ಶೇಷಾದ್ರಿ ದಿಗ್ಭ್ರಾಂತಿಯಾಗಿ ಕಣ್ಣು ಬಿಟ್ಟು ಕೂತ..

 

 

 

 

ಬಯಲು..

ಸಂದೀಪ್ ಈಶಾನ್ಯ

 

 

 

ಸಂಜೆಯ ಮಳೆಯ ನಂತರ ಮತ್ತೆ ಅಗ್ರಹಾರದ ಬೀದಿ ಬಿಸುಪಾಗುವ ವೇಳೆಗೆ ನಿದ್ರೆಯ ಮಂಪರಿನಲ್ಲಿದ್ದ ಶೇಷಾದ್ರಿ ಹಾಸಿಗೆಯ ಮೇಲಿದ್ದುಕೊಂಡೆ ಸುತ್ತಲೂ ಕಣ್ಣಾಡಿಸಿದ. ಆಗಷ್ಟೇ ಮಳೆಯಾಗಿದ್ದರಿಂದ ಮೋಡ ಕವಿದು ಮನೆಯೊಳಗೂ ಒಂದಿಷ್ಟು ಕಪ್ಪಿಟ್ಟುಕೊಂಡಿತ್ತು. ಗಾಳಿ ಮಾತ್ರ ಮಂಜುಗೆಡ್ಡೆಯೊಂದು ತಾಕಿದಂತ ತಂಪು.

‘ಮಧ್ಯಾಹ್ನವೇ ಬಂದು ಬಿಡ್ತೀನಯ್ಯ’ ಎಂದು ಮಾತೆಸೆದು ಹೋಗಿದ್ದ ಬಿಳಿಗೆರೆಯ ಕೇಶವ ಸಂಜೆ ಕಳೆದು ಹೋಗಿದ್ದರು ಬಂದಿರಲಿಲ್ಲ.

‘ಥತ್, ಈ ಕೇಶವ ಅದು ಯಾವಾಗ ಹೇಳಿದಂತಯೇ ಮಾಡಿದ್ದಾನೆ. ಹೀಗೆ ಸೋಮಾರಿಯಾಗಿದ್ದಕ್ಕೆ ಅಲ್ವಾ, ಅಪ್ಪ ಮಾಡಿಟ್ಟಿದ್ದ ತೋಟವನ್ನೆಲ್ಲಾ ಹಾಳುಗೆಡವಿದ್ದು?’ ಶೇಷಾದ್ರಿ ಮನಸ್ಸಿನಲ್ಲೆ ಹಲುಬಿದ.

ಬಾಗಿಲ ಮೂಲೆಯಲ್ಲಿ ತಣ್ಣಗೆ, ಕೈ ತೊಳೆದ ತಟ್ಟೆಯೊಳಗಿದ್ದ ಹತ್ತಾರು ಎಂಜಲು ಅಗುಳಗಳ ಮೇಲೆ ನೊಣಗಳು ಗುಯ್‍ಗುಟ್ಟುತ್ತ ಹಾರಾಡುತ್ತಿದ್ದವು. ನೊಣಗಳು ಗುಯ್‍ಗುಟ್ಟುವುದು ಕಿವಿಗೆ ಅಪ್ಯಾಯಮಾನವಲ್ಲ, ಕರ್ಕಶ. ಜೊತೆಗೆ ಕೋಣೆಯಲ್ಲಿದ್ದ ಶೇಷಾದ್ರಿಯದೇ ಕರಿ ಕೋಟು ಸಹಿಸಿಕೊಳ್ಳಲಾರದಷ್ಟು ದುರ್ನಾತವನ್ನು ಹರಡುತ್ತಿತ್ತು.

ರಾತ್ರಿಯ ಕನಸುಗಳು ಅಷ್ಟೇನು ಶುಭಸೂಚಕವಾಗಿದ್ದಿಲ್ಲ. ಕೈ ಸಾಗುವ ಹಾಗಿದ್ದರೆ ತಾನೇ ಎದ್ದು ಕೂತು ಬಣಬಣ ಬಿಸಿನೀರನ್ನೋ, ಮೈ ನಡುಗಿಸುವ ತಣ್ಣಿರನ್ನೋ ಸುರಿದುಕೊಂಡು ಒದ್ದೆ ಪಂಚೆಯಲ್ಲೇ ನಿಮಿಥ್ಯ ನೋಡಬಹುದಿತ್ತು. ಈಗ ಆ ತ್ರಾಣವೇ ಇಲ್ಲಾ. ಪಾಶ್ರ್ವವಾಯು ತಗುಲಿ ಇಪ್ಪತ್ತು ವರ್ಷಗಳಾಗುತ್ತ ಬಂದಿದೆ. ಅತಿಯಾಗಿ ಬಳುಸುತ್ತಿದ್ದ ಎಡಗೈಗೇ ಪಾಶ್ರ್ವವಾಯು ಬಡಿದಿದೆ. ತುಟಿಗಳು ಮಾತನಾಡುವಾಗ ಅದುರುತ್ತವೆ. ಮಾತುಗಳೂ ಅಸ್ಪಷ್ಟವೆಂದು ಶೇಷಾದ್ರಿ ನೊಂದುಕೊಳ್ಳುತ್ತಾನೆ. ಅಂದೊಮ್ಮೆ ಕೇಶವನೇ ಅಂದುಬಿಟ್ಟಿದ್ದ.

‘ಶ್ರೇಷಾದ್ರಯ್ಯ ನೀವು ಬರಿ ಕೈ ಸನ್ನೆಯಲ್ಲೇ ಮಾತಾಡಿ ಸಾಕು. ಅದೇ ನಿಮ್ಮ ಮಾತಿಗಿಂತ ಬೇಗ ಮುಟ್ಟುತ್ತೆ’  ಗಟ್ಟಿಯಾಗಿ ನಕ್ಕ.

ಆಗ ನಗಲೂ ಆಗಲಿಲ್ಲ ಎನ್ನುವುದನ್ನು ಈಗ ನೆನೆದರೆ ಮೈ ಕಂಪಿಸುತ್ತದೆ ಶೇಷಾದ್ರಿಗೆ. ‘ಕೇಶವ ಹೊರಟುಹೋದ ಮೇಲೆ ಕಣ್ಣುಗಳು ಇದ್ದಕ್ಕಿದ್ದಂತೆ ತೇವವಾಗಿ ಹೋಗಿದ್ದು ಯಾಕೆ?’ ಮತ್ತದೇ ಪ್ರಶ್ನೆಗಳು.

‘ಅಯ್ಯ…ಅಯ್ಯ’ ಯಾರೋ ಕೂಗಿದ ಹಾಗಾಯಿತು.

‘ಯಾರದು, ಕೇಶವನ?’ ಶೇಷಾದ್ರಿ ತನ್ನ ಸೊಟ್ಟಗಿನ ಬಾಯಿಂದ ಸ್ಪಷ್ಟವಾಗಿ ಪದಗಳನ್ನು ಹೊರಡಿಸಲು ಹೆಣಗಾಡಿದ.

‘ನಾನು, ಅಂಬುಜ’ ಎಂದಿತು ದನಿ ಉತ್ತರವೆನ್ನುವಂತೆ.

‘ಬಾ, ಅಡ್ಡಿಲ್ಲ’.

ಅಂಬುಜ ತಡವಿ ಬೀಳದಂತೆ ತೊಟ್ಟಿದ್ದ ಲಂಗವನ್ನು ಮೊಣಕಾಲಿನವರೆಗೆ ಎತ್ತಿಡಿದುಕೊಂಡು ಒಳಗೆ ಬಂದಳು.

‘ತಟ್ಟೆ ತೊಳೆದಿಡಲು ಬಂದೆ. ರಾತ್ರಿಗೆ ಸಿಹಿಗುಂಬಳದ ಸಾರು ಸಾಕಲ್ಲ?’ ಕೇಳಿದಳು ಅಂಬುಜ.

‘ಬಣ್ಣದ ಸೌತೆ ಸಿಕ್ಕರೆ ಹುಳಿ ಮಾಡು ಮಾರಾಯ್ತಿ’.

ಅಂಬುಜ ಹ್ಹೂಗುಟ್ಟುತ್ತ, ನೊಣಗಳೊಂದಿಗೆ ಸೆಣಸಾಡುತ್ತಿದ್ದ ತಟ್ಟೆಗಳನ್ನೆತ್ತಿಕೊಂಡು ಹಿತ್ತಲಿಗೆ ನಡೆದಳು. ಪಕ್ಕದೂರಿನ ಶ್ರೀನಿವಾಸ ಭಟ್ಟರ ಮಗಳು ಅಂಬುಜಾಳಿಗೆ ಇಪ್ಪತ್ಮೂರರ ಪ್ರಾಯ. ಗುಣದಲ್ಲಿ ಅವಳಮ್ಮನಂತೆ ಹಠವಾದಿ. ಒಂದಿಷ್ಟು ಸಾಹಾಯ ಮಾಡುವ ಇರಾದೆಯಿದ್ದಂತೆ ಕಂಡರು, ಅಷ್ಟು ನಿಜವಾದದ್ದಲ್ಲ, ಬರಿ ತೋರುಗಾಣಿಕೆಯದು ಅಷ್ಟೆ ಅವಳಪ್ಪನಂತೆ.

ಕೇಶವ ಹೇಳುತ್ತಿದ್ದ, ‘ನೀವಿಲ್ಲಿ, ಅಂಜುಜಾ ಊಟ ಮಾಡಿಸೋಕೆ, ಮನೆ ಹದ ಮಾಡೋಕೆ ಬರ್ತಾಳೆ ಅಂತಷ್ಟೇ ತಿಳಿದಿದ್ದೀರಿ. ಅಗ್ರಹಾರದೊಳಗೆ ಅಂಬುಜಾ ಹೇಳ್ತಾಳಂತೆ ಜಂಬದಿಂದ. ‘ಅಯ್ಯೋ ನಾನಿಲ್ಲದ್ದಿದ್ದರೆ ಶೇಷಾದ್ರಯ್ಯನ ಕಥೆ ಮುಗಿತು, ಕೊಳೆತು ನಾರಿ ಬಿಡ್ತಾರೆ ಅಷ್ಟೇ’.

ಶೇಷಾದ್ರಿ ಓರೆಯಾದ ತುಟಿಯನ್ನು ಬಿರಿದು ನಗುತ್ತಾನೆ. ‘ಹೇಳಲಿ ಬಿಡೋ, ಬದುಕಿನ ಪಾಠಗಳು ಕಡಿಮೆ’ ಮಾತುಗಳು ಮತ್ತೆ ಸೊಟ್ಟಗೆ.

ತನಗೇಕೆ ಮೊದಲಿದ್ದ ಸಿಟ್ಟು ಈಗಿಲ್ಲ? ಅದರ ಅರ್ಧದಷ್ಟು ಕೂಡ! ಎಂದು ತನ್ನನ್ನೇ ತಾನು ಹತ್ತಾರು ಬಾರಿ ಕೇಳಿಕೊಂಡರೂ ಓಪ್ಪಿಯಾಗುವಂತ ಯಾವೊಂದು ಉತ್ತರವೂ ದೊರೆತಿಲ್ಲ.

*********** **********

‘ಮಾಯಿ! ಅದೇ ಹೊಲಗೇರಿಯ ಚಿಣ್ಣನ ಮಗಳು, ಮೊನ್ನೆ ಅಗ್ರಹಾರದ ಬಾವಿಗೆ ಹಾರಿಕೊಂಡು ಸತ್ತಳು, ಈ ಹೊಲೆ ಮುಂಡೆ!’ ಎಂದೇನೊ ಹೇಳಲು ಬಾಯಿ ತೆರೆದರು, ಕ್ಷಣಾರ್ಧದಲ್ಲೇ ಎಚ್ಚೆತ್ತುಕೊಂಡವನಂತೆ ಮಾತುಗಳನ್ನು ತಡೆದು ಕೇಶವ ಸುಮ್ಮನಾದ. ಹೊಲೆಯರ ಮೇಲಿನ ಕನಿಕರದಿಂದಲ್ಲ, ಹೊಲೆಯರಿಗೆ ಜರಿಯಲು ಹೋಗಿ ಅವಾಚ್ಯ ಶಬ್ಧವನ್ನು ಉಚ್ಚರಿಸಿದರೆ ಮತ್ತೇ ಮೀಯಬೇಕಾದೀತು ಎಂಬ ಅಲಸ್ಯದಿಂದ.

ಮಧ್ಯಾಹ್ನವೇ ಬರುತ್ತೇನೆ ಎಂದು ಹೇಳಿ ಹೋಗಿದ್ದ ಬಿಳಿಗೆರೆಯ ಕೇಶವ ಎರಡು ದಿನ ಕಳೆದ ಮೇಲೆ ಸಬೂಬಿನೊಂದಿಗೆ ಬಂದಿದ್ದ.

ಹೊಲೆಯರ ಮಾಯಿ ಬಾವಿಗೆ ಹಾರಿಕೊಂಡಿದ್ದು ಕೇಳಿ ಶೇಷಾದ್ರಿ ಮರುಗಿದ. ಸತ್ತಿದ್ದು ಯಾಕೆಂದು ಪ್ರೇಶ್ನಿಸುವುದು ಕೇಳುವುದು ಅಗತ್ಯವೆನಿಸಲಿಲ್ಲ. ಹುಟ್ಟಿಗೆ ಕಾರಣವೊಂದೆ, ಸಾವಿಗೆ ನೂರಾರು. ಮರದಲ್ಲಿ ಕೈಗೆಟುಕದ ಯಾವುದೊ ಮೂಲೆಯ ಕೊಂಬೆಯ ಮೇಲಿನ ಹಣ್ಣಿನಂತೆ ಮಾಗುತ್ತಿದ್ದಾನೆ.

ಆಕಳಿಸಲು ತೆರೆದ ಬಾಯನ್ನೊಮ್ಮೆ ಮುಚ್ಚಿ, ‘ಗೊತ್ತಾ, ಮಾಯಿ ಏಕೆ ಅಗ್ರಹಾರದ ಬಾವಿಗೆ ಹಾರಿಕೊಂಡಿದ್ದು? ಮೂರು ತಿಂಗಳಂತೆ. ಕದ್ದು ಬಸುರಾಗಿದ್ದು’ ಎಂದು ದನಿ ತಗ್ಗಿಸಿ ಮಂದ್ರದಲ್ಲಿ, ‘ಅಗ್ರಹಾರದವನೆ ಯಾರೋ ಈ ಹೊಲತಿಯ ಸಂಗ ಮಾಡಿದ್ದು. ಅದ ನಿರೂಪಿಸಲಂತೆ ಹೀಗೆ ಸರಿರಾತ್ರಿಯಲ್ಲಿ ಅಗ್ರಹಾರದ ಬಾವಿಗೆ ಹಾರಿ ಸತ್ತಿದ್ದು’ ಎಂದ ಕೇಶವ.

‘ಬಾವಿಯ ನೀರು ಈಗ ತಿಳಿಯಾಯ್ತು ಬಿಡೋ ಮಾರಾಯ’.

ಶೇಷಾದ್ರಿಯ ಮಾತು ಕೇಳಿದೊಡನೆ ಕೇಶವನಿಗೆ ಮರು ಮಾತನಾಡಲು ಮಾತುಗಳೇ ದೊರೆಯಲಿಲ್ಲ.

‘ತಿಳಿಯಾಯ್ತ ಬಾವಿಯ ನೀರು? ಅದು ಹೊಲತಿಯೊಬ್ಬಳು ಹಾರಿ ಸತ್ತ ಮೇಲೆ!’ ಗೊಂದಲ ಎನಿಸಿತವನಿಗೆ. ಶೇಷಾದ್ರಿಯ ಮುಖದಲ್ಲೊಂದು ನಿರ್ಲಿಪ್ತ ಖಾಲಿತನವಿತ್ತು. ಮಾಯಿ ಅಗ್ರಹಾರದ ಬಾವಿಗೆ ಹಾರಿಕೊಂಡು ಪ್ರಾಣ ಬಿಟ್ಟ ಮೇಲೆ ಇಡೀ ಅಗ್ರಹಾರವೇ ಹೌಹಾರಿ ಗದ್ದಲವೆಬ್ಬಿಸಿ ಹೊ¯ತಿಯ ಹೆಣವನ್ನು ತಾವು ಹೊರೆಗೆ ತೆಗೆಯಲೂ ಆಗದೆ, ಹೊಲೆಯರನ್ನು ಒಳಗೆ ಬಿಟ್ಟುಕೊಳ್ಳಲೂ ಆಗದೇ ಬಾಲ ತುಂಡಾದ ಬೆಕ್ಕಿನಂತೆ ಓಡಾಡುತ್ತಿದ್ದದ್ದು ಏಕೆಂದು ಕೇಳಬೇಕೆನಿಸಿತು.

ಮನೆಯ ಮಾಡನ್ನೇ ದಿಟ್ಟಿಸುತ್ತ ಪಾಶ್ರ್ವವಾಯು ತಗುಲಿದ ಎಡಗೈಯನ್ನು ಹೊಟ್ಟೆಯ ಮೇಲಿಟ್ಟುಕೊಂಡು ಮಲಗಿರುವ ಶೇಷಾದ್ರಿಗೇನಾದರು ‘ಹೊಲತಿಯೊಬ್ಬಳು ಹಾರಿ ಸತ್ತ ಮೇಲೆ ಅದು ಹೇಗೆ ಬಾವಿಯ ನೀರು ತಿಳಿಯಾಗುತ್ತೆ?’ ಎಂದು ಕೇಳಿದರೆ ಏನೇನೊ ಬಡಬಡಿಸಿ ಬಿಡಬಹುದು ತನಗೆ ತಿಳಿದದ್ದು, ಇಲ್ಲಾ ನನಗೆ ತಿಳಿಯಲಾರದ್ದು.

‘ನಾನು ಹೊರಟೆ, ಸಂತೆಗೆ ಹೋಗುವುದಿದೆ’.

‘ಮಾಯಿಯ ಹೆಣವನ್ನ ಹೊರಗೆ ತೆಗೆಸಿದ್ದು ಯಾರೋ?’ ಶೇಷಾದ್ರಿ ಕೇಳಿದ.

‘ಎಲ್ಲಾ ಸೇರಿ ರಂಪಾ ಮಾಡಿಟ್ಟಿದ್ದರು. ಗೋಪಾಲಯ್ಯನ ಮಗ ಪದ್ಮನಾಭಯ್ಯನೆ ಮುಂದೆ ನಿಂತು ಹೊರ ತೆಗೆಸಿದ್ದು. ಅಪ್ಪನಂತೆ ಮಗ’ ಗೊಣಗಿದ ಕೇಶವ ಸಿಟ್ಟಿನಿಂದ

‘ಮತ್ತೆ ಬಾವಿಯ ಕಥೆ?’

‘ಮುಚ್ಚಿ ಬಿಡೋದಾಂತ ತೀರ್ಮಾನವಾಗಿದೆ. ಅಗ್ರಹಾರಕ್ಕೆ ನೀರು ಮೈಲಿಗೆಯಾಗಿದೆ, ತಿಳಿಯಾಗಿಲ್ಲ. ಹೊಲತಿ ಬಿದ್ದ ಬಾವಿಗೆ ಮತ್ತೆ ಕೊಡ ಹಾಕೋದ?’ ಒಂದರ ಹಿಂದೆ ಮತ್ತೊಂದನ್ನು ಹೇಳುತ್ತಲೆ ಕೇಶವ ಮನೆಯ ಹೊಸ್ತಿಲು ದಾಟಿದ ಬಹಳ ತುರ್ತಿನ ಕೆಲಸವಿರುವಂತೆ.

‘ಅಂಬುಜ ಸಿಕ್ಕರೆ ಬರಲು ಹೇಳು ಮಾರಾಯ’ ಶೇಷಾದ್ರಿ ಮಂಚದ ಮೇಲಿನಿಂದಲೆ ಗಟ್ಟಿಯಾಗಿ ಹೇಳಿದ, ಹೋಗುತ್ತಿದ್ದ ಕೇಶವನಿಗೆ ಕೇಳುವಂತೆ. ಅವನ ಮಾತುಗಳು ಮತ್ತೇ ಅಸ್ಪಷ್ಟ.

‘ಅವಳು ಅವನೊಂದಿಗೆ ಪಟ್ಟಾಂಗ ಹೊಡಿತಾ ಇರ್ತಾಳೆ, ಬಿಡುವಾದಾಗ ಬರ್ತಾಳೆ, ನೀವು ಮಲಗಿ’ ಕೇಶವ ದೂರದೂರ ನಡೆದಂತೆ ಅವನ ಧ್ವನಿಯು ಕ್ರಮೇಣ ಮಾಸಿಹೋಯಿತು. ದನಿಯೆಲ್ಲಾ ಅಳಿಸಿಹೋಗಿ ಮನೆಯೊಳಗೆಲ್ಲಾ ಗುಂಯ್ ಎನ್ನುವಂತ ಶಬ್ಧ ನಿಧಾನವಾಗಿ ಆವರಿಸಿಕೊಂಡಿತು. ಎಲ್ಲೊ ಇದೇ ಶಬ್ಧದೊಳಗೆ ಚಿಣ್ಣನ ಮಗಳು ಮಾಯಿ ಬಾವಿಯೊಳಗೆ ಮುಳುಗಿ ಸಾಯುವಾಗ ಕೊನೆಯ ಬಾರಿ ಹೊರಡಿಸಿದ ದನಿಯು ಅಡಗಿರುವಂತೆ ಭಾಸವಾಯಿತು. ಒಂದೇ ತುದಿಗೆ ಸರಿದುಬಿಟ್ಟಿದ್ದ ದಿಂಬನ್ನು ಬಲಗೈಯಿಂದ ಸರಿಪಡಿಸಿಕೊಂಡು ಅದರ ನಡುವಲ್ಲಿ ತಲೆಯಿಟ್ಟು ಮಲಗಲು ಕೊಸರಾಡುತ್ತಿದ್ದಂತೆ  ದಿವ್ಯ ಅನುಭೂತಿತಂಥ ಭಾವಶೂನ್ಯತೆಯೊಂದು ಜೊತೆ ನಿಂತು, ತಾನು ಎಲ್ಲರಂತಿದ್ದ ದಿನಗಳಲ್ಲಿ ನಡೆದದ್ದೆಲ್ಲ ತಿರುಗಿ ಕೆದಕಿದಂತಾಯಿತು.

ಇವತ್ತಿನ ಖಾಲಿತನ, ಅಸಹಾಯಕತೆ, ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುವ ಗುಣ ಆವತ್ತಿರಲಿಲ್ಲ. ಆವತ್ತಿನ ಸಿಟ್ಟು, ಸೆಡವು, ವಾಚಾಳಿತನ, ಪ್ರತಿಷ್ಠೆಯ ಗುಂಗು ಇವತ್ತಿಲ್ಲ. ಅದೆಲ್ಲವೂ ಇವತ್ತೂ ಇದ್ದಿದ್ದರೆ ಹೊಲೆಯರ ಮಾಯಿ ಅಗ್ರಹಾರದ ಬಾವಿಗೆ ಹಾರಿ ಸತ್ತಿದ್ದಕ್ಕೆ ಎಲ್ಲರನ್ನೂ ಒಂದೆಡೆ ಸೇರಿಸಿ ಚೀರಿ ಬಿಡುತ್ತಿದ್ದೆ ಎಂದು ತನ್ನಷ್ಟಕ್ಕೆ ನಗುತ್ತಾನೆ. ಈಗ ಎಲ್ಲವೂ ಬದಲಾಗಿದೆ. ಕೂದಲು ಸಿಕ್ಕುಗಟ್ಟಿ ಮುದ್ದೆಯಾಗಿದೆ, ಕಣ್ಣುಗಳು ಅಳುಗುಳಿ ಮನೆಯೊಳಗಿನ ಹುಣಸೆ ಬೀಜವಾಗಿದ್ದರೆ, ಕೆನ್ನೆಗಳು ಜೋತುಬಿದ್ದು ದಾಡಿ ಪುಟ್ಟ ಹಿಮದ ರಾಶಿಯಾಗಿದೆ. ಆದರೆ ಆಗಿನ ಸಿಟ್ಟಿಲ್ಲ, ವಾಚಾಳಿತನವಿಲ್ಲ, ಪ್ರತಿಷ್ಠೆಯ ಗುಂಗಿಲ್ಲ. ಎಲ್ಲವೂ ಖಾಲಿ ಖಾಲಿ.

************** ***************

ವಾಮನಕೋಡಿ ಅಗ್ರಹಾರದ ನರಸಿಂಹ ದೇವರ ಗುಡಿಯ ಅರ್ಚಕರಾಗಿದ್ದ ಗಣಪತಿ ಜೋಯಿಸರು ಹಾಸಿಗೆ ಹಿಡಿದಾಗ ಇಡೀ ಅಗ್ರಹಾರವೇ ಒಮ್ಮೆ ಬೆಚ್ಚಿಬಿದ್ದಿತ್ತು. ಗಣಪತಿ ಜೋಯಿಸರು ಅಗ್ರಹಾರದ ಹಿರಿಯರು. ಮೇಲಾಗಿ ನರಸಿಂಹದೇವರ ಗುಡಿಯ ಉಸ್ತುವಾರಿಯನ್ನು ಕಳೆದ ಮೂರು ದಶಕಗಳಿಂದ ಕುಂದೆನಿಸದಂತೆ ಪಾಲಿಸಿಕೊಂಡು ಬಂದವರು. ಅಗ್ರಹಾರದಲ್ಲಿ ನಡೆದುಕೊಂಡು ಬಂದಿದ್ದ ಹಳೆಯ ನೀತಿ-ನೇಮಾದಿಗಳನ್ನು ಇಂದಿಗೂ ಪಾಲಿಸುವವರೆಲ್ಲರೂ ಒಂದು ಬಗೆಯಲ್ಲಿ ಗಣಪತಿ ಜೋಯಿಸರ ಅನುಯಾಯಿಗಳೆ.

ಗಣಪತಿ ಜೋಯಿಸರನ್ನು ಬಿಟ್ಟರೆ ವಾಮನಕೋಡಿ ಅಗ್ರಹಾರದಲ್ಲಿ ಅವರಷ್ಟೇ ಹಿರಿಯರೆಂದರೆ ಸಂಸ್ಕøತ ಪಾಠಶಾಲೆಯ ಹಿಂದಿನ ಹಳೆಯಂಚಿನ ಮನೆಯ ಶೇಷಾಚಾರ್ಯರು. ಇವರು ಗಣಪತಿ ಜೋಯಿಸರಂತೆ ಎಂದಿಗೂ ಬರಿಯ ಶಾಸ್ತ್ರಕ್ಕೆ ಗಂಟು ಬಿದ್ದವರಲ್ಲ. ಶೇಷಾಚಾರ್ಯರಂತೆ ಇಡೀ ಬ್ರಾಹ್ಮಣ್ಯವನ್ನೇ ಗಾಳಿಗೆ ತೂರಿದ ಮತ್ತೊಬ್ಬರೆಂದರೆ ಅಗ್ರಹಾರದ ಗೋಪಾಲಯ್ಯ. ಶೇಷಾದ್ರಿಯು, ಗೋಪಾಲಯ್ಯನ ಮಗ ಪದ್ಮನಾಭನೂ ಒಂದೇ ಓರಗೆಯವರು. ‘ಬಾವಿಯಿಂದ ಹೊಲೆಯರ ಮಾಯಿಯ ಹೆಣವನ್ನು ಯಾರು ತೆಗೆಸಿದರು ಮಾರಾಯ’ ಎಂದು ಕೇಳಿದಕ್ಕೆ? ‘ಗೋಪಾಲಯ್ಯನ ಮಗ ಪದ್ಮನಾಭರು ಮುಂದೆ ನಿಂತು ತೆಗೆಸಿದರು. ಅಪ್ಪನಂತೆ ಮಗ’ ಎಂದು ಕೇಶವ ಸಿಟ್ಟಿನಿಂದ ಗೊಣಗಿದ್ದು ಗೋಪಾಲಯ್ಯನ ಆಟಾಟೋಪಗಳಿಂದ ಬೇಸತ್ತೆ.

ಗೋಪಾಲಯ್ಯ ಬ್ರಾಹ್ಮಣವರ್ಣದ ಶೂದ್ರ ಆಚಾರಗಳಲ್ಲಿ. ಪಾಶ್ರ್ವವಾಯು ಬಡಿದು ಮನೆಯಲ್ಲಿ ಬಹುತೇಕ ಯಾವಾಗಲೂ ಒಂಟಿಯಾಗಿರುವ ಶೇಷಾದ್ರಿಗೆ ಗೋಪಾಲಯ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಅದೇನೊ ಗೌರವ. ಧೂಳುತುಂಬಿದ ಕನ್ನಡಿಯನ್ನು ಒರೆಸಿ ಮತ್ತೆ ಮತ್ತೆ ಮುಖ ನೋಡಿಕೊಳ್ಳುವವನಂತೆ ತನ್ನೊಳಗೆ ತಾನೇ ದಿನಕ್ಕೆ ಹತ್ತಾರು ಬಾರಿ ಇಣುಕಿ ನೋಡಿಕೊಳ್ಳುತ್ತಾನೆ. ಆದರೆ ತಾನು ಹುಡುಗನಾಗಿದ್ದಾಗ ಗೋಪಾಲಯ್ಯ ಒಮ್ಮೆಯೂ ಹೀಗೆ ಕಂಡಿದ್ದಿಲ್ಲ. ಮತ್ತೆ ನಗುತ್ತಾನೆ.

ಗಣಪತಿ ಜೋಯಿಸರು ಸುಧಾರಿಸಿಕೊಳ್ಳುವುದು ಸತ್ಯಕ್ಕೆ ದೂರವೆನಿಸಿದ್ದು ಎಂದೆಲ್ಲರೂ ಅರಿತುಕೊಂಡ ಮೇಲೆ ಪೂಜೆ, ನೈವೇದ್ಯಾದಿಗಳಿಲ್ಲದೆ ಓಣಗುತ್ತಿರುವ ನರಸಿಂಹ ದೇವರಿಗೆ ಮೈ ತೊಳೆದು ಶೂಚಿಗೊಳಿಸಿ, ನಂದಿರುವ ದೀಪವ ಹೊತ್ತಿಸುವುದು ಯಾರೆಂಬುದಕ್ಕೆ ಅಗ್ರಹಾರದೊಳಗೆ ಒಂದು ತೆರೆನಾದ ಮಾತಿನ ಮತದಾನ ಆರಂಭವಾಗಿತ್ತು. ‘ತಾವು ಯಾರನ್ನಾದರೂ ಸೂಚಿಸಿ ಮುಂದೊಂದು ದಿನ ಅವರಿಂದ ಪ್ರಮಾದವಾದರೇ?’ ಹೆದರಿ ಒಂದಿಷ್ಟು ಬ್ರಾಹ್ಮಣರು ಮೊದಲು ಅವರೇಳಲಿ ಎಂದರೆ, ಮತ್ತೊಂದಿಷ್ಟು ಬ್ರಾಹ್ಮಣರು ಮೊದಲು ಇವರೇಳಲಿ ಎಂದು ಒಬ್ಬರ ಮೇಲೊಬ್ಬರು ಕೈ ಹಾಕುತ್ತಿದ್ದನ್ನು ನೋಡಿದ ಶೇಷಾಚಾರ್ಯರು ನೇರವಾಗಿ ಎಲ್ಲರೆದುರು ಗೋಪಾಲಯ್ಯನ ಹೆಸರನ್ನು ಸೂಚಿಸಿ ತಮ್ಮ ಜವಾಬ್ದಾರಿ ಮುಗಿಯಿತೆಂಬಂತೆ ಶಾಂತ ಮುಖಮುದ್ರೆಯನ್ನೊತ್ತಿ ನಡೆದು ಬಿಟ್ಟರು.

ಗೋಪಾಲಯ್ಯ ನರಸಿಂಹ ದೇವರ ಅರ್ಚಕರಾದರೆ ವಾಮನಕೋಡಿ ಅಗ್ರಹಾರದ ಬ್ರಾಹ್ಮಣರು ನಡುಗುತ್ತಾರೆ ಊಹಿಸಿಕೊಂಡು ಕ್ಷಣಕಾಲ. ಗೋಪಾಲಯ್ಯನ ಬಗ್ಗೆ ಒಂದಿಷ್ಟು ದಂತಕಥೆಗಳು ಅಗ್ರಹಾರದೊಳಗಿರುವಂತೆ  ಅದೇ ಕಥೆಗಳು ಏಳೆಂಟು ಬೀದಿಯ ಆಚೆಗಿರುವ ಹೊಲೆಯರ ಕೇರಿಯಲ್ಲೂ ಇಂದಿಗೂ ಜೀವಂತವಾಗಿವೆ. ಕೆಲವರು ಅನ್ನುವುದುಂಟು ” ಹೇ ಅದು ಬರೀ ಕಥೆಯಲ್ಲಾ ಕಣ್ರೋ, ನಿಜ, ನಿಜ”.

ವಾಮನಕೋಡಿಯ ಮಗ್ಗುಲಿಗಿರುವ ಬಿಳಿಗೆರೆ ಹೊಳೆಯನ್ನು ದಾಟಿ ಗೋಪಾಲಯ್ಯ ತೋಟಕ್ಕೊ, ಶ್ರಾದ್ಧ ಮಾಡಿಸಲೊ, ಕೊನೆಗೆ ಉಪನಯನ ಮಾಡಿಸಿ ಬರುವಾಗಲೊ ಹೊಲೆಯರೇನಾದರು ಅಕ್ಕಪಕ್ಕದ ತೋಟಗಳಿಗೆ ಕೂಲಿಗೆಂದು ನಡೆದುಹೋಗುವಾಗ ಎದುರಾದರೆ ಸ್ವತಃ ಗೋಪಾಲಯ್ಯನೇ ಅವರನ್ನು ನಿಲ್ಲಿಸಿ ನಗುಮೊಗದಿಂದ ಎಲ್ಲಿಗೊರಟ್ಟಿದ್ದು ಎನ್ನುವುದರಿಂದ ಹಿಡಿದು ಮನೆಯ ಖಾಸಗಿ ಎನಿಸುವಂತ ಸಂಗಂತಿಗಳನ್ನು ವಿಚಾರಿಸುತ್ತ ಬಿಳ್ಕೊಡುವವರಂತೆ ಹೊಲೆಯನ ಬೆವತ ಭುಜವನ್ನೊಮ್ಮೆ ತಟ್ಟಿಕಳುಹಿಸುವಂತೆ, ಹೊಲತಿಯರು ಎದುರಾದರೆ ತಾವೇ ಕೈ ಮುಗಿದು ಮಾತನಾಡಿಸುತ್ತಾರೆಂದು ಆಚಾರನಿರತ ಬ್ರಾಹ್ಮಣರು ಕುಪಿತರಾಗಿದ್ದರು.

ಇನ್ನೂ ಕೆಲವರು ತುಸು ಮುಂದೆ ಬಂದು ‘ಗೋಪಾಲಯ್ಯ ಹೊಲೆಯರ ಮನೆಯಲ್ಲಿ ತಿಂದಿರುವುದು ಎಷ್ಟು ಸತ್ಯವೋ ಹಾಗೆ ಹೊಲೆಯರು ಗೋಪಾಲಯ್ಯನ ಮನೆಯ ಹಿತ್ತಲ ಬಾಗಿಲಿನಿಂದ ಜಗುಲಿಗೆ ಬಂದು ಅವರ ಮನೆಯ ಮೊಸರನ್ನ ತಿಂದು ಹೋಗಿರುವುದು ಅಷ್ಟೇ ನಿಜ’ ಉತ್ತರಿಸಿವುದಿಲ್ಲ ಗೋಪಾಲಯ್ಯ ಈ ಮಾತುಗಳಿಗೆಲ್ಲಾ.

‘ಗೋಪಾಲಯ್ಯ ನರಸಿಂಹ ದೇವರ ಗುಡಿಗೆ ಅರ್ಚಕರಾದರೆ ತೀರ್ಥ ಪ್ರಸಾದ ನೀಡಲಿಕ್ಕೆ ಹೊಲೆಯರಿಬ್ಬರನ್ನ ನೇಮಿಸಿ ಬಿಡ್ತಾರೆಯಷ್ಟೆ’ ಗುಂಪಿನಲ್ಲಿದ್ದ ತೆಳ್ಳನೆ ಮೈಕಟ್ಟಿನ ಜನಾರ್ದನ ಹೇಳಿದ.

“ಅದು ನಿಜ ಅನ್ನು” ಮತ್ತೊಬ್ಬ ಗುಂಪಿನಿಂದ ಆ ಮಾತಿಗೆ ಸೊಪ್ಪು ಹಾಕಿದ.

ಗೋಪಾಲಯ್ಯ ಮಾತನಾಡಲಿಲ್ಲ. ಅವರಿಗೆ ಕೋಪಕ್ಕಿಂತ ತಾಳ್ಮೆ ಹೆಚ್ಚು. ಕರಿ ಕೋಟೊಂದನ್ನು ಮೈಗೇರಿಸಿಕೊಂಡು ಮೂಲೆಯಲ್ಲಿ, ಕೈ ಕಟ್ಟಿ ಎಲ್ಲವನ್ನೂ ಆಲಿಸುತ್ತಿದ್ದ ಶೇಷಾದ್ರಿ ಅದೇನೂ ಹೊಳೆಸಿಕೊಂಡವನಂತೆ ಬಾಯಲಿದ್ದ ಉಗುಳನ್ನೊಮ್ಮೆ ಗಟ್ಟಿಯಾಗಿ ಕ್ಯಾಕರಿಸಿ, ಪಕ್ಕದ ಗಟಾರಕ್ಕೆ ತುಪ್ಪಿ ಸರಸರನೆ ಹೊರಟುಹೋದ. ಎಲ್ಲರೂ ಅವನು ಹೋಗಿದ ಕಡೆಯೆ ನೋಡುತ್ತ ನಿಂತರು.

*********** ***********

ಬೆಳಗಿನ ಬಿಸಿಲಕೋಲು ವಾಮನಕೋಡಿಯನ್ನು ಸ್ಪರ್ಶಿಸುವ ಮೊದಲೇ ಶೇಷಾದ್ರಿ ಎದ್ದು ದಬದಬನೆ ತಣ್ಣಿರನ್ನು ಬಗ್ಗಿಸಿಕೊಂಡ. ಉಗ್ರಾಣದಿಂದ ಎರಡು ಕೊಬ್ಬರಿ, ಎರಡಚ್ಚು ಬೆಲ್ಲವನ್ನು ಅವಲಕ್ಕಿಯೊಂದಿಗೆ ಕುಟ್ಟಿ ಪುಡಿ ಮಾಡಿಕೊಂಡು ಬುತ್ತಿಯಂತೆ ಕಟ್ಟಿಕೊಂಡ. ಆಗಲೆ ಉರಿದು ಕಪ್ಪಾಗಿದ್ದ ಬತ್ತಿಯನ್ನೊಮ್ಮೆ ಹಿಂಜಿ ತುಪ್ಪದ ದೀಪ ಹಚ್ಚಿಟ್ಟು, ಕೋಣೆಯಲ್ಲಿದ್ದ ತನ್ನ ಕರಿ ಕೋಟನ್ನು ಮೈಗೇರಿಸಿಕೊಂಡು, ಬಾಗಿಲ ಹಿಂದೆಯಿದ್ದ ಕೊಡೆಯನ್ನಿಡಿದು ಮನೆಯಿಂದ ಹೊರಬಿದ್ದ. ಅವನಮ್ಮ ಕಸ್ತೂರಕ್ಕನಿನ್ನು ಕಂಬಳಿಯೊಳಗೆ ಉಬ್ಬಸವಿಡುತ್ತ ಮಲಗೇ ಇದ್ದಳು.

ಮಾತಿಗೆ ಯಾರಿಲ್ಲದೆ ಬಾಯೊಣಗುವುದು ಶೇಷಾದ್ರಿಗೆ ಬೇಡವಾಗಿತ್ತು. ಅದಕ್ಕೆಂದೆ ಬಾಯನ್ನು ಕ್ರೀಯಾಶೀಲವಾಗಿರುವಂತೆ ನೋಡಿಕೊಳ್ಳಲು ಎಲೆಯಡಿಕೆಯನ್ನು ವಾಚಾಮಗೋಚರವಾಗಿ ಜಗಿಯುತ್ತ, ಅಲ್ಲಲ್ಲಿ ಉಗುಳುತ್ತ, ಗದ್ದೆ ಬಯಲುಗಳನ್ನು ದಾಟಿ ಬಿಳಿಗೆರೆಯ ಹಾದಿ ಕಡೆ ತಿರುಗಿದ. ಎಲೆಯಡಿಕೆ ಜಗಿದಷ್ಟು ಬಾಯಿ ಕೆಂಪೇರುವಂತೆ, ಗೋಪಾಲಯ್ಯನ್ನು ನೆನೆದಷ್ಟು ಶೇಷಾದ್ರಿಯು ಒಳಗೊಳಗೆ ಕೆಂಡವಾಗುತ್ತಿದ್ದ.

‘ಇವರು ಹೊಲೆಯನಾಗೇ ಹುಟ್ಟಬೇಕಿತ್ತು’ ಎಂದುಕೊಂಡ.

‘ಇವರೇನಾದರೂ ನರಸಿಂಹದೇವರ ಗುಡಿಯ ಅರ್ಚಕರಾದರೇ, ಹೇಳಿಲ್ವಾ ಜನಾರ್ದನ ತೀರ್ಥ, ಪ್ರಸಾದ ನೀಡಲಿಕ್ಕೆ ಹೊಲೆಯರಿಬ್ಬರನ್ನು ನೇಮಿಸಿಬಿಡ್ತಾರೆ ಅಷ್ಟೆ’. ಸಿಟ್ಟಾದ ಮತ್ತೆ ಶೇಷಾದ್ರಿ.

ಬಿಳಿಗೆರೆ ತಲುಪಿದ ಮೇಲೆ ಅಲ್ಲಿಯ ಒಂದಿಷ್ಟು ಹಿರಿಯ ಬ್ರಾಹ್ಮಣರಿಗೆ ಮಾತಿನ ಕಿಡಿ ತಾಕಿಸಿದ. ಶೇಷಾದ್ರಿ ಮಾತುಗಳನ್ನು ಕೇಳಿದವರಲ್ಲಿ ಒಂದಿಬ್ಬರು ‘ನೀನಾದ್ರು ಆಚಾರ-ಗಿಚಾರಂತಾ ಇಟ್ಟುಕೊಂಡಿದ್ದಿಯಲ್ಲಾ, ಒಳ್ಳೆದು. ಕಾಯುತ್ತೆ ನಿನ್ನ ಅದು ಮುಂದೆ. ಸುಮ್ಮನೇ ಮಾಡಿಲ್ಲ ನಮ್ಮ ಹಿರಿಯರು’ ಎಂದು ಉದ್ಘಾರವೆತ್ತಿದಾಗ ಶೇಷಾದ್ರಿ ಬೀಗುತ್ತಿದ್ದ.

ಗೋಪಾಲಯ್ಯನನ್ನು ನರಸಿಂಹ ದೇವರ ಅರ್ಚಕರನ್ನಾಗಿ ನೇಮಿಸಿದಂತೆ ಒಂದಿಷ್ಟು ಪ್ರಮುಖರಿಗೆಲ್ಲ ಕಿವಿಯೂದಿ ಮನೆಗೆ ಸೇರುವ ಹೊತ್ತಿಗೆ ಆಗಸದಲ್ಲಿ ಮಂಕು ಕವಿದು ಶಶಿಯುದಯಿಸುವ ತವಕದಲ್ಲಿದ್ದ. ಮನೆಗೆ ಬಂದ ಶೇಷಾದ್ರಿ ತಂಬಿಗೆಯೊಂದರಲ್ಲಿ ನೀರುಮೊಗೆದು ಕಾಲು ತೊಳೆದು, ತೊಟ್ಟಿದ್ದ ಕರಿ ಕೋಟನ್ನು ಬಿಚ್ಚಿಡುವಾಗ ಮೂಗಿಗೆ ಹಡರಿದ ದುರ್ನಾತದಿಂದ ಕಂಗೆಟ್ಟು ಹಿಸ್ಸಿ ಎನ್ನುತ್ತ ಮೂಗು ಮುಚ್ಚಿಕೊಂಡ.

‘ಇದನ್ನು ಹೊಗೆಯಲು, ಒಂದು ಹೆಣ್ಣು ದಿಕ್ಕಿಲ್ಲದೆ ಹೋಯ್ತು ಈ ಮನೆಗೆ’ ಎಂದು ಬೇಸರಪಟ್ಟುಕೊಂಡ. ಈ ವರ್ಷ ತನಗೆ ನಲವತ್ತು ತುಂಬುವುದರೊಳಗೆ ಹೇಗಾದರೂ ಮಾಡಿ ಮದುವೆಯಾಗಿ ಬಿಡಬೇಕು ಎನಿಸಿತು. ಮದುವೆಯೇ ಬೇಡ ಎಂದುಕೊಂಡಿದ್ದವನಿಗೆ ಮತ್ತೆ ಅದೇ ಯೋಚನೆ? ಅವನ ಅಂತರಂಗದ ಪ್ರತಿಧ್ವನಿಗೆ ಅವನೇ ಉತ್ತರಿಸಲಾಗದೆ ಹೋಗಿದ್ದು ಕೃತ್ರಿಮ ಎನಿಸಿತು. ಸುಮ್ಮನೆ ಬಟ್ಟೆ ಬದಲಿಸಿದ.

ಅಗ್ರಹಾರ ಬಿಡುವ ಮೊದಲು ಕಟ್ಟಿಟ್ಟುಕೊಂಡಿದ್ದ ತುರಿದ ಕೊಬ್ಬರಿ, ಬೆಲ್ಲ, ಕುಟ್ಟಿದ ಅವಲಕ್ಕಿ ಎಲ್ಲವೂ ಮಧ್ಯಾಹ್ನ ತೊಂಡಾಳಿನ ಗುಡ್ಡವನ್ನಿಳಿಯುವಾಗಲೆ ತಿಂದು ಜೀರ್ಣವಾಗಿ ಸಾಮಾನ್ಯವಾಗೆ ಹಸಿವಾಗತೊಡಗಿತ್ತು. ಮನೆಯೊಳಗೆ ಕಸ್ತೂರಕ್ಕನಿರಲಿಲ್ಲ. ಅವಳು ಮುಖ ಬಾಡಿಸಿ ಹಿತ್ತಲಿನಲ್ಲಿ ಪಕ್ಕಕ್ಕೆ ಕೋಲಿರಿಸಿಕೊಂಡು ಕತ್ತಲ್ಲನ್ನೆ ದಿಟ್ಟಿಸುತ್ತ ಕೂತುಬಿಟ್ಟಿದ್ದಳು. ನೆತ್ತಿಯ ಮೇಲಿದ್ದ ಲಾಟೀನೊಳಗಿನ ದೀಪದ ಮೊನೆ ನಾಲ್ಕು ದಿಕ್ಕಿಗೂ ಒಮ್ಮೊಮ್ಮೆ ಒಲಾಡುತ್ತ ಉರಿಯುತ್ತಿತ್ತು. ಹಿತ್ತಲಿಗೆ ಬಂದ ಶೇಷಾದ್ರಿ ಕಸ್ತೂರಕ್ಕನ ಎದುರು ನಿಂತು ‘ಊಟ’ ಎಂದಷ್ಟೇ ಹೇಳಿದ

‘ಬಾಳೆಎಲೆ ತಗೋ ಬಾ’ ಎಂದಷ್ಟೇ ಉತ್ತರಿಸಿ ಕಸ್ತೂರಕ್ಕ ಕೋಲಿನ ಸಹಾಯದಿಂದ ಮನೆಯೊಳಗೆ ನುಗ್ಗಿದಳು. ಅವಳ ಮುಖದಲ್ಲಾಗಲಿ, ದನಿಯಲ್ಲಾಗಲಿ ಸಾಮ್ಯಾತೆ ಇಲ್ಲಾ ಎನಿಸಿತು ಶೇಷಾದ್ರಿಗೆ. ಬಾಳೆ ಎಲೆ ತರಲು ಗಿಡದ ಹತ್ತಿರ ನಡೆಯುತ್ತಿದ್ದಾಗ ಗೋಪಾಲಯ್ಯ ಹಾಗೂ ಹೊಲೆಯರ ಚಿಣ್ಣ ಇಬ್ಬರೂ ಸಾಮಾನವಾಗಿ ಭಾಸವಾದರು.

ಎದುರಿದ್ದ ಬಾಳೆಗೆ ಅನ್ನ, ಹುಳಿಯನ್ನು ಬಡಿಸಿದ ಮೇಲೆ ಕಸ್ತೂರಕ್ಕ ಒಂದೂ ಮಾತನ್ನಾಡದೆ ತಲೆಗೆ ಸೆರಗೊದ್ದು ಮೂಲೆಯ ಕಂಬಕ್ಕೊರಗಿ ಕೂತು ಬಿಟ್ಟಳು. ಮೊದಲೆ ಹಸಿದು ದಣಿದಿದ್ದ ಶೇಷಾದ್ರಿಗೂ ಕೇಳಬೇಕೆನಿಸಲಿಲ್ಲ. ಕೈ ಬೆರಳುಗಂಟಿದ ಅಗುಳನ್ನು ಬಿಡದೆ ಸವಿಯುತ್ತಿದ್ದ. ನಡುನಡುವೇ ಕೈನೆಕ್ಕುವಾಗ ಹೊರಡುಸುತ್ತಿದ್ದ ‘ಸೊರ್ ಸೊರ್’ ಶಬ್ಧವು ಹಿಮ್ಮೆಳದಂತೆ ಕೇಳಿಸುತ್ತಿತ್ತು. ಮನೆಯ ಹಿತ್ತಲಿನಲ್ಲಿದ್ದ ಒಂದೆರಡೂ ಮಿಣುಕು ಹುಳುಗಳು ಮನೆಯೊಳಗೆ ಬಂದು ಅಲ್ಲಲ್ಲಿ ಮಿನುಗಿ ತಮ್ಮ ಇರುವನ್ನು ಸಾಬೀತುಪಡಿಸುತ್ತಿದ್ದg,É ಅದೇ ಹಿತ್ತಲಿನಲ್ಲಿದ್ದ ಜೀರುಂಡೆ ಜಾತಿಯ ಹುಳುಗಳೋ, ಚಿಟ್ಟೆಗಳೋ ಕಿರ್ರೋ ಕಿವಿ ಚಿಟ್ಟೆನೆಸುವಂತೆ ದನಿಗೈಯುತ್ತಿದ್ದವು.

ಗೋಪಾಲಯ್ಯನ ಮೇಲಿನ ಸಿಟ್ಟಿಗೆ ಬರಿಗಾಲಿಗೆ ಗಾಲಿಕಟ್ಟಿಕೊಂಡವನಂತೆ ಊರೂರು ಅಲೆದು ಗುಡಿಯ ಉಸ್ತುವಾರಿ ತಪ್ಪಿಸಲು ಮಾಡುತ್ತಿರುವ ಸಂಚೊ? ಅಥವಾ ನಿಜಕ್ಕೂ ಅಗ್ರಹಾರದೊಳಗೆ ಬ್ರಾಹ್ಮಣ್ಯವನ್ನು ಉಳಿಸುವ ಕಾಳಾಜಿಯೊ? ಎನ್ನುವುದು ಶೇಷಾದ್ರಿಗೆ ಕಗ್ಗಂಟಿನ ಪ್ರಶ್ನೆಯಾಯಿತು. ಮೂಲೆಯ ಕಂಬಕ್ಕೊರಗಿದ ಕಸ್ತೂರಕ್ಕ ಉಸಿರು ಬಿಗಿಯಿಡಿದ ರೀತಿಯಲ್ಲೊಮ್ಮೆ ಕೆಮ್ಮಿದಳು. ಒಂದು ಲಾಟೀನಷ್ಟೇ ಉರಿಯುತ್ತಿದ್ದ ನಿಶಬ್ಧ ತುಂಬಿದ ಮನೆಯೊಳಗೆ ಕಸ್ತೂರಕ್ಕನ ಆ ಒಂದು ಕೆಮ್ಮು ಯಾರೋ ಕಿಟಾರನೆ ಕಿರುಚಿದಷ್ಟೇ ಪ್ರಭಲವಾಗಿ ಕೇಳಿಸಿತು.

‘ಎದ್ದು ಒಂದಿಷ್ಟು ನೀರನ್ನಾದ್ರು ಕುಡಿಬಾರ್ದಾ’ ಶೇಷಾದ್ರಿ ಹೇಳಿದ. ಕಸ್ತೂರಕ್ಕ ಅಲುಗಾಡಲಿಲ್ಲ. ಕಸ್ತೂರಕ್ಕ ಬಾಯಿ ಬಡಕಿ, ಹೀಗೆ ಮಾತುಗಳನ್ನು ಎಂದು ಕಟ್ಟಿಟ್ಟು ಬದುಕಿದವಳಲ್ಲ.

ಶೇಷಾದ್ರಿ ಊಟ ಮುಗಿಸಿ ಎಂಜಲ ಬಾಳೆಯನ್ನು ಮುದುರಿ ಹಿತ್ತಲಿನಲ್ಲಿದ್ದ ತಿಪ್ಪೆಗೆ ಹಾಕಿ ಬಂದು ಕೈ ತೊಳೆದುಕೊಂಡ. ತಂಬಿಯನ್ನೆತ್ತಿ ನೀರು ಕುಡಿದ ಮೇಲೆ ವಿಚಾರಿಸಲೆಂದು ಕಸ್ತೂರಕ್ಕನ ಬಳಿಗೆ ಬಂದ. ಕಸ್ತೂರಕ್ಕನ ಕಣ್ಣುಗಳು ಅದಾಗಲೇ ತೋಯ್ದು ಕಣ್ಣೀರಿನ ಉಪ್ಪು ನೀರಿನಲ್ಲಿ ಒಣಗಿದ್ದವು. ಗಂಟಲಲ್ಲಿ ಬೇಕೆಂದರೂ ಹೊರಡಿಸಲು ದನಿಯಿರಲಿಲ್ಲ.

‘ಯಾಕ್ ಅಳೋದು?’ ಶೇಷಾದ್ರಿ ಕೇಳಿದ ಗಾಬರಿಯಿಂದ.

‘ನರಸಿಂಹ ದೇವರ ಗುಡಿಗೆ ಗಣಪತಿ ಜೋಯಿಸರಂತೆ ಇವನೂ ಮಹಾ ಸಜ್ಜನ ಅಂತಾ ಗೋಪಾಲನ್ನ ಸೂಚಿಸೋರಿಗೆ ಹೇಳು, ಬೇಕಾದ್ರೆ ಇನ್ನೂ ಆ ಜಾಗಕ್ಕೆ ಹೊಲೆಯರ ಪಿಚ್ಚನ ಹೆಸರನ್ನು ಸೂಚಿಸಬಹುದು ಅಂತಾ. ಅವನೂ ಈ ಕೇರಿಯವನೇ. ಈ ಮನೆಗೂ ನೆಂಟನೆ ಎಂದು ಮತ್ತೆ ಕಣ್ಣೀರು ಹಾಕಿದಳು.

ಮೊದಲೆ ದಣಿದಿದ್ದ ಶೇಷಾದ್ರಿಗೆ ಏನೊಂದು ಅರ್ಥವಾಗಲಿಲ್ಲ. ಮಳೆ ನೀರು ತುಂಬಿದ ಹಳ್ಳಗಳನ್ನು ಬಳಸುವುದು ಆಯಾವೆನಿಸಿ ಗದ್ದೆಗೆ ಕಟ್ಟಿದ ಮಣ್ಣಿನ ದಿಣ್ಣೆಯನ್ನು ಏರಿಬರುವಾಗ ಎದುರಾದ ಪಿಚ್ಚನ ಕೊನೆಯ ಮಗನ ಮುಖದಲ್ಲಿದ್ದ ಹರ್ಷದ ನೆನಪಾಯಿತು. ಆ ನಗುವಿಗೂ ಕಸ್ತೂರಕ್ಕನೀಗ ಅಲವತ್ತುಕೊಳ್ಳವುದಕ್ಕೂ ಸಂಬಂಧವಿದೆ ಎಂದು ಗುಮಾನಿಯಾಯಿತು.

‘ಆ ಹೊಲೆ ಸೂಳೆ ಮಕ್ಕಳು ಅದೇನು ಮಾಡಿಬಿಟ್ರೋ. ಅವರೇನೇ ಮಾಡಿದ್ರು ಈ ಹಾಳು ಗೋಪಾಲಯ್ಯನಿರ್ತಾನೆ ಅವರ ಬೆನ್ನಿಗೆ. ಕಿವಿಯಲ್ಲಿನ ಒಂಟಿ, ಮೈ ಮೇಲಿನ ಜನಿವಾರ ಕಳಚಿ ತಲೆಗೊಂದು ಮುಂಡಾಸು, ನಡುವಿಗೊಂದು ಹಳೆಯ ಪಂಚೆ ಸುತ್ತಿಬಿಟ್ಟರೆ ಸಾಕು. ಇವನು ಥೇಟು ಹೊಲೆಯನೆ’. ಎಂದ ಸಿಟ್ಟಿನಿಂದ. ಮನೆಯೊಳಗೆ ಒಂದೆರಡು ಮಿಣುಕು ಹುಳಗಳು ಹೆಚ್ಚಾಗೇ ಮಿನುಗತೊಡಗಿದವು. ಜೀರುಂಡೆ ಜಾತಿಯ ಚಿಟ್ಟೆಗಳ ಸದ್ದು ಏರತೊಡಗಿತು.

‘ಶೇಷಣ್ಣನ ಮಗಳು ಚಾರಿಯನ್ನ ಆ ಪಿಚ್ಚನ ಹಿರಿಮಗ ಬಿಮ್ಮ ಮದುವೆಯಾಗಿಬಿಟ್ಟ ಕಣೋ. ಈ ಮುಂಡೆ ಮಗ ಗೋಪಾಲಯ್ಯನೇ ನಿಂತು ಮಾಡಿಸಿದನಂತೆ’ ಕಸ್ತೂರಕ್ಕ ಕಣ್ಣೀರುಗರೆಯುವುದನ್ನು ಮುಂದುವರೆಸಿದಳು.

ಶೇಷಣ್ಣನ ಮಗಳು ಚಾರಿ ಎಂದರೆ, ಅಗ್ರಹಾರದ ಸಂಸ್ಕøತ ಪಾಠಶಾಲೆಯ ಪಕ್ಕದ ಹಳೆಯಂಚಿನ ಮನೆಯ ಶೇಷಾಚಾರ್ಯರ ಮಗಳು ಚಾರುಲತಾ. ಸಂಬಂಧದಲ್ಲಿ ಕಸ್ತೂರಕ್ಕನು, ಶೇಷಾಚಾರ್ಯರು ಒಂದೇ ತಂದೆಯ ಮಕ್ಕಳು. ತಾಯಂದಿರು ಬೇರೆ. ಗಣಪತಿ ಜೋಯಿಸರ ನಂತರ ನರಸಿಂಹ ದೇವರ ಗುಡಿಯ ಉಸ್ತುವಾರಿಯನ್ನು ಗೋಪಾಲಯ್ಯ ನಿರಾಕರಿಸಿದರೂ, ಶೇಷಾಚಾರ್ಯರು ಮಾತ್ರ, ನಿನಗದೂ ಸಿಕ್ಕರೆ ನಿಭಾಯಿಸು ಎಂದು ತಾಕೀತು ಮಾಡಿದ್ದರು. ಇದೇ ಕಾರಣಕ್ಕೆ ತುಂಬಿದ ಸಭೆಯೊಳಗೆ ಶೇಷಾಚಾರ್ಯರು ಗೋಪಾಲಯ್ಯನ ಹೆಸರನ್ನು ಸೂಚಿಸಿದ್ದು. ಗೋಪಾಲಯ್ಯನಿಗೆ ಗುಡಿಯ ಉಸ್ತುವಾರಿ ಬೇಡವಾದ್ದರಿಂದಲೆ ಮಗನ ವಯಸ್ಸಿನ ಶೇಷಾದ್ರಿ ಉಗಳನ್ನೊಮ್ಮೆ ಗಟಾರಕ್ಕೆ ತುಪ್ಪಿ ನಡೆದಾಗಲೂ ಸಿಟ್ಟಾಗದೇ ಸುಮ್ಮನೆ ನಿಂತು ಬಿಟ್ಟಿದ್ದು.

ಕಸ್ತೂರಕ್ಕ ಮದುವೆಯಾದ ಎರಡು ವರ್ಷಕ್ಕೆ ಒಡಲು ತುಂಬಿಕೊಂಡಳು. ಅದೇ ವರ್ಷ ಕಸ್ತೂರಕ್ಕನ ಗಂಡ ಸೀತಾರಾಮಯ್ಯ ತೋಟಕ್ಕೆ ನೀರು ಬಿಡಲೆಂದು ಹೋಗಿದ್ದಾಗ ಅಲ್ಲಿಯೇ ಸತ್ತುಬಿದ್ದಿದ್ದ. ಗಾಳಿ ಮೆಟ್ಟುಕೊಂಡು  ಸತ್ತನೆಂದು ಹಲವೆರೆಂದರೆ, ಕೆಲವರು ಮಾತ್ರ ಎದುರು ಹೇಳದೆ ಇದ್ದರೂ ಯಾರಾದರೂ ಸಿಕ್ಕಾಗ ಮಾತಿಗೇಳುವಂತೆ  ‘ಕಸ್ತೂರಕ್ಕನ ಬಾಯಿ ಸರಿ ಇಲ್ಲಾ. ಅವಳ ಉಪದ್ರವ ತಾಳಲಾರದೆ ಸತ್ತಿದ್ದು’ ಎನ್ನುತ್ತಾರೆ ಕೆಲವರು. ಒಟ್ಟಿನಲ್ಲಿ ಕಸ್ತೂರಕ್ಕ ಗಂಡನೊಂದಿಗೆ ಸಂಸಾರವೆಂದು ಮಾಡಿದ್ದು ಮೊದಲ ಎರಡು ವರ್ಷಗಳು ಮಾತ್ರ.

ಶೇಷಾಚಾರ್ಯರೇ ಮನೆಯ ತೋಟದ ಅಡಿಕೆ ಧಾರಣೆಯಲ್ಲಿ ಬಂದ ಲಾಭದಲ್ಲಿ ಒಂದಿಷ್ಟನ್ನು ಗಂಡನಿಲ್ಲದೆ ಆದಾಯದ ರೂಪಕುರೂಪಗಳನ್ನೇ ಕಾಣದ ಕಸ್ತೂರಕ್ಕನಿಗೂ ಕೊಟ್ಟು ಬರುತ್ತಿದ್ದರು. ಆ ಸಮಯದಲ್ಲೇ ಶೇಷಾಚಾರ್ಯರು ಕಸ್ತೂರಕ್ಕನ ಮಗ ಶೇಷಾದ್ರಿಗೆ ತಮ್ಮ ಮಗಳು ಚಾರಿಯೊಂದಿಗೆ ಲಗ್ನ ಮಾಡುತ್ತೇನೆಂದು, ಸಾಕ್ಷಿಗೆನ್ನುವಂತೆ ದೇವರ ಮುಂದೆ ದೀಪವಂಟಿಸಿ ಪ್ರಮಾಣ ಮಾಡಿದ್ದು. ಕಸ್ತೂರಕ್ಕನೂ ತವರಿನೊಂದಿಗಿನ ಋಣ ಉಳಿಯಿತೆಂದು ಗೆಲುವಾಗಿದ್ದಳು.

ಅಡಿಕೆ ಧಾರಣೆಯ ಲಾಭದಲ್ಲಿ ಪಾಲು ನೀಡುತ್ತಿದ್ದಕ್ಕೆ ತನ್ನ ಕೈ ಹಿಸುಕಿಕೊಂಡು ಒಳಗೊಳಗೆ ಉರಿದು ಬೀಳುತ್ತಿದ್ದ ಶೇಷಾಚಾರ್ಯರ ಹೆಂಡತಿ ಪಾರ್ವತಮ್ಮ ಮದುವೆಯ ಮಾತುಕಥೆಯಾಡಿದ ಗಂಡನ ಮೂರ್ಖತನಕ್ಕೆ ಬಡಿದು ಬಿಡಬೇಕು ಎನ್ನುವಷ್ಟು ಸಿಟ್ಟಾದಳು. ಸಮಯಕ್ಕೆ ಹೊಂಚು ಹಾಕುತ್ತ ಕಾಯುತ್ತಿದ್ದ ಬೆಕ್ಕಿನಂತಿದ್ದ ಪಾರ್ವತಮ್ಮ, ಶೇಷಾಚಾರ್ಯರು ಮಳೆಗಾಲ ಶುರುವಾಗುವ ಮೊದಲೆ ಅಡಿಕೆ ಧಾರಣೆಯನ್ನು ಕೇಳಿಬರಲೆಂದು ಕಟ್ಟೆಮಳವಾಡಿಯ ಸಂತೆಯ ದಾರಿ ಹಿಡಿದರೆ, ಪಾರ್ವತಮ್ಮ ಮಾತ್ರ ನೇರವಾಗಿ ಕಸ್ತೂರಕ್ಕನ ಮನೆಗೆ ಧಾವಿಸಿ ಮಾತಿನ ಕೆಂಡ ಚೆಲ್ಲುತ್ತ ಕುಣಿಲಾರಂಭಿಸಿದಳು.

‘ಅಪ್ಪಳ ಸಂಡಿಗೆಗೂ ಗತಿ ಇಲ್ಲದ ಮನೆ ಇದು’

‘ಗಂಡ ಗಾಳಿ ಮೆಟ್ಟಿ ಸತ್ತಿದ್ದು ನಿಜವೋ! ಸುಳ್ಳೋ!. ನಿನ್ನ ಹರಕು ಬಾಯಿ ನೋಡಲಾರದೇ ಸತ್ತಿರೋದಂತೂ ನಿಜವಿರಬೇಕು’

‘ಈ ಹಾಳು ಮನೆಯಲ್ಲಿ, ಸಾಕೆನ್ನುವಷ್ಟನ್ನು ತಿಂದು ಕಲಗಚ್ಚು ಬಾನಿ ತುಂಬಿ ಅದೆಷ್ಟು ವರ್ಷಗಳಾಯ್ತೋ? ಓ! ಅಪ್ಪನ ಮನೆಯ ಅಡಿಕೆ ದುಡ್ಡಿಗೆ ಕಾಯ್ತ ಇದ್ಯೋ ಬಾನಿ ತುಂಬೊದಕ್ಕೆ?’ ಎಂದು ಹೀಯಾಳಿಸುವ ರಾಗವನ್ನು ಅರ್ಥಕ್ಕೆ ಸರಿಯಾಗಿ ಹೊಮ್ಮಿಸಿ ಕಸ್ತೂರಕ್ಕನ ಮರ್ಮಕ್ಕೆ ತಾಗುವಂತೆ ಎಂದುಬಿಟ್ಟಳು. ಕಸ್ತೂರಕ್ಕನಿಗೆ ಅರ್ಥವಾಗಿಹೋಯ್ತು. ಮದುವೆ ಮಾಡುವ ಆಸೆಯನ್ನು ಆ ಕ್ಷಣಕ್ಕೆ ಕೈ ಬಿಟ್ಟಬಿಡುವುದರ ಜೊತೆಗ ಅಡಿಕೆ ಧಾರಣೆಯ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಳು. ಪುರಾಣದಂತ ಈ ಕಥೆಗಳನ್ನೆಲ್ಲವನ್ನೂ ಕಸ್ತೂರಕ್ಕ ಶೇಷಾದ್ರಿಗೆ ಹೇಳಿದ್ದು ಒಂದತ್ತು ವರ್ಷದ ಕೆಳಗೆ.

ಶೇಷಾದ್ರಿಯೂ ಕಸ್ತೂರಕ್ಕನಂತೆ ವಾಚಾಳಿ. ಮಾತಿದ್ದರೆ ಸಾಕು ಎಲ್ಲೆಂದರಲ್ಲಿ ಕೂತು ಬಿಡುವವನು. ಅಷ್ಟೇ ಹಠವಾದಿ ಆದರೆ ಛಲಗಾರನ್ನಲ್ಲ. ನಡೆದ ಎಲ್ಲವನ್ನು ಕಸ್ತೂರಕ್ಕ ಹೇಳಿದಮೇಲೆ, ಶೇಷಾಚಾರ್ಯರ ಮಗಳು ಅಗ್ರಹಾರದ ಬೀದಿಗಳಲ್ಲಿ ಎದುರಾದರೂ ನೋಡುತ್ತಿರಲಿಲ್ಲ. ಬೇಕೆಂದೆ ನೆಲಕ್ಕೊಮ್ಮೆ ತುಪ್ಪಿ ನಡೆದುಬಿಡುತ್ತಿದ್ದ. ಆದರವನಿಗೆ ಚಾರಿಯ ಬಗ್ಗೆ ಸಿಟ್ಟಿರಲಿಲ್ಲ.

ಈಗ ಇದ್ದಕ್ಕಿದಂತೆ ಸಿಡಿಲಿನಂತೆ ಎರಗಿಬಂದ ಚಾರಿ, ಹೊಲೆಯರ ಬಿಮ್ಮನನ್ನು ಮದುವೆಯಾಗಿದ್ದನ್ನು ಕೇಳಿ ಬೆವತು ಹೋದ. ಕಸ್ತೂರಕ್ಕನಿನ್ನೂ ಗೊಗ್ಗರು ದನಿಯಲ್ಲಿ ಕೆಮ್ಮುತ್ತ, ನರಳುತ್ತ ಸಣ್ಣಗೆ ಅಳುತ್ತಲೆ ಇದ್ದಳು.

‘ಅಗ್ರಹಾರದೊಳಗೆ ಬೆಳಗೆದ್ದು ಮಡಿಯುಡುತ್ತಿದ್ದವಳು ಹೊಲೆಯರ ಕೇರಿಯಲ್ಲಿ ನುಸಿ ಗಲೀಜಿನ ಮಧ್ಯೆ ಹೊಲೆಯೂಡಬೇಕು. ಹೊಲಸು’ ಎಂದ ಶೇಷಾದ್ರಿ.

ಕಸ್ತೂರಕ್ಕನೇನು ಮಾತನಾಡಲಿಲ್ಲ. ಅವಳದೆನ್ನಿದ್ದರು ಗೊಗ್ಗರು ಕೆಮ್ಮು ಮಾತ್ರ. ಶೇಷಾದ್ರಿಗೆ ನಿಲ್ಲಲಾಗಲಿಲ್ಲ ಮನೆಯೊಳಗೆ. ಬಿಚ್ಚಿಟ್ಟಿದ್ದ ತನ್ನ ಕರಿ ಕೋಟನ್ನು ಮತ್ತೇ ಮೈಗೇರಿಸಿಕೊಂಡು, ಚಪ್ಪಲಿ ಮೆಟ್ಟು ಸೀದಾ ಗೋಪಾಲಯ್ಯನ ಮನೆಗೆ ಬಂದುಬಿಟ್ಟ. ಮನೆಯೊಳಗೆ ಗೋಪಾಲಯ್ಯನಿರಲಿಲ್ಲ. ಅವನ ಓರಗೆಯ ಪದ್ಮನಾಭ ಲಾಟೀನಿನ ಬೆಳಕಿನಲ್ಲಿ ದೀಪಕ್ಕೆ ಬತ್ತಿ ಒಸೆಯುತ್ತಿದ್ದದ್ದು ಕಂಡಿತು. ಲಾಟೀನಿನ ಬೆಳಕಿಗೆ ಕೃಶಕಾಯವಾದ ಶೇಷಾದ್ರಿಯ ದೇಹ ಚೆಲ್ಲಿದ ನೆರಳು ದೈತ್ಯಕಾರವಾಗಿ ಮನೆಯೊಳೆಲ್ಲಾ ಹರಡಿಕೊಂಡಿತು. ನೆರಳು ಪ್ರವೇಶಿಸಿದ್ದನ್ನು ನೋಡಿದ ಮೇಲೆ ಯಾರೋ ಬಂದರೆಂದು ಪದ್ಮನಾಭನೆ ಕುತ್ತಿಗೆಯನ್ನು ನಿಮಿರಿಸಿ ಬಾಗಿಲ ಕಡೆ ನೋಡಿದರೆ ಶೇಷಾದ್ರಿ ನಿಂತಿದ್ದು ಕಂಡಿತು.

ಒಳಗಿನ ತಿದಿ ಬಲವಾಗಿಯೊತ್ತಿ ಬರುತ್ತಲೇ ಇತ್ತು ಶೇಷಾದ್ರಿಗೆ. ತಿದಿಯೊತ್ತುವುದು ಹೆಚ್ಚಾದಂತೆ ಅದರ ಕಾವು ಹೆಚ್ಚು. ಗೋಪಾಲಯ್ಯನ ಮನೆಯ ಎದುರು ಬಹಳ ಹೊತ್ತು ನಿಲ್ಲಲಾಗಲಿಲ್ಲ. ಮತ್ತೇನನ್ನೋ ಮಾಡಿಬಿಡುವವನಂತೆ ದಾಪುಗಾಲುಗಳನ್ನಿಡುತ್ತ ಹೊಲೆಯರ ಕೇರಿಗೆ ನಡೆದು ಬಂದುಬಿಟ್ಟ. ಹೊಲಗೇರಿಯೆಂದರೆ ಉಳಿದ ಕೇರಿಗಳಂತಲ್ಲ ಈ ಕೇರಿಗೆ ತನ್ನದೆಯಾದ ನಿರ್ದಿಷ್ಟ ವ್ಯಾಪ್ತಿಯೆನ್ನುವುದಿಲ್ಲ. ಹೆಚ್ಚೆಂದರೆ ಇಪತ್ತು ಮನೆಗಳಿರಬಹುದು ಇಡೀ ಕೇರಿಯಲ್ಲಿ. ಮನೆಗಳಲ್ಲ, ಗುಡಿಸಲುಗಳವು. ಮಾಡಿಗೆ ಹೊದೆಸಿದ ತೆಂಗು, ಈಚಲ ಗರಿಗಳು ಬಿಸಿಲಿಗೆ ಒಣಗುತ್ತ, ಮಳೆಗೆ ನೆನೆಯುತ್ತ ಯಾವ ಕವಿಯ ಉಪಮೆಗೂ ಸಿಗದೆ ಋತುಗೆ ತಕ್ಕಂತೆ ಬದಲಾಗುತ್ತಿದ್ದವು. ಇಡೀ ಕೇರಿಯಲ್ಲಿ ಯೋಗ್ಯವಾದದ್ದು ಎಂದೆನಿಸಿಕೊಂಡಿತ್ತು. ವಿಸ್ತಿರ್ಣ ದೊಡ್ಡದೆಂದಲ್ಲ, ಬಿದಿರಿನ ತಟ್ಟಿಗೆಯದು ಎಂದಷ್ಟೇ.

ಶೇಷಾದ್ರಿ ಹೊಲೆಯರ ಕೇರಿಗೆ ಬಂದಾಗ ಅದಾಗಲೇ ಪಿಚ್ಚನ ಗುಡಿಸಲಿನೆದುರು ಇಡೀ ಕೇರಿಯೆ ಬಂದು ಸೇರಿತ್ತು.ಒಂದಿಷ್ಟು ನಕ್ಷತ್ರಗಳು ಮಿನುಗುತ್ತಿದ್ದವು ಅಲ್ಲಲ್ಲಿ. ಹೊಲೆಯನೊಬ್ಬ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗಿದ್ದು ಪ್ರಮಾದವೆನ್ನುವ ಆತಂಕವೇ ತುಂಬಿತ್ತು ನೆರದಿದ್ದವರಲ್ಲಿ ಬಹುತೇಕರಿಗೆ.

ಯಾರೋ ನಡೆದು ಬರುತ್ತಿದ್ದಾರೆ ಎನ್ನುವುದನ್ನು ಗೋಪಾಲಯ್ಯ ಗಮನಿಸಿದರು. ಓರೆಗಣ್ಣು ಮಾಡಿ ಯಾರೆಂದು ನೋಡುವುದರೊಳಗೆ ಶೇಷಾದ್ರಿಯೇ ಹೊಲೆಯರನ್ನು ದಾಟಿ ಗೋಪಾಲಯ್ಯನ ಎದುರು ಬಂದ ನಿಂತ. ಶೇಷಾದ್ರಿ ಬಂದಿದ್ದನ್ನು ನೋಡಿ ಗೋಪಾಲಯ್ಯ ಒಮ್ಮೆ ಮುಗುಳ್ನಕ್ಕರು. ಅದು ಕೇವಲ ನಗುವಾಗಿರಲಿಲ್ಲ. ಶೇಷಾದ್ರಿಯ ನಂಬಿಕೆಗಳೆಲ್ಲವನ್ನೂ ತರ್ಕದ ಲೇಪನ ಬಳಿದ ಪ್ರಶ್ನೆಯ ಒರೆಗೆ ಹಚ್ಚಿದಂತಿತ್ತು. ಶೇಷಾದ್ರಿಗೆ ಮೈ ಕಂಪಿಸಿತು. ಏನನ್ನೋ ಹೇಳಿಬಿಡಬೇಕು ಎಂದುಕೊಂಡು ಅವಸರವಾಗಿ ಬಂದವನಿಗೆ ಬಾಯಿ ಕಟ್ಟಿದಂತಾಯಿತು. ಮಾತುಗಳಿಗೆ ತಡವರಿಸಿದ. ಹೆಣಗಾಡಿದ, ಮತ್ತೂ ಸಾವರಿಸಿಕೊಂಡು

‘ನೋಡ್ತೀನಿ..ನೋಡ್ತೀನಿ..ಅದೆಷ್ಟು ದಿನ ನಿನ್ನ ಈ ಸಾಹಸಗಳನ್ನೂ ಮುಂದುವರೆಸ್ತಿಯಾ ಅಂತಾ’

‘ಥತ್…ನಿನ್ನ ಜನ್ಮಕ್ಕೆ, ಬಂದು ಹೊಲಗೇರಿಗೆ ಸೇರ್ಕೊ, ನಿನಗೇಕೆ ಅಗ್ರಹಾರ? ನಿನ್ನೊಬ್ಬನಿಗೆ ಇದೆಲ್ಲಾ ಸರಿ ಎನಿಸಿದರೆ ಸಾಲದು…ಸಾಲದು’ ಎಂದ ಶೇಷಾದ್ರಿ ಜೋರು ದನಿಯಲ್ಲಿ. ಮತ್ತೇನು ಹೇಳುವುದಕ್ಕು ಹೊಳೆಯಲಿಲ್ಲ. ಸುಮ್ಮನೆ ಕಾಲುಗಳು ಎಳೆದ ಕಡೆ ಹೆಜ್ಜೆಯಾಕುತ್ತ ಕತ್ತಲೆಯಲ್ಲಿ ಮರೆಯಾಗಿಹೋದ.

ಗೋಪಾಲಯ್ಯ ಶೇಷಾದ್ರಿಯ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಅವನು ಮಾತನಾಡುವಾಗ ತಡೆಯಲೂ ಇಲ್ಲಾ. ಚಾರಿ ಮತ್ತು ಬಿಮ್ಮನಿಗೆ ಒಂದಿಷ್ಟು ತಿಳಿ ಹೇಳಿದರು. ಚಾರಿ ತಪ್ಪಿಯು ಪ್ರತಿಯಾಗಿ ಒಂದು ಮಾತನ್ನೂ ಆಡಲಿಲ್ಲ, ಬಿಮ್ಮ ಮಾತ್ರ ಎಲ್ಲ ತಿಳಿಯುತ್ತಿದೆ ಎನ್ನುವಂತೆ ಮಾತುಮಾತಿಗೂ ಹ್ಹೂ ಗುಟ್ಟುತ್ತಿದ್ದ. ತಿಳಿಹೇಳಿದ ಮೇಲೆ ಮತ್ತೇನೂ ಉಳಿದಿಲ್ಲ ಇಲ್ಲಿ ಎನಿಸಿತು ಗೋಪಾಲಯ್ಯನಿಗೆ. ಅವರೆದುರೆ ಒಂದಿಷ್ಟು ಹೊತ್ತು ಮೌನವಾಗಿದ್ದು ಮನೆಗೆ ಬಂದು ಬಿಟ್ಟರು. ಸರಿರಾತ್ರಿಯಲ್ಲೇ ಮೈ ನಡುಗುವಂತೆ ತಣ್ಣೀರಿನಲ್ಲಿ ಮುಳುಗಿದರು. ಕೊಟ್ಟಿಗೆಗೆ ಬಂದು ರಾಸುಗಳಿಗೆ ಮೇವುಹಾಕಿ ಪಕ್ಕದಲ್ಲೇ ಅವುಗಳ ಮೈಸವರುತ್ತ ಕೂತರು. ಹೊಟ್ಟೆ ಹಸಿವಿನಿಂದ ಕಿವುಚತೊಡಗಿತು. ಮಲಗಿದ್ದವರಿಗೆ ನಿದ್ರಾಭಂಗವಾದಿತೆಂದು ತಾವೇ ಅನ್ನ ಬೇಯಿಸಿ ಮಜ್ಜಿಗೆಯಲ್ಲಿ ತಿಂದರು.

‘ನಿನ್ನೊಬ್ಬನಿಗೆ ಸರಿಯಾಗಿ ಕಂಡರೆ ಸಾಲದು’ ಎನ್ನುವ ಶೇಷಾದ್ರಿಯ ಮಾತು ತಿಳಿಗೊಳದಂತಿದ್ದ ಮನಸಿನೊಳಗೆ ಪುಟ್ಟ ಕಲ್ಲೊಂದು ಬಿದ್ದು ಸುರುಳಿಸುಳಿಯಾಗಿ ಅಲೆಯೆಬ್ಬಿಸಿದಂತೆ ಭಾಸವಾಯಿತು. ಹೊರೆಗೆಲ್ಲ ಪ್ರಶಾಂತತೆಯಿದ್ದರು ಗೋಪಾಲಯ್ಯನೊಳಗೆ ಮಾತ್ರ ವಿಪರೀತ ಸದ್ದುಗದ್ದಲದ ಅನುಭವವಾಯಿತು. ಪುಸ್ತಕವನ್ನಿಡಿದು ಹಾಳೆಗಳನ್ನು ತಿರುವಿ ಹಾಕಿದರು. ಹಾಳೆಗಳನ್ನು ತಿರುವಿದಂತೆಲ್ಲಾ ಓದು, ಜ್ಞಾನಗಳೆಲ್ಲವೂ ಅಪಾಯಕಾರಿ ಎನಿಸತೊಡಗಿತು. ಹಠಕ್ಕೆ ಬಿದ್ದು ಓದಲು ಮನಸೊಪ್ಪಲಿಲ್ಲ. ಎಲ್ಲವನ್ನೂ ಬದಿಗೊತ್ತಿರಿಸಿ, ಕತ್ತಲ ಮನೆಯೊಳಗೆ ಕಣ್ಣು ಬಿಟ್ಟೆ ಕೂತರು.

************** ***************

ಚಾರಿ ಹೊಲೆಯರ ಪಿಚ್ಚನ ಹಿರಿಮಗ ಬಿಮ್ಮನನ್ನು ಮದುವೆಯಾದ ಮೇಲೆ ಒಳಗೊಂದು ಹೊರಗೊಂದನ್ನಿಟ್ಟುಕೊಳ್ಳದ ಪಾರ್ವತಮ್ಮ ವಾಮನಕೋಡಿಯನ್ನು ತೊರೆದು ತಿರುಗಿ ತವರೂರಿಗೆ ಹೊರಟು ಬಿಟ್ಟರೆಂದು ಬಿಮ್ಮನೆ ಯಥಾವತ್ತಾಗಿ ಚಾರಿಗೆ ವರದಿಯೊಪ್ಪಿಸಿದ. ಅಮ್ಮ ತಿರುಗಿ ಊರಿಗೆ ಹೋಗಿದ್ದು ನೆನೆದು ಚಾರಿ ಅತ್ತಳು. ಅವಳು ಅಳುವಾಗ ಪಿಚ್ಚನಾಗಲಿ, ಬಿಮ್ಮನಾಗಲಿ ಸಮಾಧಾನ ಮಾಡಲು ಮುಂದೆ ಬರಲಿಲ್ಲ.

‘ಕಾಲವಷ್ಟೇ ಎಲ್ಲದಕ್ಕೂ ಉತ್ತರಿಸಬಲ್ಲದು’ ಎನ್ನುವ ಗೋಪಾಲಯ್ಯನ ಮಾತನ್ನು ಪಿಚ್ಚನು ಹಲವಾರು ಬಾರಿ ಕೇಳಿದ್ದರಿಂದ ಎಲ್ಲವನ್ನೂ ಕಾಲದ ಜೋಳಿಗೆಯೊಳಗಿಟ್ಟು ಸುಮ್ಮನಾಗಿ ಬಿಟ್ಟ. ಅಪ್ಪನೀಗ ಮನೆಯಲ್ಲಿ ಒಂಟಿಯಾಗಿಹೋಗಿದ್ದು ಚಾರಿಗೆ ಚಿಂತೆಯಾಯಿತು. ಆದರೆ ಹೊಲೆಯನನ್ನು ಮದುವೆಯಾಗಿದ್ದು ದುಡುಕೆನಿಸಲಿಲ್ಲ.

‘ಶೇಷಾದ್ರಿ ಮದುವೆಯಾಗಬೇಕಿದ್ದ ನನ್ನಣ್ಣನ ಮಗಳು ಚಾರಿ, ಮುಂಡೆ ಮಗ ಗೋಪಾಲನ ದೆಸೆಯಿಂದಾಗಿ ಹೊಲೆಯರ ಪಾಲಾದಳು ಎಂದು ಕಸ್ತೂರಕ್ಕ ಸಿಕ್ಕಸಿಕ್ಕವರೆದುರು ಅಲವತ್ತುಕೊಳ್ಳುತ್ತಿದ್ದರೆ, ಗೋಪಾಲಯ್ಯನ ಮಗ ಪದ್ಮನಾಭ ಮಾತ್ರ ಸಂಸ್ಕøತ ಪಾಠಶಾಲೆಯ ಉಪಾಧ್ಯಾಯರೊಂದಿಗೆ ತನ್ನಪ್ಪನ ಕೆಲಸವನ್ನು ಹಿಗ್ಗಿನಿಂದ ಕೊಚ್ಚಿಕೊಳ್ಳುತ್ತಿದ್ದನು.

‘ನೀವಿಲ್ಲಿ ಕೂತು ಕೊರಗುತ್ತಿರಿ ಅಲ್ಲಿ ಅಪ್ಪ, ಮಗ ಇಬ್ಬರೂ ತಿಂದು ಕೊಬ್ಬುತ್ತಿದ್ದಾರೆ. ನಾಳೆ ಅಗ್ರಹಾರವನ್ನು ಹೊಲೆಯಗೇರಿಗೆ ಸೇರಿಸಿಬಿಡ್ತಾರೆ ನೋಡ್ತೀರಿ”. ಮದುವೆಯ ನಂತರದ ವರ್ತಮಾನ ತಂದ ಕೇಶವ. ಅತ್ತೆಯ ಅಡುಗೆ ಹಾಳು ಮಾಡಲು ಹಿಡಿ ಉಪ್ಪು ಎನ್ನುವಂತೆ ಮೊದಲೇ ಉರಿಯುತಿದ್ದ ಶೇಷಾದ್ರಿಗೆ ಮಾತಿನ ತುಪ್ಪ ಸವರಿದ. ಇಡೀ ಅಗ್ರಹಾರವೇ ಹೇಳುತ್ತೆ ನೊಣದ ಅಂಡಿನಲ್ಲಿ ಕಂಡವನ್ನುಡುಕುವ ಜಿಪುಣ ಅವನು. ಆದರೂ ಅಪ್ಪ ಮಾಡಿಟ್ಟಿದನ್ನು ಉಳಿಸಿಕೊಳ್ಳಲಿಲ್ಲ ಅಯೋಗ್ಯ.

‘ಅವರಲ್ಲ, ಇವರು….ಇವರು ನಿಜವಾದ ಹೊಲೆ ಸೂಳೆಮಕ್ಕಳು” ಶೇಷಾದ್ರಿ ಹೇಳಿದ ಸಣ್ಣಗೆ ಅತೀ ಸಣ್ಣಗೆ.

************** ******************

ಮದುವೆಯಾದ ಮೇಲೆ ಹೊಲೆಯರ ಪಿಚ್ಚನಿಗಾಗಲಿ, ಅವನ ಮನೆಯವರಿಗಾಗಲಿ ಯಾರು ಕೂಲಿಗೆ ಕರೆಯಲಿಲ್ಲ. ಅಗ್ರಹಾರದೊಳಗೆ ಗುಸುಗುಸುವೆನ್ನುವಂತೆ ಆರಂಭವಾಗಿದ್ದು ವಾಮನಕೋಡಿ ಅಗ್ರಹಾರದ ನರಸಿಂಹ ದೇವರ ಉಸ್ತುವಾರಿಯನ್ನು ಗಾವಡಗೆರೆಯ ನಂಜುಂಡ ಜೋಯಿಸರಿಗೆ ವಹಿಸುವುದರೊಂದಿಗೆ ಸದ್ದು ಮಾಡಿತು.

‘ನೋಡು…ಕಡೆಗೂ ಗೋಪಾಲಯ್ಯನಿಗೆ ಮಣ್ಣು ಮುಕ್ಕಿಸಿದೆ’ ಶೇಷಾದ್ರಿ ಕೇಶವನೆದುರು ಬೀಗಿದ. ಅನನ್ಯವಾದದ್ದನ್ನು ಸಾಧಿಸಿದ ಗರ್ವವಿತ್ತು ಅವನ ದನಿಯಲ್ಲಿ

ಅಕ್ಕಿ ಕೇರುತ್ತ ಮೊರದ ಸದ್ದು ಮಾಡುತ್ತಿದ್ದ ಕಸ್ತೂರಕ್ಕ ಹಿತ್ತಲಿನಿಂದ ಜೋರಾಗೊಮ್ಮೆ ಕೆಮ್ಮಿದಳು. ಕಸ್ತೂರಕ್ಕನಿಗೆ ಭಯ, ಎಲ್ಲಿ ಜಿಪುಣ ಕೇಶವ ಇದನ್ನೂ ಗೋಪಾಲಯ್ಯನಿಗೆ ಹೇಳಿಬಿಡುತ್ತಾನೆಂದು ಸಂದೇಹವಾಯಿತು.

‘ಕೇಶವನಿಗೆ ಹೇಳಿದರೆ ಸಾಕು, ಕುಳುವಾಡಿಗಿಂತ ಬೇಗ ಊರಿಗೆಲ್ಲಾ ತಮಟೆಯ ಸದ್ದಿಲ್ಲದೆ ಸಾರಿ ಬಿಡುತ್ತಾನೆ’ ಎಂದೊಮ್ಮೆ ಶೇಷಾದ್ರಿಯೇ ಹೇಳಿದ್ದು ನೆನೆಪಾಯಿತು ಕಸ್ತೂರಕ್ಕನಿಗೆ. ಅದಕ್ಕೆ ಕೃತಕ ಕೆಮ್ಮಿನ ಜಾಗೃತ ಗಂಟೆಯನ್ನು ಸದ್ದು ಮಾಡಿದ್ದು. ಮಾತು ನಿಲ್ಲಿಸೆನ್ನುವಂತೆ ಕಸ್ತೂರಕ್ಕ ಕೆಮ್ಮಿನ ಮೂಲಕ ಎಚ್ಚಿರಿಸಿದರಿಂದ ಎಚ್ಚೆತ್ತುಕೊಂಡ ಶೇಷಾದ್ರಿ.

‘ಸರಿ…ತೋಟಕ್ಕೆ ಹೋಗಿ ಬರುತ್ತಿನೋ ಮಾರಾಯ’ ಎಂದು ಶೇಷಾದ್ರಿ ಅಸಂಖ್ಯಾ ಬಿಳಿಯ ಬೆವರು ಕಲೆಗಳಿಂದ ತುಂಬಿಹೋಗಿದ್ದ ತನ್ನ ಕರಿ ಕೋಟನ್ನು ತೊಡುತ್ತಾ, ಮಾತನ್ನು ತುಂಡರಿಸಿದ. ನಿಮಗಿಂತ ತುರ್ತಿರುವುದು ನನಗೆ ಎನ್ನುವಂತೆ ಕೇಶವನು ವಿಚಿತ್ರವಾಗಿ ಹೆಜ್ಜೆಗಳನಿಡುತ್ತ ಅವನಿಗಿಂತ ಮೊದಲು ಹೊರಟುಹೋದ.

ಒಂದಿಬ್ಬರು ಹೊಲೆಯರನ್ನು ಜೊತೆ ಕರೆದುಕೊಂಡು ತೋಟದಲ್ಲಿ ಅಡ್ಡದಿಡ್ಡಿ ಬೆಳೆದಿದ್ದ ಮುಳ್ಳುಗಂಟಿಗಳನ್ನು ಕತ್ತರಿಸಲು ತೋಟಕ್ಕೆ ಬಂದು ತಾನೂ ಕುಡುಗೋಲೊಂದನ್ನು ಹಿಡಿದು ಕೈಲಾದಷ್ಟು ಕತ್ತರಿಸುತ್ತಿದ್ದರೂ ತಲೆಯೊಳಗೆ ಮಾತ್ರ ಗೋಪಾಲಯ್ಯನನ್ನು ಸೋಲಿಸಿಬಿಟ್ಟೆ ಎನ್ನುವ ಹಮ್ಮು ಬಿಮ್ಮಷ್ಟೇ ಹರಿದಾಡುತ್ತಿತ್ತು. ತುಟಿಯಲ್ಲಿ ಸಾಕೆನ್ನುವಷ್ಟು ನಗುವಿತ್ತು. ಹೊಲೆಯರಿಬ್ಬರು ಏನೇನೋ ಮಾತನಾಡಿಕೊಂಡು, ಮುಳ್ಳುಗಳನ್ನು ಕತ್ತರಿಸುತ್ತ ತೋಟದ ಒಂದೇ ದಿಕ್ಕಿಗೆ ಬಂದು ಬಿಟ್ಟರು. ಶೇಷಾದ್ರಿ ಮಾತ್ರ ಒಂದೇ ದಿಕ್ಕಿನಲ್ಲಿ ನಿಂತು ಮುಳ್ಳುಗಳನ್ನು ಕತ್ತರಿಸುವಾಗ ಇದ್ದಕ್ಕಿದ್ದಂತೆ ಮುಖವನ್ನು ಓರೆಯಾಗಿಸಿಕೊಂಡು ನೆಲಕ್ಕೆ ಬಿದ್ದುಬಿಟ್ಟ. ಎಡಗೈ ಒಂದೆ ಕಡೆಗೆ ಮಡಿಚಿಕೊಂಡಿದ್ದರೆ, ಬಾಯಿಂದ ಜೊಲ್ಲಿನಂತ ಬಿಳಿಯಾದ ಸ್ರಾವವೊಂದು ಚೆಲ್ಲುವುದಕ್ಕೆ ಮೊದಲಾಯಿತು.

ಹಳ ಹೊತ್ತಾದರೂ ಒಂದು ಮಾತನ್ನೂ ಆಡದ ಶೇಷಾದ್ರಿಯ ಇರುವಿಕೆಯನ್ನೂ ಪರೀಕ್ಷಿಸಲು ಅವರಲೊಬ್ಬ ಅಲ್ಲಿಂದಲೇ ‘ಶೇಷಾದ್ರಯ್ಯ’ ಎಂದು ಕೂಗಿದ. ಈ ಕಡೆಯಿಂದ ಏನೊಂದು ಸದ್ದಿಲ್ಲ
ಹೊಲೆಯನೇ ಸೊಂಟಕ್ಕೆ ಕುಡುಗೋಲು ಸಿಕ್ಕಿಸಿಕೊಂಡು, ಶೇಷಾದ್ರಿ ಮುಳ್ಳುಗಂಟಿಗಳನ್ನು ಕತ್ತರಿಸುತ್ತಿದ್ದ ಜಾಗಕ್ಕೆ ಬಂದು ನೋಡಿದಾಗ ಜೊಲ್ಲು ಸುರಿಸುತ್ತ ನೆಲಕ್ಕುರಿಳಿದ ಶೇಷಾದ್ರಿಯನ್ನು ನೋಡಿ ತತ್ತರಿಸಿಹೋದ. ಬೀಳುವಾಗ ಶೇಷಾದ್ರಿಯ ಮುಖದಲ್ಲಿ ಒಂದೆರಡು ಸಣ್ಣ ಗಾಯಗಳಾಗಿತ್ತು. ಬಾಯಲ್ಲಿ ಜೊಲ್ಲು ನಿರಂತರವಾಗಿ ಬರುತ್ತಲೇ ಇರುವುದ ನೋಡಿದ ಮೇಲಂತೂ ಹೊಲೆಯನಿಗೆ ಜಂಘಾಬಲವೇ ಹುಡುಗಿಹೋಯಿತು.

‘ಬನ್ರೋ ಇಲ್ಲಿ, ಅಯ್ಯಾರು ಬಿದ್ದು ಹೋಗಾರೆ’ ಮತ್ತೊಬನನ್ನು ಕರೆದ.

ಹಸಿ ದಿಮ್ಮಿಯಂತೆ ನೆಲಕ್ಕುರುಳಿದ ಶೇಷಾದ್ರಿಯನ್ನು ಸ್ವರ್ಶಿಸಲು ಭಯವಾಗಿ ಧಡಧಡನೆ ಪಕ್ಕದ ತೋಟದ ನಾರಯಣನಿಗೆ ವಿಷಯ ತಿಳಿಸಿ ಜತೆ ಕರೆದುಕೊಂಡು ಬಂದ. ಖುದ್ದು ನಾರಯಣನೇ ತೋಟಕ್ಕೆ ಬಂದು, ಶೇಷಾದ್ರಿಯ ಮುಖಕ್ಕಂಟಿದ ಮಣ್ಣು, ಬಾಯಿಯ ಜೊಲ್ಲನೆಲ್ಲಾ ತಾನೇ ಒರೆಸಿ ಹೆಗಲ ಮೇಲೊತ್ತಿಕೊಂಡು ಮನೆಗೆ ಬಂದ.

‘ಇವರಪ್ಪಾರೂ ಇಲ್ಲಿಯಂತೆ ಕಣ್ರೋ ಗಾಳಿ ಮೆಟ್ಟಿ ಸತ್ತಿದ್ದು. ಈಗ ಶೇಷಾದ್ರಯ್ಯ’ ಎಂದ ಭಯವಾಗಿ ಒಬ್ಬ.

‘ಏನ್ ಆಯ್ತದೋ’ ಎಂದ ಮತ್ತೊಬ್ಬ.

ಕಸ್ತೂರಕ್ಕನಿಗೆ ತ್ರಾಣವೇಯಿಲ್ಲಾ. ಇಡೀ ದಿನ ಕೇಳಿಕೊಂಡರು ಒಂದು ಮಾತನ್ನೂ ಆಡಲಿಲ್ಲ. ಶೇಷಾದ್ರಿ ಮಾತ್ರ ಮಂಚದ ಮೇಲೆ ಕಣ್ಣುಮುಚ್ಚಿ ಮಲಗಿಬಿಟ್ಟ. ಗಂಜಿ ಹೋಗಲಿ, ಹನಿ ನೀರನ್ನು ಕುಡಿಯುವ ಸ್ಥಿತಿಯಲ್ಲಿರಲಿಲ್ಲ

‘ಒಂದೆರಡೂ ದಿನ ಅಷ್ಟೇ ಕಸ್ತೂರಕ್ಕ, ಶೇಷಾದ್ರಯ್ಯ ಸರಿಯಾಗ್ತಾರೆ’ ಎಂದೇನೊ ಹೇಳಿ ಸಾಮಧಾನ ಮಾಡಲು ಪ್ರಯತ್ನಿಸಿದ ಕೇಶವ. ಬಡಿದಿರುವುದು ಪಾಶ್ರ್ವವಾಯುವೆಂದು ಕಸ್ತೂರಕ್ಕನಿಗೂ ಗೊತ್ತಿತ್ತು.

ಮಾತನ್ನೇ ಆಡದ ಕಸ್ತೂರಕ್ಕನಿಗೆ ಏನೂ ಹೇಳಲಾರದೆ ಕೇಶವ ಮನೆಗೆ ಬರುವುದನ್ನೇ ನಿಲ್ಲಿಸಿಬಿಟ್ಟ.

ಎರಡು ದಿನವಾದ ಮೇಲೆ ಶೇಷಾದ್ರಿ ಪಿಳಿಪಿಳಿಯಾಗಿ ಕಣ್ಣು ಬಿಡುವಷ್ಟು ಮಾತ್ರ ಸುಧಾರಿಸಿಕೊಂಡ. ಶೇಷಾದ್ರಿಯ ಕಣ್ಣುಗಳಲ್ಲಿ ದಿವ್ಯ ಅನುಭೂತಿಯಂತ ಖಾಲಿತನವೊಂದು ಹೆಪ್ಪುಗಟ್ಟುತ್ತಿತ್ತು. ಊಟದ ಸಮಯಕ್ಕೆ ಕಸ್ತೂರಕ್ಕನೇ ಒಂದಿಷ್ಟು ಅನ್ನವನ್ನು ಚೆನ್ನಾಗಿ ಮಸೆದು ಒಂದೇ ದಿಕ್ಕಿಗೆ ಒರೆಯಾದ ಬಾಯಿಯ ತುದಿಯೊಂದರಿಂದ ತುರುಕಿ ತಿನ್ನಿಸುತ್ತಿದ್ದಳು. ಹೇಲು, ಉಚ್ಚೆ ಮಾಡಿಕೊಂಡರೆ ಸುಕ್ಕು ಬಿದ್ದ ಮುಖವನ್ನೊಮ್ಮೆಯನ್ನು ಗಂಟುಹಾಕಿಕೊಳ್ಳದೆ ಗಲೀಜನೆಲ್ಲಾ ಬರಿಗೈನಿಂದಲೇ ಬಳಿಯುತ್ತಿದ್ದಳು. ಆಗೆಲ್ಲಾ ಶೇಷಾದ್ರಿಯ ಕಣ್ಣಲ್ಲಿ ಬೇಡವೆಂದರೂ ಉಪ್ಪುನೀರು ಹೊರಜಾರುತ್ತಿತ್ತು. ಬದುಕಿಕೊಳ್ಳುವ ಆಸೆ ಮೊಳೆತು, ಕಸ್ತೂರಕ್ಕನಿಂದ ಎನೊ ಕೇಳಬೇಕು ಎನಿಸಿತು. ಆದರೆ ಅವಳ ಬಳಿ ಮಾತಿಲ್ಲ. ಅವಳೀಗ ತೀರಾ ಮೌನಿ.

ಶೇಷಾದ್ರಿಗೆ ಪಾಶ್ರ್ವವಾಯು ತಗುಲಿ ಎರಡು ತಿಂಗಳ ನಂತರ ಒಂದಿಷ್ಟು ಚೇತರಿಸಿಕೊಂಡಂತೆ ಕಂಡರೆ ಕಸ್ತೂರಕ್ಕ ತೀರಾ ಸೊರಗಿ ಹೋಗಿದ್ದಳು. ಮಧ್ಯಾಹ್ನವೊಂದರಲ್ಲಿ ತಾನೇ ಹಿತ್ತಲಿಗೆ ಹೋಗಿ ಬಾಳೆಯನ್ನು ತಂದು ಮಾಡಿಟ್ಟ ಅಷ್ಟೂ ಅನ್ನವನ್ನು ತಿಂದುಬಿಟ್ಟಳು. ಕಸ್ತೂರಕ್ಕ ತಾನು ಅನ್ನವನ್ನು ತಿಂದ ಪರಿಗೆ ತಾನೇ ಅಚ್ಚರಿಗೊಂಡಳು. ಎಲೆಯನ್ನು ತಿಪ್ಪೆಗೆ ಹಾಕಿ ಶೇಷಾದ್ರಿತ್ತ ಬಂದಳು, ಶೇಷಾದ್ರಿ ನಿದ್ರಿಸುತ್ತಿದ್ದ. ತನಗೂ ಮಲಗಬೇಕು ಎನಿಸಿತು. ಕೋಣೆಗೆ ನುಸುಳಿ ಚಾಪೆಯೊಳಗೆದು ಮಲಗಿಬಿಟ್ಟಳು. ಮಧ್ಯಾಹ್ನದ ನಿದ್ರೆಯ ಜೊಂಪಿನಿಂದ ಬಿಡಿಸಿಕೊಂಡು ಎದ್ದು ಶೇಷಾದ್ರಿ ಕಸ್ತೂರಕ್ಕನ್ನು ನಾಲ್ಕೈದು ಬಾರಿ ಕೂಗಿದ. ಮನೆಯೊಳಗೆ ಒಂದಿಷ್ಟೂ ಸದ್ದಿಲ್ಲ. ಸಂಜೆಯ ಗಾಳಿ ಹಿತ್ತಲಿನಿಂದ ಮನೆಯೊಳಗೆಲ್ಲ ಸುಯ್ಯೆಂದು ಬೀಸುತ್ತಿತ್ತು. ಕಸ್ತೂರಕ್ಕ ಮಾತ್ರ ಮಲಗೇ ಇದ್ದಳು. ಮತ್ತೆಂದೂ ಏಳುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಶೇಷಾದ್ರಿ ಮಾತ್ರ ಅಸ್ಪಷ್ಟವಾಗಿ ಮತ್ತೇ ಮತ್ತೆ ಕೂಗತೊಡಗಿದ…

‘ಅಮ್ಮ….ಅಮ್ಮ….’ ಗಾಳಿಯಲ್ಲದು ತೇಲುತ್ತಲೆಯಿತ್ತು. ಆದರೆ ಕಸ್ತೂರಕ್ಕನಿಗದು ಕೇಳುವಂತಿರಲಿಲ್ಲ.

*************** ****************

ಮಧ್ಯಾಹ್ನದವೊಂದರ ಸಣ್ಣ ನಿದ್ರೆಯ ನಡುವಿನ ಕನಸಿನಂತೆ ನಡೆದುಹೋದ ಈ ಎಲ್ಲವೂ ಏನಿಲ್ಲವೆಂದರೂ ಇಪತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ಸಂಭವಿಸಿದ್ದು. ನೀರಿನ ಮೇಲೆ ಎಳೆದ ಗೆರೆಗಳಂತೆ ಮಾಸಿಹೋಗಿದ್ದಾವೆ ಆ ಇಪ್ಪತ್ತು ವರ್ಷಗಳು. ಕಸ್ತೂರಕ್ಕ ಸತ್ತು ಸರಿಯಾಗಿ ಒಂದು ವಾರಕ್ಕೆ ಗೋಪಾಲಯ್ಯ ಪದ್ಮನಾಭನ ಮದುವೆ ಮಾಡಿ, ಪೌರ್ಣಮಿಯ ದಿನವೇ ತಮ್ಮ ಎಪ್ಪತೈದು ವರ್ಷ ಸವೆಸಿದ ಬದುಕಿಗೆ ಪೂರ್ಣವಿರಾಮವನ್ನಿಟ್ಟು ಬಿಟ್ಟರು. ಅವರ ಹಿಂದೆಯೆ ಪಿಚ್ಚನ ಮಗ ಬಿಮ್ಮನು ಅನಿವಾರ್ಯ ಎಂಬಂತೆ ಸತ್ತುಹೋದ. ಅಗ್ರಹಾರದ ಬ್ರಾಹ್ಮಣರೆಲ್ಲರೂ ನರಸಿಂಹ ದೇವರು ಮುನಿಸಿಕೊಂಡಿದ್ದಕ್ಕೆ ಗೋಪಾಲಯ್ಯ, ಬಿಮ್ಮ ಒಬ್ಬರಿಂದೊಬ್ಬರು ಸತ್ತರು ಎಂದರೆ, ಹೊಲೆಗೇರಿಯವರೆಲ್ಲ ಥರಥರ ನಡುಗುತ್ತ ಪಂಜುರ್ಲಿಗೆ ತಪ್ಪು ಕಾಣಿಕೆ ಕಟ್ಟಿ ಬರಲು ಹೋದರು.

ಬಿಮ್ಮ ಸತ್ತುಹೋದ ಮೇಲೆ ಪಿಚ್ಚನೇ ಚಾರಿಗೆ ಮತ್ತೊಂದು ಮದುವೆಯಾಗುವಂತೆ ಹೇಳಿದರೂ ಚಾರಿ ಮಾತ್ರ ಚಕಾರವನ್ನೆತ್ತದೆ ಮಗುವನ್ನು ಮಡಿಲಿನಲ್ಲಿ ಮಲಗಿಗೆ ಹಾಕಿಕೊಂಡು ಎದೆಯಾಲುಣಿಸುತ್ತ, ಬಿದುರಿನ ಕುಕ್ಕೆ ಹೆಣೆಯಲು ಕೂತು ಬಿಟ್ಟಳು. ಮದುವೆಯ ಬಗ್ಗೆ ಅವಳ ನಿಲುವೇನು ಎನ್ನುವುದು ಅವಳು ಕ್ರಿಯೆಯಿಂದಲೆ ನಿರೂಪಿಸಿದಂತಿತ್ತು.

‘ಆ ಗೋಪಾಲಯ್ಯ ಇದ್ದಿದ್ರೆ, ವೈನಿತ್ತು. ಅವರಾದ್ರು ತಿಳಿಯೋ ಹಂಗ್ ಹೇಳಿರೋರು. ನಂಗೆ ಅದ್ ಎಲ್ಲಾದದೂ’. ಪಿಚ್ಚ ತನಗೇ ಹೇಳಿಕೊಂಡವನಂತೆ ಹೇಳಿಕೊಂಡ ಚಾರಿಯ ಹಠಕ್ಕೆ ಸೋತುಬಿದ್ದವನಂತೆ.

ಪಾಶ್ರ್ವವಾಯು ತಗುಲಿ ಸಾವಿನ ದವಡೆಗೆ ಸಿಲಿಕಿದರು ಜಗಿಸಿಕೊಳ್ಳದೆ ಹೋಯ್ದಾಡುತ್ತಿದ್ದ ಶೇಷಾದ್ರಿಗೆ ಸಂಪೂರ್ಣವಾಗಿ ಗುಣಮುಖವಾಗುವ ಲಕ್ಷಣಗಳು ಗೋಚರಿಸಿದೇ ಇದ್ದರೂ ಕಸ್ತೂರಕ್ಕ ಬಿಟ್ಟು ಹೋಗಿದ್ದ ಉದ್ದದ ಕೋಲಿನ ಸಹಾಯದಿಂದ ಹಿತ್ತಲಿಗೆ ಹೋಗಿ ಬರುವಷ್ಟು ಶಕ್ತನಾದ. ಕೋಲಿಲ್ಲದಿದ್ದರೆ ನಡೆಯುವುದಿರಲಿ, ಎದ್ದು ಕೂರಲು ಆಗುತ್ತಿರಲಿಲ್ಲ.

ತಲೆಯ ಕೂದಲೆಲ್ಲ ನೆರೆದು, ವಿಚಿತ್ರ ಕೋನಗಳಿಂದ ದಿನದ ಮುಕ್ಕಾಲಷ್ಟು ಮಲಗೇ ಇರುತ್ತಿದ್ದರಿಂದ ಬೆನ್ನು ಅದೊಂದು ಬಗೆಯಲ್ಲಿ ಆಕಾರವಿಲ್ಲದೆ ಅಂಕುಡೊಂಕಾಗಿ ವಿನ್ಯಾಸಗೊಂಡಿತ್ತು. ದಟ್ಟವಾಗಿದ್ದ ಹಿಮದ ರಾಶಿಯಂತ ಗಡ್ಡವು ಜೊತೆಯಲ್ಲೆ ಉಳಿದುಕೊಂಡು ಬಂದು ಬಿಟ್ಟಿದ್ದರಿಂದ, ಅದೂ ದೇಹದ ಒಂದು ಅಂಗವೇ ಆಗಿಹೋಗಿತ್ತು.

ನಡು ಮನೆಯ ಮಂಚದ ಮೇಲೆ ಉಸಿರಾಡುವ ಶವದಂತೆ ಮಲಗಿರುತ್ತಿದ್ದ ಶೇಷಾದ್ರಿ ಮಲ, ಮೂತ್ರವಾದ ನಂತರವೂ ಸ್ನಾನವಿಲ್ಲದೆ ವಾಸನೆಯಬ್ಬಿಸುತ್ತಿದ್ದರೆ, ತೊಡದೆ ಬಿಚ್ಚಿಟ್ಟದ್ದ ಅವನದೇ ಕರಿ ಕೋಟು ಕೋಣೆಯೊಳಗೆ ಸದ್ದಿಲ್ಲದೆ ಮತ್ತಷ್ಟೂ ಮುಗ್ಗುಲು ಹತ್ತುತ್ತಿತ್ತು. ಒಂದರ್ಥದಲ್ಲಿ ಶೇಷಾದ್ರಿ ಮತ್ತವನ ಕೋಟು ಒಂದೇ ಮನೆಯೊಳಗೆ ದುರ್ಗಂಧವನ್ನು ಹರಡಲು ಪರವಾನಾಗಿ ತೆಗೆದುಕೊಂಡಂತೆ ಕಾಣುತ್ತಿತ್ತು. ಜೋರಾಗಿ ಬೀಸಿದ ಗಾಳಿಯಿಂದ ಮನೆಯೊಳಗೆ ಮುಗ್ಗಲು ಹತ್ತಿದ ಕೋಟಿನ ವಾಸನೆ ರಪ್ಪಂತಾ ಮೂಗಿಗೆ ಬಡಿದು ಹಳೆಯದ್ದನ್ನೆಲ್ಲಾ ತಿರುಗಿ ನೆನೆಯುತ್ತಿದ್ದ ಶೇಷಾದ್ರಿಗೆ ಎಚ್ಚರವಾಗಿ ವರ್ತಮಾನಕ್ಕೆ ಬಂದ. ಗಂಟಲೆಲ್ಲಾ ಒಣಗಿ ನೀರು ಕುಡಿಯಬೇಕು ಎನಿಸಿತು. ಪಕ್ಕದಲ್ಲೆ ಚೊಂಬಿದೆ ಆದರೆ ನೀರಿಲ್ಲ. ಏನೂ ಮಾಡಲಾರದೆ ಅಸಹಾಯಕನಾಗಿ ಮರಳಿ ಮಲಗಿಬಿಡಬೇಕು ಎನ್ನುವಷ್ಟರಲ್ಲಿ ಜಿಪುಣ ಕೇಶವ ಒಳಗೆ ಬಂದ. ಈ ಮನೆಗೆ ಬಹಳ ಹಳೆಯ ಪರಿಚಯದವನೆಂದರೆ ಕೇಶವನೆ, ಒಂದು ರೀತಿಯಲ್ಲಿ ಅವನ ಮೂಗು ಶೇಷಾದ್ರಿಯಂತೆ ಕೋಟಿನ ದುರ್ನಾತಕ್ಕೆ ಒಗ್ಗಿಹೋಗಿತ್ತು.

‘ಹೊಲೆಯೆರಲ್ಲಾ ಪಂಜುರ್ಲಿಗೆ ತಪ್ಪು ಕಾಣಿಕೆ ಕಟ್ಟೋಕೆ ಹೋದ್ರಂತೆ’ ಕೇಶವ ವಿಷಯ ತಲುಪಿಸಿದ.

‘ನೀರು ಕೊಡೊ ಮಾರಾಯ ಮೊದಲು’ ಶೇಷಾದ್ರಿಗೆ ಕೇಶವನ ಮಾತು ಮುಖ್ಯವೆನಿಸಲಿಲ್ಲ. ಕೇಶವ ಅಡುಗೆ ಕೋಣೆಯಿಂದ ಚೊಂಬಿನಲ್ಲಿ ನೀರು ತಂದು ಲೋಟವೊಂದಕ್ಕೆ ಬಗ್ಗಿಸಿ ಕುಡಿಸಿದ.

‘ಅಂಬುಜ ಇನ್ನೂ ಬಂದಿಲ್ವಯ್ಯಾ?’

‘ಬರ್ತಾಳೆ ಬಿಡೋ, ಅವಳೆನೂ ನನ್ನ ಹಾಗೆ ಒಂದೆ ಕಡೆ ಇರುವುದಕ್ಕಾಗತ್ತಾ?’

‘ಬರ್ತಾಳೆ, ಕಾಯ್ತ ಇರೀ’ ಕೇಶವ ಉದಾಸೀನದಿಂದ ಹೇಳಿದ.

‘ಅದು ಬಿಡೋ, ಅಗ್ರಹಾರದ ಬಾವಿ ಮುಚ್ಚೋದು ನಿಜವಾ?’ ಶೇಷಾದ್ರಿ ಪ್ರಶ್ನಿಸಿದ.

‘ಮತ್ತೇ! ಹಾಗೇ ಬಿಡೋಕಾಗತ್ತಾ? ಹೊಲತಿ ಹಾರಿಕೊಂಡ ಬಾವಿಯದು’ ಕೇಶವ ಹೇಳಿದ.

‘ಅನ್ನವನ್ನು ಒಂದಿಷ್ಟು ಚೆನ್ನಾಗಿ ಮಸೆದು ತಿನ್ನಿಸು ಎಂದು ತಾನೇ ಕೇಳಿದರೂ ಆತುರಾತುರವಾಗಿ ತಿನ್ನಿಸಿ ಅಂಬುಜ ಹೊರಟು ಹೋಗಿದ್ದು ಎಲ್ಲಿಗೆ? ಅದು ಈ ರಾತ್ರಿಯಲ್ಲಿ! ನನ್ನ ಈ ಉರುಗಿದ ಬಾಯಲ್ಲಿ ಅವಳಿಗೆ ಕೇಳುವಂತೆ ಕಿರುಚಿ ಹೇಳುವ ಶಕ್ತಿಯಿಲ್ಲಾ. ಆಗೊಮ್ಮೆ ಹೇಳಿದರೂ ಈ ಹುಡುಗಿ ನಿಂತಾಳಯೇ?’ ನೆನೆದು ನಗುತ್ತಾನೆ. ಚಿರ್ ಚಿರ್ ಚಿರ್ ಚಿರ್ ಎಂದು ಚಿಟ್ಟೆಗಳು ಸದ್ದು ಮಾಡುತ್ತಲೆ ಇವೆ.

‘ಈ ಹುಡುಗಿ ಹಿತ್ತಲಿನ ಬಾಗಿಲನ್ನೂ ಮುಚ್ಚದೆ ಹೋಗಿದೆಯಲ್ಲಾ!’ ಮತ್ತೆ ಚಿಟ್ಟೆಗಳು ಚಿರ್ ಚಿರ್ ಚಿರ್ ಸದ್ದನ್ನು ನಿರಾತಂಕವಾಗಿ ಮುಂದುವರೆಸುತ್ತಿವೆ.

‘ಇರಲಿ ಬಿಡು. ಏನಿದೆ ಈ ಮನೆಯಲ್ಲಿ ಹೊತ್ತು ಹೋಗುವುದಕ್ಕೆ! ನನ್ನ ಕಾಯಿಲೆಯೊಂದನ್ನು ಬಿಟ್ಟು’ ನಕ್ಕ ಒರೆಯಾದ ಬಾಯನ್ನರಳಿಸಿ.

ಸಣ್ಣಗಿನ ನಿದ್ರೆ ಅಪ್ಪಿಕೊಳ್ಳಲು ಅಣಿಯಾಯಿತು. ಶೇಷಾದ್ರಿಯು ಹಠಹಿಡಿಯದೆ, ಅದರ ತೋಳ ತೆಕ್ಕೆಯಲ್ಲಿ ಮಗುವಿನಂತೆ ಮಲಗಿ ಬಿಟ್ಟ.

ಬೆಳಗೆದ್ದು ಕಣ್ಣು ಬಿಟ್ಟರೆ ಅದಾಗಲೇ ಸೂರ್ಯನ ಕಿರಣಗಳು ಪ್ರಕರವಾಗಿದ್ದವು. ಸಮಯ ಏನಿಲ್ಲವೆಂದರೂ ಹತ್ತಾಗಿರಬೇಕು. ಇಲ್ಲಾ ಅದಕ್ಕೂ ಅಧಿಕ.

ಮೈ ಮೇಲಿದ್ದ ಕಂಬಳಿಯನ್ನು ಕೆಳಗೆ ಸರಿಸಿದ. ಏನೋ ವಾಸನೆ? ಕೋಟಿನದಲ್ಲ! ಬಲಗೈಯಿಂದ ಮುಟ್ಟಿ ಪರೀಕ್ಷಿಸಿಕೊಂಡ. ಕೆಳಗಿನ ಭಾಗವೆಲ್ಲಾ ಒದ್ದೆ ಒದ್ದೆ! ಏನಿರಬಹುದು? ಚುಂಗು ವಾಸನೆ ಮುಖಕ್ಕೆ ರಾಚುತ್ತಿತ್ತು. ಮತ್ತೊಮ್ಮೆ ಪರೀಕ್ಷಿಸಿದ, ಅರೇ! ಕೌಪೀನವು ಒದ್ದೆಯಾಗಿದೆ.

‘ಓ ರಾತ್ರಿ ನಿದ್ದೆಗಣ್ಣಿನಲ್ಲಿ ಉಚ್ಚೆ ಹುಯ್ದಕೊಂಡಿದ್ದು ಅಸ್ಪಪ್ಟವಾಗಿ ಮರುಕಳಿಸಿತು. ಅಸಹ್ಯ ಭಾವನೆಯಿಂದ ಮುಖ ಕಿವುಚಿ ಹಿಸ್ಸಿ ಎಂದುಕೊಂಡ. ನಾಚಿಕೆ ಎನಿಸಿತು. ಮರು ಕ್ಷಣವೇ ‘ಎದ್ದು ಹಿತ್ತಲಿಗೆ ಹೋಗುವಷ್ಟು ತ್ರಾಣವಿದ್ದಿದ್ದರೆ, ಹೀಗೆ ಮಲಗಿದ್ದಲ್ಲೇ ಉಚ್ಚೆ ಹುಯ್ದುಕೊಳ್ಳುತ್ತಿದ್ದೆನಾ’ ಇಲ್ಲಾ ಎಂದು ಸಮರ್ಥಿಸಿಕೊಳ್ಳವವನಂತೆ ಹೇಳಿಕೊಂಡ. ಅದೂ ಒಪ್ಪಿಗೆಯಾಗಲಿಲ್ಲ.

ಉಚ್ಚೆ ಹುಯ್ದುಕೊಂಡು ಅದಾಗಲೆ ಗಂಟೆಗಳೇ ಕಳೆದುಹೋಗಿದ್ದರಿಂದ ಉಚ್ಚೆಯ ಚುಂಗುವಾಸನೆಯು ಉಲ್ಬಣಿಸಿ ದುಪ್ಪಟ್ಟಾಗಿ, ಅದರೊಳಗೆ ಮಲಗಿದ್ದ ಶೇಷಾದ್ರಿಗೇ ರೇಜಿಗೆ ಎನಿಸಿತು. ಯಾರಾದರೂ ಕಂಡಾರೆಂದು ಬೀದಿಯ ಕಡೆ ಕಣ್ಣಾಯಿಸಿದ. ಯಾರೆಂದರೆ ಯಾರೊಬ್ಬರ ಸುಳಿವೂ ಇಲ್ಲಾ. ಸದಾ ಜತೆಯಲ್ಲೇ ಇರುತ್ತಿದ್ದ ಕೋಲು ಎಲ್ಲಿ?

‘ಈ ಅಂಬುಜ ಇನ್ನೂ ಬರಲಿಲ್ಲ, ಬಂದಿದ್ದರೇ?’ ಪ್ರಶ್ನಿಸಿಕೊಂಡ.

‘ಖಂಡಿತಾ ಮುಟ್ಟುತ್ತಿರಲಿಲ್ಲ ನನ್ನ. ಬಹಳ ನಾಜೂಕಿನ ಹುಡುಗಿ’ ಉಚ್ಚೆಯಿಂದ ತೋಯ್ದು ರಾಡಿಯಾಗಿದ್ದ ಹಾಸಿಗೆ, ಕಂಬಳಿಯ ನಡುವೆ ಮತ್ತೆ ಹೊರಳಿದ. ಮನಸು ಖಾಲಿ ಬಯಲಿನಂತೆ ಗೋಚರವಾಯಿತು. ಮಧ್ಯಾಹ್ನದ ಹೊತ್ತಿಗೆ ದೇವಾಸ್ಥಾನಗಳಲ್ಲಿ ಪ್ರಸಾದ ಹಂಚಲು ದೊನ್ನೆಗಳನ್ನು ತಯಾರಿಸಿ ಮಾರುವ ತೊಂಡಾಳಿನ ಸಂಪತ್ತಚಾರಿಯ ಮಗ ಗುರುಮೂರ್ತಿ ಶೇಷಾದ್ರಿಯ ತೋಟದ ಅಡಿಕೆ ಪಟ್ಟೆಯನ್ನು ಕೇಳಲು ಬಂದ. ಬಂದವನಿಗೆ ಕುತ್ತಿಗೆ ಹಿಡಿದು ಹೊರಗೆ ನೂಕಿದಂತೆ ಅನುಭವವಾಯಿತು ಉಚ್ಚೆಯ ಚುಂಗು ವಾಸನೆಯಿಂದ. ಮೂಗು ಹಿಡಿದುಕೊಂಡೆ ಮಾತು ಆರಂಭಿಸಿದ.

‘ಶೇಷಾದ್ರಯ್ಯ…..ಶೇಷಾದ್ರಯ್ಯ…ನಿಮ್ಮ ತೋಟದ ಅಡಿಕೆ ಪಟ್ಟೆ ಕೋಡ್ತೀರಾ?’.

ಯಾರಾದರೂ ಬಂದರೆ ಸಾಕು ಎನ್ನುವಂತೆ ಕಾಯುತ್ತಿದ್ದ ಶೇಷಾದ್ರಿಗೆ ಹುಡುಗನ ಧ್ವನಿ ಅನಿವಾರ್ಯ ಅಶರೀರವಾಣಿಯೆಂಬಂತೆ ಕೇಳಿಸಿತು.

‘ಯಾರು, ಯಾರದು?’.

‘ಸಂಪತ್ತಚಾರಿ ಮಗ ಗುರುಮೂರ್ತಿ ಅಯ್ಯ. ನಿಮ್ಮ ತೋಟದ ಅಡಿಕೆ ಪಟ್ಟೆ ಕೋಡ್ತೀರಾ?, ದುಡ್ಡಿಗೆ’ ಕೇಳಿದ ಹುಡುಗ

‘ಕೋಡ್ತೀನೊ ಮಾರಾಯ. ನನಗಾದ್ರು ಯಾಕದು?’ ಎಂದ ಶೇಷಾದ್ರಿ ಅನ್ಯಮನಸ್ಕನಾಗಿ.

ಎಷ್ಟೆ ಆದರೂ ಸಂಪತ್ತಚಾರಿ ಹೇಳಿಕೇಳಿ ವ್ಯವಹಾರಸ್ಥ. ಇನ್ನೂ ಗುರುಮೂರ್ತಿ ಅವನ ಮಗ. ಇವನೂ ಅಷ್ಟೇ ಚಾಣಾಕ್ಷ ವ್ಯವಹಾರದಲ್ಲಿ. ಹುಡುಗ ಅಡಿಕೆ ಪಟ್ಟೆಯ ಬೆಲೆ ಎಷ್ಟು, ಏನೆಂದೂ ಕೇಳಲು ತಯಾರಾಗುತ್ತಿದ್ದರೆ, ಶೇಷಾದ್ರಿ ಮಾತ್ರ ಬೇಡಿಕೊಂದನ್ನು ಮುಂದಿಡುವವನಂತೆ ಕ್ಷೀಣ ಸ್ವರದಲ್ಲಿ ಕೇಳಿದ.

‘ರಾತ್ರಿಯಿಂದ ಇಲ್ಲೇ ಉಚ್ಚೆ ಹುಯ್ದುಕೊಂಡು ಬಿದ್ದಿದ್ದೀನೋ, ನನ್ನ ಒಂಚೂರು ಎತ್ತಿ ಹಿತ್ತಲಿಗೆ ಬಿಡೋ’

ಬೊಗಳೆ ಸ್ವಭಾವದ ಸಂಪತ್ತಚಾರಿ ಒಂದು ತೆರನಾದವನಾದರೆ ಅವನ ಮಗ ಗುರುಮೂರ್ತಿ ಮತ್ತೊಂದು ಬಗೆಯವನು. ಹೊರಗೆ ಮಹಾಶಿಸ್ತಿನಂತೆ ಕಂಡರೂ ಮೂಲದಲ್ಲಿ ಮಹಾಶೋಕಿಲಾಲರು. ಇವರಿಬ್ಬರ ಹುಂಬತನಗಳು ಒಂದೇ ಬಗೆಯವು.

‘ವಸೂಲಿಗೆಂದು ಸಂತೆ ಕಡೆ ಹೊರಟಿದ್ದು. ಹಾಗೆ ಹಾದಿಯಲ್ಲೇ ನಿಮ್ಮ ಮನೆಯಲ್ವಾ ಅದಕ್ಕೆ ಒಳಗೆ ಬಂದೆ’ ಎಂದು ಒಂದೊಂದು ಮಾತನ್ನು ಹಿಂದೆ ಮುಂದೆ ಅದಲು ಬದಲು ಮಾಡುತ್ತಾ, ಈ ಸ್ಥಿತಿಯ ನಿಮ್ಮನ್ನು ಮುಟ್ಟಿ ಹಿತ್ತಲಿಗೆ ಬಿಡಲು ಆಗುವುದಿಲ್ಲ ಎನ್ನುವುದನ್ನು ಅವನದೇ ದಾಟಿಯಲ್ಲಿ ಘೋಷಿಸಿದ. ಹುಡುಗನ ಮಾತಿನ ಮರ್ಮ ತಿಳಿಯಲು ಶೇಷಾದ್ರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

‘ಸರಿ, ನರಸಿಂಹ ದೇವರ ಗುಡಿಯತ್ತಿರ ಯಾರಾದ್ರು ಇದ್ರೆ ಕಳಿಸು. ಅವರಿಗೂ ನಿನ್ನಾಗೆ ತುರ್ತಿದ್ದರೆ ಹೊಲಗೇರಿಯಲ್ಲಿ ಯಾರಾದರೂ ಸಿಕ್ಕೆ ಸಿಗುತ್ತಾರೆ. ಅವರನ್ನೇ ಕಳಿಸು ಮಾರಾಯ ತೊಂದರೆ ಇಲ್ಲಾ’ ಎಂದೇಳಿ ಗೊಡೆಯ ಕಡೆಗೆ ತಿರುಗು ಮಲಗಿಬಿಟ್ಟ.

‘ಹೊಲೆಯರ? ಅಗ್ರಹಾರದೊಳಕ್ಕೆ!” ಶೇಷಾದ್ರಿಯ ಮಾತಿಗೆ ಹೌಹಾರಿಬಿಟ್ಟ ಹುಡುಗ.

‘ಕಳಿಸು ಮಾರಾಯ’ ಶೇಷಾದ್ರಿಯ ಮಾತಿನಲ್ಲಿ ಸ್ಪಷ್ಟತೆಯಿತ್ತು. ಗೂಡಾರ್ಥಗಳಿರಲಿಲ್ಲ. ನಿಮ್ಮ ಹಣೆ ಬರಹ ಎನ್ನುವಂತೆ ಸಂಪತ್ತಚಾರಿಯ ಮಗ ಗುರುಮೂರ್ತಿ ನಿರ್ಗಮಿಸಿದ.

ಪಾಶ್ರ್ವವಾಯು ಬಡಿದು ಒಂದೇ ಮಂಚದ ಮೇಲೆ ಮಲಗಿರುವ ಮೊದಲ ದಿನದಿಂದ ಬದುಕು, ಆಸೆ, ಸಿಟ್ಟು, ಆತ್ಮ, ಕರ್ಮ, ಮೋಕ್ಷ ಸೇರಿದಂತೆ ಏನೆಲ್ಲವನ್ನು ತನ್ನೊಳಗಿನ ತಕ್ಕಡಿಯಲ್ಲಿ ತೂಗುತ್ತಾ ಬಂದಿದ್ದಾನೆ. ಹಾಗೆ ತೂಗಿದಷ್ಟು ಬಾರಿಯೂ ಅಗತ್ಯವಿಲ್ಲದನ್ನು ಕಳಚಿಕೊಂಡವನಂತೆ ಹಗುರಾಗುತ್ತ ಬಂದಿದ್ದಾನೆ. ಬೊರ್ಗರೆದು ಧುಮ್ಮಿಕ್ಕುವ ಯೌವನದ ದಿನಗಳಲ್ಲಿ ತನ್ನ ಎಳೆಯ ಕಣ್ಣುಗಳಿಗೆ ತೀರಾ ಸಣ್ಣವರಾಗಿ ಕಾಣುತ್ತಿದ್ದ ಹೊಲೆಯರ ಪಿಚ್ಚ, ಶೇಷಾಚಾರ್ಯರು ಹಾಗೂ ಗೋಪಾಲಯ್ಯನೇ ತನಗಿಂತ ಶ್ರೇಷ್ಠರೆನಿಸಿಬಿಡುತ್ತಾರೆ.

‘ಯಾಕೆ?’ ಉತ್ತರವಿಲ್ಲದ ಅದೇಷ್ಟೋ ಪ್ರಶ್ನೆಗಳಂತೆ ಇದೂ ಒಂದು. ಮತ್ತೆ ನಗುತ್ತಾನೆ ಉಚ್ಚೆಯ ಸಹಿಲಸಾಧ್ಯವಾದ ವಾಸನೆಯ ನಡುವೆಯೂ.

ಯಾರನ್ನಾದರೂ ಕಳುಹಿಸುತ್ತೇನೆ ಎಂದು ಹೇಳಿ ಹೋದ ಸಂಪತ್ತಚಾರಿಯ ಮಗ ಗುರುಮೂರ್ತಿ ಸಂಜೆಯಾಗುತ್ತಿದ್ದರು ಯಾರನ್ನೂ ಕಳುಹಿಸಿರಲಿಲ್ಲ.

‘ಇವನು ಅವನಪ್ಪನಂತೆಯೇ ಬೊಗಳೆ’ ಎಂದೆನಿಸಿತು. ಮಧ್ಯಾಹ್ನದ ಬಿಸಿಲಿಗೆ ಬಳಲಿದ್ದ ಅಗ್ರಹಾರವೀಗ ಸಂಜೆಯ ತಂಪುಗಾಳಿಗೆ ಮೈಯೊಡ್ಡಿಕೊಂಡಿತ್ತು. ಮನೆಯೊಳಗೂ ಒಂದಿಷ್ಟು ಗಾಳಿ ತಂಪಿನಿಂದ ಸುಳಿಯುತ್ತಿದ್ದರು, ಮುಖಕ್ಕೆ ರಾಚುವಂತ ಉಚ್ಚೆಯ ವಾಸನೆಯ ನಡುವೆ ಶೇಷಾದ್ರಿಗೆ ಅದರ ಅನುಭವವಾಗುತ್ತಿರಲಿಲ್ಲ.

‘ಶೇಷಾದ್ರಯ್ಯ’ ಮತ್ತೊಂದು ದನಿ ಹಿತ್ತಲಿನಿಂದ.

‘ಯಾರು?’

‘ನಾನಯ್ಯ…ಬಿಸಾಡಿ, ಹೊಲಗೇರಿಯವನು’

ಬಿಸಾಡಿ, ಶೇಷಾದ್ರಿಯ ತೋಟದಲ್ಲೇ ಕೆಲಸಕ್ಕಿದ್ದವನು. ಮೊದಲಿನಿಂದಲೂ ಪರಿಚಯದವನೇ, ಆತ್ಮೀಯನಲ್ಲ.

‘ಹಿಂದೆಯಿಂದ ಯಾಕ್ ಬಂದ್ಯೋ? ಈ ಮನೆಗೆ ಮುಂದೆಯೂ ಬಾಗಿಲಿದ’ ಶೇಷಾದ್ರಿ ಹೇಳಿದ

‘ಅಲ್ಲಿಂದ ಬರಾದ್ ಹೆಂಗಯ್ಯಾ? ನಾವು ಇಲ್ಲಿವರ್ಗೂ ಬರಾಂಗಿಲ್ಲ. ಅಯ್ಯೊರ್ ಕರಿತಾವ್ರೇ ಹೋಗಂತಾ ಸಂಪ್ಪತ್ತಯ್ಯನ ಮಗೋರು ಹೇಳುದ್ರು ಅದುಕ್ಕೆ ಬಂದೆ’ ಬಂದ ಕಾರಣ ತಿಳಿಸಿದ ಬಿಸಾಡಿ. ಶೇಷಾದ್ರಿಗದು ಮುಖ್ಯ ಎನಿಸಲಿಲ್ಲ.

‘ಬಾರೋ ಒಳಗೆ’ ಕರೆದ

ಶೇಷಾದ್ರಿಯ ಮಾತಿನಿಂದ ಧೈರ್ಯ ತಂದುಕೊಂಡವನಂತೆ ಬಿಸಾಡಿ, ಒಂದೊಂದೆ ಹೆಜ್ಜೆಗಳನ್ನಿಡುತ್ತ ಮನೆಯೊಳಗೆ ಬಂದ ಮೈ ಬೆಚ್ಚಾಗಾಯಿತು. ಅಡಗಿಸಿಕೊಂಡಿದ್ದ ಮಹತ್ತರವಾದುದೇನೊ ತಕ್ಷಣಕ್ಕೆ ಸಿಕ್ಕಂತೆ ಭಾಸವಾಯಿತು. ಸುತ್ತಲು ಕಣ್ಣಾಡಿಸಿದ. ನಾಲ್ಕಾರು ಕಂಬಗಳು, ರಾಶಿಬಿದ್ದಿದ್ದ ಪುಸ್ತಕ, ಚಿಲಕ ಜಡಿಸಿಕೊಂಡಿದ್ದ ಉಗ್ರಾಣದ ಕೋಣೆಯ ಬಾಗಿಲು, ಚೊಕ್ಕವಾಗಿದ್ದ ದೇವರ ಗೂಡು, ಎದುರಿಗಿದ್ದ ವ್ಯಾಸಪೀಠಗಳೆಲ್ಲವೂ ಇಷ್ಟು ದಿವಸ ಅದೆಲ್ಲೊ ಬಚ್ಚಿಟ್ಟುಕೊಂಡು ತನ್ನಂಥವರಿಗೆ ಹಿಯಾಳಿಸುತ್ತಿದ್ದವೇನೊ ಎನಿಸಲು ಶುರುವಾಯಿತು. ಇದೆಲ್ಲದರ ನಡುವೆಯೆ ಬಿಸಾಡಿಯಂಥ ಹೊಲೆಯನ ಮೂಗಿಗೂ ಮನೆಯಲ್ಲಿ ಸುಳಿದಾಡುತ್ತಿದ್ದ ಉಚ್ಚೆಯ ಚುಂಗು ವಾಸನೆ ವಾಕರಿಕೆ ತರಿಸಿತು.

‘ನನಗೆರಡು ಚೊಂಬು ನೀರು ಬಗ್ಗಿಸಿ ಈ ವಾಸನೆಯಿಂದ ಪಾರು ಮಾಡು ಮಾರಾಯ’ ಬಿಸಾಡಿಗೆ ಕೇಳಿದ. ಕೇಳುವಾಗ ಇದೇ ಮೊದಲು ತಾನೇನೊ ಬೇಡುತ್ತಿರುವುದು ಎನಿಸಿತು ಶೇಷಾದ್ರಿಗೆ.

ಬಿಸಾಡಿ ಶೇಷಾದ್ರಿಯ ಪಾಶ್ರ್ವವಾಯು ಬಡಿದ ಎಡಗೈಯನ್ನು ಮುತುವರ್ಜಿಯಿಂದ ಪಕ್ಕಕ್ಕೆ ಸರಿಸಿ, ತನ್ನದೇ ಮಗುವನ್ನೆತ್ತಿಕೊಳ್ಳುವಂತೆ ಬಾಚಿಕೊಂಡು ಹಿತ್ತಲಿನಲ್ಲಿದ್ದ ಕಲ್ಲು ಚಪ್ಪಡಿಯ ಮೇಲೆ ತಂದು ಕೂರಿಸಿದ. ಪಕ್ಕದಲ್ಲಿದ್ದ ಹಂಡೆಯೊಂದಕ್ಕೆ ನೀರು ತುಂಬಿ ಹದಗೊಳಿಸಿಕೊಂಡ. ನೀರು ಸುರಿಯುವ ಮೊದಲು, ಉಚ್ಚೆಯಿಂದ ನೆನೆದು ಒಣಗಿ ರಟ್ಟಾಗಿದ್ದ ಶೇಷಾದ್ರಿಯ ದೊಗಳೆಯಂಗಿ, ಚಡ್ಡಿ, ಕೌಪೀನ ಸಮೇತ ಒಂದರ ಹಿಂದೆ ಮತ್ತೊಂದನ್ನು ಕಳಚಿಸಿಕೊಳ್ಳುತ್ತ ಹೊಲೆಯನ ಮುಂದೆ ಬೆತ್ತಲಾಗುತ್ತಿದಂತೆ ಶೇಷಾದ್ರಿಗೆ ಇಷ್ಟು ದಿವಸ ತನ್ನೊಳಗೆ ಇದ್ದು ಕೊರೆಯುತ್ತಿದ್ದ ಸಿಟ್ಟು, ಅಹಂಕಾರ, ಶ್ರೇಷ್ಠತೆಯ ಸಿಕ್ಕು ಎಲ್ಲವೂ ಕಳಚಿಬಿದ್ದಂತೆ ಭಾಸವಾಯಿತು. ಮೈ ಪೂರ ಹಗುರಾಗಿ ನಿರಾಳವೆನಿಸಿತು.

ಹಂಡೆಯಿಂದ ಒಂದೊಂದೆ ತಂಬಿಗೆ ನೀರನ್ನು ಮೊಗೆದು ಶೇಷಾದ್ರಿಯ ಮೈ ಮೇಲೆಲೆಲ್ಲಾ ಬಗ್ಗಿಸುತ್ತ ಮೀಯಿಸಿದ. ಒಣಗಿ ಹಾಕಿದ್ದ ಪಂಚೆಯೊಂದರಿಂದ ಶೇಷಾದ್ರಿಯ ಒದ್ದೆಯಾದ ಮೈಯನ್ನು ಹಸು ತನ್ನ ಕರುವಿನ ಮೈನೆಕ್ಕುವಂತೆ ನಿಧಾನವಾಗಿ ಒರೆಸಿ, ಕೌಪೀನ ಸಮೇತ ಬದಲಿಸಿದ.

ಕಳೆದೊಮದು ರಾತ್ರಿ ಹಗಲಿನಿಂದ ಉಚ್ಚೆಯ ದುರ್ನಾತವನ್ನೇ ಒದ್ದು ಮಲಗಿದ್ದ ನಡುಮನೆಯ ಹಾಸಿಗೆ, ಕಂಬಳಿಯನ್ನು ತೆರವುಗೊಳಿಸಲು ಯಾರನ್ನೂ ಕೇಳದೆ ಒಳಗೆ ಬಂದ. ರಾತ್ರಿಯಿಂದ ನರಕದಲ್ಲಿದ್ದೆ ಎಂದುಕೊಳ್ಳುತ್ತಿದ್ದ ಶೇಷಾದ್ರಿಗೆ ಹಠಾತ್ ಶಾಪ ವಿಮೋಚನೆಯಾದಂತೆ ಎನಿಸಿತು.

‘ಈ ಅಗ್ರಹಾರಕ್ಕೆ ಅದೇನಾಗಿದೆಯೋ ಮಾರಾಯ? ಬೆಳಗಿನಿಂದ ಯಾರೊಬ್ರು ಕಂಡಿಲ್ಲ’ ಎಂದ ಶೇಷಾದ್ರಿ. ಅಗ್ರಹಾರದ ವಿಷಯ ತನ್ನಂತವರಿಗೇನು ಗೊತ್ತು ಎನ್ನುವಂತೆ ಬಿಸಾಡಿ ಹಲ್ಲುಕಿರಿದು ನಗೆಯಾಡಿದ.

‘ನೀನು ಕೇರಿಯಿಂದ ಬರೋವಾಗ ಯಾರು ಕಂಡಿಲ್ವಾ?’.

ಬಿಸಾಡಿಗೆ ಭಯವಾಯಿತು. ಕಿರಿಯುತ್ತಿದ್ದ ಹಲ್ಲಗಳನ್ನು ಮುಚ್ಚಿಬಿಟ್ಟ. ಗಂಭೀರನಾದ

‘ಗರಾ ಏನಾರು ಬಡೀತಾ? ಬಾಯಿ ಬಿಟ್ಟು ಮಾತಾಡೋ’ ಶೇಷಾದ್ರಿ ಕಿಚಾಯಿಸಿದ. ಇದೇ ಮೊದಲು ಕೆಂಡದಂತ ಶೇಷಾದ್ರಿ ಹೊಲೆಯನೊಬ್ಬನಿಗೆ ಗೇಲಿಮಾಡಿದ್ದು.

‘ಬಿಳ್ಗೆರೆ ಹೊಳೆತಾವ್ ಪದ್ಮ್‍ನಾಭಯ್ಯ ಕಂಡ್ರು ಅಷ್ಟೇ’ ಎಂದ ಬಿಸಾಡಿ.

ಹೊಲೆಯರು ಎದುರಾದರೇ ಮೈ ಮುಟ್ಟಿ ಮಾತನಾಡಿಸುತ್ತಾನೆ ಎನ್ನುವ ಕಾರಣಕ್ಕೆ ಸಾಕಷ್ಟು ಬ್ರಾಹ್ಮಣರ ಕೋಪಕ್ಕೆ ತುತ್ತಾಗಿದ್ದ ಗೋಪಾಲಯ್ಯನ ಮಗ ಪದ್ಮನಾಭನು ಗುಣದಲ್ಲಿ ಅಪ್ಪನಂತಯೇ ಎನಿಸಿಕೊಂಡಿದ ಅಗ್ರಹಾರದೊಳಗೆ. ಅದು ಬೇಕಾದಷ್ಟು ಸಾರಿ ಸಾಬೀತೂ ಆಗಿತ್ತು. ತೀರಾ ಇತ್ತಿಚೀನದೆಂದರೆ ಹೊಲೆಯರ ಮಾಯಿ ಅಗ್ರಹಾರದ ಬಾವಿಗೆ ಹಾರಿಕೊಂಡು ಸತ್ತ ಮೇಲೆ, ಪದ್ಮನಾಭನೇ ಮುಂದೆ ನಿಂತು ಹೆಣ ತೆಗೆಸಿದ್ದು. ಕೇಶವ ತಲುಪಿಸಿದ್ದ ವರದಿಯ ನೆನೆಪಾಯಿತು ಶೇóಷಾದ್ರಿಗೆ.

‘ನಾನೇ ನಾಲ್ಗೆ ಮುಂದ್ ಮಾಡಿ ಅಂದು ಬಿಟೆ’ ಎಂದ ತಡವರಿಸುತ್ತ ಬಿಸಾಡಿ. ಹೊಲೆಯನೊಬ್ಬನಿಂದ ಹೇಳಿಸಿಕೊಳ್ಳುವಂತಾದು ಪದ್ಮನಾಭ ಮಾಡಿದ್ದೇನೆಂದು ಆಶ್ಚರ್ಯವಾಯಿತು ಶೇಷಾದ್ರಿಗೆ.

‘ಅವನೇನು ಮಾಡಿದ್ನೋ? ನೀನೆನು ಅಂದ್ಯೋ?’

‘ಅವರ್ ಮಗ್ಳು ಕುಮುದಾಮ್ಮಾರ್ ವಿಸ್ಯಕ್ಕೆ’.

ಯಾವಾಗಲೂ ಮನೆಯಲ್ಲಿ ಹೂ ಕಟ್ಟುತ್ತಲೊ, ಮತ್ತೊಂದನ್ನು ಮಾಡುತ್ತಲೋ ಮನೆಯಲ್ಲೇ ಇರುತ್ತಿದ್ದ ಪದ್ಮನಾಭನ ಮಗಳು ಕುಮುದಾಳ ಹೆಸರನ್ನು, ಅಗ್ರಹಾರವನ್ನೇ ಕಾಣದ ಹೊಲೆಯನೊಬ್ಬನ ಬಾಯಿಂದ ಕೇಳಿದ್ದು ಸೋಜಿಗವೆನಿಸಿತು.

‘ಪದ್ಮನಾಭ್‍ಯ್ಯೊರ್ ಮಗಳು ನಮ್ ಕೇರಿ ಭರ್ಮನ್ನ ಮದುವೆಯಾಗ್‍ಬುಟ್ರು ಅಯ್ಯ’ ಮೈ ನಡುಗುತ್ತಿತ್ತು ಬಿಸಾಡಿಗೆ ಹೇಳುವಾಗ.

ಪಾಶ್ರ್ವವಾಯು ತಗುಲಿ ನಡುಮನೆಯ ಕೋಣೆಯ ಮಂಚಕ್ಕೆ ಸ್ಥಳಾಂತರವಾದ ಮೇಲೆ ಶೇಷಾದ್ರಿ ಅಗ್ರಹಾರದ ಸಮಾಚಾರಗಳೆಲ್ಲವನ್ನು ಕೇಶವನ ಬಾಯಿಂದ ಕೇಳಿದ್ದಷ್ಟೇ. ಕಣ್ಣಾರೆ ಕಂಡಿದ್ದು ಏನೇನೂ ಇಲ್ಲಾ ಅವನಮ್ಮ ಕಸ್ತೂರಕ್ಕನ ಸಾವನ್ನು ಹೊರತು ಪಡಿಸಿ.

ಮದುವೆಯ ಬಗ್ಗೆ ತನಗೇನು ತಿಳಿದಿಲ್ಲ ಎನ್ನುವಂತೆ ಶೇಷಾದ್ರಿ ತಲೆಯಲ್ಲಾಡಿಸಿದ.

‘ಪದ್ಮ್‍ನಾಭಯ್ಯೊರ್ ಮಗಳೇ ಕರ್ಕಂಡ್ ಹೋಗಿ ಭರ್ಮನ್ನ ಮದ್ವೆಯಾಗಿದ್ದು. ಆದ್ರ್ ಇವಾಗ ಪದ್ಮನಾಭಯ್ಯ ಹಿಂಗ್ ಮಾಡಿದ್ದು ನಂಗ್ ವಸಿ ಸರಿ ಕಾಣ್ಲಿಲ್ಲ’ ಎಂದು ಮಾತು ನಿಲ್ಲಿಸಿದ ಬಿಸಾಡಿ.

‘ಅದೇನು ಸರಿಯಾಗಿ ಹೇಳೊ?’

‘ಬೆಳ್ಗೆ ಮನೆಯಿಂದ್ ಬಂದ  ಪದ್ಮನಾಭ್‍ಯೊರ್ ಮಗ್ಳು ನಮ್ ಕೇರಿ ಭರ್ನನ್ ಕರ್ಕಂಡೋಗಿ, ಆ ಬಿದುರ್ ಜಾಡ್ತಾವಿರೋ ಗುಡಿ ಮುಂದ್ಲೆ ತಾಳಿ ಕಟ್ಟಿಸ್ಕಂಡ್ ಬುಟ್ಟಾವ್ರೆ” ಬಿಸಾಡಿ ವಿವರಿಸಿದ

“ಅದ್ಕೆ ಇವ್ರು ಹಿಂಗ್ ಮಾಡ್‍ಬೋದ?”

“ಯಾರು ಪದ್ಮನಾಭನ? ಅವನೇನು ಮಾಡಿದನೋ?” ಈ ಬಾರಿ ತುಸು ದನಿ ಎತ್ತರಿಸಿ ಕೇಳಿದ ಶೇಷಾದ್ರಿ ವಿವರವಾಗಿ ಹೇಳು ಎನ್ನುವಂತೆ. ಭಯದಿಂದಲೆ ಬಿಸಾಡಿ ಕೇರಿಯಿಂದ ಬರುವಾಗ ಕಣ್ಣಿಂದ ಕಂಡಿದ್ದನೆಲ್ಲಾ ಮಾತಿಗೆ ಅನುವಾದಿಸಲು ನಿರತನಾದ.

ಬೆಳಿಗ್ಗೆಯ ಪೂಜೆಗೆ ಬಿಲ್ವ ಪತ್ರೆ ತರುತ್ತೇನೆಂದು ಮನೆಯಿಂದ ಹೊರಬಂದ ಪದ್ಮನಾಭರ ಮಗಳು ಕುಮುದ ಎಲ್ಲಿಯೂ ತನ್ನ ಚಿತ್ತವನ್ನು ಆಚೀಚೆ ಅಲುಗದಂತೆ ಕಾಯ್ದಿಟ್ಟುಕೊಂಡು ನೇರವಾಗಿ ಹೊಲೆಯರ ಭರ್ಮನಿದ್ದಲ್ಲಿಗೆ ಬಂದು ಅವನನ್ನು ಬಿದಿರು ಜಾಡಿನ ಪಕ್ಕದಲ್ಲಿದ್ದ ಗುಡಿಯ ಬಳಿ ಕೈ ಹಿಡಿದು ಎಳೆದು ತಂದು ಅಲ್ಲಿಯೇ ಹರಿಶಿಣ ಮೆತ್ತಿದ್ದ ದಾರವೊಂದನ್ನು ಅವನಿಂದ ಕುತ್ತಿಗೆಗೆ ಬಿಗಿಸಿಕೊಂಡು ಮುಂದಿನದಕ್ಕೆ ಸಿದ್ದವಾದವಳಂತೆ ಅವನೊಂದಿಗೆ ಸಣ್ಣ ಬಂಡೆಯನ್ನೇರಿ ಕೂತು ಬಿಟ್ಟಳು.

ಮಧ್ಯಾಹ್ನವಾದರೂ ಕುಮುದ ಬರದೆ ಹೋಗಿದ್ದರಿಂದ ಪದ್ಮನಾಭರೇ ಬಿಲ್ವಪತ್ರೆಯ ಮರದ ಸಾಲುಗಳತ್ತ ಹುಡುಕುತ್ತಾ ಬಂದಾಗ, ಗುಡಿಯ ಎದುರಿದ್ದ ಸಣ್ಣ ಬಂಡೆಯ ಮೇಲೆ ಹೊಲೆಯ ಭರ್ಮನ ಬೆವತ ಕರೀ ಮೈಗಂಟಿ ಕೂತಿದ್ದ ಕುಮುದಳನ್ನು ಕಂಡು ಪದ್ಮನಾಭರಿಗೆ ಹತ್ತಾರು ಕಲ್ಲುಗಳು ರಭಸವಾಗಿ ತೂರಿ ಬಿದ್ದಂತೆ ಪೆಟ್ಟಾಯಿತು. ಪದ್ಮನಾಭರು ಬಂದಿದ್ದು ನೋಡಿದ ಮೇಲೆ ಭರ್ಮ, ಕುಮುದ ಇಬ್ಬರೂ ಬಂಡೆಯ ಮೇಲಿಂದ ಕೆಳಗಿಳಿದು ಬಂದು ಬಚ್ಚಿಟ್ಟದನ್ನು ಬಿಚ್ಚಿಡುವಂತೆ ಮಾತು ಆರಂಭಿಸಲು ಮುಂದಾಗುವ ಹೊತ್ತಿಗೆ ಎದುರಿದ್ದ ಪದ್ಮನಾಭರೆ ತಡೆದು ನಿಲ್ಲಿಸಿದರು.

‘ನಾನು ಬದುಕಿರುವಾಗಲೆ ನನಗೇಳದೆ ಈ ಹೊಲೆಯನನ್ನು ನೀನು ಮದುವೆಯಾದೆ. ನಾನು, ನೀನು ಬದುಕಿರುವಾಗಲೇ ನಾನು ನಿನಗೇ ಹೇಳಿಯೇ ನಿನ್ನ ಶ್ರಾದ್ಧ ಮಾಡ್ತೀನಿ’ ಎನ್ನುವುದನ್ನು ಶಾಂತವು ಅಲ್ಲದ, ರೌದ್ರವೂ ಅಲ್ಲದ ವಿಚಿತ್ರ ರಸವೊಂದರಲ್ಲಿ ಹೇಳಿ ಬಂದ ದಾರಿಯಲ್ಲೆ ವೇಗವಾಗಿ ತಿರುಗಿ ಬಂದರು.

‘ಶೇಷಾದ್ರಯ್ಯ ನಿನ್ ಕೂಗ್ತಾ ಅವ್ರೆ’ ಎಂದು ಸಂಪತ್ತಚಾರಿಯ ಮಗ ಗುರುಮೂರ್ತಿ ಹೇಳಿದ್ದರಿಂದ ಬಿಸಾಡಿಯು ಕಾಲುದಾರಿ ಹಿಡಿದು ಬಿಳಿಗೆರೆ ಹೊಳೆಗೆ ಬರುವ ಹೊತ್ತಿಗೆ ಪದ್ಮನಾಭರು ರಭಸವಾಗಿ ನಡೆದು ಹೋಗುತ್ತಿದ್ದದ್ದು ಕಾಣಿಸಿತು. ಅವರ ಮುಖವೆಲ್ಲಾ ಕಾಯಿಸಿದ ಕಬ್ಬಿಣದ ಸಲಾಕೆಯಂತೆ ಕೆಂಪಗೆ ಉರಿಯುತ್ತಿತ್ತು. ಪಂಚೆಯು ಮೊಣಕಾಲಿನವರೆಗೆ ಒದ್ದೆಯಾಗಿತ್ತು. ಎಲ್ಲೊ ಹೊಳೆಗಿಳಿದರಬೇಕೆಂದು ಬಿಸಾಡಿಯೆ ಅಂದಾಜಿಸಿಕೊಂಡ. ಆದರೆ ಕೇಳಲಿಲ್ಲ.

‘ಹೊಲೆ ಸೂಳೆಮಕ್ಕಳ, ಅಂತೂ ನೆರವೇರಿಸಿಕೊಂಡುಬಿಟ್ರಿ’ ಚೀರಿದರು ಪದ್ಮನಾಭರು. ಬಿಸಾಡಿ ವಿಚಲಿತನಾದ

‘ಅವಳು ನನ್ ಮಗಳಲ್ಲ, ಇನ್ನು ನಿಮ್ಮ ಕೇರಿಯವಳೆ ತಿಳೀತಾ? ಎಲ್ಲಾ ಕಳ್ಕೊಂಡೆ. ಅವಳು ಬದುಕಿದ್ದಾಗಲೇ ಶ್ರಾದ್ಧ ಮಾಡಿಬಿಟ್ಟಿದ್ದೀನಿ’.

ಆದರೂ ಮಾತಿಗೊಂದು ಉತ್ತರವೆಂಬಂತೆ  ‘ನಿಮ್ ಮಗ್ಳು ಹೊಲೆಯನ್ನ ಮದುವೆಯಾದ್ರೇ ತಪ್ಪೇನಯ್ಯಾ? ನಿಮ್ಮಪ್ಪಾರು ಮಾಡಿದ್ದು ಅದೇ ಅಲ್ವಾ?” ಬಿಸಾಡಿ ಕೇಳಿದ.

ತಾನೆಂದೂ ಎಣಿಸಿರದಂತ ಪ್ರಶ್ನೆಯೊಂದು ತಾನು ಯಕಃಶ್ಚಿತ್ ಎಂದು ತಿಳಿದಿದ್ದ ಹೊಲೆಯನೊಬ್ಬನಿಂದ ಎದುರಾಗಿದ್ದಕ್ಕೆ ಪದ್ಮನಾಭರು ಕಂಗಾಲಾದರು.

‘ನಿಮ್ಮಪಾರು ನಮ್ ಪಿಚ್ಚನ ಮಗನಿಗೆ ಅಗ್ರಹಾರದ್ ಹುಡುಗಿ ಮದುವೆ ಮಾಡುಸ್ತಾಗಾ, ಕುಣಿತಾ ಇದ್ರಂತೆ? ಈಗ್ ಮಗಳೇ ಹೊಲೆಯನ್ನ ಮದುವೆಯಾಗಿದ್ರೆ ಕುಣಿಯೋಕ್ ಕಾಲ್ ಬತ್ತಾ ಇಲ್ವಯ್ಯಾ?’ ಬಿಸಾಡಿ ನೇರವಾಗಿ ಮಾತಿನ ಈಟಿಯಿಂದ ತಿವಿದ.

ಪದ್ಮನಾಭರಿಗೆ ಬಿಸಾಡಿಯ ಎದುರು ಮುಖಕೊಟ್ಟು ನಿಲ್ಲಲಾಗಲಿಲ್ಲ. ಉತ್ತರಿಸಲೂ ಆಗಲಿಲ್ಲ. ಸುಮ್ಮನೆ ಕಾಲು ಎಳೆದ ದಿಕ್ಕಿಗೆ ನಡೆದು ಬಿಟ್ಟರು. ಬಿಸಾಡಿ ಶೇಷಾದ್ರಿಗೆ ಚಾಚೂತಪ್ಪದೆ ವಿವರಿಸಿದ.

ಮತ್ತೆ ವಿಚಿತ್ರ ಬಗೆಯ ಪ್ರಶ್ನೆಗಳು ಮುತ್ತಲು ಶುರುವಿಟ್ಟುಕೊಂಡವು ಶೇಷಾದ್ರಿಗೆ. ಸಂಜೆಯ ಗಾಳಿಯೂ ತನ್ನೊಳಗಿನ ಪ್ರೆಶ್ನೆಗಳ ಕಾವಿಗೆ ತಂಪೆನಿಸಲಿಲ್ಲ. ಒಂದಿಷ್ಟು ಅಲುಗಲಿಲ್ಲ, ಸುಮ್ಮನೆ ಎಂದರೇ ಸುಮ್ಮನೆ ಕೂತುಬಿಟ್ಟ. ಮತ್ತೇ ಅದೆ ಪ್ರೆಶ್ನೆಗಳು.

ಹೊಲೆಯರ ಬಿಮ್ಮ ಶೇಷಾಚಾರ್ಯರ ಮಗಳನ್ನ ಮದುವೆಯಾಗಿದಕ್ಕೆ ಪದ್ಮನಾಭ ಠೀವಿಯಿಂದ ಕುಣಿಯುತ್ತಿದ್ದಾನೆಂದು ಹಿಂದೊಮ್ಮೆ ಕೇಶವನ ಬಾಯಿಂದ ಕೇಳಿದ ಮಾತು ಮತ್ತೆ ಕಣ್ಣ ಮುಂದೆ ಸುಳಿದ ಹಾಗಾಯಿತು.

‘ಮಗಳು ಹೊಲೆಯನನ್ನು ಮದುವೆಯಾಗಿದಕ್ಕೆ ಅವಳು ಬದುಕಿದ್ದಾಗಲೇ ಪದ್ಮನಾಭ ಶ್ರಾದ್ಧ ಮಾಡಿದ್ದೇಕೆ?’ ಅವತ್ತು ಚಾರಿಯ ಮದುವೆಯನ್ನು ಒಪ್ಪಿಕೊಂಡವನಿಗೆ ತನ್ನ ಮಗಳ ಮದುವೆಯನ್ನು ಒಪ್ಪಿಕೊಳ್ಳಲು ಯಾಕೆ ಆಗುತ್ತಿಲ್ಲ?’ ಮತ್ತೇ ಪ್ರೆಶ್ನೆಗಳು.

ಮತ್ತೇನೊ ಹೇಳಲು ಉಳಿದುಹೋಗಿದೆ ಎನ್ನುವಂತೆ ಬಿಸಾಡಿ ಶೇಷಾದ್ರಿಯ ಕಿವಿಯ ಬಳಿ ಬಾಗುವ ವೇಳೆಗೆ ಸರಿಯಾಗಿ ಮಾಗಿದ ದೇಹದಿಂದ ನಡುಗುವ ದನಿಯೊಂದು ಅಗ್ರಹಾರದ ತುದಿಯಿಂದ ಅಬ್ಬರಿಸಿದಂತೆ ಕೇಳಿಸಿತು. ದನಿ ಕೇಳಿದೊಡನೆ ಬಿಸಾಡಿಯು ದಡಕ್ಕನೆದ್ದು ಏನಿರಬಹುದು ಎಂದು ತಿಳಿಯಲು ಹಿತ್ತಲಿನ ಬಾಗಿಲಿನಿಂದ ಓಡಿದ. ಶೇಷಾದ್ರಿಯೂ ಅವನನ್ನು ತಡೆಯಲಿಲ್ಲ.

ಅಗ್ರಹಾರದ ತುದಿಗೆ ಬಿಸಾಡಿ ಓಡಿ ಬರುವುದೊರಳಗೆ ಹೊಲಗೇರಿಯ ಹಿರಿಯಜ್ಜ ಪಿಚ್ಚ ಕೋಲೊಂದನ್ನು ಅತ್ತಿತ್ತ ಊರುತ್ತ ಬಾಗಿದ ಬೆನ್ನನ್ನು ಮತ್ತೂ ಬಾಗಿಸಿ ಸರಿಯಾಗಿ ಒಂದು ಕಡೆ ನಿಲ್ಲಲಾರದೆ ಗುಂಡೇಟು ತಗುಲಿದ ವ್ಯಾಘ್ರನಂತೆ ಉಸಿರುಬಿಡುತ್ತಿದ್ದ.

‘ಎಲ್ಲಾ ಬದಲಾಯಿಸ್ ಬುಡ್ತೀನಿ ಅಂತಾ ಓಡಾಡ್ತಿದ್ದ ನಿಮ್ಮಪ್ಪ’

‘ಪಾಪಿ ಜಲ್ಮ ನಿಮ್ದು’

‘ಒಂದೇ ತಲ್ಮಾರು ಇಷ್ಟು ವರ್ಸ ನಡ್ಕಡ್ ಬಂದುದ್ದ ಬದಲಾಯಿಸ್ ಬುಡ್ತೀನಿ ಅಂತಾ ಹೂಳ್ ಇಟ್ಕಂಡ್ ಓಡಾಡಿದ್ರೆ ಸಾಲ್ದು’

‘ಒಬ್ಬರ್ ಮಾಡಿದ್ದ್ ಒಂದಷ್ಟು ವರ್ಸ ಎಲ್ರೂ ಪಾಲಿಸ್‍ಬೇಕು ಅದ್ರ ರೀತಿ ರಿವಾಜಿಗೆ ನಡಿಬೇಕು. ಅದ್ನೆ ಜನಗೊಳ್ ಬದಲಾವಣೆ ಅಂತಾರೆ’

‘ಇವತ್ತ್ ಎಲ್ಲ್ರೂ ಮಾಡ್ತ ಇರೋದ್ ಅದ್ನೆ ಅಲ್ವಾ? ಅವಾಗ್ ಯಾರೊ ಮಾಡುದ್ರು ಅಂದ್ಬುಟ್ಟು, ಸದ್ದಿಲ್ದೆ ನಡುಸ್ಕಂಡ್ ಬತ್ತಾ ಇಲ್ವಾ’

‘ಅಪ್ಪ ಮಾಡಿದ್ ಮದ್ವೆ ಒಪ್ಕ್ಕಂಡ್ ಮೆರಿತಾ ಇದ್ರೆ? ಇವತ್ತ್ ನಿನ್ ಮಗ್ಳು ಹೊಲೆಯುನ್ನೆ ಮದ್ವೆಯಾಗೋಳೆ. ಅದ್ನು ಒಪ್ಕೋ? ಇಲ್ಲಾ ಆವತ್ ಒಪ್ಕಂಡ್ ಇದ್ ಯಾಕಂತ ಹೇಳು?’

‘ಏನು ಬದಲ್ಯಾಕಿಲ್ಲ ಇಲ್ಲಿ ಒಂದೇ ದಿನುಕ್ಕೆ. ಹುಚ್ಚು ಮುಂಡೇವಾ’ ಪಿಚ್ಚ ಹೇಳಿದ್ದನ್ನೇ ಮತ್ತೇ ಮತ್ತೇ ಹೇಳುತ್ತ ತನ್ನ ಪಾದಗಳು ತನಗೆ ಭಾರಬೆನ್ನುವಂತೆ ಎತ್ತಿಡುತ್ತ, ನಿಧಾನವಾಗಿ ಹೆಜ್ಜೆಗಳನ್ನು ಹೊಲಗೇರಿಯತ್ತ ತಿರುಗಿಸಿದ.

ಪಿಚ್ಚನ ಮಾತುಗಳನ್ನು ಶೇಷಾದ್ರಯ್ಯನಿಗೆ ಹೇಳಿಬರಬೇಕ ಎಂದೊಮ್ಮೆ ಬಿಸಾಡಿ ಅವನನ್ನೇ ಕೇಳಿಕೊಂಡ. ಅಗತ್ಯವಿಲ್ಲ ಎನಿಸಿತು. ಮತ್ತೇ ಏನನ್ನೂ ಯೋಚಿಸದೆ ಪಿಚ್ಚನಿಗೆ ದಾರಿಯಲ್ಲಿ ಜತೆಯಾಗಿ ಹೊಲಗೇರಿಯ ಕಡೆ ಹೊರಟ.

ಒಬ್ಬನೆ ಹಿತ್ತಲಿನಲ್ಲಿ ಕುಳಿತ್ತಿದ್ದ ಶೇಷಾದ್ರಿಗೆ ಪದ್ಮನಾಭ ದ್ವಂದ್ವದ ಪ್ರತೀಕ ಎನಿಸಿತು. ಹಾಗೆಯೇ ಹಿಂದಕ್ಕೊರಗಿ ಕಣ್ಣು ಮುಚ್ಚಿದ. ಕಣ್ಣು ಮುಚ್ಚಿದೊಡನೆ ಶೇಷಾಚಾರ್ಯರ ಮಗಳು ಚಾರಿ ಬಿಮ್ಮನೊಂದಿಗೆ ಮದುವೆ ಮಾಡಿಸಿದ ಮೇಲೆ ಜರಿದು ಬರಲೆಂದು ಮೊದಲ ಬಾರಿ ಹೊಲಗೇರಿಗೆ ಬಂದಾಗ ಗೋಪಾಲಯ್ಯ ತನ್ನತ್ತ ಬೀರಿದ ನಗುವಿನ ನೆನಪಾಯಿತು. ಶೇಷಾದ್ರಿ ದಿಗ್ಭ್ರಾಂತಿಯಾಗಿ ಕಣ್ಣು ಬಿಟ್ಟು ಕೂತ.

‍ಲೇಖಕರು admin

January 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: