ್ಲಿ ಇದಕ್ಕಿಂತ ಜಾಸ್ತಿ ಅರ್ಥ ಮಾಡಿಕೊಳ್ಳಲು ಏನೂ ಇಲ್ಲ. ಅಲ್ಲದೆ, ಅರ್ಥವಿಲ್ಲದೆಡೆ ಅರ್ಥ ಮಾಡಿಕೊಳ್ಳಲು ಹೋದರೆ ಅಪಾರ್ಥ ಮಾತ್ರ ಆಗುತ್ತದೆ.
‘ಆದ್ರೆ, ಕೊಟ್ಟ ದುಡ್ಡು ಗೋವಿಂದ ಅಂದ್ರೆ ಅದೇನ್ಸಾರ್ ಅರ್ಥ?’ ಇದು ಹೆಚ್ಚಿನವರಿಗೆ ಜೀರ್ಣಿಸಲಾರದ ಮಾತು. ಏನಾದ್ರು ಒಂಚೂರು ಪ್ರತಿಫ ಬರಲೇ ಬೇಕಲ್ಲವೇ? ಗುರುಗುಂಟಿರಾಯರೂ ಪಿಟ್ಜಾವನ್ನು ಕತ್ತಿ-ಮುಳ್ಳುಗಳಲ್ಲಿ ಕುಕ್ಕುತ್ತಾ ಇದನ್ನೇ ಕೇಳುತ್ತಾರೆ. ಪಾಲಿಸಿ ಮಾರುವ ಏಜೆಂಟರಂತೂ ಈ ರೀತಿಯ ಟರ್ಮ್ ಪಾಲಿಸಿಗಳ ಬಗ್ಗೆ ನಿಮ್ಮತ್ರ ಮಾತನಾಡುವುದೂ ಇಲ್ಲ.
ಇದೇ ಕಾರಣಕ್ಕಾಗಿ ವಿಮೆಯು ಭಾರತದಲ್ಲಿ ಬಹುತೇಕ ಒಂದು ಹೂಡಿಕೆ-ಕಮ್-ವಿಮೆಯ ಸಾಧನವಾಗಿ ಬೆಳೆದುಬಂದಿದೆ. ಇದಕ್ಕೆ ಕಟ್ಟುವ ಪ್ರೀಮಿಯಂ ಮೇಲೆ ೮೦ ಸಿ ಸೆಕ್ಷನ್ ಅಡಿ ಕರವಿನಾಯತಿ ಇದೆ. ಅಲ್ಲದೆ, ವಿಮಾ ಕಂಪೆನಿಯಿಂದ ವಾಪಾಸು ಪಡೆಯುವ ಮೊತ್ತದ ಮೇಲೆ ೧೦(೧೦ಡಿ) ಯಡಿ ದೀರ್ಘಾವಧಿಯ ಪಾಲಿಸಿಗಳಿಗೆ ಸಂಪೂರ್ಣ ಕರವಿನಾಯಿತಿಯೂ ಇದೆ. ಈ ನಿಟ್ಟಿನಲ್ಲಿ ಪ್ಯೂರ್ ಇನ್ಶೂರನ್ಸ್ ಆದ ಟರ್ಮ್ ಪ್ಲಾನ್‌ಗಳಲ್ಲದೆ ವಿಮೆ ಮತ್ತು ಹೂಡಿಕೆಯ ಹಲವಾರು ಹೈಬ್ರಿಡ್ ಪ್ಲಾನ್‌ಗಳು ಹುಟ್ಟಿಕೊಂಡಿವೆ.
[ಅವಲ್ಲದೆ, ಜೊತೆಗೆ Critical illness rider, Double accident benefit, Disability benefits ಇತ್ಯಾದಿ ‘ರೈಡರ್’ ಅಥವ ಹೆಚ್ಚುವರಿ ಸೌಲಭ್ಯಗಳೂ ಇವೆ. ಸ್ವಲ್ಪ ಜಾಸ್ತಿ ಪ್ರೀಮಿಯಂಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ. ವಿವರಗಳಿಗೆ ಪ್ರತಿ ಪಾಲಿಸಿಯ ಬ್ರೋಶರ್ ನೋಡಿಕೊಳ್ಳಿ]
ಈವಾಗ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸೌಲಭ್ಯಗಳ ಕಾಂಬಿನೇಶನ್ ಉಳ್ಳ ಹಲವಾರು ರೀತಿಯ ಹೈಬ್ರಿಡ್ ಪಾಲಿಸಿಗಳು ಚಾಲ್ತಿಯಲ್ಲಿವೆ. ಹೂಡಿಕೆಯ ದೃಷ್ಟಿಕೋನದಿಂದ ಸ್ಥೂಲವಾಗಿ ಈ ರೀತಿ ವಿಭಾಗಿಸಿಕೊಳ್ಳಬಹುದು:
೧. With Profits policies (ಎಂಡೋಮೆಂಟ್/ಹೋಲ್ ಲೈಫ್/ಮನಿ ಬ್ಯಾಕ್ ಪ್ಲಾನ್‌ಗಳು) = ಟರ್ಮ್ ಪ್ಲಾನ್ + ಸಾಲ/ಡೆಟ್ (ಸರಕಾರೀ ಮತ್ತು ಇತರ) ಗಳಲ್ಲಿ ಹೂಡಿಕೆ.
೨. Market linked policies (ಯುನಿಟ್ ಲಿಂಕ್ಡ್ ಇನ್ಶೂರನ್ಸ್ ಪ್ಲಾನ್/ಯುನಿಟ್ ಲಿಂಕ್ಡ್ ಪೆನ್ಶನ್ ಪ್ಲಾನ್) = ಟರ್ಮ್ ಪ್ಲಾನ್ + ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ.
ಮೊದಲಿನ With profits ಸ್ಕೀಂಗಳಲ್ಲಿ ಪ್ರತಿವರ್ಷ ವಿಮಾಸಂಸ್ಥೆ ಸಾಲಪತ್ರಗಳಲ್ಲಿ ಮಾಡಿದ ತನ್ನ ಹೂಡಿಕೆಯ ಆಧಾರದಲ್ಲಿ ಬಂದ ಲಾಭವನ್ನು ವಿಮಾ ಮೊತ್ತದ (Sum assured) ಮೇಲೆ ಹಂಚುತ್ತದೆ. ಸಾವಿರಕ್ಕೆ ಇಂತಿಷ್ಟು ಅಂತ ‘ಬೋನಸ್’ ಹೆಸರಿನಲ್ಲಿ ಇದು ನಿಮ್ಮ ಪಾಲಿಸಿಯಲ್ಲಿ ಜಮೆಯಾಗುತ್ತದೆ. ಇದು ಸಾಕಷ್ಟು ಸೇಫ್ ಮತ್ತು ಊಹ್ಯವಾಗಿರುತ್ತದೆ. ಬೋನಸ್ ಎಂಬುದು ವಿಮಾ ಮೊತ್ತದ ಮೇಲೆಯೇ ಹೊರತು ಕಟ್ಟಿದ ಪ್ರೀಮಿಯಂನ ಮೇಲೆ ಅಲ್ಲ. ಇದನ್ನು ಸರಳ ಮತ್ತು ನೇರವಾಗಿ ಬ್ಯಾಂಕು/ಪಿ.ಪಿ.ಎಫ್ ಬಡ್ಡಿದರಗಳೊಡನೆ ಹೋಲಿಸುವುದು ಸಾಧ್ಯವಾಗುವುದಿಲ್ಲ. ಸ್ವಲ್ಪ ಲೆಕ್ಕಾಚಾರದ ಕಸರತ್ತು ಮಾಡಬೇಕಾಗಿ ಬರುತ್ತದೆ.
ಎರಡನೆಯ market linked ಸ್ಕೀಂನಲ್ಲಿ ಶೇರು ಮಾರುಕಟ್ಟೆಯಲ್ಲಿ (ಇಕ್ವಿಟಿ ಅಥವ ಡೆಟ್) ಗಳಲ್ಲಿ ನಿಮ್ಮ ದುಡ್ಡು ಹೂಡಿಕೆಯಾಗುತ್ತದೆ. ಅದರಲ್ಲಿ ಪ್ರತಿಫಲ ಬಂದಂತೆ ನಿಮ್ಮ ಪಾಲಿಸಿಗೆ ಯುನಿಟ್ಸ್‌ಗಳ ಮೂಲಕ ಜಮೆಯಾಗುತ್ತದೆ. ಪಾಲಿಸಿಯ ಕೊನೆಯಲ್ಲಿ ಅಥವ ಪಾಲಿಸಿದಾರ ಮೃತಪಟ್ಟಲ್ಲಿ ವಿಮಾ ಮೊತ್ತ ಹಾಗೂ ಬೋನಸ್ ಅಥವ ಯುನಿಟ್ಸ್ ಸಿಗುತ್ತದೆ. ಪ್ರತಿಫಲವು ಮಾರುಕಟ್ಟೆಯ ಎರಿಳಿತವನ್ನು ಹೊಂದಿಕೊಂಡಿದೆ.
ಈ ಹೈಬ್ರಿಡ್‌ಗಳ ಆರ್ಥಿಕ ವಿಶ್ಲೇಷಣೆ ಹೇಗೆ? ಇನ್ಶೂರನ್ಸ್ ಅನ್ನು ಒಂದು ಕೌಟುಂಬಿಕ, ಸಾಮಾಜಿಕ ಹಾಗೂ ಭಾವನಾತ್ಮಕ ನೆಲೆಯಲ್ಲಿ ನೋಡಬಹುದಾದರೆ, ಹೂಡಿಕೆಯ ಪ್ರಶ್ನೆ ಬಂದಾಕ್ಷಣ ಅದನ್ನು ಬರೇ ವಿತ್ತೀಯ ದೃಷ್ಟಿಕೋನದಲ್ಲಿಯೇ ನೋಡಬೇಕಾಗುತ್ತದೆ.
ಸ್ಥೂಲವಾಗಿ ಹೇಳುವುದಾದರೆ, ವಿಮಾ ಪಾಲಿಸಿಗಳಲ್ಲಿ ಮಾಡುವ ಹೂಡಿಕೆ ಇತರ ತತ್ಸಮ ಹೂಡಿಕೆಗಳಿಂದ ಸಧ್ಯದ ಪರಿಸ್ಥಿತಿಯಲ್ಲಿ ತುಸು ಕಡಿಮೆಯಾಗಿಯೇ ಕಂಡುಬರುತ್ತದೆ. ಆದರೆ ಇದು ಬ್ಯಾಂಕ್ ಬಡ್ಡಿದರ, ವಿಮೆಯ ಪ್ರೀಮಿಯಂ, ಬೋನಸ್, ಏಜೆಂಟರ ಕಮಿಶನ್, ಆದಾಯಕರ ನೀತಿ ಇತ್ಯಾದಿ ವಿಷಯಗಳನ್ನು ಹೊಂದಿಕೊಂಡು ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಒಂದೊಂದು ವಿಮಾ ಕಂಪೆನಿಯ ಒಂದೊಂದು ಸ್ಕೀಮಿಗೂ ಬೇರೆ ಬೇರೆ ಫಲಿತಾಂಶ ಬರುತ್ತದೆ. ವಿಮಾ ಹೂಡಿಕೆಯ ಆರ್ಥಿಕ ಪ್ರತಿಫಲವನ್ನು ವಿವರವಾಗಿ ಮುಂದಿನ ವಾರಗಳಲ್ಲಿ ಮೇಲಿನ ಎರಡೂ ಸ್ಕಿಂಗಳಿಗೂ ಪ್ರತ್ಯೇಕ ಪ್ರತ್ಯೇಕವಾಗಿ ನೋಡೋಣ.
ನೆನಪಿಡಿ:
-ಯಾವುದೇ ಪಾಲಿಸಿ ಕೊಳ್ಳುವ ಮೊದಲು ಅದರ ವಿವರಗಳನ್ನು ಸರಿಯಾಗಿ ತಿಳಿದುಕೊಂಡು ಎಲ್ಲಾ ರೀತಿಯ ‘ಅನಾಲಿಸಿಸ್-ಪರಾಲಿಸಿಸ್’ ಮಾಡಿಯೇ ಮುಂದುವರಿಯಿರಿ. ಸಾಕಷ್ಟು ತೌಲನಿಕ ಅಧ್ಯಯನ ಮಾಡದೆ ಯಾವ ಪಾಲಿಸಿಯಲ್ಲೂ ದುಡ್ಡು ಹೂಡಬೇಡಿ.
-ಏಜೆಂಟರನ್ನು ದಾಕ್ಷಿಣ್ಯಭಾವದಿಂದ ನಂಬಿ ಕಣ್ಣುಮುಚ್ಚಿ ಎಂದಿಗೂ ಸಹಿ ಹಾಕಬೇಡಿ. ಅವರಲ್ಲಿ ಹೆಚ್ಚಿನವರಿಗೆ ಸಂಪೂರ್ಣ ಮಾಹಿತಿ ತಿಳಿದಿರುವುದಿಲ್ಲ. ಒಂದೊಂದು ಸ್ಕೀಂಗೆ ಒಂದೊಂದು ತರದ ಏಜೆಂಟ್ ಕಮಿಶನ್ ಇರುತ್ತದೆಂಬುದನ್ನೂ ಮರೆಯಬೇಡಿರಿ.
-ಬರೇ ಬಾಯಿ ಮಾತಲ್ಲ, ಲಿಖಿತ ರೂಪದಲ್ಲಿದೆ ಎಂದು ಪಾಂಪ್ಲೆಟ್‌ಗಳನ್ನೂ ನಂಬಬೇಡಿ. ಅನಧಿಕೃತವಾದ, ತಪ್ಪು ಮಾಹಿತಿ ನೀಡುವ, ವಿಮಾ ನಿಯಂತ್ರಣ ಖಾಯಿದೆಗೆ ವಿರುದ್ಧವಾದ ಪಾಂಪ್ಲೆಟ್‌ಗಳು ಅಚ್ಚು ಆಗಿ ನಿಮ್ಮ ಕೈಸೇರುತ್ತವೆ. ತುಸು ಎಚ್ಚರದಲ್ಲಿ ಇರುವುದು ಉತ್ತಮ.
– ಹೊಸ ಖಾಸಗಿ ವಿಮಾ ಸಂಸ್ಥೆಗಳ ಬಗ್ಗೆ ಜಾಸ್ತಿ ಎಚ್ಚರವಿರಲಿ. ನಿಮಗೆ ವಿಮೆ ಮಾಡಲು ಹೊರಟ ಆ ಸಂಸ್ಥೆಗೇ ವಿಮೆಯಿದೆಯೇ ಎಂದು ಮೊದಲು ಕೇಳಿಕೊಳ್ಳಿ. (ಅದೇನೂ ಇರುವುದಿಲ್ಲ ಬಿಡಿ.)
ಅಟ್ಯಾಚ್‌ಮೆಂಟ್:
Life Insurance Corporation of India
ನನ್ನ ತೀರ್ಥರೂಪರಾದ ದಿವಂಗತ ಶ್ರೀ M.G.Bhat (ಗಣಪತಿ ಮೊಳೆಯಾರ) ಸುಮಾರು ಇಪ್ಪತ್ತು ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಕೆಲಸ ಮಾಡಿ ಸಾವಿರಾರು ಜನರ ಜೀವವಿಮೆ ಮಾಡಿ ಕೊನೆಗೊಂದು ದಿನ ತನ್ನ ೪೫ ನೇ ವಯಸ್ಸಿನಲ್ಲಿ ತೀರಿಕೊಂಡರು. ಇತರರಿಗೆ ಬೋಧಿಸುವುದನ್ನು ತಾನು ಮಾಡಿತೋರಿಸುವ ಅವರು ಸ್ವಂತ ಜೀವದ ಮೇಲೆ ಮಾಡಿದ ವಿಮೆಯೇ ಅಂದು ನಮಗೆ ಆರ್ಥಿಕ ಆಧಾರವಾಗಿ ನಿಂತಿತ್ತು. ಇಂದು ನಾನು ಈ ಮಟ್ಟಿಗೆ ಬೆಳೆಯಲು ಅವರ ಆ ದೂರದೃಷ್ಟಿಯೇ ಕಾರಣ. ಅಲ್ಲದೆ, ನನಗೆ ಎಲ್ಲೈಸಿ ಸಂಸ್ಥೆಯ ಮೇಲೆ ಹಾಗೂ ಜೀವವಿಮೆ ಎಂಬ ಪರಿಕಲ್ಪನೆಯ ಮೇಲೆ ಅಪಾರ ಪ್ರೇಮ ಹಾಗೂ ಗೌರವವಿದೆ. ಇತ್ತೀಚೆಗಿನ ದಿನಗಳಲ್ಲಿ ಮಾತ್ರ ಈ ಸಂಸ್ಥೆಯ ಸೇಲ್ಸ್ ಮ್ಯಾನೇಜ್‌ಮೆಂಟ್ ಮತ್ತು ಜನಸಾಮಾನ್ಯರನ್ನ್ನು ಯುಲಿಪ್‌ನಂತಹ ಸ್ಕೀಂಗಳತ್ತ ಎಳೆದೊಯ್ಯುವ ರೀತಿಯನ್ನು ನೋಡಿದರೆ ಬೇಸರವಾಗುತ್ತದೆ.
ಯಾವಾಗ ಯಾರಿಗೆ ಏನಾಗುತ್ತದೋ ಗೊತ್ತಿಲ್ಲ. ಆದ್ದರಿಂದ ದಯವಿಟ್ಟು ಬೇರೇನು ಮಾಡದಿದ್ದರೂ ಪರವಾಗಿಲ್ಲ. ಜೀವವಿಮೆಯೊಂದನ್ನು ಮಾತ್ರ ಖಂಡಿತಾ ಮಾಡಿಸಿಕೊಳ್ಳಿ. ಮರೆಯಬೇಡಿ. ಇದು ನನ್ನ ವೈಯಕ್ತಿಕ ವಿನಂತಿ.

‍ಲೇಖಕರು avadhi

20 September, 2010

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading