ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

I AM MALALA

ದಿಲಾವರ್ ರಾಮದುರ್ಗ

Weidenfeld & Nicolson, London ಪ್ರಕಾಶನ ಹೊರತಂದಿರುವ I AM MALALA – The Girl Who Stood Up for Education and was Shot by the Taliban
By Malala Yousafzai with Christina Lamb.
ಪುಸ್ತಕ ಈಗಷ್ಟೇ ಕೈಗೆತ್ತಿಕೊಂಡಿದ್ದೇನೆ. ಸುಮಾರು 276 ಪುಟದ ಪುಸ್ತಕ ಮಲಾಲಾ ಮುದ್ದು ಮುಖವನ್ನೇ ಆಕರ್ಷಕ ಮುಖಪುಟವನ್ನಾಗಿಸಿಕೊಂಡಿದೆ. ಇಂಡಿಯಾದಲ್ಲಿ ಇದರ ಬೆಲೆ 399ರೂ. ನನಗೆ 300 ಕ್ಕೆ ಸಿಕ್ಕಿತು. ಎಂಜಿ ರಸ್ತೆಯ ಬುಕ್ ವರ್ಮ್ ಹುಡುಗ ‘ಸರ್ ಬೆಳಿಗ್ಗೆಯಷ್ಟೇ ಪುಸ್ತಕ ಬಂತು’ ಎಂದು ಹೇಳಿದ. ಆರಂಭದ ಪುಟಗಳನ್ನು ಸ್ವಲ್ಪ ಓದಿದೆ. ಇಂಟರೆಸ್ಟಿಂಗ್.
* * *

ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಅಕ್ಟೋಬರ್ 2012ರಂದು ತಾಲಿಬಾನ್ ಇವಳ ತಲೆಗೆ ಪಾಯಿಂಟ್ ಬ್ಲ್ಯಾಂಕ್ ನಲ್ಲಿ ಗುಂಡು ಹಾರಿಸಿತ್ತು. ಪವಾಡಸದೃಶ್ಯ ಎನ್ನುವಂತೆ ಈಕೆ ಬದುಕುಳಿದಳು. ಆನಂತರ ಲಂಡನ್ ನಲ್ಲಿ ಒಂದಷ್ಟು ನಿರಾತಂಕವಾಗಿ ಉಸಿರಾಡಿದಳು.
ಪಾಕಿಸ್ತಾನದಲ್ಲಿ ಹೆಣ್ಮಕ್ಕಳಿಗೆ ಓದಿನ ಹಕ್ಕು ಬೇಕೆನ್ನುವ ಛಲ, ಇವಳ ತಲೆ ಹೊಕ್ಕಿತ್ತು. ಅದೇ ತಾಲಿಬಾನಿಗಳ ಪಿತ್ತ ತಲೆಗೆ ಹತ್ತಲು ಕಾರಣವಾಗಿತ್ತು. ಹೀಗಾಗಿ ಮಲಾಲಾ ತಲೆ ಹಾರಿಸುವ ಕೆಲಸಕ್ಕೆ ತಾಲಿಬಾನ್ ಕೈಹಾಕಿತು. ಈ ಹೃದಯವಿದ್ರಾವಕದ ಜತೆಗೆ ಇನ್ನೂ ಏನೇನೋ ಕಾರಣಕ್ಕೆ ಜಗತ್ತಿನ ಗಮನ ಸೆಳೆದ ಈ ವಿದ್ಯಮಾನ ಈಗ ಪುಸ್ತಕ ರೂಪ ಪಡೆದು ವಿದ್ಯಮಾನದ ಬಿಕರಿ ನಡೆಸುತ್ತಿದೆ.
ವಿದೇಶ ಬಾತ್ಮಿದಾರಿಕೆಯಲ್ಲಿ ವಿಶೇಷವಾಗಿ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ವಿದ್ಯಮಾನಗಳ ವರದಿಗಾರಿಕೆಯಲ್ಲಿ ಹೆಸರಾದ ಕ್ರಿಸ್ಟಿನಾ ಲ್ಯಾಂಬ್ ಈ ಪುಸ್ತಕ ರೂಪುಗೊಳ್ಳುವಲ್ಲಿ ಮಲಾಲಾಗೆ ಪ್ರಮುಖ ಸಾಥಿಯಾಗಿದ್ದಾರೆ. ‘ಬರವಣಿಗೆ’ ದೃಷ್ಟಿಯಿಂದ ಮಲಾಲಾ ಬರವಣಿಗೆಯಲ್ಲಿ ಕ್ರಿಸ್ಟಿನಾ ವರದಿಗಾರಿಕೆಯ ಸೂಕ್ಷ್ಮವೂ ಸೇರಿದಂತಿದೆ. ಒಟ್ಟು ಐದು ಅಧ್ಯಾಯಗಳಲ್ಲಿ ಹಂಚಿಹೋದ ಪುಸ್ತಕ ಆಕೆಯ ಬಾಲ್ಯ, ಪಾಕಿಸ್ತಾನದ ಪರಿಸರ, ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಮತ್ತಿತರ ವಿಷಯಗಳನ್ನು ಹರವಿಕೊಂಡು ತಾಲೀಬಾನ್ ಕೃತ್ಯದವರೆಗೂ ಹಂತ ಹಂತವಾಗಿ ಬೆಳೆದಿದೆ. ನಡುವೆ ಒಂದಷ್ಟು ಆಕೆಯ ಆಕರ್ಷಕ ಮತ್ತು ಮಹತ್ವದ ವರ್ಣಚಿತ್ರಗಳ ಸಂಗ್ರಹವೂ ಇದೆ. ಓದಿನ ಆಸಕ್ತಿಯನ್ನು ವಿಶೇಷವಾಗಿ ಕೆರಳಿಸುವ ಯಾವುದೇ ಅನಗತ್ಯ ತಂತ್ರಗಳು ಇಲ್ಲಿ ಇಲ್ಲವಾದರೂ, ವಿದ್ಯಮಾನದ ಸೆನ್ಸೇಷನ್ ಆಗಲೇ ವಿಶ್ವವ್ಯಾಪಿ ಆಗಿದ್ದರಿಂದ ಪುಸ್ತಕ ತಾನಾಗೇ ಓದಿಸಿಕೊಂಡು ಹೋಗುವಂತಿದೆ ಅಂದುಕೊಂಡಿದ್ದೇನೆ. ಕಡೆಯ ಪುಟದಲ್ಲಿ ಪುಸ್ತಕ ಬರವಣಿಗೆ ಮತ್ತದರ ಮಾರಾಟದ ಉದ್ದೇಶಗಳನ್ನು ಮಲಾಲಾ ಸ್ಪಷ್ಟಪಡಿಸಲೆತ್ನಿಸಿದಂತಿದೆ. ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಏನಾದರೊಂದು ಮಹತ್ತರ ಚಟುವಟಿಕೆ, ಯೋಜನೆ ಹಮ್ಮಿಕೊಳ್ಳುವ ಉದ್ದೇಶದಿಂದ ಮಲಾಲಾ ಫಂಡ್ ರೂಪಿಸಿಕೊಂಡಿದ್ದಾಗಿಯೂ ಮಲಾಲಾ ಹೇಳಿಕೊಂಡಿದ್ದಾರೆ.
ಪುಸ್ತಕದ ಬ್ಲರ್ಬ್ ನಲ್ಲಿ “I come from a country which was created at midnight. When I almost died it was just after midday.” ಈ ಸಾಲು ಹೃದಯಸ್ಪರ್ಶಿ.
To all the girls who have faced injustice and been silenced. Together we will be heard. ಎನ್ನುವ ಅರ್ಪಣೆಯ ಸಾಲು ಆಪ್ತವಾಗಿದೆ.
* * *
ಮುದ್ದು ಮುಖದ ಮಲಾಲಾ ಮನದೊಳಗಿನ ಒಟ್ಟ ಮಾನವೀಯ ಕಾಳಜಿಯನ್ನು ಓದಿನ ಮೂಲಕ ಮುಟ್ಟಿ ಬರಬೇಕೆನ್ನಿಸುತ್ತಿದೆ. ಅದರಾಚೆಗಿನ ತಾಲಿಬಾನ್ ಉದ್ದೇಶ, ಆ ಘಟನೆ, ಅದನ್ನು ವಿಶ್ವವ್ಯಾಪಿಗೊಳಿಸಿದ ವಿದ್ಯಮಾನದ ಹಿಕ್ಮತ್ತು, ಪುಸ್ತಕವನ್ನಾಗಿಸುವ ಮತ್ತು ಇಡೀ ಘಟನೆಯ ಸೆನ್ಸೇಷನ್ ಅನ್ನು ಬಿಕರಿಗೊಡ್ಡುವ ಪ್ರಕಾಶನದ ಧಂಧೆ… ಬಗ್ಗೆ ವಾದ-ವಿವಾದಗಳು, ಅಭಿಪ್ರಾಯಗಳು ಇದ್ದದ್ದೇ. ಅಂತೂ ಮಲಾಲಾ ನಿಜ ಜಗತ್ತನ್ನು ಅವಳೆದೆಯಾಳದಿಂದ ಕಾಣುವ ಅವಕಾಶವಂತೂ ಇದ್ದೇ ಇದೆ. ಆ ದೃಷ್ಟಿಯಿಂದ ಪ್ರಕಾಶಕರಿಗೆ ಅಭಿನಂದನೆಗಳು. ಪುಸ್ತಕ ಓದಿದ ನಂತರ ಹಂಚಿಕೊಳ್ಳಲು ಸಾಕಷ್ಟಿರುತ್ತದೆ ಅಲ್ಲವೇ?
 

‍ಲೇಖಕರು G

12 October, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading