ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

#Me Too… ಎಂಬ ಕಾರ್ಪೊರೇಟ್ ಫೆಮಿನಿಸಂ

#Me Too…’ ಇದೊಂದು ಕಾರ್ಪೋರೇಟ್ ಫೆಮಿನಿಸಂ

ಕಳೆದ ಕೆಲವು ತಿಂಗಳ ಹಿಂದೆ ತೆಲುಗಿನ ಶ್ರೀರೆಡ್ಡಿ ಎಂಬ ನಟಿ ಬಹಿರಂಗವಾಗಿ ಟಾಲಿವುಡ್ ನ ಘಟಾನುಘಟಿ ನಾಯಕರಿಗಿದೆ ಎನ್ನಲಾಗುವ ಸ್ತ್ರೀ ಚಪಲಗಳನ್ನು ಬಯಲಿಗೆಳೆದಳು. ಈ ಹಿಂದೆಯೇ ಸೆಕ್ಸ್ ಬಾಂಬ್ ಎಂದೇ ಖ್ಯಾತಿ ಪಡೆದ ನಟಿ ಸಿಲ್ಕ್ ಸ್ಮಿತಾಳ ಜೀವನಾಧಾರಿತ ಸಿನಿಮಾ ಕೂಡ ಬಂದು ಹೋಗಿದ್ದು, ಅದರಲ್ಲಿ #Me Too ಎಂಬುದನ್ನು ದೃಶ್ಯ ರೂಪದಲ್ಲೆ ನಿರೂಪಿಸಲಾಗಿತ್ತು.

ಈಗ ಕೇಂದ್ರ ಸಚಿವ ಎಂ ಜೆ ಅಕ್ಬರ್, ಸಂಗೀತ ನಿರ್ದೇಶಕ ರಘು ದೀಕ್ಷಿತ್, ಚಿತ್ರರಂಗದ ಖ್ಯಾತನಾಮರಾದ ವಿಕಾಸ್ ಬೆಹ್ಲ್, ಅನುರಾಗ್ ಕಶ್ಯಪ್, ಆಲೋಕ್ ನಾಥ್, ವಿಕ್ರಮಾದಿತ್ಯ ಮೊಟ್ವಾನೆ, ಕೈಲಾಸ್‍ಖೇರ್, ತಮಿಳು ಚಿತ್ರಸಾಹಿತಿ ವೈರಮುತ್ತು ಅವರುಗಳನ್ನೆಲ್ಲಾ ಈ ಮೀ ಟೂ ಸುತ್ತಿಕೊಂಡು ಮುನ್ನುಗ್ಗುತ್ತಿದೆ. ಸದಾ ಸಂತ್ರಸ್ಥೆಯಾಗಿಯೇ ನರಳುವ ಹೆಣ್ಣು ಧೈರ್ಯವಾಗಿ ಈ #Me Too ಅಭಿಯಾನವನ್ನು ಹೂಡಿರುವಾಗ ಗಂಡು ಅದಕ್ಕೆ ಮುಖಮುಖಿಯಾಗಿ ಉತ್ತರಿಸುವ ಅನಿವಾರ್ಯತೆ ಎದುರಿಸಲೇಬೇಕಾಗಿದೆ.

ಆದರೆ ಈ #Me Too ಅಭಿಯಾನ ಒಂದು ವಲಯದ ಅಭಿವ್ಯಕ್ತಿಯಾಗಿಯೋ, ಅಥವಾ ಸಲೆಬ್ರಿಟಿ ಲೋಕಕ್ಕೆ ಸೀಮಿತ ಘನತೆಯ ಸಂಗತಿಯಾಗಿದೆ. ಸೆಲೆಬ್ರಿಟಿ ಲೋಕದ ಹೆಣ್ಣುಗಳು ಮಿ.ಟೂ ಹೇಳಿದಷ್ಟು ಸಲೀಸಾಗಿ ,ನಿರ್ಭಯವಾಗಿ ಗಾರೆ ಕೆಲಸ ಮಾಡುವ , ಗಾರ್ಮೆಂಟ್ ನಲ್ಲಿ ದುಡಿಯುವ , ಹೊಟ್ಟೆ-ಬಟ್ಟೆಗಾಗಿ ಬೀದಿ ಬೀದಿಯಲ್ಲಿ ಚಿಂದಿ ಆಯುವ , ಸೋಪು-ಊದುಬತ್ತಿ, ಪಿನಾಯಿಲ್, ಚಾಪೆ ,ಕಸಪೊರಕೆ ಮಾರಲು ಮನೆ ಮನೆ ತಿರುಗುವ, ಮನೆಗೆಲಸ ಮಾಡುವ , ದೇವದಾಸಿ ಪದ್ದತಿಗೀಡಾದ, ಹಳ್ಳಿಗಳಲ್ಲಿ ಜೀತ ಮಾಡಿದ ಹೆಣ್ಣು ಮಕ್ಕಳು ಹೇಳಲು ಸಾಧ್ಯವೆ?

ಹಾಗೊಮ್ಮೆ ಹೇಳಿದ್ದೇ ಆದರೆ ಅದರಿಂದಾಗುವ ಪರಿಣಾಮಗಳನ್ನು ಎದುರಿಸಲು ಈ ಹೆಣ್ಣು ಮಕ್ಕಳಿಗೆ ಸಾಧ್ಯವೆ? ಪಿಹೆಚ್‍ಡಿ ಪಡೆಯಲು ಗೈಡ್ ಆದವನಿಗೆ ‘ಸಹಕರಿಸ’ ಬೇಕು ಎಂಬ ಕಿರುಕುಳಗಳನ್ನು , ಅತ್ಯಾಚಾರಗಳನ್ನು ಅಷ್ಟು ಸುಲಭವಾಗಿ ‘#Me Too…ಟ್ಯಾಗ್‍ಲೈನ್ ಹಾಕಿ ಘೋಷಿಸಲು ಆಗುವುದಿಲ್ಲ .

ಈಗ ಸಾಮಾಜಿಕ ಜಾಲತಾಣಗಳನ್ನು ಆಶ್ರಯಿಸಿ ನಡೆಯುತ್ತಿರುವ #Me Tooಅಭಿಯಾನ ಕೇವಲ ಒಂದು ಸೀಮಿತ ವಲಯಕ್ಕೆ ಸಂಬಂಧಿಸಿದ್ದು, ಇದೊಂದು ರೀತಿ ‘ಕಾರ್ಪೋರೇಟ್ ಫೆಮಿನಿಸಂ,’ ಅಸಲಿ ಭಾರತದ ಸ್ತ್ರೀ ಚಳುವಳಿಗೂ ಈಗ ನಡೆಯುತ್ತಿರುವ #Me Too ಗೂ ಯಾವುದೇ ಸಂಬಂಧವಿಲ್ಲ.

#Me Too ಹೆಸರಿನಲ್ಲಿ ಹೊರಹಾಕಲಾಗುತ್ತಿರುವುದರ ಇನ್ನೊಂದು ಮಗ್ಗಲು ಹೊರಳಿಸಿದರೆ ಅಲ್ಲಿ ಆ ಕಾಲಘಟ್ಟದ ‘ಅವಕಾಶ’ ಮತ್ತು ‘ಅಗತ್ಯತೆ’ ಯನ್ನು ಅವಲಂಬಿಸಿ ‘ಕೊಟ್ಟು ‘ – ‘ಪಡೆ’ ಯುವುದಾಗಿರುತ್ತದೆ ಎಂದಷ್ಟೆ ಹೇಳಬಹುದೇನೋ. ಅದಕ್ಕೊಂದು ಆರೋಪದ ಹೊದಿಕೆ ಈಗ ಹೊದಿಸಲಾಗುತ್ತಿದೆ. ಅಂದ ಮೇಲೆ ಇದು ಒಂದು ಅಭಿಯಾನವಾಗಲಿ, ಚಳವಳಿಯೆಂದಾಗಲಿ ಭಾವಿಸಲು ಸಾಧ್ಯವಿಲ್ಲ. ಇದು ಈ ದೇಶದ ಸಮಗ್ರ ಮಹಿಳಾ ಚಳುವಳಿ ಎಂದು ಭಾವಿಸುವುದು ತಪ್ಪಾಗುತ್ತದೆ ಮತ್ತು ‘#Me Too ಅಭಿಯಾನ ಈ ದೇಶದ ಸಮಗ್ರ ಮಹಿಳಾ ಚಳುವಳಿಯನ್ನು ಕಟ್ಟಿಕೊಡುವುದಿಲ್ಲ ಎಂಬುದನ್ನು ನಾವು ಪ್ರಜ್ಞಾಪೂರ್ವಕವಾಗಿ ಗ್ರಹಿಸಬೇಕಿದೆ.

ಓರ್ವ ನಟಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಜಾಗತಿಕವಾಗಿ ಪಡೆದಷ್ಟು ಪ್ರಾಮುಖ್ಯತೆ ಇದೇ ನಮ್ಮ ದಾನಮ್ಮ, ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ರೇಪ್ ಅಂಡ್ ಮರ್ಡರ್ ಗೆ ಯಾಕೆ ಸಿಗಲಿಲ್ಲ.? ಸಲೆಬ್ರಿಟಿಗಳು ಯಾಕೆ ಯಾರೊಬ್ಬರೂ ತಮ್ಮ ಟೀಟ್ವರ್ , ಇನ್ಸ್ಟಾಗ್ರಾಂ. ಮತ್ತಿತರ ಮಾಧ್ಯಮಗಳಲ್ಲಿ ಕಣ್ಣೀರು , ಆಗ್ರಹಗಳನ್ನು ಸುರಿಸಲಿಲ್ಲ.? ವರ್ತಮಾನದಲ್ಲೇ ಕೆಳಮಧ್ಯಮ ವರ್ಗದ ಮತ್ತು ಗ್ರಾಮೀಣ ಭಾರತದ ಹೆಣ್ಣು ಮಕ್ಕಳ ಮೇಲೆ ಇನ್ನೂ ನಡೆಯುತ್ತಿರುವ ಅದೆಷ್ಟೋ ದೌರ್ಜನ್ಯ, ಲೈಂಗಿಕ ಕಿರುಕುಳ, ಹತ್ಯೆಗಳು ಮೇಲ್ಮಧ್ಯಮ ವರ್ಗಗಳಿಗೆ ಮುಖ್ಯವಾಗುವುದಿಲ್ಲ.

ಇದೇ ಮೇಲ್ಮಧ್ಯಮ ವರ್ಗಗಳ ಹೆಣ್ಣುಗಳ ಮೇಲೆ ಆಗುವ ಹಲ್ಲೆ –ದೌರ್ಜನ್ಯ, ಅತ್ಯಾಚಾರಗಳನ್ನು ದೇಶದ ಸಮಸ್ತ ಹೆಣ್ಣುಗಳ ಸಮಸ್ಯೆ ಎಂದು ಬಿಂಬಿಸುವ ಯತ್ನಗಳು ಹಿಂದಿನಿಂದಲೂ ನಡೆಯುತ್ತಾ ಬಂದಿದೆ. 2016 ರ ಕ್ರೈಂ ವರದಿಯ ಪ್ರಕಾರ ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಹತ್ಯೆ, ಕಿರುಕುಳ, ಅಪಹರಣ ದಂತಹ ಕೃತ್ಯಗಳ ಪ್ರಮಾಣ ಶೇ 55.2 ರಷ್ಟಿದೆ. 2016 ರಲ್ಲಿ ದೇಶದಲ್ಲಿ 38.947 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳು ದಾಖಲಾಗಿದ್ದರೆ. 84.746ಜನ ಮಹಿಳೆಯರಿಗೆ ಲೈಂಗಿಕ ಕಿರುಕುಳ , ದೌರ್ಜನ್ಯ ನಡೆಸಿದ ಪ್ರಕರಣಗಳು ದಾಖಲಾಗಿವೆ.

ಈ ಪ್ರಮಾಣ ಏನನ್ನು ಸೂಚಿಸುತ್ತದೆ ಎಂಬುದನ್ನು ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆ, ಹಲ್ಲೆ , ಹಿಂಸೆ. ಕಿರುಕುಳವನ್ನು ವಿಂಗಡಿಸಿ ನೋಡಬೇಕಿಲ್ಲ. ನಮ್ಮೊಳಗೊಂದು ಸಂವೇದನೆಯನ್ನು ಕಾಯ್ದುಕೊಳ್ಳಲೇಬೇಕು.

#Me Tooಅಭಿಯಾನವನ್ನು ಭಾರತದ ಕೆಳಮಧ್ಯ್ಮಮ ವರ್ಗಗಳ ದನಿಯಾಗಿಯೂ ನೆಲಗೊಳಿಸಿದಾಗ ಅದು ಸಾಮಾಜಿಕ ಒಳಗೊಳ್ಳುವಿಕೆಯ ಚಳವಳಿಯಾಗಿ ಫಲನೀಡಬಹುದು. ಇಲ್ಲದೆ ಹೋದರೆ ಅದೊಂದು ಶ್ರೇಣಿಕೃತ ಸಂಚಿನ ಭಾಗವಾಗಿ ಕೇವಲ ಮನರಂಜನೆಯಾಗಿ ಉಳಿದು ಬಿಡುತ್ತದೆ.

ನಾನು ಆಗಿನ್ನೂ ಪತ್ರಕರ್ತನಾಗಿ ಕಾಲಿಟ್ಟ ದಿನಗಳು , ಅತ್ಯಂತ ಉತ್ಸಾಹ -ಹುರುಪಿನಿಂದ ಓಡಾಡುತ್ತಿದ್ದೆ. ಎಲ್ಲಿ ಯಾವುದೇ ಘಟನೆ ನಡೆದರೂ ಬಗಲಿಗೆ ಬ್ಯಾಗು ನೇತುಹಾಕಿಕೊಂಡು ಹೊರಟು ಬಿಡುತ್ತಿದ್ದೆ. ಅವತ್ತೊಂದು ದಿನ ನಮ್ಮೂರಿನ ಲಾಡ್ಜ್ ವೊಂದರ ಮೇಲೆ ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ಆಗಷ್ಟೆ ಬಂದಿದ್ದ ಖಡಕ್ ಸಬ್‍ ಇನ್ಸ್ಪೆಕ್ಟರ್ ರೇಡು ಹಾಕಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ‘ಗಂಡಸರು’ ಸಹಿತ 11 ಜನ ಮಹಿಳೆಯರನ್ನು ವ್ಯಾನಿಗೆ ತುಂಬಿಕೊಂಡು ಠಾಣೆಗೆ ಕರೆತಂದರು.

ಈ ಗುಂಪಿನಲ್ಲಿ ಬಹುತೇಕರು 30 ವರ್ಷದೊಳಗಿದ್ದರೆ ಇನ್ನೂ ಕೆಲವು 50 ದಾಟಿದವರೂ ಇದ್ದರು. ಇವತ್ತು ಭರ್ಜರಿ ಸುದ್ದಿ ಸಿಕ್ಕಿತು ಎಂದು ಠಾಣೆಗೆ ನುಗ್ಗಿದ ನನಗೆ ಸಾಲು ಕುಳಿತವರಲ್ಲಿ ಕೆಲವರು ಮುಖಮುಚ್ಚಿಕೊಂಡು ಬಿಕ್ಕಳಿಸುವುದು ಕಾಣಿಸುತ್ತಿತ್ತು.
ನನಗೊಂದು ಕುತೂಹಲವಿತ್ತು. ಈ ದಂಧೆಗೆ ಈಡಾದವರನ್ನು ಸಂದರ್ಶಿಸಬೇಕೆಂಬುದು . ಇದೇ ಸುಸಂದರ್ಭವೆಂದು ಸಬ್‍ ಇನ್ಸ್ಪೆಕ್ಟರ್ ಅವರ ಅನುಮತಿ ಪಡೆದು ಈ ಮಹಿಳೆಯರನ್ನು ಮಾತಾಡಿಸಲು ಶುರುಮಾಡಿದೆ.

ಒಬ್ಬೊಬ್ಬರದ್ದು ಒಂದೊಂದು ಕತೆ, ನೀವು ಈ ದಂಧೆಗೆ ಯಾಕೆ ಬಂದಿರಿ? ಎಲ್ಲರಂತೆ ನೀವು ಯಾಕೆ ಸಂಸಾರಸ್ಥರಾಗಿ ಗೌರವದಿಂದ ಬದುಕಬಾರದು? ಇದು ಹೀನ ಕೆಲಸವಲ್ಲವೇ? ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಉತ್ತರಗಳು ಬಂದಂತೆಲ್ಲಾ ನಾನು ಭಾವುಕನಾಗಿ ಕುಸಿಯುತ್ತಾ ಹೋದೆ. ನನ್ನ ತಂಗಿಯಂತ ,ತಾಯಿಯಂತ ಈ ಹೆಣ್ಣುಗಳು ಹೇಳುತ್ತಾ ಹೋದ ಕಥೆಗಳು ನನ್ನ ಕೈ ಕಾಲುಗಳನ್ನು ತಣ್ಣಗೆ ಮಾಡಿಬಿಟ್ಟವು.

‘ಸರ್. ನನ್ನನ್ನು 12ನೇ ವಯಸ್ಸಿಗೆ ದೇವದಾಸಿಯನ್ನಾಗಿಸಿಬಿಟ್ಟರು. ತುಂಬು ಕುಟುಂಬ ನಂದು, ಕೂಲಿ ಮಾಡಿ ಬದುಕು ದೂಡುತ್ತಿದ್ದೆವು , ಮುತ್ತುಕಟ್ಟಿ ಬೀದಿಗೆ ನೂಕಿದರು. ಏನೂ ಗೊತ್ತಿಲ್ಲದ ವಯಸ್ಸಿನಲ್ಲಿ ಎಲ್ಲವನ್ನೂ ಅನುಭವಿಸಿದ್ದಾಯಿತು. ಇದು ಸರಿಯಲ್ಲ ಎಂದು ಊರು ಬಿಟ್ಟು ಓಡಿ ಬಂದೆ, ಗೌರವದಿಂದ ಬದುಕಬೇಕೆಂದು ಕೆಲಸಕ್ಕೆ ಹೋದೆ. ಹೋದ ಕಡೆಯೆಲ್ಲೆಲ್ಲಾ ನನ್ನನ್ನು ಮಲಗಲು ಕರೆಯುವವರೆ. ಈ ಮಧ್ಯೆ ಗಂಡು ದಿಕ್ಕಿಲ್ಲದ ಬದುಕು ಭದ್ರವಲ್ಲ ಎಂದು ನಂಬಿ ಒಬ್ಬನನ್ನು ಮದುವೆಯಾದೆ. ಆತ ಕೈಗೆ ಒಂದು ಮಗು ಕೊಟ್ಟು ಓಡಿಹೋದ. ಮನೆ ಕೆಲಸಕ್ಕೆ ಹೋದರೆ ಮನೆ ಯಜಮಾನ ಮಂಚಕ್ಕೆ ಕರೆಯುತ್ತಾನೆ.

ಗಾರೆ ಕೆಲಸಕ್ಕೆ ಹೋದರೆ ಮೇಸ್ತ್ರಿ ಯಿಂದ ಹಿಡಿದು ಕಟ್ಟಡದ ಮಾಲೀಕನವರೆಗೂ ಗಂಡು ಜಾತಿ ನಾಯಿಗಳಂತೆ ಹಿಂದೆ ಬೀಳುತ್ತವೆ. ಅದೇ ‘ಗಂಡು’ ದಿಕ್ಕಿಲ್ಲದ ಹೆಣ್ಣು ಎಷ್ಟು ಸಲಿಗೆ ಸ್ವಾಮಿ. ? ನನಗೀಗ ಅರ್ಥವಾಯಿತು ಮಾನದಿಂದ ಬದುಕಲು ಸಾಧ್ಯವಿಲ್ಲ ಎಂಬುದು. ನನಗೀಗ ಮೂರು ವರ್ಷದ ಮಗುವಿದೆ. ಅದಕ್ಕೆ ಅನ್ನ ಮಾಡಿಟ್ಟು ಮಗುವನ್ನು ಕೂಡಾಕಿ ಲಾಡ್ಜ್ ಗೆ ಬರುತ್ತೇನೆ. ಇಲ್ಲಿ ಕಿರುಕುಳ ಇಲ್ಲ. ಯಾಕೆಂದ್ರೆ ಬಂದ ಗಂಡುಗಳಿಗೆಲ್ಲಾ ಸರೆಗು ಹಾಸೇ ಇರುತ್ತೇನೆ. ಗಂಡು ನನ್ನಿಂದ ಇದಿಷ್ಟೇ ಬಯಸೋದು, ಮಗುವಿಗಾಗಿ ಬದುಕಿದ್ದೇನೆ, ಶೋಕಿಗಾಗಿ ಈ ದಂಧೆಗೆ ಬಂದಿಲ್ಲ. ನಾನೀಗ ಮನೆಗೆ ಹೋಗಬೇಕು, ಮಗು ಹೇಲು-ಉಚ್ಚೇ ಮಾಡಿಕೊಂಡಿರುತ್ತೇ ಅದನ್ನು ಬಾಚಿ ಬಳೀಬೇಕು ನನ್ನನ್ನು ಇಲ್ಲಿಂದ ಬಿಡಿಸಿ. ಪಾಪಿ ಹೆಣ್ಣು ಜನ್ಮದಲ್ಲಿ ಹುಟ್ಟಬಾರದು ’ ನಿಲ್ಲದೆ ಸುರಿವ ಕಣ್ಣಿರಿಗೆ ಸೆರಗುವೊಡ್ಡುತ್ತಾ ಅಂಗಲಾಚುತ್ತಿದ್ದಳು.

ಠಾಣೆಯಲ್ಲಿ ಮುಖಮುಚ್ಚಿಕೊಂಡು ಬಿಕ್ಕಳಿಸುತ್ತಿದ್ದ ಬಹುತೇಕ ಹೆಣ್ಣುಮಕ್ಕಳ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಬಡತನಕ್ಕೂ, ಸೋ ಕಾಲ್ಡ್ ಸಮಾಜ ಸ್ಥಾಪಿತ ಹಿತಾಸಕ್ತಿಗೋ ಬಲಿಯಾಗಿದ್ದರು. ಈ ಹೆಣ್ಣುಮಕ್ಕಳ ಹೆಸರುಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳಬಾರದು ಎಂದು ನನ್ನಲ್ಲಿ ಕೇಳಿಕೊಂಡ ಅಂತಃಕರಣವುಳ್ಳ ಆ ಸಬ್‍ ಇನ್ಸ್ಪೆಕ್ಟರ್ ಮಗುವಿನ ತಾಯಿ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ಈ ಕಸುಬು ಬಿಟ್ಟು ನಾಳೆಯಿಂದ ಪೊಲೀಸ್ ಠಾಣೆಯ ಕಸ ಹೊಡೆಯಲು ಕೆಲಸಕ್ಕೆ ಬಾರಮ್ಮ ಎಂದು ಎಲ್ಲರನ್ನು ಬಿಟ್ಟು ಕಳುಹಿಸಿದರು.

ಈ ದೇಶದ ದಮನಿತ ಸಮುದಾಯಗಳ ಹೆಣ್ಣು ಮಕ್ಕಳು ಇಂದೇನಾದರೂ #Me Too…ಅಂತ ಹೊರಟುಬಿಟ್ಟರೆ ಈ ದೇಶವೆ ಜೈಲು ಆಗಿಬಿಡುತ್ತದೆ.

‍ಲೇಖಕರು avadhi

15 October, 2018

ನಿಮಗೆ ಇವೂ ಇಷ್ಟವಾಗಬಹುದು…

18 Comments

  1. prathibha nandakumar

    ಸರ್ , ನಿಮ್ಮ ನಿಲುವಿನಲ್ಲಿ ತಪ್ಪಿದೆ. ಯಾವುದೇ ಒಂದು ಚಳುವಳಿಯ ಹುಟ್ಟು ಒಂದು ಸಾಮಾಜಿಕ ಸಂದರ್ಭದಲ್ಲಿ ಆಗುತ್ತದೆ. ಅದನ್ನು ಉಳಿದ ಎಲ್ಲದಕ್ಕೂ ತಳಕು ಹಾಕಿ ಸಾರಾಸಗಟಾಗಿ ನಿರ್ಣಯಗಳನ್ನು ಕೊಡುವುದು ಸರಿಯಲ್ಲ. ಅತ್ಯಾಚಾರ ಮತ್ತು ಕೊಲೆಯ ಕ್ರಿಮಿನಲ್ ಪ್ರಕರಣಗಳ ಜೊತೆ #ಮಿಟೂ ಚಳುವಳಿಯ ಉದ್ದೇಶವನ್ನು ಸಮೀಕರಿಸಲಾಗುವುದಿಲ್ಲ. ಈ ಚಳುವಳಿ ಇನ್ನೂ ಪ್ರಾರಂಭಿಕ ನೆಲೆಯಲ್ಲಿದೆ. ಇದು ಸಮಾಜದ ಎಲ್ಲ ಹಂತಗಳಿಗೂ ತಲುಪಲು ಸಮಯ ಹಿಡಿಸುತ್ತದೆ. ನಿಮ್ಮ ಲೇಖನ ಸ್ವಲ್ಪ ಅವಸರದ್ದು. ಮತ್ತು ಸ್ವಲ್ಪ ನೆಗೆಟಿವ್ ಧೋರಣೆಯದು. ಸಧ್ಯದ ಪರಿಸ್ಥಿತಿಯಲ್ಲಿ ಈಗಲೇ ಚಳುವಳಿಯನ್ನು ವಿಮರ್ಶೆಯ ತಕ್ಕಡಿಯಲ್ಲಿ ತೂಗುವುದು ಸೂಕ್ತವಲ್ಲ. ಅದರಲ್ಲೂ ಯಾವುದೇ ಆಧಾರವಿಲ್ಲದೆ ಅದನ್ನು ನೀವು ಕಾರ್ಪೊರೇಟ್ ಫೆಮಿನಿಸಂ ಎಂದು ಕರೆದಿರುವುದು ನಿಮ್ಮ ನೋಟದ ಮಿತಿಯನ್ನು ಪ್ರಕಟಪಡಿಸುತ್ತದೆ

    ಪ್ರತಿಭಾ ನಂದಕುಮಾರ್

    • N.Ravikumr

      ಟೈಟಲ್ ಗೆ ಸೀಮಿತವಾಗಿ ನಿಮ್ಮ ಗ್ರಹಿಕೆ ಇದೇ ಎಂದು ಭಾವಿಸುತ್ತೇನೆ ಮೇಡಂ. ಸಗಟಾಗಿ ನಿರಾಕರಿಸಿಲ್ಲ. ಆರಂಭಿಕ ನೆಲೆಯಲ್ಲಿರುವುದನ್ನೆ ಇದನ್ನು ಸದ್ಯಕ್ಕೆ ಚಳುವಳಿಯಲ್ಲ ಎಂದಿದ್ದೇನೆ. ಸದ್ಯಕ್ಕೆ me too ಟಿವಿ ಚಾನಲ್ ಗಳ ಟಿಆರ್ ಪಿಯ ಸರಕಾಗಿದೆ. ಸಲೆಬ್ರಿಟಿಗಳು ಉದ್ಘರಿಸುವಷ್ಟು ನಿರ್ಭಯವಾಗಿ ಸಾಮಾನ್ಯ ಹೆಣ್ಣು ಹೇಳಲಾರಳು. ಅವಳ ಒಡಲಿಗೂ me too ತಲುಪಲಿ ಎಂಬುದರ ಆಶಯವಷ್ಟೆ. ನನ್ನ ನಿಲುವು ಸಷ್ಟವಾಗಿದೆ. ನಾನು ಮೀ.ಟೂ…ಪರವಾಗಿದ್ದೇನೆ ಆದರೆ ಅದು ನೆಲಮೂಲದ ಹೆಣ್ಣುಗಳ ದನಿಯಾದಾಗ ಮಾತ್ರ.
      ನಮಸ್ತೆ ಮೇಡಂ

      • prathibha nandakumar

        ಖಂಡಿತಾ ನನ್ನ ಗ್ರಹಿಕೆ ಟೈಟಲ್ ಗೆ ಸೀಮಿತವಾಗಿಲ್ಲ. ನಿಮ್ಮ ಇಡೀ ಬರಹದ ಧೋರಣೆಯನ್ನು ಗಮನಿಸಿಯೇ ಪ್ರತಿಕ್ರಿಯಿಸಿದ್ದು .

  2. sandeep eshanya

    ಪ್ರತಿಭಾ ನಂದಕುಮಾರ್ ಅವರು ಹೇಳಿದ ಮಾತುಗಳು ನನ್ನದೂ ಹೌದು. ಇದು ಒಂದು ಅವಸರದ ಹೇಳಿಕೆ.‌ #ಮಿ ಟೂ ಅನ್ನೋದನ್ನ ಕೇವಲ ಒಂದು ಟ್ವಿಟರ್ ಪೋಸ್ಟ್ ಗೆ ಸೀಮಿತ ಮಾಡುವುದು ತಪ್ಪು. ನಾವು ಇದರಿಂದ ಆಗುತ್ತಿರುವ ಬದಲಾವಣೆಗಳನ್ನು ಮತ್ತು ಮೌಖಿಕ ಸ್ವಾತಂತ್ರ್ಯದ ವಿಸ್ತರಣೆಯನ್ನು ಗಮನಿಸಬೇಕು. ಮೊದಲು ಅವಕಾಶಕ್ಕೆ ಸುಮ್ಮನಿದ್ದು ಈಗ ಪ್ರತಿಕ್ರಿಯೆ ನೀಡಿದ ಉದಾಹರಣೆಗಳು ಇರಬಹುದು. ಆದರೆ ಗಾಯಕಿ ಚಿನ್ಮಯಿ ಮಾಡಿದ ಆರೋಪವನ್ನು ರಘು ದೀಕ್ಷಿತ್ ಒಪ್ಪಿಕೊಂಡಿದ್ದಾರೆ. ಇಷ್ಟು ದಿನಗಳ‌ ಕಾಲ ಹೇಳಿಕೊಳ್ಳಲಾರದ ಆಕೆಯ ನೋವನ್ನ ಇದೊಂದು ಹ್ಯಾಷ್ ಟ್ಯಾಗ್ ಸಾಧ್ಯಗೊಳಿಸಿದೆ. ನಾವು ಅದನ್ನು ನೋಡಬೇಕು.

    ಇದು ನಿಧಾನವಾಗಿ ನಡೆಯುತ್ತಿದೆ. ಅದಕ್ಕೆ ಅಕ್ಷರದ ಅರಿವಿರುವ ನೀವು ಇಂಧನವಾಗಬೇಕು. ಇದೊಂದು ಚಳುವಳಿ ನೀವು ಹೇಳುವ ಕೆಳ ಸ್ತರಕ್ಕೂ ವಿಸ್ತರಿಸುವುದು ಹೇಗೆ. ನಂತರ ಅದನ್ನ ಎದುರಿಸುವುದು ‌ಹೇಗೆ ಎನ್ನುವುದಕ್ಕೆ ಪರ್ಯಾಯ ಮಾರ್ಗ ಸೂಚಿಸಬೇಕು. ಅದರ ಹೊರತಾಗಿ ಹೀಗೆ ಒಂದು ಚಳುವಳಿಯನ್ನೇ ಘಾಸಿಗೊಳಿಸುವುದು ಉತ್ತಮ ಬೆಳವಣಿಗೆಯಲ್ಲ.

    A thing which you get so easily it will never stay with you so long ಎನ್ನುವ ಮಾತನ್ನು ಅನ್ವಯ ಮಾಡಿಕೊಳ್ಳಬಹುದು

    ಸಂದೀಪ್ ಈಶಾನ್ಯ

    • N.Ravikumr

      ಕೆಳಸ್ತರದಲ್ಲಿ ನಿತ್ಯ ನಡೆಯುತ್ತಿರುವ ಇಂತಹ‌ ಮೀ ಟೂ ಗಳಿಗೆ ಸದ್ಯಕ್ಕೆ ದನಿಗಳಿಲ್ಲ. ಇದ್ದರೂ ಜಾಲತಾಣಗಳಲ್ಲಿ, ಸುದ್ದಿ ಮಾಧ್ಯಮಗಳಿಗೆ ಬೇಕಾಗಿಲ್ಲ. ಓರ್ವ ಗಾರೆ ಕೆಲಸ ಮಾಡುವ ಹೆಣ್ಣು ಮಗಳು ಮೀ ಟೂ ಅಂದರೆ ಅದೊಂದು ಲೇವಡಿಯ‌. ನಿರ್ಲಕ್ಷಿತ ಧೋರಣೆಗೆ ತುತ್ತಾಗಲಿದೆ. ಚಳವಳಿಯ ಅಗತ್ಯವಿದೆ. ಅದನ್ನು ಎಲ್ಲಾ ಕಾಲಕ್ಕೂ ಒಪ್ಪಬೇಕು. ಆದರೆ ಕೇವಲ ಸಲೆಬ್ರಿಟಿಗಳ ನೋವು ಮಾತ್ರ ದೊಡ್ಡದು ಎಂಬಂತೆ ಬಿಂಬಿಸುವ ಮನೋಧೋರಣೆ ಸರಿಯಲ್ಲ.
      ಬದಲಾವಣೆ ಇಲ್ಲಿಂದಲೆ ಆರಂಭವಾಗಲಿ ಎಂದು ಬಯಸುವುದಾದರೂ…ಈ ಮೂಲಕವಾದರೂ ಒಂದು ಮಹಿಳಾ ಚಳುವಳಿಯನ್ನು ಪುನರ್ ಕಟ್ಟುವ ದಾರಿಗಳು ತೆರೆದುಕೊಳ್ಳಲಿ.

      • prathibha nandakumar

        ದಯವಿಟ್ಟು ಕ್ಷಮಿಸಿ ನಿಮಗೆ ಈ ಚಳುವಳಿಯ ಮೂಲ ಉದ್ದೇಶದ ಬಗ್ಗೆ ಸ್ಪಷ್ಟತೆ ಇಲ್ಲ. ಸುಮ್ಮಸುಮ್ಮನೆ ಏನೇನೋ ಉತ್ತರ ಕೊಡುತ್ತಿದ್ದೀರಿ. ಒಂದು ಚಳುವಳಿ ನಿರ್ದಿಷ್ಟ ಉದ್ದೇಶದಿಂದ ಪ್ರಾರಂಭವಾಗುತ್ತದೆ. ಅದಕ್ಕೆ ಇನ್ನು ಸರಿಯಾಗಿ ಕೈಕಾಲು ಮೂಡದಿರುವಾಗ, ಅದಿನ್ನೂ ರೂಪುಗೊಳ್ಳುವ ಸ್ಥಿತಿಯಲ್ಲಿರುವಾಗ ಅದನ್ನು ಅತಿ ವಿಮರ್ಶೆಗೆ ಒಳಪಡಿಸಿ ನಿಮಗೆ ಇಷ್ಟ ಬಂದಂತೆ ವಾದಿಸುತ್ತಿದ್ದೀರಿ.

        • N.Ravikumr

          ನಿಮಗಿಷ್ಟ ಬಂದ ಅಭಿಪ್ರಾಯ ಮಂಡಿಸಲು ಆಗದು ಮೇಡಂ. ನನ್ನ ಪ್ರಶ್ನೆ ಇಷ್ಟೇ. ಒಂದು ಬಡ .ಕೂಲಿ‌ ಹೆಣ್ಣು ಮಗಳೊಬ್ಬಳು ಮಿ ಟೂ ಎನ್ನಲು ಆಕೆಯ ಬಳಿ ವಾಟ್ಸಾಪ್,ಟ್ವಿಟರ್, ಇನ್ಸ್ಟ್ರಾಗ್ರಾಂ ನಂತ ತಾಣಗಳಿಲ್ಲದವರ ಪಾಡೇನು. ನಿರ್ಬಯ,ಕಾಲ್ ಸೆಂಟರ್ ಪ್ರತಿಭಾ ಅವರ ಅತ್ಯಾಚಾರ, ಹತ್ಯೆ ನಡೆದ ವಾರದಲ್ಲಿ ಈ ದೇಶದಲ್ಲಿ ೧೪ಜನ ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಹತ್ಯೆ ನಡೆದದ್ದು ಎಲ್ಲೂ ಸುದ್ದಿಯಾಗಲಿಲ್ಲ. ನವಮಾಧ್ಯಮಗಳ ಆದ್ಯತೆ ಯನ್ನು ಪ್ರಶ್ನಿಸಬೇಕಾಗಿದೆ. ಸಕ್ಸಸ್ ಪುಲ್ ಸಲೆಬ್ರಿಟಿಗಳಿಗಾದ ಅನ್ಯಾಯವೇ ದೊಡ್ಡದು ಎಂದು ಬೊಬ್ಬೆ ಹಾಕುವ ಸುದ್ದಿ ಮಾಧ್ಯಮಗಳು.ನವ ಮಾಧ್ಯಮಗಳು ಕಾಫಿತೋಟಗಳಲ್ಲಿ ನ ಕೂಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಮಾಲೀಕರ ಕ್ರೌರ್ಯಕ್ಕೆ ಕುರುಡಾಗುವುದು ಏಕೆ? ಇಂತಹ‌ ಯಾವುದೇ ಹೆಣ್ಣು ಮಕ್ಕಳ ದನಿಗೆ ಈ ಸೆಲೆಬ್ರಿಟಿಗಳು ದನಿಯಾಗಿದ್ದಿದೆಯಾ? ಬಡ ಮಗಳ ನೋವು ತನ್ನದೆಂದು ಬೀದಿಗಿಳಿದ್ದದ್ದು ಇದೆಯಾ? ಹಾಗಂತ ಸೆಲೆಬ್ರಿಟಿಗಳ ಮೇಲಿನ ದೌರ್ಜನ್ಯವನ್ನು ನಿರಾಕರಿಸುವ ,ತಿರಸ್ಕರಿಸುತ್ತಿಲ್ಲ. ದನಿಯಿಲ್ಲದ ಹೆಣ್ಣುಗಳ ದನಿಯೂ ಆಗಲಿ. ಎನ್ನುವುದಷ್ಟೆ.

          • prathibha nandakumar

            ಸಾರ್ವಜನಿಕ ವಲಯಕ್ಕೆ ಬಂದ ಮೇಲೆ ಬೇರೆಯವರ ಅಭಿಪ್ರಾಯಗಳನ್ನು ಸ್ವಲ್ಪ ಓದಿ. ಅಷ್ಟೇ.

        • N.Ravikumr

          ಕ್ಷಮಿಸಿ ಮೇಡಂ. ನಾನು ಚಳುವಳಿಯಿಂದಲೆ ಬದುಕು ಕಟ್ಟಿಕೊಂಡವನು. ಚಳವಳಿಗೆ ಕೈ ಕಾಲು ಮೂಡದಿರುವಾಗ ವಿಮರ್ಶೆಗೊಳಪಡಿಸಬಾರದು ನಿಜ, ಚಳವಳಿ ದಿನಬೆಳಗಾಗುವುದರೊಳಗೆ ಕಟ್ಟಿ ನಿಲ್ಲಿಸುವಂತಹುದ್ದಲ್ಲ. ಆದರೆ ಚಳವಳಿ ಕೆಳಹಂತದಿಂದ ಮೇಲ್ಪದರವ ತಲುಪಬೇಕು.

          • N.Ravikumr

            ಸಾರ್ವಜನಿಕ ವಲಯಕ್ಕೆ ಬಂದ ಮೇಲೆ ಬೇರೆಯವರ ಅಭಿಪ್ರಾಯಗಳನ್ನು ಸ್ವಲ್ಪ ಓದಿ. ಅಷ್ಟೇ.

            ಈ ಮೇಲಿನ ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ ಕೂಡ. ಆದರೆ ನಿಮ್ಮ ಅಭಿಪ್ರಾಯವೂ ಸಂಪೂರ್ಣವಾಗಿ ಒಪ್ಪಲಾಗದು.

  3. chandrakiran s

    ravi you are right….

  4. Srikanth

    ಯಾವುದೇ ಸ್ತ್ರೀ ತನಗಾದ ಅವಮಾನವಾದದ್ದನ್ನು ಹೇಳಿಕೊಂಡರೂ ಅದು ಅವಮಾನವೇ. ಅದರಲ್ಲಿ ಕಾರ್ಪೋರೇಟ್, ಅಸಂಘಟಿತವರ್ಗ ಎಂದು ಭೇದ ಮಾಡುವುದು ಸರಿಯಲ್ಲ. ಪ್ರತಿಭಾ ಅವರ ಪ್ರತಿಕ್ರಿಯೆ ಸರಿಯಾಗಿದೆ.

    • Srikanth

      ರವಿಕುಮಾರ್ ಅವರು ಒಂದು ವರ್ಗಕ್ಕೆ, ಸಿದ್ಧಾಂತಕ್ಕೆ ಅಂಟಿಕೊಂಡಂತೆ ಮಾತನಾಡುತ್ತಿದ್ದಾರೆ. ಕೆಳವರ್ಗದ ಜನಗಳಿಗೆ, ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ಬಳಸದ ಜನಗಳಿಗೆ ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸಲಾಗದ ಕಾರಣಕ್ಕೆ, ಮೇಲ್ವರ್ಗದ ಮತ್ತು ಸೆಲಬ್ರಿಟಿಗಳು ಕೆಳವರ್ಗದ ಬಡಜನರ ದನಿಯಾಗದ ಕಾರಣಕ್ಕೆ ಅವರ ಪ್ರತಿರೋಧವನ್ನು ಚಳುವಳಿಯನ್ನು ಕಡೆಗಣಿಸಬೇಕಿಲ್ಲ.

  5. Lalitha Siddabasavaiah

    ಈ ಚಳುವಳಿ ವ್ಯಾಪಕವಾಗಬೇಕು. ಹಳ್ಳಿಯ ಅಸಂಘಟಿತ ಹೆಣ್ಣುಮಗಳನ್ನೂ ತಲುಪಬೇಕು ಖಂಡಿತವಾಗಿ. ಅದರಲ್ಲಿ ಎರಡನೆಯ ಮಾತಿಲ್ಲ.

    ಹಾಗೆಂದು ಈಗೇನು ಚಳುವಳಿ ಆರಂಭಗೊಂಡಿದೆಯೊ ಅದನ್ನು ಯಾವುದೇ ಕಾರಣದಿಂದ ಶಿಥಿಲಗೊಳಿಸಬೇಕಾಗಿಲ್ಲ. ಇದು “ಹವ್ಯಾಸಿ” ಚಳುವಳಿಯಲ್ಲ. ಎಲ್ಲೊ ಏಳುವ ಇಂಥದೊಂದು ದನಿಯೆ ಮುಂದೆ , ಹಳ್ಳಿ ಪಟ್ಟಣದ ಭೇದ ಇರದೆ ಎಲ್ಲ ಕಡೆಯಿಂದ ಸೆಲೆಬ್ರಿಟಿಯಾಗುವ ಉಮೇದಿಟ್ಟು ಕೊಂಡು ದಿನನಿತ್ಯ ನಗರಗಳಿಗೆ ಬಂದಿಳಿವ ನಮ್ಮ ಎಳೆ ಹುಡುಗಿಯರಿಗೆ ರಕ್ಷಾಕವಚವಾಗಿ ನಿಲ್ಲುತ್ತದೆ.

    ಪ್ರತಿಭಾ , ಸಂದೀಪ್ ಈಶಾನ್ಯ ಇವರ ಮಾತಿಗೆ ನನ್ನ ಸಹಮತಿಯಿದೆ. ನಗರದ ಮಹಿಳೆ , ಸೆಲೆಬ್ರಿಟಿ ಮಹಿಳೆ , ಮೇಲ್ಜಾತಿ ಮಹಿಳೆಗೆ ಆಗುವ ಅನ್ಯಾಯವೂ ಅನ್ಯಾಯವೇ. ಸೆಲೆಬ್ರಿಟಿಯಾಗುವ ಹಂತಕ್ಕೇರುವ ಒಳಗೆ ಬದುಕೇ ಸಾಕಪ್ಪ ಎನಿಸಿದವರೂ ಇರುತ್ತಾರೆ. ಅಂತಹವರು ಇದೀಗ ಘಟಾನುಘಟಿ ಮಹಾತ್ಮರುಗಳ ವಿಕೃತ ಚೇಷ್ಟೆಗಳ ವಿರುದ್ಧ ದನಿಯೆತ್ತಿದ್ದಾರೆಂದರೆ ಅದು ಈ ವೇಗದ ಯುಗದಲ್ಲಿ ಬಹುಬೇಗನೆ ಹಳ್ಳಿಗಳನ್ನೂ ತಲುಪತ್ತದೆ.

    ದಯವಿಟ್ಟು ನಮ್ಮೆಲ್ಲರೊಡನೆ ನನ್ನ ಬೇಡಿಕೆ ” ಎದ್ದ ದನಿ ಅಡಗಿಸಬೇಡಿ”

    • N.Ravikumr

      ಪ್ರತಿಭೆ ಇದ್ದವರು ಅವಕಾಶಕ್ಕೆ ಹಾತೊರೆಯದೆ ಆ ಸಂದರ್ಭದಲ್ಲಿ ಕಿರುಕುಳವನ್ನು ಮೆಟ್ಟಿ ನಿಂತಿದ್ದರೆ ಇವತ್ತು ಮೀ ಟೂ..ಎಂದು‌ ಹೇಳುವ ಸಂದರ್ಭವೆ ಇರುತ್ತಿಲ್ಲ.

  6. sambrama

    ಹೌದು ಸರ್‌ ನೀವೇಳುವಂತೆ #Metoo ಕೇವಲ ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರಿಗೆ ಮಾತ್ರ ಸೀಮಿತವಾಗಿದೆ. ಇದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ ಇದನ್ನು ‘ಕಾರ್ಪೊರೇಟ್‌ ಫೆಮಿನಿಸಂ’ ಎಂದೆಲ್ಲಾ ಬರೆಯುವ ಬದಲು ದಾನಮ್ಮ, ಸೌಜನ್ಯ, ಕಾವ್ಯ, ಖೈರ್ಲಾಂಜಿಯಲ್ಲಿ ನಡೆದ ದಲಿತರ ಅತ್ಯಾಚಾರ ಇವೆಲ್ಲವುದರ ಬಗ್ಗೆ ನೀವು ಮಾತನಾಡಬಹುದಲ್ಲವಾ! ದಯವಿಟ್ಟು ಕ್ಷಮಿಸಿ ನನ್ನ ಮಾತುಗಳು ನಿಮಗೆ ಉದ್ಧಟತನ ಎನಿಸಬಹುದು. ಆದರೆ ಹೇಳಲೇಬೇಕಾದ ಸಂದರ್ಭ ಇದು ಎಂತಲೇ ಹೇಳುತ್ತಿದ್ದೇನೆ. ನಾವು ಶೋಷಿತರು, ದಲಿತ, ದಮನಿತ ಮಹಿಳೆಯರ ಬಗ್ಗೆ ಮಾತನಾಡಬೇಕು. ಹಾಗೆಂದ ಮಾತ್ರಕ್ಕೆ ಮಾತು ಬಲ್ಲವರು ಮಾತನಾಡಿದರೆ ಅದನ್ನು ಅವರು ಏನೋ ಘೋರ ಅಪರಾಧ ಮಾಡಿರುವವರಂತೆ ನೋಡುವುದು ಎಷ್ಟು ಸರಿ? ಒಂದು ಲಕ್ಷ ಮಹಿಳೆಯರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಲೈಂಗಿಕ ದೌರ್ಜನ್ಯದ ಯಾವ ಅನುಭವವು ಆಗಿರುವುದಿಲ್ಲ. ಅಂದರೆ ಈ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಚುಡಾಯಿಸುವುದರಿಂದ ಮೊದಲುಗೊಂಡು, ಬಸ್‌ನಲ್ಲಿ ನಿಂತಾಗಲೂ ಕಿರಿಕಿರಿ ಉಂಟು ಮಾಡಿದ ಘಟನೆಗಳು ಜರುಗೇ ಇರುತ್ತವೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮಾತು ನಾನು ಒಪ್ಪುತ್ತೇನೆ. ನಾನು ಶೋಷಿತ ಸಮುದಾಯದಿಂದ ಬಂದವಳೇ. ಈಗ ಎಲ್ಲರೂ ಮಾತನಾಡುತ್ತಿರುವಂತೆ ನಾನು ಧೈರ್ಯದಿಂದ ನನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲು ನನಗೆ ಸಾಧ್ಯವಿಲ್ಲ. ಆದರೆ ಹಾಗಂತ ಮಾತನಾಡುವವರನ್ನು ಟೀಕಿಸುತ್ತಾ ಕಾಲ ಕಳೆಯುವುದು ಎಷ್ಟು ಸರಿ? ನಿಮ್ಮ ವಿಮರ್ಶೆಯನ್ನು ಒಪ್ಪುತ್ತಲೇ ನೀವು ಈ ಸಮಾಜದ ಭಾಗವಾಗಿ, ಮಹಿಳಾ ಮನಸ್ಸುಳ್ಳವರಾಗಿ, ಸಮಾನತೆಯಾ ಆಶಯ ಹೊಂದಿರುವ ನೀವು ನಮ್ಮ ಸಮಸ್ಯೆಗಳ ಕುರಿತು ಮಾತನಾಡಿ. ನಮ್ಮೊಟ್ಟಿಗೆ ನಿಲ್ಲಿ. ನಿಜವಾಗಲೂ ನಮಗೆ ಅಗತ್ಯವಿರುವುದು ನಿಮ್ಮ ಈ ವಿಮರ್ಶೆಗಿಂತ ಹೆಚ್ಚಾಗಿ ನಮ್ಮೊಟ್ಟಿಗೆ ನೀವು ನಿಲ್ಲುವುದೇ ಅತಿ ಮುಖ್ಯ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು, ಜನರಲ್ಲಿ ಸಮಾನತೆ ಆಶಯ ಮೂಡಿಸಲು ಅರಿವಿನ ಕಾರ್ಯಕ್ರಮ ಮಾಡಿ.

    ನಿಜವಾಗಿಯು ನನಗೆ ನಿಮ್ಮ ಬಗ್ಗೆ ವೈಯಕ್ತಿಕವಾಗಿ ಯಾವುದೇ ಮನಸ್ತಾಪವಿಲ್ಲ. ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ನಾವು ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಎಚ್ಚರಿಸುವ ಮಾತಷ್ಟೆ.

    ಧನ್ಯವಾದಗಳು

    • N.Ravikumr

      ಒಪ್ಪುವ ಮಾತು.ಧನ್ಯವಾದಗಳು

  7. ಸತ್ಯಕಾಮ ಶರ್ಮಾ ಕಾಸರಗೋಡು

    ಲೇಖಕರ ವಾದಸರಣಿಯನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅನ್ವಯಿಸಿದಲ್ಲಿ, ಅದು ಕೂಡಾ ಕೇವಲ ಸಿರಿವಂತರ, ಮೇಲ್ವರ್ಗದವರ ದನಿಯಾಗಿತ್ತು! ಗಾಂಧಿ, ನೆಹರು, ಪಟೇಲ್ ,ಬೋಸ್ ಇನ್ನಿತರರು ಕೂಲಿ ಕೆಲಸ ಮಾಡುತ್ತಿದ್ದರೆ? ‘ಮೀ ಟೂ’ ನಲ್ಲಿ ಭಾಗಿಯಾದವರು ‘ನಾವು ಮಾತ್ರ ದೌರ್ಜನ್ಯಕ್ಕೆ ಒಳಗಾದವರು, ಬಡವರು, ದಲಿತರು ಅಲ್ಲ’ ಎಂದು ವಾದಿಸಿದ್ದಾರೆಯೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading