ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಮ್ಮೆ ‘ಮಾಯಾಮೃಗ’

ಮಂಜುಳ ಸಿ ಎಸ್

98 ರ ಕಾಲವದು. ಸಂಜೆ ಶಾಲೆ ಕಾಲೇಜು ಮುಗಿಸಿ ಹಿಂದಿರುಗುವಾಗ ಪ್ರತಿ ಮನೆಯ ಟಿವಿಯಲ್ಲಿ ಗಾಯಕಿ ಮಂಜುಳ ಗುರುರಾಜ್ ರವರ ಸುಶ್ರಾವ್ಯ ದನಿಯಲ್ಲಿ ಕೇಳಿ ಬರುತ್ತಿದ್ದ ಶೀರ್ಷಿಕೆ ಗೀತೆ ‘ಮಾಯಾಮೃಗ ಮಾಯಾಮೃಗ… ಮಾಯಾಮೃಗವೆಲ್ಲಿ..! ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ!!!’ ಧಾರಾವಾಹಿ ಶುರುವಾಗುವ ಹೊತ್ತಿಗೆ ಮನೆ ಸೇರುವ ಧಾವಂತ.

ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಆಕಷಿ೯ಸಿದ ಕನ್ನಡಿಗರ ಮನ ಗೆದ್ದ ಅಪೂವ೯ ಯಶಸ್ಸನ್ನು ಕಂಡ ದೂರದರ್ಶನದಲ್ಲಿ ಸುಮಾರು ಸಂಜೆ 4.30 ಕ್ಕೆ ಪ್ರಸಾರವಾಗುತ್ತಿದ್ದ ದೈನಂದಿನ ಧಾರಾವಾಹಿ ‘ಮಾಯಾಮೃಗ’ ಮತ್ತೊಮ್ಮೆ ಯೂಟ್ಯೂಬ್ ನಲ್ಲಿ ‘ಭೂಮಿಕ ಟಾಕೀಸ್’ನ ಮೂಲಕ ನಮ್ಮ ಮುಂದೆ ಜೂನ್ 4 ರಿಂದ ಮರು ಪ್ರಸಾರ ಕಾಣಲಿರುವ ಹೊತ್ತಿನಲ್ಲಿ ಮಾಯಾಮೃಗದ ನೆನಪಾಯಿತು.

ಕಿರುತೆರೆಯ ಪ್ರಮುಖ ನಿರ್ದೇಶಕರಾದ ಟಿ.ಎನ್ ಸೀತಾರಾಮ್ ಈ ಧಾರಾವಾಹಿಯ ಪ್ರಧಾನ ನಿರ್ದೇಶಕರು. ಜೊತೆಗೆ ಪಿ.ಶೇಷಾದ್ರಿ ಹಾಗು ನಾಗೇಂದ್ರ ಶಾ ರವರ ಸಹ ನಿರ್ದೇಶನದಲ್ಲಿ ಮೂಡಿಬಂದ ಕಿರುತೆರೆಯ ಸುಂದರ ಕಲಾಕೃತಿ ‘ಮಾಯಾಮೃಗ’.

ಶೀರ್ಷಿಕೆ ಗೀತೆಯ ರಚನೆ ಕವಿ ಕೆ.ಎಸ್. ನರಸಿಂಹಸ್ವಾಮಿಯವರದ್ದು. ಮೊದಲ ಬಾರಿಗೆ ಧಾರಾವಾಹಿಯೊಂದಕ್ಕೆ ಗೀತೆ ರಚನೆ ಮಾಡಿದ್ದು ವಿಶೇಷ. ಅಂದಾಜು ಒಂದೂವರೆ ನಿಮಿಷಗಳಲ್ಲಿ ಸಂಗೀತ ನಿರ್ದೇಶಕರಾದ ಗಾಯಕ ಸಿ. ಅಶ್ವಥ್ ರವರ ಸ್ವರ ಸಂಯೋಜನೆಯಲ್ಲಿ ರೂಪಗೊಂಡ ಗೀತೆಗೆ ಮಂಜುಳ ಗುರುರಾಜ್ ಕಂಠದಲ್ಲಿ ಎಂ.ಡಿ. ಪಲ್ಲವಿ ಹಾಗೂ ಅಚ೯ನ ಉಡುಪರವರ ಕೋರಸ್ ನೀಡಿದ್ದಾರೆ.

ಕೃತಕ ವೈಭವೀಕತೆಯ ಸಿದ್ದ ಸೂತ್ರವ ತೊರೆದು ಸಹಜತೆಯ ಛಾಪನ್ನು ಧಾರಾವಾಹಿಯಲ್ಲಿ ತಂದ ಆ ಕಾಲಘಟ್ಟಕ್ಕೆ ವಿನೂತನ ಪ್ರಯೋಗಕ್ಕೆ ಒಡ್ಡಿ ಜನಮಾನಸದಲ್ಲಿ ಇಂದಿಗೂ ನೆಲೆ ನಿಂತ ಧಾರಾವಾಹಿ ಮಾಯಾಮೃಗ.

ಆಗಿನ್ನೂ ವಾರಕ್ಕೊಮ್ಮೆ ಧಾರಾವಾಹಿಗಳು  ಪ್ರಸಾರ ಕಾಣುತ್ತಿದ್ದ ಕಾಲ. ದಿನನಿತ್ಯ ಧಾರಾವಾಹಿಯೊಂದು ಕನ್ನಡಿಗರ ಕುಟುಂಬದಲ್ಲಿ  ಮನೆಮಾತಾದ ಈಗಲೂ ಪ್ರತಿ ಪಾತ್ರವೂ ತನ್ನ ನೆನಪನ್ನು ಉಳಿಸಿಕೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಕಾರಣವಾದರೂ ಸರಳವಾಗಿದೆ.

ಮಾಯಾಮೃಗದ ಕಥೆಯ ಮುಖ್ಯ ಎಳೆ ಸಂಸ್ಕೃತಿಯ ಮೇಲಿನ 90 ದಶಕದ ಜಾಗತೀಕರಣದ ಪ್ರಭಾವ. ಕುಟುಂಬದ ಸಂಪ್ರದಾಯ, ಧಮ೯, ಆಧ್ಯಾತ್ಮ, ಕೌಟುಂಬಿಕ ನೆಮ್ಮದಿಯ ಮೇಲಿನ ಜಾಗತೀಕರಣದ ಹೊಡೆತವನ್ನು ಹಲವು ಮನೋಜ್ಞ ಪಾತ್ರಗಳ ಮೂಲಕ ನೈಜ ಸಂಭಾಷಣೆಗಳ ಮೂಲಕ ಕನ್ನಡಿರ ಮನಸೂರೆಗೊಂಡ ಕಥನವಿದು. ನ್ಯಾಯಾಲಯದ ದೃಶ್ಯಾವಳಿಗಳು  ಚಲನಚಿತ್ರ ಶೈಲಿಯನ್ನು ತೊರೆದು ಸಹಜತೆಯ ವಾತಾವರಣದಲ್ಲಿ ಮೂಡಿ ಬಂದಿದ್ದು ಪ್ರೇಕ್ಷಕ ಕುತೂಹಲದ ಜೊತೆ ಧಾರಾವಾಹಿಯನ್ನು ತಮ್ಮ ಜೀವನದ ಹಲವು ಸಂದರ್ಭಗಳಲ್ಲಿ ಹೋಲಿಸಿ ಅನುಭವಿಸಲು ಸಾಧ್ಯವಾಯಿತೇನೋ. 

ಕಥೆಯಲ್ಲಿ ಬಡತನ ಅದರ ತಾಕಲಾಟಗಳು, ನಂಬಿಕೆಯ ಸಿದ್ದಾಂತಗಳ ಮೇಲಿನ ವ್ಯವಸ್ಥೆಯ ಹೊಡೆತ, ಹೀಗೆ ಹಲವು ಮಜಲುಗಳಲ್ಲಿ ಪಾತ್ರಗಳು ಸಾಗುವುದು ಬಹುಶಃ ಇಂದಿನ ದಿನಗಳಲ್ಲೂ ಧಾರಾವಾಹಿ ತನ್ನ ಪ್ರಸಕ್ತತತೆಯನ್ನು ಉಳಿಸಿಕೊಂಡಿರುವುದಕ್ಕೆ ಹಾಗು ಮತ್ತೊಮ್ಮೆ ವೀಕ್ಷಿಸಲು ಕಾತರರಾಗಿರುವುದಕ್ಕೆ ಸಾಕ್ಷಿ.

ನಾಯಕಿ ಮಾಳವಿಕ ಯುವತಿಯರ ಗೃಹಿಣಿಯರ ಪ್ರೇರಣೆಯಾದದ್ದು ಸ್ತ್ರೀ ವ್ಯಕ್ತಿತ್ವವ ಗಟ್ಟಿತನ ಸ್ಬಾಭಿಮಾನದ ಸಂಕೇತವಾಗಿ ನಿವ೯ಹಿಸಿದ ಪಾತ್ರ. ಹಲವು ನಾಯಕಿಯರ ಪ್ರಧಾನ ಕತೆಯಳ್ಳ ಧಾರಾವಾಹಿಯಲ್ಲಿ ಹಲವು ನಟ ನಟಿಯರಾದ ಮಾಳವಿಕ, ಮಂಜು ಭಾಷಿಣಿ, ಶ್ರೀ ಲಕ್ಷ್ಮಿ, ಎಂ.ಡಿ. ಪಲ್ಲವಿ, ಅವಿನಾಶ್, ಹಿರಿಯ ಕಲಾವಿದರಾದ ದತ್ತಾತ್ರೇಯ, ಸೇತುರಾಂ, ಲಕ್ಷ್ಮಿ ಚಂದ್ರ ಶೇಖರ್,  ಮುಖ್ಯ ಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಭಾಗ೯ವಿ ನಾರಾಯಣ್, ಭರತ್ ಭಾಗವತರ್,  ಶಶಿಕುಮಾರ್, ವಿಕ್ರಂ ಸೂರಿ, ದೊಡ್ಡ ತಾರಾ ಬಳಗವೇ ಧಾರಾವಾಹಿಯಲ್ಲಿತ್ತು.

ಮುಖ್ಯವಾಗಿ ಸಂಪ್ರದಾಯದ ಶಾಸ್ತ್ರಿ ಪಾತ್ರಧಾರಿ ದತ್ತಣ್ಣ, ವ್ಯಂಗ್ಯ ಮೊನಚು ಮಾತಿನ ವಿಡಂಬನೆಯ ಪಾತ್ರ ಸೇತುರಾಂರವರ ಸಂಭಾಷಣೆಗಳು ಸೋಷಿಯಲ್ ಮೀಡಿಯ ಮೂಲಕ ಇಂದಿಗೂ ಯುವ ಪ್ರೇಕ್ಷಕ ಸಮುದಾಯ ತಲುಪುತ್ತಿದೆ. ಅದಲ್ಲದೆ ಮೊದಲ ಬಾರಿಗೆ ಸಂವಾದದ ಮೂಲಕ ವೀಕ್ಷಕರ ಅಭಿಪ್ರಾಯವನ್ನು ಅರಿಯುವ ಶೋ ಕೂಡ ಮಾಯಾಮೃಗದ ಪ್ರಯೋಗವೆ.

ಹಿಂದಿನ ದಿನಗಳ ನೆನಪನ್ನು ಮಗದೊಮ್ಮೆ ಮೆಲುಕು ಹಾಕುವ ಅವಕಾಶ ಕನ್ನಡ  ಪ್ರೇಕ್ಷಕರ ಪಾಲಿಗೆ ಜೂನ್ 4 ರಿಂದ ಯೂಟ್ಯೂಬ್ ನಲ್ಲಿ ಭೂಮಿಕ ಟಾಕೀಸ್ ನಲ್ಲಿ ದೊರೆಯಲಿದ್ದು ಸಧಭಿರುಚಿಯ ಧಾರಾವಾಹಿ ಮಾಯಾಮೃಗವ ಭಾವ ವಲಯದಲ್ಲಿ ಹಿಡಿದು ಬಂಧಿಸುವ ಬನ್ನಿ.

‍ಲೇಖಕರು Avadhi

1 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading