
ನಮ್ಮೂರು ಚಂದವೋ ನಿಮ್ಮೂರು ಚಂದವೋ…ಎಂದು ಈಗ ಒಂದಿಷ್ಟು ದಿನವಂತೂ ಚಿತ್ರದುರ್ಗದ ಹುಡುಗರಿಗೆ ಕೇಳಲು ಸಾಧ್ಯವೇ ಇಲ್ಲ. ಚಿತ್ರದುರ್ಗದಲ್ಲಿ ಮುಂದಿನ ಸಮ್ಮೇಳನ ಅಂತ ಗುಸು ಗುಸು ಪಿಸು ಪಿಸು ಹೊರಟದ್ದೇ ತಡ ದುರ್ಗದ ಹುಡುಗರು’ ಎದ್ದು ನಿಂತರು.
ಬಹುಷಃ ೭೫ ಕನ್ನಡ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಒಂದು ಬ್ಲಾಗ್ ಸಮ್ಮೇಳನಕ್ಕಾಗಿಯೇ ತಲೆ ಎತ್ತಿ ನಿಂತಿದೆ. ಇದು ಅಲ್ಲಿನ ಹುಡುಗರ ಉತ್ಸಾಹದ ಪ್ರತೀಕ. ಅದರ ಹೆಸರೂ ಎಷ್ಟೊಂದು ಭಿನ್ನ. KA16 ಕನ್ನಡ ಸಾಹಿತ್ಯ ಸಮ್ಮೇಳನ 75
ಈ ಬ್ಲಾಗ್ ಹಾಳೆಗಳನ್ನು ಉರುಳಿಸುತ್ತಾ ಹೋದರೆ ಎಲ್ಲಾ ಪತ್ರಿಕೆಗಳ ವಿಶೇಷ ಪುರವಣಿಗೂ ಒಂದಿಷ್ಟು ಗಟ್ಟಿ ಮಾಹಿತಿ ಲಭ್ಯ.
ಚಿತ್ರದುರ್ಗದ ಹುಡುಗರು ತಾವೇಕೆ ಬ್ಲಾಗ್ ಆರಂಭಿಸಿದ್ದು ಎಂಬುದನ್ನೂ ಇಲ್ಲಿ ಬರೆದಿದ್ದಾರೆ.
ಗೂಗಲ್ ಕಂಡಂತೆ ‘ಚಿತ್ರದುರ್ಗದಾ ಕಲ್ಲಿನ ಕೋಟೆ…ಕಡೆಗೂ ನಮ್ಮೂರಲ್ಲಿ ಅಕ್ಷರ ಜಾತ್ರೆ ಅಂತಾ ಘೋಷಣೆಯಾಯಿತು. ಸಾಹಿತ್ಯ ಸಮ್ಮೇಳನದ ೭೫ ವರ್ಷ- ಅಂದರೆ ಅಮೃತ ಮಹೋತ್ಸವ ನಮ್ಮೂರಲ್ಲಿ ನಡೆಯುತ್ತಿದೆ ಅನ್ನೋದು ಹೆಚ್ಚು ಸಂತೋಷ ಉಂಟು ಮಾಡಿರುವ ಸಂಗತಿ.
ನಮಗೆ ಗೊತ್ತಿದ್ದ ಹಾಗೆ ಮೂರು ವರ್ಷಗಳಿಂದ ನಡೆದ ಲಾಬಿ ನಮ್ಮೂರಲ್ಲಿ ಆಗಬೇಕಿದ್ದ ಸಾಹಿತ್ಯ ಸಮ್ಮೇಳನವನ್ನು ತಪ್ಪಿಸಿದ್ದವು. ಶಿವಮೂರ್ತಿ ಶರಣರು ೭೫ನೇ ಸಮ್ಮೇಳನ ನಮ್ಮಲ್ಲೇ ಆಗಬೇಕೆಂದು ಮನವಿ ಮಾಡಿದ್ದಕ್ಕೋ ಏನೋ ನಮ್ಮೂರಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಒಟ್ಟಾರೆ ಉಡುಪಿ ಕೃಷ್ಣನ ಸನ್ನಿಧಾನದಲ್ಲಿ ನ್ಯಾಯ ಸಿಕ್ಕ ಹಾಗಾಗಿದೆ.
ಸಾಂಸ್ಕೃತಿಕವಾಗಿ ರಾಜ್ಯದ ಮಹತ್ವದ ಕೇಂದ್ರವಾಗಿ ಗುರುತಿಸಿಕೊಂಡ ಊರು ಚಿತ್ರದುರ್ಗ. ಇತಿಹಾಸಕಾರರನ್ನು ಸೆಳೆದ ಪ್ರಾಗೈತಿಹಾಸಿಕ ಕೇಂದ್ರ.
ಚಿತ್ರದುರ್ಗ ಎಂದರೆ ಏನೆಲ್ಲಾ ನೆನಪು ಮಾಡಿಕೊಳ್ಳಬಹುದೋ ಅದೆಲ್ಲವೂ ಇದೆ. ಸಾರಸ್ವತ ಲೋಕಕ್ಕೆ ತರಾಸು ಕೊಟ್ಟ ಕೊಡುಗೆ ಕಡಮೆಯೇ? ಅಕ್ಷರಗೊತ್ತಿಲ್ಲದವರ ಸಾಹಿತ್ಯವನ್ನು ಹಾಡಿ ನಾಡಿನುದ್ದಕ್ಕೂ ಹರಡಿದ ಸಿರಿಯಜ್ಜಿಯಂಥವರು ಕಡಮೆಯೋ? ಸಿದ್ಧರು ಇದ್ದ ನಾಡು, ಸೌಹಾರ್ದದ ಬೀಡು. ರಾಜ್ಯದ ಮಧ್ಯಭಾಗದಲ್ಲಿದ್ದು, ತನ್ನ ಪಾಡಿಗೆ ತಾನಾಗಿರುವ ಚಿತ್ರದುರ್ಗ ಹೃದಯದಂತೆ ಸದಾ ಮಿಡಿಯುತ್ತಿರುವ ಜಿಲ್ಲೆ.
ಪ್ರತಿ ಬಾರಿ ಸಮ್ಮೇಳನ ನಡೆಯುವಾಗ ಅದಕ್ಕೊಂದು ಪರ್ಯಾಯ ಸಮ್ಮೇಳನದ ಅಗತ್ಯವಿರದು . ಯಾಕಂದ್ರೆ, ಶರಣ ಇರುವ ಊರಿನಲ್ಲಿ ನಡೆಯಲಿರುವ ಅಮೃತ ಮಹೋತ್ಸವದ ಸಮ್ಮೇಳನ ಇದುವರೆಗಿನ ಸಮ್ಮೇಳನಗಳಿಗೆ ಪರ್ಯಾಯವಾಗಿ ನಡೆಯುವುದು ಅನ್ನುವುದು ಅನೇಕ ಮಿತ್ರರ ಅಭಿಪ್ರಾಯ. ಮುಂದಿನ ವರ್ಷ ನಡೆಯುವ ಸಮ್ಮೇಳನ ಚಿತ್ರದುರ್ಗದ ಅನೇಕ ಸಾಹಿತ್ಯಾಸಕ್ತರಲ್ಲಿ ಉತ್ಸಾಹ ತುಂಬಿದೆ.
ಈ ಹಿನ್ನೆಯಲ್ಲೇ ಸಿದ್ಧವಾದ ಈ ಬ್ಲಾಗಿನಲ್ಲಿ ಇನ್ನು ಮುಂದೆ ಚಿತ್ರದುರ್ಗದ ಸಾಂಸ್ಕೃತಿಕ ವಿವರಗಳನ್ನು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳು, ಶಿಕ್ಷಣ, ರಾಜಕೀಯ, ಪ್ರವಾಸೋದ್ಯಮ ಹತ್ತಾರು ವಿಷಯಗಳನ್ನು ಹಂಚಿಕೊಳ್ಳಲಾಗುವುದು.





0 Comments