ಇಂಗ್ಲಿಷ್ ಭಾಷೆಯ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪುರಸ್ಕೃತ ಅಮಿತಾವ್ ಘೋಷ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ನವದೆಹಲಿಯಲ್ಲಿ ಇಂದು ಜ್ಞಾನಪೀಠ ಪ್ರಶಸ್ತಿ ಸಮಿತಿ ಅವಿರೋಧವಾಗಿ ಘೋಷ್ ಅವರನ್ನು 54ನೇ ಜ್ಞಾನಪೀಠ ಪ್ರಶಸ್ತಿಗಾಗಿ ಆಯ್ಕೆ ಮಾಡಿತು.
ನಾಗೇಶ್ ಹೆಗಡೆ ಅವರು ಇತ್ತೀಚಿಗೆ ಅಮಿತಾವ್ ಘೋಷ್ ಅವರ ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ ಇಲ್ಲಿದೆ-
ಕೋಣೆಗೆ ಬಂದಿರುವ ಆನೆ ಕಾಣದೇಕೆ?
-ನಾಗೇಶ್ ಹೆಗಡೆ
ನಮ್ಮ ದೇಶದ ಯಾವುದಾದರೂ ಒಬ್ಬ ಪ್ರಖ್ಯಾತ ರಾಕೆಟ್ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ? ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳಿದರೆ ಪಟಪಟನೆ ಹತ್ತಾರು ಸರಿ ಉತ್ತರಗಳು ಬರುತ್ತವೆ. ನಮ್ಮ ದೇಶದ ಪ್ರಸಿದ್ಧ ಪರಮಾಣು ವಿಜ್ಞಾನಿಯ ಹೆಸರು ಗೊತ್ತಿದೆಯೆ? ಅದಕ್ಕೂ ಪಟಪಟನೆ ನಾಲ್ಕಾರು ಸರಿ ಉತ್ತರಗಳು ಬರುತ್ತವೆ.
ಬಹಳಷ್ಟು ಬಾರಿ ಆ ಪ್ರಶ್ನೆಯ ಉತ್ತರವೇ ಈ ಪ್ರಶ್ನೆಯ ಉತ್ತರವೂ ಆಗಿರುತ್ತದೆ. ಹಾಗಿದ್ದರೆ, ನಮ್ಮ ದೇಶದ ಪ್ರಸಿದ್ಧ ಹವಾಮಾನ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ? ಈಗ ಎಲ್ಲೆಡೆ ಮೌನ ಆವರಿಸುತ್ತದೆ. ತಪ್ಪು ಉತ್ತರ ಕೊಡಲಿಕ್ಕೂ ಮಕ್ಕಳಿಗೆ ಒಂದು ಹೆಸರು ಹೊಳೆಯುವುದಿಲ್ಲ.
ನಮ್ಮ ದೇಶದ ಕ್ರೀಡಾರಂಗಕ್ಕೂ ವಿಜ್ಞಾನರಂಗಕ್ಕೂ ತುಂಬ ಹೋಲಿಕೆಗಳಿವೆ. ಒಲಿಂಪಿಕ್ಸ್ ಪದಕ ಪಡೆಯುವಲ್ಲಿ ನಮ್ಮ ಸ್ಥಾನಮಾನ ಎಷ್ಟಿದೆಯೊ ಅಷ್ಟೇ ಕಳಪೆಯ ಸ್ಥಾನಮಾನ ವಿಜ್ಞಾನದ ನೊಬೆಲ್ ಪದಕ ಪಡೆಯುವಲ್ಲಿಯೂ ಇದೆ. ಕ್ರೀಡಾರಂಗದಲ್ಲಿ ಕ್ರಿಕೆಟ್, ಟೆನ್ನಿಸ್‌ಗಳಿಗೆ ಇನ್ನಿಲ್ಲದ ಮಾನ್ಯತೆ, ಪ್ರಭಾವಳಿ ಇದೆ. ಆದರೆ ತೀರ ಸಾಮಾನ್ಯ ಶಾಲಾ ಮಕ್ಕಳ ಕೈಗೆಟುಕಬಹುದಾದ ಓಟ, ಜಿಗಿದಾಟ (ಜಿಮ್ನಾಸ್ಟಿಕ್)ಗಳಿಗೆ ಮಾನ್ಯತೆ ಇಲ್ಲ. ವಿಜ್ಞಾನದಲ್ಲೂ ಅಷ್ಟೆ: ಪರಮಾಣು ವಿಜ್ಞಾನಕ್ಕೆ, ಕ್ಷಿಪಣಿ ತಂತ್ರಜ್ಞಾನಕ್ಕೆ ಸಿಗುವ ಮಾನ್ಯತೆ ಹವಾಮಾನ ವಿಜ್ಞಾನಕ್ಕೆ ಇಲ್ಲ. ಹವಾಮಾನ ಅಧ್ಯಯನಕ್ಕೆ ಬೇಕಾದ ಸಲಕರಣೆಗಳನ್ನು ಶಾಲಾ ಮಕ್ಕಳೇ ಹೊಂದಿಸಿಕೊಳ್ಳಬಹುದು, ಅಥವಾ ಅಲ್ಪವೆಚ್ಚದಲ್ಲಿ ಖರೀದಿಸಿ ತರಬಹುದು. ಆದರೆ ಅದರ ಮಹತ್ವವನ್ನು ಗ್ರಹಿಸಲು ಬೇಕಾದ ಅಆಇಈ ತರಬೇತಿ ಕೂಡ ನಮ್ಮ ಶಿಕ್ಷಕರಿಗೆ ಇಲ್ಲ.
ಹವಾಮಾನ ದಿನದಿನಕ್ಕೆ ಕ್ರೂರವಾಗುತ್ತಿದೆ. ಬರ- ನೆರೆ ಎಂಬಂಥ ಕನಿಷ್ಠ ಗರಿಷ್ಠಗಳ ಅಂಚಿನ ಹೊಯ್ದಾಟವೇ ನಿತ್ಯದ ಸುದ್ದಿಯಾಗುತ್ತಿದೆ. ದಾಖಲೆಗಳ ಪ್ರಕಾರ ಕಳೆದ ಜುಲೈ ತಿಂಗಳಲ್ಲಿ ಜಾಗತಿಕ ಸರಾಸರಿ ಉಷ್ಣತೆ ಹಿಂದಿನ ಎಲ್ಲ ಜುಲೈ ತಿಂಗಳ ದಾಖಲೆಗಳನ್ನೂ ಮೆಟ್ಟಿ ನಿಂತಿದೆ. ಎಲ್ಲ ಜುಲೈಗಳಷ್ಟೇ ಅಲ್ಲ, ನಾಸಾ ವರದಿಯ ಪ್ರಕಾರ, 1880ರಿಂದ ಭೂಮಿಯ ತಾಪಮಾನದ ದಾಖಲೆ ಇಡುವ ಪ್ರಕ್ರಿಯೆ ಆರಂಭವಾದಾಗಿನಿಂದ ಭೂತಾಪ ಇಷ್ಟು ಏರಿಕೆ ಆಗಿದ್ದು ಇದೇ ಮೊದಲು. ಈ ಏರಿಕೆ ಹಠಾತ್ತಾಗಿ ಆಗಿದ್ದೇನೂ ಇಲ್ಲ. ಕಳೆದ ಒಂದು ತಲೆಮಾರಿನಿಂದ ಆಗುತ್ತಲೇ ಇದೆ. ಹಿಂದಿನ 14 ವರ್ಷಗಳಲ್ಲಿ ಒಟ್ಟೂ 12 ವರ್ಷ ಅತ್ಯಧಿಕ ಉಷ್ಣತೆಯ ವರ್ಷಗಳೇ ಆಗಿದ್ದವು. ಬುಂದೇಲಖಂಡದಲ್ಲಿ ಸತತ ಮೂರು ಬರವರ್ಷಗಳಿಂದಾಗಿ ಶ್ರಮಜೀವಿಗಳು ನಿರಾಶ್ರಿತರಾಗಿ ದಿಲ್ಲಿಯ ಮೇಲುಸೇತುವೆಗಳ ಕೆಳಗೆ, ಕೊಳಕು ಕೊಳ್ಳಗಳ ಅಂಚಿಗೆ ಸಂತೆ ನೆರೆದಿದ್ದಾರೆ.
ನೀರಿನ ರೈಲಿಗಾಗಿ ಕಾದುನಿಂತ ಮರಾಠಾವಾಡಾದ ಜನರ ಸ್ಥಿತಿಯಂತೂ ಗೊತ್ತೇ ಇದೆ. ಛತ್ತೀಸಗಢದಲ್ಲಿ ಅರಣ್ಯಗಳ ಮಧ್ಯೆ ಬರಗಾಲ ಬಂದಿದೆ. ಅಲ್ಲಿ ಜೇನು ಮತ್ತು ಮಹುವಾ ಇಳುವರಿ ಕುಸಿದಿದ್ದರಿಂದ ಕೋಟಿಗಟ್ಟಲೆ ಆದಿವಾಸಿಗಳು ತತ್ತರಿಸಿದ್ದಾರೆ. ಇದೀಗ ಉತ್ತರ ಭಾರತದಲ್ಲಿ ಗಂಗೆ, ಯಮುನೆ, ಸೋನ್ ನದಿಗಳು ಧ್ವಂಸಧಾರೆಯನ್ನೇ ಹರಿಸುತ್ತಿವೆ. ಬಿಹಾರದಲ್ಲಿ ಎಂದಿಗಿಂತ ಕಡಿಮೆ ಮಳೆಯಾದರೂ ಏಳು ನದಿಗಳ ನೆರೆ ಹಾವಳಿಯಿಂದ ಜನಸ್ತೋಮ ನಲುಗುತ್ತಿದೆ. ಕರ್ನಾಟಕದಲ್ಲಿ 74 ತಾಲ್ಲೂಕುಗಳಲ್ಲಿ ಬರ ಸಿಡಿಲಿನಂತೆ ಎರಗಿದೆ. ಆಲಮಟ್ಟಿ ತುಂಬಿದ್ದರೂ 50 ಕಿ. ಮೀ ಆಚೆ ರೈತರ ಸೇಂಗಾ ಬೆಳೆ ಒಣಗುತ್ತಿದೆ. ಚೆನ್ನೈಯಲ್ಲಿ ನೆರೆ ಹಾವಳಿಯ ಮಧ್ಯೆ ನಿಂತ ಜಯಲಲಿತಾ ಕಾವೇರಿಯ ನೀರು ಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಇಡುತ್ತಿದ್ದಾರೆ.
ಉಳಿದ ಭಾಗ ಇಲ್ಲಿದೆ- ಕ್ಲಿಕ್ ಮಾಡಿ






0 Comments