ಸ್ವರ್ಣ ಎನ್ ಪಿ
ನಾನಾ ರೀತಿಯ ಸಂಬಂಧಗಳು ನಮ್ಮ ಬದುಕಿನ ಭಾಗವಾಗಿ ಉಳಿಯುತ್ತವೆ. ಕೊನೆಯವರೆಗೂ ಜೊತೆ ಸಾಗಿದಂತವು , ಮುಗುಳು ನಗೆಯೊಡನೆ ಮುನ್ನಡೆದಂತಹವು , ಬದುಕಿನ ಎಲ್ಲ ಪಾಠಗಳನ್ನೂ ಕಂಬನಿಯಲ್ಲಿ ಬರೆಸಿ ಕಲಿಸಿದಂತವು… ಇಲ್ಲಿ ದಾಖಲಾದವು ಕೂಡ ಕಾಡುವ ಮುಖಗಳೇ ಆದರೆ ಇವುಗಳೊಂದಿಗೆ ಕೊಂಚ ಹೆಚ್ಚೆನಿಸುವಷ್ಟು ಒಡನಾಟವಿದೆ. ಬದುಕಿನ ಕೆಲ ಪಾಠಗಳನ್ನು ಕಲಿಸಿವೆ, ಕ್ಷಣಗಳಲ್ಲಿನ ಬದುಕನ್ನು ಸಂಭ್ರಮಿಸುವುದನ್ನು ಕಲಿಸಿವೆ.
ಕೆಲ ವರ್ಷಗಳ ಹಿಂದೆ ಮನೆಯ ಹೊಸ್ತಿಲಿಗೆ ಅಂಟಿಕೊಂಡು ಕುಳಿತು ಅನ್ನಕ್ಕೆ ಬೇಕಾದಷ್ಟು ಅಕ್ಕಿಯನ್ನು ದಿನವೂ ಸ್ವಚ್ಚಗೊಳಿಸುವುದು ಹೆಂಗಸರ ನಿತ್ಯ ಕ್ರಿಯೆಯಾಗಿತ್ತು . ಸಿಕ್ಕ ಒಂದೆರಡು ಭತ್ತವನ್ನು ಕಸದ ಬುಟ್ಟಿಗೆ ಹಾಕುವ ಪಧ್ಧತಿ ಇರಲಿಲ್ಲ. ಅಲ್ಲೇ ಮುಂದೆ ಎಸೆಯುತ್ತಿದ್ದರು. ಎಲ್ಲಿಂದಲೋ ಹಾರಿ ಬಂದ ಗುಬ್ಬಿ ಭತ್ತವನ್ನು ತಿಂದು ಚೀಂವ್ ಗುಟ್ಟಿ ಹಾರಿ ಹೋಗುತ್ತಿತ್ತು. ಗುಬ್ಬಿ ನಮ್ಮ ದೈನಂದಿನ ಬದುಕಿನ ಭಾಗವಾಗಿತ್ತು. ಈಗ ಹೊಸ್ತಿಲಿನ ಮುಂದೆ ಕೂರುವರಾರು ? ಅಕ್ಕಿಯಲ್ಲಿ ಭತ್ತವೆಲ್ಲಿ ? ಒಂದೊಮ್ಮೆ ಭತ್ತವನ್ನು ಕೊಂಡು ತಂದು ಹಾಕಿದರೂ ಗುಬ್ಬಿ ಎಲ್ಲಿ ? ಮುಷ್ಠಿ ರಾಗಿಯನ್ನು ದಿನವಿಡಿ ತಿನ್ನುತ್ತಿದ್ದ ಗುಬ್ಬಿಯ ಜಾಗವನ್ನು ನಿಮಿಷಾರ್ಧದಲ್ಲಿ ತಟ್ಟೆ ಧಾನ್ಯವನ್ನು ಮುಗಿಸುವ ಪಾರಿವಾಳ ಆಕ್ರಮಿಸಿಕೊಂಡಿದೆ. ಸಣ್ಣ ದನಿಯ ಸೆಣಸಲಾರದ ಗುಬ್ಬಿಗಿಲ್ಲಿ ಸ್ಥಳವಿಲ್ಲ. ನಮ್ಮ ಬದುಕಿನಿಂದಲೂ ಕೆಲವು ಗುಬ್ಬಿಗಳು ಮರೆಯಾಗಿವೆ.
ಸೂಪರ್ ಮಾರ್ಕೆಟ್ ಬಂದಿರದ ಕಾಲದಲ್ಲಿ ಸಾಮಾನ್ಯವಾಗಿ ಶೆಟ್ಟರ ಅಂಗಡಿಯಿಂದ ಅಥವಾ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ತರಲಾಗುತ್ತಿತ್ತು. ಊಟದ ಅಕ್ಕಿ ಎಂಬ ಹೆಸರಿದ್ದರೂ ಅದರಲ್ಲಿ ಭತ್ತ , ಸಣ್ಣ ಸಣ್ಣ ಕಲ್ಲುಗಳು ಧಾರಾಳವಾಗಿ ಸಿಗುತ್ತಿದ್ದವು. ಇನ್ನು ರಾಗಿ , ಗೋಧಿಯ ಕಥೆ ಬೇರಿರಲಿಲ್ಲ. ಧಾನ್ಯ ತಂದಾಗ ಸಾಮಾನ್ಯವಾಗಿ ತಿಂಗಳ ಮೊದಲ ವಾರ, ಮನೆಯ ಮುಂದಿನ ಅಂಗಳದಲ್ಲೋ ಅಥವಾ ಒಳಗಿನ ವರಾಂಡದಲ್ಲೋ ಈ ಧಾನ್ಯ ಹಸನು ಮಾಡುತ್ತಿದ್ದರು. ಧಾನ್ಯದಲ್ಲಿದ್ದ ಗಟ್ಟಿ ಕಲ್ಲು ಮಣ್ಣಿನ ಹೆಂಟೆಗಳನ್ನು ತೆಗೆದ ನಂತರ ಒಂದು ಮೊರದಲ್ಲಿ ತುಂಬಿ ಹಗುರಾದ ಕಸ ತೆಗೆಯುವ ಕ್ರಿಯೆ ನಡೆಯುತ್ತಿತ್ತು. ನಮ್ಮಲ್ಲಿ ಇದನ್ನು ಕೇರುವುದು ಎನ್ನುತ್ತಾರೆ. ಆ ಕೇರುವ ಶಬ್ದ ಅದೆಷ್ಟು ಲಯಬಧ್ಧವಾಗಿರುತ್ತಿತ್ತೆಂದರೆ ಅದನ್ನು ಕೇಳಲೆಂದೇ ನಾವು ಆ ಜಾಗದಲ್ಲಿ ಜಮಾಯಿಸುತ್ತಿದ್ದೆವು . ಈ ಹಸನು ಮಾಡುವ ಕ್ರಿಯೆ ನಡೆಯುವಾಗಲೂ ಗುಬ್ಬಿಗಳು ಆಗಾಗ ಇಣುಕುತ್ತಿದ್ದವು.

ಕೆಲವು ಹೆಂಗಸರಿಗೆ ಈ ಕೇರುವ ಕ್ರಿಯೆ ಒಲಿದಿರಲಿಲ್ಲ. ಹಾಗಾಗಿ ಅವರು ನಿಪುಣ ಹೆಂಗಸರ ಮೊರೆ ಹೋಗಬೇಕಿತ್ತು. ಇದಕ್ಕೆಂದೆ ಕೆಲವು ಹೆಂಗಸರು ಮಧ್ಯಾಹ್ನದ ಹೊತ್ತಿಗೆ “ಏನಾರ ಹಸನ್ ಮಾಡಬೇಕೆನವ್ವ ” ಅಂತ ಬರೋರು . ನಮ್ಮೂರಿನಲ್ಲಿ ಹಾಗೆ ಬರುತ್ತಿದ್ದವಳ ಹೆಸರು ಕೆಂಚಮ್ಮ , ಇಳಕಲ್ ಕಾಟನ್ ಸೀರೆಯನ್ನು ನೀಟಾಗಿ ಉಟ್ಟು ತಲೆಯ ಮೇಲೆ ಮುಸುಕೆಳೆಯುತ್ತಿದ್ದ ಅಜ್ಜಿ. ಒಂದೆರಡು ಗಂಟೆಗಳ ಕಾಲ ಕೂತು ಯಾವ ಧಾನ್ಯ ಕೊಟ್ಟರೂ ಸ್ವಚ್ಚ ಮಾಡಿ ಹೊರಡುತ್ತಿದ್ದಳು. ಮಧ್ಯೆ ಮಧ್ಯೆ ಚಹಾ , ತಿಂಡಿಗಳು ಸರಬರಾಜಗುತ್ತಿದ್ದವು . ಇದೆಲ್ಲಕ್ಕಿಂತ ಮುಖ್ಯ ಮನೆ ಹೆಂಗಸಿನ ಗೋಳಿಗೆ ಕಿವಿಯಾಗುತ್ತಿದ್ದಳು ಕೆಂಚಮ್ಮ . ಮನುಷ್ಯ ಪ್ರಾಣಿಯ ಹಲವಾರು ನೋವುಗಳಿಗೆ ಬೇಕಾಗುವುದು ಕೇಳುವ ಕಿವಿ ಮಾತ್ರ ಎಂಬ ಕೌನ್ಸೆಲ್ಲಿಂಗ್ ನ ಮೊದಲ ಸತ್ಯವನ್ನು ಕೆಂಚಮ್ಮ ಅದಾವ ಶಾಲೆಯಲ್ಲಿ ಕಲಿತಿದ್ದಳೋ? ಹಸನು ಮಾಡಲು ಧಾನ್ಯ ಕೊಟ್ಟ ಹೆಂಗಸರು , ಮಕ್ಕಳು ಮಾತು ಕೇಳಲ್ಲ ಅನ್ನೋದರಿಂದ ದುಡ್ಡು ಕಾಸಿನ ತಾಪತ್ರಯದವರೆಗೆ ಎಲ್ಲವನ್ನೂ ಅವಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇನ್ನು ಅವಳೋ,”ಯಾಕ್ ಅಮ್ಮನ ಮಾತು ಕೇಳಾಕ್ ಬರಂಗಿಲ್ಲನು ನಿನಗ ” ಅಂತ ಮಕ್ಕಳಿಗೊಂದು ಕ್ಲಾಸ್ ಶುರು ಹಚ್ಚಿ ಬಿಡೋಳು.
ಹೆಂಗಸರ ಮನದಲ್ಲಿ ಎಷ್ಟೋ ದಿನದಿಂದ ಕುದಿಯುತ್ತಿದ್ದ ಎಲ್ಲ ನೋವನ್ನೂ ಕೆಂಚಮ್ಮ ಕೇರಿ ಬಿಸಾಕಿರುತ್ತಿದ್ದಳು. ಹೆಂಗಸರ ಮನಸ್ಸನ್ನೂ ಹಸನು ಮಾಡಿರುತ್ತಿದ್ದಳು. ಕೆಲಸ ಮುಗಿಸಿ ಹೊರಟವಳಿಗೆ ಹೆಂಗಸರು ಅದೇನು ಕೊಡುತ್ತಿದ್ದರೋ ಗೊತ್ತಿಲ್ಲ . ಒಟ್ಟಿನಲ್ಲಿ ಕೆಂಚಮ್ಮ ಮತ್ತು ಅವರ ನಡುವೆ ಒಳ್ಳೆಯ ಗೆಳೆತನವಿತ್ತು. ಹಬ್ಬಕ್ಕೆ , ಮನೆಯ ಸಮಾರಂಭಗಳಿಗೆ ಕೆಂಚಮ್ಮ ಇದ್ದರೇನೇ ಕಳೆ . ಈಗ ಬೆಂಗಳೂರಿನಲ್ಲೇನು ಸಣ್ಣ ಸಣ್ಣ ಊರುಗಳಲ್ಲಿಯೂ ಶೆಟ್ಟರ ಅಂಗಡಿಗಳೇ ಕಾಣೆಯಾಗುತ್ತಿವೆ. ಪಾಕೇಟಿನಲ್ಲಿ ಸ್ವಚ್ಚ ಮಾಡಿದ ಧಾನ್ಯಗಳು ಸಿಗುತ್ತವೆ. ನಮ್ಮೂರಿನ ಕೆಂಚಮ್ಮ ಹೋಗಿ ವರ್ಷಗಳು ಕಳೆದಿವೆ. ಹೆಂಗಸರು ಪುಕ್ಕಟೆಯಾಗಿ ದೊರೆತಿದ್ದ ಕೌನ್ಸೆಲ್ಲರ್ ಒಬ್ಬಳನ್ನು ಕಳೆದುಕೊಂಡಿದ್ದಾರೆ. ಆ ಮನೆಯ ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ದುಡ್ಡು ಕೊಟ್ಟು ಕೌನ್ಸೆಲ್ಲರ್ ಗಳನ್ನು ಹುಡುಕುತ್ತಿದ್ದಾರೆ. ಕೇರುವ ಸದ್ದು ಕೇಳದೇ ಯಾವದೋ ಕಾಲವಾಯಿತು. ಇವೆಲ್ಲವೂ ಹೋದ ಮೇಲೆ ಅಡುಗೆ ಮನೆಯಲ್ಲಿ ಮೊರಕ್ಕಿನ್ನೇನು ಕೆಲಸ ? ಎಲ್ಲವೂ ಹೋದ ಮೇಲೆ ಗುಬ್ಬಿಯಾದರೂ ಯಾಕೆ ಉಳಿದೀತು?
ಶೆಟ್ಟರ ಅಂಗಡಿಗೆ ಹೋಗಿ ಲೋಕಾಭಿರಾಮದ ನಾಲ್ಕು ಮಾತನಾಡಿ ಸಾಮಾನು ತರುವುದು ಅದೆಷ್ಟೋ ಜನರ ದಿನಚರಿಯಾಗಿತ್ತು . ವರುಷಗಳು ಉರುಳಿದಂತೆ ಅಂಗಡಿಯವರೂ ಮನೆಯವರಂತೆ ಸಲಹೆ ಕೊಟ್ಟು ಸಹಾಯವನ್ನೂ ಮಾಡುತ್ತಿದ್ದರು. ಈಗೇನಿದ್ದರೂ ಎಲ್ಲವನ್ನೂ ಗಾಡಿಯಲ್ಲಿ ತುಂಬಿ ಕಾರ್ಡು ಉಜ್ಜೋದು ಅಥವಾ ಮನೆಯಲ್ಲೇ ಕುಳಿತು ಲ್ಯಾಪ್ಟಾಪ್, ಮೊಬೈಲ್ ಯಾವುದೋ ಒಂದನ್ನು ಬಳಸಿ ಮನೆಯ ಬಾಗಿಲಿಗೆ ಸಾಮಾನು ತರಿಸೋದು. ಇದರಿಂದ ಸಮಯ ಕೆಲ ಬಾರಿ ಹಣದ ಉಳಿತಾಯವೂ ಆಗಿದೆ ಎಂಬುದು ಒಂದು ವಾದ. ಇರಬಹುದೇನೋ. ಕಾಲನ ನಾಟಕ ರಂಗದಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ಎಷ್ಟೋ ಬಾರಿ ಸಾಧ್ಯವಾಗುವುದಿಲ್ಲ. ನಾಳೆಗಳಿಗಾಗಿ ಇಂದಿನ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇ ಬೇಕು. ಆದರೆ ನೆನ್ನೆಯ ಬಂಧಗಳು ಕಳಚಿದಾಗ ಅದರ ಭಾಗವಾಗಿದ್ದವರೆಲ್ಲರೂ ನೊಂದಿದ್ದಾರೆ, ನೋಯುತ್ತಿದ್ದಾರೆ.
ಗುಬ್ಬಿ ಕಾಣೆಯಾಗಿ ಆ ಜಾಗಕ್ಕೆ ಪಾರಿವಾಳ ಬಂದು ಅದರ ಗೂ ಗೂ ಶಬ್ದ ಕೇಳುವವರೆಗೆ ನಮಗೆ ಗುಬ್ಬಿಯ ನೆನಪಾಗಲಿಲ್ಲ. ದುಃಖ ಮಡುಗಟ್ಟಿ ಹೇಳಲಾಗದೇ ಒದ್ದಾಡುವವರೆಗೆ “ಹಂಗಾತೇನು …ಇರ್ಲಿ ತಗ ಸರಿ ಹೊಕ್ಕತಿ” ಎನ್ನುತ್ತಿದ್ದ ಕೆಂಚಮ್ಮ ನೆನಪಾಗಲಿಲ್ಲ . ಇಲ್ಲೇನೋ ಇತ್ತು ಅದು ಈಗಿಲ್ಲ ಎಂದು ಅರ್ಥವಾಗಲು ವರುಷಗಳೇ ಹಿಡಿದವು. ಈಗ ಬಿದಿರಲ್ಲಿ, ಮಣ್ಣಲ್ಲಿ ಗುಬ್ಬಿ ಗೂಡು ಮಾಡಿ ಬಾಲ್ಕಾನಿಯಲ್ಲಿ , ಪಾರ್ಕಿನ ಮರದಲ್ಲಿ ನೇತು ಹಾಕುತ್ತಿದ್ದೇವೆ. ಗೂಡು , ಮಾಡು ಇನ್ನುಳಿದ ವಸ್ತುಗಳನ್ನೆಲ್ಲಿಂದ ತರುವುದು ? ಹಾರಿ ಹೋದ ಗುಬ್ಬಿಗೆ ನಮ್ಮ ಕೂಗು ಕೇಳೀತೆ?
‘ಗುಬ್ಬಿಯಂತಹ ಸಂಬಂಧಗಳು’ ಎಂದು ಓದಿದ್ದು ಬಹುಶಃ ರವಿ ಬೆಳಗೆರೆಯವರ ಬರಹದಲ್ಲಿ. ಇಂತಹ ಬಂಧಗಳು ಎಲ್ಲರ ಬದುಕಿನಲ್ಲೂ ಇರಬಹುದು. ಕಡೆಗೆ ಏನೂ ಆಗದೇ ಉಳಿದರೂ ಕೂಡ ಆ ಹೊತ್ತಿಗೆ ಎಲ್ಲವೂ ಆದವರು. ನಮ್ಮ ನೆನ್ನೆಗಳ ಭಾಗವಾಗಿದ್ದವರು ಇಂದು ನೆನಪಾದಾಗ ಕಾಣದಾದವರು ನಾಳೆಗಳ ಭರವಸೆಗೆ ಅಗತ್ಯವಾದವರು.






good article. I remembered my childhood
Nice article,
ಏನೂ ಆಗದೇ ಉಳಿದರೂ ಕೂಡ ಆ ಹೊತ್ತಿಗೆ ಎಲ್ಲವೂ ಆದವರು ಕಾಡುತ್ತಾರೆ.
ಹಾರಿಹೋದ ಗುಬ್ಬಿಯ ಚೀಂವ್ ಚೀಂವ್ ಮೃದುತ್ವ ಮನದೊಳಗಿಂದ ಮಾಯವಾಗದಂತೆ ಕಾಪಿಡುವ ಮನುಷ್ಯರು ಹೆಚ್ಚಾಗಲಿ.
ಚಂದದ ಓದಿಗೆ ಧನ್ಯವಾದ.
ಗುಬ್ಬಿಯ ಜೊತೆ ನಮ್ಮ ಬದಲಾಗುತ್ತಿರುವ, ಅನಿವಾರ್ಯತೆಯ ”ಜೀವನ ಶೈಲಿ” ಯ ಸಹಜ ರೂಪ ತೋರಿಸಿದ್ದೀರಿ. ಚೆನ್ನಾಗಿದೆ.
ನನ್ನ ಆಯಿ ಅರ್ಥಾತ್ ಅಜ್ಜಿ ಇಲ್ಲಿ ಮೂಡಿ ಬ೦ದ೦ತೆ ಭಾಸವಾಯಿತು… ಕೇಳುವ ಕಿವಿಗಳಿಗಾಗಿ ಹಾತೊರೆಯುವ ಜೀವಗಳು ಅ೦ದೂ ಇದ್ದುವು…ಈಗಲೂ ಇವೆ. ಬಲು ಚ೦ದ ನಿರೂಪಣೆ.
ಸುಂದರ ಬರಹ ಸ್ವರ್ಣಾ ಜಿ, ಗುಬ್ಬಿಯಂತಹ ಬದುಕು, ಗುಬ್ಬಿಗಳ ಲೋಕಗಳ ಲುಪ್ತತೆಯ ಮನಸೆಳೆಯುವ ಬರಹ. ಕಾಲಾಯ ತಸ್ಮಾಯ ನಮ: , ಕೆಲವನ್ನು ಮತ್ತೆ ಪಡೆಯಲಾರೆವು. ನಿಜಕ್ಕೂ ದು:ಖದ ಸಂಗತಿ.
ಉತ್ತಮ ಬರಹ. ಅಭಿನಂದನೆಗಳು.
ಇದು ನಾನು ಎಂದೋ ಬರೆದದ್ದನ್ನು ನೆನಪು ಮಾಡಿಸಿತು
ಗುಬ್ಬಚ್ಚಿ
13.5.2012
ನಿನ್ನೆ ಬೆಳಗ್ಗೆ 8.30 ಗಂಟೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಧಾಣ.
ಸಿಂಗಾಪುರ್ ವಿಮಾನದ ಚೆಕ್ಕಿನ್ಗಾಗಿ ಕಾಯುತ್ತಾ ಅಲ್ಲಿಯ ಒಂದು ರೆಸ್ಟೋರೆಂಟ್ ನಲ್ಲಿ ಕುಳಿತು ಬಿಸಿಯಾದ
ಬ್ಲಾಕ್ ಕಾಫೀ ಹೀರುತ್ತಿದ್ದೆ.
ಪಟ ಪಟ ರೆಕ್ಕೆ ಬಡಿಯುವ ಶಬ್ದ , ಚಿಲಿಪಿಲಿ ಕಲರವ ಕೇಳತೊಡಗಿತ್ತು.
ಸಾವಿರಾರು ಜನ ಸೆಲ್ ಫೋನಿನಲ್ಲಿ ಮಾತಾಡುವ , ನೂರಾರು ಏರೋಪ್ಲೇನುಗಳು ಹಾರಾಡುವ , ಮನುಷ್ಯ ಕಿವಿಗಳು ಸಹಿಸುಕೊಳ್ಳುವುದಕ್ಕಿಂತ ಹೆಚ್ಚಾದ ಡೆಸಿಬೆಲ್ಗಳಲ್ಲೇ ಶಬ್ಧಗಳಿರುವ ಈ ಸ್ಥಳದಲ್ಲೂ ಎಲ್ಲಿಂದ ಈ ಚಿಲಿಪಿಲಿ ನಾಧ ,
ರೆಕ್ಕೆ ಬಡಿತಗಳ ಇಂಪು ಧ್ವನಿ ಎಂದು ಸುತ್ತ ಮುತ್ತ ಕಣ್ಣಾಯಿಸಿದೆ. ಒಂದಿಷ್ಟು ಗುಬ್ಬಚ್ಚಿಗಳನ್ನು ಕಂಡು ನನ್ನ ಕಣ್ಣ ರೆಪ್ಪೆ
ಸಂತೋಷದಿಂದ ಬಡಿಯಲಾರಂಬಿಸಿತು. ಮನಸ್ಸು ಹಾರಡಿತು , ನನ್ನ ಅರಿಯದೆಯೇ ಮುಖದಲ್ಲಿ ಒಂದು ನಗು .
ಗುಬ್ಬಚ್ಚಿಗಳು ಒಂದರ ಕೊಕ್ಕೆಯನ್ನು ಮತ್ತೊಂದಕ್ಕೆ ತೀಡುತ್ತಾ , ಮುತ್ತಿಕ್ಕಿ, ಮೈಗೆ ಮೈ ತಿಕ್ಕುತ್ತಾ ಆ ರೆಸ್ಟೋರೆಂಟಿನ
ರೂಫಿನ ತೊಲೆಗಳ ಮೇಲೆ ಕೂತು ಚಿಲಿಪಿಲಿ ಗುಟ್ಟುತ್ತಿದ್ದವು. ಮತ್ತಷ್ಟು ಗುಬ್ಬಚ್ಚಿಗಳು ಅಲ್ಲಿಯ ಟೇಬಲ್ಗಳ ಮೇಲೆ ತಿಂಡಿ
ತಿಂದು ಬಿಟ್ಟಿದ್ದ ಪ್ಲೇಟುಗಳಲ್ಲಿ ಉಳಿದಿರುವ ಆಹಾರಗಳನ್ನು ಕುಕ್ಕಿ ತಿನ್ನುತ್ತಿದ್ದವು . ಆಶ್ಚರ್ಯವೆಂದರೆ ಅಲ್ಲಿದ್ದ ಜನ ಯಾರೂ
ಸಹ ಅವುಗಳನ್ನು ‘ಉಷ್ , ಉಷ್’’ ಎಂದು ಕೈಬೀಸಿ ಓಡಿಸದೆ , ಅವುಗಳನ್ನು ಗಂಭೀರವಾಗಿ ನೋಡಿ ಆನಂದಿಸುತ್ತಿದ್ದರು.
ಬಹುಶಹ ಇತ್ತೀಚೆಗೆ ಎಲ್ಲೂ ಕಾಣದ ಗುಬ್ಬಚ್ಚಿಗಳನ್ನು ಇಲ್ಲಿ ಕಂಡ ಆಶ್ಚರ್ಯ ಮತ್ತು ಸಂತೋಷ ಇರಬೇಕು.
ಹೀಗೆ ಮನುಷ್ಯನೊಂದಿಗೆ ಸಹಜವಾಗಿ ಬೆರೆತು ಹೋಗುವ ಹಕ್ಕಿ ,ಪಕ್ಷಿಗಳು – ಅವುಗಳ ಬದುಕಿಗೆ ಅನುಗುಣವಾದ
ವಾತಾವರಣ ಕಲ್ಪಿಸಿಕೊಡುವ ಮನಸ್ಸಿರುವ ಮನುಷ್ಯರು ಇರುವಾಗ – ಎಂತಹ ಆದುನೀಕರಣಗಳಾದರೇನು – ನಿಸರ್ಗದೊಂದಿಗೆ
ಬೆರೆತು ಮೈ ಮನಸ್ಸನ್ನು ಮರೆತು ಖುಷಿ ಪಡಲು ಯಾವಾಗಲೂ ತವಕ ಇದ್ದರೆ ಸಾಕು ಬದುಕು ಸಾರ್ಥಕವಲ್ಲವೇ ?