ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚದುರಂಗರು ಬರ್ತಿದ್ದಾರೆ..

ನುಡಿ ಪುಸ್ತಕ’ದ ಗೆಳೆಯ ರಂಗನಾಥ ತಿರುಮಲೆ ಅವರು ಮತ್ತೆರಡು ಹೊಸ ವಾಚಿಕೆಗಳೊಂದಿಗೆ ಸಜ್ಜಾಗಿದ್ದಾರೆ. ಈ ಬಾರಿ ಚದುರಂಗ ಹಾಗೂ ವೀಣಾ ಶಾಂತೇಶ್ವರ ನಮ್ಮ ಓದಿಗೆ ಧಕ್ಕಲಿದ್ದಾರೆ.

ಇಂತಹ ಮೌಲ್ಯಯುತ ಕೃತಿಗಳನ್ನು ನೀಡುತ್ತಿರುವ ರಂಗನಾಥ್ ಗೆ ‘ಅವಧಿ’ ಅಭಿನಂದನೆ ಸಲ್ಲಿಸುತ್ತಾ ಈ ಪುಸ್ತಕಕ್ಕೆ ಪ್ರಕಾಶಕರು ಬರೆದ ಮಾತು ಇಲ್ಲಿದೆ.

ಚದುರಂಗ ವಾಚಿಕೆ ಸಂಪಾದಕಿ : ಚ. ಸರ್ವಮಂಗಳಾ

`ಚದುರಂಗ’ (1916-1998) ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಅಪಾರ ಖ್ಯಾತಿಯನ್ನು ಪಡೆದ ಶ್ರೀ ಎಂ. ಸುಬ್ರಹ್ಮಣ್ಯರಾಜೇ ಅರಸು ಅವರು ಜನಿಸಿದ್ದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ.

ಪ್ರಗತಿಶೀಲ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಸಾಹಿತ್ಯ ರಚನೆ ಆರಂಭಿಸಿದ ಚದುರಂಗರು ಮುಂದಿನ ದಿನಗಳಲ್ಲಿ ಬಂದ ನವ್ಯ, ದಲಿತ, ಬಂಡಾಯ ಸಾಹಿತ್ಯ ಕಾಲಮಾನಗಳಿಗೂ ಸ್ಪಂದಿಸಿ ಅವುಗಳ ಪ್ರಭಾವ ಮತ್ತು ಪ್ರೇರಣೆಗಳನ್ನು ದಕ್ಕಿಸಿಕೊಂಡರು. ತರಾಸು, ಅನಕೃ. ಜೊತೆಗಾರರಾಗಿದ್ದು ಬರವಣಿಗೆ ಪ್ರಾರಂಭಿಸಿದ ಚದುರಂಗರು ಅವರುಗಳಷ್ಟು ಬರೆಯಲಿಲ್ಲ. ಆದರೆ ಬರೆದದ್ದಷ್ಟು ಗಟ್ಟಿ ಕೃತಿಗಳೇ.

ತಮ್ಮ ಸಾಹಿತ್ಯದಿಂದ ಮಾತ್ರವಲ್ಲ ತಮ್ಮ ಮಾತೃವಾತ್ಸಲ್ಯಪೂರ್ಣವಾದ ವ್ಯಕ್ತಿತ್ವದಿಂದ ಚದುರಂಗರು ಅಪಾರ ಪ್ರಭಾವ ಬೀರಿದ್ದಾರೆ; ಕನ್ನಡದ ಮನಸ್ಸುಗಳನ್ನು ಬೆಳೆಸಿದ್ದಾರೆ. ಸಣ್ಣ ಕತೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಸಿನಿಮಾ ನಿರ್ದೇಶಕರಾಗಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಅಪ್ಪಟ ಮೃದು ಹೃದಯದ ಮನುಷ್ಯರಾಗಿ ನಮ್ಮೊಡನಿದ್ದ ಚದುರಂಗ ಕನ್ನಡದ ಮಹತ್ವದ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಚದುರಂಗರನ್ನು ಬಿಟ್ಟು ಆಧುನಿಕ ಕನ್ನಡ ಸಾಹಿತ್ಯದ ಪ್ರಸ್ತಾವವೇ ಸಾಧ್ಯವಿಲ್ಲ.

ಎಂಟು ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು, ಮೂರು ನಾಟಕಗಳನ್ನು ಪ್ರಕಟಿಸಿರುವ ಚದುರಂಗ ತಮ್ಮ `ವೈಶಾಖ’ ಕಾದಂಬರಿಗೆ 1982ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ತಮ್ಮ `ಸರ್ವಮಂಗಳಾ’ ಕಾದಂಬರಿಯನ್ನು ಚಲನಚಿತ್ರವಾಗಿಸಿ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದರು. ಈ ಚಿತ್ರ 1968ರ ರಾಜ್ಯ ಪ್ರಶಸ್ತಿಯನ್ನೂ ಗಳಿಸಿತ್ತು. ಇವರ ಮತ್ತೊಂದು ಕಾದಂಬರಿ `ಉಯ್ಯಾಲೆ’ ಶ್ರೀ ಎನ್. ಲಕ್ಷ್ಮೀನಾರಾಯಣ್ ಅವರ ನಿರ್ದೇಶನದಲ್ಲಿ ತೆರೆಕಂಡಿತ್ತು. ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತು ಸಾಕ್ಷ್ಯ ಚಿತ್ರವನ್ನೂ ತಯಾರಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದ ಚದುರಂಗರು 1994ರಲ್ಲಿ ಮಂಡ್ಯದಲ್ಲಿ ನಡೆದ 63ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಇಂತಹ ಮಹತ್ವದ ಲೇಖಕರ ಆಯ್ದ ಕತೆ, ಕವನ, ಕಾದಂಬರಿಗಳ ಭಾಗವೇ ಈ ವಾಚಿಕೆ. ಜೊತೆಗೆ, ಚದುರಂಗರನ್ನು ಬಹಳ ಹತ್ತಿರದಿಂದ ಬಲ್ಲ ಅವರ ಆತ್ಮೀಯರೂ ಆದ ಯು.ಆರ್. ಅನಂತಮೂರ್ತಿ ಮತ್ತು ಜಿ.ಎಚ್. ನಾಯಕರ ಲೇಖನಗಳೂ ಇವೆ. ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಅವರು ಚದುರಂಗರಿಗೆ 79 ತುಂಬಿದ ಸಂದರ್ಭದಲ್ಲಿ ಬರೆದ ಕವಿತೆ ಮತ್ತು ಜಿ.ಪಿ. ಬಸವರಾಜು ನಡೆಸಿರುವ ಸಂದರ್ಶನವೂ ಈ ವಾಚಿಕೆಯಲ್ಲಿ ಅಡಕವಾಗಿದೆ. ಸಂಪಾದಕರ ಅಭ್ಯಾಸಪೂರ್ಣ ಪ್ರಸ್ತಾವನೆಯೊಂದಿಗೆ ನೆನಪಿನ ಚಿತ್ರಗಳೂ ಇವೆ. ಈ ವಾಚಿಕೆ ಚದುರಂಗರ ಸಮಗ್ರ ಸಾಹಿತ್ಯದ ಕಡೆ ಸಾಹಿತ್ಯಾಸಕ್ತರ ಗಮನ ಹರಿಸಲಿ ಎಂಬುದು ಪ್ರಕಾಶಕರ ಆಶಯ.

‍ಲೇಖಕರು G

1 April, 2011

1 Comment

  1. ssrao

    Smt. Veena Shanteshwar avarannu nodi bahala dinagalaadavu. Avara tandeyavru namage bagalakoteya college nalli professor aagiddaru. Sumaaru 1963 ra maatu. Veena avaru obba bahala olleya lekhaki. Haageye avara tandeyavara sense of humour agaadha.
    Rao.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading