“KEEP IT CHATTY AND KEEP IT SHORT”

ಸಿ. ಎನ್. ರಾಮಚಂದ್ರನ್
ಬೆಂಗಳೂರು ಸಾಹಿತ್ಯೋತ್ಸವವನ್ನು ಕುರಿತ ಗೌರಿ ಲಂಕೇಶ್ ಅವರ ಪತ್ರವನ್ನು ಓದಿ ಮತ್ತು ಆ ಉತ್ಸವದ ಬಗ್ಗೆ ನಡೆಯುತ್ತಿರುವ ವಾದವಿವಾದಗಳನ್ನು ಗಮನಿಸಿ, ಎರಡು ವರ್ಷಗಳ ಹಿಂದೆ ನಾನು ಆ ಉತ್ಸವದಲ್ಲಿ ಭಾಗವಹಿಸಿದಾಗ ನನಗಾದ ಅನುಭವವನ್ನು ಓದುಗರ ಮುಂದಿಡುತ್ತಿದ್ದೇನೆ.
ನಾನು ವಿಕ್ರಂ ಸಂಪತ್ ಅವರನ್ನು ಇದುವರೆಗೆ ನೋಡುವ ಸಂದರ್ಭ ಬಂದಿಲ್ಲ ಮತ್ತು ನಾನು ಯಾವ ಅವಾರ್ಡನ್ನೂ ಹಿಂತಿರುಗಿಸಿಲ್ಲ. ಮೂರು ವಾರಗಳ ಹಿಂದೆ ಡಾ. ಚಂದ್ರಶೇಖರ ಕಂಬಾರರು ಈ ಉತ್ಸವದಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿದಾಗ ನನಗೆ ಅದರಲ್ಲಿ ಆಸಕ್ತಿಯಿಲ್ಲವೆಂದು ಹೇಳಿದೆ. ಏಕೆಂದು ಅವರು ಕಾರಣವನ್ನು ಕೇಳಿದಾಗ ನನ್ನ ಅನುಭವವನ್ನು ಅವರಿಗೆ ತಿಳಿಸಿದೆ; ಅದನ್ನೇ ಈಗ ದಾಖಲಿಸುತ್ತಿದ್ದೇನೆ.
ಎರಡು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಇದೇ ಉತ್ಸವದಲ್ಲಿ ಭಾಗವಹಿಸಲು ನನ್ನ ಹಿರಿಯ ಮಿತ್ರರಾಗಿದ್ದ ಪ್ರೊ. ಶ್ರೀನಿವಾಸ ಹಾವನೂರರ ಸಹೋದರಿ ಸಂಪರ್ಕಿಸಿ, ಒಂದೆರಡು ಗೋಷ್ಠಿಗಳ ವಿಷಯಗಳನ್ನು ಪ್ರಸ್ತಾಪಿಸಿ, ನನಗೆ ಯಾವುದರಲ್ಲಿ ಭಾಗವಹಿಸಲು ಆಸಕ್ತಿಯಿದೆಯೆಂದು ಕೇಳಿದಾಗ, ಭಾಷಾಂತರ ಗೋಷ್ಠಿಯಲ್ಲಿ ಭಾಗವಹಿಸುತ್ತೇನೆಂದು ಹೇಳಿದೆ.
ಆದರೆ, ನನ್ನ ಹತ್ತಿರ ಕಾರ್ ಇಲ್ಲವೆಂದು, ವಾಹನ ವ್ಯವಸ್ಥೆ ಮಾಡಲಾಗುತ್ತದೆಯೆ ಎಂದು ಕೇಳಿದಾಗ ಅವರು ಸಿಟಿ ಟ್ಯಾಕ್ಸಿ ಮಾಡಿಕೊಂಡು ಬರಲು ಹೇಳಿದರು. ಸರಿ ಎಂದು ತುಂಬಾ ಉತ್ಸಾಹದಿಂದ ಒಂದು ವಾರ ಭಾಷಾಂತರವನ್ನು ಕುರಿತು ಇಂಗ್ಲೀಷ್ನಲ್ಲಿ ಟಿಪ್ಪಣಿಗಳನ್ನು ಮಾಡಿಕೊಂಡೆ. ಒಂದೆರಡು ದಿನಗಳಲ್ಲಿ ಆ ಗೋಷ್ಠಿಯ ನಿರ್ವಾಹಕಿ (ಬೆಂಗಳೂರಿನವರು) ನನ್ನನ್ನು ಸಂಪರ್ಕಿಸಿ, ಆ ಗೋಷ್ಠಿಯಲ್ಲಿ ಭಾಗವಹಿಸುವ ಇತರ ವಿದ್ವಾಂಸರ ಹೆಸರುಗಳನ್ನು ಹೇಳಿದರು; ನನಗೆ ಯಾರೂ ಗೊತ್ತಿರಲಿಲ್ಲ.
ಗೋಷ್ಠಿ ಮಧ್ಯಾಹ್ನ ಇದ್ದುದರಿಂದ ನಾನು ಎರಡು ಘಂಟೆಗೆ ಹೊರಡಲು ಸಿದ್ಧವಾಗುತ್ತಿದ್ದಾಗ ನಿರ್ವಾಹಕಿ ನನ್ನನ್ನು ಸಂಪರ್ಕಿಸಿ, ತುಂಬಾ ಸಂಕೋಚದಿಂದ ಅವರು ನನ್ನೊಡನೆ ಬರಬಹುದೆ ಎಂದು ಕೇಳಿದರು; ನಾನು ಆಗಲಿ ಎಂದು ಹೇಳಿದೆ. ದಾರಿಯಲ್ಲಿ, ಮಾತನಾಡುವಾಗ ಗೋಷ್ಠಿಯ
ರೂಪುರೇಷೆ ಕೇಳಿದಾಗ ಅವರು ಹೇಳಿದ್ದು ಇಷ್ಟೇ: “ನನಗೆ ಹೇಳಿರುವುದು ಒಂದೇ ವಾಕ್ಯ: ’keep it chatty and keep it short. ತುಂಬಾ ಗಂಭೀರವಾಗಿರುವುದು ಬೇಡ’”
ಉತ್ಸವದ ಸ್ಥಳವನ್ನು ಸೇರಿದಾಗ, ನಮ್ಮ ಗೋಷ್ಠಿಯ ಸ್ಥಳ ಎಲ್ಲಿ ಎಂದು ಹುಡುಕಿದೆವು; ಯಾರೂ ವ್ಯವಸ್ಥಾಪಕರು ಎಲ್ಲಿಯೂ ಕಾಣಲಿಲ್ಲ. ಕೊನೆಗೆ, ಹಾವನೂರರ ಸಹೋದರಿ ನಮ್ಮನ್ನು ಕಂಡು, ಗೋಷ್ಠಿಯ ಸ್ಥಳಕ್ಕೆ ಕರೆದುಕೊಂಡು ಹೋಗಿ, ’ಇಲ್ಲಿಯೇ ಇರಿ; ನಾಲ್ಕು ಘಂಟೆಗೆ ಪ್ರಾರಂಭವಾಗಬಹುದು’ ಎಂದರು. ಗೋಷ್ಠಿ ಪ್ರಾರಂಭವಾದಾಗ, ಸುಮಾರು ೨೫-೩೦ ಶ್ರೋತೃಗಳಿದ್ದಿರಬಹುದು. ಮೊದಲಿಗೆ ನಾನು ಮಾತನಾಡಿ, ಭಾಷಾಂತರದ ಸಮಸ್ಯೆಗಳನ್ನು ವಿವರಿಸಿದೆ; ಯಾರಿಗೂ ಆಸಕ್ತಿಯಿರಲಿಲ್ಲವೆಂದು ನನಗೆ ತೋರಿತು. ಅನಂತರ ಹಿಂದಿಯಲ್ಲಿ ಬರೆಯುವ ’ತುಂಬಾ ಪ್ರಸಿದ್ಧರೆಂದು ಪರಿಚಯಿಸಿದ’ ವಿದುಷಿ ತಮ್ಮಹಿಂದಿ ಅನುವಾದಗಳಿಗೆ ಎಂತಹ ಮೆಚ್ಚುಗೆ ಸಿಕ್ಕಿದೆ ಎಂದು ಮಾತನಾಡಿದರು. ಅನಂತರ ಉಳಿದ ಇಬ್ಬರು. ಅವರೆಲ್ಲರೂ ಸ್ನೇಹಿತರೊಡನೆ ಮಾತನಾಡುವಂತೆ ವೈನೋದಿಕ ಶೈಲಿಯಲ್ಲಿ ಮಾತನಾಡಿ ರಂಜಿಸಿದರು.
ಗೋಷ್ಠಿಯ ನಂತರ, ನಾನು ಹೊರಡುತ್ತೇನೆಂದು ಹೇಳಿ ಟಾಕ್ಸಿ ಖರ್ಚಿನ ಬಗ್ಗೆ ಕೇಳಿದಾಗ ’ಇಲ್ಲಿ ಬರುವ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲಿ ಬರುತ್ತಾರೆ; ಆದುದರಿಂದ ಪ್ರಯಾಣದ ಖರ್ಚನ್ನು ಕೊಡಲಾಗುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದು ಹೇಳಿ, ಸುಮಾರು ಅರ್ಧಘಂಟೆಯ ನಂತರ ’ಇದು ನಿಮಗೆ ವಿಶೇಷ’ ಎಂದು ವಾಹನದ ಖರ್ಚನ್ನು (ರೂ ೫೦೦) ಕೊಟ್ಟರು. ನಾನು ಅಲ್ಲಲ್ಲಿ ಸುತ್ತಾಡಿದೆ; ಕೆಲವರು ಬೀರ್ ಕುಡಿಯುತ್ತಾ, ಕೆಲವರು ಹರಟೆ ಹೊಡೆಯುತ್ತಾ, ಕೆಲವರು ’ಪ್ರಸಿದ್ಧ ಹಾಗೂ ಗ್ಲಾಮರಸ್’’ ಆದ ಹಿಂದಿ ಕವಿಗಳ ಮಾತು ಕೇಳುತ್ತಾ ಇದ್ದರು.
ಮೂರೂ ದಿನಗಳ ಕಾರ್ಯಕ್ರಮಗಳಲ್ಲಿ ’ವಿಶೇಷ ಉಪನ್ಯಾಸ,’ ’ಸಂದರ್ಶನ,’ ’ಚರ್ಚೆ’ ಇತ್ಯಾದಿಗಳಲ್ಲಿ ಕಾಣಿಸಿಕೊಂಡಿದ್ದವರು (ಉತ್ಸವದ ಕೇಂದ್ರ ಬಿಂದುಗಳಾಗಿದ್ದವರು) ಇಬ್ಬರೇ ಇಬ್ಬರು –ಹಿಂದಿ ಸಾಹಿತ್ಯ-ಚಲನಚಿತ್ರ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದ ಕವಿ-ಸಾಹಿತಿಗಳು. ಎಲ್ಲೆಲ್ಲಿಯೂ ಇಂಗ್ಲೀಷ್ / ಹಿಂದಿ ಸಂಭಾಷಣೆ. ನಾನಿಲ್ಲಿ ಕಳೆದುಹೋಗಿದ್ದೇನೆ; ಇಂತಹ ’ಗ್ಲಾಮರಸ್’ ಸಮಾವೇಶಗಳಲ್ಲಿ ಭಾಗವಹಿಸಲು ನಾನು unfit ಎನಿಸಿತು.
ಪ್ರಾಮಾಣಿಕವಾಗಿ ಮತ್ತೂ ಒಂದು ವಿಷಯವನ್ನು ಪ್ರಸ್ತಾಪಿಸಬೇಕು. ಅಂದೇ ಪ್ರೊ. ವಿವೇಕ ರೈ ಅವರು ನಡೆಸಿಕೊಟ್ಟ ’ತುಳು ಸಾಹಿತ್ಯ-ಸಂಸ್ಕೃತಿ’ಗಳನ್ನು ಕುರಿತ ಗೋಷ್ಠಿ ತುಂಬಾ ಯಶಸ್ವಿಯಾಯಿತು. ಎಂದರೆ, ಆಸಕ್ತ ಕೇಳುಗರೂ ಗಮನೀಯವಾಗಿದ್ದರು (ಸುಮಾರು ೧೦೦?). ಆ ಗೋಷ್ಠಿಯ ಯಶಸ್ಸನ್ನು ಗಮನಿಸಿ, ಅದೇ ತಂಡವನ್ನು ಕೆಲವು ತಿಂಗಳುಗಳ ನಂತರ ನಡೆದ ’ದೆಹಲಿ ಉತ್ಸವಕ್ಕೂ ಆಹ್ವಾನಿಸಿದ್ದರು.
ಇದರ ಅರ್ಥ, ರಾಷ್ಟ್ರೀಯ ನೆಲೆಯಲ್ಲಿ ನಡೆಯುವ ’ಉತ್ಸವ’ಗಳಲ್ಲಿ ಇಂಗ್ಲೀಷ್-ಹಿಂದಿ ಲೇಖಕರು ವಿಜೃಂಭಿಸುವುದು ಮತ್ತು ಹೆಚ್ಚಿನ ಕಾರ್ಯಕ್ರಮಗಳು ’ರಾಷ್ಟ್ರೀಯ ನೆಲೆಯಲ್ಲಿ’ ಪ್ರಖ್ಯಾತರಾದವರ ಸುತ್ತ ನಡೆಯುವುದು, ಪ್ರಾಯಃ, ಅನಿವಾರ್ಯ. ಮತ್ತು ಅಂತಹ ಉತ್ಸವಗಳಲ್ಲಿ ಭಾಗವಹಿಸುವುದು ಅಥವಾ ಬಿಡುವುದು ಲೇಖಕರ ಆಯ್ಕೆಗೆ ಬಿಟ್ಟದ್ದು.





0 Comments