ಆಳ್ವಾ ಬೆಂಬಲ ಸಭೆಗೆ ವೈದೇಹಿಯವರು ಹೋಗಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ..

ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 

ಈ ಹಿನ್ನೆಲೆಯಲ್ಲಿ ಆಳ್ವ ಅವರ ಪರವಾಗಿ ಸಂಘಟಿಸಿದ್ದ ಸಭೆಯಲ್ಲಿ ಲೇಖಕಿ ವೈದೇಹಿ ಅವರು ಭಾಗವಹಿಸಿದ್ದರು.

ಈ ಕುರಿತು ಬಿ ಎಂ ಬಷೀರ್ ಅವರು ಬರೆದ ‘ಪ್ರೀತಿಯ ವೈದೇಹಿ ಅವರಿಗೆ..’ ಲೇಖನವನ್ನೂ ಓದಿ  

 ಜೋಗಿ 

ಒಬ್ಬ ಲೇಖಕನನ್ನು ಬಡಿದು ತಮ್ಮ ತಮ್ಮ ಸಿದ್ಧಾಂತದ ಗೂಟಕ್ಕೆ ನೇತುಹಾಕುವ ಪರಿಪಾಠ ಇತ್ತೀಚಿನ ಬೆಳವಣಿಗೆ.

ಲೇಖಕರು ನಮ್ಮ ಮನೋಧರ್ಮಕ್ಕೆ, ಸಿದ್ಧಾಂತಕ್ಕೆ, ಪಂಥಕ್ಕೆ, ರಾಜಕೀಯ ನಿಲುವಿಗೆ ತಕ್ಕಂತೆ ಕುಣಿಯಬೇಕು ಅಂತ ಬಯಸುವ ಅಪಾಯಕಾರಿ ಧೋರಣೆಯೊಂದನ್ನು ಪ್ರತಿಪಾದಿಸುವ ಒಂದು ವಲಯ ಮೂರೂ ಕಡೆ ಇದೆ.

ಆದರೆ ಸೃಜನಶೀಲ ಲೇಖಕ, ಕಲಾವಿದ, ಸಂಗೀತಗಾರ, ಗಾಯಕ, ಚಿತ್ರಕಲಾವಿದ ಮತ್ತು ಮನುಷ್ಯ- ಇದನ್ನೆಲ್ಲ ಮೀರಿದವನು.
ಒಬ್ಬ ಬರಹಗಾರ ಒಂದು ವಿಚಾರದ ಪರವಾಗಿಯೋ ಒಂದು ಪರಿಸ್ಥಿತಿಯ ಪರವಾಗಿಯೋ ತನ್ನ ಅಭಿಪ್ರಾಯ ಮಂಡಿಸಿದಾಗ, ನಾನು ಇಷ್ಟು ವರ್ಷ ನಿನ್ನನ್ನು ಓದಿಕೊಂಡು ಬಂದೆ, ನೀನು ಹೀಗೆ ಅಂತ ಗೊತ್ತಿರಲಿಲ್ಲ ಅಂತ ಹೇಳಿ ಆ ಬರಹಗಾರನ ಮಾನವೀಯ ನಿಲುವನ್ನೇ ಪ್ರಶ್ನಿಸಿ ಕಂಗೆಡಿಸುವುದಕ್ಕೆ ಹೊರಡುವುದು ಇತ್ತೀಚೆಗೆ ಹೆಚ್ಚಾಗಿದೆ.

ಇಂಥವರನ್ನು ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಬೇಂದ್ರೆ, ಕುವೆಂಪು, ಶಿವರಾಮ ಕಾರಂತ- ಎಲ್ಲರೂ ದೂರದಲ್ಲೇ ಇಟ್ಟಿದ್ದರು. ನೀವು ಹೀಗೆ ಬರೆಯಬಾರದಿತ್ತು ಅಂತ ಒಬ್ಬ ಓದುಗ ಲಂಕೇಶರ ಮಾನವೀಯ ನಿಲುವನ್ನು ರಾಜಕೀಯಗೊಳಿಸಲು ಹವಣಿಸಿದಾಗ ಲಂಕೇಶರು ಆತನಿಗೆ ನೀನೊಬ್ಬ ಜುಜುಬಿ ಓದುಗ ಎಂದು ಬೈದಿದ್ದರು.

ಒಬ್ಬ ಲೇಖಕನನ್ನು ತನ್ನ ಸಿದ್ಧಾಂತದ ಬೇಲಿಯೊಳಗೆ ಬಂಧಿಸಿ ಬಳಸಿಕೊಳ್ಳುವುದನ್ನು ಕಾರಂತರೂ ಸೇರಿದಂತೆ ಎಲ್ಲ ಮಹತ್ವದ ಬರಹಗಾರರೂ ವಿರೋಧಿಸಿಕೊಂಡು ಬಂದವರೇ. ಒಮ್ಮೆ ಶಿವರಾಮಕಾರಂತರ ಬಳಿ ‘ಚೋಮನದುಡಿ’ ಬಗ್ಗೆ ಚರ್ಚಿಸುತ್ತಾ ವಿಮರ್ಶಕರೊಬ್ಬರು, ನಿಮ್ಮ ಚೋಮನ ಬೇರು ವರ್ತಮಾನದಲ್ಲಿದೆ. ಆದರೆ ನಿಜವಾದ ಚೋಮನ ಬೇರು ಇತಿಹಾಸದಲ್ಲಿದೆ. ನೀವು ಚಿತ್ರಿಸಿರುವ ಚೋಮ ಯಾರ ಪರ ಇದ್ದಾನೆ ಅಂತ ಗೊತ್ತಾಗುವುದಿಲ್ಲ ಅಂದಾಗ ಕಾರಂತರು, ಅವನು ನನ್ನ ಚೋಮ. ಅವನು ಇರುವುದೇ ಹಾಗೆ. ಬೇಕಿದ್ದರೆ ಅವನನ್ನು ನೋಡಬಹುದು, ಬೇಡದವರು ಮುಚ್ಚಿಕೊಂಡು ಕೂತುಕೊಳ್ಳಬಹುದು. ನಿನಗೆ ಬೇಕಾದ ಚೋಮನನ್ನು ಹುಟ್ಟಿಸಲಿಕ್ಕೆ ನಾನು ಇರುವುದಲ್ಲ ಎಂದು ಗರ್ಜಿಸಿದ್ದರು.

ಈಗ ತಾಯಿ ಮನಸ್ಸಿನ ವೈದೇಹಿಯವರ ವಿರುದ್ಧವೂ ಅಂಥದ್ದೇ ಚಿಲ್ಲರೆ ಚಿರಿಪಿರಿ ಆರಂಭಿಸಿದ್ದಾರೆ.

ಆಳ್ವಾಸ್ ಕಾಲೇಜಿನ ಇತ್ತೀಚಿನ ಪ್ರಕರಣದಲ್ಲಿ ಆಳ್ವಾರನ್ನು ಸದೆಬಡಿಯಲಿಕ್ಕೆ ಹೊರಟವರ ಹುನ್ನಾರ ಏನೆಂಬುದು ಇಡೀ ದಕ್ಷಿಣ ಕನ್ನಡದವರಿಗೆ ಚೆನ್ನಾಗಿಯೇ ಗೊತ್ತಿದೆ. ಹೇಗಾದರೂ ಮಾಡಿ ಮೋಹನ್ ಆಳ್ವಾರನ್ನು ಮುಗಿಸಬೇಕೆಂದು ಅಲ್ಲಿಯ ಒಂದು ವರ್ಗದ ಬೆರಳೆಣಿಕೆಯ ಮಂದಿ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಮೂಡಬಿದರೆಯಲ್ಲಿ ನಡೆಯುವ ಎಲ್ಲವನ್ನೂ ಆಳ್ವಾರ ತಲೆಗೆ ಕಟ್ಟುವ ಇವರ ವರ್ತನೆಯ ಬಗ್ಗೆ ನನಗೆ ವೈಯಕ್ತಿಕವಾಗಿ ಮರುಕವಿದೆ.

ಮೂಡಬಿದರೆಯನ್ನು ಹೇಗೆ ಆಳ್ವಾ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದ್ದಾರೆ. ಬೇರೆ ಕಾಲೇಜುಗಳಲ್ಲಿಂದ ಬರುವ ವಿದ್ಯಾರ್ಥಿಗಳಿಗೂ ಆಳ್ವಾಸ್ ಕಾಲೇಜಿನಿಂದ ಬರುವ ಹುಡುಗರಿಗೂ ಏನು ವ್ಯತ್ಯಾಸ ಅನ್ನುವುದನ್ನೆಲ್ಲ ನಾನು ಬಲ್ಲೆ. ಎಲ್ಲ ಸಾಹಿತ್ಯ ಸಮ್ಮೇಳನಕ್ಕೂ ಹೋಗುವ ಹಾಗೆ ನಾನು ಆಳ್ವಾಸ್ ನುಡಿಸಿರಿಗೂ ಆಹ್ವಾನ ಇಲ್ಲದೆಯೇ ಹೋಗುತ್ತೇನೆ, ಹೋಗಿದ್ದೇನೆ.

ಆಳ್ವರ ಬಗ್ಗೆ ಮೂಡಬಿದರೆಯ ಮಂದಿ ಏನು ಮಾತಾಡುತ್ತಾರೆ ಅಂತ ನನಗೆ ಗೊತ್ತಿದೆ. ಅವರನ್ನು ಜನ ಹುಂಬ ಎಂದು ಕರೆಯಬಹುದು, ಆದರೆ ಕ್ರೂರಿ, ಕೆಟ್ಟವನು ಅನ್ನುವುದಿಲ್ಲ.

ಸಾಹಿತ್ಯ, ಸಂಗೀತ, ಯಕ್ಷಗಾನ, ಭೂತದ ಕೋಲ, ನಾಗಮಂಡಲ, ಕೋಳಿ ಅಂಕ- ಅಂತೆಲ್ಲ ಹಣ ದುಂಧು ಮಾಡುವವರನ್ನು ನಮ್ಮ ಕಡೆ ನಗಾಡಿಕೊಂಡು ನೋಡುತ್ತಾರೆಯೇ ಹೊರತು, ಅವರ ಮೇಲೆ ಯಾರೂ ಆರೋಪ ಹೊರಿಸಲಿಕ್ಕೆ ಹೋಗುವುದಿಲ್ಲ.

ಆಳ್ವಾ ಬೆಂಬಲ ಸಭೆಗೆ ವೈದೇಹಿಯವರು ಹೋಗಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ. ಅವರ ನಿಲುವು ನನಗೆ ಮೆಚ್ಚುಗೆಯಾಯಿತು. ಅಂಥ ನಿಲುವುಗಳೇ ನಮ್ಮನ್ನು ಮನುಷ್ಯರನ್ನಾಗಿ ಮಾಡುವುದು. ಅವರಿಗೆ ನನ್ನ ನಮಸ್ಕಾರ ಮತ್ತು ಗೌರವ. ಇದೇ ಮಾತನ್ನು ನಾನು ವಿವೇಕ ರೈ ಅವರ ಕುರಿತೂ ಆಡುತ್ತಿದ್ದೇನೆ.

 

‍ಲೇಖಕರು avadhi

August 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Sathyakama Sharma K

    ನೀವು ಹೇಳಿದ್ದು ಸರಿ. ಎಡ್ವರ್ಡ್ ಡಿ ಬೊನೊ, ‘ಜಜ್ ಮೆಂಟಲ್ ಥಿಂಕಿಂಗ್’ ಎಂದು ಕರೆಯುವುದು ನೀವು ಖಂಡಿಸಿದ ಪ್ರವೃತ್ತಿಯನ್ನು ! ಇದು ಸೃಜನಶೀಲತೆಗೆ ಮಾರಕ! ಆದರೆ ಸಾಹಿತ್ಯ ಅನ್ನುವುದು ಸೃಜನ ಶೀ ಲ ಪ್ರಕಾರ ಅನ್ನುವುದನ್ನು ನಾವೆಲ್ಲಾ ಮರೆತಂತಿದೆ.

    ಪ್ರತಿಕ್ರಿಯೆ
  2. B.M. Basheer

    ಹಾಗಾದರೆ, ಲೇಖಕರ ಬಳಿ ಸಮಾಜ ಏನನ್ನೂ ನಿರೀಕ್ಷಿಸ ಬಾರದು, ಲೇಖಕರಷ್ಟೇ ಸಮಾಜದಿಂದ ನಿರೀಕ್ಷಿಸುವ ಹಕ್ಕನ್ನು ಹೊಂದಿದವರು ಎಂದಾಯಿತಲ್ಲವೇ ? ವೈದೇಹಿ ಅವರು ತಾಯಿ ಹೃದಯವನ್ನು ಹೊಂದಿದ ಬರಹಗಾರ್ತಿ ಎನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ನಡು ರಸ್ತೆಯಲ್ಲಿ ನಿಂತು ತನ್ನ ಮಗಳ ಜೀವಕ್ಕಾಗಿ ಹಲುಬುತ್ತಿರುವ ಕಾವ್ಯ ಅವರ ತಾಯಿಯ ನೋವನ್ನು ನಾವು ಗ್ರಹಿಸುವ ಪರಿ ಹೇಗೆ ? ಈ ಹಿಂದೆ, “ಆಳ್ವಾಸ್ ನುಡಿಸಿರಿ”ಯಲ್ಲಿ ಭಾಗವಹಿಸಿದ ಸೃಜನ ಶೀಲ ಲೇಖಕರ ಕುರಿತು ಕೆಲವರು ಕುಹಕಗಳನ್ನು ವ್ಯಕ್ತ ಪಡಿಸಿದಾಗ “ನುಡಿಸಿರಿ ಮತ್ತು ವಿಚಾರವಾದಿಗಳ ಬೆಕ್ಕಿನ ಬಿಡಾರ!” ಲೇಖನ ಬರೆದಿದ್ದೆ. ನಾನಂತೂ ನನ್ನ ಬರಹದಲ್ಲಿ ಆಳ್ವಾ ಅವರನ್ನು ಅಪರಾಧಿ ಎಂದೋ, ಕ್ರೂರಿ ಎಂದೋ ಎಲ್ಲೂ ಹೇಳಿಲ್ಲ. ಒಂದು ವಿದ್ಯಾ ಸಂಸ್ಥೆಯಲ್ಲಿ ಆತ್ಮಹತ್ಯೆ ನಡೆಯೋದು ಹೊಸ ವಿಷಯವೇನೂ ಅಲ್ಲ. ಆದರೆ ಮಗಳನ್ನು ಕಳೆದುಕೊಂಡ ತಾಯಿ, ತನಿಖೆಯಾಗಬೇಕು ಎಂದು ಬೀದಿಗಿಳಿದು ಒತ್ತಾಯಿಸುವಾಗ, ಆಳ್ವಾಸ್ ಸಂಸ್ಥೆ ತನ್ನ ಪರವಾಗಿ ಸಮಾವೇಶವನ್ನು ಹಮ್ಮಿಕೊಳ್ಳೋದು, ಸಮಾಜದ ಗಣ್ಯರು ಅದರಲ್ಲಿ ಭಾಗವಹಿಸೋದು ಆ ತಾಯಿಯನ್ನು ಏಕಾಂಗಿಯಾಗಿಸಿದಂತೆ ಆಗಲಿಲ್ಲವೇ ? ತನಿಖೆಯ ಮೇಲೆ ಅದು ತನ್ನ ಒತ್ತಡ ಬೀರೋದಿಲ್ಲವೇ ? ವೈದೇಹಿಯಂಥ ಸೂಕ್ಷ್ಮ ಲೇಖಕಿಗೆ ಆಳ್ವರ ಅಳಲು ಕಾಡಿದಂತೆ ಆ ವೇದಿಕೆಯಲ್ಲಿ ಕುಳಿತ ಸಂದರ್ಭದಲ್ಲಿ ಯಾಕೆ ಆ ತಾಯಿಯ ಆಕ್ರಂದನ ಕಾಡಲಿಲ್ಲ ? ಕಾವ್ಯ ಸಾವಿನ ತನಿಖೆಗೆ ಬೆಂಬಲ ಎಂದರೆ ಅದು ಮೋಹನ್ ಆಳ್ವರ ವಿರುದ್ಧದ ಸಂಚು ಎಂದು ಯಾಕೆ ಮೊದಲೇ ಭಾವಿಸಬೇಕು ? ಇದನ್ನಲ್ಲವೇ “ಜಡ್ಜ್ ಮೆಂಟೆಲ್” ಮನಸ್ಥಿತಿ ಎನ್ನೋದು ? ಒಂದು ಕಾಲದಲ್ಲಿ ಅಸಹಾಯಕ ಹೆಣ್ಣಿನ ಪರವಾಗಿ, ಬಡವರ ಪರವಾಗಿ ಬೀದಿಗಿಳಿದವರನ್ನು ನಮ್ಮ ಹೆಮ್ಮೆ ಎಂದು ಅವರ ಜೊತೆ ಗುರುತಿಸಿ ಕೊಳ್ಳುತ್ತಿದ್ದೆವು . ಇಂದು ಕಾಲ ಹೇಗೆ ಬದಲಾಗಿದೆ ? ಆಳ್ವರ ವೇದಿಕೆಯಲ್ಲಿ ಕಾಣಿಸಿ ಕೊಂಡ ವೈದೇಹಿ ಅವರು ಯಾವ ಮೌಲ್ಯವನ್ನು ಎತ್ತಿ ಹಿಡಿದರು ಎಂದು ನಾವು ಹೆಮ್ಮೆ ಪಟ್ಟು ಗುರುತಿಸಿ ಕೊಳ್ಳಬೇಕು?(ಹೆಮ್ಮೆ ಪಡುವ ಜೋಗಿಯವರ ಹಕ್ಕುಗಳನ್ನು, ತಿಳುವಳಿಕೆಯನ್ನು ಗೌರವಿಸುತ್ತಲೇ) ಹಾಗಾದರೆ ಕಾವ್ಯಳ ತಾಯಿಯ ಪರವಾಗಿ ಬೀದಿಗಿಳಿದವರೆಲ್ಲ ಕೀಳರಿಮೆ ಪಟ್ಟು ಕೊಳ್ಳಬೇಕೆ? ಸಂಶಯಾಸ್ಪದವಾಗಿ ಸಾವಿಗೀಡಾದ ಹೆಣ್ಣು ಮಗಳ ತಾಯಿಯ ಪರವಾಗಿ ಮಾತನಾಡೋದು ಕೀಳರಿಮೆ ಪಡುವ ವಿಷಯವಾಯಿತೇ?

    ಪ್ರತಿಕ್ರಿಯೆ
  3. chandra aithal

    ಬಶೀರ್ ಅವರು ವೈದೇಹಿಯವರನ್ನು ಯಾವ ಸಿದ್ಧಾಂತದ ಗೂಟಕ್ಕೆ ನೇತು ಹಾಕಿಲ್ಲ. “ನ್ಯಾಯ” ಎಂಬುದಿದ್ದರೆ ಅದು ಸಾಬೀತಾಗಲಿ ಎಂದಷ್ಟೇ ಅವರು ಹೇಳಿದ್ದು. ಆಳ್ವಾ ಅವರ ವಿರುದ್ಧ ದನಿಯತ್ತುವವರನ್ನು ಶಂಕಿಸುವವರು, ಅವರ ಪರ ಸಾರಾ ಸಗಟು ಮಾತನಾಡುವುವವರನ್ನೂ ಶಂಕಿಸಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: