
ಸುಮತಿ .ಬಿ.ಕೆ.
ಜಿಕೆ ಬೆಂಗಳೂರು ಆಕಾಶವಾಣಿ ನಿರ್ದೇಶಕರಾಗಿ ಅಧಿಕಾರ ವಹಿಸಿ ಒಂದೂವರೆ ವರ್ಷ ಆಯಿತಷ್ಟೇ. ಬೆಂಗಳೂರು ಮುಖ್ಯವಾಹಿನಿ ಇಡೀ ರಾಜ್ಯದ ಎಲ್ಲ ಕೇಂದ್ರಗಳ ಉಸ್ತುವಾರಿ, ದೆಹಲಿ ಪ್ರಭುಗಳ ಜೊತೆ ನಿರಂತರ ಸಂಪರ್ಕ.. ಇದೆಲ್ಲದರಿಂದ ಬಳಲಿದರೋ ಏನೋ.. ಅವರಿಗೆ ಬೆಂಗಳೂರಿಗೆ ಬರಲು ಅಷ್ಟೇನೂ ಒಲವಿರಲಿಲ್ಲ.
ಆದರೆ, ಅವರೇ ಹಿರಿಯ ಅಧಿಕಾರಿ ಆದ್ದರಿಂದ ನಿರ್ದೇಶಕ ಪೀಠ ಏರಬೇಕಾಯಿತು. ಮೃದುವಾದ, ಮೆಲುವಾದ ಮಾತು.. ಸದಾ ಮುಗುಳ್ನಗೆ, ತಪ್ಪದೆ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಎಲ್ಲವನ್ನೂ ಎಲ್ಲರ ಜೊತೆ ಮಾತಾಡುತ್ತಿರಲಿಲ್ಲ. ತಮ್ಮ ಅಧಿಕಾರಕ್ಕೆ ತಾವೇ ಹೆದರುತ್ತಾರೇನೋ ಎನಿಸುತ್ತಿತ್ತು. ಮನ ಬಿಚ್ಚಿ ಮಾತಾಡಲು ಅವರಿಗೆ ಸಮಯವೇ ಇರುತ್ತಿರಲಿಲ್ಲ.
ಭಾನುವಾರ ಅಥವಾ ವಿಶೇಷ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಂದಾಗ, ಸ್ವಲ್ಪ ನಿರುಮ್ಮಳ ಕಾಣುತ್ತಿದ್ದರು. ಹರಟುತ್ತಿದ್ದರು. ನೋಡಲು ಗಂಭೀರ ಎನಿಸಿದರೂ ಮಾತಿಗಿಳಿದರೆ ತಾವೂ ನಕ್ಕು ನಮ್ಮನ್ನೂ ನಗಿಸುತ್ತಿದ್ದರು. ಅಪಾರ ಹಾಸ್ಯಪ್ರಜ್ಞೆ. ಪ್ರಸಾರದಲ್ಲಿ ಆಗುವ ಸಣ್ಣ ದೋಷಗಳು, ಮತ್ತು ತೊಂದರೆಗಳ ಬಗ್ಗೆ ಒಮ್ಮೊಮ್ಮೆ ಲಘು ಲಹರಿಯಲ್ಲಿ ಮಾತಾಡಿದರೆ ನಗು ಉಕ್ಕಿಬರುತ್ತಿತ್ತು. ಯಾರನ್ನೂ ನೋಯಿಸಿದವರಲ್ಲ.

ನಮ್ಮ ‘ಕಥಾಕಣಜ’ ಕಾರ್ಯಕ್ರಮ ಮಾಲಿಕೆ ಬಗ್ಗೆ ಅವರಿಗೆ ಹೆಮ್ಮೆ ಇತ್ತು. ಇತ್ತೀಚೆಗಷ್ಟೇ ಪ್ರಸಾರದಲ್ಲಿ ಒಂದಷ್ಟು ಬದಲಾವಣೆ ತರಬೇಕು ಎಂದು ತವಕಿಸಿ ಪ್ರಯೋಗಶೀಲರಾಗಿದ್ದರು. ದಸರೆ ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಸಂತಸ, ಹಂಚಿಕೊಂಡಿದ್ದರು ಭಾನುವಾರ ಬೆಳಿಗ್ಗೆ. ಮಂಗಳವಾರ ಕೂಡ 2 ನಿಮಿಷ ಕಾರ್ಯಸಂಬಂಧಿ ಮಾತಾಡಿದ್ದರು. ಬುಧವಾರ ಸಿಗೋಣ ಅಂದಿದ್ದರು. ಸಿಕ್ಕರು. ಬುಧವಾರ ಸಿಕ್ಕರು. ಇನ್ನೆಂದೂ ಸಿಗದ ಹಾಗೆ ಸಿಕ್ಕರು.
ಬುಧವಾರ.. ಅವರ ಕುರ್ಚಿ ರಿಪೇರಿಗೆ ಹೋಗಿತ್ತು ಅನ್ನುವುದು ಎಷ್ಟು ಕಾಕತಾಳೀಯ.. ಬುಧವಾರ ಅವರು ಕುರ್ಚಿಯಲ್ಲಿ ಕೂರಲಿಲ್ಲ. ಸೋಫಾದಲ್ಲಿ ಮಲಗಿಬಿಟ್ಟರು.
ಆಕಾಶಕ್ಕೆ ಹೊರಟರು.. ಅವರ ವಾಣಿ ನಮ್ಮ ಕಿವಿಯಲ್ಲಿ.. ಇದು ಅವರು ಮೊನ್ನೆ ದಸರಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ…
ಜೊತೆಗಷ್ಟು ಜೀವನ
ಕೈಯಿಂದ ಚಿಮ್ಮಿದ ಚೆಂಡಿಗೆ ಗೊತ್ತಿಲ್ಲ
ಮುಂದಿನ ಕ್ಷಣ ತಾನು ಎಲ್ಲಿ ಹೇಗೆ ಎಂದು
ಹೊಡೆಯಬಹುದು ಬಿಡಬಹುದು ಬೀಳಬಹುದು
ಗೆರೆಯ ದಾಟಬಹುದು
ಏನಾದರೂ ಅಷ್ಟು ಸಂತೋಷ ಇಷ್ಟು ಚಡಪಡಿಕೆ ಒಂದಷ್ಟು ನಿಟ್ಟುಸಿರು
ಹೊರಬಿದ್ದ ನಾದಕ್ಕೆ ಗೊತ್ತಿಲ್ಲ
ಯಾರ ಎದೆ ಯಾರ ಕರುಳು ಯಾರ ಕಣ್ಣು ಹೇಗೆ ಎಂದು
ಬೆಳಗಬಹುದು ನೀರಾಗಬಹುದು ಉಸಿರಾಗಬಹುದು
ಕಿವಿಯಲ್ಲೇ ಇಂಗಬಹುದು
ಏನಾದರೂ ಅಷ್ಟು ಇಳಿದಂತೆ ಇಷ್ಟು ಗೆದ್ದಂತೆ ಎಂಥದೋ ತೊಳಲಾಟ
ತಳ್ಳಿಸಿಕೊಂಡ ಸ್ಟ್ರೈಕರ್ ಗೆ ಗೊತ್ತಿಲ್ಲ
ಯಾವ ಕಾಯಿನ್ ಯಾವ ಪೋಚ್ ಯಾವ ದಿಕ್ಕು
ಉದುರಬಹುದು ನಿಲ್ಲಬಹುದು ತೊಡರಬಹುದು
ತನ್ನನ್ನೇ ತಳ್ಳಿದವರು ಹುಡುಕಬಹುದು
ಏನಾದರೂ ಅಷ್ಟು ಖುಷಿ ಇಷ್ಟು ನಿರಾಸೆ ಒಂದಷ್ಟು ಲೆಕ್ಕಾಚಾರ
ಭೂಮಿಗೆ ಬಿದ್ದ ಮೇಲೂ ಎಲ್ಲ ತಿಳಿಯುವುದೆಂದಲ್ಲ
ಯಾವ ಪದ ಯಾರ ಪದಾರ್ಥ ಎಂಥ ಸಂಬಂಧ
ಹೆಣೆಯಬಹುದು ಹರಿಯಬಹುದು ಬಾಳಿಸಬಹುದು
ಒಂದು ಉಸಿರಲ್ಲೇ ಏನೆಲ್ಲ ದೂಡಬಹುದು
ಏನಾದರೂ ಅಲ್ಲೊಂದು ಚೆಂಡು ಇಲ್ಲೊಂದು ಸ್ಟ್ರೈಕರ್ ಒಂದಷ್ಟು ನಾದ
ಜೊತೆಗಷ್ಟು ಆಯಸ್ಸು.
Gk sir.. ನೋವಾಗ್ತಿದೆ..
We miss you.






ಸುಮತಿ ಮ್ಯಾಡಮ್ ತುಂಬಾ ಆಪ್ತವಾಗಿ ಬರೆದಿದ್ದೀರಿ.ಜಿ ಕೆ ಸರ್ ಇಲ್ಲದ್ದು ಖಂಡಿತಾ ಬೇಸರದ ಸಂಗತಿ.ಅವರ ಪ್ರಭಾವ ಎಷ್ಟು ಜನರ ಮೇಲಾಗಿದೆ ಎಂದು ಯೋಚಿಸಿದರೆ, ಆಶ್ಚರ್ಯವಾಗುತ್ತದೆ.ಧನ್ಯವಾದ!
Thanks for sharing the poem… so sad demise…