ಅಂಬೇಡ್ಕರ್ ವಾದಿಗಳು, ಮಾರ್ಕ್ಸ್ ವಾದಿಗಳ ಜೊತೆ ವಾದಕ್ಕೆ ಬಿದ್ದು ವೃಥಾ ಕಾಲಹರಣ ಮಾಡುವುದು ಸರಿಯಲ್ಲ..

ಅಂಬೇಡ್ಕರ್ ನ್ನು ಬಳಸಿ ಸಂಚು ನಡೆಯುತ್ತಿದೆಯೇ..? ಎಂದು ಆತಂಕ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಹೋರಾಟದ ಹಿನ್ನೆಲೆಯ ಇಬ್ಬರು ಮಂಡಿಸಿದ ವಾದವನ್ನು ‘ಅವಧಿ’ ಪ್ರಕಟಿಸಿತ್ತು. ಅದು ಇಲ್ಲಿದೆ .

ಈ ಲೇಖನಕ್ಕೆ ಕು ಸ ಮಧುಸೂಧನ, ರಂಗೇನಹಳ್ಳಿ ಅವರು ವಿವರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಬನ್ನಿ ಕಾಮೆಂಟ್ ಹಾಕಿ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ 

ಅಂಬೇಡ್ಕರ್ ವಾದ: ಒಂದು ಟಿಪ್ಪಣಿ

ku sa madhusoodan naayar

ಕು.ಸ.ಮಧುಸೂದನ, ರಂಗೇನಹಳ್ಳಿ

ಹಿಂದೆಂದಿಗಿಂತಲೂ ಹೆಚ್ಚಾಗಿ ಇವತ್ತು ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್ ವಾದಗಳ ನಡುವೆ ಯಾವುದು ಶ್ರೇಷ್ಠ ಮತ್ತು ಯಾವುದರಿಂದ ನಾವು ನಮ್ಮ ಅವಮಾನಗಳಿಂದ ಶೋಷಣೆಯಿಂದ ಅಸಮಾನತೆಯಿಂದ ಬಿಡುಗಡೆ ಪಡೆಯಬಹುದೆಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

ಇಂತಹ ಚರ್ಚೆಗಳನ್ನು ನೋಡುತ್ತಾ ಈ ಎರಡೂ ದೇಶದ್ರೋಹಿ ವಾದಗಳೆಂಬಂತೆ ಬಿಂಬಿಸುತ್ತ ವಿಕೃತ ಆನಂದ ಅನುಭವಿಸುತ್ತಿರುವ ಬಲಪಂಥೀಯ ಶಕ್ತಿಗಳು ಒಂದೆಡೆಯಾದರೆ, ಈ ಚರ್ಚೆಯನ್ನು ಆರೋಗ್ಯಕರವಾಗಿ ಕೊಂಡೊಯ್ದು ಇವೆರಡೂ ವಾದಗಳನ್ನು ಬಳಸಿಕೊಂಡು ಮೂರನೆಯದಾದ ಮತ್ತು ಸಮಕಾಲೀನ ಸಮಾಜಕ್ಕೆ ಪ್ರಸ್ತುತವಾದ ಹೊಸ ವಾದವೊಂದನ್ನು ಹುಟ್ಟು ಹಾಕಬಹುದೇ ಎಂದು ಇನ್ನು ಕೆಲವರು ಗಂಬೀರವಾಗಿ ಚಿಂತಿಸುತ್ತಿದ್ದಾರೆ. ಹೀಗೆ ಚಿಂತಿಸುವವರನ್ನು ಮದ್ಯಮಮಾರ್ಗದ ಅವಕಾಶವಾದಿಗಳೆಂದು ಕರೆಯುವ ಒಂದು ವರ್ಗ ಈ ಚರ್ಚೆಯ ನಿಜವಾದ ಮೌಲ್ಯವನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ.

ambedkar6ಈ ಹಿನ್ನೆಲೆಯಲ್ಲಿ ನಾನು ಅಂಬೇಡ್ಕರ್ ವಿಚಾರಧಾರೆಯ ಕುರಿತೊಂದು ಸಣ್ಣ ಟಿಪ್ಪಣಿಯನ್ನು ಮಾಡಲು ಪ್ರಯತ್ನಿಸಿದ್ದೇನೆ.

ಅಂಬೇಡ್ಕರ್ ಇಂಡಿಯಾದ ಮಟ್ಟಿಗೆ ಬಹಳ ಮುಖ್ಯವಾಗುವುದೇ ಅವರ ವಿಚಾರಧಾರೆಯು ಅಸ್ಪೃಶ್ಯ ಬದುಕಿನ ಒಡಲಾಳದಿಂದ ಹುಟ್ಟಿದ ಕಾರಣಕ್ಕೆ! ಬೇರೆ ಚಿಂತಕರಂತೆ ಅವರು ಅಸ್ಪೃಶ್ಯ ಸಮಾಜದ ಹೊರನಿಂತು ತಮ್ಮ ವಾದ ಮಂಡಿಸಿದವರಲ್ಲ. ಈ ನಾಡಿನ ಬಹುಸಂಖ್ಯಾತ ದಲಿತರ ಶೋಷಿತ ಬದುಕಿನ ಸಮಸ್ತ ಮುಖಗಳನ್ನೂ ಕಣ್ಣಾರೆ ಕಂಡು ಸ್ವತ: ಅನುಭವಿಸಿ ತಮ್ಮ ವಿಚಾರಕ್ಕೆ ಒಂದು ರೂಪು ಕೊಟ್ಟವರು ಮತ್ತು ದಲಿತರ ದ್ವನಿಯಾದವರು.

ಹೇಗೆ ಮಾಕ್ಸ್ ಕಾರ್ಮಿಕರು ಬಂಡವಾಳಶಾಹಿಗಳಿಂದ ಮುಕ್ತರಾಗುವ ತನಕ ಅವರುಗಳ ಬಿಡುಗಡೆ ಸಾದ್ಯವಿಲ್ಲವೆಂದು ಚಿಂತಿಸಿದನೋ ಅದೇ ರೀತಿ ಅಂಬೇಡ್ಕರ್ ಸಹ ಎಲ್ಲಿಯವರೆಗೆ ಅಸ್ಪೃಶ್ಯ ವರ್ಗಕ್ಕೆ ಜಾತಿಯ ಅವಮಾನದಿಂದ ಮುಕ್ತಿ ಸಾದ್ಯವಿಲ್ಲವೊ ಅಲ್ಲಿಯವರೆಗೂ ಇಂಡಿಯಾದ ಅಸಮಾನತೆಯ ಕಳಂಕ ಹೊತ್ತ ಸಮಾಜದ ವಿಮುಕ್ತಿ ಸಾದ್ಯವಿಲ್ಲವೆಂದು ಚಿಂತಿಸಿದವರು.

ಅಂಬೇಡ್ಕರ್ ನಮಗೆ ಮಾರ್ಕ್ಸ್ ಗಿಂತ ಹೆಚ್ಚು ಮುಖ್ಯವಾಗುವುದು ಅವರ ಈ ವಿಚಾರಧಾರೆಯಿಂದಾಗಿಯೇ! ಯಾಕೆಂದರೆ ಭಾರತೀಯ ಸಮಾಜ ತನ್ನೆಲ್ಲ ಅನಿಷ್ಠ ಆಚರಣೆಗಳನ್ನು ದಲಿತ ಸಮುದಾಯದ ಮೇಲೆ ಹೊರಿಸಿ ನಿರುಮ್ಮಳವಾಗಿದೆ. ಬಡತನ ಮತ್ತು ಹಸಿವಿನ ಅಸಹಾಯಕತೆಗಿಂತ ಹೆಚ್ಚಾದ ಅವಮಾನ , ಅಸಹಾಯಕತೆಗಳ ನೋವನ್ನು ಅನುಭವಿಸುತ್ತಿರುವ ನಮ್ಮ ಅಸ್ಪೃಶ್ಯ ಸಮುದಾಯ ವಿಶ್ವದ ಉಳಿದೆಲ್ಲ ಶೋಷಿತ ಸಮುದಾಯಗಳಿಗಿಂತ ಹೆಚ್ಚಾದ ಹಿಂಸೆಯನ್ನು ಅನುಭವಿಸುತ್ತಿದೆ. ಹಾಗಾಗಿಯೇ ಉಳಿದವರ ಹಸಿವಿಗಿಂತ ದಲಿತರ ಹಸಿವು ಹೆಚ್ಚು ಯಾತನಾಮಯವಾದದ್ದು. ಉಳಿದೆಲ್ಲ ಅವಮಾನಗಳಿಗಿಂತ ಅಸ್ಪೃಶ್ಯತೆಯ ಅವಮಾನ ಅಗಾಧವಾದದ್ದು. ಈ ಅವಮಾನ, ಅಸಹಾಯಕತೆ, ಹತಾಶೆಗಳಿಂದ ಹೊರಬರಲು ನಮಗಿವತ್ತು ಅಂಬೇಡ್ಕರ್ ವಿಚಾರಧಾರೆಯೇ ಬಹಳ ಪ್ರಸ್ತುತವಾದದ್ದು. ಈ ನೆಲದ ಜಾತಿಯ ವಾಸ್ತವತೆಯನ್ನು ಅರ್ಥಮಾಡಿಕೊಳ್ಳದ ಮಾರ್ಕ್ಸ್ ವಾದಕ್ಕಿಂತ ಅಂಬೇಡ್ಕರ್ ವಾದವೇ ಮುಖ್ಯವೆಂದು ಇವತ್ತಿನ ದಲಿತರು ನಂಬಿಕೊಂಡಿದ್ದರೆ ಅದು ತಪ್ಪೇನೂ ಅಲ್ಲ.

ಈ ಕಾರಣಗಳಿಂದಾಗಿಯೇ ಬೇರೆಲ್ಲ ರಾಜಕೀಯ, ಧಾರ್ಮಿಕ ಚಿಂತನೆಗಳಿಗಿಂತ ಅಂಬೇಡ್ಕರ್ ಅವರ ಚಿಂತನೆ ವಿಶಿಷ್ಟವಾಗಿದೆ. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮೊದಲಿಗೆ ಮಹಾತ್ಮ ಗಾಂಧಿಯವರು ಮತ್ತು ಕಾಂಗ್ರೆಸ್ ಪಕ್ಷ ಅನುಸರಿಸಿದ ಮಾರ್ಗ ಸುಧಾರಣೆಯದಾಗಿತ್ತು. ಗಾಂಧಿಯವರು ಬರೆದ ಹಲವಾರು ಲೇಖನಗಳನ್ನು ಓದಿದರೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರು ದಲಿತರ ದೇವಾಲಯ ಪ್ರವೇಶವನ್ನೂ ಮೇಲ್ಜಾತಿಯರ ಔದಾರ್ಯಕ್ಕೆ ಸಂಬಂಧಿಸಿದಂತೆ ನೋಡುತ್ತಿದ್ದರೇ ಹೊರತು ದಲಿತರ ಹಕ್ಕನ್ನಾಗಿಯೇನು ಅಲ್ಲ. ದಲಿತರನ್ನು ಹಿಂದೂ ಧರ್ಮದ ತೆಕ್ಕೆಯಿಂದ ಹೊರಹೋಗಲು ಬಿಡಬಾರದೆಂಬ ಗಾಂಧಿಯವರ ನಿಲುವೇ ದಲಿತರನ್ನು ಹರಿಜನರೆಂದು ಕರೆಯುವುದಕ್ಕೆ ಪ್ರೇರಣೆಯಾಗಿದ್ದು ಸುಳ್ಳೇನಲ್ಲ.

ಇದೇ ರೀತಿ ಕಳೆದೆರಡು ಶತಮಾನಗಳಲ್ಲಿ ದಲಿತರ ಪರವಾಗಿ ಹೋರಾಡಿದ ಬಹುತೇಕ ಸುಧಾರಕರು, ಅಸ್ಪೃಶ್ಯತೆಯ ಸಮಸ್ಯೆಯನ್ನು ಧಾರ್ಮಿಕ ನೆಲೆಯಲ್ಲಿಯೇ ಪರಿಹರಿಸಲು ನೋಡಿದರು. ಅವರುಗಳಿಗೆ ತಾವು ನಂಬಿದ ಧರ್ಮದ ವಿರುದ್ದ ದನಿಯೆತ್ತಿ ಅಸ್ಪೃಶ್ಯತೆಯನ್ನು ಖಂಡಿಸಿ ಹೊರಬರುವ ಹಟವಿರಲಿಲ್ಲ. ಬದಲಿಗೆ ಗಾಂಧಿಯವರ ರೀತಿಯಲ್ಲಿಯೇ ಹಿಂದೂ ಧರ್ಮದೊಳಗಿನ ಆಂತರಿಕ ಸುಧಾರಣೆ ಮಾತ್ರ ಅಸ್ಪೃಶ್ಯತೆಯನ್ನು ನಿವಾರಿಸಬಹುದೆಂದು ನಂಬಿದ್ದರು. ಇಂತಹ ಮನೋಬಾವ ಹೊಂದಿದ್ದರಿಂದಲೇ ಗಾಂಧಿಯಂತವರು ಅಸ್ಪೃಶ್ಯತೆ ಹಿಂದೂ ಧರ್ಮದ ಒಂದು ಕಳಂಕ ಅದನ್ನು ನಿವಾರಿಸಲು ಸವರ್ಣೀಯರು ಮನಸ್ಸು ಮಾಡಬೇಕೆಂಬ ಕರೆ ನೀಡಿದರು.

ambedkar_illus_20120528ಅಸ್ಪೃಶ್ಯರ ಸಂಘಟನೆ ಮಾಡಿ ಅವರ ಹಕ್ಕುಗಳನ್ನು ಅವರಿಗೆ ಕೊಡಿಸುವ ಮಾರ್ಗದ ಬದಲಿಗೆ ಗಾಂಧಿ ಆಯ್ದು ಕೊಂಡಿದ್ದು ಸುದಾರಣೆಯ ಹಾದಿಯನ್ನು. ಆದರೆ ಇದರಲ್ಲಿ ಗಾಂಧಿಯವರ ತಪ್ಪೇನು ಇರಲಿಲ್ಲ. ಅಸ್ಪೃಶ್ಯತೆಯ ವಿರುದ್ದ ಅವರ ಹೋರಾಟವನ್ನು ನಾವ್ಯಾರೂ ಸಂದೇಹಿಸುವ ಆಗಿಲ್ಲ. ಆದರೆ ಅದಕ್ಕೆ ಅವರು ಆಯ್ದುಕೊಂಡ ಮಾರ್ಗ ಮಾತ್ರ ತೀರಾ ಸೌಮ್ಯವಾದದ್ದು. ಯಾಕೆಂದರೆ ನೂರಾರು ವರ್ಷಗಳಿಂದಲೂ ಹಲವಾರು ಧಾರ್ಮಿಕ ಸುಧಾರಕರು, ಸಮಾಜ ಸುಧಾರಕರು ಅಸ್ಪೃಶ್ಯತೆಯ ವಿರುದ್ದ ಹೋರಾಡಿದರೂ ಹಿಂದೂ ಧರ್ಮ ತನ್ನ ಮೂಲ ಸ್ವರೂಪದಲ್ಲಿ ಅಥವಾ ತನ್ನ ಮೂಲಭೂತ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಕೊಳ್ಳಲಿಲ್ಲ. ಬದಲಿಗೆ ಅದು ಅಸ್ಪೃಶ್ಯರನ್ನು ಅವಮಾನಿಸುವ ಹಿಂಸಿಸುವ ಇನ್ನಷ್ಟು ಹೊಸ ವಿದಾನಗಳನ್ನು ಕಂಡುಕೊಳ್ಳತೊಡಗಿತು. ಜೊತೆಗೆ ಸ್ವಾತಂತ್ರ್ಯಾನಂತರದಲ್ಲಿ ಅದು ಆಳುವ ವರ್ಗದ ಜೊತೆ ಸೇರಿ ಅಸ್ಪೃಶ್ಯರನ್ನು ಇನ್ನಷ್ಟು ಶೋಷಣೆ ಮಾಡತೊಡಗಿತು

ಗಾಂಧಿಯವರು ಮಾಡಿದ ಹಿಂದೂಧರ್ಮದ ಒಳಗಿನ ಆಂತರಿಕ ಸುಧಾರಣೆಯ ಕಾರ್ಯಕ್ರಮಗಳ ಭಾಗವಾಗಿಯೇ ದೇವಾಲಯಗಳಿಗೆ ದಲಿತರ ಪ್ರವೇಶ ಮಾಡಿಸುವಂತ ಕಾರ್ಯಕ್ರಮಗಳನ್ನು ಅವರು ಹಾಕಿಕೊಂಡರು. ಸವರ್ಣೀಯ ಸಮಾಜದ ಮನ:ಪರಿವರ್ತನೆಗೆ ಒತ್ತು ನೀಡಿದ ಗಾಂದಿಯವರು ಅಸ್ಪೃಶ್ಯರನ್ನು ಹಿಂದೂ ಧರ್ಮದ ಅವಿಬಾಜ್ಯ ಅಂಗವೆಂದು ಸವರ್ಣೀಯರು ಒಪ್ಪಿಕೊಳ್ಳಬೇಕೆಂದು ಬಯಸುತ್ತಿದ್ದರು. ಈ ಕಾರಣದಿಂದಾಗಿಯೇ ಸವರ್ಣೀಯರು ಗಾಂದಿಯನ್ನು ದ್ವೇಷಿಸತೊಡಗಿದರು.

ಇದರ ಮುಂದುವರೆದ ಭಾಗವಾಗಿಯೇ ಕಾಂಗ್ರೆಸ್ ಸಹ ಅಸ್ಪೃಶ್ಯತೆಯನ್ನು ಸುಧಾರಣೆಯ ಕ್ರಮಗಳಿಂದ ತೊಲಗಿಸಬಹುದೆಂದು ನಂಬಿ ಕೆಲಸ ಮಾಡಿತು. ಈ ಹಿನ್ನೆಲೆಯಲ್ಲಿಯೇ ನೋಡುವುದಾದರೆ ಕಾಂಗ್ರೆಸ್ಸಿನಲ್ಲಿ ಆಗಿ ಹೋದ ಮತ್ತು ಈಗಿರುವ ಬಹುತೇಕ ದಲಿತ ನಾಯಕರುಗಳು ಸವರ್ಣೀಯರ ಜೊತೆ ರಾಜಿ ಮಾಡಿಕೊಂಡೇ ರಾಜಕಾರಣ ಮಾಡಿದವರು. ಕೇಂದ್ರ ಸರಕಾರಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ಕಾಂಗ್ರೆಸ್ಸಿನ ಬಹುತೇಕ ದಲಿತ ನಾಯಕರು ತಮಗೆ ದೊರೆತ ಸ್ಥಾನಮಾನಗಳು ಸವರ್ಣೀಯರ ಉದಾರತೆಯಿಂದ ದಕ್ಕಿದ್ದೆಂಬ ಮನೋಭಾವದಿಂದಲೇ ಸೌಮ್ಯವಾಗಿ ಬದುಕಿ ಹೋದವರು.

ಇದಕ್ಕೊಂದು ಸದ್ಯದ ಸ್ಪಷ್ಟವಾದ ಉದಾಹರಣೆಯೆಂದರೆ ಕೇಂದ್ರದಲ್ಲಿ ಕಾಂಗ್ರೆಸ್ಸಿನ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರದು. ಕರ್ನಾಟಕದ ಮುಖ್ಯಮಂತ್ರಿಯಾಗಲು ಅವರಿಗಿಂತ ಅರ್ಹರಾದ ಇನ್ನೊಬ್ಬ ನಾಯಕ ದಲಿತರಲ್ಲಿ ಮಾತ್ರವಲ್ಲ ಸವರ್ಣೀಯರಲ್ಲೂ ಇರಲು ಸಾದ್ಯವಿಲ್ಲ. ಆದರೆ ಖರ್ಗೆಯವರು ಇನ್ನೇನು ಮುಖ್ಯಮಂತ್ರಿಯಾಗಿಬಿಡುತ್ತಾರೆನ್ನುವ ಸನ್ನಿವೇಶ ಎದುರಾದ ತಕ್ಷಣ ಸರ್ವಪಕ್ಷಗಳ ಮೇಲ್ಜಾತಿಗಳು ಪರ್ಯಾಯವೊಂದನ್ನು ತಂದು ನಿಲ್ಲಿಸಿ ಖರ್ಗೆಯವರನ್ನು ಅಧಿಕಾರದಿಂದ ವಂಚಿತರನ್ನಾಗಿ ಮಾಡುತ್ತಿವೆ. ಖರ್ಗೆಯವರು ಕಾಂಗ್ರೆಸ್ಸಿನ ಗರಡಿಯಲ್ಲಿ ಬೆಳೆದವರಾಗಿದ್ದರಿಂದ ಇವತ್ತಿನವರೆಗೂ ಅವರು ಪಕ್ಷ ನಿಷ್ಠೆಯ ನೆಪದಲ್ಲಿ ಒಮ್ಮೆಯೂ ಕಾಂಗ್ರೆಸ್ ನಾಯಕತ್ವವನ್ನು ನಿಲ್ಲಿಸಿಕೊಂಡು ಮುಖ್ಯಮಂತ್ರಿಯಾಗುವ ತಮ್ಮ ಹಕ್ಕನ್ನು ಮಂಡಿಸಿದವರಲ್ಲ. ಅವರದೇನಿದ್ದರೂ ಸಹನೆಯಿಂದ ಕಾದು ನೋಡುವ ನೀತಿ. ಅವರಿಗೇ ಗೊತ್ತಿರದಂತೆ ಮೇಲ್ಜಾತಿಯವರ ಔದಾರ್ಯವನ್ನು ನಂಬಿ ಕೊಂಡಂತೆ ಬಾಸವಾಗುತ್ತಿದೆ.

ನಾನು ಮೊದಲಿಗೇ ಹೇಳಿದಂತೆ ಕಾಂಗ್ರೇಸ್ ಈ ರೀತಿಯ ಸೌಮ್ಯವಾದ ದಲಿತ ನಾಯಕತ್ವವನ್ನು ರೂಪಿಸಿ, ಹೋರಾಡುವ ಅವರುಗಳ ಕೆಚ್ಚನ್ನೇ ಇಲ್ಲವಾಗಿಸುತ್ತ ಹೋದರೆ, ಅಂಬೇಡ್ಕರ್ ವಾದ ತಮ್ಮ ಹಕ್ಕನ್ನು ತೊಡೆ ತಟ್ಟಿ ಕೇಳುವಂತಹ ದಿಟ್ಟ ನಾಯಕತ್ವವನ್ನು ರೂಪಿಸುವಂತಹುದು. ಅಂಬೇಡ್ಕರ್ ಅವರ ಪ್ರಕಾರ ಹಿಂದೂ ಧರ್ಮದೊಳಗಿದ್ದುಕೊಂಡೇ ದಲಿತರ ಸಮಸ್ಯಗೆ ಪರಿಹಾರ ಹುಡುಕುವುದು ಸಾದ್ಯವಿಲ್ಲವೆನ್ನುವುದಾಗಿದೆ, ಪಶ್ಚಿಮದ ಚಿಂತನಾ ಕ್ರಮ ದಲಿತರ ಅವಮಾನಗಳಿಗೆ ಅಂತ್ಯ ಹಾಡಬಹುದೆಂದು ಬಾವಿಸಿದ ಅಂಬೇಡ್ಕರ್, ಹಿಂದೂ ಧರ್ಮದ ಆಚರಣೆಗಳಲ್ಲಿ ಅಸ್ಪೃಶ್ಯರು ಬಾಗವಹಿಸುವುದನ್ನು ನಿಲಿಸಬೇಕು ಎಂದು ಪ್ರತಿಪಾದಿಸಿದರು. ಇದು ಸಂಪೂರ್ಣ ನಿರಾಕರಣೆಯ ಮಾರ್ಗ. ಬಹುಶ: ಅಂಬೇಡ್ಕರ್ ನಂಬಿಕೊಂಡಿದ್ದ ಈ ನಿರಾಕರಣೆಯ ಮಾರ್ಗವೇ ಅವರನ್ನು ಅವರ ಕೊನೆಗಾಲದಲ್ಲಿ ಬೌದ್ದ ಧರ್ಮಕ್ಕೆ ಕರೆದೊಯ್ಯಿತೆನಿಸುತ್ತೆ.

ಈಗ ಇಪ್ಪತ್ತೊಂದನೇ ಶತಮಾನದಲ್ಲಿಯೂ ಅಸ್ಪೃಶ್ಯತೆಯ ಆಚರಣೆ ಇನ್ನೂ ನಿಂತಿಲ್ಲವೆಂದರೆ ಅರ್ಥ, ನಮ್ಮ ಹೋರಾಟದ ಕ್ರಮಗಳಲ್ಲಿಯೇ ಏನೊ ವ್ಯತ್ಯಾಸವಿದೆಯೆಂಬುದನ್ನು ಸೂಚಿಸುತ್ತದೆ. ಅಂಬೇಡ್ಕರ್ ವಾದವನ್ನು ಆಳವಾಗಿ ಅಧ್ಯಯನ ಮಾಡಿ ಅದರಂತೆ ಹೋರಾಟವನ್ನು ರೂಪಿಸಿಕೊಂಡು ಹೋರಾಡುವುದೊಂದೇ ಅಸ್ಪೃಶ್ಯ ಸಮಾಜಕ್ಕೆ ಉಳಿದಿರುವ ಮಾರ್ಗ.

ಈ ದಿಸೆಯಲ್ಲಿ ಸನ್ನದ್ದರಾಗಬೇಕಿರುವ ಅಂಬೇಡ್ಕರ್ ವಾದಿಗಳು, ಮಾರ್ಕ್ಸ್ ವಾದಿಗಳ ಜೊತೆ ವಾದಕ್ಕೆ ಬಿದ್ದು ವೃಥಾ ಕಾಲಹರಣ ಮಾಡುವುದು ಸರಿಯಲ್ಲ. ಈಗ ನಾವು ಮಾರ್ಕ್ಸ್ ವಾದಿಗಳಿಗೆ ಅಂಬೇಡ್ಕರ್ ವಾದದ ಗಟ್ಟಿತನವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿಲ್ಲ. ಬದಲಿಗೆ ನಮ್ಮ ಅಸ್ಪೃಶ್ಯ ವರ್ಗಕ್ಕೆ ಅಂಬೇಡ್ಕರ್ ವಾದವನ್ನು ಪರಿಣಾಕಾರಿಯಾಗಿ ಮುಟ್ಟಿಸಬೇಕಿದೆ.

 

‍ಲೇಖಕರು Admin

May 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: