25 ರೂಪಾಯಿ ಆಟಿಕೆಗೆ ಬದಲಾಗಿ ಬಂತು ಈ ಮಲ್ಲಿಗೆ..

ಸಾಹಿತ್ಯ ಲೋಕಕ್ಕೆ ಕೈಮರವಾದ ಮಲ್ಲಿಗೆಯ ಮಾಲೆ..
ಮಂಜುನಾಥ ಸಿ ನೆಟ್ಕಲ್ 

1979 ನನ್ನ ಅಜ್ಜಿ ನನ್ನನ್ನು ಕರೆದು ಕೊಂಡು ಹೋಗಿ ಸರಕಾರಿ ಶಾಲೆಗೆ ಸೇರಿಸಿದ್ದಂತೆ. ಆ ನಂತರ ಯಾರೂ ನನ್ನ ಶಾಲೆ ಕಡೆ ತಲೆ ಹಾಕಲಿಲ್ಲ. ನಮ್ಮ ಕುಟುಂಬದಲ್ಲಿ ಅಕ್ಷರ ಲೋಕಕ್ಕೆ ಕಣ್ತೆರೆದ ಮೊದಲ ಪೀಳಿಗೆಯವನಾದ ನನಗೆ ಇದನ್ನು ಓದು ಅದನ್ನು ಓದು ಎನ್ನುವವರು ಇರಲಿಲ್ಲ. ನಮ್ಮ ಮನೆ ಸುತ್ತಮುತ್ತ ಯಾರೂ ವಿದ್ಯಾವಂತರು ಇರಲಿಲ್ಲ. ಯಾರ ಮನೆಗೂ ದಿನಪತ್ರಿಕೆ ಸಹ ಬರುತ್ತಿರಲಿಲ್ಲ.

KSNಕೆಲಕಾಲದ ನಂತರ ಮನೆಗೆ ಪತ್ರಿಕೆ ತರಿಸುವವರು ನಮ್ಮ ವಠಾರಕ್ಕೆ ಬಂದರು. ಕುತೂಹಲಕ್ಕೆ ನಾನು ಅವರು ತರಿಸುತ್ತಿದ್ದ ಪ್ರಜಾವಾಣಿ ಕಡೆ ಕಣ್ಣು ಹಾಯಿಸಿದೆ. ಫ್ಯಾಂಟಮ್ ಕಾಮಿಕ್ಸ್ ನನ್ನನ್ನು ಸೆಳೆಯಿತು. ಬಹುಶ: ಅದೇ ನನ್ನ ಮೊದಲ ಸಾಹಿತ್ಯ ಪ್ರವೇಶ ಅಂದುಕೊಂಡಿದ್ದೇನೆ. ಆ ನಂತರದಲ್ಲಿ ಪತ್ರಿಕೆ ಓದುವ ಹವ್ಯಾಸ ಹಾಗೆಯೇ ಬೆಳೆಯಿತು. ಬೆಳಗ್ಗೆ 6 ಗಂಟೆಗೆ ಕ್ಷೌರಿಕರ ಅಂಗಡಿ, ಇಸ್ತ್ರೀ ಅಂಗಡಿಗಳಿಗೆ ಪತ್ರಿಕೆ ಓದಲು ಹೋಗುತ್ತಿದ್ದೆ.

ಆ ಕಾಲದಲ್ಲಿ ನಮ್ಮ ಸುತ್ತಮುತ್ತಲಿದ್ದ ಯಾವ ಮಕ್ಕಳೂ ಶಾಲೆಯ ಪುಸ್ತಕವನ್ನೇ ಓದುತ್ತಿರಲಿಲ್ಲ. ಹೀಗಾಗಿ ನಾನು ಬೆಳಗ್ಗೆ ಬೆಳಗ್ಗೆ ಪತ್ರಿಕೆ ಓದುವುದು ಅವರಿಗೆ ಅಚ್ಚರಿ ಮತ್ತು ಸಂತೋಷ. ಯಾರೂ ನನ್ನನ್ನು ಅಡ್ಡಿ ಪಡಿಸುತ್ತಿರಲಿಲ್ಲ. ಬದಲಿಗೆ ಎಲ್ಲರ ಮುಂದೆ ಹೊಗಳುತ್ತಿದ್ದರು.ನನಗೆ ಪತ್ರಿಕೆ ಓದಲು ಇನ್ನೂ ಉತ್ತೇಜನ ಕೊಡುತ್ತಿತ್ತು. ಆ ಅಂಗಡಿಗಳಿಗೆ ಬರುತ್ತಿದ್ದ ಸುಧಾ ಮತ್ತು ಇತರ ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದೆ. ಒಮ್ಮೆ ನನಗೆ ಅಪಘಾತವಾಗಿ ಕಣ್ಣುಗಳೆಲ್ಲಾ ಊದಿಕೊಂಡಿದ್ದವು ಆ ಸಮಯದಲ್ಲೂ ಕಷ್ಡಪಟ್ಟುಕೊಂಡು ಕಣ್ಣಿನ ರೆಪ್ಪೆಯನ್ನು ಸಣ್ಣದಾಗಿ ತೆರೆದು ಪತ್ರಿಕೆ ಓದಿದ್ದು ನನಗೆ ಇನ್ನೂ ನೆನಪಿದೆ. ಅದಕ್ಕೆ ಸಹ ನನಗೆ ಪ್ರಶಂಸೆ ಸಿಕ್ಕಿತ್ತು.

ಅಪಘಾತ ಮಾಡಿಕೊಂಡಿದ್ದು ನಗರ ಕೇಂದ್ರ ಗ್ರಂಥಾಲಯಕ್ಕೆ ಹೋಗಿದ್ದಾಗ. 5ನೇ ತರಗತಿಗೇ ಎರಡು ಕಿಲೋ ಮೀಟರ್ ದೂರದ ಲೈಬ್ರರಿಗೆ ಹೋಗುತ್ತಿದ್ದೆ. ಮಳೆ ನೀರಾಟ ಆಡುತ್ತಾ ರಸ್ತೆ ದಾಟಲು ಓಡಿ ಮೆಟಡಾರ್ ಗೆ ಸಿಕ್ಕಿ ತಲೆ ಒಡೆದು  ನಿಮ್ಹಾನ್ಸ್ ನಲ್ಲಿ ತಲೆಗೆ 7 ಹೊಲಿಗೆ ಹಾಕಿದ್ದರು. ಆ ಸಮಯದಲ್ಲಿ ನಮ್ಮ ಮನೆಗೆ ಶಾಲೆಯ ಮೂವರು ಟೀಚರ್ ಗಳು ನನ್ನನ್ನು ನೋಡಲು ಬಂದರು. ಅದು ನಮ್ಮ ಏರಿಯಾದಲ್ಲೆಲ್ಲಾ ಹರಡಿ ನನ್ನ ಕೀರ್ತಿ ಇನ್ನೂ ಹೆಚ್ಚಿತು.

ನನ್ನ ಓದಿಗೆ ಇದೆಲ್ಲಾ ಪ್ರೇರಣೆ. ನಾನೇನೂ ಶಾಲೆಯಲ್ಲಿ ಹೆಚ್ಚು ಅಂಕ ತೆಗೆಯುವ ವಿದ್ಯಾರ್ಥಿಯಲ್ಲ. ಆದರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿಗೆ ಭಾಗವಹಿಸುತ್ತಿದ್ದೆ. ಹಾಗಾಗಿ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿದ್ದೆ ಅಷ್ಟೇ.

8ನೇ ತರಗತಿಯಲ್ಲಿ ಒಬ್ಬ ನರಸಿಂಹ ಎಂಬ ಗೆಳೆಯನ ಹತ್ತಿರ ಕೆ ಎಸ್ ನರಸಿಂಹಸ್ವಾಮಿಯವರ ಮಲ್ಲಿಗೆಯ ಮಾಲೆ ಪುಸ್ತಕ ಇತ್ತು. ಅರುಣ ಎಂಬ ಇನ್ನೊಬ್ಬ ಗೆಳೆಯ ನರಸಿಂಹನಿಗೆ 30 ರೂಪಾಯಿ ಸಾಲ ಕೊಟ್ಟಿದ್ದ ಅದನ್ನು ಅವನು ಕೊಡಲಿಲ್ಲ ಅಂತಾ ಮಲ್ಲಿಗೆಯ ಮಾಲೆ ಪುಸ್ತಕವನ್ನು ಅವನಿಂದ ಕಿತ್ತುಕೊಂಡಿದ್ದ. ಆದರೆ ಅದು ಅವನಿಗೆ ಬೇಕಾಗಿರಲಿಲ್ಲ. ನನ್ನ ಹತ್ತಿರ 25/- ರುಪಾಯಿ ಬೆಲೆ ಬಾಳುವ ಒಂದು ಆಟಿಕೆ ಇತ್ತು ಅದರ ಮೇಲೆ ಅರುಣನ ಕಣ್ಣು ಬಿತ್ತು. ಅವನು ಪುಸ್ತಕದ ಬದಲಿಗೆ ಆಟಿಕೆ ಕೊಡುವಂತೆ ಕೇಳಿದ. ನಾನು ಸಂತೋಷದಿಂದ ಒಪ್ಪಿಕೊಂಡೆ.

1986 ನೇ ವರ್ಷದ ಆವೃತ್ತಿಯ ಮಲ್ಲಿಗೆ ಮಾಲೆಯ ಬೆಲೆ ಆಗ 75/- ರುಪಾಯಿ. . ಪುಸ್ತಕ ತಗೊಂಡು ನನಗೆ ಕೇವಲ ಹಣದಲ್ಲಷ್ಟೇ ಲಾಭವಾಗಲಿಲ್ಲ, ಅದು ನನ್ನ ಬದುಕನ್ನೆ ಬದಲಿಸಿತು. ಸಾಹಿತ್ಯ ಲೋಕಕ್ಕೆ ಕೈ ಹಿಡಿದು ನಡೆಸಿತು. ಕೆ ಎಸ್ ನ ರ ನವಿರಾದ ಪ್ರೇಮಗೀತೆಗಳು ನನ್ನನ್ನು ಅಪಾರವಾಗಿ ಸೆಳೆದವು. ಅಕ್ಷರ ಪದಗಳನ್ನು ಮೋಹಿಸುತ್ತಿದ್ದೆ. ಸುಕೋಮಲವಾದ ಅವರ ಭಾವಗಳು ನನ್ನನ್ನು ಇನ್ನಷ್ಟು ಮೆದುಗೊಳಿಸಿದವು. ಮುದಗೊಳಿಸಿದವು. ಅವರ ಕಾವ್ಯದ ಓದು ಒಂದು ರೀತಿಯ ಅವರ್ಣನೀಯ ಅನುಭವ ಕೊಡತೊಡಗಿದವು. ಪ್ರತಿ ಕವನವನ್ನೂ ಹುಚ್ಚು ಹಿಡಿಸಿಕೊಂಡವನಂತೆ ಓದುತ್ತಾ ಓದುತ್ತಾ ಕವಿಯ ಕಲ್ಪನಾ ವಿಲಾಸದಲ್ಲಿ ತೇಲಿದೆ.

ಇವತ್ತು ಸಾಹಿತ್ಯದ ಪಾಠ ಮಾಡಲು ಆ ಮಲ್ಲಿಗೆ ಮಾಲೆ ಪುಸ್ತಕ ನನಗೆ ಮೊದಲ ಪ್ರೇರಣೆಯಾಗಿರಬಹುದು ಅಂದುಕೊಂಡಿದ್ದೇನೆ. ಮಲ್ಲಿಗೆ ಮಾಲೆಯ ಗೀತೆಗಳನ್ನು ಅಂದಿನಿಂದ ಇಂದಿನವರೆಗೆ ಓದುತ್ತಲೇ ಇದ್ದೇನೆ. 30 ವರ್ಷಗಳ ಹಿಂದಿನ ಪುಸ್ತಕ ಇವತ್ತಿಗೂ ನನ್ನ ಕೈಲಿದೆ. ಇಂದು ಬೆಳಗ್ಗೆ ಹಾಗೇ ಮತ್ತೆ ಮಲ್ಲಿಗೆ ಮಾಲೆ ಕೈಗೆ ತೆಗೆದು ಕೊಂಡಾಗ ಇದನ್ನೆಲ್ಲಾ ನೆನಪಿಸಿಕೊಂಡೆ. ನಿಮ್ಮ ಮುಂದೆ ಹಂಚಿಕೊಳ್ಳೋಣವೆನಿಸಿತು. ..

‍ಲೇಖಕರು Admin

January 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: