ಶಿವಮೊಗ್ಗ ಜಿಲ್ಲೆಯ ಅರಳಸುರಳಿಯವರಾದ ಶ್ರೀ. ವಿನಾಯಕ ಅರಳಸುರಳಿ ಅವರ ಅಪ್ರಕಟಿತ ಕಥಾಸಂಕಲನ, ‘ಮರ ಹತ್ತದ ಮೀನು’, 2023ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಂಗಳೂರಿನ ಕಲಬುರ್ಗಿ ಜಿಲ್ಲೆಯ ಮಂದೇವಾಲದವರಾದ ಶ್ರೀ. ಚಾಂದ್ ಪಾಷ ಎನ್ ಎಸ್ (ಕವಿಚಂದ್ರ) ಅವರ ‘ಒದ್ದೆಗಣ್ಣಿನ ದೀಪ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ.
ಎರಡೂ ಪ್ರಶಸ್ತಿಗಳು ತಲಾ ರೂ. 10,000 ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿವೆ.

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಶ್ರೀ. ವಿನಾಯಕ ಅರಳಸುರಳಿ ಅವರು ಕೃಷಿಕ ಕುಟುಂಬದ ಹಿನ್ನೆಲೆಯವರಾಗಿದ್ದು, ವಾಣಿಜ್ಯೋದಮದ ಪದವಿಧರರಾಗಿದ್ದಾರೆ. ಎಂಟು ವರ್ಷಗಳ ಕಾಲ ಬೆಂಗಳೂರಿನ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಅಕೌಂಟ್ಸ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಹುಟ್ಟೂರಾದ ಅರಳಸುರಳಿಯಲ್ಲಿ ನೆಲೆಗೊಂಡು ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಲಲಿತ ಪ್ರಬಂಧಗಳ ಸಂಕಲನ, ‘ನವಿಲುಗರಿ ಮರಿ ಹಾಕಿದೆ’ ಪ್ರಕಟಗೊಂಡಿದೆ.
ನಾಡಿನ ಖ್ಯಾತ ವಿಮರ್ಶಕಾರದ ಡಾ. ಎಸ್. ಆರ್ ವಿಜಯಶಂಕರ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.
‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ಶ್ರೀ. ಚಾಂದ್ ಪಾಷ ಎನ್ ಎಸ್ (ಕವಿಚಂದ್ರ) ಅವರು ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಇವರ ‘ಚಿತ್ರ ಚಿಗುರುವ ಹೊತ್ತು’ ಕವನ ಸಂಕಲನ ಮತ್ತು ‘ಧೂಳಿಡಿದ ನಕ್ಷತ್ರ’ ನಾಟಕ ಪ್ರಕಟಗೊಂಡಿವೆ.
ನಾಡಿನ ಖ್ಯಾತ ಕವಿ, ನಾಟಕಕಾರರಾದ ಡಾ. ಕೆ ವೈ ನಾರಾಯಣಸ್ವಾಮಿ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು.
ಇದೇ ಮಾರ್ಚ್ ತಿಂಗಳಲ್ಲಿ, ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ, ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.






ಅಭಿನಂದನೆಗಳು……. ಪ್ರಶಸ್ತಿ ವಿಜೇತ ಲೇಖಕರಿಗೆ