ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Exclusive ’ಏಕಾಂಬರ’!

ನವಂಬರ್ ೧ ನೇ ತಾರೀಖು ಬಿಡುಗಡೆಯಾಗುತ್ತಿರುವ ಕುಂ ವೀರಭದ್ರಪ್ಪನವರ ’ಏಕಾಂಬರ’ ಕಾದಂಬರಿಯ ಅಧ್ಯಾಯ ಅವಧಿ ಓದುಗರಿಗಾಗಿ

– ಕುಂ ವೀರಭದ್ರಪ್ಪ

ಆ ದಿವಸ ರಾಜ್ಯದ ಮಧ್ಯಮ ವರ್ಗದವರು ಕಾಲಕ್ಷೇಪಕ್ಕಾಗಿಯೂ, ಮೇಲ್ವರ್ಗದವರು ರಾಜಕೀಯ ಲಾಭ ಲುಕ್ಸಾನದ ದೃಷ್ಟಿಯಿಂದಲೂ, ಸ್ಥಳೀಯ ರಾಜಕಾರಣಿಗಳೂ, ಹಿರಿ ಕಿರಿಯ ಪುಡಾರಿಗಳೂ ತಮ್ಮ ತಮ್ಮ ಅಸ್ತಿತ್ವದ ಸಲುವಾಗಿಯೂ, ಶ್ರಮಜೀವಿಗಳಾದ ಕೃಷಿಕಾಮರ್ಿಕರು ಮಧ್ಯಂತರ ಚುನಾವಣೆ ಅನಿರೀಕ್ಷಿತವಾಗಿ ಸಂಭವಿಸಿದಲ್ಲಿ ಯಾವ ಯಾವ ರಾಜಕೀಯಪಕ್ಷದಿಂದ ಎಷ್ಟೆಷ್ಟು ಲಾಭ ಗಳಿಸಬಹುದೆಂದು ಯೋಚಿಸುತ್ತಲೂ, ಸಣ್ಣಪುಟ್ಟ ರೈತರು ಯಾರು ಅಧಿಕಾರಕ್ಕೆ ಬಂದರೂ ತಾವು ಮಾತ್ರ ರಾಗಿ ಬೀಸುವುದು ತಪ್ಪುವುದಿಲ್ಲವೆಂಬ ಉದಾಸೀನತೆಯಿಂದಲೂ ದೂರದ ದೆಹಲಿ ಕಡೆ ಹಳೆ ಹೆಂಡತಿ ಕಡೆ ನೋಡುವಂತೆ ದೃಷ್ಟಿ ನೆಟ್ಟಿದ್ದರು.

ಕೆಲವು ದಿವಸಗಳಿಂದ ರಾಜ್ಯದ ರಾಜಕಾರಣ ನಭೂತೋ ನಭವಿಷ್ಯತಿ ಎಂಬಂತೆ ಕೆಟ್ಟು ಹೋಗಿದ್ದುದೇ ಅದಕ್ಕೆ ಕಾರಣ. ವಿಧಾನಸೌಧದ ನಿಗೂಢ ಮೂಲೆಗಳಲ್ಲಿದ್ದ ಜೇನುನೊಣಗಳಿಂದ ಕ್ರೂರ ಹಲ್ಲೆಗಳೊಳಗಾಗಿದ್ದರೂ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಸ್ವಲ್ಪವಾದರೂ ಬುದ್ಧಿ ಕಲಿತಿರಲಿಲ್ಲ. ತಮ್ಮ ದೇಹಗಳ ಹಲವು ಕಡೆ ಕಾಣಿಸಿಕೊಂಡಿದ್ದ ಬೊಬ್ಬೆಗಳನ್ನೇ ಬಂಡವಾಳವನ್ನಾಗಿರಿಸಿಕೊಂಡು ಪರಸ್ಪರ ಕೆಸರೆರಚರಾಟವನ್ನು ಮುಂದುವರೆಸಿದ್ದರು. ರಾಜ್ಯದಲ್ಲಿ ಅಸಂಖ್ಯಾತ ನೊಣಗಳನ್ನು ಸೃಷ್ಠಿಸುವುದರ ಮೂಲಕ ಸಾಂಕ್ರಾಮಿಕ ರೋಗಗಳನ್ನು ರತ್ನಗಂಬಳಿ ಹಾಸಿ ರಾಜ್ಯಕ್ಕೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳೂ, ಅದಕ್ಕೆ ಪ್ರತಿಯಾಗಿ ತಾವೇನು ಕಡಿಮೆ ಎಂಬಂತೆ ಆಪರೇಷನ್ ವಿಬ್ರಿಯಾ ಎಂಬ ವಿಲಕ್ಷಣ ಹೆಸರಿನ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ವಿರೋಧಪಕ್ಷದ ಧುರೀಣರೂ ಸಾಮಾಜಿಕ ನೆಮ್ಮದಿಯನ್ನು ಹದಗೆಡಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಆಡಳಿತಾಂಗ ಕುಸಿದಿತ್ತು. ಎಲ್ಲಿ ನೋಡಿದರಲ್ಲಿ ಒನ್ಫಾಟರ್ಿಫೋರ್ ಸೆಕ್ಷನ್ನುಗಳ, ಕಫ್ಯರ್ೂಗಳ ಹಾವಳಿ! ಅವರನ್ನಿವರು, ಇವರನ್ನವರು ಬುಟ್ಟಿಯಲ್ಲಿ ಹಾಕಿಕೊಳ್ಳುವ ಸಲುವಾಗಿ ರೆಸಾಟರ್್ ರಾಜಕಾರಣ ಶುರುವಾಗಿತ್ತು. ಯಾವ ಯಾವ ಶಾಸಕ ಎಷ್ಟೆಷ್ಟು ಕೋಟಿಗೆ ಹರಾಜಾದ ಎಂಬ ವದಂತಿಗಳು ಎಲ್ಲಂದರಲ್ಲಿ ಭೂತ ಕುಣಿತ ಆರಂಭಿಸಿದ್ದವು. ಆಡಳಿತಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ ಎಂಬುದಾಗಿ ವಿರೋಧಪಕ್ಷದವರೂ, ನೊಣಗಳನ್ನು ಸಮಥರ್ಿಸಿದ ಲಾಗಾಯ್ತು ತಾವು ಹಿಂದೆಂದಿಗಿಂತ ಹೆಚ್ಚು ಬಲಿಷ್ಠರಾಗಿರುವುದಾಗಿ ಆಡಳಿತಪಕ್ಷದವರೂ ರಾಜಭವನಕ್ಕೆ ಹೋಗುವುದು, ಘನತೆವೆತ್ತ ರಾಜ್ಯಪಾಲರ ತಲೆ ತಿನ್ನುವುದು ದಿನದಿಂದ ದಿನಕ್ಕೆ ಹೆಚ್ಚಿತ್ತು.

ಇದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವುದೋ ಮಾಡದೇ ಇರುವುದೋ, ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಿ ಎಂದು ಕೇಳುವುದೋ ಕೇಳದೇ ಇರುವುದೋ, ಸಂವಿಧಾನದ ಸಾಧಕ ಬಾಧಕಗಳೇನು, ಯಾವ ಯಾವ ನಿಧರ್ಾರ ತೆಗೆದುಕೊಂಡಲ್ಲಿ, ತೆಗೆದುಕೊಳ್ಳದಿದ್ದಲ್ಲಿ ತಮ್ಮ ಪವಿತ್ರ ಹುದ್ದೆಗೆ ಯಾವ ಯಾವ ರೀತಿಯ ಕಳಂಕ ಅಂಟಬಹುದೆಂಬ ಲೆಕ್ಕಾಚಾರದಲ್ಲಿ ಮುಳುಗಿದ್ದರು ಬೇರೆ! ಅವರನ್ನು ತಮ್ಮ ಪರವಾಗಿ ಮಣಿಸುವ ಸಲುವಾಗಿ ಆಡಳಿತ ಮತ್ತು ವಿರೋಧಪಕ್ಷಗಳ ಮುಖಂಡರು ರಾಜಭವನದ ಹಾದಿಯನ್ನು ಸವೆಸಿ ನುಣುಪು ಮಾಡಲಾರಂಭಿಸಿದ್ದರು. ಆದರೂ ರಾಜ್ಯಪಾಲರ ದಿವ್ಯಮೌನ ಎಲ್ಲರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಅವರ ಮನಸ್ಸನ್ನು ತಮ್ಮ ಪರ ಪರಿವತರ್ಿಸುವ ಸಲುವಾಗಿ ಧುರೀಣರ ಪೈಕಿ ಕೆಲವರು ಮಲೆಯಾಳಿ ಮಾಂತ್ರಿಕರ, ಇನ್ನೂ ಕೆಲವರು ತಮಿಳುನಾಡಿನ ಮಾಂತ್ರಿಕರ ನೆರವು ಪಡೆದರಾದರೂ ಪ್ರಯೋಜನವಾಗಲಿಲ್ಲ. ಪ್ರಥಮ ಶ್ರೇಣಿ ಮುಖಂಡರು ಶೃಂಗೇರಿ, ವೈಜೇಶ್ವರಿಕೋಯಲ್ ಸಲಹೆ ಮೇರೆಗೆ ತಮ್ಮ ತಮ್ಮ ನಿವಾಸಗಳ, ಕಛೇರಿಗಳ ವಾಸ್ತುವಿನ್ಯಾಸವನ್ನೂ, ತಮ್ಮ ತಮ್ಮ ಮೇಲ್ಮೈ ಉಡುಪುಗಳನ್ನೂ, ತಮ್ಮತಮ್ಮ ನೊಸಲುಗಳ ಮೇಲಿನ ತಿಲಕಗಳನ್ನೂ ಆಮೂಲಾಗ್ರವಾಗಿ ಬದಲಿಸಿದರಾದರೂ ಕಿಂಚಿತ್ ಪ್ರಯೋಜನವಾಗಲಿಲ್ಲ. ಅವರ ವಿರುದ್ಧ ಇವರೂ, ಇವರ ವಿರುದ್ಧ ಅವರೂ ಎಲ್ಲೆಂದರಲ್ಲಿ ಲಿಂಬೆಹಣ್ಣುಗಳನ್ನು ರಕ್ತರಂಜಿತ ರೀತಿಯಲ್ಲಿ ಕೊಯ್ಯುವುದರ ಮೂಲಕ ಕೃಷಿಕರನ್ನು ಅವಮಾನ ಮಾಡಿದರೇ ಹೊರತು ಪ್ರಯೋಜನವಾಗಲಿಲ್ಲ. ಸುಮ್ಮನೆ ಕಣ್ಮುಚ್ಚಿ ಕುಳಿತಿರದಿದ್ದ ರಾಜ್ಯಪಾಲರು ಆಯಾಪಕ್ಷಗಳ ಹೈಕಮ್ಯಾಂಡ್ನವರನ್ನುದ್ದೇಶಿಸಿ ಇದನ್ನೆಲ್ಲ ನೋಡುತ್ತ ಕುಳಿತಿರುವ ನೀವು ದಿನಂಪ್ರತಿ ಊಟ ಮಾಡುತ್ತಿರುವುದು ಯಾವ್ಯಾವ ಖಾದ್ಯಗಳನ್ನು? ಎಂದು ಸೂಕ್ಷ್ಮವಾಗಿ ಕೇಳಿದ ಪರಿಣಾಮವಾಗಿ ದಿಲ್ಲಿಯ ಧುರೀಣರಲ್ಲಿ ಮೆಲುಮೆಲ್ಲಗೆ ಎಚ್ಚರ ಕಾಣಿಸಿಕೊಂಡಿತು. ಆ ಕ್ಷಣದವರೆಗೆ ಅವರೆಲ್ಲ ತಮ್ಮ ಪಕ್ಷಗಳ ಕುರಿಗಳು ಒಳಜಗಳಗಳಿಂದ ಹೆಚ್ಚೆಚ್ಚು ಬಲಿತು ತಮಗೆ ಹೆಚ್ಚೆಚ್ಚು ಲಾಭವನ್ನುಂಟು ಮಾಡಬೇಕೆಂದು ಯೋಚಿಸುತ್ತಲೂ, ಸಂವಿಧಾನಕ್ಕಿಂತ ಮುಖ್ಯವಾಗಿ ಪಂಚತಂತ್ರ ಕೃತಿಯನ್ನು ಅಧ್ಯಯನ ಮಾಡುತ್ತಲೂ ರಾಜ್ಯ ರಾಜಕಾರಣ ಕುರಿತಂತೆ ಕೇವಲ ತೂಹಲಿಗರಾಗಿದ್ದರು. ಅವರು ಎಚ್ಚತ್ತುಕೊಂಡಿದ್ದು ರಾಜ್ಯಪಾಲರು ತಮ್ಮ ಆಹಾರಾಭ್ಯಾಸವನ್ನು ನೆನಪಿಸಿದ ನಂತರವೇ! ಒಳಜಗಳಗಳಿಂದಾಗಿ ತಮ್ಮ ತಮ್ಮ ಪಕ್ಷಗಳು ಮತದಾರನ ದೃಷ್ಟಿಯಲ್ಲಿ ಅಪಮೌಲ್ಯಗೊಳ್ಳುವವೋ ಎಂದು ಹೆದರಿದ ಹೈಕಮ್ಯಾಂಡುಗಳು ತಮ್ಮ ತಮ್ಮ ಪಕ್ಷಗಳ ಮುಖಂಡರನ್ನುದ್ದೇಶಿಸಿ ಕೂಡಲೆ ದಿಲ್ಲಿಗೆ ಶಾಸಕರ ಸಂಗಡ ಹೊರಟು ಬಂದು ರಾಷ್ಟ್ರಪತಿಗಳೆದುರು ಪೆರೇಡ್ ಮಾಡಿರಿ ಎಂದು ಆದೇಶಿಸಿದವು. ಅದಕ್ಕೆ ಇವರು..

ಅಯ್ಯೋ ಸ್ವಾಮಿ ತಾವೆಲ್ಲರು ಕ್ರೂರಮೃಗಗಳನ್ನು ನೆನಪಿಸುವಂತಿರುವ ವಿಧಾನಸೌಧದ ಜೇನ್ನೊಣಗಳಿಂದ ಹಲ್ಲೆಗೀಡಾಗಿ ರೆಸಾಟರ್ುಗಳಲ್ಲಿರುವ ಆಸ್ಪತ್ರೆಗಳ ಪಾಲಾಗಿರುವೆವು, ಅವುಗಳ ಕಡಿತದಿಂದಾಗಿ ತಮ್ಮ ದೇಹಗಳ ಮೂಲ ನಕ್ಷೆ ಆಮೂಲಾಗ್ರವಾಗಿ ಬದಲಾಗಿರುವುದು, ಇಂಥ ದುಃಸ್ಥಿತಿಯಲ್ಲಿರುವ ತಾವು ವಾಯುಪ್ರಯಾಣ ಮಾಡುವುದಾದರು ಹೇಗೆ! ತಲುಪಿ ದಿಲ್ಲಿಯ ಅನಾರೋಗ್ಯಕರ ವಾತಾವರಣಕ್ಕೆ ಹೊಂದಿಕೊಳ್ಳುವುದಾದರೂ ಹೇಗೆ ಸ್ವಾಮಿ! ಆದ್ದರಿಂದ ಕರುಣಾಳುಗಳಾದ ತಾವು ಒಂದು ತಿಂಗಳು ಕಾಲಾವಕಾಶ ನೀಡಿ ಎಂದು ಹೃದಯವಿದ್ರಾವಕ ರೀತಿಯಲ್ಲಿ ಬೇಡಿಕೊಂಡರು. ಅದಕ್ಕೆ ಅವರು.. ದೇವರ ದಯೆಯಿಂದಾಗಿಯೇ ನೀವು ಜೇನ್ನೊಣಗಳ ಹಲ್ಲೆಗೀಡಾಗಿರುವುದು, ಅದು ನಿಮಗೆ ಶಿಕ್ಷೆ ಎಂದು ಭಾವಿಸದೆ ವರವೆಂದು ಭಾವಿಸುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ನೀವು ಬೊಬ್ಬೆ ಗಾಯಗಳೊಂದಿಗೆ ಹೊರಟು ಬಂದು ಪೆರೇಡ್ ಮಾಡಿದಲ್ಲಿ ರಾಷ್ಟ್ರಪತಿಗಳ ಹೃದಯ ಕರಗುವುದರಲ್ಲಿ ಸಂದೇಹವಿಲ್ಲ. ನಿಮ್ಮ ನಿಮ್ಮ ದೇಹಗಳಲ್ಲಿ ಜೇನ್ನೊಣಗಳಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಮುಳ್ಳುಗಳನ್ನು ಹೊರ ತೆಗೆಯುವ ತಜ್ಞವೈದ್ಯರು ದಿಲ್ಲಿಯಲ್ಲಿ ಹೇರಳವಾಗಿರುವರು, ಹೀಗಿರುವ ಸ್ಥಿತಿಯಲ್ಲಿಯೇ ಹೊರಟು ಬಂದು ರಾಜಧಾನಿಯನ್ನು ಸೇರಿಕೊಳ್ಳುವುದು ಎಂದು ಫ್ಯಾಕ್ಸ್ ಮೂಲಕ ಸಂದೇಶ ಕಳಿಸಿದರು.

ಹೆತ್ತವರ, ದೇವರ, ಮತದಾರರ, ಸಂವಿಧಾನದ ಮಾತು ಮೀರಿದಷ್ಟು ಸುಲಭವಲ್ಲ ಹೈಕಮ್ಯಾಂಡಿನ ಮುತ್ಸದ್ದಿಗಳ ಲಕ್ಷ್ಮಣರೇಖೆಗಳನ್ನು ಉಲ್ಲಂಘಿಸುವುದು! ಎಲ್ಲಾ ಪಕ್ಷಗಳ, ಎಲ್ಲಾ ಶಾಸಕರು ವಿಶೇಷ ವಿಮಾನಗಳಲ್ಲಿ ಪಯಣಿಸಿ ಅಂತೂ ಇಂತೂ ದಿಲ್ಲಿಯನ್ನು ತಲುಪಿ ಕನರ್ಾಟಕಭವನದಲ್ಲಿ ವಾಸ್ತವ್ಯ ಹೂಡಿದರು. ದೆಹಲಿಯ ಪ್ರತಿಕೂಲ ಹವಾಮಾನದಲ್ಲೂ ಅವರೆಲ್ಲರ ಪಂಚೇಂದ್ರಿಯಗಳು, ನವರಂದ್ರಗಳು ಸುಮ್ಮನಿದ್ದರೆ ತಾನೆ! ಅಲ್ಲೂ ಅವು ಸ್ವಯಂಚಾಲಿತ ಯಂತ್ರಗಳೋಪಾದಿಯಲ್ಲಿ ಕ್ರಿಯಾಶೀಲಗೊಂಡ ಪರಿಣಾಮವಾಗಿ ಮಾಧ್ಯಮಗಳೆದುರು ಎಗ್ಗಿಲ್ಲದೆ ಪರಸ್ಪರ ನಿಂದ್ಯಾರೋಪಗಳ ವಿನಿಮಯ ನಿರಾತಂಕವಾಗಿ ಮುಂದುವರಿಸಿದರು. ಹೈಕಮ್ಯಾಂಡಿನ ಆದೇಶದ ಮೇರೆಗೆ ಹರಿದ ಬಟ್ಟೆಗಳನ್ನು ಧರಿಸಿ, ಬೊಬ್ಬೆ ಗಾಯಗಳನ್ನು ಪ್ರದಶರ್ಿಸುತ್ತ ರಾಷ್ಟ್ರಪತಿಗಳ ನಿರುಪದ್ರವೀ ಭವನದ ವಿಶಾಲ ಬಯಲಲ್ಲಿ ಪೆರೇಡ್ ನಡೆಸಿದರು. ಅದೂ ಸಾಲದೆಂಬಂತೆ ದಿಲ್ಲಿಯ ಕರೋಲಭಾಗ್, ಕನ್ಹಾಟ್ಪ್ಲೇಸ್ ಮತ್ತಿತರ ಜನನಿಬಿಡ ಪ್ರದೇಶಗಳಲ್ಲೂ ಪೆರೇಡ್ ನಡೆಸಿ ಅಲ್ಲಿನ ಜನರನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ರಂಜಿಸಿದರು. ಅಷ್ಟಾದರೂ ರಾಷ್ಟ್ರಪತಿಗಳಾಗಲೀ, ಪ್ರಧಾನಮಂತ್ರಿಗಳಾಗಲೀ ಸಕಾರಾತ್ಮವಾಗಿ ಪ್ರತಿಕ್ರಿಯಿಸದಿದ್ದಾಗ ಹೈಕಮ್ಯಾಂಡಿನವರೇ ತಮ್ಮತಮ್ಮ ಪಕ್ಷಗಳ ಮುಖಂಡರುಗಳನ್ನು ತಮ್ಮ ತಮ್ಮ ಕಾಯರ್ಾಲಯಗಳಿಗೆ ಅದ್ದೂರಿಯಾಗಿ ಬರಮಾಡಿಕೊಂಡು ವಿಚಾರಣೆ ಆರಂಭಿಸಿದರು. ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಈಸ್ಟ್ ಇಂಡಿಯಾ ಕಂಪನಿ ಜನರಲ್ ಡಯರ್ನನ್ನು ವಿಚಾರಣೆಗೆ ಗುರಿಪಡಿಸಿತಲ್ಲವೆ.. ಅದನ್ನು ನೆನಪಿಸುವಂತೆ!

ಮುಖ್ಯಮಂತ್ರಿಗಳು ವೈದ್ಯರ ಸಲಹೆಯನ್ನು ಗಾಳಿಗೆ ತೂರಿ ತಮ್ಮ ಮೂಗಿನ ನವೆಯನ್ನು ಬಲಗೈಯ ತೋರುಬೆರಳ ತುದಿಯಿಂದ ತುರಿಸಿಕೊಳ್ಳುತ್ತ ಇನ್ನೇನು ತಾವು ಈಶಾನ್ಯಜೈನಳ ನೀಳ ನಾಸಿಕವನ್ನು ನೆನಪು ಮಾಡಿಕೊಂಡರೆನ್ನುವಷ್ಟರಲ್ಲಿ ಹೈಕಮ್ಯಾಂಡಿನ ಕಛೇರಿಯ ಷೋಕಾಸ್ ನೋಟಿಸನ್ನು ಎಡಗೈಯಿಂದ ಸ್ವೀಕರಿಸಿ ಅದನ್ನು ತಮ್ಮ ಪಕ್ಕದಲ್ಲಿ ಚಿಂತಾಕ್ರಾಂತರಾಗಿ ಕುಳಿತಿದ್ದ ಕಾನೂನು ಸಂಸದೀಯಾಮಾತ್ಯರಾದ ಡಾ.ತುಳಸೀರಾಮ್ರವರ ಕೈಗೆ ವಗರ್ಾಯಿಸಿದರು, ಅವರು ತಮ್ಮ ನಿಷ್ಠಾವಂತರು ಎಂಬ ಕಾರಣಕ್ಕೆ.

ತಮ್ಮ ನೇತೃತ್ವದಲ್ಲಿ ಸಕರ್ಾರ ಅಸ್ತಿತ್ವಕ್ಕೆ ಬಂದದ್ದೇ ಬಂದದ್ದು, ರಾಜ್ಯದ ಅಭಿವೃದ್ಧಿ ಯನ್ನು ಅಲಕ್ಷಿಸಿ ಭಿನ್ನಮತವನ್ನು ಹತ್ತಿಕ್ಕುವುದಾಗಿರುವುದು ತಮ್ಮ ಬದುಕು. ತಮ್ಮ ಸಚಿವರ ತಲೆಯೊಳಗೆ ತುಂಬಿರುವ ಕೆಸರನ್ನು ಸಮಥರ್ಿಸುವ ಹೈಕಮ್ಯಾಂಡಿನವರು ತಮ್ಮ ತಲೆಯೊಳಗೆ ತುಂಬಿಕೊಂಡಿರುವುದು ಸೆಗಣಿಯಲ್ಲದೆ ಇನ್ನೇನು! ತಾವು ಸಂವಿಧಾನ ಬಾಹಿರವಾಗಿ ಸಂಪಾದಿಸಿರುವ ಹಣ, ಆಸ್ತಿಯ ಪೈಕಿ ಶೇಕಡಾ ಐವತ್ತರಷ್ಟನ್ನು ತಮ್ಮ ಪಕ್ಷದ ಅಸ್ತಿತ್ವದ ಸಲುವಾಗಿ ಬಳಸುತ್ತಿರುವುದು ಅವರ ಕಣ್ಣಿಗೆ ಕಾಣಿಸುತ್ತಿಲ್ಲವೆ! ತಾವು ಈಶಾನ್ಯಜೈನಳ ಮನವೊಲಿಸಿರುವುದು, ನೊಣಗಳ ಸಂಖ್ಯೆಯನ್ನು ನೂರುಪಟ್ಟು ವೃದ್ಧಿಸುವುದರ ಮೂಲಕ ವಿರೋಧಪಕ್ಷದ ಸೊಂಟವನ್ನು ದುರ್ಬಲಗೊಳಿಸಿರುವುದು ತಮ್ಮ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಲೆಂದು ತಾನೆ!

ನಿಡುಸುಯ್ಯುತ್ತ ತುಳಸಿ ಅವರ ಕಡೆ ನೋಡಿದರು. ಅದನ್ನು ಅರ್ಥ ಮಾಡಿಕೊಂಡ ಅವರು ಷೋಕಾಸ್ ನೋಟೀಸಿನ ಸಾರಾಂಶ ವಿವರಿಸಿದರು. ಕೋಪದಿಂದ ಕುಚರ್ಿಯ ಎರಡೂ ಕೈಗಳನ್ನು ಬಲವಾಗಿ ಅದುಮುತ್ತ ನೋಡಿ ತುಳಸಿ ಅವರೆ, ಈ ಷೋಕಾಸ್ ನೋಟೀಸು ಕಳಿಸಿರೋ ಆತ್ಮಾರಾಂ ಇನ್ನೂ ಬಚ್ಚಾ. ನಾನು ಉಪ್ಪು ಉಂಡಿರುವಷ್ಟು ಇವನಿನ್ನೂ ಅನ್ನವನ್ನು ಊಟ ಮಾಡಿಲ್ಲ. ಅಂಥವನು ನಮ್ಮನ್ನು ತನ್ನಲ್ಲಿಗೆ ಕರೆಸಿಕೊಳ್ಳುವುದೆಂದರೇನು ಸ್ವಾಮಿ! ಅವನನ್ನೇ ಕನರ್ಾಟಕಭವನಕ್ಕೆ ಬಂದು ನಮ್ಮನ್ನ ಕಾಣಲಿಕ್ಕೆ ಹೇಳಿ ಕಳಿಸಿರಿ. ಈ ನಾಥರ್ಿಂಡಿಯನ್ಸ್ ನಮ್ಮಂಥ ಸೌಥಿಂಡಿಯನ್ಸೆಂದರೇನಂತ ತಿಳ್ಕೊಂಡಿದ್ದಾರೆ ಎನ್ನುತ್ತಲೆ ಆಪ್ತಕಾರ್ಯದಶರ್ಿ ನೀಡಿದ ಬೀಪಿ ಮಾತ್ರೆ ಸೇವಿಸಿದರು.

ದಿನಂಪ್ರತಿ ಎರಡು ಮೂರು ತಾಸು ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡುವುದರ ಮೂಲಕ ಅಡಿಯಿಂದ ಮುಡಿವರೆಗೆ ತಾಳ್ಮೆಯನ್ನು ರೂಢಿಸಿಕೊಂಡಿದ್ದ ತುಳಸಿಯವರು.. ಈವತ್ತು ಕನರ್ಾಟಕದಲ್ಲಿ ನಮ್ಮ ಸಕರ್ಾರ ಆಡಳಿತದ ಚುಕ್ಕಾಣಿ ಹಿಡಿದಿರೋದು ತಮ್ಮಿಂದಾಗಿಯೆ! ಅದರಲ್ಲಿ ಎರಡನೇ ಮಾತಿಲ್ಲ ಸ್ವಾಮಿ. ಆದರೆ ನಾವೂ ನೀವೆಲ್ಲ ರಾಜ್ಯಮಟ್ಟದ ರಾಜಕಾರಣಿಗಳು. ಅದೂ ಅಲ್ಲದೆ ನಮ್ಮದು ಶಿಸ್ತುಕ್ರಮ ಶಿಕ್ಷಣಕ್ಕೆ ಹೆಸರಾಗಿರುವ ಪಕ್ಷ, ಅದೂ ಅಲ್ಲದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿಯಾಗಿರುವ ಆತ್ಮರಾಂ ಹುತಾತ್ಮ ನಾಥೂರಾಂ ಗೂಡ್ಸೆ ಕುಟುಂಬಕ್ಕೆ ಸೇರಿದವರು. ಆದ್ದರಿಂದ ಅವರಲ್ಲಿ ವಯಸ್ಸಾತೀತ ಅಗ್ರೆಸ್ಸಿವ್ ನೇಚರ್ ಸಹಜವಾಗಿ ಇರುವುದು. ನಮ್ಮ ನಮ್ಮ ಹೆಂಡರು ನಮ್ಮಂಥವರನ್ನು ಕಟ್ಟಿಕೊಂಡಿರುವ ಕಾರಣಕ್ಕೆ ಹುತಾತ್ಮರಾಗಿರುವುದನ್ನು ಹೊರತುಪಡಿಸಿದರೆ ನಾವು ಯಾರು ಹುತಾತ್ಮರಾಗಿದ್ದೇವೆ ಹೇಳಿ! ಅಲ್ಲದೆ ನಮ್ಮದು ಲೂಜ್ಟಂಗ್ ಬೇರೆ, ಎಲ್ಲೆಲ್ಲಿ ಏನೇನು ಮಾತಾಡಬೇಕೆನ್ನುವ ಕಾಮನ್ಸೆನ್ಸಂತೂ ಕನ್ನಡಿಗರಾದ ನಮಗೆ ಮೊದಲೇ ಇಲ್ಲ. ಪಾಲರ್ಿಮೆಂಟೊಳಗಿರುವ ಕಿವಿಗಳಿಗಿಂತ ಈ ಕನರ್ಾಟಕಭವನದ ಗೋಡೆಗಳಿರುವ ಕಿವಿಗಳ ಸಂಖ್ಯೆಯೇ ಅಧಿಕ. ಆದ್ದರಿಂದ ತಾವು ಸಾಭಿನಯಪೂರ್ವಕವಾಗಿ ಹೈಕಮ್ಯಾಂಡಿನವರೆದುರು ದೈಹಿಕವಾಗಿ ಹಾಜರಾಗುವುದು ಸಕರ್ಾರದ ಹಿತದೃಷ್ಟಿಯಿಂದ ತುಂಬಾನೆ ಮುಖ್ಯ. ಪ್ರಸನ್ನಚಿತ್ತರಾಗಿ ಹೊರಡಿ ಸ್ವಾಮಿ ಎಂದು ಚಂದ್ರಗುಪ್ತನ ಆಮಾತ್ಯ ಕೌಟಿಲ್ಯನಂತೆ ಹೇಳಿದರು.

ತಘಲಕ್ ಕ್ರೆಸೆಂಟ್ನ ಮೂಲೆಯಲ್ಲಿದ್ದ ಎರಡಂತಸ್ತಿನ ಕಟ್ಟಡ ಏನಿಲ್ಲವೆಂದರೂ ಎರಡು ಮೂರು ಶತಮಾನದಷ್ಟು ಹಳೆಯ ಕಾಲದ್ದು. ಸ್ವಾತಂತ್ರ್ಯಪೂರ್ವದ ಹಲವು ಐತಿಹಾಸಿಕ ಬುಡಮೇಲು ಕೃತ್ಯಗಳ ಸಮಾಲೋಚನೆ ನಡೆದಿರುವುದು ಅದೇ ಕಟ್ಟಡದಲ್ಲಿಯೆ!

ಲಾಲಾಲಜಪತ್ರಾಯ್ ಉಪಯೋಗಿಸಿದ್ದೆನ್ನಲಾದ ಕನ್ನಡಕ, ಭಗತ್ಸಿಂಗ್ ತಮ್ಮ ಮುಖಕ್ಷೌರಕ್ಕೆ ಬಳಸುತ್ತಿದ್ದರೆನ್ನಲಾಗುವ ಸಾಮಾಗ್ರಿಗಳನ್ನು ಇಂದಿಗೂ ಅದೇ ಕಟ್ಟಡದ ಒಂದು ಕೋಣೆಯಲ್ಲಿ ಸಂಗ್ರಹಿಸಿಡಲಾಗಿರುವುದು. ಅಪಹರಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳನ್ನು ಹರಾಜು ಹಾಕಿ ಕೋಟಿಗಟ್ಟಲೆ ಸಂಪಾದಿಸುವ ಹಲವು ಪ್ರಯತ್ನಗಳು ಪ್ರಥಮ ಪಂಚವಾಷರ್ಿಕ ಪ್ರಣಾಳಿಕೆ ಅವಧಿಯಲ್ಲಿ ನಡೆದು ವಿಫಲವಾಗಿರುವುದುಂಟು.

ಜಾಲಂದ್ರದ ಮೂಲಕ ಅವುಗಳ ದರ್ಶನ ಪಡೆಯಬಹುದೇ ಹೊರತು ಬಾಗಿಲನ್ನು ಪ್ರವೇಶಿಸಿ ಅವುಗಳನ್ನು ಮುಟ್ಟುವುದು ಸುಲಭ ಸಂಗತಿಯಾಗಿರಲಿಲ್ಲ.

ಸಹೋದ್ಯೋಗಿಯೊಡನೆ ಜೈಹಿಂದ್ ಭವನವನ್ನು ಪ್ರವೇಶಿಸಿದ ಮುಖ್ಯಮಂತ್ರಿಗಳು ಸಂಪ್ರದಾಯದಂತೆ ಜಾಲಂದ್ರವನ್ನು ಸಮೀಪಿಸಿ ಅವುಗಳ ದರ್ಶನ ಪಡೆಯುತ್ತ ತುಳಸಿಯವರ ಕಿವಿಯಲ್ಲಿ ಪಿಸುಗುಟ್ಟಿದ ಭಾಷೆ ಕಾವಲುಗಾರನಿಗೆ ಅರ್ಥವಾಗಲಿಲ್ಲ.

ಕೆಲವು ವರ್ಷಗಳ ಹಿಂದೆ ಚುನಾವಣಾ ಪ್ರಚಾರಕ್ಕೆ ಅವುಗಳನ್ನು ಬಳಸಿಕೊಳ್ಳುವ ಸಲುವಾಗಿ ತಾವು ಆಪೇಕ್ಷಿಸಿದ್ದಕ್ಕೆ ಪಕ್ಷದ ವಕ್ತಾರ ಸ್ವಾಮಿ ಸಹಜಾನಂದ್ ತ್ರಿಪಾಠಿ ನಿರಾಕರಿಸಿದ್ದರು. ಮಾನವ ದೇಹಕ್ಕೆ ಮೂತ್ರಪಿಂಡಗಳು ಯಾವ ರೀತಿ ಮುಖ್ಯವೋ ಅವು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ದೇಶಾಭಿಮಾನ ತುಂಬಲು ಅಷ್ಟೇ ಮುಖ್ಯವೆಂದು ಅಲಂಕಾರಿಕವಾಗಿ ಹೇಳಿದ್ದರು. ತಮ್ಮೆರಡೂ ಕಣ್ಣುಗಳಲ್ಲಿ ಅವೆರಡನ್ನೂ ತುಂಬಿಕೊಂಡು ಕೇಸರಿ ವರ್ಣದ ಮೊಗಸಾಲೆಯನ್ನು ಅಂಜಲೀಬದ್ದರಾಗಿ ಪ್ರವೇಶಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಕುಚರ್ಿಯೊಂದರಲ್ಲಿ ಕುಳಿತು, ತಮ್ಮ ಎಡಗಾಲ ಮೇಲೆ ಬಲಗಾಲನ್ನು ಹಾಕಿ ರಾಜಗಾಂಭೀರ್ಯವನ್ನು ನಖಶಿಖಾಂತ ಆರೋಪಿಸಿಕೊಂಡರು. ನ್ಯಾಯನಿಣರ್ಿತ ಸ್ಥಾನದಲ್ಲಿ ವಿರಾಜಮಾನರಾಗಿದ್ದ ಪಂಚರ ಪೈಕಿ ತಮ್ಮವನೇ ಆದ ಪನ್ನಗಶಯನ ಸ್ಪಷ್ಟವಾಗಿ ಗೋಚರಿಸಿದ. ಇದೆಲ್ಲ ತನ್ನ ಕರಾಮತ್ತೆಂಬಂತೆ ಮುಸಿಮುಸಿ ನಗುತ್ತಿರುವನೆಂದು ಅನ್ಯಥಾ ಭಾವಿಸಿದವರಾದ ಮುಖ್ಯಮಂತ್ರಿಗಳು ಇನ್ನಷ್ಟು ಗಂಭೀರವದನರಾದದ್ದು ತಮಗೆ ಅಸಹಜವೆನ್ನಿಸಿ ತುಳಸಿಯವರು ಅವರ ತುಪ್ಪಳದ ಕಿವಿಯನ್ನು ಬಾಯಿ ಮೂಲಕ ಸಮೀಪಿಸಿ…

ಅಗತ್ಯಕ್ಕಿಂತ ಹೆಚ್ಚು ಅಸಹನೆ ವ್ಯಕ್ತಪಡಿಸುತ್ತಿರುವಿರಿ ಸ್ವಾಮಿ. ದಯವಿಟ್ಟು ಮುಖದ ಗಂಟನ್ನು ಸಡಿಲಗೊಳಿಸಿರಿ. ಎಷ್ಟು ಸಾಧ್ಯವೋ ಅಷ್ಟು ಮುಗುಳ್ನಗಲು ಪ್ರಯತ್ನಿಸಿರಿ. ಮೇಲಕ್ಕೇರುತ್ತಿರುವ ಕಣ್ಣ ಹುಬ್ಬುಗಳನ್ನು ಸಹಜ ಸ್ಥಿತಿಗೆ ತನ್ನಿರಿ. ನಮ್ಮ ಸಕರ್ಾರದ ಅಳಿವು ಉಳಿವು ನಿಮ್ಮ ಪ್ರಸನ್ನವದನವನ್ನು ಅವಲಂಬಿಸಿದೆ, ಮನಸ್ಸಿನಲ್ಲಿಯೇ ಗಾಯತ್ರಿಮಂತ್ರವನ್ನು ಎರಡೇ ಎರಡು ಸಲ ಜಪಿಸಿರಿ ಎಂದು ನುಡಿದರೋ ಇಲ್ಲವೋ! ಮೊದಲೇ ಜೇನ್ನೊಣಗಳ ಬಾಧೆಯಿಂದ ತತ್ತರಿಸಿದ್ದ ಮುಖ್ಯಮಂತ್ರಿಗಳು ಅವರ ಬುದ್ಧಿವಾದದಿಂದ ಕೆರಳಿದರು.

ರ್ರೀ ತುಳಸಿಯವರೆ! ಅದ್ಹೇಗ್ರೀ ಇವರೆದುರು ಗಾಯತ್ರೀನ ಜಪಿಸೋದು! ನಮ್ಮನ್ನ ನೋಡಿದರೆ ತಿಳಿಯೋದಿಲ್ಲೇನ್ರಿ ಇವರಿಗೆ ವಿರೋಧಪಕ್ಷದವರ ಷಡ್ಯಂತ್ರ ಏನೂಂತ! ಉಪವಾಸ ವನವಾಸ ಲೆಕ್ಕಿಸದೆ ನಾನು ಹೋರಾಟ ಮಾಡಿದ್ದರಿಂದಾಗಿ ತಾನೆ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿರೋದು! ಯೂಪೀಲಿ, ಎಂಪೀಲಿ ಮೊನ್ನೆ ನಡೆದ ಚುನಾವಣೆಗಳಿಗೆ ನೂರಾರು ಕೋಟಿ ಪಾಟರ್ಿಫಂಡ್ ಕೊಟ್ಟಿರೋದು! ಮೇಗಳಕೆರೇನ ಡಿನೋಟಿಫೈ ಮಾಡಿ ಆ ಪನ್ನಗಶಯನನಿಗೆ, ಅವನ ಹೆಂಡರು ಮಕ್ಕಳಿಗೆಲ್ಲ ಎಯ್ಟಿಫಾಟರ್ಿ ಸೈಟುಗಳನ್ನು ಮುಂಜೂರು ಮಾಡಿ ಅವರಿವರಿಂದ ಬಯ್ಯಿಸಿಕೊಳ್ತಿರೋದು, ಒಂಚೂರಾದ್ರು ಉಪಕಾರ ಸ್ಮರಣೆ ಇದೆ ಏನ್ರಿ ಇವರಿಗೆ! ಎಂದು ಗೊಣಗಾಡಿ ಬಳಿಕ ಹೆಣಗಾಡಿ ಸೌಜನ್ಯವನ್ನು ಆರೋಪಿಸಿಕೊಂಡು ವಿಧ್ಯುಕ್ತವಾಗಿ ಕುಳಿತರು.

ಉಭಯಕುಶಲೋಪರಿಯೊಂದಿಗೆ ಆರಂಭಗೊಂಡ ಮಾತುಕತೆ ಕ್ರಮೇಣ ವಿರೋಧಪಕ್ಷವನ್ನು ಚಚ್ಚುವುದರ ಕಡೆ ತಿರುಗಿತು. ಬಳಿಕ ತಮ್ಮ ಪಕ್ಷ ಕನರ್ಾಟಕದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನೂ, ಅಲ್ಲಿರುವ ನೂರಾರು ಮಠಗಳ ಸವರ್ಾಂಗೀಣ ಪ್ರಗತಿಗೆ ಸಾವಿರಾರು ಕೋಟಿಗಳ ಅನುದಾನ ನೀಡಿರುವುದನ್ನೂ, ಸನಾತನ ಧರ್ಮವನ್ನು ಅಡಿಯಿಂದ ಮುಡಿವರೆಗೆ ಪ್ರತಿಷ್ಠಾಪಿಸುವ ಸಲುವಾಗಿ ಸಸ್ಯಶ್ಯಾಮಲ ಮಠಾಧೀಶರಾದ ಶ್ರೀಶ್ರೀಸಸ್ಯೇಂದ್ರತೀರ್ಥಸ್ವಾಮೀಜಿಯವರ ನೇತೃತ್ವದಲ್ಲಿ ಗೀತಾಭಿಯಾನ ಕೈಗೊಂಡಿರುವುದರ ಬಗೆಗೂ ಸಭೆ ಮುಕ್ತಕಂಠದಿಂದ ಪ್ರಶಂಸಿಸಿತು.

ಹಾಗೆಯೇ ವಿಧಾನಸೌಧದಲ್ಲಿ ಸ್ವಾತಂತ್ರೋತ್ತರವಾಗಿ ನೆಲೆಗೊಂಡಿರುವ ಜೇನುನೊಣಗಳು ನಡೆಸಿದ ಕ್ರೂರಾತಿಕ್ರೂರ ಹಲ್ಲೆಯನ್ನು ಸಾಂದಭರ್ಿಕವಾಗಿ ಪ್ರಸ್ತಾಪಿಸಿತಲ್ಲದೆ ಅವುಗಳಿಗೂ, ವಿರೋಧಪಕ್ಷಗಳಿಗೂ ನಡುವೆ ಒಳಒಪ್ಪಂದ ನಡೆದಿರಬಹುದೆ ಎಂಬ ಸಂಶಯ ವ್ಯಕ್ತಪಡಿಸಿತು. ಹೈಕಮ್ಯಾಂಡಿನ ಸದಸ್ಯರು ಒಬ್ಬೊಬ್ಬರಾಗಿ ಆಗಮಿಸಿ ಮುಖ್ಯಮಂತ್ರಿಗಳ  ದೇಹಗಳ ಮೇಲಿದ್ದ ಗಾಯಗಳನ್ನು ಪರಾಮಶರ್ಿಸಿದರಲ್ಲದೆ ಭೋಜಪುರಿ ಭಾಷೆಯಲ್ಲಿ ಸಾಂತ್ವನದ ಮಾತುಗಳನ್ನಾಡಿದರು. ಪುನಃ ಸ್ವಸ್ಥಾನವನ್ನು ಸೇರಿಕೊಂಡ ಅವರು ಮೈಥಿಲಿ ಭಾಷೆಯಲ್ಲಿ ತಮ್ಮಷ್ಟಕ್ಕೆ ತಾವೇ ಮಾತಿಗಿಳಿದರು. ಕೇವಲ ಕನ್ನಡ ಮಾತ್ರ ಗೊತ್ತಿದ್ದ ಮುಖ್ಯಮಂತ್ರಿಗಳು ಪ್ರಶ್ನಾರ್ಥಕವಾಗಿ ತಮ್ಮ ಸಹಚರ ತುಳಸಿಯವರ ಕಡೆ ನೋಡಿದರು.

ಅದಕ್ಕವರು ತಮ್ಮೆಡಗೈಯಿಂದ ಅವರ ಬಲಭುಜವನ್ನದುಮಿ ಧೈರ್ಯ ತುಂಬಿದರು. ಆ ಬಳಿಕವೇ ಆತ್ಮಾರಾಂ ಭಿಂಡೆ ಚಿತ್ಪಾವನ್ ಶೈಲಿಯ ಮರಾಠಿ ಮಿಶ್ರಿತ ಹಿಂದಿ ಭಾಷೆಯನ್ನು ಖಡ್ಗದೋಪಾದಿಯಲ್ಲಿ ಝಳಪಿಸಲಾರಂಭಿಸಿದ್ದು.

ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಸಂಭವಿಸಿರುವ ರೈತರ ಆತ್ಮಹತ್ಯೆ, ಪೋಲಿಸರು ಗಲಭೆಗಳನ್ನು ನಿಯಂತ್ರಿಸುವ ಸಲುವಾಗಿ ಲಾಠಿಗೆ ಬದಲು ನಡೆಸಿದ ಗೋಲಿಬಾರ್, ರೆಸಾಟರ್್ ರಾಜಕಾರಣಗಳಿಂದಾಗಿ, ಆಪರೇಷನ್ ಲೋಟಸ್ನಂಥ ಅನೈತಿಕವೂ, ಸಂವಿಧಾನ ಬಾಹಿರವೂ ಆದ ಕಾರ್ಯಕ್ರಮಗಳಿಂದಾಗಿ ತಮ್ಮ ಪಕ್ಷದ ವರ್ಚಸ್ಸಿಗೆ ಅಂಟಿರುವ ಕಳಂಕ, ಸ್ವಜನಪಕ್ಷಪಾತ, ಭೂಹಗರಣ, ಕುಟುಂಬ ರಾಜಕಾರಣ.. ಹೀಗೆ ಒಂದೊಂದಾಗಿ ಅಸ್ಖಲಿತ ರೀತಿಯಲ್ಲಿ ಪ್ರಸ್ತಾಪಿಸಿದ ಭಿಂಡೆ ಕ್ರಮೇಣ ಕಾಮಗಾರಿಗಳಿಂದಾಗಿ ಗುಣಸಾಗರದಲ್ಲಿ ರಸ್ತೆಗಳನ್ನಾಕ್ರಮಿಸಿರುವ ಚರಂಡಿಗಳು ಕುರಿತಂತೆ, ಅಮಶಂಕೆ ಕಾಲರಾಗಳಂಥ ಸಾಂಕ್ರಾಮಿಕ ವ್ಯಾಧಿಗಳ ಕುರಿತಂತೆ ಆರೋಹಣ ರೀತಿಯಲ್ಲಿ ಭಾಷಣ ಮಾಡಲಾರಂಭಿಸಿ ಮುಖ್ಯಮಂತ್ರಿಗಳೆದೆಯಲ್ಲಿ ನಡುಕ ಹುಟ್ಟಿಸಿದರು. ರಾಜ್ಯ ಸಕರ್ಾರ ಸಾರ್ವಜನಿಕ ಹಿತಾಸಕ್ತಿ ವಿರುದ್ಧ ನೊಣಗಳ ಉತ್ಪಾದನೆ ಕಡೆ ಗಮನ ಹರಿಸಿರುವುದು ಯಾವುದೇ ನಾಗರಿಕ ಸಮಾಜ ತಲೆ ತಗ್ಗಿಸುವಂಥ ವಿಚಾರವೆಂದು ಅಭಿಪ್ರಾಯಪಟ್ಟರು.

ಸನ್ಮಾನ್ಯ ಮುಖ್ಯಮಂತ್ರಿ ಮೂಗಪ್ಪಾಜಿ, ಇಂಥ ಅನಾರೋಗ್ಯಕರ ನಿಧರ್ಾರ ಕೈಕೊಳ್ಳುವಾಗ ನಿಮ್ಮನ್ನು ಪಾಪಪ್ರಜ್ಞೆ ಕಾಡಲಿಲ್ಲವೆ! ಎಂದು ಭಿಂಡೆ ನೇರವಾಗಿ ಪ್ರಶ್ನಿಸಿದರು.

ಅದರಿಂದ ವಿಚಲಿತರಾಗದೆ ಮುಖ್ಯಮಂತ್ರಿಗಳು..ಇದೇ ಮಾತನ್ನು ನಿಮ್ಮ ಪೂರ್ವಜರ ಪ್ರೇತಾತ್ಮಗಳಿಗೆ ಕೇಳಿ ಸ್ವಾಮಿ. ಆತ್ಮಸಾಕ್ಷಿ ಪಾಪಪ್ರಜ್ಞೆಗಳಂಥ ಸೂಕ್ಷ್ಮ ಸಂವೇದನೆಗಳಿದ್ದಿದ್ದರೆ ನಾವಾಗಲೀ ನೀವಾಗಲೀ ರಾಜಕಾರಣದಲ್ಲಿರುತ್ತಿದ್ದೆವೇನು! ಅವುಗಳಿಗೆ ತಿಲೋದಕ ನೀಡಿರುವುದರಿಂದ ತಾನೆ! ಗೀತಾಭಿಯಾನವನ್ನು ಸಮಥರ್ಿಸಿದ ತಾವು ಯಾಕೆ ನಮ್ಮ ಸಕರ್ಾರದ ನೊಣಗಳ ಯೋಜನೆಯನ್ನು ತೆಗಳುತ್ತಿರುವಿರೆಂಬುದು ಅರ್ಥವಾಗುತ್ತಿಲ್ಲ. ನೊಣಗಳಿಗೂ ಸಾಂಕ್ರಾಮಿಕ ರೋಗಗಳಿಗೂ ಸಂಬಂಧವಿದೆ ಎಂಬುದು ವಿರೋಧಪಕ್ಷಗಳ ಹುಯಿಲು. ಹಾಗಿದ್ದರೆ ವಿಧಾನಸೌಧದೊಳಗೂ ವ್ಯಾಧಿಗಳು ಕಾಣಿಸಿಕೊಳ್ಳಬಹುದಿತ್ತಲ್ಲವೆ! ನಮ್ಮ ಶಾಸಕರು ವಾಂತಿ ಭೇದಿ ಮಾಡ್ಕೊಂಡು ಸಾಯಬಹುದಿತ್ತಲ್ಲವೆ! ಸಾರ್ವಜನಿಕವಾಗಿ ಪ್ರತಿಭಟನೆ ವ್ಯಕ್ತವಾಗಬಹುದಿತ್ತಲ್ಲವೆ! ದಿಲ್ಲೀಲಿರೋ ನಿಮಗೆ ನಮ್ಮ ರಾಜ್ಯದ ಪಾಲಿಟಿಕ್ಸು ಅರ್ಥವಾಗುವುದಿಲ್ಲ ಸ್ವಾಮಿ. ಸುಮ್ಮನೆ ತೊಂದರೆ ಕೊಡದೆ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಖಾರವಾಗಿಯೂ, ವ್ಯಂಗ್ಯಮಿಶ್ರಿತವಾಗಿಯೂ ಹೇಳಿಕೆ ನೀಡಿ ಬೆವರೊರೆಸಿಕೊಂಡರು.

ಕೂಡಲೆ ಎದ್ದು ನಿಂತ ಪನ್ನಗಶಯನರು.. ನಿಮ್ಮನ್ನು ನಿಮ್ಮ ಪಾಡಿಗೆ ಬಿಡುವುದಾದರೆ ಹೈಕಮ್ಯಾಂಡ್ಯಾಕಿರಬೇಕು ಗಣ್ಯರೆ! ಭಿನ್ನಮತದ ಹೊಗೆ ಕಾಣಿಸಿಕೊಂಡಿದೆಯಲ್ಲ! ಇದಕ್ಕೇನು ಹೇಳುವಿರೋ! ಎಂದು ಚುಚ್ಚಿದರು.

ನಿಮ್ಮಂಥ ಆತ್ಮೀಯರಿಗೆ ನಿವೇಶನ ವಿತರಿಸುವ ಸಲುವಾಗಿ ಮೇಗಳಕೆರೆ ಬುವ್ವನಹಳ್ಳಿಯನ್ನು ಡಿನೋಟಿಫೈ ಮಾಡಿದಾಗಲೇ ಭಿನ್ನಮತ ಕಾಣಿಸಿಕೊಂಡಿತ್ತು, ನಿಮ್ಮಂಥ ಪ್ರಾಜ್ಞರೇ ಉಂಡೂ ಹೋದ ಕೊಂಡೂ ಹೋದ ಅಂದರೆ ಹೇಗೆ ಸ್ವಾಮಿ! ಎಂದರು, ಕೂಡಲೆ ಎಂಬತ್ತರ ಹರೆಯದ ಶ್ರೀಪೂರ್ಣಪ್ರಜ್ಞರು ಎದ್ದು ನಿಂತು…ನಾವು ಸನಾತನರಾದ ಮಾತ್ರಕ್ಕೆ ಸನ್ಯಾಸಿಗಳೆಂದು ಅರ್ಥ ಕಲ್ಪಿಸದಿರಿ ಮುಖ್ಯಮಂತ್ರೀಜಿ! ಚಚರ್ೆ ಅಪವ್ಯಯವಾಗೋದು ಸರಿಯಲ್ಲ. ದೇಶಪ್ರೇಮಕ್ಕೆ ಶಿಸ್ತಿಗೆ ರಾಷ್ಟ್ರದಲ್ಲೊಂದೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ನಮ್ಮ ಪಕ್ಷದಲ್ಲಿ ವ್ಯಕ್ತಿ ಎಷ್ಟೇ

ದೊಡ್ಡವನಿದ್ದರೂ ಚಿಕ್ಕವನೆ! ಆದ್ದರಿಂದ ಆವೇಶಕ್ಕೊಳಗಾಗದೆ ಸಮಾಧಾನಚಿತ್ತದಿಂದ ಆಲಿಸಿರಿ ಎಂದು ಹೇಳಿದ ಬಳಿಕ ಆತ್ಮಾರಾಂ ಕಡೆ ಕಣ್ಣು ಮಿಟುಕಿಸಿದರು.

ಸನ್ಮಾನ್ಯ ಮುಖ್ಯಮಂತ್ರೀಜಿ, ತಮ್ಮನ್ನು ಇನ್ನಷ್ಟು ಹಿರಿಯರನ್ನಾಗಿ ಪರಿವತರ್ಿಸುವ ಸಲುವಾಗಿ ಹೈಕಮ್ಯಾಂಡ್ ಎರಡು ಕಠಿಣ ನಿರ್ಣಯಗಳನ್ನು ಕೈಗೊಂಡಿದೆ. ಅವುಗಳಲ್ಲಿ ಮುಖ್ಯವಾದುದೆಂದರೆ ನೊಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಾವು ಸಾರ್ವಜನಿಕವಾಗಿ ಕ್ಷಮಾಪಣೆ ಯಾಚಿಸಬೇಕು. ಗೌರವಯುತ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಸಂಸದ ಪನ್ನಗಶಯನ ಅವರಿಗೆ ಅಧಿಕಾರ ಹಸ್ತಾಂತರಿಸಬೇಕು. ತಾವು ತಮ್ಮ ವಾರ್ಧಕ್ಯವನ್ನು ಪವಿತ್ರ ಜೈಹಿಂದ್ ಭವನದೊಳಗೆ ಅನುಭವಿಸಬೇಕು. ಇದಕ್ಕೆ ನಿಮ್ಮ ಅಭಿಪ್ರಾಯವೇನು!

ಭಿಂಡೆಯವರ ಮಮರ್ಾಘಾತ ಮಾತುಗಳಿಂದ ತತ್ತರಿಸುತ್ತ ನಖಶಿಖಾಂತ ಕೆರಳಿದ ಮುಖ್ಯಮಂತ್ರಿಗಳು ತಮ್ಮ ಕೈಯಲ್ಲಿದ್ದ ಬೀಪಿ ಮಾತ್ರೆಯನ್ನು ಅಭಿಮಂತ್ರಿಸಿ ಎಸೆದು.. ಏನು ಹೇಳುತ್ತಿರುವಿರಿ ಸ್ವಾಮಿ! ಏನೆಲ್ಲಾ ಅವಮಾನ ಅನುಭವಿಸಿ ಮೂಲೇಲಿದ್ದ ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ನಾನು ರಾಜಿನಾಮೆ ನೀಡುವುದೆ! ಪಕ್ಷದಿಂದ ಹೊರ ನಡೆದು ಹೊಸ ಪಕ್ಷ ಕಟ್ಟುವೆನೇ ಹೊರತು ಅಧಿಕಾರ ಹಸ್ತಾಂತರಿಸುವುದು ಮಾತ್ರ ಸಾಧ್ಯವಿಲ್ಲ. ನನ್ನನ್ನು ಅಂಡರೆಸ್ಟಿಮೇಟ್ ಮಾಡ್ತೀರೆಂದು ಮೊದಲೇ ತಿಳಿದಿದ್ರೆ ನಾನಿಲ್ಲಿಗೆ ಬರುತ್ತಲೇ ಇರಲಿಲ್ಲ, ರ್ರೀ ತುಳಸಿಯವರೆ ಏಳ್ರಿ ಹೊರಡೋಣ, ಅಸೆಂಬ್ಲೀನ ಡಿಜಾಲ್ವ್ ಮಾಡಿ ಎಲೆಕ್ಷನ್ನೆದುರಿಸೋಣ ಎಂದು ಗಜರ್ಿಸಿದರು.

ಅವರ ಮಾತಿನಿಂದ ಹೈಕಮ್ಯಾಂಡ್ ದಿಗ್ಭ್ರಮೆಗೊಂಡಿತು. ವಿಚಲಿತರಾಗದೆ ಜಾಯಮಾನಕ್ಕನುಸಾರವಾಗಿ ಪುನಃ ಮೈಥಿಲಿಯಲ್ಲಿ ಪರಸ್ಪರ ಚಚರ್ಿಸಿದರು. ಬಳಿಕ ಪೂಣರ್ಾನಂದರು ಎದ್ದು ನಿಂತರು, ವಶೀಕರಣ ವಿದ್ಯೆಯಲ್ಲಿ ಪಾರಂಗತರೆನಿಸಿದ್ದ ಅವರು ತೀಕ್ಷ್ಣವಾಗಿ ನೋಡಿದರು, ಬಳಿಕ ಮೆಲ್ಲಗೆ ಹತ್ತಿರ ಬಂದು ಮಾಂತ್ರಿಕ ಸ್ಪರ್ಶವೋ ಎಂಬಂತೆ ಅವರ ಬೆನ್ನಿನ ಮೇಲೆ ಕೈಯನ್ನು ಹರಿದಾಡಿಸಿದರು. ಮುಗುಳ್ನಗುತ್ತ..

ದಶಕದ ಹಿಂದೆಯೇ ಷಷ್ಟ್ಯಬ್ಧಿಯನ್ನು ಆಚರಿಸಿಕೊಂಡಿರುವ ನೀವು ನಿಮ್ಮ ಯೌವನದಲ್ಲಿ ಹೇಗಿದ್ದಿರಬಹುದು! ತಂದೆ ಸ್ಥಾನದಲ್ಲಿ ಹೇಳುತ್ತಿರುವೆ. ನಿಮ್ಮಂಥ ಶೀಘ್ರಕೋಪಿಗಳ ಅಗತ್ಯ ನಮ್ಮ ಪಕ್ಷಕ್ಕಿದೆ. ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ, ಆದರೆ ಜೇನುನೊಣಗಳ ಅಭಿವೃದ್ಧಿ ವಿಲೇವಾರಿಗೆ ಸಂಬಂಧಿಸಿದಂತೆ ಪ್ರಾಯಶ್ಚಿತ್ತ ಅನುಭವಿಸಬಹುದಲ್ಲವೆ! ತಾವು ಸಕುಟುಂಬ ಸಮೇತರಾಗಿ ವಾರಣಾಸಿಗೆ ಆಗಮಿಸಿ, ನಮ್ಮ ಪಕ್ಷದ ಕಾರ್ಯಕರ್ತರು ನಿಮ್ಮೆಲ್ಲರಿಗೆ ಪವಿತ್ರ ಸ್ನಾನ ಮಾಡಿಸುವ ಸಲುವಾಗಿ ಅಲ್ಲಿನ ಮಣಿಕಣರ್ಿಕಾ ಘಾಟ್ ತಟದಲ್ಲಿ ಕಾಯ್ತಿರ್ತಾರೆ ಎಂದು ತಣ್ಣಗೆ ಸಲಹೆ ನೀಡಿದರು.

ಪರಮ ಆಸ್ತೀಕರಾದ ನಾವು ಕಾಶಿವಿಶ್ವನಾಥಸ್ವಾಮಿಯ ಸದ್ಭಕ್ತರು, ಸಾಲಿಯಾನ ಶಿವರಾತ್ರಿಯಂದು ವಾರಣಾಸಿಗೆ ಬಂದು ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ಪುನೀತರಾಗುತ್ತಲೇ ಬಂದಿರುವೆವು ಸ್ವಾಮಿ. ಆದರೆ ಜೇನುನೊಣಗಳ ಕಡಿತ ನಂಜಿನ ಕಾರಣಕ್ಕೆ ಮೂರು ತಿಂಗಳು ಯಾವುದೇ ಸ್ನಾನ ನಿಷಿದ್ಧವೆಂದು ನಮ್ಮ ಕುಟುಂಬ ವೈದ್ಯರು ಕಟ್ಟುನಿಟ್ಟಾಗಿ ಹೇಳಿದ್ದಾರೆ ತೀರ್ಥರೂಪರೆ. ಆದ್ದರಿಂದ ನಾನಾಗಲೀ, ನಮ್ಮ ಶಾಸಕರಾಗಲೀ ಗಂಗಾನದಿಯನ್ನು ಸಮೀಪಿಸುವ ಪ್ರಶ್ನೆಯೇ ಇಲ್ಲ. ಇನ್ನು ಪಕ್ಷದ ಸಂಘಟನೆಗೆ ನಿಮ್ಮ ಪನ್ನಗಶಯನರು ಎಷ್ಟು ಮುಖ್ಯರೋ ನಮಗೆ ನಮ್ಮ ನೊಣಗಳು ಅಷ್ಟೇ ಮುಖ್ಯ. ಆದ್ದರಿಂದ ಆ ಮಕ್ಷಿಕಾಭಿವೃದ್ಧಿ ಯೋಜನೆಗೆ ಈ ಕ್ಷಣ ಎರಡು ಕೋಟಿ ಮುಂಜೂರು ಮಾಡ್ತಿದ್ದೀನಿ ಎಂದು ಖಡಾಖಂಡಿತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅದರಿಂದ ಹೈಕಮ್ಯಾಂಡ್ ಪರಸ್ಪರ ಮುಖ ನೋಡಿಕೊಂಡರು!

ದೇಶದ ಸೌಂದರ್ಯನಿಧಿ ಈಶಾನ್ಯಜೈನ್ರವರ ಆರೋಗ್ಯದ ದೃಷ್ಟಿಯಿಂದಲಾದರೂ ಕನರ್ಾಟಕದ ಗುಣಸಾಗರದಲ್ಲಿ ನಡೆಸಲುದ್ದೇಶಿಸಿರುವ ಸಮ್ಮೇಳನವನ್ನು ಮುಂದೂಡಬಹುದಲ್ಲವೆ! ಎಂದು ಭಿಂಡೆ ಅಂಗಲಾಚಿದ್ದಕ್ಕೆ ಮುಖ್ಯಮಂತ್ರಿಗಳು.. ಮುಂದೂಡುವ ಪ್ರಶ್ನೆ ಉದ್ಭವಿಸುವುದಿಲ್ಲ ಸಹೋದರರೆ, ರಾಜ್ಯದ ಆರೋಗ್ಯ ಬಲಿ ಕೊಟ್ಟಾದರೂ ಆ ತಾಯಿಯ ಆರೋಗ್ಯ ಕಾಪಾಡಲು ಪಣ ತೊಟ್ಟಿದೆ ನಮ್ಮ ಸಕರ್ಾರ ಎಂದು ಹೇಳುತ್ತ ಎಲ್ಲರಿಗೂ ಕೈಮುಗಿಯುತ್ತಿರುವಾಗಲೇ.. ಅದೇ ದಿಲ್ಲಿಯ ಕಸ್ತೂರಿಭಾ ರಸ್ತೆಯ ಡೆಡ್ಡೆಂಡಲ್ಲಿದ್ದ ಪ್ರಜಾತಂತ್ರಮಂಚ್ ಕಛೇರಿಯಲ್ಲಿ ನೀವೇನು ಹೇಳಿದರೂ ನಾವು ಮಾತ್ರ ಆಪರೇಷನ್ ವಿಭ್ರಿಯಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ನಮ್ಮ ರಾಜ್ಯದಲ್ಲಿ ಅವರ ಪಕ್ಷವಿರಬೇಕು, ಇಲ್ಲವೆ ನಮ್ಮ ಪಕ್ಷವಿರಬೇಕು!

ನಮ್ಮ ರಾಜ್ಯದಲ್ಲಿನ ಸಂಕಟ ದೂರದ ದಿಲ್ಲಿಯಲ್ಲಿ ಕೂತಿರೋ ನಿಮಗೆ ಅರ್ಥವಾಗೋದಿಲ್ಲ, ಬೇಕಾದ ಶಿಸ್ತುಕ್ರಮ ಜರುಗಿಸಿಕೊಳ್ಳಿರಿ ಎಂದು ವಿರೋಧ ಪಕ್ಷದ ನಾಯಕ ಹುಂಡಿಯವರು ಹೈಕಮ್ಯಾಂಡ್ಗೆ ಸ್ಪಷ್ಟವಾಗಿ ಹೇಳಿ ಪಾಂಡೆಯವರ ಕೈಹಿಡಿದುಕೊಂಡು ಹೊರಬಂದರು.. ಕನರ್ಾಟಕಭವನದಲ್ಲಿನ ಎರಡು ಕೋಣೆಗಳಲ್ಲಿ ಆ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿ ಪರ್ತಕರ್ತರಿಗೆ ನಡೆದ ಸಂಗತಿಗಳನ್ನು ಚಾಚೂ ತಪ್ಪದೆ ವಿವರಿಸಿದ ಪರಿಣಾಮವಾಗಿ ರಾಜ್ಯದ ಜನತೆ ದವಡೆಗೆ ದವಡೆ ಮಸೆಯಿತಲ್ಲದೆ ಇದೇನು ಬಂತಪ್ಪಾ ಇವರಿಗೆ ಕೇಡುಗಾಲ ಎಂದು ಸಾಮೂಹಿಕವಾಗಿ ಉದ್ಗರಿಸಿತು. ಗುಣಸಾಗರ ಎಂಬ ಗ್ರಾಮವು ತಮ್ಮ ರಾಜ್ಯದಲ್ಲಿರುವುದೇ! ಇದ್ದರೆ ಅದು ಯಾವ ಮೂಲೆಯಲ್ಲಿರುವುದು! ಅಲ್ಲಿ ನಡೆಯುತ್ತಿರಬಹುದಾದ ವಿದ್ಯಮಾನಗಳಾದರು ಯಾವುವು! ಅದು ತಮ್ಮ ರಾಜ್ಯದಲ್ಲಿದ್ದರೆಷ್ಟು ಬಿಟ್ಟರೆಷ್ಟು ಎಂದೆಲ್ಲ ಚಿಂತಿಸಲಾರಂಭಿಸಿದ ಪರಿಣಾಮವಾಲ್…

ನಾಡಿನಲ್ಲಿ ಅದುವರೆಗೆ ನೇಪಥ್ಯಕ್ಕೆ ಸರಿದು ಹಳೆಯ ನೆನಪುಗಳನ್ನು ತಮ್ಮ ಪಾಡಿಗೆ ತಾವು ಮೆಲುಕು ಹಾಕುತ್ತಿದ್ದ ಎಡ ಬಲಪಂಥೀಯ ಸಂಘಟನೆಗಳು ನೊಣ ವಿಭ್ರಿಯಾ ಎಂಬೆರಡು ಉಪದ್ರವಿ ಶಬ್ದಗಳನ್ನು ಕೈಗೆತ್ತಿಕೊಂಡು ವಿಷಯಾಧಾರಿತ ಹೋರಾಟಗಳನ್ನು ರಾಜ್ಯದಾದ್ಯಂತ ಹಮ್ಮಿಕೊಂಡ ಪರಿಣಾಮವಾಗಿ..

‍ಲೇಖಕರು G

27 October, 2012

3 Comments

  1. mahantesh navalkal

    kumvi only kumvi adbhuta hats up gurugale

    mahantesh navalkal

  2. ಹನುಮಂತ ಹಾಲಿಗೇರಿ

    ಕಾದಂಬರಿಯ ಈ ಆಯ್ದಭಾಗ ಸಮಕಾಲೀನ ರಾಜಕೀಯವನ್ನು ತನ್ನ ವಸ್ತುವನ್ನಾಗಿ ಒಳಗೊಂಡಿದ್ದರೂ ಸಹ ಎಂದಿನಂತೆ ಕುಂವೀ ಸರ್ ನಕ್ಕುನಗಿಸುವ ವಿಡಂಬನಾ ಶೈಲಿ ಬಹಳ ಇಷ್ಟವಾಗುತ್ತದೆ.

  3. nageshgubbi

    ಕುಂವಿ ಕಮಾಲ್!!
    ಸಮಕಾಲೀನ ರಾಜಕೀಯದ ಚಿತ್ರಣ ಸೊಗಸಾಗಿ ಬಿಂಬಿತವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading