ಅಪರಿಚಿತ ಯೋಧನ ಪರಿಚಿತ ಧ್ವನಿ
ರೋಟಿ ಹಿಂದಿನ ನಿಜವಾದ ಕಹಾನಿ
…………………………….
ಪ್ರತಿದಿನ ಸಾವಿನ ಸವಾಲು. ಇಂದು ಯಾರೋ ಗೆಳೆಯನ ಸಾವು. ನಾಳೆ ಅವನದೇ ಸರದಿಯಿರಬಹುದು. ಮನೆ, ಮಡದಿಯ ಕುರಿತು ಕನಸು ಕಾಣಲು ಸಮಯವಿಲ್ಲದ ಕಠೋರ ದಿನ, ಕಾಲ.
ನಿಜ ಯೋಧನೊಬ್ಬನ ದಿನ ಬದುಕಿನ ಬಗ್ಗೆ ಹೀಗೆ ಕೆಲವು ಪದಗಳಲ್ಲಿ ಹೇಳುವ ಪ್ರಯತ್ನವಿದು. ಇನ್ನೊಂದೆಡೆ ಅಧಿಕಾರಿಗಳು. ಸವಲತ್ತುಗಳಿಗೆ ಕೊರತೆಯಿಲ್ಲ. ಆದರೆ ಯೋಧರು ಎದುರಿಸುವ ಸವಾಲುಗಳಿರುವುದಿಲ್ಲ. ಸೇನೆಯ ಕುರಿತು ಚರ್ಚೆ ಆಗುವಾಗ ಪಾನೆಲ್ ನಲ್ಲಿ ಇವರದ್ದೇ ಕಾರುಬಾರು.
ಯೋಧನ ವೀರಮರಣ ಸುದ್ದಿಯಾಗುತ್ತದೆ. ಆತನ ಹೆಸರಲ್ಲಿ ಶೌರ್ಯ,ದೇಶಪ್ರೇಮದ ಬಗ್ಗೆ ಮುಗಿಯದ ಚರ್ಚೆ ಮುಂದುವರಿಯುತ್ತದೆ. ಇದೀಗ ಸೇನೆಯೆಂದರೆ ಯಾರು ಮಾತಾಡಬಾರದು ಹಾಗಾದರೆ ಅದು ಅಪರಾಧವೆಂದು ಭಾವಿಸುವ ಹೊತ್ತಿನಲ್ಲಿ ಇನ್ನು ತಾಳ್ಮೆಗೆ ಜಾಗವಿಲ್ಲವೆಂಬಂತೆ ಯೋಧನೊಬ್ಬ ಮಾತಾಡಿದ್ದಾನೆ.
………
ನಿಜ ಯೋಧನೊಬ್ಬ ತನಗೆ ಸಿಗೋ ಆಹಾರದ ಗುಣಮಟ್ಟ ಪ್ರಶ್ನಿಸುವ ಮೂಲಕ ಸೇನೆ ಮತ್ತೆ ಸುದ್ದಿಯಲ್ಲಿದೆ. ಒಣಗಿದ ರೊಟ್ಟಿಯನ್ನು ಹಾಗೇ ತಿನ್ನಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ನೋಡಿದಾಗ ವ್ಯವಸ್ಥೆಯಲ್ಲಿರುವ ಹುಳುಕನ್ನು ಮುಚ್ಚಿಡಬಾರದೆಂಬ ಯೋಚನೆ ನಿಮಗು ಬಂದಿರಬಹುದು. ಸೇನೆ ಎಂಬುದು ಪವಿತ್ರವಾದುದು ಅನ್ನುವುದರ ಜೊತೆಗೆ ಪ್ರಜಾಪ್ರಭುತ್ತ್ವ ವ್ಯವಸ್ಥೆಯಲ್ಲಿ ಯಾವುದು ಪ್ರಶ್ನಾತೀತವಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಾಗಿದೆ.
ಸಂವಿಧಾನವನ್ನುಮೀರಿ ಯಾರು ಅಲ್ಲ. ಸಂವಿಧಾನದ ಆಶಯದಡಿ ನಾವೆಲ್ಲರು ಬಯಸುವ ಸಮಾನತೆಯೆನ್ನುವುದು ಸೇನೆಯಲ್ಲಿ ಇಲ್ಲ ಅನ್ನುವುದು ಗಟ್ಟಿ ರೊಟ್ಟಿ ಗೊತ್ತಾಗುತ್ತದೆ. ಅದಕ್ಕೆ ಬೇರೆ ಯಾವುದೇ ಉದಾಹರಣೆಗಳನ್ನು ಕೊಡುವ ಅವಶ್ಯತೆ ಇರೋದಿಲ್ಲ.
ಕಾರ್ಯಾಚರಣೆಯಲ್ಲಿ ಮರಣವನ್ನಪ್ಪಿದಾಗ ತಿಂಗಳುಗಟ್ಟಳೆ ಮಾತಾಡುವ ವ್ಯವಸ್ಥೆ ಬದುಕಿದಾಗ ಅವನಿಗೆ ನೀಡಬೇಕಾದ ಆಹಾರದ ಗುಣಮಟ್ಟದ ಬಗ್ಗೆ ಗಮನ ಹರಿಸದಿರೋದು ಬೇಜವಾಬ್ದಾರಿಯ ಪರಮಾವಧಿ.ಮತ್ತೆ ಹೀಗೆ ಮಾತಾಡಿದಾಗಲೆಲ್ಲಾ ಅಂತವರ ಮಾನಸಿಕ ಸ್ಥಿತಿ ಸರಿಯಿಲ್ಲವೆನ್ನುವ ಹೇಳಿಕೆಗಳು ಸೇನಾಧಿಕಾರಿಗಳಿಂದ ಬರುತ್ತಿರೋದು ಹೊಸತೇನಲ್ಲ,
ನಿಜವಾಗಿಯು ವ್ಯವಸ್ಥೆಯಿಂದ ಬೇಸತ್ತ ಯೋಧರು ತಮಗಾಗುತ್ತಿರುವ ನೋವನ್ನುಯಾರ ಬಳಿ ಹೇಳಿಕೊಳ್ಳಬೇಕು ? ಮಾಧ್ಯಮಗಳ ಜೊತೆ ಮಾತಾಡುವ ಹಾಗಿಲ್ಲ. ಹಿರಿಯ ಅಧಿಕಾರಿಗಳು ಮಾತಾಡಲು ಬಹುಶಹ ದೊರೆಯುವುದಿಲ್ಲ. ಬ್ರಿಟೀಶರು ಬಿಟ್ಟು ಹೋದ ಗುಲಾಮಗಿರಿಯನ್ನು ನಮ್ಮ ಸೈನ್ಯ ಬಿಟ್ಟಂತೆ ಕಾಣೋದಿಲ್ಲ.ಅವರಿರೋವಾಗ ಭಾರತೀಯರನ್ನು ಸೈನಿಕರಾಗಿ ಬಳಸಿಕೊಂಡ ಪದ್ಧತಿ ಇನ್ನು ಮುಂದುವರಿದಿರೋದಂತುನಿಜ.
ಸೇನೆಯಲ್ಲಿ ಇಪ್ಪತ್ತು ವರುಶಗಳ ಸುದೀರ್ಘ ಸೇವೆ ಸಲ್ಲಿಸಿ ಅಲ್ಲಿನ ತಾರತಮ್ಯ ಧೋರಣೆಯನ್ನು ಹತ್ತಿರದಿಂದ ಕಂಡ ಸೈನಿಕರೊಬ್ಬರು ನೋವು, ಆಕ್ರೋಶದಿಂದ ವ್ಯವಸ್ಥೆಯ ಒಳಗಿನ ಅವ್ಯವಸ್ಥೆಯ ವಿವರವನ್ನು ನೀಡಿದ್ದಾರೆ.
“ ಹಲವು ವರ್ಶಗಳ ಹಿಂದಿನ ಮಾತು ಶ್ರೀಲಂಕಾದಲ್ಲಿ ಎಲ್ ಟಿ ಟಿ ಮತ್ತು ಭಾರತೀಯ ಶಾಂತಿ ಸೇನೆಯ ನಡುವಿನ ಸಂಘರ್ಶ ಮುಂದುವರೆದಿತ್ತು. ಆಗ ಸೈನಿಕರು ಎದುರಿಸುತ್ತಿದ್ದ ಸಮಸ್ಯೆ ಹಲವಾರು. ರೋಟಿ, ಪೂರಿಯನ್ನು ಬರೀ ಕಲ್ಪುಪ್ಪು ಹಾಕಿ ತಿನ್ನಬೇಕಿತ್ತು. ಆದರೆ ಹಿರಿಯ ಅಧಿಕಾರಿಗಳಿಗೆ ಒಳ್ಳೆಯ ಉಪಾಹಾರವನ್ನೇ ನೀಡಲಾಗುತ್ತಿತ್ತು. ಪಾಪ ನಮ್ಮ ಯೋಧರು ಶತ್ರುಗಳನ್ನು ಸದೆಬಡಿಯಬೇಕು.ಆದರೆಅದಕ್ಕೆ ಬೇಕಾದ ಮಾನಸಿಕ ಸ್ಥೈರ್ಯವನ್ನು ನಾವು ನೀಡುತ್ತಿದ್ದೇವೆಯೇ? ಗುಣಮಟ್ಟದ ಆಹಾರವನ್ನು ನೀಡುತ್ತಿದ್ದೇವೆಯೇ?
ದೇಶಪ್ರೇಮದ ಕಿಚ್ಚನ್ನು ಸಮಾಜ ಬೇರೆ ಒರೆಗೆ ಹಚ್ಚಿ ಯೋಧರನ್ನು ನೋಡುತ್ತಿರುತ್ತದೆ ಆದರೆ ವಾಸ್ತವವಾಗಿ ಏನು? .ದಿನವಿಡೀ ನಿರಂತರ ಹೋರಾಟ. ಯಾರು ಅಮ್ಮ ಮಗನನ್ನು ಕಳೆದುಕೊಳ್ಳುತ್ತಾರೆ. ಯಾರೋ ಪತ್ನಿ ಪತಿಯನ್ನು ಕಳೆದುಕೊಂಡಿರುತ್ತಾರೆ. ಹೀಗಾದಾಗ ಮಾಧ್ಯಮದಲ್ಲಿ ದೇಶಪ್ರೇಮದ ಹಾಡುಗಳು ಕೇಳುತ್ತವೆ. ಯೋಧನ ಮನೆ ಮುಂದೆ ಓಬಿ ವ್ಯಾನ್ ಗಳು ನಿಂತಿರುತ್ತವೆ. ನೇರ ಪ್ರಸಾರವಿರುತ್ತದೆ. ನಾವು ಚಳಿಯಿದ್ರೆ ಕಂಬಳಿ ಸುತ್ತಿಕೊಂಡೋ, ಸ್ವೆಟರ್ ಹಾಕಿ ಕಾಫಿ ಹೀರುತ್ತಾ ಕಾರ್ಯಕ್ರಮ ನೋಡುತ್ತೇವೆ. ಸೆಕೆಯಾದರೆ ಫ್ಯಾನೋ ಎಸಿ ಆನ್ ಮಾಡಿ ಕಾರ್ಯಕ್ರಮ ನೋಡುತ್ತೇವೆ.
ಮೊದಲೇ ವೀರಯೋಧನ ಪತ್ನಿಯೆಂಬ ಬಿರುದನ್ನು ಕೊಟ್ಟಿರೋದ್ರಿಂದ ದುಖವನ್ನು ಮನದಲ್ಲೇ ಹುದುಗಿಟ್ಟು ಕತ್ತಲಲ್ಲಿ ಆ ಯೋಧನ ಪತ್ನಿ ಸುರಿಸುವ ಕಂಬನಿಯ ಸದ್ದು ನಮಗೆ ತಿಳಿಯೋದಿಲ್ಲ.ಇನ್ನೆಲ್ಲೋ ಪ್ರತಿನಿತ್ಯ ಮಗನಿಗಾಗಿ ಹೆತ್ತವರು ಉರಿಸುವ ದೀವದ ಜೊತೆ ಮಾಡುವ ಪ್ರಾರ್ಥನೆಯ ಆರ್ದತೆ ನಮ್ಮ ಹೃದಯವನ್ನು ಮುಟ್ಟೋದಿಲ್ಲ. ಹಾಗಾಗಿಯೇ ಇರುವ ಯೋಧರ ಬಗ್ಗೆ ನಾವು ಮಾತಾಡೋದಿಲ್ಲ. ಅವರಿಗೆ ಸಿಗಬೇಕಾದದ್ದು ಸಿಗುತ್ತಿದೆಯೇ ಎನ್ನೋದನ್ನು ನಾವು ನೋಡೋಲ್ಲ.
ನಿಜ ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪೋವೆಲ್ ಒಂದು ಮಾತು ಹೇಳುತ್ತಾರೆ. ನಿನ್ನ ಕೆಳಗಡೆ ಇರೋರು ಸಮಸ್ಯೆಯೇ ಇಲ್ಲ ಎಂದು ಹೇಳಿದ್ರೆ ಅಲ್ಲಿ ತುಂಬಾನೆ ಸಮಸ್ಯೆ ಇದೆ ಅಂತಾನೆ ಅರ್ಥ ಅಂತ. ಮತ್ತು ಕಾಲಿನ್ ಪಾವೆಲ್ ಅವರು ಹೇಳಿದ ಮಾತುಗಳನ್ನು ಪಾಠದ ರೂಪದಲ್ಲಿ ಸೇನೆಯಲ್ಲಿ ಬೋಧನೆ ಕೂಡ ಮಾಡಲಾಗುತ್ತದೆ. ಆದರೆ ಈಗ ಯೋಧನೊಬ್ಬ ಎತ್ತಿದ ಪ್ರಶ್ನೆಯನ್ನು ಮಾತ್ರ ಅಧಿಕಾರಿಗಳಿಗೆ ಅರಗಿಸಲು ಸಾಧ್ಯವಾಗುತ್ತಿಲ್ಲ.
ಸಿಕ್ಕಾಪಟ್ಟೆ ಸಮಸ್ಯೆಯಿಂದ ರೋಸಿ ಹೋಗಿರುವ ಯೋಧ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಆಯ್ದುಕೊಂಡಿದ್ದಾನೆ. ಅದನ್ನು ಬಿಟ್ಟರೆ ಆತನಿಗೆ ಬೇರೆ ಆಯ್ಕೆಯಿಲ್ಲ. ಮಾಧ್ಯಮಕ್ಕೆ ಮಾತಾಡೋ ಹಾಗಿಲ್ಲ, ಹಿರಿಯ
ಅಧಿಕಾರಿಗಳು ಸಮಸ್ಯೆಯೇನೆಂಬುದನ್ನು ಕೇಳಿಸಿಕೊಳ್ಳೋದಿಲ್ಲ. ಇಂತಹ ಸಂದರ್ಭದಲ್ಲಿ ಯಾವ ಆಯ್ಕೆಗಳು ಅವರಿಗೆ ಕಣ್ಣ ಮುಂದಿಲ್ಲ. ಹಾಗಾಗಿಯೇ ತಮ್ಮ ನಾಲ್ಕು ಗೋಡೆಯ ಮಧ್ಯೆ ಕೊಳೆತುಹೋಗುತ್ತಿರುವ ಸಮಸ್ಯೆಯನ್ನು ಜನರ ಮುಂದಿಡಲು ಮುಂದಾಗುತ್ತಾರೆ. ಯಾವುದೇ ವ್ಯವಸ್ಥೆಯಿರಬಹುದು ತಡೆಯಲು ಆಗುವ ತನಕ ತಡೆಯಬಹುದು. ಮತ್ತೆ ಅಸಮಾಧಾನ ಸ್ಫೋಟವಾಗಲೇಬೇಕು. ಈಗ ಆಗಿರುವುದು ಅದೇ. ಹೀಗಾದಾಗಲೆಲ್ಲಾ ಹೇಳಿದವರಿಗೆ ತಲೆಸರಿಯಿಲ್ಲವೆಂಬ ಪಟ್ಟ ಕಟ್ಟಲಾಗುತ್ತದೆ.
ಇತ್ತೀಚೆಗೆ ಯೋಧನ ಹೇಳಿಕೆ ತಲ್ಲಣ ಉಂಟುಮಾಡಿರೋದ್ರಿಂದ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಯಾರೇ ಏನೇ ಸಮಸ್ಯೆ ಇದ್ರು ನನ್ನ ಬಳಿ ಹೇಳಿ ಅಂದಿದ್ದಾರೆ. ಹೇಳಿದ ಮೇಲೆ ಸಮಸ್ಯೆ ಬಗೆಹರಿಯುತ್ತಾ ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರವಿಲ್ಲ.
ಸೇನೆ ಅನ್ನುವುದು ಸಂವಿಧಾನವನ್ನು ಮೀರಿದ ಸಂಸ್ಥೆಯಲ್ಲ. ಇದನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿಟ್ಟು ಎಲ್ಲವು ಪಾರದರ್ಶಕವಾಗಿದೆ ಅಂದುಕೊಳ್ಳೋದು ತಪ್ಪು. ನ್ಯಾಯಾಂಗ ವ್ಯವಸ್ಥೆಯ ಕುರಿತಂತೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸೇನೆಯ ಇಂಟಿಗ್ರಿಟಿಯು ಇವತ್ತು ಚರ್ಚೆಗೆ ವೇದಿಕೆ ಕಲ್ಪಿಸಿದೆ.
ಸೇನೆಯಲ್ಲಿರುವ ಶೇಕಡಾ 90 ಮಂದಿ ಯೋಧರು. ಆದರು ಅವರ ಬೇಕು ಬೇಡಿಕೆಗಳು ಪ್ರತಿಧ್ವನಿಸಿದ್ದು ಕಡಿಮೆ.ಒಂದೇ ರೀತಿಯ ಯಾನಿಫಾರ್ಮ್ ಇಲ್ಲ. ರಾಂಕ್ ಆಧಾರದ ಮೇಲೆ ಗೌರವ ಕೊಡುವ ಪದ್ಧತಿ ಮುಂದುವರಿದಿದೆ. ಆದರೆ ಸೇನಾವಲಯದಲ್ಲಿ ಜಾಗತಿಕವಾಗಿ ಮನ್ನಣೆ ಪಡೆದಿರುವ ಇಸ್ರೇಲ್ ನಲ್ಲಿ ಸಮಾನತೆಯ ಆಶಯ ಸೇನೆಯಲ್ಲಿ ಸಾಕಾರವಾಗಿದೆ. ಯಾವುದೇ ಅಧಿಕಾರಿ ಯಾವುದೇ ಹುದ್ದೆಯಿರಲಿ, ಸಮಾನತೆಯೊಂದಿಗೆ ಬದುಕುತ್ತಿರೋದು ಮಾದರಿ. ಯೋಧ ಮತ್ತು ಸೇನಾಧಿಕಾರಿಯ ಸಮವಸ್ತ್ರದಲ್ಲಿ ಅಲ್ಲಿ ತಾರತಮ್ಯವಿಲ್ಲ.
ಯುದ್ಧ ಅಥವಾ ಕಾರ್ಯಾಚರಣೆ ಸಂದರ್ಭದಲ್ಲಿ ಟ್ರಕ್ ನಲ್ಲಿ ಇರೋ ದೊಡ್ಡ ಅಧಿಕಾರಿಗೆ ಬೇರೆ ತರದ ಸೌಲಭ್ಯವೇನು ದೊರೆಯೋದಿಲ್ಲ. ಆದರೆ ನಮ್ಮಲ್ಲಿ ಅಂತಹ ಮನಸ್ಥಿತಿ ಕಾಣಸಿಗೋದು ಅಪರೂಪ.
ದೊಡ್ಡ ದೊಡ್ಡ ಅಧಿಕಾರಿಗಳ ಶೂಪಾಲಿಶ್ ಮಾಡಲು, ಮನೆಗೆಲಸ ಮಾಡಲು ಯೋಧರನ್ನು ಬಳಸಿಕೊಳ್ಳುವವರು ನಮ್ಮಲ್ಲೇ ಇದ್ದಾರೆ. ಇದನ್ನು ತೊಡೆದುಹಾಕಲು ಇನ್ನು ಸಾಧ್ಯವಾಗಿಲ್ಲ. ಸ್ವತಂತ್ರ್ಯತೆಯ ಆಶಯದ ಬಗ್ಗೆ ಮಾತಾಡಿರುವವರೇ ಇಂತಹ ಲಜ್ಜೆಗೇಡಿತನದ ನಿರ್ಧಾರಗಳನ್ನು ತೆಗೆದುಕೊಂಡುಬಿಡುತ್ತಾರೆ.
ಯೋಧರಿಗಾಗಿ ಇರುವ ಕ್ಯಾಂಟೀನ್ ಇರಬಹುದು, ಆಸ್ಪತ್ರೆಗಳೇ ಇರಬಹುದು ಅಲ್ಲು ತಾರತಮ್ಯ ಧೋರಣೆ.
ಹೀಗೆ ಸೇನೆಯಲ್ಲಿ ಎಲ್ಲವು ಸರಿಯಿಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅಧಿಕಾರಿಗಳ ಜೊತೆ ಜೀವನವನ್ನು ಪಣವಿಟ್ಚ ಯೋಧರ ಧ್ವನಿ ಇನ್ನು ಹೆಚ್ಚಾಗಿ ಪ್ರತಿಧ್ವನಿಸಲಿ, ಅನ್ಯಾಯದ ವಿರುದ್ಧದ ಧ್ವನಿ ಗಟ್ಟಿಯಾಗಿ ಕೇಳಲಿ..
…………
ಮುಂದಿನ ವಾರ ಮತ್ತೊಂದು ವಿಚಾರದೊಂದಿಗೆ ಬರ್ತೀನಿ





0 Comments