ಆಟ
– ಜಿ ಪಿ ಬಸವರಾಜು
ಬಕೆಟ್ನಲ್ಲಿ ನೀರು ತುಂಬಿ ಚೆಲ್ಲಾಡುತ್ತಿತ್ತು. ನೀರಿನ ಮೇಲೆ ಇರುವೆಗಳು ತೇಲಾಡುತ್ತಿದ್ದವು. ಎಲ್ಲಿಂದ ಬಂದವು ಇವು? ಹೇಗೆ ಬಂದು ಬಿದ್ದವು? ಮೊದಲೇ ಇರುವೆಗಳು ಇದ್ದಿರಬೇಕು. ಯಾರೋ ನೀರು ತುಂಬಿಸಿರಬೇಕು. ಹೆಚ್ಚು ಹೊತ್ತು ಕಳೆದಿರಲಾರದು. ಇರುವೆಗಳು ಸತ್ತಂತೆಯೂ ಕಾಣುವುದಿಲ್ಲ. ಹಾಗೆಯೇ ಕೈಯನ್ನು ನೀರಿಗಿಳಿಸಿ, ಇರುವೆಗಳನ್ನು ಹಗುರಾಗಿ ತೆಗೆದು ಹೊರಹಾಕಲು ನೋಡಿದೆ. ಅದು ಸುಲಭದ ಕೆಲಸವಲ್ಲ ಎಂಬುದು ಮಾಡುತ್ತ ಹೋದಂತೆ ತಿಳಿಯಿತು. ಇರುವೆಗಳು ಕೈಗೆ ಅಂಟಿಕೊಂಡವು. ಕೈ ಹೊರತೆಗೆದೆ. ಕೈತುಂಬ ಇರುವೆಗಳು. ಹರಿದು ಹೊರಟವು. ಕೈಕೊಡವಿದೆ. ಕೆಲವು ನೆಲಕ್ಕೆ ಬಿದ್ದವು. ಮತ್ತೆ ಕೆಲವು ಕೈಗೇ ಬಿಗಿಯಾಗಿ ಅಂಟಿಕೊಂಡವು. ಇನ್ನೊಂದು ಕೈಯಿಂದ ನಿಧಾನಕ್ಕೆ ಒರೆಸಿ ಹಾಕಿದೆ. ಮತ್ತೆ ನೀರಿನ ಬಕೀಟಿಗೆ ಕೈ ಇರಿಸಿದೆ.
ಇದೊಂದು ಆಟವಲ್ಲ. ಇರುವೆಗಳನ್ನು ಉಳಿಸಲು ನಾನು ಹೀಗೆ ಮಾಡಬೇಕಾದದ್ದು ಅನಿವಾರ್ಯವಾಗಿತ್ತು. ಬೇಸರವಿಲ್ಲದೆ ಮಾಡುತ್ತ ಹೋದೆ. ಒಂದೆರಡು ಇರುವೆಗಳು ಗಟ್ಟಿಯಾಗಿ ಅಂಟಿಕೊಂಡು ಕಚ್ಚಿದವು. ಅಂಥ ನೋವಲ್ಲ. ಅಲ್ಲದೆಯೂ ಅಲ್ಲ. ಇರುವೆ ಕಚ್ಚಿದಂತೆ ಎಂದು ಹೇಳುತ್ತಾರಲ್ಲಾ, ಅದು ಅನುಭವಕ್ಕೆ ಬಂತು. ಸಹಿಸಿಕೊಂಡೆ. ಇರುವೆಗಳನ್ನು ಸಾವಿನಿಂದ ಪಾರುಮಾಡಿದ ಸಮಾಧಾನ. ನೋವನ್ನು ಸಹಿಸಿಕೊಳ್ಳಬೇಕೆಂಬ ಸಂಕಲ್ಪ; ದೊಡ್ಡ ತ್ಯಾಗವಲ್ಲ; ದೊಡ್ಡ ಸಂಕಲ್ಪವೂ ಅಲ್ಲ. ಒಂದು ಸಮಾಧಾನಕ್ಕೆ ಮಾಡುವ ಕೆಲಸ.
ಇರುವೆಗಳು ಹತ್ತಿ ಇಳಿಯುತ್ತಿವೆ. ಕೈಗೆ ಸಿಕ್ಕದವು ನೀರಿನಲ್ಲಿ ಮುಲುಗಿ ತೇಲುತ್ತಿವೆ. ಸಾವು-ಬದುಕು. ಸಾಯೋ ಆಟ; ಬದುಕೋ ಆಟ!

ಬದುಕಿನಲ್ಲಿ ಆಟ ಸಾಧ್ಯ. ಆದರೆ ಸಾವಿನಲ್ಲಿ ಆಟಕ್ಕೆ ಅವಕಾಶವೇ ಇಲ್ಲ. ಆಟದಂತೆ ಹೊರಗಿನವರಿಗೆ ಕಾಣಿಸಿದರೂ, ಅದನ್ನು ಪಡೆದುಕೊಳ್ಳುವವನಿಗೆ ಅದು ಆಟವಲ್ಲ. ಅದೊಂದು ಮುಕ್ತಾಯ. ಅದು ಎಂಥ ಆಟ? ಅಥವಾ ಎಂಥ ಅನುಭವ ಎಂಬುದನ್ನು ಹೇಳಲು ಅವರೇ ಇರುವುದಿಲ್ಲ.
ಕಾದಂಬರಿಕಾರರೊಬ್ಬರ ಸಾವಿನ ನೆನಪಾಯಿತು. ಅವರು ಸತ್ತಿದ್ದು ಕಾದಂಬರಿಯ ಕೊನೆಯ ಅಧ್ಯಾಯವಂತೆ. ಬದುಕಿದ್ದವರೊಬ್ಬರು ಬರೆದದ್ದು ಈ ಅಧ್ಯಾಯ. ಸಾವಿನ ಕಾಣದ ಚಹರೆಯನ್ನು ಕಾಣಿಸುವಂತೆ ಮಾಡಲು ಬದುಕಿದವರು ನಡೆಸಿದ ಯತ್ನ. ಅಷ್ಟಾದರೂ ಸಾವು ಕಾಣಿಸಲಿಲ್ಲ; ಕಂಡದ್ದು ಬದುಕಿದವರ ಚಿಂತನೆಯ ತಂತುಗಳು.
**** ***** ******
ಪುಟಿಯುವ ಜೀವನೋತ್ಸಾಹದ ಕಾದಂಬರಿಕಾರ, ಎಲ್ಲವನ್ನೂ ತನ್ನ ಅನುಭವದ ತೆಕ್ಕೆಯಲ್ಲಿ ತಂದುಕೊಂಡು ನೊಡುವ ಹಂಬಲದವನು. ಹನಿಹನಿ ಸವಿಯುವುದು; ಗ್ಲಾಸೊ, ಜಗ್ಗೊ; ಖಾಲಿಯಾಗುವವರೆಗೂ ಕುಡಿಯುವುದು; ಕುಡಿದು ಬೀಳುವುದು. ಈತ ಒಂದು ದಿನ ಕಾರಿನಲ್ಲಿ ಕುಳಿತು ಹೊರಟ. ಪಕ್ಕದಲ್ಲಿ ಸಖಿ; ಹಿಂದಿನ ಸೀಟಿನಲ್ಲಿ ಮಕ್ಕಳು. ಆಕಾಶದಲ್ಲಿ ತೇಲುತ್ತಿದ್ದ. ಅಷ್ಟೊಂದು ಸ್ಪೀಡು ಬೇಡ ಎಂದಳಾಕೆ. ಅವನೇನೂ ಸ್ಪೀಡನ್ನು ತಗ್ಗಿಸಲಿಲ್ಲ. ಅವನು ನಗುತ್ತಲೇ ಕಾರನ್ನು ಓಡಿಸುತ್ತಿದ್ದ. ಆಕೆ ಮತ್ತು ಮಕ್ಕಳೂ ಖುಷಿಯಲ್ಲಿದ್ದರು.
ಸ್ಪೀಡೆಂದರೆ ಎಷ್ಟು? ಅದು ಅವನ ಜೀವನದ ಸ್ಪೀಡು. ಒಬ್ಬೊಬ್ಬರಿಗೆ ಒಂದೊಂದು ಸ್ಪೀಡು. ನಿಯಂತ್ರಣದಲ್ಲಿದ್ದರಾಯಿತು. ಕಾರು ಸುಗಮವಾಗಿಯೇ ಗುರಿಯನ್ನು ತಲುಪಿತು. ಅವರ ಆನಂದಕ್ಕೆ ತಡೆಯೇನೂ ಆಗಲಿಲ್ಲ. ಅವನು ಊರಾಚೆಗಿನ ತನ್ನ ತೋಟ ತಲುಪಿದ್ದ. ‘ಇಷ್ಟೊಂದು ಸ್ಪೀಡಿನಲ್ಲಿ ಹೋದರೆ ಮತ್ತೇನಾಗುತ್ತೆ?’ ಎಂದು ಹೊರಗಿನವರು ಮೂಗುಮುರಿಯಲು ಅವಕಾಶವೇ ಆಗಲಿಲ್ಲ. ಅವರೆಲ್ಲ ಸುರಕ್ಷಿತವಾಗಿಯೇ ಕಾರಿನಿಂದ ಇಳಿದರು.
ತೋಟ ಸಮೃದ್ಧವಾಗಿತ್ತು. ಹಣ್ಣು ಕಾಯಿ; ಗೊಂಚಲು ಗೊಂಚಲು ತೂಗುವ ಮರಗಳು. ತೆಂಗು ಆಕಾಶಕ್ಕೆ ಬೆಳೆದು, ನೆಲದವರ ನೆತ್ತಿ ತಂಪಾಗಿಸಿತ್ತು. ಎಲ್ಲೆಲ್ಲೂ ಹಸಿರು ಕಣ್ಣು ತುಂಬುತ್ತಿತ್ತು. ಪರಿಮಳದ ಗಾಳಿ ಉಯ್ಯಾಲೆಯಾಡುತ್ತಿತ್ತು. ನೆರಳು ಬೆಳಕಿನ ಚಿತ್ತಾರ ನೆಲದ ಮೇಲೆ ಹಾಸಿತ್ತು.
ಗಿಡಮರಗಳಿಗೆ ನೀರಿನ ಕೊರತೆಯಾಗಬಾರದೆಂದು ಬಾವಿ ತೋಡಿಸಿದ್ದ. ಹೊಸ ಬಾವಿ; ಕೆಲಸ ಇನ್ನೂ ನಡೆದಿತ್ತು. ಬಾವಿಯ ನೀರು ಸಿಹಿಯೇ. ಉಪ್ಪಾಗಿದ್ದರೂ ಅವನಿಗೇನೂ ಬೇಸರವಾಗುತ್ತಿರಲಿಲ್ಲ. ನೀರು ನೀರೆ. ಗಿಡಗಳು, ಮರಗಳು, ಪೊದೆಗಳು, ಬಾಯಾರಿದ ಭೂಮಿ, ಮನುಷ್ಯ ಎಲ್ಲರಿಗೂ ನೀರೇ..
ಬಾವಿಯೊಳಕ್ಕೆ, ನೀರಿನವರೆಗೆ ಇಳಿಯಬಹುದು. ಮಣ್ಣು ಕಡಿದು ಮಾಡಿದ ಮೆಟ್ಟಿಲುಗಳು. ಅವರೆಲ್ಲ ಬಾವಿಯೊಳಕ್ಕೆ ಇಳಿದರು. ಅರ್ಧ ಇಳಿದ ಮೇಲೆ ಕುಳಿತರು. ತೋಳಿನಲ್ಲಿ ಮಕ್ಕಳು; ಕೆಳಗಿನ ಮೆಟ್ಟಿಲಲ್ಲಿ ಭೂಮಿಯಂತೆ ಕುಳಿತ ಸಖಿ. ಇಲ್ಲಿಯೇ ತಿಂಡಿಯನ್ನು ತಿನ್ನೋಣ ಎಂದ ಅವನು. ಬೇಡ, ಮೇಲೆ ಹೋಗಿ ಮರದ ಕೆಳಗೆ ಕೂತು ನಿಧಾನಕ್ಕೆ ತಿನ್ನೋಣ ಎಂದಳು ಸಖಿ. ಅದೇಕೋ ಅವನಿಗೆ ಅಲ್ಲಿಂದ ಏಳುವ ಮನಸ್ಸು ಬರಲಿಲ್ಲ. ಮಕ್ಕಳೂ ಇಲ್ಲಿಯೇ ತಿನ್ನೋಣ ಎಂದವು. ಮನೆಯಿಂದ ತಂದಿದ್ದ ಉಪ್ಪಿಟ್ಟನ್ನು ಬಾಳೆಲೆಯಲ್ಲಿ ಹಾಕಿ ಕೊಡುತ್ತಿದ್ದಳು ಅವಳು. ನಡು ಮಧ್ಯಾಹ್ನದ ಬಿಸಿಲು ಬಾವಿಯೊಳಕ್ಕೆ ಇಳಿದಿದ್ದರೂ ವಾತಾವರಣ ತಂಪಾಗಿತ್ತು. ಎಲ್ಲ ಉಪ್ಪಿಟ್ಟು ತಿನ್ನುತ್ತಿದ್ದರು. ನಗು ಅವರ ಸುತ್ತ ಹರಡಿಕೊಂಡಿತ್ತು.
‘ಹುಡುಗರೆಲ್ಲ ತಿಂದು ಮುಗಿಸಿದ್ರು; ನಿಮ್ಮದು ಹಂಗೇ ಇದೆ. ಎಲ್ಲಿದ್ದೀರೋ, ಏನು ಯೋಚಿಸ್ತಿದ್ದೀರೋ..’
‘ಹಾ!’ ಎಂದ. ಅವನ ಚಿಂತನೆಯ ತಂತು ತುಂಡಾಗಿತ್ತು. ಮತ್ತೆ ಮರಳಿ ಭೂಮಿಗೆ ಬಂದವನಂತೆ, ‘ಆಯ್ತು, ಆಯ್ತು, ತಿಂತೀನಿ’ ಎಂದ. ಮಕ್ಕಳು ಸಣ್ಣ ಸಣ್ಣ ಕಲ್ಲ ಹರಳುಗಳನ್ನು ಕೈಗೆತ್ತಿಕೊಂಡು ನೀರಿಗೆ ಎಸೆಯುತ್ತ ನಗುತ್ತಿದ್ದವು. ಬಾವಿಯಲ್ಲಿನ ನೀರು ಕಲಕಿ ತೆರೆಗಳು ಏಳುತ್ತಿದ್ದವು. ಬಿಸಿಲಿನ ಕೋಲುಗಳು ನೀರಿಗಿಳಿದಿದ್ದವು.
2
‘ಬಾವಿ ಕುಸಿದು ನಾಲ್ವರ ಸಾವು:
ಸಂಸಾರ ಸಮೇತ ಕಾದಂಬರಿಕಾರ ಸುಧಾಕರ ಸಮಾಧಿ.’
ದಪ್ಪ ಅಕ್ಷರಗಳಲ್ಲಿ ಮುಖಪುಟದ ಸುದ್ದಿ. ಟಿವಿ ಚಾನಲ್ಗಳಲ್ಲೂ ಅದೇ ಪ್ರಮುಖ ಸುದ್ದಿ. ಮತ್ತೆ ಮತ್ತೆ ಪ್ರಸಾರವಾಗುವ ಚಿತ್ರಗಳು.
ಅವತ್ತು ಇಡೀ ಊರು ಸಾವಿನ ಬಗ್ಗೆಯೇ ಮಾತನಾಡುತ್ತಿತ್ತು. ನೋಡುವುದು, ಕೇಳುವುದು, ಚರ್ಚಿಸುವುದು.
ಬಾವಿಯ ಸುತ್ತ ನೆರೆದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹೆಣಗುತ್ತಿದ್ದರು.
ಬಿಸಿಲು ಚುರುಕಾಗಿತ್ತು. ತೋಟದ ನೆರಳಿನ ತುಂಬ ಜನ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿದ್ದರು.
ಮಾತಿನ ವಸ್ತು ಒಂದೇ:
ಸಾವು.
ಅರ್ಥವಾಗದ ಸಂಗತಿ. ಇದನ್ನು ಆಟ ಎಂದು ಕರೆಯುವುದಾದರೂ ಹೇಗೆ?






ಸರ್, ತುಂಬಾ ದಿನದ ನಂತರ ನಿಮ್ಮ ಕತೆ ಓದಿದೆ. ಮೊದ ಮೊದಲು ನವಿರಾಗಿ ಮೂಡಿದ ಕತೆ, ಇರುವೆಗಳ ಕತೆ ಎಂದುಕೊಳ್ಳುತ್ತಲೇ ನಗು, ಅದರ ನಂತರ ಮೂಡಿದ ವಿಷಾದದ ನೆರಳು ಕಾಡದೇ ಬಿಡುವುದಿಲ್ಲ. ಆಟ ಇಷ್ಟವಾಯ್ತು !
ಸರ್ ನಮಸ್ತೆ, ಮನಸು ತುಂಬ ತೇವವಾಯಿತು ಕತೆ ಓದಿ…….